Tag: Play off

  • ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡದ ಭವಿಷ್ಯ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ನಿರ್ಧಾರವಾಗಲಿದೆ.

    ಆರ್‌ಸಿಬಿ ಈಗಾಗಲೇ ತನ್ನ ಚರಣದ 14 ಪಂದ್ಯಗಳನ್ನು ಆಡಿ 8 ಜಯ, 6 ಸೋಲುಗಳನ್ನು ಅನುಭವಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ತಂಡದ ರನ್-ರೇಟ್ ತೀರಾ ಕಡಿಮೆ ಇದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್-ರೇಟ್ ಉತ್ತಮವಾಗಿದೆ. ಒಂದು ವೇಳೆ ಇಂದು ನಡೆಯುವ ಡೆಲ್ಲಿ ಮತ್ತು ಮುಂಬೈ ಪಂದ್ಯದಲ್ಲಿ ರೋಹಿತ್ ಬಳಗವು ಸೋತರೆ ಡೆಲ್ಲಿ ತಂಡವು ರನ್ ರೆಟ್ ಆಧಾರದ ಮೇಲೆ ಪ್ಲೇ ಆಫ್‌ಗೇರಲಿದೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಈಗಾಗಲೇ ತಮ್ಮ ತಂಡದ ಭವಿಷ್ಯ ಮುಂಬೈ ಕೈಯಲ್ಲಿರುವ ಹಿನ್ನೆಲೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅಲ್ಲದೆ ಆರ್‌ಸಿಬಿಯು ಮುಂಬೈ ತಂಡವನ್ನು ಮತ್ತಷ್ಟು ಬೆಂಬಲಿಸಲು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಚಿತ್ರವನ್ನು ಮುಂಬೈ ತಂಡದ ಜೆರ್ಸಿಯ ಬಣ್ಣವನ್ನು ಹೋಲುವ ರೀತಿಯ ಬಣ್ಣಕ್ಕೆ ಬದಲಾಯಿಸಿಕೊಂಡಿದೆ. ಇದನ್ನೂ ಓದಿ: ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಈ ಕುರಿತು ವೀಡಿಯೋವೊಂದರಲ್ಲಿ ಮಾತನಾಡಿದ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾವು ಮೇ 21 ರಂದು ನಡೆಯುವ ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ರೋಹಿತ್ ಬಳಗವನ್ನು ಬೆಂಬಲಿಸುತ್ತೇವೆ. ಕೇವಲ ಇಬ್ಬರಲ್ಲ, ಇನ್ನೂ 25 ಬೆಂಬಲಿಗರು ಸೇರಿ ಚಿಯರ್ ಅಪ್ ಮಾಡುತ್ತೇವೆ ಎಂದರು.

    IPL 2022 RCB VS SRH 5

    ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯ ಮುಂಬೈಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾದರೆ, ಡೆಲ್ಲಿಗೆ ಪ್ಲೇ ಆಫ್‌ಗೆ ಏರಲು ಕಡೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಡೆಲ್ಲಿ ಗೆದ್ದರೆ, ಆರ್‌ಸಿಬಿ ಅದೃಷ್ಟದಾಟದಲ್ಲಿ ಸೋತು ಮನೆ ದಾರಿ ಹಿಡಿಯಬೇಕಾಗಿದೆ. ಹಾಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ.

  • 13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

    13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

    ಅಬುಧಾಬಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯ ಅನುಭವಿಸಿದ್ದು, 2020ರ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿದೆ. ಆರ್‌ಸಿಬಿ ತಂಡ ಐಪಿಎಲ್ ಆರಂಭವಾಗಿ 13 ವರ್ಷಗಳು ಕಳೆದರೂ ಕಪ್ ಗೆಲ್ಲದ ಹಿಂದಿನ ಕಾರಣವನ್ನು ವೆಸ್ಟ್ ಇಂಡೀಸ್ ಆಟಗಾರ ಡರೇನ್ ಸ್ಯಾಮಿ ಬಿಚ್ಚಿಟ್ಟಿದ್ದಾರೆ.

