Tag: plants

  • ಸಸಿ ನೆಟ್ಟು ಹುಬ್ಬಳ್ಳಿಯಲ್ಲಿ ರಕ್ಷಾ ಬಂಧನ ಆಚರಣೆ

    ಸಸಿ ನೆಟ್ಟು ಹುಬ್ಬಳ್ಳಿಯಲ್ಲಿ ರಕ್ಷಾ ಬಂಧನ ಆಚರಣೆ

    ಹುಬ್ಬಳ್ಳಿ: ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನವಾಗಿದೆ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ತನ್ನ ಸಹೋದರರಿಗೆ ರಾಖಿ ಕಟ್ಟಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿ ರಕ್ಷಾ ಬಂಧನದಂದು ಗಿಡ ನೆಡುವ ಮೂಲಕವಾಗಿ ವಿನೂತನವಾಗಿ ಹಬ್ಬ ಆಚರಣೆ ಮಾಡಲಾಗಿದೆ.

    ಹುಬ್ಬಳ್ಳಿಯ ಅಮರಗೋಳದ ಕುಬೇರ ಗೌಡ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ದಿನದಂದು ನೂರಾರು ಗಿಡಗಳನ್ನ ನೆಟ್ಟು ರಕ್ಷಾ ಬಂಧನ ಜೊತೆಗೆ ವೃಕ್ಷ ಬಂಧನ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪ: ರಾಧಿಕಾ ಪಂಡಿತ್

    ಅಮರಗೋಳದ ನೂರಕ್ಕೂ ಅಧಿಕ ಮನೆಗಳಿಗೆ ಟ್ರಸ್ಟ್ ವತಿಯಿಂದ ಸಸಿಗಳನ್ನ ವಿತರಿಸಲಾಗಿದೆ. ಸಹೋದರರಿಗೆ ರಾಖಿ ಕಟ್ಟಿದ ಟ್ರಸ್ಟ್‌ನ ಅಧ್ಯಕ್ಷೆ ರೇಖಾ ಹೊಸೂರು ಹಾಗೂ ಸದಸ್ಯರು ವಿನೂತನವಾಗಿ ಹಬ್ಬ ಆಚರಣೆ ಮಾಡಿದ್ದು, ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ರೇಖಾ ಹೊಸೂರ್, ಮಾಲಾ ಗಡದ, ರವಿ ದಾಸನೂರು, ಷಣ್ಮುಖ ಬೆಟಿಗೇರಿ, ಫೈರೋಜ್ ಮಾಂತೇಶ್, ಮಂಜು, ಉಮೇಶ್ ದೊಡ್ಮನಿ, ಗಿರೀಶ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು

  • ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

    ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

    ರಾಯಚೂರು: ದಾಳಿಂಬೆ ಬೆಳೆಯಲ್ಲಿ ಒಂದು ಕೋಟಿ ರೂ. ಲಾಭ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದ ರೈತರೊಬ್ಬರು, ಇದೀಗ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಮೇತ ಸ್ಥಳಾಂತರಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಜಿಲ್ಲೆಯ ಲಿಂಗಸುಗೂರಿನ ರೈತ ಬಸವರಾಜಗೌಡ ಗಣೇಕಲ್ ಅವರು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ದಾಳಿಂಬೆ ಮತ್ತು ಪಪ್ಪಾಯಿ ಬೆಳೆದಿದ್ದಾರೆ. ಪಪ್ಪಾಯಿಂದ ನಷ್ಟ ಉಂಟಾದರೂ, ದಾಳಿಂಬೆಯಿಂದ ಕೋಟಿ ರೂ. ಲಾಭ ಗಳಿಸಿ, ಇತರರಿಗೆ ಮಾದರಿಯಾಗಿದ್ದರು. ಇದೀಗ ಮತ್ತೊಂದು ಸಾಹಸ ಮಾಡುವ ಮೂಲಕ ರೈತರಿಗೆ ಮಾದರಿಯಾಗಿದ್ದು, ಜಮೀನಿನಲ್ಲಿರುವ ಹೆಚ್ಚುವರಿ ದಾಳಿಂಬೆ ಗಿಡಗಳನ್ನು ಬೇರು ಸಹಿತ ಮತ್ತೊಂದು ಜಮೀನಿಗೆ ಸ್ಥಳಾಂತರಿಸಿ, ಯಶಸ್ವಿಯಾಗಿದ್ದಾರೆ.

