Tag: planting

  • ಐಟಿ ಉದ್ಯೋಗಿಗಳಿಗೆ ಗದ್ದೆಯಲ್ಲಿ ನಾಟಿ ಕಾರ್ಯಾಗಾರ

    ಐಟಿ ಉದ್ಯೋಗಿಗಳಿಗೆ ಗದ್ದೆಯಲ್ಲಿ ನಾಟಿ ಕಾರ್ಯಾಗಾರ

    ಮಡಿಕೇರಿ: ಐಟಿ ಕಂಪನಿ ಉದ್ಯೋಗಿಗಳು ಇಂದು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

    ಸೋಮವಾರಪೇಟೆ ನಗರದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ತಾಕೇರಿ ಗ್ರಾಮದಲ್ಲಿ 3ನೇ ವರ್ಷದ ಗದ್ದೆ ನಾಟಿ ಕಾರ್ಯಕ್ರಮ ನಡೆಯಿತು. ಐಟಿ ಕಂಪನಿಯ ಉದ್ಯೋಗಿಗಳು ಸಂತಸದಿಂದ ಭಾಗವಹಿಸಿ ಭತ್ತ ನಾಟಿ ಮಾಡಿದರು. ನಾಟಿ ಮಾಡುವ ಕುರಿತು ಮಾಹಿತಿ ನೀಡುವ ಮೂಲಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯವಾಗಿ ವರ್ಕ್ ಫ್ರಂ ಹೋಮ್‍ನಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳು, ವೈದ್ಯರು, ವಕೀಲರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ತಾಕೇರಿಯ ಜಿ.ಎಂ.ರಾಣಿ ಪಾಪಯ್ಯ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಹೊರಭಾಗದಲ್ಲಿರುವ ಉದ್ಯೋಗಿಗಳು ಕೃಷಿ ಸಮಯದಲ್ಲಾರೂ ತಮ್ಮ ಗ್ರಾಮಕ್ಕೆ ಬಂದು ಗದ್ದೆ ಕೃಷಿ ಮಾಡಬೇಕು. ಹಾಗಾದಾಗ ಮಾತ್ರ ಕೃಷಿಯ ಬಗ್ಗೆ ಅರಿವು ಹಾಗೂ ಕೃಷಿಯ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಸ್ಥಳೀಯ ಯುವ ಜನಾಂಗ ಕೃಷಿ ಕಾರ್ಯಗಳಲ್ಲಿ ಮನಸು ಮಾಡಿದರೆ ಕಾರ್ಮಿಕರ ಸಮಸ್ಯೆ ದೂರಾಗಲಿದೆ. ಗದ್ದೆ ಕೃಷಿಯ ಬಗ್ಗೆ ಬಹುತೇಕ ಐಟಿ ಉದ್ಯೋಗಿಗಳಿಗೆ ಮಾಹಿತಿ ಇರುವುದಿಲ್ಲ. ಭತ್ತ ಬೆಳೆಯುವ ವಿಧಾನವೂ ತಿಳಿದಿರುವುದಿಲ್ಲ. ಅಂತಹವರಿಗೆ ಗದ್ದೆ ನಾಟಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಕಾಫಿ ಮಂಡಳಿಯ ಅಧಿಕಾರಿ ಲಕ್ಷ್ಮೀಕಾಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಬರೋಬ್ಬರಿ 1,650 ಎಕರೆ ಅರಣ್ಯವನ್ನು ದತ್ತು ಪಡೆದ ಪ್ರಭಾಸ್

    ಬರೋಬ್ಬರಿ 1,650 ಎಕರೆ ಅರಣ್ಯವನ್ನು ದತ್ತು ಪಡೆದ ಪ್ರಭಾಸ್

    – ಅಭಿವೃದ್ಧಿ ಪಡಿಸೋ ಜವಾಬ್ದಾರಿ ಹೊತ್ತ ಬಾಹುಬಲಿ

    ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‍ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಸಹಾಯ ಮಾಡುವ ತಮ್ಮ ಮನೋಭಾವದಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್‌ಗೆ ಭರ್ಜರಿ ಉಡುಗೊರೆ ನೀಡಿದ್ದರು. ಇದೀಗ ಅರಣ್ಯವನ್ನೇ ದತ್ತು ಪಡೆದುಕೊಂಡಿದ್ದಾರೆ.

