Tag: phone

  • ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

    ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಬರೋಬ್ಬರಿ ಒಂದು ತಿಂಗಳು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಶಾಸಕ ಗಣೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ನಾಪತ್ತೆಯಾಗಿ ವಿವಿಧ ಪ್ರದೇಶಗಳಿಗೆ ತೆರಳಿದ್ದ ಶಾಸಕ ಗಣೇಶ್ ಸದ್ಯ ಗುಜರಾತ್ ಸೋಮನಾಥ ದೇವಾಲಯದ ಬಳಿ ಬಂಧನವಾಗಿದ್ದಾರೆ.

    ಗಣೇಶ್ ಅವರ ಬಂಧನದ ಹಿಂದೆ ಹಲವು ಅನುಮಾನಗಳು ಮೂಡಿದ್ದು, ಇಷ್ಟು ದಿನ ಪೊಲೀಸರ ಕೈಗೆ ಸಿಗದೇ ಇದ್ದ ಗಣೇಶ್ ಬಂಧನ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಎದ್ದಿದೆ. ಬಿಡದಿ ಪೊಲೀಸರು 3 ತಂಡ ಮುಂಬೈ, ಅಂಡಮಾನ್, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣೇಶ್ ಅವರಿಗಾಗಿ ಹುಡುಕಾಟ ನಡೆಸಿತ್ತು.

    ಎಷ್ಟೇ ಹುಡುಕಾಟ ನಡೆಸಿದರೂ ಒಂದು ತಿಂಗಳಿನಿಂದ ಶಾಸಕ ಗಣೇಶ್ ಅವರು ಪತ್ತೆಯಾಗಿರಲಿಲ್ಲ. ಆದರೆ ಕಳೆದ ವಾರದ ಹಿಂದೆ ಗಣೇಶ್ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. ಈ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸ್ ತಂಡ ಬುಧವಾರ ಬೆಳಗ್ಗೆ 11.30ರ ವೇಳೆಗೆ ಶಾಸಕರನ್ನು ಬಂಧಿಸಿದೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಚ್ಚರಿ ಹೇಳಿಕೆ ಬಳಿಕ ಗಣೇಶ್ ಅವರ ಬಂಧನ ಆಗಿರುವುದು ಕೂಡ ಕುತೂಹಲ ಮೂಡಿಸಿದೆ. ರಮೇಶ್ ಅವರ ಬಳಗದಲ್ಲಿ ಗಣೇಶ್ ಅವರು ಕಾಣಿಸಿಕೊಂಡ ಕಾರಣದಿಂದ ಶಾಸಕ ಬಂಧನಕ್ಕೆ ಸರ್ಕಾರ ಮುಂದಾಯಿತೇ ಎಂಬ ಪ್ರಶ್ನೆಯೂ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿರುವ ಆನಂದ್ ಸಿಂಗ್ ಅವರು ಶಾಸಕ ಗಣೇಶ್ ಬಂಧನಕ್ಕೆ ಒತ್ತಡ ಹೇರಿದ್ದರು ಎನ್ನಲಾಗಿದೆ.

    ಗಣೇಶ್ ಬಂಧನ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಆನಂದ್ ಸಿಂಗ್ ಅವರ ಸಹೋದರ ಪ್ರವೀಣ್ ಸಿಂಗ್, ನಮಗೆ ಆಗಿರುವ ಅನ್ಯಾಯಕ್ಕೆ ಶಿಕ್ಷೆ ಆಗಬೇಕಿದೆ. ನ್ಯಾಯಾಂಗ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು. ಅಲ್ಲದೇ ಇದೇ ವೇಳೆ ಸಂಧಾನ ಕುರಿತ ಪ್ರಶ್ನೆಗೆ ಉತ್ತರಿಸಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಸಂಧಾನದ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಗಲ್ ಪ್ರೇಮಿಯ ಹುಚ್ಚಾಟ – ಹುಬ್ಬಳ್ಳಿ ಏರ್‌ಪೋರ್ಟ್ ಸಿಬ್ಬಂದಿ ಹೈರಾಣು

    ಪಾಗಲ್ ಪ್ರೇಮಿಯ ಹುಚ್ಚಾಟ – ಹುಬ್ಬಳ್ಳಿ ಏರ್‌ಪೋರ್ಟ್ ಸಿಬ್ಬಂದಿ ಹೈರಾಣು

    ಹುಬ್ಬಳ್ಳಿ: ಪೊಲೀಸರ ನಿರ್ಲಕ್ಷವೋ ಪಾಗಲ್ ಪ್ರೇಮಿಯ ಹುಚ್ಚಾಟವೋ ಗೊತ್ತಿಲ್ಲ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಯಾವುದೇ ಸಮಯದಲ್ಲಿ ದೊಡ್ಡ ಅಪಘಾತ ನಡೆಯಬಹುದು.

