Tag: Plasma Therapy

  • ಪ್ಲಾಸ್ಮಾ ದಾನಿಯ ಪಾದ ತೊಳೆದ ಕೊರೊನಾದಿಂದ ಗುಣಮುಖರಾದ ಶಾಸಕ

    ಪ್ಲಾಸ್ಮಾ ದಾನಿಯ ಪಾದ ತೊಳೆದ ಕೊರೊನಾದಿಂದ ಗುಣಮುಖರಾದ ಶಾಸಕ

    -ಪ್ಲಾಸ್ಮಾ ದಾನ ನೀಡುವಂತೆ ಶಾಸಕರ ಮನವಿ

    ಭುವನೇಶ್ವರ: ಅಸ್ಸಾಂ ಬಿಜೆಪಿ ಶಾಸಕರೊಬ್ಬರು ಪ್ಲಾಸ್ಮಾ ದಾನಿಗಳ ಪಾದ ತೊಳೆಯುವ ಮೂಲಕ ಕೊರೊನಾ ಗುಣಮುಖರಾದವರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಗುಣಮುಖರಾದವರು ಯಾವುದೇ ಭಯವಿಲ್ಲದೇ ಪ್ಲಾಸ್ಮಾ ನೀಡಿ ಎಂದು ಕೇಳಿಕೊಂಡಿದ್ದಾರೆ.

    ಅಸ್ಸಾಂ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್, ಬಿಜೆಪಿಯ ಶಾಸಕರಾಗಿರುವ ಅಮಿನುಲ್ ಹಕ್ ಲಷ್ಕರ್ ಇತ್ತೀಚೆಗಷ್ಟೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪಾದ ತೊಳೆಯುವ ಮೂಲಕ ಪ್ಲಾಸ್ಮಾ ದಾನಿಗಳಿಗೆ ಗೌರವ ಸಲ್ಲಿಸುತ್ತಿದ್ದಾರೆ. ನಾನು ಯಾವಗಲೂ ಪ್ಲಾಸ್ಮಾ ದಾನಿಗಳಿಗೆ ಋಣಿಯಾಗಿರುತ್ತೇನೆ. ನನಗೆ ಸೋಂಕು ತಗುಲಿದಾಗ ಯಾರೋ ಒಬ್ಬರು ಪ್ಲಾಸ್ಮಾ ನೀಡಲು ಸಿದ್ಧರಾದರು. ಹಾಗಾಗಿ ನನ್ನ ಜೀವನ ಇರೋವರೆಗೂ ಅವರ ಋಣದಲ್ಲಿರುತ್ತೇನೆ ಎಂದು ಅಮಿನುಲ್ ಹಕ್ ಲಷ್ಕರ್ ಹೇಳಿದ್ದಾರೆ.

    ಸಿಲ್ಚರ್ ಮೆಡಿಕಲ್ ಕಾಲೇಜಿನಲ್ಲಿ ಪ್ಲಾಸ್ಮಾ ಥೆರಪಿಯಿಂದ ಮೊದಲ ವ್ಯಕ್ತಿ. ನನಗೆ ಪ್ಲಾಸ್ಮಾ ದಾನ ನೀಡಿದ ನಬೀದುಲ್ ಅವರ ಪಾದ ತೊಳೆದು ಸ್ಮರಣಿಕೆ ನೀಡಿ ಗೌರವಿಸಿದೆ. ಪ್ಲಾಸ್ಮಾ ನೀಡಿದ್ರೆ ಹೆಚ್ಚು ಜನರು ಗುಣಮುಖರಾಗುತ್ತಾರೆ. ಸ್ಲಿಚರ್ ಮೆಡಿಕಲ್ ಕಾಲೇಜಿನಲ್ಲಿ ಇದುವರೆಗೂ 125 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. 18 ರಿಂದ 55 ವರ್ಷದೊಳಗಿನ ವ್ಯಕ್ತಿಗಳು ಪ್ಲಾಸ್ಮಾವನ್ನ ನೀಡಬಹುದಾಗಿದೆ. ಪ್ಲಾಸ್ಮಾ ದಾನ ನೀಡಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅಮಿನುಲ್ ಹಕ್ ಲಷ್ಕರ್ ಹೇಳುತ್ತಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪ್ಲಾಸ್ಮಾ ದಾನಿ ನಬೀದುಲ್, ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಡೆಪ್ಯೂಟಿ ಸ್ಪೀಕರ್ ನಮ್ಮ ಮನೆಗೆ ಬಂದು ನನ್ನ ಪಾದ ತೊಳೆದರು. ಇಂತಹ ಕಾರ್ಯಗಳಿಂದ ಒಳ್ಳೆಯ ಕೆಲಸ ಮಾಡೋರಿಗೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತೆ. ನಾನು ಅಮಿನುಲ್ ಹಕ್ ಲಷ್ಕರ್ ಅವರಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

  • ಮಂಗಳೂರಿನಲ್ಲಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪನೆ: ವೇದವ್ಯಾಸ ಕಾಮತ್

    ಮಂಗಳೂರಿನಲ್ಲಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪನೆ: ವೇದವ್ಯಾಸ ಕಾಮತ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ನಗರದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪನೆಗೆ ಶಾಸಕ ವೇದವ್ಯಾಸ ಕಾಮತ್ ಮುಂದಾಗಿದ್ದಾರೆ.

    ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಯು ಅತ್ಯಂತ ಪ್ರಭಾವಶಾಲಿಯಾಗಿರುವುದು ಹಲವೆಡೆ ಸಾಕಾರಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಫ್ಲಾಸ್ಮಾ ಥೆರಪಿಯನ್ನು ಬಳಸಿ ವೈದ್ಯಕೀಯ ಸಂಶೋಧನೆ ನಡೆಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಪ್ಲಾಸ್ಮಾ ಕೇಂದ್ರ ಸ್ಥಾಪಿಸುವ ಕುರಿತು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸಚಿವರೊಂದಿಗೆ ಚರ್ಚಿಸಿ, ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

    ಕೋವಿಡ್ ಸೋಂಕಿತರು ಗುಣಮುಖರಾದ ಮೇಲೆ ಅವರ ರಕ್ತದ ದ್ರವ ಭಾಗವನ್ನು ಶೇಖರಿಸಿ ಚಿಕಿತ್ಸೆ ನೀಡುವ ವಿಧಾನವನ್ನು ಕರ್ನಾಟಕದಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ. ಸೋಂಕಿತ ವ್ಯಕ್ತಿಯು ಚೇತರಿಸಿಕೊಳ್ಳುವ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ಸಂಗ್ರಹಿಸಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪದ್ಧತಿಯನ್ನು ಮಂಗಳೂರಿನಲ್ಲಿ ಅಳವಡಿಸಬೇಕು. ಒಬ್ಬ ವ್ಯಕ್ತಿಯಿಂದ ಸಂಗ್ರಹಿಸುವ ಪ್ಲಾಸ್ಮಾದಿಂದ ಗರಿಷ್ಠ 5 ಜನರಿಗೆ ಚಿಕಿತ್ಸೆ ನೀಡಬಹುದು ಎನ್ನುವುದನ್ನು ಈಗಾಗಲೇ ಅಧ್ಯಾಯನದ ಮೂಲಕ ಕಂಡು ಹಿಡಿಯಲಾಗಿದೆ. ಹಾಗಾಗಿ ಸೋಂಕಿತರನ್ನು ಗುಣಪಡಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಬಹುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

    ಈ ವಿಚಾರವಾಗಿ ಜಿಲ್ಲಾಧಿಕಾರಿ ಹಾಗೂ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಚಿವರ ಗಮನಕ್ಕೂ ತರಲಾಗಿದೆ ಎಂದು ಶಾಸಕರು ಹೇಳಿದ್ದಾರೆ.

  • ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 13 ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ವಿ

    ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 13 ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ವಿ

    ಹುಬ್ಬಳ್ಳಿ: ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಶತಾಯು ಗತಾಯು ಹೋರಾಟ ನಡೆಸಿದೆ. ಹೆಚ್ಚುತ್ತಿರುವ ಸೋಂಕಿನ ಮಧ್ಯದಲ್ಲಿಯೇ ಕಿಮ್ಸ್ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ.

    ಕಿಮ್ಸ್ ಆಸ್ಪತ್ರೆಯಲ್ಲಿ ನೀಡುವ ಪ್ಲಾಸ್ಮಾ ಥೆರಪಿ ಸೋಂಕಿತರ ಆತಂಕವನ್ನು ಒಂದಿಷ್ಟು ಕಡಿಮೆಗೊಳಿಸಿದೆ. ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಕಿಮ್ಸ್ ರಾಜ್ಯದಲ್ಲಿ ಹೆಚ್ಚು ಮಂದಿಗೆ ಯಶಸ್ವಿ ಪ್ಲಾಸ್ಮಾ ಥೆರಪಿ ನೀಡಿ ಕೀರ್ತಿಗೆ ಪಾತ್ರವಾಗಿದೆ.

    ಬೆಂಗಳೂರಿನ ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ 8 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಿದ್ದು, ಐವರು ಮಾತ್ರ ಗುಣಮುಖರಾಗಿದ್ದರು. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದ 13 ಜನರು ಕೂಡ ಗುಣಮುಖರಾಗಿರುವುದು ವಿಶೇಷವಾಗಿದೆ.

