Tag: Plasma treatment

  • ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ – ಇಂದು ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ

    ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ – ಇಂದು ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ಒಂದೇ ದಿನ 12 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇ 8ರ ಬೆಳಗ್ಗೆಯ ಹೆಲ್ತ್ ಬುಲೆಟಿನ್ ಪ್ರಕಟಣೆ ಪ್ರಕಾರ ಭಟ್ಕಳ ಪಟ್ಟಣದಲ್ಲಿಯೇ 12 ಪ್ರಕರಣಗಳು ದೃಢಪಟ್ಟಿದೆ. ಈ 12 ಮಂದಿಗೆ ಮೇ 6ಕ್ಕೆ ಸೋಂಕು ಪತ್ತೆಯಾದ ಯುವತಿ ರೋಗಿ-659 ಅವರ ಸಂಪರ್ಕದಿಂದ ಕೊರೊನಾ ತಗುಲಿದೆ. ಈ ಪೈಕಿ 10 ಮಂದಿ ಯುವತಿಯ ಕುಟುಂಬದವರಾಗಿದ್ದಾರೆ. ಉಳಿದಂತೆ ಓರ್ವ ಸ್ನೇಹಿತೆ ಮತ್ತು ಇನ್ನೊಬ್ಬರು ಪಕ್ಕದ ಮನೆಯವರಾಗಿದ್ದಾರೆ ಎಂದು ತಿಳಿಸಿದರು.

    ಸೋಂಕಿನ ಮೂಲ ಪತ್ತೆಯಾಗಿದ್ದರಿಂದ ಸಮುದಾಯಕ್ಕೆ ಹರಡಿಲ್ಲ ಎಂಬುದು ಖಚಿತವಾಗಿದೆ. ಕೋವಿಡ್-19 ಸೋಂಕು ಈವರೆಗೆ ಜಿಲ್ಲೆಯ ಕಂಟೈನ್‍ಮೆಂಟ್ ಪ್ರದೇಶವಾದ ಭಟ್ಕಳದಲ್ಲಿದ್ದು, ಉಳಿದ ಪ್ರದೇಶಗಳ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಭಟ್ಕಳ ನಗರದಿಂದ ಮೂರು ಕುಟುಂಬಗಳು ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಆರೋಗ್ಯ ಚಿಕಿತ್ಸೆಗೆ ಹೋಗಿ ಬಂದಿವೆ ಎಂಬ ಮಾಹಿತಿ ದೊರೆತಿದೆ ಎಂದರು.

    ಹೀಗಾಗಿ ಜಿಲ್ಲೆಯ ಜನರು ಚಿಕಿತ್ಸೆಗೆ ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಹೋಗಿ ಬಂದಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಮತ್ತು ಜ್ವರ, ಕೆಮ್ಮು ಇದ್ದರೆ ಸ್ವಯಂ ಚಿಕಿತ್ಸೆಗೆ ಮುಂದಾಗದೇ ವೈದ್ಯರ ಸಲಹೆ ಪಡೆಯಬೇಕು ಎಂದು ಸೂಚಿಸಿದರು.

    ಭಟ್ಕಳ ಹೊರತುಪಡಿಸಿ ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಯಥಾವತ್ತಾಗಿ ಅನುಸರಿಸಬೇಕು. ವಿದೇಶ ಹಾಗೂ ಹೊರ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಕ್ವಾರಂಟೈನ್ ಮಾಡಲಾಗುವುದು.

    ಭಟ್ಕಳ ಕಂಟೈನ್‍ಮೆಂಟ್ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಬಿಗಿಗೊಳಿಸಲಾಗುವುದು. ಮಾನವೀಯ ನೆಲೆಯಲ್ಲಿ ಹಿಂದೆ ನೀಡುತ್ತಿದ್ದ ಪಾಸ್ ಹಾಗೂ ಸಡಿಲಿಕೆಗಳು ಇನ್ನು ಮುಂದೆ ನೀಡಲಾಗುವುದಿಲ್ಲ. ಭಟ್ಕಳ ಸಂಪೂರ್ಣ ಸೀಲ್ ಮಾಡಲಾಗುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಜೊತೆ ಯಾರೂ ಕೂಡ ಭಟ್ಕಳಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಹಿಂದಿನ ನಿಯಮಕ್ಕಿಂತ ಕಠಿಣ ನಿಯಮ ಜಾರಿಮಾಡಲಾಗುತ್ತದೆ. ಇದಕ್ಕೆ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ಅವರು ಮಾತನಾಡಿ, ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್-19 ವಾರ್ಡಿಗೆ ಶಿಫ್ಟ್ ಮಾಡಲಾಗುತ್ತಿದೆ. ಅವರಿಗೆ ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಸಮೀಕ್ಷೆಯಲ್ಲಿ ಭಾಗಿಯಾಗಿ ಮಾಹಿತಿ ನೀಡಬೇಕೆಂದರು.

    ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ:
    ಜಿಲ್ಲೆಯಲ್ಲಿ 24 ಮಂದಿ ಸೋಂಕಿತರಿದ್ದು, ಇದರಲ್ಲಿ 11 ಮಂದಿ ಗುಣಮುಖರಾಗಿದ್ದಾರೆ. ಇವರನ್ನು ಪ್ರತ್ತೇಕವಾಗಿಡಲಾಗಿದ್ದು, ಇವರ ಆರೋಗ್ಯ ಉತ್ತಮವಾಗಿದೆ. ಗುಣಮುಖರಾದವರ ರಕ್ತವನ್ನು ಪಡೆದು ಪ್ಲಾಸ್ಮ ಚಿಕಿತ್ಸೆ ಮೂಲಕ ಸೋಂಕಿತರ ಚಿಕಿತ್ಸೆ ನೀಡಲು ಐಸಿಎಮ್‍ಆರ್ ಅವರಿಗೆ ಅವಕಾಶ ಕೇಳಿ ಜಿಲ್ಲಾಡಳಿತ ಪತ್ರ ಬರೆದಿದ್ದು, ಅವರಿಂದ ಒಪ್ಪಿಗೆ ಬಂದ ನಂತರ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಎಂ. ರೋಷನ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಉತ್ತರ ಕನ್ನಡ ಜಿಲ್ಲೆಯ ಸೊಂಕಿತರ ವಿವರ:
    1) ಮಾರ್ಚ್ 22ರಂದು ಮೊದಲ ಕೊರೊನಾ ಸೋಂಕಿತ ಪ್ರಕರಣ ವರದಿ, ರೋಗಿ-26 22ವರ್ಷದ ಯುವಕ.

    2) ಮಾರ್ಚ್ 24 ರಂದು 2 ಪ್ರಕರಣ, ರೋಗಿ-35 40 ವರ್ಷದ ವ್ಯಕ್ತಿ ಹಾಗೂ ರೋಗಿ-36 65 ವರ್ಷದ ವೃದ್ಧ.

    3) ಮಾರ್ಚ್ 28ರಂದು 5 ಪ್ರಕರಣ, ರೋಗಿ-62 22 ವರ್ಷದ ಯುವಕ, ರೋಗಿ-65 54 ವರ್ಷದ ಮಹಿಳೆ(ರೋಗಿ-36 ಅವರ ಪತ್ನಿ), ರೋಗಿ-66 28 ವರ್ಷದ ಯುವತಿ(ರೋಗಿ-36 ಜೊತೆ ಸಂಪರ್ಕ), ರೋಗಿ-67 23 ವರ್ಷದ ಯುವಕ(ರೋಗಿ-36 ಜೊತೆ ಸಂಪರ್ಕ), ರೋಗಿ-76 24 ವರ್ಷದ ಯುವಕ(ಸೋಂಕಿತ ರೋಗಿ-35 ಜೊತೆ ಸಂಪರ್ಕ).

    4) ಮಾರ್ಚ್ 31ರಂದು ಒಂದು ಪ್ರಕರಣ, ರೋಗಿ-98 26 ವರ್ಷದ ಯುವಕ(ರೋಗಿ-62 ಜೊತೆ ಸಂಪರ್ಕ).

    5) ಏಪ್ರಿಲ್ 8ರಂದು ಒಂದು ಪ್ರಕರಣ, ರೋಗಿ-176 26 ವರ್ಷದ ಗರ್ಭಿಣಿ ಮಹಿಳೆ(ಐಎಲ್‍ಐ ಪ್ರಕರಣ).

    6) ಏಪ್ರಿಲ್ 14ರಂದು ಒಂದು ಪ್ರಕರಣ ರೋಗಿ-160 ಪುರುಷ(ರೋಗಿ-176 ಪತಿ).

    7) ಮೇ 5ರಂದು ಒಂದು ಪ್ರಕರಣ, ರೋಗಿ-659 18 ವರ್ಷದ ಯುವತಿ.

    8) ಮೇ 8ರಂದು 12 ಪ್ರಕರಣ, ಈ ಎಲ್ಲಾ ಸೋಂಕಿತರು ರೋಗಿ-659 ಅವರ ಸಂಪರ್ಕದಲ್ಲಿದ್ದರು. ರೋಗಿ-739, 25 ವರ್ಷದ ಮಹಿಳೆ. ರೋಗಿ-740, 18 ವರ್ಷದ ಯುವತಿ. ರೋಗಿ-741, 11 ವರ್ಷದ ಬಾಲಕಿ. ರೋಗಿ-742, 39 ವರ್ಷದ ಮಹಿಳೆ. ರೋಗಿ-743, 33 ವರ್ಷದ ವ್ಯಕ್ತಿ. ರೋಗಿ-744, 75 ವರ್ಷದ ವೃದ್ಧೆ. ರೋಗಿ-745, 12 ವರ್ಷದ ಬಾಲಕಿ. ರೋಗಿ-746, 83 ವರ್ಷದ ವೃದ್ಧ. ರೋಗಿ-747, 5 ತಿಂಗಳ ಹೆಣ್ಣು ಮಗು. ರೋಗಿ-748, 3 ವರ್ಷದ ಬಾಲಕಿ, ರೋಗಿ-749, 60 ವರ್ಷದ ವೃದ್ಧ ಹಾಗೂ ರೋಗಿ-750, 22 ವರ್ಷದ ಮಹಿಳೆ.

  • ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತವೇ ಕೊರೊನಾಗೆ ಔಷಧಿ

    ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತವೇ ಕೊರೊನಾಗೆ ಔಷಧಿ

    – ಪ್ಲಾಸ್ಮಾ ಥೆರಪಿಯಿಂದ ಕೊರೊನಾಗೆ ಮದ್ದು
    – ಸರ್ಕಾರಕ್ಕೆ ಐಸಿಎಂಆರ್ ಸಲಹೆ

    ನವದೆಹಲಿ: ಕೊರೊನಾಗೆ ಇನ್ನೂ ಔಷಧಿ ಸಿಕ್ಕಿಲ್ಲ. ವಿಶ್ವಾದ್ಯಂತ ಹಲವು ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಬೆನ್ನಲ್ಲೇ ಕೊರೊನಾ ರೋಗಿಯನ್ನು ಪ್ಲಾಸ್ಮಾ ಥೆರಪಿ ಮೂಲಕ ಗುಣಪಡಿಸಬಹುದು ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

    ಹೌದು. ಜಗತ್ತನ್ನೇ ಆತಂಕಕ್ಕೆ ದೂಡಿರುವ ಮಹಾಮಾರಿ ಕೊರೊನಾಗೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತವೇ ಔಷಧಿ ಎನ್ನಲಾಗುತ್ತಿದೆ. ಗುಣಮುಖರಾಗಿರುವ ಕೊರೊನಾ ರೋಗಿಗಳ ರಕ್ತದ ಕಣಗಳನ್ನೇ ಸೋಂಕಿತ ವ್ಯಕ್ತಿಗೆ ಮದ್ದಾಗಿ ಬಳಸಬಹುದಂತೆ. ಇದಕ್ಕೆ ಪ್ಲಾಸ್ಮಾ ಥೆರಪಿ ಎಂದು ಕರೆಯಲಾಗುತ್ತಿದ್ದು, ಇದನ್ನೇ ಕೊರೊನಾಗೆ ಮದ್ದಾಗಿ ಬಳಸಲು ಕೇಂದ್ರ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸಲಹೆ ನೀಡಿದೆ. ಈಗ  ಔಷಧ ನಿಯಂತ್ರಣ ಪ್ರಾಧಿಕಾರದ ಅನುಮತಿಯೊಂದು ಬಾಕಿಯಿದ್ದು  ಅನುಮತಿ ನೀಡಿದರೆ ಪ್ರಯೋಗ  ಭಾರತದಲ್ಲೂ ನಡೆಯಬಹುದು.