    ಹೌದು…ಗೋವಾ ಮೂಲದ ವ್ಯಕ್ತಿ ರಾಯ್ ಡಿಯಾಸ್ (26) ಎಂಬಾತ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದಿನಕ್ಕೆ ಸಾವಿರಾರು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾನೆ. ಕೇವಲ ಇಲ್ಲಿನ ಸಿಬ್ಬಂದಿಗೆ ಕರೆಗಳನ್ನು ಮಾಡಿದ್ದರೆ ಸುಮ್ಮನೆ ಇರಬಹುದು. ಆದರೆ ನಿಲ್ದಾಣದ ಮುಖ್ಯ ಮತ್ತು ಅತೀ ಸೂಕ್ಷ್ಮ ಪ್ರದೇಶವಾದ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‍ಗೂ ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ. ಕೇವಲ ಒಂದು ಎರಡು ಕರೆಗಳನ್ನು ಈತ ಮಾಡುತಿಲ್ಲ. ಬದಲಾಗಿ ನಿರಂತರವಾಗಿ ಬೇರೆ ಬೇರೆ ಇಂಟರ್ ನೆಟ್ ನಂಬರ್ ನಿಂದ ಕರೆ ಮಾಡುತ್ತಿದ್ದು, ಹೀಗಾಗಿ ಇಲ್ಲಿನ ಸಿಬ್ಬಂದಿಗೆ ಕೆಲಸ ಮಾಡಲೂ ಆಗುತ್ತಿಲ್ಲ.

    ಧಾರವಾಡ ಮೂಲದ ಯುವತಿಯೊಬ್ಬಳು ಗೋವಾ ಏರ್‌ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಗೋವಾ ಮೂಲದ ವ್ಯಕ್ತಿ ರಾಯ್ ಡಿಯಾಸ್ ಜೊತೆ ಸಂಬಂಧ ಇತ್ತು. ಆದರೆ ಕಾರಣಾಂತರ ಅವಳ ಜೊತೆ ಅವನ ಲವ್ ಬ್ರೇಕಪ್ ಆಗಿತ್ತು. ನಂತರ ಅವಳು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಆಗುತ್ತಾಳೆ. ಇತ್ತ ಪಾಗಲ್ ಪ್ರೇಮಿ ಗೋವಾ ತೊರೆದು ರಾಯ್ ಡಿಯಾಸ್ ದುಬೈಗೆ ಹೋಗುತ್ತಾನೆ. ಆಗಿನಿಂದ ಈ ಪಾಗಲ್ ಪ್ರೇಮಿ ಇಲ್ಲಿನ ಸಿಬ್ಬಂದಿ, ಮುಖ್ಯಸ್ಥರು ಸೇರಿದಂತೆ ಕಂಟ್ರೋಲ್ ರೂಮ್ ಗೆ ನಿರಂತರವಾಗಿ ಬೆದರಿಕೆಯ ಕರೆ ಮಾಡುತ್ತಿದ್ದಾನೆ. ಇಲ್ಲಿನ ಸಿಬ್ಬಂದಿ, ಕಂಟ್ರೋಲಿಂಗ್ ಆಫೀಸರ್ ನಂಬರ್ ಗಳನ್ನು ವೆಬ್‍ಸೈಟ್ ನಿಂದ ಪಡೆದು ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ.

    ಬೆದರಿಕೆ ಕರೆಯಿಂದ ರೋಸಿ ಹೋಗಿದ್ದ ನಿಲ್ದಾಣದ ಸಿಬ್ಬಂದಿ ಕಳೆದ ವರ್ಷ ಆಗಸ್ಟ್ ರಂದು ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿದ್ದಾರೆ. ಆದರು ಯಾವುದೇ ಪ್ರಯೋಜನ ಆಗಿಲ್ಲ. ಇವನ ಹುಚ್ಚಾಟದಿಂದ ಎಸ್ಟೋ ಸಲ ವಿಮಾನದ ಲ್ಯಾಂಡಿಂಗ್‍ನಲ್ಲೂ ತೊಂದರೆಗಳಾಗಿವೆ. ಇಲ್ಲಿ ಹೆಚ್ಚಾಗಿ ವಿವಿಐಪಿಗಳೇ ಬರುವುದರಿಂದ ಪೊಲೀಸರು ಅಲರ್ಟ್ ಆಗಬೇಕಿತ್ತು. ಆದರೆ ಪೊಲೀಸರು ಮಾತ್ರ ಕ್ಯಾರೆ ಅಂದಿಲ್ಲ. ಈಗಲಾದರೂ ಪೊಲೀಸರು ಎಚ್ಚೆತ್ತುಕೊಂಡರೆ ಒಳ್ಳೆಯದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮೇಶ್ ಜಾರಕಿಹೊಳಿ ಮಾತಿನಿಂದ ಮಾಜಿ ಸಿಎಂ ಗರಂ!

    ರಮೇಶ್ ಜಾರಕಿಹೊಳಿ ಮಾತಿನಿಂದ ಮಾಜಿ ಸಿಎಂ ಗರಂ!

    ಬೆಳಗಾವಿ: ಸರ್ ನಿಮ್ಮ ಜೊತೆ ಖುದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರ ಮಾತನಾಡಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿ ಫೋನ್ ಕಟ್ ಮಾಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

    ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅತೃಪ್ತ ಶಾಸಕರ ಸಂಧಾನಕ್ಕೆ ಗುರುವಾರ ಬೆಳಗಾವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿದ್ದರು. ಈ ವೇಳೆ ಮುಂಬೈನಲ್ಲಿದ್ದ ಅತೃಪ್ತ ಶಾಸಕರಿಗೆ ಕರೆ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ದು, ವಿಫಲವಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿ ಮಾತನಾಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಮಾತಿನಿಂದ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿವೆ.

    ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರು ಫೋನ್ ಮಾಡಿದಾಗ, ಸರ್ ನಿಮ್ಮ ಜೊತೆ ನಾನೇ ಖದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರಗಳನ್ನು ಮಾತನಾಡಬೇಕು. ಆದರೆ ಫೋನಿನಲ್ಲಿ ಮಾತನಾಡುವುದು ಬೇಡ ಎಂದು ಹೇಳಿ ತಕ್ಷಣ ಸಿದ್ದರಾಮಯ್ಯ ಅವರ ಕರೆಯನ್ನು ಕಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಸಿಟ್ಟಾದ ಸಿದ್ದರಾಮಯ್ಯ, ಏನಾದರೂ ಮಾಡಿಕೊಳ್ಳಲಿ ನಡೆಯಿರಿ ಎಂದು ಬೇಸರದಿಂದ ಬೆಳಗಾವಿ ವಿಮಾನ ನಿಲ್ದಾಣದ ಕಡೆ ಹೆಜ್ಜೆ ಹಾಕಿದರು ಎನ್ನುವ ವಿಚಾರ ತಿಳಿದು ಬಂದಿದೆ.

    ಇತ್ತ ನೀವು ಚುನಾವಣಾ ಸಿದ್ಧತೆ ಮಾಡಿಕೊಳ್ಳಿ. ನಾನು ಉಪ ಮುಖ್ಯಮಂತ್ರಿಯಾಗಿಯೇ ಗೋಕಾಕ್‍ಗೆ ಬರುತ್ತೇನೆ. ಮದ್ಯಂತರ ಚುನಾವಣೆಗೆ ಸಿದ್ಧವಾಗುತ್ತದೆ ಎಂದು ಆಪ್ತನಿಗೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್ ಫೋನಿಗಾಗಿ ಗಲಾಟೆ: ಪ್ರಿನ್ಸಿಪಾಲ್ ಮಗಳು ಆತ್ಮಹತ್ಯೆ

    ಮೊಬೈಲ್ ಫೋನಿಗಾಗಿ ಗಲಾಟೆ: ಪ್ರಿನ್ಸಿಪಾಲ್ ಮಗಳು ಆತ್ಮಹತ್ಯೆ

    ಹೈದರಾಬಾದ್: ಮೊಬೈಲ್ ಫೋನ್ ವಿಚಾರಕ್ಕೆ ನಡೆದ ಗಲಾಟೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ.