    ಸಾಮಾನ್ಯವಾಗಿ ಸಿನಿಮಾ ನಟರು ಆನೆ, ಸಿಂಹ, ಹುಲಿಗಳನ್ನು ದತ್ತು ಪಡೆದುಕೊಳ್ಳುತ್ತಾರೆ. ಆದರೆ ಬಾಹುಬಲಿ ಖ್ಯಾತಿಯ ಪ್ರಭಾಸ್, ಇಡೀ ಅರಣ್ಯವನ್ನೇ ದತ್ತುಪಡೆದಿದ್ದಾರೆ. ಹೈದರಾಬಾದ್ ಬಳಿಯ ಬರೋಬ್ಬರಿ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದುಕೊಂಡಿದ್ದು, ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

    ಅಲ್ಲದೇ ಮೀಸಲು ಅಭಿವೃದ್ಧಿಗಾಗಿ ಅರಣ್ಯ ಅಧಿಕಾರಿಗಳಿಗೆ 2 ಕೋಟಿ ರೂ. ಹಣವನ್ನೂ ಕೂಡ ನೀಡಿದ್ದಾರೆ. ಈ ವೇಳೆ ತೆಲಂಗಾಣದ ಅರಣ್ಯ ಸಚಿವ ಅಲೋಲಾ ಇಂದ್ರ ಕರಣ್‍ ರೆಡ್ಡಿ ಮತ್ತು ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ರಾಜಕೀಯ ಮುಖಂಡರ ಜೊತೆ ನಗರ ಅರಣ್ಯ ಉದ್ಯಾನಕ್ಕಾಗಿ ಪ್ರಭಾಸ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ್ದಾರೆ.

    ನಟ ಪ್ರಭಾಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ನಾನು ಹೈದರಾಬಾದ್ ಬಳಿಯ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ” ಎಂದು ತಿಳಿಸಿದ್ದಾರೆ.

    ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಅವರ ಬೆಂಬಲಕ್ಕೆ ಮತ್ತು  ಈ ಅವಕಾಶವನ್ನು ನೀಡಿದ ತೆಲಂಗಾಣ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಎಂಬ ಹ್ಯಾಷ್‍ಟ್ಯಾಗ್ ಮೂಲಕ ಜನರಿಗೂ ಸಸಿ ನೆಡುವ, ಹಸಿರು ಸಂರಕ್ಷಿಸುವ ಸವಾಲು ಹಾಕಿದ್ದಾರೆ.

    ಕಾಜಿಪಲ್ಲಿ ಮೀಸಲು ಅರಣ್ಯ ಅಲ್ಲಿನ ಔಷಧ ಸಂಪತ್ತಿಗಾಗಿ ಖ್ಯಾತಿ ಪಡೆದುಕೊಂಡಿದೆ. ಇಲ್ಲಿ ಶೀಘ್ರದಲ್ಲಿಯೇ 1,650 ಎಕರೆ ಭೂಮಿಯಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಾಣವಾಗಲಿದೆ. ಈ ಅರಣ್ಯ ಪ್ರದೇಶದಲ್ಲಿ ಅಧಿಕ ಸಸಿಗಳನ್ನು ನೆಟ್ಟು, ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಿ, ವನ್ಯಪ್ರಾಣಿಗಳು ಓಡಾಡುವಂತೆ ವ್ಯವಸ್ಥೆ ಕಲ್ಪಿಸುವ ಐಡಿಯಾವನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ಈ ಅರಣ್ಯದಿಂದ ನಗರದ ಪರಿಸರವೂ ಉತ್ತಮವಾಗಲಿದೆ ಎಂಬುದು ಪ್ರಭಾಸ್ ನಂಬಿಕೆ ಆಗಿದೆ.

  • ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

    ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

    ಕಲಬುರಗಿ: ಫ್ರೆಂಡ್‍ಶಿಪ್ ಡೇ ಹಿನ್ನೆಲೆಯಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಈ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಿ, ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ಮೆರೆದಿದೆ.

    ಇಂದು ದೇಶದ ಎಲ್ಲೆಡೆ ಫ್ರೆಂಡ್‍ಶಿಪ್ ಡೇ ಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ಸ್ನೇಹಿತರಿಬ್ಬರು ಪರಸ್ಪರ ಬ್ಯಾಂಡ್‍ಗಳನ್ನು ಕಟ್ಟಿ, ಸಿಹಿ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಳ್ಳೊದು ಕಾಮನ್. ಇದನ್ನು ಮೀರಿ ನಮ್ಮ ಸಂಕಲ್ಪ ಫೌಂಡೇಶನ್ ಸದಸ್ಯರು ಸಸಿಗಳನ್ನು ನೆಟ್ಟು ಫ್ರೆಂಡ್‍ಶಿಪ್ ಬ್ಯಾಂಡ್‍ಗಳನ್ನು ಕಟ್ಟಿ ಪರಿಸರ ಸ್ನೇಹವನ್ನು ವ್ಯಕ್ತಪಡಿಸಿದ್ದಾರೆ.

