Tag: Plots

  • ಜಮೀನಿಗೂ ಆಧಾರ್‌ ರೀತಿಯ ಐಡಿ ಕಾರ್ಡ್‌ – ಯುಎಲ್‌ಪಿಐಎನ್‌ ಜಾರಿಗೆ ಮುಂದಾದ ಕೇಂದ್ರ

    ಜಮೀನಿಗೂ ಆಧಾರ್‌ ರೀತಿಯ ಐಡಿ ಕಾರ್ಡ್‌ – ಯುಎಲ್‌ಪಿಐಎನ್‌ ಜಾರಿಗೆ ಮುಂದಾದ ಕೇಂದ್ರ

    ನವದೆಹಲಿ: ಜಮೀನಿಗೂ ಆಧಾರ್‌ ರೀತಿಯ ಐಡಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ದೇಶಾದ್ಯಂತ 2022ರ ಒಳಗಡೆ ಜಮೀನು, ಜಾಗ ಮತ್ತು ಪ್ಲಾಟ್‌ಗಳಿಗೆ 14 ಸಂಖ್ಯೆಗಳಿರುವ ಯನೀಕ್‌ ಲ್ಯಾಂಡ್‌ ಪಾರ್ಸಲ್‌ ಐಡಿಂಟಿಫಿಕೇಶನ್‌ ನಂಬರ್‌(ಯುಎಲ್‌ಪಿಐಎನ್‌) ಅನ್ನು ಭೂ ಮಾಲೀಕರಿಗೆ ನೀಡಲಾಗುವುದು ಎಂದು ಕೇಂದ್ರ ಭೂ ಸಂಪನ್ಮೂಲಗಳ ಇಲಾಖೆ ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿಗೆ ತಿಳಿಸಿದೆ. ಕಳೆದ ವಾರ ಲೋಕಸಭೆಗೂ ಈ ಮಾಹಿತಿಯನ್ನು ನೀಡಲಾಗಿದೆ.

    ಡಿಜಿಟಲ್‌ ಇಂಡಿಯಾ ಲ್ಯಾಂಡ್‌ ರೆಕಾರ್ಡ್ಸ್‌ ಮಾಡರ್ನ್‌ನೈಷನ್‌ ಪ್ರೋಗ್ರಾಮ್‌ 2008 ರಲ್ಲೇ ಆರಂಭಗೊಂಡಿದ್ದರೂ ಹಲವು ಬಾರಿ ಜಾರಿಗೆಯಾಗದೇ ಮುಂದೂಡಿಕೆಯಾಗಿತ್ತು.

    2019ರಲ್ಲೇ ಇದನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿತ್ತು. ಪ್ರಸ್ತುತ ದೇಶದ 10 ರಾಜ್ಯಗಳಲ್ಲಿ ಈ ಯೋಜನೆ ಜಾರಿಯ ಹಂತದಲ್ಲಿದ್ದು 2022ರ ಮಾರ್ಚ್‌ ಒಳಗಡೆ ಎಲ್ಲ ರಾಜ್ಯಗಳಲ್ಲಿ ಇದು ಜಾರಿಯಾಗಬೇಕೆಂಬ ಗುರಿಯನ್ನು ಹಾಕಲಾಗಿದೆ.

    ಯಾಕೆ ನಂಬರ್‌?
    ಭೂಮಿ ದಾಖಲೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಸಂಖ್ಯೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಲಿದೆ. ಭೂಮಿ ಒತ್ತುವರಿ, ವಂಚನೆ ಇತ್ಯಾದಿಗಳು ಕಡಿಮೆಯಾಗಲಿದೆ. ವಿಶೇಷವಾಗಿ ದಾಖಲೆಗಳು ಇಲ್ಲದ ಗ್ರಾಮೀಣ ಭೂ ಮಾಲೀಕರಿಗೆ ಇದರಿಂದ ಲಾಭವಾಗಲಿದೆ. ಬಹಳ ಮುಖ್ಯವಾಗಿ ದೇಶದಲ್ಲಿರುವ ಕೃಷಿ ಭೂಮಿ, ಇನ್ನಿತರ ಭೂ ಒಡೆತನದ ದಾಖಲೆಗಳು ಸರ್ಕಾರಕ್ಕೆ ಸುಲಭವಾಗಿ ಸಿಗಲಿದೆ.

    ಈ ಸಂದರ್ಭದಲ್ಲಿ ಭೂಮಿಯ ಒಡೆತನದ ದಾಖಲೆಯ ಜೊತೆ ಜನರ ಆಧಾರ್‌ ಸಂಖ್ಯೆಯನ್ನು ಜೋಡಿಸಲಾಗುತ್ತದೆ. ಆದರೆ ಇದು ಐಚ್ಛಿಕವಾಗಿದ್ದು, ಇದಕ್ಕೆ ಪ್ರತಿ ದಾಖಲೆಗೆ 3 ರೂ., ಆಧಾರ್‌ ದಾಖಲೆಗಳನ್ನು ಸೀಡ್‌ ಮಾಡಲು 5 ರೂ. ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.