    ಸುಚಿತ್ರಾ(19) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಂಭಾಂ ದಾಮೋದರ್ ರೆಡ್ಡಿಯ ಹಿರಿಯ ಪುತ್ರಿಯಾಗಿದ್ದು, ಇವರು ಖಾಸಗಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಸುಚಿತ್ರಾ ಮತ್ತು ಆಕೆಯ ಸಹೋದರಿ ಹಾಸಿನಿ ಮೊಬೈಲ್ ಫೋನ್ ಗಾಗಿ ಜಗಳವಾಡುತ್ತಿದ್ದರು. ಬಳಿಕ ಅವರ ತಂದೆಯ ಇಬ್ಬರ ಜಗಳದಲ್ಲಿ ಮಧ್ಯಪ್ರವೇಶಿಸಿ, ಮೊಬೈಲ್ ಬಿಟ್ಟು ಪರೀಕ್ಷೆಗಳಿಗೆ ಓದಿಕೊಳ್ಳಿ ಎಂದು ಬೈದಿದ್ದಾರೆ. ಇದರಿಂದ ಸುಚಿತ್ರಾ ಬೇಸರಗೊಂಡಿದ್ದಳು.

    ಸುಚಿತ್ರಾ ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಟಿದ್ದು, ಭಾನುವಾರ ಬೆಳಿಗ್ಗೆ ಆಕೆಯ ಮೃತ ದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಮಗಾರಿ ವಿಳಂಬ: ಫೋನಿನಲ್ಲೇ ಅಧಿಕಾರಿಗೆ ತರಾಟೆ ತೆಗೆದುಕೊಂದ ಪ್ರಕಾಶ್ ಹುಕ್ಕೇರಿ

    ಕಾಮಗಾರಿ ವಿಳಂಬ: ಫೋನಿನಲ್ಲೇ ಅಧಿಕಾರಿಗೆ ತರಾಟೆ ತೆಗೆದುಕೊಂದ ಪ್ರಕಾಶ್ ಹುಕ್ಕೇರಿ

    ಚಿಕ್ಕೋಡಿ: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿ ವಿಳಂಬ ಆಗುತ್ತಿರುವ ಕಾರಣ ಕೆಆರ್‌ಡಿಸಿಎಲ್‌ (ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಮಗಮದ) ಎಂಡಿ ಅವರನ್ನು ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಅವರು ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ ಬಳಿ ನಿರ್ಮಾಣ ಮಾಡುತ್ತಿರುವ ಚಂದೂರ- ಸೈನಿಕ ಟಾಕಳಿ ಸಂಪರ್ಕ ಸೇತುವೆ ಕಾಮಗಾರಿ ನಡೆಯುತ್ತಿದ್ದು. ಇದರ ಪರಶೀಲನೆಗಾಗಿ ಸಂಸದ ಪ್ರಕಾಶ್ ಹುಕ್ಕೇರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು ವಿಳಂಬವಾಗಿದ್ದು ಕಂಡು ಬಂದಿದ್ದು, ತಕ್ಷಣವೇ ಎಂಡಿ ಅವರಿಗೆ ದೂರವಾಣಿ ಕರೆ ಮಾಡಿ ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೆಆರ್‌ಡಿಸಿಎಲ್‌ ದಿಂದ ನಿರ್ಮಾಣ ಮಾಡುತ್ತಿರುವ ಅಂತರಾಜ್ಯ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಮುಂಬರುವ ಮಾರ್ಚ್ ಒಳಗಾಗಿ ಸೇತುವೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು. ಒಂದು ವೇಳೆ ನಿಗದಿತ ಸಮಯದಲ್ಲಿ ಸೇತುವೆ ನಿರ್ಮಾಣ ಮಾಡದೆ ಹೋದರೆ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. 19 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಸೇತುವೆ ನಿರ್ಮಾಣ ಮಾಡಲು ವಿಳಂಬ ಮಾಡುತ್ತಿರುವದು ಏಕೆ ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಭೆ ನಡುವೆಯೇ ಡಿಸಿಎಂಗೆ ಫೋನ್ ಮಾಡಿ ಅಸಮಾಧಾನ ಹೊರಹಾಕಿದ ರೇವಣ್ಣ!