    ಇಲ್ಲಿನ ವಿಠಲ ನಗರದ ಹನುಮಾನ ದೇವಸ್ಥಾನದ ಮಹಾನಗರ ಪಾಲಿಕೆ ಉದ್ಯಾನದಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಸ್ನೇಹಿತರ ದಿನಾಚರಣೆ ಆಯೋಜಿಸಿತ್ತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸಸಿಗಳನ್ನು ನೆಟ್ಟು ಅವುಗಳಿಗೆ ನೀರು ಉಣಿಸುವುದರ ಮೂಲಕ ಗಿಡ ಮರಗಳನ್ನ ತಮ್ಮ ಸ್ನೇಹಿತರಂತೆ ನೋಡಿ ಅವುಗಳನ್ನ ಪ್ರತಿಯೊಬ್ಬರ ಪೋಷಿಸುವಂತೆ ಕರೆ ನೀಡಿದರು.

    ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಬಹುತೇಕರು ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಸ್ವಚ್ಛಂದವಾಗಿ ಉಸಿರಾಡಲು ಕಷ್ಟವಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ‘ನಮ್ಮ ಸಂಕಲ್ಪ ಫೌಂಡೇಶನ್’ ರಕ್ತ ದಾನಿಗಳ ಗುಂಪಾಗಿದ್ದು, ಕಲಬುರಗಿ ಸೇರಿದಂತೆ ವಿವಿಧೆಡೆ ಉಚಿತವಾಗಿ ರಕ್ತವನ್ನು ದಾನ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಬಳಿಕ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅವುಗಳಿಗೆ ಬ್ಯಾಂಡ್‍ಗಳನ್ನು ಕಟ್ಟಲಾಯಿತು.

  • ಎಂಜಿನಿಯರಿಂಗ್ & ಶಾಲಾ ವಿದ್ಯಾರ್ಥಿಗಳಿಂದ ಮಿನಿ ಫಾರೆಸ್ಟ್ ನಿರ್ಮಾಣ – 2000ಕ್ಕೂ ಅಧಿಕ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದ ವಿದ್ಯಾರ್ಥಿ ಸಮೂಹ

    ಎಂಜಿನಿಯರಿಂಗ್ & ಶಾಲಾ ವಿದ್ಯಾರ್ಥಿಗಳಿಂದ ಮಿನಿ ಫಾರೆಸ್ಟ್ ನಿರ್ಮಾಣ – 2000ಕ್ಕೂ ಅಧಿಕ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದ ವಿದ್ಯಾರ್ಥಿ ಸಮೂಹ

    ಬೆಳಗಾವಿ: ವೀಕೆಂಡ್ ಬಂದರೆ ಸಾಕು ಇಂದಿನ ವಿದ್ಯಾರ್ಥಿಗಳು ರಜೆಯಲ್ಲಿ ಮೋಜು ಮಸ್ತಿ ಎಂದು ಎಂಜಾಯ್ ಮಾಡುತ್ತಾರೆ. ಆದರೆ ಈ ವಿದ್ಯಾರ್ಥಿಗಳು ಮಾಡಿದ ಶ್ರಮದಾನದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯ ವರದಾನವಾಗಿದೆ. ಗ್ರೀನ್ ಸೇವರ್ಸ್ ಸಂಸ್ಥೆವತಿಯಿಂದ ಪ್ರಕೃತಿ ಮಡಿಲಲ್ಲಿ ಸಾವಿರಾರು ಸಸಿಗಳನ್ನ ನೆಟ್ಟು ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳು ನೈಸರ್ಗಿಕ ವಾತಾವರಣವನ್ನ ಕೊಡುಗೆಯಾಗಿ ನೀಡಿದ್ದಾರೆ.