    ಏನಿದು ಪ್ಲಾಸ್ಮಾ ಥೆರಪಿ?
    ಕೊರೊನಾದಿಂದ ಗುಣಮುಖರಾದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಅವರ ರಕ್ತ ಕಣಗಳನ್ನು ಬೇರ್ಪಡಿಸಿ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತದೆ. ಕೊರೊನಾ ವೈರಸ್ಸಿನೊಂದಿಗೆ ಹೋರಾಡಿದ ಪರಿಣಾಮ ಈ ರಕ್ತಕ್ಕೆ ವೈರಸ್ ಗಳನ್ನು ತಡೆಯುವ ಶಕ್ತಿ ಇರುತ್ತದೆ. ಹೀಗಾಗಿ ಪ್ಲಾಸ್ಮಾ ಥೆರಪಿ ನೀಡಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

    ಪ್ರಯೋಗ ನಡೆದಿದೆಯೇ?
    ಚೀನಾದಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾವನ್ನೇ ಬಳಸಲಾಗಿದೆ. ಚೀನಾದ 2 ವೈದ್ಯರ ತಂಡ 2 ಪ್ರತ್ಯೇಕ ಆಸ್ಪತ್ರೆಗಳಲ್ಲಿ 15 ಮಂದಿ ಸೋಂಕಿತರಿಗೆ ಮೊದಲು ಈ ಪರೀಕ್ಷೆ ನಡೆಸಿ ಅವರಲ್ಲಿ ಸುಧಾರಣೆ ಕಂಡದ್ದನ್ನು ದಾಖಲಿಸಿವೆ. ಸದ್ಯ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಪ್ಲಾಸ್ಮಾ ಥೆರಪಿ ಬಳಕೆಗೆ ಚಿಂತಿಸಲಾಗಿದೆ. ದೇಶದಲ್ಲಿ ಕೇರಳ ರಾಜ್ಯದಲ್ಲಿ ಈ ಮದ್ದು ಮೊದಲ ಬಾರಿಗೆ ಬಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲೂ ಇದನ್ನು ಜಾರಿಗೆ ತರುವ ಸಾಧ್ಯತೆಯಿದೆ.

    ಒಬ್ಬನಿಂದ ಎಷ್ಟು ಮಂದಿಗೆ ನೀಡಬಹುದು?
    ಒಬ್ಬನಿಂದ ಇಷ್ಟೇ ಮಂದಿಗೆ ನೀಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟು ಪ್ರಮಾಣದಲ್ಲಿ ಪ್ಲಾಸ್ಮಾ ಸಿಗುತ್ತದೆ ಎಂಬುದರ ಮೇಲೆ ಎಷ್ಟು ಮಂದಿಗೆ ನೀಡಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ಒಬ್ಬನಿಂದ ಕನಿಷ್ಟ ಇಬ್ಬರು ಗರಿಷ್ಟ 5 ಮಂದಿಗೆ ಪ್ಲಾಸ್ಮಾ ನೀಡಬಹುದು. ಒಬ್ಬ ರೋಗಿಯನ್ನು ಗುಣಪಡಿಸಲು ಅಂದಾಜು 200-250 ಎಂಎಲ್ ಪ್ಲಾಸ್ಮಾ ಬೇಕಾಗುತ್ತದೆ.

