Tag: Pipe Line

  • ರಾಮನಗರಕ್ಕೆ 3 ದಿನ, ಚನ್ನಪಟ್ಟಣಕ್ಕೆ 2 ದಿನ ಕಾವೇರಿ ನೀರು ಬಂದ್

    ರಾಮನಗರಕ್ಕೆ 3 ದಿನ, ಚನ್ನಪಟ್ಟಣಕ್ಕೆ 2 ದಿನ ಕಾವೇರಿ ನೀರು ಬಂದ್

    ರಾಮನಗರ: ಜಿಲ್ಲೆಯ ರಾಮನಗರ ನಗರ ಪ್ರದೇಶ ಹಾಗೂ ಚನ್ನಪಟ್ಟಣ ನಗರ ಪ್ರದೇಶಕ್ಕೆ ಕ್ರಮವಾಗಿ ಮೂರು ಹಾಗೂ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜು ಮಾಡುವುದನ್ನು ಬಂದ್ ಮಾಡಿ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆದೇಶ ಹೊರಡಿಸಿದೆ.

    ರಾಮನಗರ ಹಾಗೂ ಚನ್ನಪಟ್ಟಣ ನಗರಗಳಿಗೆ ಹಲಗೂರು ಸಮೀಪದ ತೊರೆಕಾಡನಹಳ್ಳಿಯಿಂದ ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿದೆ. ಆದರೆ ಇದೀಗ ನೀರು ಸರಬರಾಜು ಮಾಡುವ ಮಾರ್ಗದ ಪೈಪ್ ಲೈನ್‍ನಲ್ಲಿ ದೋಷ ಕಾಣಿಸಿಕೊಂಡಿರುವ ಪರಿಣಾಮ ಕಾವೇರಿ ನೀರು ಸರಬರಾಜು ಮಾಡದಂತೆ ತಡೆಯಲಾಗಿದೆ.

    ತೊರೆಕಾಡನಹಳ್ಳಿಯ ಬಿಡಬ್ಲ್ಯೂಎಸ್‍ಎಸ್‍ಬಿ ಆವರಣದ ಹತ್ತಿರ ಕುಡಿಯುವ ನೀರು ಸರಬರಾಜು ಮಾಡುವ 600 ಮಿಮಿ ವ್ಯಾಸದ ಪಿಎಸ್ಪಿ ಏರು ಕೊಳವೆಯ ಮಾರ್ಗದಲ್ಲಿ ಅಧಿಕವಾಗಿ ನೀರು ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯ ಮಾಡಬೇಕಾಗಿದೆ

    ಹಾಗಾಗಿ ಇದೇ ಡಿಸೆಂಬರ್ 11 ಹಾಗೂ 12ರಂದು ಎರಡು ದಿನಗಳ ಕಾಲ ಚನ್ನಪಟ್ಟಣ ನಗರ ಪ್ರದೇಶಕ್ಕೆ ಹಾಗೂ ಡಿಸೆಂಬರ್ 11, 12, 13ರಂದು ಮೂರು ದಿನಗಳ ಕಾಲ ರಾಮನಗರ ನಗರ ಪ್ರದೇಶಗಳಿಗೆ ನೀರು ಸರಬರಾಜು ಮಾಡದಿರಲು ನಿರ್ಧರಿಸಲಾಗಿದೆ.

    ಈಗಾಗಲೇ 5 ದಿನಗಳಿಗೊಮ್ಮೆ ಇಲ್ಲವೇ ವಾರಕ್ಕೊಮ್ಮೆ, 10 ಕಾವೇರಿ ನೀರನ್ನು ರಾಮನಗರದಲ್ಲಿ ಸರಬರಾಜು ಮಾಡುತ್ತಿದ್ದರೆ, ಚನ್ನಪಟ್ಟಣದಲ್ಲಿ ಎರಡು- ಮೂರು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಇದೀಗ ಪೈಪ್ ಲೈನ್ ದುರಸ್ಥಿಯಿಂದ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ.

  • ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ – ಬೇಕಾಬಿಟ್ಟಿ ಗುಂಡಿ ಅಗೆದು ಅವಾಂತರ

    ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ – ಬೇಕಾಬಿಟ್ಟಿ ಗುಂಡಿ ಅಗೆದು ಅವಾಂತರ

    ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಒಂದು ಕಾಲುವೆ ತೆಗೆಯಲಾಗಿದೆ. ಈ ಕಾಲುವೆಯನ್ನು ನೋಡಿದ ತಕ್ಷಣ ಇಲ್ಲಿ ಕಾವೇರಿ ನೀರು ಬರುತ್ತಾ ಎಂದು ಪ್ರಶ್ನೆಹುಟ್ಟುತ್ತದೆ. ಆದರೆ ಖಂಡಿತ ಇದು ನೀರು ಹರಿಸೋ ಕಾಲುವೆಯಲ್ಲ ಬದಲಿಗೆ ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ.

    ಹೌದು. ಈ ಕಾಲುವೆ ನೋಡಿ ಯಾವುದೋ ಕಾವೇರಿ ನದಿಯನ್ನ ಬೆಂಗಳೂರಿಗೆ ಹರಿಸೋಕೆ ಅಗೆದಿದ್ದಾರೆ ಅಂತ ಜನರು ಅಂದುಕೊಳ್ಳುತ್ತಾರೆ. ಆದರೆ ಇದು ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ. ಬೇಕಾಬಿಟ್ಟಿ ಮಣ್ಣನ್ನು ಅಗೆದು ಕಂಠೀರವ ಕ್ರೀಡಾಂಗಣದಿಂದ ಬಿಬಿಎಂಪಿಗೆ ಹೋಗೋ ಮುಖ್ಯ ರಸ್ತೆಯಲ್ಲಿ ಅವಾಂತರ ಸೃಷ್ಟಿಸಿಟ್ಟಿದ್ದಾರೆ. ಅವೈಜ್ಞಾನಿಕವಾಗಿ ಪೈಪ್ ಅಳವಡಿಕೆ ಮಾಡಲು, ಜೆಸಿಬಿ ಮೂಲಕ ಮಣ್ಣನ್ನು ಅಗೆಸಿ ಕಾಲುವೆಯನ್ನಾಗಿಸಿದ್ದಾರೆ. ಕೆಲಸ ಮುಗಿದ ಬಳಿಕ ಸೋಲಾರ್, ವಿದ್ಯುತ್ ಪೋಲ್‍ಗಳನ್ನು ತೆರವುಗೊಳಿಸದೇ ಕಸ ಬಿಸಾಡುವ ರೀತಿ ಅದನ್ನು ಹಾಗೆಯೇ ಬಿಟ್ಟು ಬಿಬಿಎಂಪಿ ಬೇಜವಾಬ್ದಾರಿ ಮೆರೆದಿದೆ.

    ಇತ್ತ ಬೆಂಗಳೂರಿನಲ್ಲಿ ಮಳೆಗಾಲದಂತೆ ಬೇಸಿಗೆಯಲ್ಲೂ ಮರಗಳು ದರೆಗೆ ಉರುಳುತ್ತಿವೆ. ಈ ರೀತಿ ಅವೈಜ್ಞಾನಿಕವಾಗಿ ಗುಂಡಿ ತೆಗೆದಿರುವುದರಿಂದ ಬೇರುಗಳು ಮರದ ಜೊತೆಗಿನ ಸಂಬಂಧವನ್ನೇ ಕಳೆದುಕೊಳ್ಳುತ್ತಿವೆ. ಹೀಗಾಗಿ ಮರ ಧರೆಗುರುಳುತ್ತಿವೆ ಎಂದು ವೃಕ್ಷ ತಜ್ಞರು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್ ಅವರು, ಸಂಬಂಧಪಟ್ಟ ಅಧಿಕಾರಿಯ ಜೊತೆ ಈ ಬಗ್ಗೆ ಮಾತನಾಡಿ ಸರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಪೈಪ್‍ಲೈನ್ ಹಾಕಲು ಬೇಕಾಬಿಟ್ಟಿ ಮಣ್ಣು ಅಗೆದು ಗುಂಡಿಗಳನ್ನು ಕಾಲುವೆ ರೀತಿ ತೆಗೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ನೀರಿನ ಪೈಪ್‍ ಲೈನ್ ಅಳವಡಿಸುವ ವಿಷಯದಲ್ಲಿ ಗುಂಪು ಘರ್ಷಣೆ – 5 ಮಹಿಳೆಯರು ಸೇರಿ 8 ಮಂದಿಗೆ ಗಾಯ

    ನೀರಿನ ಪೈಪ್‍ ಲೈನ್ ಅಳವಡಿಸುವ ವಿಷಯದಲ್ಲಿ ಗುಂಪು ಘರ್ಷಣೆ – 5 ಮಹಿಳೆಯರು ಸೇರಿ 8 ಮಂದಿಗೆ ಗಾಯ

    ಕೋಲಾರ: ನೀರಿನ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ.

    ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಬಳಿ ನೀರಿನ ಪೈಪ್ ಲೈನ್ ಹಾಕುವ ವಿಚಾರದಲ್ಲಿ ಪರಸ್ಪರ ಪೈಪ್ ಗಳಿಂದ ಹಲ್ಲೆ ಮಾಡಿಕೊಂಡಿರುವ ಎರಡು ಗುಂಪಿನವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶಂಕರಪ್ಪ ಮತ್ತು ಗಂಗಾಧರ ಎಂಬ 2 ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ. ಗಂಗಾಧರ ಗುಂಪಿನ ಐವರು ಮಹಿಳೆಯರು ಸೇರಿದಂತೆ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಸದ್ಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರ ವಿರೋಧ ಪ್ರಕರಣ ದಾಖಲಾಗಿದೆ.

  • ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಘರ್ಷಣೆ- ಐವರಿಗೆ ಗಾಯ

    ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಘರ್ಷಣೆ- ಐವರಿಗೆ ಗಾಯ

    ಕೋಲಾರ: ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಐದು ಜನರಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸಮೀಪದ ಕದಿರೇನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಹಾಗೂ ಕುಟುಂಬಸ್ಥರು ಶೌಚಾಲಯ ನೀರನ್ನು ಮನೆ ಮುಂದೆ ಬಿಡಲಾಗುತ್ತಿದೆ ಎಂದು ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ.

    ಅಪ್ಪಿರೆಡ್ಡಿ, ಶ್ರೀರಾಮಪ್ಪ, ಬಾಲ, ಆನಂದ, ಶ್ರೀರಾಮಪ್ಪ ಎಂಬವರು ದಲಿತ ಕುಟುಂಬದ ಗೌರಮ್ಮ, ನಾಗವೇಣಿ, ಮಲ್ಲಿಕಾ, ಮಹೇಶ್ ಹಾಗೂ ಶ್ರೀನಿವಾಸ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಗ್ರಾಮದಲ್ಲಿ ಒಂದು ಡಿಎಅರ್ ತುಕಡಿ ಸೇರಿದಂತೆ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.