Tag: plea

  • ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯ: ಅಕ್ರಮ ಗಣಿಗಾರಿಕೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವುದರ ಮಧ್ಯೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಕ್ರಮ ಮಾಡಲು ಅನುಮತಿ ಕೊಡಬೇಕೆಂದು ಶ್ರೀರಂಗಪಟ್ಟಣ ತಾಲೂಕು ಚನ್ನನಕೆರೆ, ಜಕ್ಕನಹಳ್ಳಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಈ ಎರಡು ಗ್ರಾಮದಲ್ಲಿ ಸುಮಾರು 300 ರಿಂದ 400 ಕುಟುಂಬ ವಾಸವಾಗಿವೆ. ಗ್ರಾಮಗಳಲ್ಲಿ 20 ವರ್ಷದಿಂದ ಹಿಡುವಳಿ ಜಮೀನಿನಲ್ಲಿ ಕಲ್ಲು ಬಂಡೆ ಇದ್ದು, ಕೈಯಲ್ಲಿ ಜಲ್ಲಿ, ಸೈಜು ಮತ್ತು ಬೋಡ್ರಸ್‍ಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಸ್ಥಳೀಯ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಸಣ್ಣ ಪುಟ್ಟ ಟ್ರ್ಯಾಕ್ಟರ್, ಲಾರಿಗಳನ್ನು ತೆಗೆದುಕೊಂಡು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮನೆ ಕಟ್ಟಲು ಸಾಮಗ್ರಿಗಳನ್ನು ಒದಗಿಸಿಕೊಡುತ್ತಿದ್ದೇವೆ. ಹೀಗಾಗಿ ಸಕ್ರಮ ಮಾಡಿಕೊಂಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಗ್ರಾಮಗಳ ವ್ಯಾಪ್ತಿಯಲ್ಲಿ ಕ್ರಷರ್‍ಗಳನ್ನು ಎಂ ಸ್ಯಾಂಡ್, ಜಲ್ಲಿಪುಡಿ ಮಾಡಲು ಸರ್ಕಾರದಿಂದ ಪರವಾನಗಿ ನೀಡಲಾಗಿದೆ. ಕಾವೇರಿ ಸ್ಟೋನ್ ಕ್ರಷರ್, ಧನಲಕ್ಷ್ಮೀ ಸ್ಟೋನ್ ಕ್ರಷರ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್, ಜೆ.ಜೆ.ಸ್ಟೋನ್ ಕ್ರಷರ್ ಮಾಲೀಕರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಇದನ್ನೇ ನಂಬಿ ನೂರಾರೂ ಕುಟುಂಬ ಜೀವನ ನಡೆಸುತ್ತಿವೆ. ಆದ್ದರಿಂದ ಗಣಿಗಾರಿಕೆ ಸಕ್ರಮ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

    ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದೇವೆ. ಕೋವಿಡ್ ಕಾರಣದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಇದೀಗ ಉದ್ಯೋಗ ಕಳೆದುಕೊಂಡು ಗ್ರಾಮೀಣ ಭಾಗಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೇ ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

  • ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    – ಆಹಾರ ಕಿಟ್‍ಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

    ರಾಯಚೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಯಚೂರಿನ ಬಹಳಷ್ಟು ದೇವಾಲಯಗಳ ಅರ್ಚಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರ ಕಾಣಿಕೆಯಿಂದ ಬದುಕುತ್ತಿದ್ದ ಅರ್ಚಕರ ಕುಟುಂಬಗಳು ಈಗ ಕಷ್ಟವನ್ನು ಎದುರಿಸುತ್ತಿವೆ.

    ಹೀಗಾಗಿ ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದಂತೆ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಅರ್ಚಕರು ಮನವಿ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆಹಾರ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದು ಇದುವರೆಗೂ ಕಿಟ್ ವಿತರಿಸಿಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.