    ಕರ್ನಾಟಕದ 14 ಮೆಡಿಕಲ್ ಕಾಲೇಜು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಮುಂದೆ ಬಂದಿದ್ದವು. ಈ ಮೆಡಿಕಲ್ ಕಾಲೇಜುಗಳ ಪೈಕಿ ಐಎಂಸಿಆರ್ ನಿಂದ ಮೊದಲ ಅನುಮೋದನೆ ಕಿಮ್ಸ್ ಗೆ ದೊರೆತಿತ್ತು.

  • ಬೆಂಗ್ಳೂರಿನಲ್ಲಿ 800 ಮಂದಿಗೆ ಕೊರೊನಾ – ಇಂದು 15 ಮಂದಿ ಬಲಿ

    ಬೆಂಗ್ಳೂರಿನಲ್ಲಿ 800 ಮಂದಿಗೆ ಕೊರೊನಾ – ಇಂದು 15 ಮಂದಿ ಬಲಿ

    – ನಾವು 4 ‘ಸಿ’ಗಳನ್ನು ಅಳವಡಿಸಿಕೊಳ್ಳಬೇಕು

    ಬೆಂಗಳೂರು: ರಾಜ್ಯದಲ್ಲಿ ಇಂದು 1,498 ಮಂದಿಗೆ ಕೊರೊನಾ ಪಾಟಿಸಿವ್ ದೃಢವಾಗಿದ್ದು, 15 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

    ಆನ್‍ಲೈನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಇಂದು ಬೆಂಗಳೂರಿನಲ್ಲಿ 800 ಮಂದಿಗೆ ಕೊರೊನಾ ದೃಢವಾಗಿದ್ದು, ರಾಜ್ಯದಲ್ಲಿ 1,498 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು 15 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸೋಮವಾರ 30 ಮಂದಿ ಮೃತಪಟ್ಟಿದ್ದರು ಎಂದು ತಿಳಿಸಿದರು.

    ಸದ್ಯಕ್ಕೆ ರಾಜ್ಯದಲ್ಲಿ 14,385 ಸಕ್ರಿಯ ಪ್ರಕರಣಗಳಿದ್ದು, ಶೇ.1 ರಷ್ಟು ಮಾತ್ರ ಐಸಿಯುನಲ್ಲಿದ್ದಾರೆ. ಅಂದರೆ 143 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಆಕ್ಸಿಜನ್, ಐಸಿಯು ಬೇಕಾಗಿದೆ. ಕೆಲವರಿಗೆ ವೆಂಟಿಲೇಟರ್ ಬೇಕಾಗಿದೆ. ಇದುವರೆಗೂ 10,527 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. 25,317 ಕೊರೊನಾ ಸೋಂಕಿತರ ಪೈಕಿ 14,385 ಸಕ್ರಿಯ ಪ್ರಕರಣಗಳಿಗೆ. ರಾಷ್ಟ್ರೀಯ ಮರಣ ಪ್ರಮಾಣ ಶೇ.2.79 ರಷ್ಟಿದ್ದು, ಬೆಂಗಳೂರಿನಲ್ಲಿ ಶೇ.1.46 ರಷ್ಟಿದೆ. ನಮ್ಮ ನಿರೀಕ್ಷೆ ಸಾವಿನ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆಗೆ ತರುವುದು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಸೆಂಟ್ರಲ್ ತಂಡದಲ್ಲಿ ಆಗಮಿಸಿದ ಅಧಿಕಾರಿಗಳು ಇವತ್ತು ಭೇಟಿ ಮಾಡಿ ಚರ್ಚಿಸಿ, ಹಲವು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಜನರು ಭಯ ಪಡಬಾರದು. ಸೋಂಕು ಹೆಚ್ಚು ಪತ್ತೆ ಮಾಡಿದಷ್ಟೂ ಕೊರೊನಾ ತಡೆಯಬಹುದು. ಟೆಸ್ಟ್ ಮಾಡದಿದ್ದರೆ ಸೋಂಕು ಸೈಲೆಂಟಾಗಿ ಹಬ್ಬುತ್ತೆ. ಇದಕ್ಕಾಗಿ ಹೆಚ್ಚು ಟೆಸ್ಟ್ ಮಾಡಬೇಕು. ಮನೆಯಲ್ಲಿರೋ ಹಿರಿಯರಿಗೆ ಐಎಲ್‍ಐ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದರು.

