Tag: picture

  • ಕ್ರಿಕೆಟಿಗೆ ಟ್ಯಾಲೆಂಟ್ ಮುಖ್ಯವೇ ಹೊರತು ಬಾಡಿ ಅಲ್ಲ: ಟ್ರೋಲಾದ ವಿಜಯ್ ಶಂಕರ್

    ಕ್ರಿಕೆಟಿಗೆ ಟ್ಯಾಲೆಂಟ್ ಮುಖ್ಯವೇ ಹೊರತು ಬಾಡಿ ಅಲ್ಲ: ಟ್ರೋಲಾದ ವಿಜಯ್ ಶಂಕರ್

    ನವದೆಹಲಿ: ಕ್ರಿಕೆಟ್‍ಗೆ ಟ್ಯಾಲೆಂಟ್ ಮುಖ್ಯವೇ ಹೊರತು ಬಾಡಿ ಮುಖ್ಯವಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟರ್ ವಿಜಯ್ ಶಂಕರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

    28 ವರ್ಷದ ವಿಜಯ್ ಶಂಕರ್ ತಮ್ಮ ಬಾಡಿ ಬಿಲ್ಡ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಶಂಕರ್ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಅವರ ಹಳೆಯ ನೋಟವು ಕಂಡುಬಂದರೆ, ಇನ್ನೊಂದರಲ್ಲಿ ಶರ್ಟ್ ಹಾಕದೆ ದೇಹವನ್ನು ತೋರಿಸಿದ್ದಾರೆ. ಈ ಫೋಟೋಗಳನ್ನು ನೋಡಿ, ಕೆಲವು ಕ್ರಿಕೆಟಿಗರು ಅವರನ್ನು ಹೊಗಳಿದರೆ, ಕೆಲ ನೆಟ್ಟಿಗರು ತಮ್ಮದೆ ಶೈಲಿಯಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

    “ಬೆವರು, ಸಮಯ ಮತ್ತು ತಪಸ್ಸು ಅವು ಖಂಡಿತವಾಗಿಯೂ ಫಲಿತಾಂಶವನ್ನು ನೀಡುತ್ತವೆ. ಮಂಗಳವಾರದ ಬದಲಾವಣೆ” ಎಂದು ವಿಜಯ್ ಶಂಕರ್ ತಮ್ಮ ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಜಯ್ ಶಂಕರ್ ಫೋಟೋಗಳಿಗೆ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಅವರು ಪ್ರತಿಕ್ರಿಯಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭುವನೇಶ್ವರ್ ಕುಮಾರ್ ಬಾಡಿ ಬಿಲ್ಡಿಂಗ್ ಫೋಟೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದರು. ಆದರೆ ಈಗ ವಿಜಯ್ ಶಂಕರ್ ಅವರನ್ನು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.

    ಯುವ ಪೀಳಿಗೆಗೆ ಜಿಮ್ ತರಬೇತಿಯನ್ನು ಪ್ರಾರಂಭಿಸಲು ಈಗ ನೀವು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೀರಿ ಎಂದು ಪ್ರಭಾತ್ ನಿಗಮ್ ವ್ಯಂಗ್ಯವಾಡಿದ್ದಾರೆ. ಮೋನಿಷಾ ಉದಯ್ ರಿಟ್ವೀಟ್ ಮಾಡಿ, ಮುಂದಿನ ಕಾಲಿವುಡ್ ನಾಯಕ ಎಂದು ಕಾಲೆಳೆದಿದ್ದಾರೆ.

    ವಿಜಯ್ ಶಂಕರ್ ಟೀಂ ಇಂಡಿಯಾ ಪರ ಈವರೆಗೆ 12 ಏಕದಿನ ಮತ್ತು 9 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 31.85 ಸರಾಸರಿಯಲ್ಲಿ 223 ರನ್ ಗಳಿಸಿರುವ ಅವರು 4 ವಿಕೆಟ್ ಪಡೆದಿದ್ದಾರೆ. ಟಿ-20ಯಲ್ಲಿ ಅವರು 25.25 ರ ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ ಮತ್ತು 5 ವಿಕೆಟ್ ಪಡೆದಿದ್ದಾರೆ.