    ಸಭೆ ನಡುವೆಯೇ ಡಿಸಿಎಂಗೆ ಫೋನ್ ಮಾಡಿ ಅಸಮಾಧಾನ ಹೊರಹಾಕಿದ ರೇವಣ್ಣ!

    ತುಮಕೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮಾವತಿ ಸಲಹಾ ಸಮಿತಿ ಸಭೆ ನಡುವೆಯೇ ಸಮ್ಮಿಶ್ರ ಸರ್ಕಾರದ ಡಿಸಿಎಂ ಪರಮೇಶ್ವರ್ ಅವರಿಗೆ ಫೋನ್ ಮಾಡಿದ ಲೋಕೋಪಯೋಗಿ ಸಚಿವ ರೇವಣ್ಣ ತಮ್ಮ ಫೋನ್ ಕರೆಗೆ ಉತ್ತರಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಬರಬೇಕಾಗಿದ್ದ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರನ್ನು ಆಧಾರಿಸಿ ಪಬ್ಲಿಕ್ ಟಿವಿ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ತರಾತುರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆಗೆ ಹಾಜರಾಗುವಂತೆ ತಿಳಿಸಲು ಲೋಕೋಪಯೋಗಿ ಸಚಿವ ರೇವಣ್ಣ ಅವರು ಹಲವು ಬಾರಿ ಪರಮೇಶ್ವರ್ ಅವರಿಗೆ  ಕರೆ ಮಾಡಿದ್ದಾರೆ. ಆದರೆ ರೇವಣ್ಣ ಅವರ ಕರೆಗೆ ಡಿಸಿಎಂ ಉತ್ತರಿಸದೇ ಮುನಿಸಿಕೊಂಡಿದ್ದರು ಎನ್ನಲಾಗಿದೆ.

    ಕರೆ ಸ್ವೀಕರಿಸದ್ದಕ್ಕೆ ಅಸಮಾಧಾನಗೊಂಡ ರೇವಣ್ಣ ಅವರು ಇಂದು ಸಭೆಯ ನಡುವೆಯೇ ಪರಮೇಶ್ವರ್ ಅವರಿಗೆ ಕರೆ ಮಾಡಿ ಗಮನಸೆಳೆದರು. “ಅಣ್ಣಾ ನಾನು ನಿಮಗೆ ನಿನ್ನೆ ಮೂರ್ನಾಲ್ಕು ಬಾರಿ ಫೋನ್ ಮಾಡಿದ್ದೆ, ನೀವು ರಿಸೀವ್ ಮಾಡಲೇ ಇಲ್ಲ. ಬೇಕಾದರೆ ನಿಮ್ಮವರನ್ನು ಕೇಳಿ ನೋಡಿ” ಎಂದು ನಯವಾಗಿಯೇ ಅಸಮಾಧಾನ ಹೊರಹಾಕಿದರು.

    ಉಳಿದಂತೆ ಸಭೆಯಲ್ಲಿ ತುಮಕೂರಿಗೆ ನೀರಾವರಿ ವಿಚಾರದಲ್ಲಿ ಯಾವುದೇ ಅನ್ಯಾಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ರೇವಣ್ಣ ಅವರು, 24.5 ಟಿಎಂಸಿ ನೀರಿನಲ್ಲಿ ಈಗಾಗಲೇ 14 ಟಿಎಂಸಿ ನೀರು ಬಿಡಲಾಗಿದೆ. ಮುಂದೆಯೂ ನೀರು ಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಈ ವೇಳೆ ತಮ್ಮ ವಿರುದ್ಧ ಆರೋಪ ಮಾಡಿದ ಮಾಜಿ ಸಂಸದ ಜಿ.ಎಸ್. ಬಸವರಾಜು ಅವರನ್ನು ಲೇವಡಿ ಮಾಡಿದ್ದ ರೇವಣ್ಣ, ಇನ್ನು ಮುಂದೆ ಜಿ.ಎಸ್.ಬಸವರಾಜು ನೀರುಗಂಟಿಯಾಗಿ ಕೆಲಸ ಮಾಡಲಿ. ಅವರಿಗೆ ಡ್ಯಾಂ ಕೀ ಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಕ್ಷಿಣೆಯಾಗಿ ಬೈಕ್ ನೀಡದ್ದಕ್ಕೆ ಪತ್ನಿಗೆ ಫೋನ್ ಮಾಡಿ ತಲಾಖ್ ಕೊಟ್ಟ!

