Tag: Planting medicine

  • ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ ಇಬ್ಬರ ದುರ್ಮರಣ!

    ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ ಇಬ್ಬರ ದುರ್ಮರಣ!

    ಕೋಲಾರ: ಕುಡಿತದ ಚಟ ಬಿಡಲು ನಾಟಿ ಔಷಧಿಯನ್ನ ಕುಡಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಗವಾರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

    ನಗವಾರ ಗ್ರಾಮದ 55 ವರ್ಷದ ಚಲಪತಿ ಹಾಗೂ 38 ವರ್ಷದ ಶಂಕರಪ್ಪ ಎಂಬುವರು ಮೃತ ದುರ್ದೈವಿಗಳು.

    ಇವರು ಕಳೆದ ಹಲವು ದಿನಗಳಿಂದ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ರು, ಕುಡಿತದ ಚಟಕ್ಕೊಳಗಾಗಿದ್ದರಿಂದ ಚಟ ಬಿಡಿಸುವ ಸಲುವಾಗಿ ಸಂಬಂಧಿಕರು ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಉಪ್ಪರಹಳ್ಳಿಯಲ್ಲಿ ನಾಟಿ ಔಷಧಿಯನ್ನ ಕೊಡಿಸಿ ಕರೆದುಕೊಂಡು ಬಂದಿದ್ರು. ಅಲ್ಲಿ ನಾಟಿವೈದ್ಯ ಸುಬ್ರಮಣಿ ಎಂಬಾತ ಮದ್ಯಪಾನದೊಂದಿಗೆ ನಾಟಿ ಔಷಧಿಯನ್ನ ಬೆರಸಿ ಕುಡಿಯಲು ನೀಡಿದ್ದನು. ಅದನ್ನ ಕುಡಿದು ಮನೆಗೆ ಬಂದ ಇಬ್ಬರು ತೀವ್ರ ಅಸ್ವಸ್ಥರಾಗಿ ಚಲಪತಿ ಎಂಬುವವರು ಮನೆಯಲ್ಲಿಯೆ ಮೃತಪಟ್ಟಿದ್ರೆ, ತೀವ್ರ ಅಸ್ವಸ್ಥನಾಗಿದ್ದ ಶಂಕರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.

    ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

     

  • ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

    ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

    ಬೆಳಗಾವಿ: ಸ್ವಾಮೀಜಿಯೊಬ್ಬರು ಕುಡಿತ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಾರ್ಚ್ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತ ಯುವಕ. ಚಿಕ್ಕ ವಯಸ್ಸಿನಲ್ಲೇ ವಿಪರೀತ ಕುಡಿತಕ್ಕೆ ದಾಸರಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಸಿದ್ದರಾಯ್ ನಾಯಕ್‍ರನ್ನು ಹಣ್ಣಿಗೇರಿ ಗ್ರಾಮದ ಸ್ವಾಮೀಜಿ ಶಿವಪ್ಪ ಭಾವಿ ಎಂಬವರ ಬಳಿ ಚಿಕಿತ್ಸೆ ಪಡೆಯಲು ಕರೆ ತಂದಿದ್ದರು. ಸ್ವಾಮೀಜಿ ನೀಡಿದ್ದ ಔಷಧಿಯನ್ನು ಕುಡಿದ ಸಿದ್ದರಾಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ವಿಷಯವಾಗಿ ದೂರು ದಾಖಲಿಸಿಕೊಳ್ಳದ ನೇಸರ್ಗಿ ಪಟ್ಟಣದ ಪೊಲೀಸರು ರಾಜಿ ಪಂಚಾಯತಿ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಈ ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ನೇಸರ್ಗಿ ಠಾಣೆ ಪೊಲೀಸರು ಐಪಿಸಿ 328, 304(ಎ) ಅನ್ವಯ ದೂರು ದಾಖಲಿಸಿಕೊಂಡು ತಡರಾತ್ರಿ ಸ್ವಾಮಿಜೀ ಶಿವಪ್ಪ ಭಾವಿಯನ್ನು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ಪಂಚರು 3.5 ಲಕ್ಷ ರೂಪಾಯಿಗೆ ರಾಜಿ ಪಂಚಾಯತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿದ್ದರು. ಒಟ್ಟು ಮೊತ್ತದಲ್ಲಿ ಸಿದ್ದರಾಯ್ ಪೋಷಕರಿಗೆ 85 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೃತನ ಕುಟುಂಬಕ್ಕೆ ಹಣ ದೊರಕಿಲ್ಲ. ಉಳಿದ ಹಣ ಯಾರ ಪಾಲಾಗಿದೆ ಎಂಬುದು ತನಿಖೆಯ ಮುಖಾಂತರ ತಿಳಿಯಬೇಕಿದೆ.

    ಕಳೆದ ಹಲವು ವರ್ಷಗಳಿಂದ ಸ್ವಾಮೀಜಿ ಶಿವಪ್ಪ ಭಾವಿ ಗ್ರಾಮದಲ್ಲಿ ಮದ್ಯಪಾನ ಬಿಡಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಇನ್ನೂ ಯುವಕ ಸಿದ್ದರಾಯ್ ದೇಹವನ್ನು ಸುಟ್ಟು ಹಾಕಿದ್ದು, ಎಲ್ಲ ರೀತಿಯ ಸುಳಿವು ಮುಚ್ಚಿಹಾಕಲು ಪ್ರಯತ್ನಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.