    ಈ ಮೂಲಕ ಕೃಷಿ ತಂತ್ರಜ್ಞರು ಮಾಡುವ ಕಾರ್ಯವನ್ನು ರೈತ ಬಸವರಾಜಗೌಡ ಅವರು ತಮ್ಮದೇ ಯೋಜನೆಯೊಂದಿಗೆ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಗಿಡಗಳನ್ನು ಸ್ಥಳಾಂತರ ಮಾಡಿದ್ದಾರೆ. ಜೆಸಿಬಿ, ಕೂಲಿಕಾರರ ಸಹಾಯದಿಂದ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಹಿತ ಸ್ಥಳಾಂತರಿಸಲಾಗಿದೆ.

    ರೈತ ಬಸವರಾಜಗೌಡ ಅವರು ಈ ಹಿಂದೆ ಹೆಚ್ಚುವರಿಯಾಗಿದ್ದ 10ಕ್ಕೂ ಹೆಚ್ಚು ಗಿಡಗಳನ್ನು ಸ್ಥಳಾಂತರಿಸಿ, ಉತ್ತಮ ಫಸಲು ಪಡೆದಿದ್ದರು. ಅದೇ ಮಾದರಿಯಲ್ಲಿ ಇದೀಗ 3 ಸಾವಿರ ಗಿಡಗಳನ್ನು ಸ್ಥಳಾಂತರಿಸುತ್ತಿದ್ದಾರೆ. ದಾಳಿಂಬೆಯಿಂದ ನಾಲ್ಕು ವರ್ಷ ಲಾಭ ಗಳಿಸಿ, ಇಳುವರಿ ಕಡಿಮೆಯಾದ ಕಾರಣ ಗಿಡಗಳ ನಡುವೆ ಅಂತರ ಕಾಪಾಡುವುದಕ್ಕಾಗಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಗಿಡಗಳನ್ನು ಬೇರು ಸಹಿತ ಕಿತ್ತು ಬೇರೆ ಜಾಗದಲ್ಲಿ ನೆಟ್ಟು ಉತ್ತಮ ಫಸಲು ಪಡೆಯುತ್ತಿದ್ದಾರೆ. ಇದಕ್ಕಾಗಿ ಅಗತ್ಯ ಮಾಹಿತಿ ಪಡೆದು ಗೊಬ್ಬರ ಸಿಂಪರಣೆ ಸೇರಿದಂತೆ ವಿವಿಧ ತಾಂತ್ರಿಕ ನಿಯಮಗಳನ್ನು ಅನುಸರಿಸಿ ಸ್ಥಳಾಂತರ ಕಾರ್ಯ ನಡೆಸಿದ್ದಾರೆ.

  • 17 ವರ್ಷಗಳಿಂದ 1 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟ ಪರಿಸರ ಪ್ರೇಮಿ ಹಾಸನದ ಗಿರೀಶ್

    17 ವರ್ಷಗಳಿಂದ 1 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟ ಪರಿಸರ ಪ್ರೇಮಿ ಹಾಸನದ ಗಿರೀಶ್

    ಹಾಸನ: ಈಗಿನ ಕಾಲದಲ್ಲಿ ನಾನಾಯ್ತು ನನ್ನ ಮನೆ, ಕುಟುಂಬವಾಯ್ತು ಎನ್ನುವವರೆ ಜಾಸ್ತಿ. ಲೋಕದ ಕುರಿತು ಅಲೋಚಿಸುವವರು ಕಡಿಮೆ. ಆದರೆ ಹಾಸನದ ಆರ್.ಜಿ ಗಿರೀಶ್ ಅವರು ಕಳೆದ 17 ವರ್ಷಗಳಿಂದ ಪರಿಸರ ಸಂರಕ್ಷಣೆ, ಸಮಾಜ ಸೇವೆಗೆ ಶ್ರಮಿಸುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

    ಹಾಸನ ತಾಲೂಕಿನ ರಾಮದೇವರಪುರದ ಆರ್.ಜಿ ಗಿರೀಶ್(33) ಅವರು ಪರಿಸರ ಪ್ರೇಮಿ. ಕಳೆದ 17 ವರ್ಷಗಳಿಂದ ಜಿಲ್ಲೆಯಾದ್ಯಂತ ಸಂಚರಿಸಿ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಜೈವಿಕ ಇಂಧನ ಉತ್ಪಾದಿಸುವ ಸಸ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

    ಅಷ್ಟೇ ಅಲ್ಲದೆ ಕಳೆದ 7-8 ವರ್ಷಗಳಿಂದ 70ಕ್ಕೂ ಹೆಚ್ಚು ಪುರಾತನ ಕಲ್ಯಾಣಿಗಳ ಹೂಳು ತೆಗೆದು ಅವುಗಳಿಗೆ ಮರುಜೀವ ನೀಡಿದ್ದಾರೆ. ಆ ಕಲ್ಯಾಣಿಗಳೀಗ ಜನ, ಜಾನುವಾರುಗಳಿಗೆ ನೀರಿನ ಮೂಲವಾಗಿವೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೋಯ್ಸಳ, ಚಾಲುಕ್ಯರ ಕಾಲದ ಐತಿಹಾಸಿಕ ಸ್ಥಳಗಳಿಗೆ ಹೊಸ ರೂಪ ಕೊಟ್ಟಿದ್ದಾರೆ. ಮಹಾ ಮಸ್ತಕಾಭಿಷೇಕ, ಹಾಸನಾಂಬೆ ಉತ್ಸವ ಸೇರಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದರೂ ಗಿರೀಶ್ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ.

    ಕಾಲೇಜು ದಿನಗಳಿಂದಲೇ ಪರಿಸರ ಕಾಳಜಿ ಬೆಳಸಿಕೊಂಡ ಗಿರೀಶ್ ಒಬ್ಬರಿಂದಲೇ ಈ ಕಾರ್ಯ ಆಗುವುದಿಲ್ಲ ಎನ್ನುವುದು ಗೊತ್ತಾಗಿ ನಾಲ್ಕು ವರ್ಷಗಳಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಮ್ಮ ಪರಿಸರ ಪ್ರೇಮ, ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ.

  • ವಿಷ್ಣುದಾದ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನಿಗಳು

    ವಿಷ್ಣುದಾದ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನಿಗಳು

    ಮೈಸೂರು: ಇಂದು ದಿವಂಗತ ಡಾ. ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು 69 ಸಸಿಗಳನ್ನು ನೆಟ್ಟು ನಮಿಸಿದ್ದಾರೆ.

    ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆ ಮೈಸೂರಿನ ಉದ್ಬೂರು ಬಳಿಯ ವಿಷ್ಣು ಸ್ಮಾರಕ ನಿಯೋಜಿತ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್, ಮಗಳು ಕೀರ್ತಿ ಅವರು ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಕ್ಕೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ:ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್

    ಈ ಸಂಭ್ರಮದಲ್ಲಿ ನೂರಾರು ಅಭಿಮಾನಿಗಳು ಕೂಡ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು. ಜೊತೆಗೆ ವಿಷ್ಣುದಾದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹಾಗೆಯೇ ಸಾಹಸ ಸಿಂಹನ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನ ಮೆರೆದರು.