    ಭಾರತದ 15 ಸದಸ್ಯರ ವಿಶ್ವಕಪ್ ತಂಡವನ್ನು ಘೋಷಿಸುವ ಸಮಯದಲ್ಲಿ, ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಎಂ.ಎಸ್.ಕೆ ಪ್ರಸಾದ್, “ಮೂರು ಆಯಾಮದ ಕೌಶಲ್ಯಗಳನ್ನು” ಉಲ್ಲೇಖಿಸಿ ತಂಡದಲ್ಲಿ ಶಂಕರ್ ಸ್ಥಾನವನ್ನು ಸಮರ್ಥಿಸಿಕೊಂಡಿದ್ದರು.

    ಶಂಕರ್ ಆಯ್ಕೆಯಿಂದಾಗಿ ಕಡೆಗಣಿಸಲ್ಪಟ್ಟಿದ್ದ ಅಂಬಾಟಿ ರಾಯುಡು, ವಿಶ್ವಕಪ್ ವೀಕ್ಷಿಸಲು 3ಡಿ ಗ್ಲಾಸ್ ಖರೀದಿಸುತ್ತಿರುವೆ ಎಂದು ಟ್ವೀಟ್ ಮಾಡಿದ್ದರು. 2019ರ ವಿಶ್ವಕಪ್ ಟೂರ್ನಿಯಲ್ಲಿ ವಿಜಯ್ ಶಂಕರ್ ವಿಂಡೀಸ್ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ನಂತರ ಹೆಬ್ಬೆರೆಳಿನ ಗಾಯದಿಂದಾಗಿ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದರು.

  • ರಸ್ತೆ ಮಧ್ಯೆ ಗುಂಡಿಯಿಂದ ಹೊರಬಂದ ಹೆಬ್ಬಾವು!

    ರಸ್ತೆ ಮಧ್ಯೆ ಗುಂಡಿಯಿಂದ ಹೊರಬಂದ ಹೆಬ್ಬಾವು!

    ಮೈಸೂರು: ರಸ್ತೆ ಮಧ್ಯೆ ನಿರ್ಮಾಣವಾಗಿದ್ದ ಗುಂಡಿ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಕಲಾವಿದರೊಬ್ಬರು ಹೆಬ್ಬಾವಿನ ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದ್ದಾರೆ.

    ನಗರದ ಸಿದ್ದಪ್ಪ ವೃತ್ತದ ಬಳಿ ಹಲವಾರು ದಿನಗಳಿಂದ ರಸ್ತೆ ಮಧ್ಯೆ ಬಾಯಿ ತೆರೆದಿದ್ದ ಹಳ್ಳದ ಕುರಿತು ಯಾವುದೇ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ. ರಸ್ತೆ ಮಧ್ಯೆ ಇದ್ದ ಗುಂಡಿಯಿಂದ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಕಂಡ ಕಲಾವಿದ ಬಾದಲ್ ತಮ್ಮ ಕೈಚಳಕದಿಂದ ಎಲ್ಲರ ಗಮನ ಸೆಳೆಯುವಂತೆ ಮಾಡಲು ಯಶಸ್ವಿಯಾಗಿದ್ದಾರೆ.

    ಕಲಾವಿದ ಬಾದಲ್ ರಸ್ತೆ ಮಧ್ಯೆಯ ಗುಂಡಿಯ ಸುತ್ತಲು ಮರದ ಕೊಂಬೆಗಳನ್ನ ಇಟ್ಟು ಮಧ್ಯಭಾಗದಲ್ಲಿ ಹೆಬ್ಬಾವು ಹೊರಬರುತ್ತಿರುವಂತೆ ಸೃಷ್ಟಿಸಿದ್ದಾರೆ. ಬಾದಲ್ ಈ ಚಿತ್ರ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾದಲ್ ರ ಕೈಚಳಕದ ಫೋಟೋ ವೈರಲ್ ಆಗುತ್ತಿದಂತೆ ಎಚ್ಚೆತ್ತ ಟ್ರಾಫಿಕ್ ಪೊಲೀಸರು ರಸ್ತೆ ಮಧ್ಯೆ ಬ್ಯಾರಿಕೇಡ್ ಇರಿಸಿದ್ದಾರೆ.

    ನಗರದ ಪ್ರಮುಖ ರಸ್ತೆಯಾದರು ಕೂಡ ಅಪಾಯದಿಂದ ಕೂಡಿದ್ದ ಗುಂಡಿಯನ್ನು ಮುಚ್ಚಲು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳು ಬಾದಲ್‍ರ ಈ ಎಚ್ಚರಿಕೆ ಕರೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಸದ್ಯ ಬಾದಲ್‍ರ ಈ ಕಾರ್ಯಕ್ಕೆ ಸಾಮಾಜಿಕ ಜಾತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv