Tag: Phonepe

  • UPI Down | ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ – ಬ್ಯಾಂಕಿಂಗ್‌ ಸೇವೆಗಳ ಮೇಲೂ ಪರಿಣಾಮ

    UPI Down | ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ – ಬ್ಯಾಂಕಿಂಗ್‌ ಸೇವೆಗಳ ಮೇಲೂ ಪರಿಣಾಮ

    ನವದೆಹಲಿ: ದೇಶಾದ್ಯಂತ ಹಲವು ನಗರಗಳಲ್ಲಿಂದು ಯುಪಿಐ (UPI) ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

    ಗೂಗಲ್‌ಪೇ, ಫೋನ್‌ಪೇ (Phonepe), ಪೇಟಿಎಂ ಸೇರಿದಂತೆ ಹಲವಾರು ಯುಪಿಐ ಸಂಯೋಜಿತ ಅಪ್ಲಿಕೇಶನ್‌ಗಳಲ್ಲಿ ಏಕಕಾಲಕ್ಕೆ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರು ಬೇರೆಯವರಿಗೆ ಹಣ ಕಳುಹಿಸಲು ಸಾಧ್ಯವಾಗದೇ ಪರದಾಡಿದ್ದಾರೆ. ಯಾವ ಕಾರಣಕ್ಕೆ ಈ ಸಮಸ್ಯೆ ಎದುರಾಗಿದೆ ಎನ್ನುವುದು ತಿಳಿದು ಬಂದಿಲ್ಲ.

    ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌:
    ಶನಿವಾರ (ಇಂದು) ಮಧ್ಯಾಹ್ನ 12 ಗಂಟೆ ಸುಮಾರಿಗೆ ಏಕಕಾಲಕ್ಕೆ ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ಸಮಸ್ಯೆಯಾಗಿದೆ, ಡೌನ್‌ಡೆಕ್ಟರ್‌ ಕೂಡ ಇದನ್ನು ವರದಿ ಮಾಡಿದೆ. ಕ್ಯೂಆರ್‌ ಕೋಡ್‌ (QR Code) ಸ್ಕ್ಯಾನ್‌ ಮಾಡಿದ ಗ್ರಾಹಕರು 5 ನಿಮಿಷವಾದ್ರೂ ಪೂರ್ಣಗೊಳ್ಳದೇ ಇರುವುದು ಕಂಡುಬಂದಾಗ ಸಮ್ಯಸ್ಯೆಯಾಗಿರುವುದು ಗೊತ್ತಾಗಿದೆ. ಬಳಿಕ ಬಹಳಷ್ಟು ಮಂದಿ ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಹಾಕಿದ್ದಾರೆ. #upidown ಎನ್ನುವ ಹ್ಯಾಶ್‌ಟ್ಯಾಗ್‌ನೊಂದಿಗೆ ಎಕ್ಸ್‌ ಖಾತೆಯಲ್ಲಿ ಸ್ಕ್ರೀನ್‌ಶಾಟ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಇದು ಸಮಸ್ಯೆಯಾದ ಕೆಲವೇ ನಿಮಿಷಗಳಲ್ಲಿ ಟ್ರೆಂಡಿಂಗ್‌ ಆಗಿದೆ.

    ಬ್ಯಾಂಕಿಂಗ್‌ ಸೇವೆಗಳಲ್ಲೂ ವ್ಯತ್ಯಯ:
    SBI, Google Pay, HDFC ಬ್ಯಾಂಕ್ ಮತ್ತು ICICI ಬ್ಯಾಂಕಿಂಗ್‌ನ UPI ಸೇವೆಗಳ ಮೇಲೂ ಪರಿಣಾಮ ಬೀರಿದೆ ಎಂದು ಡೌನ್‌ಡೆಕ್ಟರ್ ತನ್ನ ಪೋರ್ಟಲ್‌ನಲ್ಲಿ ಮಾಹಿತಿ ನೀಡಿದೆ. UPI ಭಾರತದಲ್ಲಿ ಜನಪ್ರಿಯ ಸೇವೆಯಾಗಿದೆ, ಇದರ ಸಹಾಯದಿಂದ ಬಳಕೆದಾರರು ಟೀ ಅಂಗಡಿಗಳಿಂದ ರೈಲ್ವೇ ಟಿಕೆಟ್ ಬುಕಿಂಗ್ ವರೆಗೂ ಪಾವತಿ ಮಾಡ್ತಾರೆ. ಹೀಗಿರುವಾಗ ಸೇವೆ ಏಕಕಾಲಕ್ಕೆ ಸ್ಥಗಿತಗೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋದು ಸುಳ್ಳಲ್ಲ.

    ತಾಂತ್ರಿಕ ಸಮಸ್ಯೆ ಕಾರಣ: NPCI 
    ಇನ್ನೂ ಇದಕ್ಕೆ ಪ್ರತಿಕ್ರಿಯಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ, ಮಧ್ಯಂತರ ತಾಂತ್ರಿಕ ಸಮಸ್ಯೆಗಳಿಂದ ಯುಪಿಐ ವಹಿವಾಟಿನಲ್ಲಿ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದೆ.

  • ಫೋನ್ ಪೇ ಮೂಲಕ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

    ಫೋನ್ ಪೇ ಮೂಲಕ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

    ಬೆಳಗಾವಿ: ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್‌ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದವರು. ಬೆಳಗಾವಿಯ ನಿವಾಸಿ ರೋಹಿತ್ ರಾಜು ಎಂಬಾತ ಕಳೆದ ಮೂರು ವರ್ಷದಿಂದ ಸುನೀಲ್ ಶಿಂಧೆಯ ಪೆಟ್ರೋಲ್ ಬಂಕ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಲ್ಲಿ ಮಾಲೀಕರಿಗೆ 44 ಲಕ್ಷ ರೂ. ಹಣವನ್ನು ಫೋನ್ ಪೇ ಮೂಲಕ ವಂಚನೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು

    ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡುತ್ತಿದ್ದಾರೆ. ವ್ಯಾಪಾರಸ್ಥರಿಗೆ ಅಂತಾ ಮಾತ್ರ ಈ ಫೋನ್ ಪೇ ಆ್ಯಪ್ ನವರು ಫಂಡ್ ರಿಟರ್ನ್ ಅನ್ನೋ ಆಪ್ಷನ್ ಇಟ್ಟಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಅವರಿಗೆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ರೋಹಿತ್ ರಿಫಂಡ್ ಆಪ್ಷನ್ ಬಳಸಿಕೊಂಡು ನಿತ್ಯವೂ ತನ್ನ ನಂಬರ್‌ನಿಂದ ಪಂಪ್‍ನ ನಂಬರ್‌ಗೆ ಎಂಟು, ಹತ್ತು ಸಾವಿರ ಫೋನ್ ಪೇ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಾಸ್ ಆಗುವಾಗ ಪಂಪ್‍ನ ನಂಬರ್‌ನಿಂದ ಮತ್ತೆ ತನ್ನ ಅಕೌಂಟ್‍ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಂಡು ಕಳೆದ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ.ಹಣವನ್ನು ಎಗರಿಸಿದ್ದಾನೆ.

    ಇತ್ತ ದಿನೇ ದಿನೇ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ರೋಹಿತ್‍ನನ್ನು ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದ್ದು, ಈಗಾಗಲೇ ಆತನಿಂದ ಸುಮಾರು 28 ಲಕ್ಷ ರೂ.ಹಣವನ್ನು ವಸೂಲಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