Tag: Photographers

  • ಛಾಯಾಗ್ರಾಹಕ ಪುನೀಕ್ ಶೆಟ್ಟಿಯ ಕೈಚಳಕ – ನವದುರ್ಗೆಯಾದ ಬಂಟ್ವಾಳದ ಬಾಲಕಿ

    ಛಾಯಾಗ್ರಾಹಕ ಪುನೀಕ್ ಶೆಟ್ಟಿಯ ಕೈಚಳಕ – ನವದುರ್ಗೆಯಾದ ಬಂಟ್ವಾಳದ ಬಾಲಕಿ

    ಮಂಗಳೂರು: ನವರಾತ್ರಿ ಅಥವಾ ದಸರಾ ಬಂತೆಂದರೆ ಸಾಕು, ನಾನಾ ಬಗೆಯ ಸಂಭ್ರಮಗಳು ಕಳೆಗಟ್ಟುತ್ತವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ವಿವಿಧ ಬಗೆಯ ವೇಷಗಳಲ್ಲಿ ಮಿಂಚುವ ಟ್ರೆಂಡ್‍ನ್ನು ಕೂಡ ನಾವು ನೋಡುತ್ತಿದ್ದೇವೆ. ಇದೀಗ ಮಂಗಳೂರಿನಲ್ಲಿ ನವರಾತ್ರಿ ಸಂದರ್ಭದಲ್ಲಿ ಇಂತಹುದೇ ಒಂದು ಪ್ರಯತ್ನ ನಡೆದಿದೆ.

    ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಅದರ ಸೊಬಗು ಹೇಗಿರಬಹುದು? ಇಂತಹ ಒಂದು ಪರಿಕಲ್ಪನೆ ಮಂಗಳೂರಿನಲ್ಲಿ ಸಾಕಾರಗೊಂಡಿದೆ. ಇದಕ್ಕೆ ಸಾಕಾರ ನೀಡಿರುವುದು ಬಾಲಕಿ ವಿಷ್ಣುಪಿಯಾ ಮತ್ತು ಛಾಯಾಗ್ರಾಹಕ ಪುನೀಕ್ ಶೆಟ್ಟಿ.

    ವಿಷ್ಣುಪ್ರಿಯಾ ಎನ್ನುವ ಹೆಸರು ಕೇಳಿದೊಡನೆ ಆ ಮಗು ಭಗವಾನ್ ವಿಷ್ಣು ಆರಾಧಕರ ಕುಟುಂಬದಿಂದ ಬಂದಿರಬೇಕು ಎನ್ನುವ ಕಲ್ಪನೆ ಬರಬಹುದು. ಆದರೆ ಈ ಮಗುವಿಗೆ ವಿಷ್ಣುಪಿಯ ಎನ್ನುವ ಹೆಸರು ಬರಲು ಕಾರಣ ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಎಂದರೆ ನೀವು ನಂಬಲೇಬೇಕು.

    ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ ನೋಡಿ ಅದೇ ಹೆಸರಿನ “ಯಜಮಾನ ಉಪ್ಪಿನಕಾಯಿ” ಸಂಸ್ಥೆ ಮಾಡಿ ಹೆಸರಾದ ಬಂಟ್ವಾಳದ ವರದರಾಯ ಪೈಯವರ ಕತೆ ನಿಮಗೆ ತಿಳಿದಿರಬಹುದು. ಅವರ ಪುತ್ರಿಯೇ ಈ ವಿಷ್ಣುಪ್ರಿಯಾ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸೆಂಟ್ರಲ್ ಸ್ಕೂಲ್‍ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಗಿರುವ ಈಕೆ ಕೊಯಂಬತ್ತೂರಿನಲ್ಲಿ ನಡೆದ ಸ್ಪಲ್ ‘ಬಿ’ ಎನ್ನುವ ರಾಷ್ಟ್ರ ಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ 47ನೇ ರ್ಯಾಂಕ್ ಪಡೆದಿದ್ದಾಳೆ. ವೆಂಕಟಕೃಷ್ಣ ಭಟ್ ಅವರ ಬಳಿ ಕರ್ನಾಟಕ ಸಂಗೀತ ಮತ್ತು ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆಯ ಬಳಿಯಲ್ಲೇ ಇಲೆಕ್ಟ್ರಿಕಲ್ ಆರ್ಗನ್ ಕಲಿಯುತ್ತಿದ್ದಾಳೆ.

    ಇಂಥ ಮುದ್ದು ಕಂದನನ್ನು ಇರಿಸಿಕೊಂಡು ನವದುರ್ಗೆಯರ ರೂಪ ನೀಡಿ ನೋಡುವ ಆಕಾಂಕ್ಷೆ ಮಾತಾಪಿತರಲ್ಲಿ ಮೂಡಿದೆ. ಶ್ರದ್ದಾ ಅಶ್ವಿನ್ ಪ್ರಭು ಅವರು ನಡೆಸಿದ ನವದುರ್ಗೆಯರ ಮೇಕಪ್‍ಗೆ ಸ್ಥಿರಚಿತ್ರ ರೂಪ ನೀಡಲು ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ದೇಶಕರು ಕೂಡ ಆಗಿರುವ ಪುನೀಕ್ ಶೆಟ್ಟಿ, ಎರಡೇ ದಿನದಲ್ಲಿ ನವದುರ್ಗೆಯರ ರೂಪದಲ್ಲಿ ಮಗುವನ್ನು ಫೋಟೋಗಳಲ್ಲಿ ಚಿತ್ರಿಸಿದ್ದಾರೆ.

  • ಅಂದು ಕ್ಯಾಮೆರಾಮ್ಯಾನ್ ಇಂದು ಬೀದಿ ಬೀದಿಯಲ್ಲಿ ಹಣ್ಣು, ತರಕಾರಿ ಮಾರೋ ವ್ಯಾಪಾರಿ

    ಅಂದು ಕ್ಯಾಮೆರಾಮ್ಯಾನ್ ಇಂದು ಬೀದಿ ಬೀದಿಯಲ್ಲಿ ಹಣ್ಣು, ತರಕಾರಿ ಮಾರೋ ವ್ಯಾಪಾರಿ

    ಮಡಿಕೇರಿ: ಕೊರೊನಾ ವಿಶ್ವದಾದ್ಯಂತ ತಲ್ಲಣ ಮೂಡಿಸಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಈ ಪರಿಣಾಮ ಹಲವರ ಬದುಕು ಬೀದಿಗೆ ಬಂದಿದೆ. ವರ್ಷದಲ್ಲಿ 6 ತಿಂಗಳು ಮದುವೆ, ನಾಮಕರಣ, ಪ್ರೀವೆಡ್ಡಿಂಗ್ ಶೂಟ್ ಹೀಗೆ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಛಾಯಾಗ್ರಾಹಕರ ಕುಟುಂಬಗಳಿಗೆ ಕೊರೊನಾ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ.

    ಇದಕ್ಕೆ ಕೊಡಗು ಜಿಲ್ಲೆಯ ಛಾಯಾಗ್ರಾಹಕರು ಹೊರತಾಗಿಲ್ಲ. ಏಕಾಏಕಿ ದೇಶದಾದ್ಯಂತ ಲಾಕ್‍ಡೌನ್ ಘೊಷಿಸಿದ್ದರಿಂದ ಯಾವುದೇ ಮದುವೆ ಹಾಗೂ ಶುಭ ಸಮಾರಂಭಗಳು ನಡೆಯುತ್ತಿಲ್ಲ, ಎಲ್ಲವೂ ರದ್ದಾಗಿವೆ. ಆದ್ದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದೆ ವ್ಯವಹಾರ ಇಲ್ಲದಂತಾಗಿದ್ದು, 300ಕ್ಕೂ ಹೆಚ್ಚು ಛಾಯಾಗ್ರಾಹಕ ಕುಟುಂಬಗಳು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸ್ಟುಡಿಯೋ ಆರಂಭಿಸಿದ್ದವರ ಬದುಕು ಲಾಕ್‍ಡೌನ್‍ನಿಂದ ಅತಂತ್ರವಾಗಿದೆ.

    ಛಾಯಾಗ್ರಹಕ ವೃತ್ತಿಯಲ್ಲಿ ಇದೀಗ ಕೆಲಸ ಇಲ್ಲದೆ ಕೆಲವರು ಬದುಕಿನ ಬಂಡಿ ಎಳೆಯಲು ಬೇರೆ ದಾರಿ ಕಾಣದೆ, ನಗರಗಳು ಹಾಗೂ ಹಳ್ಳಿ, ಹಳ್ಳಿಗಳಿಗೆ ಹೋಗಿ ಹಣ್ಣು-ತರಕಾರಿ ಮಾರಾಟ ಮಾಡುತ್ತಿರುವುದು ಮನಕಲಕುವಂತಿದೆ. ಕ್ಯಾಮರಾ ಹಿಡಿದು ಬೇರೆಯವರ ಜೀವನದ ಸಂತೋಷದ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದವರ ಜೀವನ ಇದೀಗ ತೀರ ಸಂಕಷ್ಟದಲ್ಲಿ ಇದೆ. ಹೀಗಾಗಿ ಛಾಯಾಗ್ರಾಹಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

  • ಬೈಕ್ ಸಮೇತ 5 ಅಡಿ ಆಳದ ಗುಂಡಿಗೆ ಬಿದ್ದ ಇಬ್ಬರು ಫೋಟೋಗ್ರಾಫರ್!

    ಬೈಕ್ ಸಮೇತ 5 ಅಡಿ ಆಳದ ಗುಂಡಿಗೆ ಬಿದ್ದ ಇಬ್ಬರು ಫೋಟೋಗ್ರಾಫರ್!

    ರಾಯಚೂರು: ಪುರಸಭೆಯ ಕಾರ್ಯಕರ್ತರ ನಿರ್ಲಕ್ಷ್ಯದಿಂದ ಪತ್ರಿಕಾ ಛಾಯಾಗ್ರಾಹಕರಿಬ್ಬರು ಬೈಕ್ ಸಮೇತ ನೀರಿನ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಜಿಲ್ಲೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದಿದೆ.

    ಛಾಯಾಗ್ರಾಹಕರಾದ ಗಯಾಸ್ ಹಾಗೂ ಶೇಕ್ ಬಾಬಾ ಗಾಯಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾ, ಲಾಪ್ ಟಾಪ್, ಪೆನ್‍ಡ್ರೈವ್ ಮತ್ತು ಮೊಬೈಲ್ ಹಾಳಾಗಿವೆ.

    ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಶಾಲಾ ಆವರಣದಲ್ಲಿ ನಿಲ್ಲುತ್ತಿದ್ದ ಮಳೆ ನೀರಿನ ಸಂಗ್ರಹಕ್ಕೆ 5 ಅಡಿ ಆಳದ ಗುಂಡಿ ತೋಡಲಾಗಿತ್ತು. ಆದರೆ ಮಾನ್ವಿ ಪಟ್ಟಣದ ಪುರಸಭೆಯವರು ಅಕ್ಕ ಪಕ್ಕ ಯಾವುದೇ ರೀತಿಯ ಸೂಚನಾ ಫಲಕವನ್ನು ಹಾಕಿಲ್ಲ. ಹೀಗಾಗಿ ಶಾಲಾ ಗೇಟ್ ಪಕ್ಕದಲ್ಲೇ ಇರುವ ಗುಂಡಿಯ ಆಳ ತಿಳಿಯದೇ ಬಂದ ಛಾಯಾಗ್ರಾಹಕರು ಬೈಕ್ ಸಹಿತವಾಗಿ ಗುಂಡಿಯಲ್ಲಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲೇ ಗುಂಡಿಯನ್ನು ತೋಡಿ ಹಾಗೇ ಬಿಟ್ಟಿರುವುದು ದೊಡ್ಡ ಅನಾಹುತಗಳಿಗೆ ಆಹ್ವಾನದಂತಿವೆ.

    ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾನ್ವಿ ಪುರಸಭೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಛಾಯಾಗ್ರಾಹಕರು ಮುಂದಾಗಿದ್ದಾರೆ.