Tag: Plastic Prohibition

  • ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

    ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

    – ದಿನಕ್ಕೆ 1,200 ರೂ. ದುಡಿಯುತ್ತಿದ್ದಾರೆ ಬಡ ಮಹಿಳೆಯರು

    ಕಾರವಾರ: ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧವನ್ನು ಕಠಿಣವಾಗಿ ಜಾರಿಗೆ ತಂದಿದೆ. ಪರಿಣಾಮ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿ ಬಟ್ಟೆ ಹಾಗೂ ಪೇಪರ್ ಬ್ಯಾಗ್‍ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬ್ಯಾಗುಗಳು ಅಂಗಡಿಗಳಿಂದ ಕೊಂಡುಕೊಳ್ಳುವ ಗ್ರಾಹಕರಿಗೆ ಹಾಗೂ ಅಂಗಡಿಯವರಿಗೆ ತುಟ್ಟಿಯಾಗುತಿತ್ತು. ಇದರಿಂದಾಗಿ ಕದ್ದುಮುಚ್ಚಿ ಪ್ಲಾಸ್ಟಿಕ್ ಬ್ಯಾಗ್‍ಗಳು ಬಿಕರಿಯಾಗುತಿತ್ತು. ಇದನ್ನು ಮನಗಂಡ ಕಾರವಾರ ನಗರಸಭೆ ಆಡಳಿತ ಪ್ರತಿ ದಿನ ಅಂಗಡಿಗಳಿಗೆ ದಾಳಿ ನಡೆಸಿ ಈ ವರೆಗೆ ಎರಡು ಕ್ವಿಂಟಾಲ್ ಪ್ಲಾಸ್ಟಿಕ್ ಬ್ಯಾಗ್ ವಶಪಡಿಸಿಕೊಂಡರೆ, ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ ಈಗಾಗಲೇ 40 ಟನ್ ಪ್ಲಾಸ್ಟಿಕ್ ಅನ್ನು ರೀ ಸೈಕ್ಲಿಂಗ್ ಮಾಡಿ ದಾಲ್ಮಿಯ ಸಿಮೆಂಟ್ ಕಾರ್ಖಾನೆಗೆ ಕಳುಹಿಸಿದೆ.

    ಪ್ರತಿ ದಿನ ಏಳು ಕ್ವಿಂಟಾಲ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕೇವಲ ಕಾರವಾರ ನಗರದಿಂದ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಾರವಾರ ನಗರಸಭೆ ಆಯುಕ್ತ ಯೋಗೀಶ್ವರ್ ರವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೂ ಹೋಟೆಲ್, ಬೀದಿ ಬದಿಯ ಅಂಗಡಿಗಳು ಕದ್ದುಮುಚ್ಚಿ ಪ್ಲಾಸ್ಟಿಕ್ ಮಾರಾಟವನ್ನು ಮಾಡಿ ಪ್ರತಿ ಬಾರಿ ಸಿಕ್ಕಿಕೊಂಡು ದಂಡ ತೆತ್ತುತಿದ್ದುದನ್ನು ಹಾಗೂ ಅವರ ಅನಿವಾರ್ಯತೆಯನ್ನು ಮನಗಂಡು ಬಟ್ಟೆ ಬ್ಯಾಗ್‍ಗಳನ್ನು ಅವರಿಗೆ ನೀಡುವ ನಿರ್ಧಾರ ತೆಗೆದುಕೊಂಡರು. ಇದರ ಪ್ರತಿಫಲವಾಗಿ ಹಾಗೂ ಬಡ ಮಹಿಳೆಯರಿಗೆ ಸಹಾಯ ಆಗುವಂತೆ ಕಾರವಾರ ನಗರದ ಮಹಿಳಾ ಸಹಕಾರ ಸಂಘ ಸಂಸ್ಥೆಯನ್ನು ಬ್ಯಾಗ್ ತಯಾರಿಕೆಗೆ ಪ್ರೇರೇಪಿಸಿದ್ದಲ್ಲದೇ ಅವರ ಮೂಲಕ ಬಟ್ಟೆ ಬ್ಯಾಗ್ ತಯಾರಿಸಿ ನೇರವಾಗಿ ನಗರಸಭೆಯೇ ಹೋಟೆಲ್ ಗಳಿಗೆ ಸೇರಿದಂತೆ ಅಂಗಡಿ ಮುಂಗಟ್ಟುಗಳಿಗೆ ಪ್ರತಿ ಬ್ಯಾಗಿಗೆ 3 ರೂ. ನಂತೆ ಕೊಂಡುಕೊಳ್ಳುವ ವೇದಿಕೆ ಒದಗಿಸಿಕೊಟ್ಟಿತು.

    ಇದರ ಪ್ರತಿಫಲವಾಗಿ ಕಾರವಾರದ ಜೈ ಸಂತೋಷಿನಿ ಮಾತಾ ಮಹಿಳಾ ಸಹಕಾರ ಸಂಘದ ಮಹಿಳೆಯರು ಬ್ಯಾಗ್‍ಗಳನ್ನು ಹೊಲಿಯುವ ಕಾರ್ಯ ಆರಂಭಿಸಿದ್ದಾರೆ. ಒಂಬತ್ತು ಜನರಿರುವ ಈ ಚಿಕ್ಕ ಸಂಘದಲ್ಲಿ ಏಳು ಜನ ಮಹಿಳೆಯರು ಹೊಲಿಗೆ ಯಂತ್ರ ಹೊಂದಿದ್ದು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಬಟ್ಟೆ ಚೀಲವನ್ನು ಹೋಲಿದು ಕೊಡುತ್ತಿದ್ದಾರೆ.

    ಸದ್ಯ ಹೋಟಲ್ ಹಾಗೂ ಅಂಗಡಿಗೆ ಬಟ್ಟೆ ಬ್ಯಾಗ್‍ಗಳನ್ನು ತಯಾರಿಸಿ ನೀಡುತ್ತಿದ್ದು, ಪ್ರತಿ ದಿನ ನೂರು ಬಟ್ಟೆಯ ಒಂದು ಬಂಡಲ್‍ನಂತೆ ನಾಲ್ಕು ಬಂಡಲ್ ಬಟ್ಟೆಯನ್ನು ಒಬ್ಬರು ತಯಾರಿಸಿ ದಿನಕ್ಕೆ 1,200 ರೂ.ಗಳಿಗೂ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬ್ಯಾಗ್ ತಯಾರಿಸುತ್ತಿರುವ ಸಂಘದ ಪೂಜಾ ಸಂಜೀವ್ ಅರ್ಗೆಕರ್ ಹೇಳುವಂತೆ, ಗೃಹಿಣಿಯಾಗಿ ಮನೆಯ ಕೆಲಸ ಮುಗಿಸಿ ಸಂಜೆ ವೇಳೆ ಬಟ್ಟೆ ಚೀಲವನ್ನು ಹೊಲಿಯುತ್ತೇನೆ. ಇದರಿಂದ ನನ್ನ ಗಳಿಕೆ ಹೆಚ್ಚಾಗಿದ್ದು ಕುಟುಂಬಕ್ಕೆ ಸಹಕಾರವಾಗುತ್ತಿದೆ. ನಗರಸಭೆಯೇ ನೇರವಾಗಿ ಹೋಟಲ್ ಮತ್ತು ಅಂಗಡಿಗಳ ನಡುವೆ ನಮ್ಮ ಬಟ್ಟೆ ಬ್ಯಾಗ್ ತೆಗೆದುಕೊಳ್ಳುವಂತೆ ಒಪ್ಪಂದ ಮಾಡಿಸಿದೆ. ಇದರಿಂದಾಗಿ ನಾವು ಗ್ರಾಹಕರನ್ನು ಹುಡುಕಿ ಅಲೆಯುವುದು ತಪ್ಪಿದೆ, ಬ್ಯಾಗ್‍ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ.

    ಎನಿಟೈಮ್ ಬ್ಯಾಗ್ ಮಿಷನ್‍ಗಳು: ಕೆಲವೇ ದಿನದಲ್ಲಿ ಈ ಮಹಿಳೆಯರು ತಯಾರಿಸಿದ ಬಟ್ಟೆ ಬ್ಯಾಗ್‍ಗಳನ್ನು ನೇರವಾಗಿ ನಗರಸಭೆ ಖರೀದಿಸಿ ಎಟಿಎಮ್ ಗಳು ಹೇಗಿವೆಯೋ ಅದೇ ಮಾದರಿಯಲ್ಲಿ ಎನಿಟೈಮ್ ಬ್ಯಾಗ್ ಮಿಷನ್‍ಗಳನ್ನು ನಗರದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದೆ. ಈ ಮಿಷನ್‍ನಲ್ಲಿ ಐದು ರೂ. ನಾಣ್ಯ ಹಾಕಿದರೆ ಒಂದು ಬಟ್ಟೆ ಬ್ಯಾಗ್ ಬರುವಂತೆ ವ್ಯವಸ್ಥೆ ರೂಪಿಸಿದ್ದು, ಸಿದ್ಧತೆ ನಡೆದಿದೆ ಎಂದು ನಗರಸಭಾ ಆಯುಕ್ತ ಯೋಗೀಶ್ವರ್ ತಿಳಿಸಿದ್ದಾರೆ.

    ಹೀಗಾಗಿ ಈಗಾಗಲೇ ಹಲವು ಮಹಿಳೆಯರು ಬಟ್ಟೆ ಬ್ಯಾಗ್ ತಯಾರಿಸುವಲ್ಲಿ ನಿರತರಾಗಿದ್ದು, ತಮ್ಮ ಬಿಡುವಿನ ಸಮಯದಲ್ಲಿ ಬಟ್ಟೆ ಬ್ಯಾಗ್ ಹೊಲಿಯುವ ಮೂಲಕ ಕೈತುಂಬ ಹಣ ಗಳಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿಷೇಧ ಈ ಬಡ ಮಹಿಳೆಯರ ಬಾಳಲ್ಲಿ ಬೆಳಕಾಗುತ್ತಿದೆ.

  • ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಚೆನ್ನೈ: ಗಿನ್ನಿಸ್ ದಾಖಲೆ ನಿರ್ಮಿಸಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 9 ಜನ ಅಂಧರು ಕೇವಲ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲ’ವನ್ನು ಹೊಲಿಯುವ ಮೂಲಕ ಗಮನ ಸೆಳೆದಿದ್ದಾರೆ.

    ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ 9 ಅಂಧ ವಿದ್ಯಾರ್ಥಿಗಳು ಶುಕ್ರವಾರ ಈ ಚೀಲವನ್ನು ಹೊಲಿದಿದ್ದು, ಇವರಿಗೆ ತೃತೀಯಲಿಂಗಿಗಳ ಸಮುದಾಯದ ಸದಸ್ಯರು ಹಾಗೂ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಲು ಸಹಾಯ ಮಾಡಿದ್ದಾರೆ.

    ಈ ಕಾರ್ಯವನ್ನು ಸಂಘಟಿಸಿದ ಯುವ ಪ್ರತಿಷ್ಠಾನದ ಅಧ್ಯಕ್ಷೆ ಶಶಿಕಲಾ ಈ ಕುರಿತು ಮಾಹಿತಿ ನೀಡಿ, ಯುವ ಪ್ರತಿಷ್ಠಾನದ 9 ಜನ ಅಂಧರು ಹ್ಯಾಂಡಲ್ ಇಲ್ಲದೆ, ಕೇವಲ ಕೈಗಳಿಂದ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲವನ್ನು’ ಹೊಲಿಯುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಹಾಗೂ ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ ಸೆಣಬಿನ ಚೀಲವನ್ನು ಹೊಲಿಯಲಾಗಿದೆ ಎಂದು ತಿಳಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ನಂತರ, ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ ಭಾಷಣದ ಅಂಶವನ್ನು ಶಶಿಕಲಾ ಉಲ್ಲೇಖಿಸಿದ್ದಾರೆ. ಅಲ್ಲದೆ, ನಾವು ಪ್ಲಾಸ್ಟಿಕ್ ವಿರುದ್ಧ ಹೋರಾಟ ಪ್ರಾರಂಭಿಸಬೇಕಿದೆ. ಹೀಗಾಗಿ ಸೆಣಬಿನ ಚೀಲವನ್ನು ಈ ಅಂಧರು ಹೊಲಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಕಲಚೇತನರೂ ಸಹ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ವಿಶ್ವಾಸ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸಹ ಈ ಪ್ರಯತ್ನದ ಉದ್ದೇಶವಾಗಿದೆ ಎಂದರು.

  • ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

    ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

    ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳು ವ್ಯಾಪಕವಾಗಿ ಬಳಕೆಯಲ್ಲಿದ್ದು, ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

    ಇದರ ಭಾಗವಾಗಿ ಭಾರತೀಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿ ಒಂದು ಬಾರಿ ಬಳಸುವ(ಸಿಂಗಲ್ ಯುಸ್) ಪ್ಲಾಸ್ಟಿಕ್ ಪರಿಕರಗಳನ್ನು ನಿಷೇಧಿಸಲು ನಿರ್ಧರಿಸಿದ್ದು, ಈ ನಿಯಮ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.

    ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಮರು ಬಳಕೆಗಾಗಿ ಈಗಾಗಲೇ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ 360 ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಟ್ಟು 1,853 ಪ್ಲಾಸ್ಟಿಕ್ ವಾಟರ್ ಬಾಟಲ್‍ಗಳನ್ನು ಪುಡಿ(ಪ್ಲಾಸ್ಟಿಕ್ ವಾಟರ್ ಬಾಟಲ್ ಕ್ರಶಿಂಗ್ ಮಷಿನ್) ಮಾಡುವ ಯಂತ್ರಗಳನ್ನು ಅಳವಡಿಸಿದೆ. ಆದರೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಕ್ರಮಕ್ಕೆ ಮುಂದಾಗಿದೆ.