    ಬಹುವರ್ಷಗಳ ಬಳಿಕ ಆರ್‌ಸಿಬಿ ಪ್ಲೇ ಆಫ್‍ಗೆ ಪ್ರವೇಶ ಪಡೆದರೂ ಬೆಂಗಳೂರು ಆಟಗಾರರ ಕಪ್ ಗೆಲ್ಲುವ ಕನಸು ಈಡೇರಲಿಲ್ಲ. ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‍ರೈಸರ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನಿರಸ ಪ್ರದರ್ಶನ ತೋರಿದ ಆರ್‌ಸಿಬಿ ಸೋಲುಂಡಿತ್ತು.

    ಐಪಿಎಲ್ ಟೂರ್ನಿಗಳಲ್ಲಿ ಬೆಂಗಳೂರು ತಂಡ ಪ್ರದರ್ಶನವನ್ನು ಗಮನಿಸಿದರೆ ತಂಡದ ಬೌಲಿಂಗ್ ಪಡೆಯೇ ಹೆಚ್ಚು ಸಮಸ್ಯೆಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡರೇನ್ ಸ್ಯಾಮಿ, ಬ್ಯಾಟ್ಸ್ ಮನ್‍ಗಳು ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಾರೆ. ಆದರೆ ಬೌಲಿಂಗ್ ಪಡೆ ಟೂರ್ನಿಯನ್ನೇ ಗೆಲ್ಲಿಸುತ್ತದೆ. ಇದು ಬದಲಾವಣೆಯಾಗದ ಹೊರತು ಕಪ್ ಗೆಲ್ಲಲು ಆಗಲ್ಲ ಎಂದು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ವರ್ಷದ ಆರ್‌ಸಿಬಿ ಬೌಲಿಂಗ್ ಪ್ರದರ್ಶನವನ್ನು ಗಮನಿಸುವುದಾದರೆ, ಯಜುವೇಂದ್ರ ಚಹಲ್ ಮಾತ್ರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ವಿಕೆಟ್ ಪಡೆದ ಚಹಲ್, ಆವೃತ್ತಿಯ ಟಾಪ್ ವಿಕೆಟ್ ಕಿತ್ತ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದಿದ್ದಾರೆ. ಚಹಲ್ 15 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಬೇರೆ ಯಾವುದೇ ಬೌಲರ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಯುವ ವೇಗಿ ನವದೀಪ್ ಸೈನಿ ಕೂಡ ನಿರಾಸೆ ಮೂಡಿಸಿದ್ದಾರೆ.

    ಸತತ ನಾಲ್ಕು ಪಂದ್ಯ ಸೋತರೂ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲಿಯೂ ಸೋತು ಟೂರ್ನಿಯಿಂದ ಹೊರ ನಡೆದಿದೆ. ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಸುಲಭದ ಗುರಿ ಬೆನ್ನತ್ತಿದ್ದ ಸನ್‍ರೈಸರ್ಸ್ ಕೇನ್ ವಿಲಿಯಮ್ಸನ್‍ರ ಅರ್ಧ ಶತಕ ನೆರವಿನಿಂದ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಗೆಲುವು ಪಡೆಯಿತು. ಆ ಮೂಲಕ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಭಾನುವಾರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಡೆಲ್ಲಿ ಮತ್ತು ಸನ್‍ರೈಸರ್ಸ್ ನಡುವೆ ಹಣಾಹಣಿ ನಡೆಯಲಿದೆ.

  • ಪ್ಲೇ ಆಫ್ ನಿಂದ ದೂರ ಸರಿಯುತ್ತಿರುವ ಆರ್‌ಸಿಬಿ – ವಾರ್ನರ್ ಪಡೆಗೆ 5 ವಿಕೆಟ್‍ಗಳ ಜಯ

    ಪ್ಲೇ ಆಫ್ ನಿಂದ ದೂರ ಸರಿಯುತ್ತಿರುವ ಆರ್‌ಸಿಬಿ – ವಾರ್ನರ್ ಪಡೆಗೆ 5 ವಿಕೆಟ್‍ಗಳ ಜಯ

    – ಮುಂದಿನ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಘಟ್ಟಕ್ಕೆ ತಲುಪಿದ ಕೊಹ್ಲಿ ಬಾಯ್ಸ್
    – ಕೊನೆಯಲ್ಲಿ ಜೇಸನ್ ಹೋಲ್ಡರ್ ಸ್ಫೋಟಕ ಆಟ

    ಶಾರ್ಜ್: ಇಂದು ನಡೆದ ಸಖತ್ ಶನಿವಾರದ ಎರಡನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದೆ. ಈ ಮೂಲಕ ವಾರ್ನರ್ ಪಡೆ ಪ್ಲೇ ಆಫ್ ಸನಿಹಕ್ಕೆ ಹೋಗಿದ್ದರೆ, ಕೊಹ್ಲಿ ಪಡೆ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ.

    ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಯ್ತು. ಪರಿಣಾಮ ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 120 ರನ್‍ಗಳನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಲ್ಲಿ ನಾಯಕ ವಾರ್ನರ್ ವಿಕೆಟ್ ಕಳೆದುಕೊಂಡರು. ನಂತರ ಭರ್ಜರಿ ಪ್ರದರ್ಶನ ತೋರಿ ಐದು ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಪ್ಲೇ ಆಫ್
    ಸತತವಾಗಿ ಎರಡು ಸೋಲನ್ನು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಈಗ 13 ಪಂದ್ಯಗಳಿಂದ 14 ಅಂಕಗಳಿಸಿರುವ ಬೆಂಗಳೂರು ಮುಂದಿನ ಪಂದ್ಯವನ್ನು ಸೋಮವಾರ ಡೆಲ್ಲಿ ವಿರುದ್ಧ ಆಡಲಿದೆ. ಆದರೆ ಡೆಲ್ಲಿ ಕೂಡ 13 ಪಂದ್ಯಗಳನ್ನು ಆಡಿ 14 ಅಂಕ ಗಳಿಸಿದೆ. ಹೀಗಾಗಿ ಈ ಎರಡು ತಂಡಗಳಿಗೂ ಸೋಮವಾರದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಮ್ಯಾಚಿನಲ್ಲಿ ಗೆದ್ದವರು ಸುಲಭವಾಗಿ ಪ್ಲೇ ಆಫ್ ತಲುಪಲಿದ್ದಾರೆ. ಸೋತವರ ಭವಿಷ್ಯ ನೆಟ್ ರನ್‍ರೇಟ್ ಆಧಾರದ ಮೇಲೆ ನಿರ್ಧಾವಾಗಲಿದೆ.

    121 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಲು ಹೊರಟ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೆಂಗಳೂರು ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಶಾಕ್ ನೀಡಿದರು. ಎರಡನೇ ಓವರಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ನಂತರ ಜೊತೆಯಾದ ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಹೀಗಾಗಿ ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ತಂಡ ಒಂದು ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತು.

    ಆದರೆ ನಂತರ ಬೌಲಿಂಗ್‍ಗೆ ಬಂದ ಯುಜ್ವೇಂದ್ರ ಚಹಲ್ ಅವರು 19 ಬಾಲಿಗೆ 26 ರನ್ ಸಿಡಿಸಿ ಸ್ಫೋಟಕವಾಗಿ ಆಡುತ್ತಿದ್ದ ಕನ್ನಡಿಗ ಮನೀಶ್ ಪಾಂಡೆ ಅವರನ್ನು ಔಟ್ ಮಾಡಿದರು. ನಂತರ 32 ಬಾಲಿಗೆ 39 ರನ್ ಗಳಿಸಿದ್ದ ವೃದ್ಧಿಮಾನ್ ಸಹಾ ಅವರು ಯುಜ್ವೇಂದ್ರ ಚಹಲ್ ಅವರ ಬೌಲಿಂಗ್‍ನಲ್ಲಿ ಎಬಿ ಡಿವಿಲಿಯರ್ಸ್ ಹೊಡೆದ ಅದ್ಭುತ ಸ್ಟಂಪ್‍ಗೆ ಬಲಿಯಾದರು. ಇದಾದ ನಂತರ ಇಸುರು ಉದಾನಾ ಅವರು ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದರು.