  • ಹಸಿರು ಮದ್ವೆಗೆ ಸಾಕ್ಷಿಯಾದ ಜೋಡಿಗಳು

    ಹಸಿರು ಮದ್ವೆಗೆ ಸಾಕ್ಷಿಯಾದ ಜೋಡಿಗಳು

    ಬಾಗಲಕೋಟೆ: ಹಸೆಮಣೆ ಏರಿದ ನವದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಸಸಿ ವಿತರಿಸಿ, ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ಮದುವೆ ಸಮಾರಂಭದಲ್ಲೂ ಪರಿಸರ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದ ಲೋಕೇಶ್ವರ ದೇವಸ್ಥಾನದಲ್ಲಿ ಈ ಮದುವೆ ನಡೆದಿದ್ದು, ವಿಕ್ರಮ ಗೋಳ್ ಮತ್ತು ಪೂಜಾ ಹಾಗೂ ಹೊಳಬಸಯ್ಯ ಗೋಳ್ ಮತ್ತು ದ್ರಾಕ್ಷಾಯಿಣಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳು ತಮ್ಮ ಮದುವೆಗೆ ಬಂದ ಅಥಿತಿಗಳಿಗೆ ಸಸಿ ವಿತರಿಸಿ ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದಾರೆ.

    ಈ ನವದಂಪತಿಗಳು ಸಾವಿರ ಸಸಿಗಳನ್ನು ಮದುವೆಗೆ ಬಂದ ಅತಿಥಿಗಳಿಗೆ ವಿತರಣೆ ಮಾಡಿದ್ದು, ಖುಷಿ ಜೊತೆಗೆ ಪರಿಸರ ಪ್ರೇಮದ ಅರಿವು ಮೂಡಿಸಿದರು. ಮದುವೆಯಾದ ಜೋಡಿಗಳು ತಲಾ ಒಂದೊಂದು ಸಸಿಗಳನ್ನು ನೆಟ್ಟು ಪ್ರಕೃತಿ ದೇವತೆಯ ಆಶೀರ್ವಾದ ಪಡೆದರು.

    ಇದೇ ವೇಳೆ ಮಾತನಾಡಿದ ದಂಪಂತಿಗಳು, ನಮ್ಮ ಸ್ಮೃತಿ ಪಟಲದಲ್ಲಿ ಹಚ್ಚಹಸಿರಾಗಿರಲಿದೆ. ಸಸಿಗಳನ್ನು ನೆಟ್ಟು ಪೋಷಿಸುವ ಪರಿಸರ ಕಾಳಜಿ ಎಲ್ಲರಲ್ಲಿ ಮೂಡಬೇಕಿದೆ. ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ. ಹೀಗಾಗಿ ನಾವು ಸಸಿ ವಿತರಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ರಾಣೇಬೆನ್ನೂರಿನ ಆಟೋ ಚಾಲಕರ ಪರಿಸರ ಪ್ರೇಮ-ಹುಟ್ಟುಹಬ್ಬಕ್ಕೆ ಸಸಿ ನೆಟ್ಟು ಹಸಿರು ಕಾಂತ್ರಿ!

    ರಾಣೇಬೆನ್ನೂರಿನ ಆಟೋ ಚಾಲಕರ ಪರಿಸರ ಪ್ರೇಮ-ಹುಟ್ಟುಹಬ್ಬಕ್ಕೆ ಸಸಿ ನೆಟ್ಟು ಹಸಿರು ಕಾಂತ್ರಿ!

    ಹಾವೇರಿ: ಹುಟ್ಟುಹಬ್ಬದ ಆಚರಣೆ ಅಂದರೆ ಕೇಕ್ ಕತ್ತರಿಸುವುದು, ಭರ್ಜರಿ ಪಾರ್ಟಿ ಮಾಡುವುದು ಸಾಮಾನ್ಯ. ಆದರೆ ಹಾವೇರಿಯ ರಾಣೇಬೆನ್ನೂರಿನ ಆಟೋ ಚಾಲಕರು ತಮ್ಮ ಹುಟ್ಟು ಹಬ್ಬದ ಆಚರಣೆ ವೇಳೆ ಸಸಿ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರು ನಗರದ ರೈಲು ನಿಲ್ದಾಣದ ಎದುರಿನ ಈ ಗಿಡಗಳನ್ನ ನೆಟ್ಟಿದ್ದು ಇದೇ ಆಟೋ ಚಾಲಕರು. ಆಟೋ ಚಾಲಕರ ಸಂಘ ಕಟ್ಟಿಕೊಂಡಿರೋ 40 ಚಾಲಕರು, ಪ್ರತಿಯೊಬ್ಬರ ಜನ್ಮದಿನದಂದು ಒಂದೊಂದು ಸಸಿ ನೆಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ನಿರಂತರವಾಗಿ ಪೋಷಣೆ ಮಾಡುತ್ತಿದ್ದಾರೆ.