    ಕಾಣಿಕೆ ತಟ್ಟೆಯಲ್ಲಿ ಬೀಳುವ ಕಾಣಿಕೆಯಿಂದ ಜೀವನ ನಡೆಯುತ್ತಿತ್ತು. ಆದರೆ ಈಗ ದೇವಾಲಯಗಳಿಗೆ ಬೀಗ ಹಾಕಿರುವುದರಿಂದ ಮದುವೆಗಳಿಲ್ಲ, ವಿಶೇಷ ಪೂಜೆಗಳಿಲ್ಲ, ಭಕ್ತರಿಲ್ಲ ಹೀಗಾಗಿ ಕಾಣಿಕೆ ತಟ್ಟೆಯ ಕಾಣಿಕೆಯೂ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಿ ವರ್ಗದ ದೇವಾಲಯಗಳ ಅರ್ಚಕರ ಸ್ಥಿತಿಯಂತೂ ತುಂಬಾ ಕಷ್ಟದಾಯಕವಾಗಿದೆ. ಸರ್ಕಾರ ದೇವಾಲಯಗಳನ್ನೇ ನಂಬಿ ಬದುಕುತ್ತಿರುವ ನಮಗೆ ಸಹಾಯಧನ ನೀಡಬೇಕು. ಕಿಟ್ ವಿತರಿಸಬೇಕು ಅಂತ ಅರ್ಚಕರು ಒತ್ತಾಯಿಸಿದ್ದಾರೆ.

  • ಜಾತಿಯ ತಿರುವು ಪಡೆದುಕೊಂಡ ಗಣಿಗಾರಿಕೆ ಹಲ್ಲೆ ಪ್ರಕರಣ

    ಜಾತಿಯ ತಿರುವು ಪಡೆದುಕೊಂಡ ಗಣಿಗಾರಿಕೆ ಹಲ್ಲೆ ಪ್ರಕರಣ

    ಬೀದರ್: ಕಳೆದ ಡಿಸೆಂಬರ್ 12ರಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಸಂಬಂಧಿಯಿಂದ ಹಲ್ಲೆ ಮಾಡಿದ ಪ್ರಕರಣ ದಿನ ಉರುಳುತ್ತಿದ್ದಂತ್ತೆ ಜಾತಿ ಸ್ವರೂಪ ಪಡೆದುಕೊಳ್ಳುತ್ತಿದೆ.

    ಕ್ರಷರ್ ಮಾಲೀಕ ಶರಣು ರೆಡ್ಡಿ ಮೇಲೆ ಹಲ್ಲೆ ಮಾಡಿದ್ದಕ್ಕೆ ರೆಡ್ಡಿ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದ್ದು ಕ್ರಮ ತೆಗೆದುಕೊಳ್ಳಿ ಅಂತ ರೆಡ್ಡಿ ಯುವ ಬ್ರಿಗೇಡ್ ನಿಂದ ಬೀದರ್ ಎಸ್‍ಪಿ, ಡಿಸಿಯವರಿಗೆ ನಿನ್ನೆ ಮನವಿ ನೀಡಲಾಗಿತ್ತು. ಇಂದು ಹಲ್ಲೆ ಮಾಡಿದ ಸಿದ್ದು ಪಾಟೀಲ್ ಸೇರಿದಂತೆ ನೂರಾರು ಲಿಂಗಾಯತರು ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡಿ ಡಿಸಿಯವರಿಗೆ ಮನವಿ ಸಲ್ಲಿಸಿದ್ದಾರೆ.

    ಸಿದ್ದು ಪಾಟೀಲ್ ಅವರ ಸಹೋದರ ಸಂತೋಷ್ ಪಾಟೀಲ್‍ಗೆ ಶರಣ ರೆಡ್ಡಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದನ್ನ ಪ್ರಶ್ನಿಸಲು ತೆರಳಿದಾಗ ನನ್ನ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ನಾನು ಇದಕ್ಕೆ ಪ್ರತಿರೋಧ ಒಡ್ಡಿದೆ ಅಷ್ಟೆ ಎಂದು ಸಿದ್ದು ಪಾಟೀಲ್ ಹೇಳುತ್ತಿದ್ದಾರೆ. ನೀವು ಸಿಸಿಟಿವಿಯನ್ನು ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು ಅಂತ ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ ಬಳಿ ಮನವಿ ಮಾಡಿಕೊಂಡರು.