    ನಂತರ ಕ್ರೀಸಿಗಿಳಿದ ಜೇಸನ್ ಹೋಲ್ಡರ್ ಅವರು ಸಿಕ್ಸ್ ಫೋರುಗಳ ಸುರಿಮಳೆಗೈದರು. ಈ ನಡುವೆ ಅಭಿಷೇಕ್ ಶರ್ಮಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಈ ನಂತರ ಬಂದ ಅಬ್ದುಲ್ ಸಮದ್ ಜೇಸನ್ ಹೋಲ್ಡರ್ ಜೋಡಿ ಹೈದರಾಬಾದ್ ತಂಡವನ್ನು ಗೆಲುವಿನ ದಡ ಸೇರಿಸಿತು. ಇದರಲ್ಲಿ 10 ಬಾಲ್ ಆಡಿದ ಜೇಸನ್ ಹೋಲ್ಡರ್ ಮೂರು ಬೌಂಡರಿ ಮತ್ತು ಒಂದು ಫೋರ್ ಸಮೇತ 26 ರನ್ ಸಿಡಿಸಿ ಮಿಂಚಿದರು.

  • ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

    ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

    ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ಸೋಲಿನ ಬಳಿಕವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶಗಳು ಇದೆ ಎಂದು ಆರ್ ಸಿಬಿ ಬೌಲರ್ ಯಜುವೇಂದ್ರ ಚಹಲ್ ಅಭಿಪ್ರಾಯ ಪಟ್ಟಿದ್ದಾರೆ.

    ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನು ಆಡಿರುವ ಆರ್ ಸಿಬಿ 1 ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸದ್ಯ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಪಡೆದಿದೆ. ಇನ್ನುಳಿದಂತೆ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಉಳಿದಿರುವ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯನ್ನು ಎದುರಿಸುತ್ತಿದೆ.

    11 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ 4 ಬಾರಿ 14 ಅಂಕಗಳನ್ನು ಗಳಿಸಿರುವ ತಂಡಗಳು ಪ್ಲೇ ಆಫ್ ಪ್ರವೇಶ ಮಾಡಿದೆ. ರಾಜಸ್ಥಾನ ರಾಯಲ್ಸ್ ತಂಡ 2018 ರಲ್ಲಿ ಗ್ರೂಪ್ ಹಂತದ ಹೋರಾಟದಲ್ಲಿ ಕೇವಲ 7 ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಿತ್ತು.

    ಟೂರ್ನಿಯಲ್ಲಿ ನೀರಸ ಪ್ರದರ್ಶವನ್ನು ನೀಡಿರುವ ಆರ್ ಸಿಬಿ ಈ ಹಂತದಲ್ಲಿ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದರೆ ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಫೀಲ್ಡಿಂಗ್, ಬೌಲಿಂಗ್ ವಿಭಾಗದಲ್ಲಿ ಆರ್ ಸಿಬಿ ಸಾಕಷ್ಟು ಸುಧಾರಣೆ ಮಾಡುವ ಅಗತ್ಯತೆ ಇದ್ದು, ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನದ ಅಗತ್ಯತೆ ಇದೆ.

    ಮುಂಬೈ ಪಂದ್ಯದ ಬಳಿಕ ಮಾತನಾಡಿದ ಚಹಲ್, ನಾವು ಮುಂದಿನ 6 ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇದ್ದು, ಕಳೆದ ವರ್ಷ ತಂಡವೊಂದು ಈ ಸಾಧನೆಯನ್ನು ಮಾಡಿದೆ. ಆದ್ದರಿಂದ ನಮಗೆ ಒಂದು ಅವಕಾಶ ಇದ್ದು, ಮುಂದಿನ ಹಂತದಲ್ಲಿ ಏನಾಗಲಿದೆ ಎನ್ನುವುದು ತಿಳಿಯಬೇಕಿದೆ ಎಂದರು.