    ಜಿಲ್ಲೆಯ ಜೆಐಟಿ, ಕೆಎಲ್‍ಇ ಮತ್ತು ಎಂಜಿನಿಯರಿಂಗ್ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿ ಗ್ರೀನ್ ಸೇವರ್ಸ್ ಸಂಸ್ಥೆ ವತಿಯಿಂದ ಮಿನಿ ಫಾರೆಸ್ಟ್ ನಿರ್ಮಾಣ ಮಾಡಿದ್ದಾರೆ. ಬೆಳಗಾವಿಯ ಹೊರವಲಯದ ರಾಜಗೋಳ ಹೊರವಲಯದಲ್ಲಿ ಮಿನಿ ಫಾರೆಸ್ಟ್ ನಿರ್ಮಾಣ ಮಾಡಲಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಈ ಸಸಿ ನೆಡುವ ಕಾರ್ಯಕ್ಕೆ ಶಾಲಾ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಭಾಗವಸಿದ್ದಾರೆ. ವೀಕೆಂಡ್ ನಲ್ಲಿ ಹರಟೆ, ಮೋಜು ಮಸ್ತಿ ಮಾಡದೇ ಪ್ರಕೃತಿಯ ಸೇವೆಗಾಗಿ ಸೇವೆ ಸಲ್ಲಿಸಿದ್ದಾರೆ.

    ಗ್ರೀನ್ ಸೇವರ್ಸ್ ಸಂಸ್ಥೆ 2016 ರಿಂದ ಇದೇ ಸೇವೆ ಸಲ್ಲಿಸುತ್ತಿದೆ. ಗ್ರೀನ್ ಸೇವರ್ಸ್ ಸಂಸ್ಥೆಯಿಂದ ಸಸಿಗಳನ್ನು ಖರೀದಿಸಿ ಖಾಲಿ ಇರುವ ಜಾಗದಲ್ಲಿ ಸಸಿ ನೆಡುತ್ತಾರೆ. ಎರಡು ವರ್ಷಗಳಿಂದ ಸುಮಾರು ನೂರಕ್ಕೂ ಹೆಚ್ಚು ಈ ರೀತಿ ಗ್ರೀನ್ ಪ್ಲಾಂಟ್ ತಯಾರಿಸಿದ್ದು, ನಾಲ್ಕು ಮಿನಿ ಫಾರೆಸ್ಟ್ ನಿರ್ಮಾಣ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 9000 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.

    ಎಲ್ಲಾ ವರ್ಗದ, ಎಲ್ಲಾ ವಯಸ್ಸಿನವರು ಹಾಗೂ ಸಮಾನಮನಸ್ಕರಿಂದ ಕಟ್ಟಿದ ಈ ಗ್ರೀನ್ ಸೇವರ್ಸ್ ತಂಡ ಪ್ರಕೃತಿ ಮಡಿಲಲ್ಲಿ ಪರಿಸರ ಬೆಳೆಸಲು, ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಖಾಲಿ ಜಾಗ ಇದ್ದರೆ ಸಾಕು ನಮಗೆ ಮಾಹಿತಿ ನೀಡಿದರೆ ನಾವೇ ಸಸಿ ತಂದು ನೆಡುತ್ತೇವೆ ಎಂದು ಗ್ರೀನ್ ಸೇವರ್ಸ್ ಸದಸ್ಯ ಕೀರ್ತಿ ಸೂರಂಜನ್ ಹೇಳಿದ್ದಾರೆ.

    ಮರ ಬೆಳೆಸಿ ಕಾಡು ಉಳಿಸಿ ಎಂಬುದು ಕೇವಲ ನಾಮಫಲಕಕ್ಕೆ ಸೀಮಿತವಾಗಿರುವ ಕಾಲದಲ್ಲಿ ಮುಂದಿನ ಪೀಳಿಗೆಗೆ ನೈಸರ್ಗಿಕ ವಾತಾವರಣ ನೀಡಿ ಪರಿಸರ ಕಾಳಜಿಯಿಂದ ಗ್ರೀನ್ ಸೇವರ್ಸ್ ತಂಡ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

  • ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

    ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

    ಲಕ್ನೋ: ಉತ್ತರಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು 8 ಕತ್ತೆಗಳನ್ನು 4 ದಿನಗಳ ಕಾಲ ವಶದಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ನಡೆದಿದೆ. ಕತ್ತೆಗಳು ಜೈಲಿನ ಆವರಣದಲ್ಲಿ ಬೆಲೆ ಬಾಳುವ ಸಸಿಗಳನ್ನು ತಿಂದಿದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗಿತ್ತು.

    ಈ ಹಿಂದೆ ಕತ್ತೆಗಳನ್ನು ಬೇಕಾಬಿಟ್ಟಿಯಾಗಿ ಬಿಡದಂತೆ ಅವುಗಳ ಮಾಲೀಕನಿಗೆ ತಿಳಿಸಲಾಗಿತ್ತು. ಆದರೂ ಕತ್ತೆಗಳನ್ನು ಬಿಟ್ಟಿದ್ದರಿಂದ ದುಬಾರಿ ಬೆಲೆಯ ಸಸಿಗಳನ್ನು ತಿಂದಿವೆ. ಹೀಗಾಗಿ 8 ಕತ್ತೆಗಳನ್ನು 4 ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಸೋಮವಾರ ರಾತ್ರಿ ಬಿಜೆಪಿ ನಾಯಕರೊಬ್ಬರು ಹೇಳಿದ ನಂತರ ಪೊಲೀಸರು ಕತ್ತೆಗಳನ್ನ ಬಿಟ್ಟು ಕಳಿಸಿದ್ದಾರೆ.

    ಈ ಹಿಂದೆಯೂ ಕತ್ತೆಗಳು ಜೈಲಿನ ಆವರಣ ಪ್ರವೇಶ ಮಾಡಿದ್ದರ ಬಗ್ಗೆ ಅವುಗಳ ಮಾಲೀಕನಿಗೆ ಎಚ್ಚರಿಕೆ ನೀಡಲಾಗಿತ್ತು. ಜೈಲಿನ ಆವರಣವನ್ನ ಸುಂದರಗೊಳಿಸಲು ಹಿರಿಯ ಅಧಿಕಾರಿಗಳು ಬೆಲೆ ಬಾಳುವ ಸಸಿಗಳನ್ನು ತರಸಿದ್ದರು. ಈ ಸಸಿಗಳನ್ನ ಜೈಲಿನ ಆವರಣದಲ್ಲಿ ನೆಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದ್ರೆ ಕತ್ತೆಗಳು ಸಸಿಗಳನ್ನು ತಿಂದು ಹಾಳು ಮಾಡಿವೆ ಎಂದು ಮುಖ್ಯ ಪೇದೆ ಆರ್.ಕೆ.ಶರ್ಮಾ ಹೇಳಿದ್ದಾರೆ.

    2 ಲಕ್ಷ ರೂ. ಮೌಲ್ಯದ ಸಸಿ: ಕತ್ತೆಗಳು ತಿಂದಿರುವ ಸಸಿಗಳ ಮೌಲ್ಯ 2 ಲಕ್ಷ ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ. ಕತ್ತೆಗಳು ದುಬಾರಿ ಬೆಲೆಯ ಸಸಿಗಳನ್ನ ತಿಂದಿದ್ದಲ್ಲದೆ ನನ್ನ ಮನೆಗೂ ನುಗ್ಗಿದ್ದವು. ನಾವು ಮಾಲೀಕನನ್ನು ಪತ್ತೆ ಮಾಡಲು ಕತ್ತೆಗಳನ್ನ ವಶಕ್ಕೆ ತೆಗೆದುಕೊಂಡೆವು. ಕತ್ತೆಗಳ ಮಾಲೀಕ ಬಿಡಿಸಿಕೊಳ್ಳಲು ಬಂದಾಗ ಆತನಿಗೆ ಬುದ್ಧಿ ಹೇಳಿ ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳಲು ಹೇಳುವ ಸಲುವಾಗಿ ವಶಕ್ಕೆ ತೆಗೆದುಕೊಂಡೆವು ಎಂದು ಜೈಲಿನ ಹಿರಿಯ ಅಧಿಕಾರಿ ಎಸ್.ಆರ್.ಶರ್ಮಾ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕತ್ತೆಯ ಮಾಲೀಕ ಕಮಲೇಶ್, ಕತ್ತೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ನಂತರ ನಾನು ಠಾಣೆಗೆ ತೆರಳಿ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಯಾವ ಆಧಿಕಾರಿಗಳು ಕತ್ತೆಗಳನ್ನು ಬಿಡಲಿಲ್ಲ. ಕೊನೆಗೆ ನಾನು ಸ್ಥಳೀಯ ಬಿಜೆಪಿ ನಾಯಕರೊಬ್ಬರಿಂದ ಹೇಳಿಸಿದ ಮೇಲೆ 4 ದಿನಗಳ ಬಳಿಕ ಕತ್ತೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