    ಹಲ್ಲೆ ಪ್ರಕರಣವೀಗ ಜಾತೀಯ ತಿರುವು ಪಡೆದುಕೊಂಡಿದ್ದು, ಈ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕೂಡಲೇ ಪ್ರಕರಣವನ್ನ ಬಗೆಹರಿಸಬೇಕು. ಇಲ್ಲವಾದರೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಮತೀಯ ಗಲಭೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಅನರ್ಹ ಶಾಸಕರ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂ

    ಅನರ್ಹ ಶಾಸಕರ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂ

    ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಪಕ್ಷದ 17 ಅನರ್ಹ ಶಾಸಕರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ. ಈ ಮೂಲಕ ವಿಚಾರಣೆ ಬುಧವಾರಕ್ಕೆ ನಿಗದಿಯಾಗಿದೆ.

    ಕಾಂಗ್ರೆಸ್ ಪರ ವಕೀಲ ಕಪೀಲ್ ಸಿಬಲ್ ಅವರು ವಿಚಾರಣೆಯನ್ನು ಒಂದು ವಾರಗಳ ಕಾಲ ಮುಂದೂಡುವಂತೆ ಕೋರ್ಟಿಗೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ, ಸೋಮವಾರ ನಡೆಯಬೇಕಿದ್ದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಹೀಗಾಗಿ ಅನರ್ಹ ಶಾಸಕರು ತಮ್ಮ ಅರ್ಜಿ ವಿಚಾರಣೆಗೆ ಮತ್ತೆ ಎರಡು ದಿನ ಕಾಯುವಂತಾಗಿದೆ.

    ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ನಡೆದಿತ್ತು. ಸಿಪಿಎಲ್ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಶಾಸಕರ ವಿರುದ್ಧ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು, ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶದ ವಿರುದ್ಧ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಯುತ್ತಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಅನರ್ಹ ಶಾಸಕರು ಇದ್ದಾರೆ. ಆದರೆ ಡಿಸೆಂಬರ್ 5ರಂದು ಉಪ ಚುನಾವಣೆ ನಿಗದಿಯಾಗಿದ್ದರಿಂದ ಸ್ವಲ್ಪ ಆತಂಕವೂ ಶುರುವಾಗಿದೆ.

  • ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ: ಯತ್ನಾಳ್ ಮನವಿ

    ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ: ಯತ್ನಾಳ್ ಮನವಿ

    ಬೆಂಗಳೂರು: ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.

    ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಯತ್ನಾಳ್ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲು ಅವಕಾಶ ಮಾಡಿಕೊಡಿ. ಎಲ್ಲದಕ್ಕೂ ನಿರ್ಬಂಧ ಹಾಕಿದರೆ ಹಬ್ಬ ಆಚರಣೆ ಮಾಡಲು ಆಗುವುದಿಲ್ಲ ಎಂದು ಮನವಿ ಮಾಡಿದರು.

    ಹಬ್ಬದಲ್ಲಿ ಡಿಜೆ ಹಾಕೋಕು ಅನುಮತಿ ಪಡೆಯಬೇಕು. ಹೀಗಾಗಿ ಧರ್ಮದ ಹಿರಿಯರು, ಸಂಘ ಸಂಸ್ಥೆಗಳು ನನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಸರ್ಕಾರದ ಹಬ್ಬ ಆಚರಣೆ ಮಾಡಲು ಅನುಮತಿ ಪಡೆಯುವ ನಿಯಮವನ್ನು ರದ್ದುಗೊಳಿಸಬೇಕು. ಹಿಂದೂಗಳು ನಿರ್ಭೀತಿ ಇಂದ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಚಳುವಳಿ ಮಾಡುತ್ತೇವೆ ಎಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ನಾನು ಇಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.