    ಪ್ರಮುಖವಾಗಿ ಶೋಭಾಬಲ, ಹುಲಗಿಲ, ರೇನ್ ಟ್ರೀ, ನೇರಳೆ, ಬೇವು ಸೇರಿದಂತೆ ಹಲವು ಸಸಿಗಳನ್ನ ನೆಟ್ಟು ಅವುಗಳನ್ನ ಮರಗಳಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಪ್ರತಿಯೊಂದು ಸಸಿಗೂ ಮಹಾತ್ಮರ ಹೆಸರು ಇಟ್ಟಿದ್ದಾರೆ. ಜೊತೆಗೆ ಇಡೀ ನಗರದ ತುಂಬ ಸಸಿಗಳನ್ನ ನೆಡುವ ಸಂಕಲ್ಪ ಮಾಡಿದ್ದಾರೆ.

    ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಸಂದೇಶ ಸಾರುತ್ತಿರುವ ಆಟೋ ಚಾಲಕರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.

  • ಚಿತ್ರದುರ್ಗದಲ್ಲಿ ಸರ್ಕಾರಿ ಸಸಿಗಳನ್ನು ಮಾರಿ ಅರಣ್ಯಾಧಿಕಾರಿ ಅಕ್ರಮ!

    ಚಿತ್ರದುರ್ಗದಲ್ಲಿ ಸರ್ಕಾರಿ ಸಸಿಗಳನ್ನು ಮಾರಿ ಅರಣ್ಯಾಧಿಕಾರಿ ಅಕ್ರಮ!

    ಚಿತ್ರದುರ್ಗ: ಕಾಡು ಬೆಳೆಸಲು ಎಂದು ಸರ್ಕಾರ ಕೊಟ್ಟಿದ್ದ ಸಸಿಗಳನ್ನು ಅರಣ್ಯಾಧಿಕಾರಿಯೊಬ್ಬರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೋಟೆನಾಡಿನಲ್ಲಿ ಕೇಳಿ ಬರುತ್ತಿದೆ.

    ಚಿತ್ರದುರ್ಗದ ಆರ್‍ಎಫ್‍ಒ ಅಫ್ರಿನ್ ಎಂಬವರು ಸರ್ಕಾರ ನೀಡಿರುವ ಸಸಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕಾಸು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸಿದ ಎತ್ತರದ ಗಿಡಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳು ಹಾಗೂ ರಸ್ತೆ ಬದಿಗಳಲ್ಲಿ ನೆಡುತ್ತಿದ್ದಾರೆ. ಅಲ್ಲದೇ ಅಗತ್ಯವಿದ್ದಾಗ ಖಾಸಗಿ ನರ್ಸರಿಗಳಿಂದಲೂ ಸಸಿಗಳನ್ನ ಖರೀದಿಸಿ ಸಸಿಗಳನ್ನು ನೆಡಲಾಗುತ್ತದೆ.

    ಹೊಳಲ್ಕೆರೆ ವಲಯದ ಆರ್ ಎಫ್ ಒ ಅಫ್ರಿನ್ ಮಾತ್ರ ಗಿಡಗಳನ್ನ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನರ್ಸರಿಯಲ್ಲಿ ಖಾಸಗಿ ವಾಹನಕ್ಕೆ ಗಿಡಗಳನ್ನ ತುಂಬಿಸಿಕೊಳ್ಳುತ್ತಿರುವುದನ್ನು ಅರಣ್ಯ ಇಲಾಖೆ ಗಮನಿಸಿದ್ದು, ಬಳಿಕ ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

    ಇಲಾಖೆಯ ಎಸಿಎಫ್ ಶ್ರೀನಿವಾಸ್, ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನದ ಜೊತೆಗೆ ಸಸಿಗಳನ್ನು ಜಪ್ತಿ ಮಾಡಿ ಆರ್‍ಎಫ್‍ಒ ಅಫ್ರಿನ್ ವಿರುದ್ಧ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ್ದಾರೆ.