    ಎಷ್ಟು ದಿನಗಳ ನಂತರ ಪ್ಲಾಸ್ಮಾ ಸಂಗ್ರಹಿಸಬಹುದು?
    ಇದು ಬಹಳ ಕಠಿಣ ಪ್ರಶ್ನೆ. ಕೊರೊನಾ ವಾಸಿಯಾದ ನಂತರವು ಸೋಂಕು ಬಂದಿದೆ ಎನ್ನುವ ವರದಿಗಳು ಚೀನಾದಲ್ಲಿ ದಾಖಲಾಗಿದೆ. ಹೀಗಾಗಿ ರೋಗಿ ಸಂಪೂರ್ಣವಾಗಿ ಗುಣವಾದ 28 ದಿನಗಳ ನಂತರ ಪ್ಲಾಸ್ಮಾವನ್ನು ಸಂಗ್ರಹಿಸಬಹುದು ಎನ್ನುವ ಲೆಕ್ಕಾಚಾರಕ್ಕೆ ಬರಲಾಗಿದೆ.

    ಯಾರಿಗೆ ನೀಡಬಹುದು?
    ಕೊರೊನಾ ಪೀಡಿತ ಎಲ್ಲರಿಗೆ ಈ ಥೆರಪಿಯ ಅಗತ್ಯವಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಉತ್ತಮ ಆಹಾರ, ಔಷಧಿ, ತಮ್ಮಲ್ಲಿನ ದೃಢ ವಿಶ್ವಾಸದಿಂದಲೇ ಗುಣಮುಖರಾಗುತ್ತಾರೆ. ಆದರೆ ಗಂಭೀರವಾಗಿರುವ ರೋಗಿಗಳಿಗೆ ನೀಡಲು ಯಾವುದೇ ಔಷಧ ಇಲ್ಲದ ಕಾರಣ ಈ ಥೆರಪಿ ನೀಡಬಹುದು. ಈ ಥೆರಪಿ ಮೂಲಕ ರೋಗಿಯನ್ನು 5-7 ದಿನಗಳಲ್ಲಿ ಗುಣಪಡಿಸಬಹುದು ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ.

    ಅನುಮತಿ ಸಿಕ್ಕಿದ್ರೆ ಪ್ರಾರಂಭಿಸಬಹುದೇ?
    ಸರ್ಕಾರದಿಂದ ಅನುಮತಿ ಸಿಕ್ಕಿದ್ರೆ ಮರುದಿನವೇ ಈ ಥೆರಪಿ ಮಾಡಬಹುದು. ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಕೊರೊನಾ ಬಂದು ಗುಣಮುಖರಾದ ರೋಗಿಗಳ ಸಂಪೂರ್ಣ ವಿವರ ಇರುತ್ತದೆ. ಇವರನ್ನು ಸಂಪರ್ಕಿಸುವ ಮೂಲಕ ಕೆಲಸ ಆರಂಭಿಸಬಹುದು.

    ಮಲೇರಿಯಾ ಮಾತ್ರೆಯಿಂದ ಅಪಾಯ?
    ಮಲೇರಿಯಾ ಜ್ವರಕ್ಕೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊರೊನಾಗೆ ನೀಡಲಾಗುತ್ತಿದೆ. ಈ ಮಧ್ಯೆ, ಆ್ಯಂಟಿ ಮಲೇರಿಯಾ ಲಸಿಕೆ ಬಳಕೆಯಿಂದ ಹೃದಯಾಘಾತದ ಅಪಾಯ ಇದೆ ಅಂತಲೂ ಹೇಳಲಾಗ್ತಿದೆ. ಹೀಗಾಗಿ, ವೈದ್ಯರ ಸಲಹೆ ಇಲ್ಲದೆ ಜನ ಯಾವುದೇ ಕಾರಣಕ್ಕೂ ಹೈಡ್ರಾಕ್ಸಿಕ್ಲೊರೊಕ್ವಿನ್ ತೆಗೆದುಕೊಳ್ಳಬಾರದು. ಇದನ್ನೂ ಓದಿ: ಟ್ರಂಪ್ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ? ಈ ಮಾತ್ರೆಯಿಂದ ಕೊರೊನಾ ವಾಸಿಯಾಗುತ್ತಾ?