Tag: Pitru Paksha

  • ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಕಾರವಾರ: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171 (Air India Crash) ದುರಂತಕ್ಕೀಡಾಗಿ 260 ಮಂದಿ ಮೃತಪಟ್ಟಿದ್ದರು. ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ (Gokarna) ಮೃತರ ಪಿತೃಕಾರ್ಯ (Pitru Karya) ನೆರವೇರಿಸಲಾಯಿತು.

    ಜೂನ್ 12 ರಂದು ದುರಂತ ಸಂಭವಿಸಿ 260 ಜನ ಮೃತಪಟ್ಟಿದ್ದರು. ಇದರಲ್ಲಿ ಭಾರತ ಹಾಗೂ ಲಂಡನ್ ಪ್ರಜೆಗಳು ಸಹ ಅಸುನೀಗಿದ್ದರು. ಈ ಘಟನೆ ನಡೆದು ನಾಲ್ಕು ತಿಂಗಳ ನಂತರ ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಮೃತರ ಪಿತೃಕಾರ್ಯ ನೆರವೇರಿಸಲಾಗಿದೆ. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

    ಪಿತೃಕಾರ್ಯಕ್ಕೆ ಪ್ರಾಮುಖ್ಯತೆ ಹೊಂದಿರುವ ಗೋಕರ್ಣದಲ್ಲಿ ಮೃತರ ಕುಟುಂಬದವರು ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಿ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಬೇಡಿಕೊಳ್ಳುವುದು ಸಂಪ್ರದಾಯ. ದೇಶ ವಿದೇಶದಿಂದಲೂ ಪಿತೃಪಕ್ಷದ ಸಂದರ್ಭದಲ್ಲಿ ಗೋಕರ್ಣಕ್ಕೆ ಬಂದು ಪಿತೃಕಾರ್ಯ ನಡೆಸಿ, ಇಲ್ಲಿಯೇ ಅಸ್ತಿ ವಿಸರ್ಜಿಸುತ್ತಾರೆ. ಹೀಗಾಗಿ, ಮಹಾಬಲೇಶ್ವರ ದೇವಸ್ಥಾನ ಕಾಶಿಯಷ್ಟೇ ಪ್ರಾಮುಖ್ಯತೆ ಹೊಂದಿದೆ.

    ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪುಣ್ಯಾಶ್ರಮದಲ್ಲಿ ಅಹಮದಾಬಾದ್ ವಿಮಾನ ದುರಂತ (Ahmedabad Plane Crash) ಮಡಿದ 260 ಜನರ ಪಿತೃಕಾರ್ಯ ನಡೆಸಲಾಗಿದೆ. ದೇಶದಲ್ಲಿ ನಡೆದ ದೊಡ್ಡ ದುರಂತದ ಸಾಲಿಗೆ ಈ ವಿಮಾನ ದುರಂತ ಸೇರಿಹೋಗಿತ್ತು. ಹೀಗಾಗಿ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಹೆಸರನ್ನೂ ಸಹ ಪಡೆದು ಅವರ ಹೆಸರಲ್ಲಿ ಎಳ್ಳು-ನೀರಿನ ಅರ್ಗೆ ಸಮರ್ಪಿಸಿ ಪಿಂಡ ಪ್ರದಾನವನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ರಾಜು ಅಡಿಯವರು ತಮ್ಮ ಪುಣ್ಯಾಶ್ರಮದಲ್ಲಿ ನೆರವೇರಿಸಿದರು. ಇದನ್ನೂ ಓದಿ: Photo Gallery: ಅಹಮದಾಬಾದ್‌ನಲ್ಲಿ ವಿಮಾನ ದುರಂತ ನಡೆದ ಸ್ಥಳಕ್ಕೆ ಮೋದಿ ಭೇಟಿ