    ವರದಕ್ಷಿಣೆಯಾಗಿ ಬೈಕ್ ನೀಡದ್ದಕ್ಕೆ ಪತ್ನಿಗೆ ಫೋನ್ ಮಾಡಿ ತಲಾಖ್ ಕೊಟ್ಟ!

    ಲಕ್ನೋ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತ್ರಿವಳಿ ತಲಾಖ್ ನಿಷೇಧಿಸುವ ಸುಗ್ರೀವಾಜ್ಞೆಗೆ ಅಂಕಿತ ಹಾಕಿ ಒಂದು ತಿಂಗಳು ಕೂಡ ಕಳೆದಿಲ್ಲ. ಇದರ ಬೆನ್ನಲ್ಲೇ ವರದಕ್ಷಿಣೆ ನೀಡಲಿಲ್ಲ ಅಂತಾ ಪತಿಯೊಬ್ಬ ಫೋನ್ ಮಾಡಿ ಪತ್ನಿಗೆ ತಲಾಖ್ ನೀಡಿದ್ದಾನೆ.

    ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೌದಿ ಅರೆಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ, ಅಲ್ಲಿಂದಲೇ ಪತ್ನಿಗೆ ತಲಾಖ್ ನೀಡಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ವರದಕ್ಷಿಣೆ ನೀಡುವಂತೆ ಅಳಿಯನ ಸಂಬಂಧಿಕರು ನನ್ನ ಮಗಳಿಗೆ ಕಿರುಕುಳ ಕೊಟ್ಟಿದ್ದಾರೆ. ತಕ್ಷಣವೇ ಹಣ ನೀಡುವಂತೆ ಕೇಳಿದ್ದರು. ಮದುವೆಯ ಬಳಿಕ ಉದ್ಯೋಗಕ್ಕಾಗಿ ಅಳಿಯ ಸೌದಿ ಅರೆಬಿಯಾಕ್ಕೆ ತೆರಳಿದ್ದಾನೆ. ಈ ವೇಳೆ ವರದಕ್ಷಿಣೆ ನೀಡುವಂತೆ ಆತನ ಸಂಬಂಧಿಕರು ಮಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಹೀಗಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದೇವು ಎಂದು ಸಂತ್ರಸ್ತೆಯ ತಾಯಿ ರೇಷ್ಮಾ ತಿಳಿಸಿದ್ದಾರೆ.

    ನಮ್ಮಿಂದ ವರದಕ್ಷಿಣೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ ನಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಕೋಪಗೊಂಡ ಅಳಿಯ, ಸೌದಿ ಅರೆಬಿಯಾದಲ್ಲಿ ಇದ್ದುಕೊಂಡೇ ಮಗಳಿಗೆ ಫೋನ್ ಮಾಡಿ ತಲಾಖ್ ಹೇಳಿ ವಿಚ್ಛೇದನ ಹೇಳಿದ್ದಾನೆ ಎಂದು ಆರೋಪಿದ್ದಾರೆ.

    ವರದಕ್ಷಿಣೆ ಕೇಳಿದ್ದೇಷ್ಟು?
    8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಗ 50 ಸಾವಿರ ರೂ. ಹಾಗೂ ಒಂದು ಬೈಕ್ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ನಮ್ಮಿಂದ ಆತನ ಬೇಡಿಕೆಯನ್ನು ಈಡೇರಿಸಲು ಆಗಲಿಲ್ಲ. ಮದುವೆಯ ಬಳಿಕ ಪತಿ ಉದ್ಯೋಗಕ್ಕಾಗಿ ಸೌದಿ ಅರೆಬಿಯಾಗೆ ಹೋಗಿದ್ದ. ಈ ವೇಳೆ ಪತಿಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆ ನೂರಿ ಆರೋಪಿಸಿದ್ದಾರೆ.