    ಇದೀಗ ರೈಲ್ವೆ ಮಂಡಳಿ ಐಆರ್‍ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಡೆವಲಪ್‍ಮೆಂಟ್ ಕಾರ್ಪೋರೇಷನ್)ಗೆ ತಿಳಿಸಿದ್ದು, ಬಳಸಿದ ನಂತರ ಬಾಟಲಿಗಳನ್ನು ಸಂಸ್ಥೆಯಿಂದಲೇ ಮರಳಿ ಪಡೆಯಬೇಕೆಂದು ಸೂಚಿಸಿದೆ.

    ಝೋನಲ್ ರೈಲ್ವೆ ಹಾಗೂ ಉತ್ಪಾದನಾ ಘಟಕಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಪ್ಪಿಸಲು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರು ಬಳಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ತಿರಸ್ಕರಿಸುವ ಮೂರು ಸೂತ್ರಗಳನ್ನು ರಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಹೊರತುಪಡಿಸಿ ಮರು ಬಳಕೆ ಮಾಡಬಹುದಾದ ಕಡಿಮೆ ಬೆಲೆಯ ಚೀಲಗಳನ್ನು ಬಳಸುವಂತೆ ಜನರಿಗೆ ತಿಳುವಳಿಕೆ ನೀಡುವಂತೆ ಪ್ರಧಾನ ವ್ಯವಸ್ಥಾಪಕರು ರೈಲ್ವೆ ನೌಕರರಿಗೆ ಸೂಚನೆ ನೀಡಿದ್ದಾರೆ.

    ಭಾರತೀಯ ರೈಲ್ವೆಯು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅನುಸರಿಸುತ್ತಿದ್ದು, ಪ್ಲಾಸ್ಟಿಕ್ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು, ಅಲ್ಲದೆ ಪ್ಲಾಸ್ಟಿಕ್‍ನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

  • ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿರ್ಧಾರ

    ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿರ್ಧಾರ

    ಬೆಂಗಳೂರು: ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ, ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದರೂ, ಪ್ಲಾಸ್ಟಿಕ್ ಹಾವಳಿ ಕಡಿಮೆಯಾಗಿಲ್ಲ. ಇದರಿಂದ ಕಸ ವಿಲೇವಾರಿಗೂ ಸಮಸ್ಯೆಯಾಗುತ್ತಿದೆ. ಆದುದರಿಂದ ಇನ್ನು ಮುಂದೆ ಪ್ಲಾಸ್ಟಿಕ್ ಅನ್ನು ಡಾಂಬರೀಕರಣಕ್ಕೆ ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಈ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್‍ಕೆ ಅತೀಕ್ ಅವರು ಉಪಸ್ಥಿತರಿದ್ದರು.

    ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್, ನಗರದಲ್ಲಿ ಈವರೆಗೆ ಒಂದು ಲಕ್ಷ ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು 1.67 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ ಕೇಸು ದಾಖಲು ಮಾಡುವ ಅಧಿಕಾರ ನಮಗೆ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಣಯಿಸಿದೆ ಎಂದು ವಿವರಿಸಿದರು.

    ಇದರಲ್ಲಿ ವಿಜಿ-10 ಮತ್ತು ವಿಜಿ-30 ಎಂಬ ಎರಡು ಮಾದರಿಗಳಿವೆ. ವಿಜಿ-30ಯಲ್ಲಿ ಹೈಗ್ರೇಡ್ ವಿಟಮಿನ್ ಇರುತ್ತದೆ. ಇದನ್ನು ಎಸ್‍ಆರ್ ದರದಲ್ಲಿ ಸೇರಿಸಲಾಗಿದೆ. ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸುವುದರಿಂದ ಹೆಚ್ಚು ಬಾಳಿಕೆ ಬರುತ್ತದೆ. ಟನ್ ವಿಟಮಿನ್‍ಗೆ 32 ಸಾವಿರ ರೂ. ವೆಚ್ಚವಾಗುತ್ತದೆ. ಶೇ. 8ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ವಿಟಮಿನ್‍ಗೆ 2,100 ಹೆಚ್ಚುವರಿ ವೆಚ್ಚವಾಗುತ್ತದೆ. ಆದರೂ ರಸ್ತೆಗಳು ಹೆಚ್ಚು ಬಾಳಿಕೆ ಬರುವುದರ ಜತೆಗೆ ವಾಹನಗಳ ಸಂಚಾರ ಸುಗಮವಾಗಿರುತ್ತದೆ. ನಗರದಲ್ಲಿ ಪ್ಲಾಸ್ಟಿಕ್ ಹೆಚ್ಚು ಸಂಗ್ರಹವಾಗುವುದರಿಂದ ಅನುಕೂಲವಾಗುತ್ತದೆ. ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಬೀಳಲಿದೆ ಎಂದು ಹೇಳಿದ್ದಾರೆ.