    ಗೋಕರ್ಣದ ಪುಣ್ಯಾಶ್ರಮದಲ್ಲಿ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜುಗೋಪಾಲ ಅಡಿ ಅವರ ನೇತೃತ್ವದಲ್ಲಿ 30 ಜನ ಪುರೋಹಿತರೊಂದಿಗೆ ಈ ಪಿತೃಕಾರ್ಯವನ್ನು ಕೈಗೊಳ್ಳಲಾಯಿತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ವಿಜಯ್ ರೂಪಾನಿ ಅವರಿಂದ ಹಿಡಿದು ಲಂಡನ್‌ನ ಮೃತ ಪ್ರಜೆಗಳಿಗೂ ಇಲ್ಲಿ ಪಿತೃಕಾರ್ಯ ನಡೆಸಲಾಯಿತು. ಎರಡು ದಿನದ ಈ ಕಾರ್ಯದಲ್ಲಿ ವಿಘ್ನ ನಿವಾರಕ ಗಣಪತಿಯ ಪೂಜೆ ನಡೆಸಿ, ನಾರಾಯಣ, ಈಶ್ವರನ ನೆನೆದು ನಾರಾಯಣ ಬಲಿ, ದಶ ಪಿಂಡ ಪ್ರದಾನ ಮಾಡಲಾಯ್ತು. ನಂತರ ಗೋದಾನ, ವಸ್ತ್ರದಾನ ಮಾಡಲಾಗಿದ್ದು, ಇಂದು ನೂರಾರು ಜನರಿಗೆ ಮೃತರ ಹೆಸರಿನಲ್ಲಿ ಅನ್ನ ಸಂತರ್ಪಣೆ ಕಾರ್ಯ ಸಹ ಕೈಗೊಳ್ಳಲಾಗಿದೆ.

    ಈ ಕಾರ್ಯವನ್ನು ಮುಂದೆ ದೇಶದಲ್ಲಿ ಈರೀತಿಯ ಘಟನೆ ನಡೆಯದಿರಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂಬ ಉದ್ದೇಶದಿಂದ ಮಾಡಲಾಗಿದೆ. ಪಿತೃಮಾಸದ ಈ ಸಂದರ್ಭದಲ್ಲಿ ಪುಣ್ಯಾಶ್ರಮದ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜು ಗೋಪಾಲ ಅಡಿ ಅವರಿಂದ ಪಿತೃಕಾರ್ಯ ನೆರವೇರಿಸಲಾಗಿದೆ.

  • ಪಿತೃಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ!

    ಪಿತೃಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ!

    – ಸರ್.. ಗಲಾಟೆ ನಡೀತಿದೆ ಬೇಗ ಬನ್ನಿ ಅಂತಾ ಪೊಲೀಸರಿಗೆ ಸುಳ್ಳು ಕರೆ
    – ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ಬಳಿ ಮಾವನ ಮನೆಗೆ ಡ್ರಾಪ್ ಕೇಳಿದ – ಮುಂದೇನಾಯ್ತು?

    ಚಿಕ್ಕಮಗಳೂರು: ಪಿತೃಪಕ್ಷದ ಊಟಕ್ಕೆ ಹೋಗಲು ವ್ಯಕ್ತಿಯೊಬ್ಬ ಪೊಲೀಸ್ ಜೀಪ್ ಕರೆಸಿಕೊಂಡಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆಯಲ್ಲಿ ನಡೆದಿದೆ.

    112 ಗೆ ಫೋನ್ ಮಾಡಿದ ವ್ಯಕ್ತಿ, ‘ಸರ್… ಗಲಾಟೆ ನಡೀತಿದೆ.. ಬೇಗ ಬನ್ನಿ’ ಅಂತಾ ಮನವಿ ಮಾಡಿದ್ದ. ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾನೆ. ಇದನ್ನೂ ಓದಿ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ‘ಗಾಡಿ ಯಾವು ಇಲ್ಲ… ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ಪೊಲೀಸರ ಬಳಿ ವ್ಯಕ್ತಿ ಮನವಿ ಮಾಡಿದ್ದಾನೆ. ಇದರಿಂದ ಪೆಚ್ಚಾದ ಪೊಲೀಸರು, ಆ ವ್ಯಕ್ತಿಗೆ ಬೈಯ್ಯಬೇಕೋ ಅಥವಾ ನಗಬೇಕೋ ತಿಳಿಯದೇ ಸುಮ್ಮನಾದರು.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಅದೇ ಗ್ರಾಮದ ಅಶೋಕ್ ಎಂಬ ವ್ಯಕ್ತಿ, ಪೊಲೀಸರಿಗೆ ಫೋನ್ ಮಾಡಿದ್ದ. ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್‌ಗೆ ಪೊಲೀಸರು ಬುದ್ದಿಮಾತು ಹೇಳಿದ್ದಾರೆ. ಕೊನೆಗೆ ಪೊಲೀಸರು, ಲಾರಿಯೊಂದಕ್ಕೆ ಅಡ್ಡ ಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ – ಇಂದಿನಿಂದ ಟಿಟಿಡಿ ದೇವಾಲಯ ಪವಿತ್ರೋತ್ಸವ

  • 6 ಮಂದಿ ರಷ್ಯಾ ಮಹಿಳೆಯರಿಂದ ಪಿತೃಗಳಿಗೆ ಪಿಂಡ ಪ್ರದಾನ

    6 ಮಂದಿ ರಷ್ಯಾ ಮಹಿಳೆಯರಿಂದ ಪಿತೃಗಳಿಗೆ ಪಿಂಡ ಪ್ರದಾನ

    ಪಾಟ್ನಾ: 6 ಮಂದಿ ರಷ್ಯಾದ ಮಹಿಳೆಯರು ಬಿಹಾರದ ಗಯಾದಲ್ಲಿ ಹಿರಿಯರಿಗೆ ಪಿಂಡ ಪ್ರದಾನ ಮಾಡಿದ್ದಾರೆ. ರಷ್ಯಾದ ವಿವಿಧ ಪ್ರದೇಶಗಳಿಂದ ಆಗಮಿಸಿದ ಇವರು ವಿಷ್ಣುಪಾದ ದೇವಾಲಯದ ದೇವಘಾಟ್ ನಲ್ಲಿ ಪಿಂಡ ಪ್ರಧಾನ ಮಾಡಿದ್ದಾರೆ.

    ಪುರೋಹಿತ ಲೋಕನಾಥ್ ಗೌರ್ ಅವರು ಪ್ರತಿಕ್ರಿಯಿಸಿ, ಭಾರತೀಯ ಉಡುಪು ಧರಿಸಿ ರಷ್ಯಾದ ಮಹಿಳೆಯರು ಪಿಂಡ ಪ್ರಧಾನ ಮಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟ ಇವರು ಹಿರಿಯರಿಗೆ ಆತ್ಮಕ್ಕೆ ಶಾಂತಿ ಸಿಗಲೆಂದು ನಮ್ಮ ದೇಶಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.

    ಪಿಂಡ ಪ್ರದಾನ ಮಾಡಿದ ಬಳಿಕ ರಷ್ಯಾದ ಎಲೆನಾ ಮಾತನಾಡಿ, ಭಾರತ ಧರ್ಮ ಹಾಗೂ ಆಧ್ಯಾತ್ಮದ ತವರು ನೆಲ. ಗಯಾಗೆ ಆಗಮಿಸಿದರೆ ನನಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ನನ್ನ ಪೂರ್ವಜನರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

    ಕಳೆದ ವರ್ಷ ರಷ್ಯಾ, ಸ್ಪೈನ್, ಜರ್ಮನಿ, ಚೀನಾ, ಸೇರಿದಂತೆ ಒಟ್ಟು 27 ಮಂದಿ ಆಗಮಿಸಿದ ಪಿಂಡ ಪ್ರದಾನ ಮಾಡಿದ್ದರು. ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಲೆಂದೇ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಗಯಾಗೆ ಬರುತ್ತಾರೆ.

    ಏನಿದು ಪಿತೃಪೂಜೆ?
    ವರ್ಷದಲ್ಲಿ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗಿನ 15 ದಿನಗಳು ಪಿತೃಗಳಿಗೆ ಮೀಸಲಾದ ದಿನವಾಗಿದ್ದು, ಈ ದಿನದಲ್ಲಿ ಅವರ ಅನುಗ್ರಹಕ್ಕಾಗಿ ಆಚರಿಸುವ ಧಾರ್ಮಿಕ ಸಂಪ್ರದಾಯವೇ ಪಿತೃ ಪೂಜೆ. ಈ 15 ದಿನಗಳಲ್ಲಿ ಯಾರು ಪಿತೃಪಕ್ಷ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 15 ದಿನ ಅನುಕೂಲವಿಲ್ಲದೇ ಇದ್ದರೆ ಕೊನೆಯ ಅಮಾವಾಸ್ಯೆಯ ದಿನ ಪಿತೃ ಸೇವೆ ನಡೆಸಬೇಕು.