    ಈ ಸಂಬಂಧ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಕಾಯ್ದೆ ಹಾಗೂ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹದ್ದೇ ಪ್ರಕರಣವೊಂದು ಹೈದರಾಬಾದ್‍ನಲ್ಲಿ ನಡೆದಿದ್ದು, ಪತಿ 62 ವರ್ಷದ ಪತಿಯೊಬ್ಬ ಹುಮ ಸೈರಾ (29) ಪತ್ನಿಗೆ ವಾಟ್ಸಪ್ ಮೂಲಕ ತಲಾಕ್ ನೀಡಿದ್ದ. ಇದನ್ನು ಓದಿ: ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತಾಡ್ತಿದ್ದ ಯುವಕನಿಗೆ ಬಿತ್ತು ಚಪ್ಪಲಿ ಏಟು!

    ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತಾಡ್ತಿದ್ದ ಯುವಕನಿಗೆ ಬಿತ್ತು ಚಪ್ಪಲಿ ಏಟು!

    ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಥಳಿಸಿ, ಚಪ್ಪಲಿಯಿಂದ ಹೊಡೆದ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

    ವಾಜರಹಳ್ಳಿಗೆ ಇಂದು ಬೆಳಗ್ಗೆ ಬಂದ ಯುವಕ, ಮಹಿಳೆಗೆ ಕರೆ ಮಾಡಿ ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಸ್ಥಳೀಯರು ಹಾಗೂ ಸಂಬಂಧಿಕರೊಂದಿಗೆ ಬಂದ ಮಹಿಳೆ ಯುವಕನನ್ನು ಹಿಡಿದು ಥಳಿಸಿದ್ದಾರೆ. ಯುವಕನ ವರ್ತನೆಯಿಂದ ಬೇಸತ್ತಿದ್ದ ಮಹಿಳೆ ಒದ್ದು, ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದಾರೆ.

    ನಿನಗೆ ನಂಬರ್ ಹೇಗೆ ಸಿಕ್ಕಿದೆ? ಅಂತಾ ಕೇಳಿದ್ದಕ್ಕೆ, ಸಾರ್ವಜನಿಕ ಶೌಚಾಲಯದಲ್ಲಿ ಈ ನಂಬರ್ ಬರೆದಿದ್ದರು. ಅದನ್ನು ನಾನು ಪಡೆದು, ಕರೆ ಮಾಡಿದೆ ಎಂದು ಯುವಕ ಹೇಳಿದ್ದಾನೆ. ಕಳೆದ ಒಂದು ವಾರದಿಂದ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದ. ಮಧ್ಯರಾತ್ರಿ ಕೂಡ ಕರೆ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

    ಇತ್ತ ಥಳಿಸಿಕೊಂಡ ಯುವಕ, ಮತ್ತೊಮ್ಮೆ ಇಂತಹ ತಪ್ಪು ಮಾಡಲ್ಲ, ದಯವಿಟ್ಟು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾನೆ. ಸ್ಥಳದಲ್ಲಿ ಸೇರಿದ್ದ ಜನ ಅವನನ್ನು ಕೈ ಬಿಡುತ್ತಿದ್ದಂತೆ ಪರಾರಿಯಾಗಿದ್ದಾನೆ.

    ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆ: ಭೇಟಿ ನೀಡಲಿದ್ದಾರೆ ಮೋದಿ

    ಕೇರಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆ: ಭೇಟಿ ನೀಡಲಿದ್ದಾರೆ ಮೋದಿ

    ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 167ಕ್ಕೆ ಏರಿಕೆಯಾಗಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರ ಬಳಿ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಕೇರಳ ಮುಖ್ಯಮಂತ್ರಿ ಜೊತೆ ನೆರೆ ವಿಚಾರದ ಬಗ್ಗೆ ಮಾತನಾಡಿದ್ದೇನೆ. ಅಲ್ಲದೇ ನಾನೇ ಬಂದು ಅಲ್ಲಿನ ಪರಿಸ್ಥಿತಿಗಳನ್ನು ಪರೀಶಿಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಹೇಳಿದ್ದಾರೆ. ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್‍ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.

    ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಿದ್ದಾರೆ.