    ನಾವು ನಾಲ್ಕು ‘ಸಿ’ ಗಳನ್ನು ಅಳವಡಿಸಿಕೊಳ್ಳಬೇಕು
    1. ಕಾನ್ಫಿಡೆನ್ಸ್ – ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು.
    2. ಕೊಲ್ಯಾಬರೇಷನ್ – ನಮ್ಮಲ್ಲಿ ಸಹಭಾಗಿತ್ವ ಇರಬೇಕು. ಸರ್ಕಾರ ಮತ್ತು ನಾಗರೀಕರ ಸಹಭಾಗಿತ್ವದಲ್ಲಿ ಕೊರೊನಾ ನಿಯಂತ್ರಣ ಮಾಡಬಹುದು
    3. ಕಮ್ಯುನಿಕೇಷನ್- ಜನರಿಗೆ ಸರಿಯಾದ ಮಾಹಿತಿ ಕೊಡಬೇಕು. ಜೊತೆಗೆ ಜನರು ಕೊರೊನಾ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು
    4. ಕಂಪ್ಯಾಷನ್ – ಅನುಕಂಪ, ದಯೆ ಎಲ್ಲರ ಸಹಜ ಗುಣ ಆಗಬೇಕು

    ಕೊರೊನಾಗೆ ವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಲು ಸಮಿತಿ ರಚಿಸುತ್ತೇವೆ. ಈ ಸಮಿತಿಯು ವಿಶ್ವದ ಎಲ್ಲೆಲ್ಲಿ ವ್ಯಾಕ್ಸಿನ್ ಪತ್ತೆ ಮಾಡುತ್ತಾರೆ. ಅದರ ಪರಿಣಾಮ ಬಗ್ಗೆ ಮಾಹಿತಿ ಕೊಡುತ್ತೆ. ನಮ್ಮ ರಾಜ್ಯದಲ್ಲೂ ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ನಿಂದ ಅನುಮತಿ ಕೇಳುತ್ತೇವೆ. ಈ ಸಂಬಂಧ ಸದ್ಯವೇ ಐಸಿಎಂಆರ್‌ಗೆ ಪತ್ರ ಬರೆಯುತ್ತೇವೆ. ಅನುಮತಿ ಸಿಕ್ಕಿದರೆ ನಂಜನಗೂಡಿನ ಜ್ಯುಬಿಲಿಯೆಂಟ್ ಸಂಸ್ಥೆಯಲ್ಲಿ ಕೊರೊನಾ ವ್ಯಾಕ್ಸಿನ್ ತಯಾರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    5077 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಿವೆ. ಇದರಲ್ಲಿ 3,777 ಹಾಸಿಗೆಗಳು ಭರ್ತಿ ಆಗಿವೆ. ಇನ್ನೂ 1,310 ಹಾಸಿಗೆಗಳು ಖಾಲಿ ಇವೆ. ಬೆಂಗಳೂರಿನಲ್ಲಿ ಹೆಚ್ಚುವರಿ 7,000 ಹಾಸಿಗೆಗಳನ್ನು ಸದ್ಯದಲ್ಲೇ ವ್ಯವಸ್ಥೆ ಮಾಡಲಾಗುತ್ತೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.

    ನಾಳೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ನಾಳೆ ಸಂಜೆ ಸುಮಾರು 4.30ಕ್ಕೆ ಸಭೆ ಇದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ, ಐಸಿಯು ಬೆಡ್‌ಗಳ ಬಗ್ಗೆ ಮಾಹಿತಿ ತರುವುದಕ್ಕೆ ಸೂಚಿಸಲಾಗಿದೆ. ಸಚಿವ ಅಶೋಕ್ ಅವರು ಮಳೆ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಹಾಗಾಗಿ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಲು ನನಗೆ ಸಿಎಂ ಸೂಚಿಸಿದ್ದಾರೆ. ಎಸ್.ಆರ್.ವಿಶ್ವನಾಥ್ ಸಹ ಸಭೆಯಲ್ಲಿ ಇರುತ್ತಾರೆ ಎಂದು ತಿಳಿಸಿದರು.

    ಪ್ಲಾಸ್ಮಾ ಚಿಕಿತ್ಸೆ ಪಡೆದು ಗುಣಮುಖರಾದವರ ಜೊತೆಗೂ ಫೋನಿನಲ್ಲಿ ಮಾತಾಡಿಸಿದ್ದೇನೆ. ಅವರು ಸಹ ಪ್ಲಾಸ್ಮಾ ಚಿಕಿತ್ಸೆಯಿಂದ ಬದುಕಿರೋದಾಗಿ ಕೃತಜ್ಞತೆ ತಿಳಿಸಿದರು. ವಿಕ್ಟೋರಿಯಾದಲ್ಲಿ ಕೊರೊನಾ ಸೋಂಕಿತರ ಜೊತೆಗೂ ಮಾತನಾಡಿದ್ದೇನೆ. ಎಲ್ಲರೂ ಸರ್ಕಾರದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಮತ್ತು ಸಮಾಧಾನ ವ್ಯಕ್ತಪಡಿಸಿದರು ಎಂದು ಸುಧಾಕರ್ ಹೇಳಿದರು.

  • ಕೊರೊನಾನಿಂದ ದೆಹಲಿ ಆರೋಗ್ಯ ಸಚಿವರ ಪರಿಸ್ಥಿತಿ ಗಂಭೀರ- ಪ್ಲಾಸ್ಮಾ ಥೆರಪಿಗೆ ನಿರ್ಧಾರ

    ಕೊರೊನಾನಿಂದ ದೆಹಲಿ ಆರೋಗ್ಯ ಸಚಿವರ ಪರಿಸ್ಥಿತಿ ಗಂಭೀರ- ಪ್ಲಾಸ್ಮಾ ಥೆರಪಿಗೆ ನಿರ್ಧಾರ

    ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ಪ್ಲಾಸ್ಮ ಥೆರಪಿ ಮಾಡಲು ನಿರ್ಧರಿಸಲಾಗಿದೆ.

    ದೆಹಲಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯೇಂದರ್ ಜೈನ್ ಅವರ ಶ್ವಾಸಕೋಶದಲ್ಲಿ ಸೋಂಕಿನ ಪ್ರಮಾಣ ಏರಿಕೆ ಕಂಡಿದೆ. ಹೀಗಾಗಿ ಇಂದು ತೀವ್ರ ಉಸಿರಾಟದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು.

    ಕುಟುಂಬಸ್ಥರ ಒಪ್ಪಿಗೆ ಬಳಿಕ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲು ನಿರ್ಧರಿಸಲಾಗಿದೆ. ಸದ್ಯ ಸತ್ಯೇಂದರ್ ಜೈನ್ ಅವರನ್ನು ಸಾಕೇತ್‍ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಾಳೆ ಅಥವಾ ಮಾಡಿದ್ದು ಪ್ಲಾಸ್ಮಾ ಥೆರಪಿ ನಡೆಸುವ ಸಾಧ್ಯತೆ ಇದೆ.

    ಸತ್ಯೇಂದರ್ ಜೈನ್ ಆರಂಭದಲ್ಲಿ ತೀವ್ರ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಮೊದಲು ಕೊರೊನಾ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿದಾದ ಪಾಸಿಟಿವ್ ವರದಿ ಬಂದಿತ್ತು. ಅವರು ಬಹುಬೇಗ ಗುಣಮುಖರಾಗಲಿ ಎಂದು ಗೃಹ ಸಚಿವ ಅಮಿತ್ ಶಾ, ದೆಹಲಿ ಲೆಫ್ಟಿನೆಂಟ್ ಅನೀಲ್ ಬೈಜಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾರೈಸಿದ್ದಾರೆ.

  • ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ

    ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ

    ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಈಗ ಮತ್ತೊಂದು ಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಕೊವೀಡ್ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲು ಪಾಸ್ಮಾ ಥೆರಪಿ ಚಿಕಿತ್ಸೆ ಪ್ರಯೋಗ ಮಾಡಲಾಗಿತ್ತು. ಆದರೆ ಹಲವೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ವಿಫಲವಾದ ನಂತರ ಇದೀಗ ರಾಜ್ಯದಲ್ಲಿ ಮೊದಲ ಭಾರಿಗೆ ಹುಬ್ಬಳ್ಳಿಯಲ್ಲಿ ಪಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾಗಿದೆ.

    ಹುಬ್ಬಳ್ಳಿಯ ಕೋವಿಡ್ ನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾ ಪಡೆದು ಮುಂಬೈನಿಂದ ರಾಜ್ಯಕ್ಕೆ ವಾಪಸ್ ಆಗಿದ್ದ 65 ವರ್ಷದ ಸೋಂಕಿತ ಪಿ-2710 ಪ್ಲಾಸ್ಮಾ ಥೆರಪಿ ಮಾಡಿ ವೈದ್ಯರ ತಂಡ ಯಶಸ್ಸು ಸಾಧಿಸಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.

    ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ನೀಡಲು ಐಸಿಎಂಆರ್ ಅನುಮತಿ ನೀಡಿದ್ದು, ರಾಜ್ಯದಲ್ಲಿ ಮೊದಲಿಗೆ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೋವಿಡ್ ಸೋಂಕಿನಿಂದ ಗುಣಮುಖರಾದ ರೋಗಿಗಳು ಪ್ಲಾಸ್ಮಾ ನೀಡಲು ಮೊದಲಿಗೆ ಹಿಂದೇಟು ಹಾಕುತ್ತಿದ್ದರು. ಆದರೆ ಕಿಮ್ಸ್ ಆಡಳಿತ ಮಂಡಳಿ ಗುಣಮುಖರಾದವರನ್ನು ಮನವೊಲಿಸಿ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡಿರುವುದು ವಿಶೇಷವಾಗಿದೆ.

    ಹಲವಾರು ಸವಾಲುಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

    ಈ ಮೊದಲು ಬೆಂಗಳೂರಿನಲ್ಲಿ ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟಿದ್ದರು. ಸಾಧಾರಣವಾಗಿ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತಿದೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ಪ್ಲಾಸ್ಮಾ ಥೆರಪಿಗೆ ರಕ್ತ ನೀಡಲು ಕೊರೊನಾ ಗುಣಮುಖರು ಹಿಂದೇಟು

    ಪ್ಲಾಸ್ಮಾ ಥೆರಪಿಗೆ ರಕ್ತ ನೀಡಲು ಕೊರೊನಾ ಗುಣಮುಖರು ಹಿಂದೇಟು

    ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಐಸಿಎಂಆರ್ ನಿಂದ ಅನುಮತಿ ನೀಡಲಾಗಿದ್ದು, ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ರಕ್ತವೇ ಸಿಗುತ್ತಿಲ್ಲ.

    ಕೋವಿಡ್-19 ಸೋಂಕಿನಿಂದ ಗುಣಮುಖರಾದ ರೋಗಿಗಳು ರಕ್ತ ನೀಡಲು ಒಪ್ಪುತ್ತಿಲ್ಲ. ಮೊದಲು ರಕ್ತ ನೀಡಲು ಒಪ್ಪಿಕೊಂಡಿದ್ದ ಕೊರೊನಾ ಸೋಂಕಿನಿಂದ ಗುಣಮುಖರಾದವರು ಈಗ ರಕ್ತ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

    ಹೊರ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ರಕ್ತಕ್ಕಾಗಿ ಕಿಮ್ಸ್ ವೈದ್ಯರು ಬೇಡಿಕೆ ಸಲ್ಲಿಸಿದ್ದಾರೆ. ಒಂದು ಕಡೆ ಚಿಕಿತ್ಸೆಗೆ ರಕ್ತ ಸಿಗ್ತಿಲ್ಲ. ಮತ್ತೊಂದೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಪಡುವ ರೋಗಿಯೂ ಸಹ ಆಸ್ಪತ್ರೆಯಲ್ಲಿಲ್ಲ. ಬಾಗಲಕೋಟೆ ಮೂಲದ ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದರು, ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಅಗತ್ಯವಿಲ್ಲ.

    ಸದ್ಯಕ್ಕೆ ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಪಡುವ ಸೋಂಕಿತರು ಯಾರು ಇಲ್ಲ. ಹೀಗಾಗಿ ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

  • ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಐಸಿಎಂಆರ್ ಅನುಮತಿ

    ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಐಸಿಎಂಆರ್ ಅನುಮತಿ

    ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಸಲು ಐಸಿಎಂಆರ್ ಅನುಮತಿ ನೀಡಿದೆ.

    ಕೊರೊನಾ ವೈರಸ್ ನಿಯಂತ್ರಣಕ್ಕೆ ಐಸಿಎಂಆರ್ ಅನುಮತಿ ನೀಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪ್ರಾರಂಭಗೊಳ್ಳಲಿದೆ. ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ರಾಜ್ಯದಾದ್ಯಂತ 12 ಆಸ್ಪತ್ರೆಗೆ ಐಸಿಎಂಆರ್ ಅನುಮತಿ ನೀಡಿದೆ. ಕೆಲವೇ ದಿನಗಳಲ್ಲಿ ಪ್ಲಾಸ್ಟಾ ಥೆರಪಿ ಚಿಕಿತ್ಸೆ ಆರಂಭವಾಗಲಿದ್ದು, ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುಣಪಡಿಸಬಹುದಾಗಿದೆ.

    ಈಗಾಗಲೇ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾಗಿದ್ದು, ಸೋಂಕಿತರು ಬೇಗನೇ ಗುಣಮುಖರಾಗಿದ್ದಾರೆ. ಹೀಗಾಗಿ ದೇಶಾದ್ಯಂತ ಪ್ಲಾಸ್ಮಾ ಥೇರಪಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದೀಗ ಹುಬ್ಬಳ್ಳಿಯಲ್ಲಿಯೂ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭವಾಗಲಿದೆ.

  • ಪ್ಲಾಸ್ಮಾ ನೀಡಿ ಜೀವ ಉಳಿಸಲು ಮುಂದಾದ ಗಾಯಕಿ

    ಪ್ಲಾಸ್ಮಾ ನೀಡಿ ಜೀವ ಉಳಿಸಲು ಮುಂದಾದ ಗಾಯಕಿ

    ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊರೊನಾ ಸೋಂಕು ತಗುಲಿದ ನಂತರ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳದೆ, ಹಲವು ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದೀಗ ಜನರೇ ಕೊಂಡಾಡುವ ಕೆಲಸ ಮಾಡುತ್ತಿದ್ದು, ಜೀವ ಉಳಿಸುವ ನಿರ್ಧಾರ ಕೈಗೊಂಡಿದ್ದಾರೆ.

    ಹೌದು, ರಾಜಕಾರಣಿಗಳೂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕನಿಕಾ ಕಪೂರ್ ವಿಪರೀತ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ನಂತರ ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ನೆಟ್ಟಿಗರು ಇದನ್ನು ಒಪ್ಪಿರಲಿಲ್ಲ. ಇದೀಗ ಎಲ್ಲರೂ ತಿರುಗಿ ನೋಡುವಂತೆ ಅವರು ಮಾಡಿದ್ದು, ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಕೊರೊನಾ ಸೋಂಕಿತ ವ್ಯಕ್ತಿ ಬಹುಬೇಗ ಗುಣಮುಖರಾಗಲು ಅತ್ಯುತ್ತಮ ಮಾರ್ಗ ಪ್ಲಾಸ್ಮಾ ಥೆರಪಿ ಮಾಡುವುದು. ಇದರಿಂದಾಗಿ ಕೊರೊನಾ ಸೋಂಕಿತ ವ್ಯಕ್ತಿ ಬೇಗನೇ ಗುಣಮುಖರಾಗುತ್ತಾರೆ ಎಂಬುದು ಈಗಾಗಲೇ ದೆಹಲಿಯಲ್ಲಿ ನಡೆದ ಪರೀಕ್ಷೆಯಲ್ಲಿ ಬಹುತೇಕ ಸಾಬೀತಾಗಿದೆ. ಹೀಗಾಗಿ ಇತರ ರಾಜ್ಯಗಳೂ ಈ ನಿಯಮ ಪಾಲಿಸುತ್ತಿದ್ದು, ಪ್ಲಾಸ್ಮಾ ಥೆರಪಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಕೊರೊನಾ ಸೋಂಕಿತ ರೋಗಿಯನ್ನು ಬೇಗ ಗುಣಪಡಿಸಲು ಪ್ಲಾಸ್ಮಾ ಥೆರಪಿ ಅಗತ್ಯ ಎಂದಿದ್ದಾರೆ. ಅಲ್ಲದೆ ಕೊರೊನಾದಿಂದ ಗುಣಮುಖರಾದ ಎಲ್ಲರೂ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರ ಸೋಂಕಿತರು ಗುಣಮುಖರಾಗಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

    ಈ ಎಲ್ಲ ಬೆಳವಣಿಗೆ ನಡುವೆ ಗಾಯಕಿ ಕನಿಕಾ ಕಪೂರ್ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದು, ಅಗತ್ಯವಿರುವವರಿಗೆ ಪ್ಲಾಸ್ಮಾ ನೀಡಲು ಸಿದ್ಧ. ಕೊರೊನಾದಿಂದ ಗುಣಮುಖರಾಗಿರುವ ಮೂವರು ಈಗಾಗಲೇ ಪ್ಲಾಸ್ಮಾ ದಾನ ನೀಡಿದ್ದು, ಹೀಗಾಗಿ ನಾನೂ ಪ್ಲಾಸ್ಮಾ ನೀಡಲು ನಿರ್ಧಾರ ಮಾಡಿದ್ದೇನೆ. ಈಗಾಗಲೇ ರಕ್ತ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಎಲ್ಲವೂ ಸರಿಯಾಗಿದ್ದರೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ.

    ಕನಿನಾ ಕಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮಾರ್ಚ್ 20ರಂದು ದೃಢಪಟ್ಟಿತ್ತು. ಇದಾದ ಬಳಿಕ ಕೊರೊನಾ ವೈರಸ್ ಕುರಿತು ಕನಿಕಾ ನಿರ್ಲಕ್ಷ್ಯ ವಹಿಸಿದ್ದಾರೆ. ಇಂಗ್ಲೆಂಡ್‍ನಿಂದ ಮರಳಿದ ಮೇಲೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಗಾಯಕಿ ಸ್ಪಷ್ಟನೆ ನೀಡಿದ್ದರು.

  • ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    – ವೆಂಟಿಲೇಟರ್‌ನಲ್ಲಿದ್ದ ರೋಗಿಗೆ ಪ್ಲಾಸ್ಮಾ ಥೆರಪಿ
    – ಮೂರು ವಾರದ ಹಿಂದೆ ಗುಣಮುಖರಾದ ಮಹಿಳೆಯಿಂದ ಪ್ಲಾಸ್ಮಾ ದಾನ

    ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಒಂದು ಶುಭ ಸುದ್ದಿಯೊಂದು ಲಭ್ಯವಾಗಿದ್ದು, ಪ್ಲಾಸ್ಮಾ ಥೆರಪಿ ಸಹಾಯದಿಂದ ದೆಹಲಿಯ ಕೊರೊನಾ ಸೋಂಕಿತ ರೋಗಿಯೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಭಾರತದಲ್ಲಿಯೇ ಮೊದಲ ಪ್ರಕರಣವಾಗಿದೆ.

    ದೆಹಲಿಯ 49 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ಏಪ್ರಿಲ್ 4ರಂದು ದೃಢಪಟ್ಟಿತ್ತು. ರೋಗಿ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರಿಗೆ ಉಸಿರಾಡಲು ಸಹಾಯವಾಗಲಿ ಎಂದು ವೆಂಟಿಲೇಟರ್ ಅಳವಡಿಸಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಏಪ್ರಿಲ್ 8ರಂದು ರೋಗಿಯ ಆರೋಗ್ಯ ತೀರ ಹದಗೆಟ್ಟಾಗ ಕುಟುಂಬಸ್ಥರು ರೋಗಿಗೆ ಪ್ಲಾಸ್ಮಾ ಥೆರಪಿ ನೀಡಿ ಜೀವ ಉಳಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಕುಟುಂಬಸ್ಥರೇ ಪ್ಲಾಸ್ಮಾ ಡೋನರ್ ಅನ್ನು ಕೂಡ ಹುಡಿಕಿದ್ದರು. ಮೂರು ವಾರದ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾದ ಮಹಿಳೆಯೊಬ್ಬರನ್ನು ಪತ್ತೆ ಮಾಡಿ, ಪ್ಲಾಸ್ಮಾ ಡೊನೇಟ್ ಮಾಡುವಂತೆ ಮನವಿ ಮಾಡಿಕೊಂಡರು. ಅವರ ಮನವಿಗೆ ದಾನಿ ಕೂಡ ಒಪ್ಪಿ ರೋಗಿಗೆ ಪ್ಲಾಸ್ಮಾ ದಾನ ಮಾಡಿದ್ದರು. ಏಪ್ರಿಲ್ 14ರ ರಾತ್ರಿ ಎಲ್ಲಾ ಸರ್ಕಾರಿ ಹಾಗೂ ವೈದ್ಯಕಿಯ ನಿಯಮದ ಪ್ರಕಾರ ರೋಗಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು.

    ಥೆರಪಿ ನೀಡಿದ ನಾಲ್ಕೇ ದಿನಕ್ಕೆ ಎಂದರೆ ಏಪ್ರಿಲ್ 18ರಂದು ರೋಗಿ ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಡಲು ಆರಂಭಿಸಿ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾ ಬಂದಿದ್ದರು. ಆ ಬಳಿಕ ಅವರನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಯ್ತು. ನಂತರ ಸೋಮವಾರ 24 ಗಂಟೆಗಳಲ್ಲಿ ಎರಡು ಭಾರಿ ರೋಗಿಯ ಕೋವಿಡ್-19 ಪರೀಕ್ಷೆ ಮಾಡಲಾಯ್ತು. ಎರಡು ಬಾರಿಯೂ ವರದಿ ನೆಗೆಟಿವ್ ಮಂದಿತ್ತು. ಕೆಲ ದಿನಗಳು ಚಿಕಿತ್ಸೆ ನೀಡಿ, ನಿಗಾ ವಹಿಸಿದ ಬಳಿಕ ಇಂದು ಕೂಡ ರೋಗಿಯ ವರದಿ ಕೊರೊನಾ ನೆಗೆಟಿವ್ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

    ಆದರೆ ಸರ್ಕಾರಿ ನಿಯಮದ ಪ್ರಕಾರ ಡಿಸ್ಚಾರ್ಜ್ ಆದ ವ್ಯಕ್ತಿ ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಹೀಗಾಗಿ ಗುಣಮುಖರಾದ ವ್ಯಕ್ತಿಗೆ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ. ಡಾ. ಓಂಮೆಂದರ್ ಸಿಂಗ್ ನೇತೃತ್ವದ ವೈದ್ಯರ ತಂಡ ರೋಗಿಗೆ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.