Tag: pink hoysala

  • ಕರ್ತವ್ಯದಲ್ಲಿದ್ದ ಪಿಂಕ್ ಹೊಯ್ಸಳ ಮಹಿಳಾ ಸಿಬ್ಬಂದಿಗೆ ಡಾರ್ಲಿಂಗ್ ಎಂದು ಮೈ,ಕೈ ಮುಟ್ಟಿದ್ರು!

    ಕರ್ತವ್ಯದಲ್ಲಿದ್ದ ಪಿಂಕ್ ಹೊಯ್ಸಳ ಮಹಿಳಾ ಸಿಬ್ಬಂದಿಗೆ ಡಾರ್ಲಿಂಗ್ ಎಂದು ಮೈ,ಕೈ ಮುಟ್ಟಿದ್ರು!

    ಬೆಂಗಳೂರು: ಮಹಿಳೆಯರ ರಕ್ಷಣೆಗೆಂದೇ ಸರ್ಕಾರ ಆರಂಭಿಸಿರೋ ಪಿಂಕ್ ಹೊಯ್ಸಳ ಮಹಿಳಾ ಸಿಬ್ಬಂದಿಗೆ ನಗರದಲ್ಲಿ ಕಿರುಕುಳ ನೀಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಈ ಘಟನೆ ಸೋಮವಾರ ತಡರಾತ್ರಿ ಸುಮಾರು 1.15ಕ್ಕೆ ನಡೆದಿದೆ. ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರುವ ಮೂಲಕ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಸಭ್ಯವಾಗಿ ವರ್ತಿಸಿದವರನ್ನು ರೋಹಿತ್ ಮತ್ತು ವೈಭವ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮತ್ತಿಕೆರೆ ನಿವಾಸಿಗಳು ಎಂದು ತಿಳಿದುಬಂದಿದೆ.

    ಸೋಮವಾರ ಪಬ್ ಅಲ್ಲಿ ಕಂಠಪೂರ್ತಿ ಕುಡಿದು ಹೊರ ಬಂದಿದ್ದ ಆರೋಪಿಗಳು, ಬಳಿಕ ಹೊರಗೆ ವಿನಾಯಕ ಸರ್ಕಲ್ ಬಳಿ ಇದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಹೊಯ್ಸಳ ವಾಹನದ ಒಳಗೆ ಕೈ ಹಾಕಿ ಸಿಬ್ಬಂದಿಯನ್ನು ಡಾರ್ಲಿಂಗ್ ಎಂದು ಕರೆದು ಎಳೆಯಲು ಪ್ರಯತ್ನಿಸಿದ್ದಾನೆ. ಮತ್ತೊರ್ವ ಆರೋಪಿ ಹಿಂದಿನ ಹೊಯ್ಸಳ ವಾಹನದ ಡೋರ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಕರ್ತವ್ಯದಲ್ಲಿದ್ದ ಮಂಜಣ್ಣ ಎಂಬವರಿಗೆ ಅವಾಜ್ ಹಾಕಿದ್ದಾರೆ.

    ಪೊಲೀಸ್ ಆದ್ರೆ ಏನು ನಿಮ್ಮನ್ನ ಬಿಡಲ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಕುರಿತು ಮಂಜಣ್ಣ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಂತೆ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಘಟನೆ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಿನಲ್ಲಿ ಇಂದಿನಿಂದ ಮಹಿಳೆಯರ ಸುರಕ್ಷತೆಗಾಗಿ `ಪಿಂಕ್ ಹೊಯ್ಸಳ’

    ಬೆಂಗ್ಳೂರಿನಲ್ಲಿ ಇಂದಿನಿಂದ ಮಹಿಳೆಯರ ಸುರಕ್ಷತೆಗಾಗಿ `ಪಿಂಕ್ ಹೊಯ್ಸಳ’

    ಬೆಂಗಳೂರು: ನಗರದಲ್ಲಿ ಇಂದಿನಿಂದ ಹೊಸ ಗಸ್ತು ವಾಹನಗಳು ರಸ್ತೆಗಿಳಿದಿವೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 51 ಪಿಂಕ್ ಹೊಯ್ಸಳ ವಾಹನಗಳು ಸೇವೆಗೆ ಲಭ್ಯವಾಗಿವೆ.

    ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನವನ್ನು ಆ್ಯಪ್ ಮೂಲಕ ಮಹಿಳೆಯರು ತಮ್ಮ ಬಳಿ ಬರಮಾಡಿಕೊಳ್ಳಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಈ `ಸುರಕ್ಷ ಆ್ಯಪ್’ ಲೋಕಾರ್ಪಣೆ ಮಾಡಿದ್ದಾರೆ.

    ಬಳಿಕ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ ಒಟ್ಟು 272 ಹೊಯ್ಸಳ ವಾಹನಗಳು ಕಾರ್ಯಾಚರಣೆ ಮಾಡಲಿವೆ. ವಾಹನಗಳನ್ನು ಕೊಟ್ಟ ತಕ್ಷಣ ಉದ್ದೇಶ ಸಫಲವಾಗದು. ಆದ್ರೆ ಅಪರಾಧಗಳನ್ನು ತಡೆದಾಗ ಸಫಲವಾಗುತ್ತದೆ ಅಂತಾ ಹೇಳಿದ್ರು.

    ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ರೋಷನ್ ಬೇಗ್, ಮಾಜಿ ಸಚಿವ ದಿನೇಶ್ ಗುಂಡುರಾವ್, ಸಿಎಸ್ ಸುಭಾಷ್ ಚಂದ್ರ ಕುಂಟಿ, ಡಿಜಿ ಐಜಿ ಆರ್‍ಕೆ ದತ್ತಾ ಭಾಗಿಯಾಗಿದ್ದರು.

    ಸೇವೆ ಹೇಗೆ?: ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನದ ಸೇವೆ ಪಡೆಯಲು ಮೊದಲು `ಸುರಕ್ಷ’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ವಾಹನದ ಅಗತ್ಯ ಬಿದ್ದಲ್ಲಿ ಆ್ಯಪ್‍ನಲ್ಲಿರೋ ಬಟನ್ ಒತ್ತಬೇಕು. ಈ ರೀತಿ ಮಾಡಿದ 15 ನಿಮಿಷದಲ್ಲಿ ಪಿಂಕ್ ಹೊಯ್ಸಳ ಸ್ಥಳಕ್ಕೆ ಬರಲಿದೆ. ಪ್ರತಿ ವಾಹನದಲ್ಲಿ ಮೂರು ಮಹಿಳಾ ಪೊಲೀಸರು ಇರುತ್ತಾರೆ. ಶಾಲೆ, ಮಹಿಳಾ ಕಾಲೇಜುಗಳು, ಆಫೀಸ್‍ಗಳು, ದೇವಸ್ಥಾನ, ಶಾಪಿಂಗ್ ಮಾಲ್, ಚಿತ್ರಮಂದಿರಗಳ ಬಳಿ ಈ ವಾಹನಗಳನ್ನ ನಿಯೋಜಿಸಲಾಗಿರುತ್ತದೆ. ವಿಶೇಷ ತರಬೇತಿ ಪಡೆದ ಸಿಬ್ಬಂದಿ, ಪೊಲೀಸ್ ಕಂಟ್ರೋಲ್ ರೂಮ್ 100 ಹಾಗೂ ಸುರಕ್ಷ ಆ್ಯಪ್ ಮೂಲಕ ಸ್ವೀಕರಿಸಿದ ದೂರಿನ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮಿಗೆ ಯಾವುದಾದ್ರೂ ದೂರು ಬಂದ್ರೆ ಆ ಸ್ಥಳಕ್ಕೆ ಹತ್ತಿರವಿರುವ ಹೊಯ್ಸಳ ವಾಹನಕ್ಕೆ ಮಾಹಿತಿ ನೀಡಿ ಅಲ್ಲಿಗೆ ಹೋಗುವಂತೆ ಸೂಚಿಸಲಾಗುತ್ತದೆ. ಹೊಯ್ಸಳದಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಕ್ಯಾಮೆರಾ ದೃಶ್ಯಾವಳಿಗಳನ್ನ ಪೊಲೀಸ್ ಕಂಟ್ರೋಲ್ ರೂಮಿನ ಸಿಬ್ಬಂದಿ ನಿರ್ವಹಣೆ ಮಾಡ್ತಾರೆ.

    ಈ ಹಿಂದೆ ಮಹಿಳೆಯರಿಗೆ ಸಂಬಂಧಿಸಿದ ತಂದರೆಗಳಿಗೆ ಸ್ಪಂದಿಸಲು ನಗರದ ಪೊಲೀಸರ ಬಳಿ 7 ಅಭಯ ವಾಹನಗಳು ಇದ್ದವು. ಇದೀಗ ಅಭಯ ವಾಹನಗಳ ಬದಲಾಗಿ ಪಿಂಕ್ ಹೊಯ್ಸಳ ವಾಹನಗಳು ಕಾರ್ಯ ನಿರ್ವಹಿಸಲಿವೆ.