    ಕೊಚ್ಚಿನ್‍ನ ವಿಮಾನ ನಿಲ್ದಾಣದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಸ್ಥಳದಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಕೇಂದ್ರ ವಿಮಾನಯಾನ ಖಾತೆಯ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ, ವಿಮಾನಯಾನ ಕಂಪೆನಿಗಳ ಜೊತೆ ಮಾತನಾಡಿದ್ದೇವೆ. ನೆರೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಕ್ಕೆ ತಲುಪಬೇಕಾಗಿರುವ ಸಾಮಾಗ್ರಿಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿರುವುದಕ್ಕೆ ವಿಮಾನಯಾನ ಕಂಪೆನಿಗಳಿಗೆ ಧನ್ಯವಾದವನ್ನು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೂಗತ ಪಾತಕಿ ಹೆಸರಲ್ಲಿ ರೋಲ್ ಕಾಲ್- ಇಬ್ಬರ ಬಂಧನ

    ಭೂಗತ ಪಾತಕಿ ಹೆಸರಲ್ಲಿ ರೋಲ್ ಕಾಲ್- ಇಬ್ಬರ ಬಂಧನ

    ಉಡುಪಿ: ಹಣಕ್ಕಾಗಿ ಬಿಲ್ಡರ್ ಗೆ ಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಧನರಾಜ್ ಕಟಪಾಡಿ (23) ಹಾಗೂ ಉಲ್ಲಾಸ್ ಮಲ್ಪೆ (25) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಕಳೆದ ಒಂದು ವಾರದಿಂದ ಪುತ್ತೂರು ಪಟ್ಟಣ ವಾಸುಕಿ ನಗರದ ನಿವಾಸಿ ಅಂಬಾಗಿಲು ಕ್ಲಾಸಿಕ್ ಬಿಲ್ಡರ್ ಆದ ಪ್ರಭಾಕರ ಪೂಜಾರಿಯವರಿಗೆ ಮೊದಲು ಕರೆ ಮಾಡಿ ವ್ಯವಹಾರದ ಬಗ್ಗೆ ಮಾತನಾಡಲು ಸಿಗುವಂತೆ ಹೇಳಿದ್ದಾರೆ. ಆದರೆ ದಿನ ಕಳೆದಂತೆ ಬಿಲ್ಡರ್ ಗೆ ಹಣದ ಬೇಡಿಕೆ ಇಡಲು ಶುರುಮಾಡಿ, ಸೋಮವಾರ ಮಲ್ಪೆಯಲ್ಲಿ ಸಿಗುವಂತೆ ಎಚ್ಚರಿಸಿದ್ದರು.

    ಆರೋಪಿಗಳು ಬಿಲ್ಡರ್ ಗೆ ಕರೆ ಮಾಡಿ ನೀನು ಬನ್ನಂಜೆ ರಾಜಾನ ಹೆಸರಿನಲ್ಲಿ ಹಣ ಮಾಡುತ್ತಿದ್ದಿಯಾ. ಆ ಹಣದಲ್ಲಿ ನಮಗೆ 25 ಲಕ್ಷ ರೂ. ಕೊಡಬೇಕೆಂದು ಬೆದರಿಕೆ ಹಾಕಿದ್ದರು. ಈ ಕುರಿತು ಪ್ರಭಾಕರ ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಪೂಜಾರಿ ಸೋಮವಾರ ಸಂಜೆ 5.30 ಕ್ಕೆ ಮಲ್ಪೆಯಲ್ಲಿ ಭೇಟಿಯಾಗಲು ತೆರಳಿದ್ದರು. ಈ ವೇಳೆ ಆರೋಪಿಗಳು ಪ್ರಭಾಕರ್ ಜತೆ ಖಾಸಗಿ ಹೋಟೆಲ್‍ವೊಂದರ ಮುಂಭಾಗ ನಿಂತು ಮಾತನಾಡುತ್ತಿದ್ದಾಗ, ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳಿಂದ ಒಂದು ಕಾರು ಹಾಗೂ 6 ಮೊಬೈಲ್ ಗಳನ್ನು ವಶಪಡಿಸಕೊಂಡಿದ್ದು, ಆರೋಪಿಗಳು ರೌಡಿ ವಿಕ್ಕಿ ಪೂಜಾರಿಯ ಬಂಟರೆಂದು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews