ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕ ಎನ್‍ಎ ಹ್ಯಾರಿಸ್ ಮಗ, ರೌಡಿ ಮಹಮ್ಮದ್ ನಲಪಾಡ್ ಜೈಲಿಂದ ರಿಲೀಸ್ ಆಗ್ತಾನೋ ಇಲ್ವೋ ಅನ್ನೋದು ಇಂದು ಗೊತ್ತಾಗುತ್ತೆ.
ಆರೋಪಿ ನಲಪಾಡ್ ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆ ಇಂದೂ ಕೂಡ ಮುಂದುವರಿಯಲಿದೆ. ನಾನು ಅಮಾಯಕ, ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಮೇಲೆ ಇಲ್ಲ-ಸಲ್ಲದ ಕೇಸೆಲ್ಲಾ ಹಾಕಿದ್ದಾರೆ. ಹೀಗಾಗಿ ಜಾಮೀನು ನೀಡಿ ಅನ್ನೋದು ನಲಪಾಡ್ ವಾದವಾಗಿದೆ. ಇದನ್ನೂ ಓದಿ: ಜೈಲಿನಲ್ಲಿ ನಲಪಾಡ್ ರಂಪಾಟ- ಜಾಮೀನು ಸಿಗದ್ದಕ್ಕೆ ಪೋಷಕರಿಗೆ ಕರೆ ಮಾಡಿ ಕೂಗಾಟ
ಜೈಲಿನಲ್ಲಿದ್ರೂ ನಲಪಾಡ್ ಫೆಸಿಲಿಟಿ ಏನೂ ಕಡಿಮೆ ಆಗಿಲ್ಲ. ಭಾನುವಾರ ರಾತ್ರಿ ಮೂರ್ನಾಲ್ಕು ಬಾರಿ ಅಪ್ಪ, ಶಾಸಕ ಹ್ಯಾರಿಸ್‍ಗೆ ಫೋನ್ ಮಾಡಿದ್ದ ನಲಪಾಡ್ ಇಂದಾದ್ರೂ ನನ್ನನ್ನು ಜೈಲಿಂದ ರಿಲೀಸ್ ಮಾಡಿಸಿ ಅಂತ ದುಂಬಾಲು ಬಿದ್ದಿದ್ದಾನೆ. ನನಗೆ ಜೈಲಲ್ಲಿ ಇರೋಕೆ ಆಗ್ತಿಲ್ಲ ಅಂತ ಗೋಗರೆಯುತ್ತಿದ್ದಾನೆ ಎನ್ನಲಾಗಿದೆ.
ಇತ್ತ ಭಾನುವಾರವಾದ್ರೂ ನಿನ್ನೆ ಜೈಲು ಸಿಬ್ಬಂದಿ ನಲಪಾಡ್‍ಗೆ ಹೊರಗಡೆ ಊಟದ ವ್ಯವಸ್ಥೆ ಮಾಡಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಮಂಜುನಾಥ್ ಗೆ ಮನೆಯಿಂದ ಊಟದ ವ್ಯವಸ್ಥೆ ಆಗಿತ್ತು ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!
ನವದೆಹಲಿ: “ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ”
ಈ ಮೇಲಿನ ವಾಕ್ಯಗಳಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ದಯವಿಟ್ಟು ಯಾರು ಈ ಸಂದೇಶವನ್ನು ಶೇರ್ ಮಾಡಬೇಡಿ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೂ ಗಾಬರಿಯಾಗಿ ಗೊಂದಲಕ್ಕೆ ಬೀಳಬೇಡಿ. ಮೊಬೈಲ್ ಸಂಖ್ಯೆಗಳು ಈಗ ಹೇಗೆ 10 ಸಂಖ್ಯೆಗಳು ಇದೆಯೋ ಅದು ಹಾಗೆಯೇ ಮುಂದುವರಿಯುತ್ತದೆ.
ಸರಿ ಹಾಗಾದ್ರೆ ಯಾವುದಕ್ಕೆ 13 ನಂಬರ್?
ದೂರಸಂಪರ್ಕ ಇಲಾಖೆಯ (ಡಿಓಟಿ) ಆದೇಶ ಮೆಷಿನ್ ಟು ಮೆಷಿನ್(ಎಂ2ಎಂ) ಸಿಮ್ ಗಳಿಗೆ ಮಾತ್ರ ಸೀಮಿತವಾಗಿದ್ದು ಪೀರ್ ಟು ಪೀರ್(ಪಿ2ಪಿ) ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್, ರಿಲಯನ್ಸ್ ಜಿಯೋ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಗ್ರಾಹಕರ ನಂಬರ್ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ.
ಏನಿದು ಎಂ2ಎಂ?
ಸುಲಭವಾಗಿ ಸರಳವಾಗಿ ಹೇಳುವುದಾದರೆ ದೂರದಲ್ಲಿರುವ ಯಂತ್ರಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದಾದ ವ್ಯವಸ್ಥೆ. ವೈರ್‌ಲೆಸ್ ಮೂಲಕ ಎರಡು ಸಾಧನಗಳನ್ನು ಪರಸ್ಪರ ಕೆಲಸಕ್ಕಾಗಿ ಜೋಡಿಸುವ ಹೊಸ ಪೀಳಿಗೆಯ ತಂತ್ರಜ್ಞಾನವೇ ಎಂ2ಎಂ. ಕಾರುಗಳು, ವಿದ್ಯುತ್ ಮೀಟರ್, ಸ್ವೈಪಿಂಗ್ ಯಂತ್ರಗಳಿಗೆ ಎಂ2ಎಂ ಸಂಖ್ಯೆಗಳಿರುವ ಸಿಮ್ ಗಳನ್ನು ನೀಡಲಾಗುತ್ತದೆ.
ಡಿಓಟಿ ಆದೇಶದಲ್ಲಿ ಏನಿದೆ?
ಪ್ರಸ್ತುತ ಇರುವ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆ. 2018ರ ಜುಲೈ 1ರಿಂದ ವಿತರಣೆಯಾಗಲಿರುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಸುಳ್ಳು ಸುದ್ದಿ ಪ್ರಸಾರ ಆಗಿದ್ದು ಹೇಗೆ?
ಮೆಷಿನ್ ಟು ಮೆಷಿನ್(ಎಂ2ಎಂ)ಗಳಿಗೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದ್ದರೂ ಇದೂ ಪೀರ್ ಟು ಪೀರ್(ಪಿ2ಪಿ) ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದರಿಂದ ಸುಳ್ಳು ಸುದ್ದಿ ಈಗ ಸೃಷ್ಟಿಯಾಗಿದೆ.
ಎಂ2ಎಂ ತಂತ್ರಜ್ಞಾನ ಹೇಗೆ ಭಿನ್ನ?
ಈಗ ನೀವು ನಿಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಹಾಕಿದ್ದೀರಿ ಎಂದು ಭಾವಿಸಿಕೊಳ್ಳಿ. ಕ್ಯಾಮೆರಾ ತನ್ನ ಮುಂದುಗಡೆ ಏನು ನಡೆಯುತ್ತಿರುತ್ತದೋ ಆ ಎಲ್ಲ ದೃಶ್ಯಗಳನ್ನು ಮಾತ್ರ ಸೆರೆಹಿಡಿಯುತ್ತದೆ. ಅಂದರೆ ಸಿಸಿ ಕ್ಯಾಮೆರಾ ನಿಮ್ಮ ಮನೆಗೆ ನುಗ್ಗಿದ ಕಳ್ಳನ ಚಲನವಲನಗಳನ್ನು ಸೆರೆ ಹಿಡಿಯಬಹುದೇ ವಿನಾಃ ಕಳ್ಳತನವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಎಂ2ಎ ತಂತ್ರಜ್ಞಾನದಲ್ಲಿ ಕಳ್ಳತನವನ್ನು ತಡೆಯಬಹುದು. ಹೌದು. ಎಂ2ಎಂ ಅಪ್ಲಿಕೇಶನ್ ಆಧಾರಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್ ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿ ದೂರದಲ್ಲಿರುವ ಯಂತ್ರಗಳನ್ನು ನಿಯಂತ್ರಿಸಿ ಕಳ್ಳತನವನ್ನು ತಡೆಯಬಹುದು.
ವೈರ್‌ಲೆಸ್ ಕ್ಯಾಮೆರಾಗಳನ್ನು ಮನೆಯಲ್ಲಿ ನಿಮಗೆ ಎಲ್ಲಿ ಬೇಕೋ ಅಲ್ಲಿ ಅಳವಡಿಸಿದರೆ ಆಯ್ತು. ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯವನ್ನು ಮೊಬೈಲ್ ಮೂಲಕವೇ ವೀಕ್ಷಿಸಬಹುದು. ಕ್ಯಾಮೆರಾವನ್ನು ಯಾವ ಕಡೆಗೂ ಬೇಕಾದರೂ ತಿರುಗಿಸಿ ಝೂಮ್ ಮಾಡಬಹುದು. ಯಾರಾದರೂ ಪ್ರವೇಶಿಸಿದ್ದಲ್ಲಿ ಎಂ2ಎಂ ಅಪ್ಲಿಕೇಶನ್ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಸಾಧ್ಯವಿದೆ. ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?
ಎಂ2ಎಂ ಸಿಮ್ ಯಾರು ಕೊಡ್ತಾರೆ?
ವಿದೇಶದಲ್ಲಿ ಈ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಬಳಕೆಯಾಗುತ್ತಿದೆ. ಸ್ವೈಪಿಂಗ್ ಯಂತ್ರಗಳಲ್ಲಿ ಈ ತಂತ್ರಜ್ಞಾನವೇ ಬಳಕೆ ಆಗುತ್ತಿದೆ. ಬಿಎಸ್‍ಎನ್‍ಎಲ್, ಏರ್‍ಟೆಲ್, ವೊಡಾಫೋನ್, ಆರ್ ಕಾಂ ಕಂಪೆನಿಗಳು ಎಂ2ಎಂ ಸಿಮ್ ನೀಡುತ್ತಿವೆ. ಏರ್‍ಟೆಲ್ ಸ್ಮಾರ್ಟ್ ಮೀಟರ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ ನಂತಹ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನೂ ಓದಿ: ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ
ವಿಜಯವಾಡ: ಮೊಬೈಲ್ ಜಾಸ್ತಿ ಬಳಸ್ತಿದ್ದೀಯ, ನಿನ್ನ ತಾಯಿಗೆ ಹೇಳ್ತೀನಿ ಎಂದು ಎಚ್ಚರಿಸಿದ್ದಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಲಿಖಿತಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ಇಲ್ಲಿನ ಹೆಡ್ ಕಿಂಗ್ಸ್‍ಟನ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಲಿಖಿತಾ ಪೋಷಕರು ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದರು. ಹೀಗಾಗಿ ಲಿಖಿತಾ ಮನೆಯಲ್ಲಿ ಒಬ್ಬಳೇ ಇದ್ದಳು. ಹತ್ತಿರದಲ್ಲೇ ವಾಸವಿದ್ದ ಲಿಖಿತಾ ತಾಯಿಯ ಅಕ್ಕ ಆಕೆಯನ್ನ ನೋಡಿಕೊಳ್ತಿದ್ರು.
ಕಳೆದ 3 ದಿನಗಳಿಂದ ಲಿಖಿತಾ ಶಾಲೆಗೆ ಹೋಗಿರಲಿಲ್ಲ. ಆಕೆ ಮೊಬೈಲ್‍ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದುದನ್ನು ಗಮನಿಸಿದ್ದ ದೊಡ್ಡಮ್ಮ, ಜಾಸ್ತಿ ಮೊಬೈಲ್ ಬಳಸುತ್ತೀಯ ಎಂದು ನಿನ್ನ ಅಮ್ಮನಿಗೆ ಹೇಳ್ತೀನಿ ಎಂದು ಎಚ್ಚರಿಸಿದ್ದರು.
ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಯಲ್ಲಿ ಲಿಖಿತಾಗೆ ದೊಡ್ಡಮ್ಮ ಕರೆ ಮಾಡಿದ್ದರು. ಆದ್ರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಭಾನುವಾರ ಬೆಳಗ್ಗೆ ಲಿಖಿತಾ ತಾಯಿ ಬಂದು ಬಾಗಿಲು ಬಡಿದರೂ ಬಾಗಿಲು ತೆರೆದಿರಲಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಲಿಖಿತಾ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿತ್ತು.
ಪ್ರಾಥಮಿಕ ತನಿಖೆಯ ಪ್ರಕಾರ, 3 ದಿನಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ ಹಾಗೂ ಹೆಚ್ಚಾಗಿ ಮೊಬೈಲ್ ಬಳಕೆ ಮಾಡ್ತಿದ್ದ ಬಗ್ಗೆ ದೂರು ಹೇಳಿಬಿಡ್ತಾರೆಂದು ಹುಡುಗಿ ಹೆದರಿದ್ದಳು. ಆಕೆ ಯಾರೊಂದಿಗೆ ಮಾತನಾಡುತ್ತಿದ್ದಳು ಎಂಬುದನ್ನ ತಿಳಿಯಲು ಕಾಲ್ ಲಿಸ್ಟ್ ಸಂಗ್ರಹಿಸುತ್ತಿದ್ದೇವೆ. ಬಾಲಕಿ ‘ಐ ಮಿಸ್ ಯೂ’ ಎಂದು ಬರೆದಿದ್ದ ಕಾಗದವೊಂದನ್ನ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ವಿದ್ಯಾಭ್ಯಾಸದ ವಿಷಯವಾಗಿ ಯಾವುದೇ ಒತ್ತಡದಲ್ಲಿ ಇರಲಿಲ್ಲ. ಹಾಗೇ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಮರಣೊತ್ತರ ಪರೀಕ್ಷೆಯ ವರದಿ ಹಾಗೂ ಕಾಲ್ ಡೀಟೇಲ್ಸ್ ಪಡೆದ ನಂತರ ಮುಂದಿನ ತನಿಖೆ ನಡೆಯಲಿದೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.
ತಿರುವಂತನಪುರಂ: ತನ್ನ ಪಾದರಕ್ಷೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟುಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ಕಾಮುಕನೊಬ್ಬನನ್ನು ಪೊಲೀಸರ ಅತಿಥಿಯಾಗಿದ್ದಾನೆ.
ಕೇರಳದ ಬಿಜು ಬಂಧಿತ ಆರೋಪಿ. ಈತ ತ್ರಿಶೂರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಲೋಲ್‍ಸವಂ(ರಾಜ್ಯ ಕಲಾ ಹಬ್ಬ) ಕಾರ್ಯಕ್ರಮದಲ್ಲಿ ಮಹಿಳೆಯರ ಫೋಟೋ ತೆಗೆಯಲು ಯತ್ನಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ.
ಪಾದರಕ್ಷೆಯಲ್ಲಿ ಕ್ಯಾಮೆರಾ ಹೀಗಿತ್ತು:
ಪಾದರಕ್ಷೆಯಲ್ಲಿ ಒಂದು ಸಣ್ಣ ರಂಧ್ರ ಮಾಡಿದ್ದ. ಈ ರಂಧ್ರಕ್ಕೆ ಕ್ಯಾಮೆರಾ ಬರುವಂತೆ ಫೋನನ್ನು ಜೋಡಿಸಿದ್ದ. ಈ ಮೂಲಕ ಆತ ಮಹಿಳೆಯರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ. ಒಂದು ವೇಳೆ ಬೇರೆಯವರು ತನ್ನ ಪಾದರಕ್ಷೆಯ ಮೇಲೆ ಕಾಲಿಟ್ಟರೆ ಫೋನಿಗೆ ಹಾನಿ ಆಗಬಾರದೆಂದು ಮುಂಜಾಗೃತವಾಗಿ ವಿಶೇಷ ಸ್ಟೀಲ್ ಕವರ್ ಕೂಡಾ ಅಳವಡಿಸಿಕೊಂಡಿದ್ದ.
ಬಿಜು ಫೋನ್ ಹಾಕಿದ ಪಾದರಕ್ಷೆ ಹಾಕಿಕೊಂಡು ಜನಸಮೂಹದ ಮಧ್ಯೆ ಹೋಗುತ್ತಿದ್ದ. ಅಲ್ಲಿ ಹುಡುಗಿಯರು ಮತ್ತು ಮಹಿಳೆಯರ ಕೆಳಗಿನಿಂದ ಫೋಟೋಗಳನ್ನು ತೆಗೆದುಕೊಳುತ್ತಿದ್ದ. ಅಥವಾ ಜನಸಂದಣಿ ಇರುವ ಕಡೆ ಪಾದರಕ್ಷೆಗಳನ್ನ ಬಿಟ್ಟು, ದೂರದಲ್ಲಿ ನಿಂತು ನೋಡುತ್ತಿದ್ದ. ಒಂದು ವೇಳೆ ಫೋನ್ ಬ್ಯಾಟರಿ ಖಾಲಿಯಾದ್ರೂ ತನ್ನ ಈ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಎರಡನೇ ಫೋನ್ ಬಳಸುತ್ತಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನದ ಹಿಂದೆ ಪೊಲೀಸರು ಬಿಜು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿಧನವಾಗಿ ಕಾಲುಗಳನ್ನೇ ನೋಡುತ್ತಾ ಮುಂದಕ್ಕೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನುಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಈತನ ಖತರ್ನಾಕ್ ಕೆಲಸ ಬಯಲಾಗಿದೆ.
ಆದ್ರೆ ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲೇನಲ್ಲ. 2015 ರಲ್ಲಿ, ಶೂನಲ್ಲಿ ಕ್ಯಾಮೆರಾವನ್ನು ಬಳಸಿಕೊಂಡು ಮಹಿಳೆಯರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ವಕೀಲನನ್ನ ದೆಹಲಿಯಲ್ಲಿ ಬಂಧಿಸಲಾಗಿತ್ತು. ಇಂಗ್ಲೆಂಡಿನ ಉದ್ಯಮಿಯೊಬ್ಬ ಇದೇ ರೀತಿಯ ಆರೋಪದ ಮೇಲೆ ಬಂಧಿತನಾಗಿದ್ದ. 2014 ರಲ್ಲಿ ಜಪಾನ್ ನಲ್ಲೂ ಫೋಟೋಗಳನ್ನು ತೆಗೆದುಕೊಳ್ಳಲು ‘ಶೂ ಕ್ಯಾಮೆರಾ’ ವನ್ನು ವಿನ್ಯಾಸಗೊಳಿಸಿದ್ದ ಪ್ರಕರಣ ಬಯಲಾಗಿತ್ತು.
ವಿಜಯವಾಡ: ತನ್ನ ಮೊಬೈಲ್‍ಗೆ ಯಾರೋ ಒಬ್ಬರು ಕರೆ ಮಾಡಿ ಮಗಳಿಗೆ ಫೋನ್ ಕೊಡಿ ಎಂದ ಬಳಿಕ 14 ವರ್ಷದ ಮಗಳನ್ನ ತಂದೆಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಸಾಯಿನಾಥಪುರಂನಲ್ಲಿ ನಡೆದಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯಾದ ಆಟೋ ಡ್ರೈವರ್ ರಮಣನನ್ನು ಬಂಧಿಸಲಾಗಿದೆ. 10ನೇ ಕ್ಲಾಸ್‍ನಲ್ಲಿ ಓದುತ್ತಿದ್ದ ಮಗಳನ್ನು ಕೊಂದ ನಂತರ ಆರೋಪಿ ಅಂತ್ಯಕ್ರಿಯೆಗಾಗಿ ಸಿದ್ಧತೆ ಮಾಡುತ್ತಿದ್ದ.
ನಡೆದಿದ್ದೇನು?: ಕುಡಿದ ಮತ್ತಿನಲ್ಲಿ ಮನೆಗೆ ಬಂದ ರಮಣ ಕರೆ ಮಾಡಿದ ವ್ಯಕ್ತಿಯ ಬಗ್ಗೆ ಮಗಳನ್ನ ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ಯಾರೆಂಬುದು ತನಗೆ ಗೊತ್ತಿಲ್ಲವೆಂದು ಮಗಳು ಎಷ್ಟೇ ಹೇಳಿದ್ರೂ ರಮಣ ಆಕೆಯನ್ನ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವನ್ನಪ್ಪಿದ ಬಳಿಕ ಆರೋಪಿ ತಂದೆ ಆಕೆಯ ಮೃತದೇಹವನ್ನು ಮನೆಯ ಮುಂದೆ ತಂದು ಹಾಕಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಹೊರಗೆ ಹೋಗಿದ್ದಾನೆ.
ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
ದಾವಣಗೆರೆ: ಮದುವೆಯಾಗೋದಾಗಿ ನಂಬಿಸಿ, ವಂಚಿಸಿರುವ ಆರೋಪವೊಂದು ಪೊಲೀಸ್ ಪೇದೆಯೊಬ್ಬರ ವಿರುದ್ಧ ಕೇಳಿಬಂದಿದೆ.
ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಮಾಡಲಗೇರಿ ಮೂಲದ ಪೇದೆ ಮಂಜುನಾಥ್ ಕಣಿವೆ ಶಿವಮೊಗ್ಗದ ಕುಂಸಿಯಲ್ಲಿ ಪೇದೆಯಾಗಿದ್ದಾನೆ. ಕಳೆದ 6 ತಿಂಗಳ ಹಿಂದೆ ಹರಪ್ಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದ ಮಂಜುಳಾ ಎಂಬ ಯುವತಿ ಪತ್ರಕರ್ತರೊಬ್ಬರಿಗೆ ಫೋನ್ ಮಾಡಲು ಹೋಗಿ ಅದು ಮಿಸ್ಸಾಗಿ ಪೇದೆ ಮಂಜುನಾಥ್ ಗೆ ಹೋಗಿದೆ.
ಆದ್ರೆ ಕೂಡಲೇ ಯುವತಿ ಮಿಸ್ಸಾಗಿ ಬಂದಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಆದರೆ ಪದೇ ಪದೇ ಫೋನ್ ಮಾಡುತ್ತಿದ್ದ ಮಂಜುನಾಥ್ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ನಂತರ ಮದುವೆಯಾಗೋದಾಗಿ ನಂಬಿಸಿ, ಯುವತಿಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ.
ಆದರೆ ಈಗ ಮಂಜುನಾಥ್ ಜಾತಿಯ ನೆಪವೊಡ್ಡಿ ಯುವತಿಯಿಂದ ದೂರ ಸರಿಯುತ್ತಿದ್ದಾನೆ. ಹೀಗಾಗಿ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮಂಜುಳಾ ಅವರ ಬೆನ್ನಿಗೆ ಸಂಘಟನೆಗಳೂ ನಿಂತಿದ್ದು, ಯುವತಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋದಾಗಿ ಎಚ್ಚರಿಸಿವೆ.
ನವದೆಹಲಿ: ಕೇಂದ್ರ ಮಾನವಸಂಪನ್ಮೂಲ ಸಚಿವ, ಕರ್ನಾಟಕ ಬಿಜೆಪಿಯ ಉಸ್ತುವಾರಿಯನ್ನು ಹೊತ್ತಿರುವ ಪ್ರಕಾಶ್ ಜಾವಡೇಕರ್ ಈಗ ನೇರಳೆ ಬಣ್ಣದ ಹ್ಯಾಂಡ್ ಸೆಟ್ ಬಳಸುತ್ತಿದ್ದಾರೆ.
ಹೌದು. ಚಳಿಗಾಲದ ಅಧಿವೇಶನಕ್ಕೆ ಎಂದಿನಂತೆ ಬಾರದೇ ಶುಕ್ರವಾರ ನೇರಳೆ ಬಣ್ಣದ ಹ್ಯಾಂಡ್ ಸೆಟ್ ಇಟ್ಟುಕೊಂಡು ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ್ದಾರೆ.
ಹ್ಯಾಂಡ್ ಸೆಟ್ ಇರುವುದನ್ನು ನೋಡಿ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಜಾವಡೇಕರ್ ಯಾವುದೇ ಪ್ರತಿಕ್ರಿಯೆ ನೀಡದೇ ಮುಗಳುನಗೆ ಬೀರಿ ಮುಂದಕ್ಕೆ ಹೋಗಿದ್ದಾರೆ. ಆದರೆ ಮೊಬೈಲ್ ವಿಕಿರಣವನ್ನು ತಪ್ಪಿಸುವ ಉದ್ದೇಶದಿಂದ ಪ್ರಕಾಶ್ ಜಾವಡೇಕರ್ ನೆರಳೆ ಹ್ಯಾಂಡ್ ಸೆಟ್ ಬಳಸುತ್ತಿದ್ದಾರೆ ಎನ್ನಲಾಗಿದೆ.
ಗುಂಟೂರು: ತನ್ನ ಏಳು ವರ್ಷದ ಮಗಳ ಹುಟ್ಟುಹಬ್ಬದ ದಿನದಂದೇ ಮಕ್ಕಳನ್ನು ರೈಲ್ವೇ ಟ್ರ್ಯಾಕ್ ನಲ್ಲಿ ರೈಲಿನ ಮುಂದೆ ಎಸೆದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ಸೋಮವಾರ ನರಸಾರೊಪೆಟ್ ಎಂಬಲ್ಲಿ ನಡೆದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮೀ(32) ಹಾಗೂ ಮಕ್ಕಳಾದ ದಿಗ್ವಿಜಯ(7), ಸಾಯಿಗಣೇಶ್(4) ಎಂದು ಗುರುತಿಸಲಾಗಿದೆ. ಮೃತ ವಿಜಯಲಕ್ಷ್ಮೀ ಅವರು ಪಂಗಲೂರು ಮಂದಲ್ ನ ರಾಮಕುರು ಗ್ರಾಮದ ಪೆನುಬೋತ್ ಸೋಮಶೇಖರ್(40) ಎಂಬವರನ್ನು 2008ರಲ್ಲಿ ಮದುವೆಯಾಗಿದ್ದರು.
ಏನಿದು ಘಟನೆ?: ಸೋಮವಾರ ಮಗಳು ದಿಗ್ವಿಜಯಳ ಹುಟ್ಟು ಹಬ್ಬವಾಗಿತ್ತು. ಹೀಗಾಗಿ ವಿಜಯಲಕ್ಷ್ಮಿ ಅವರು ನಿನ್ನೆ ಶಾಲೆಗೆ ತೆರಳಿ ತನ್ನಿಬ್ಬರು ಮಕ್ಕಳನ್ನು ಶಾಪಿಂಗ್ ಮಾಡಲೆಂದು ಕರೆದುಕೊಂಡು ಬಂದಿದ್ದರು. ಅಂತೆಯೇ ಮಗಳ ಹುಟ್ಟುಹಬ್ಬವಾಗಿದ್ದರಿಂದ ಫೋಟೋ ತೆಗೆಸಿಕೊಳ್ಳೋಣ ಎಂದು ಸ್ಟುಡಿಯೋಗೆ ತೆರಳಿ ಮೂವರ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೇ ಆ ಕೂಡಲೇ ಸಿಕ್ಕ ಫೋಟೋದ ಹಿಂಬದಿಯಲ್ಲಿ ಮೂವರ ಹೆಸರನ್ನು ಕೂಡ ತಾಯಿ ಬರೆದ್ರು. ನಂತರ ಅಲ್ಲಿಂದ ಸೀದಾ ರೈಲ್ವೇ ಟ್ರ್ಯಾಕ್ ಬಳಿ ಮೂವರು ಹೋಗಿದ್ದಾರೆ.
ರೈಲ್ವೇ ಟ್ರ್ಯಾಕ್ ಬಳಿ ಮಗಳು ಓಡಿ ಹೋಗದಂತೆ ತಾಯಿ ಆಕೆಯ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾರೆ. ನಂತರ ತನ್ನ ಪತಿಗೆ ಕರೆ ಮಾಡಿ ಮಕ್ಕಳೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗೆ ಗಂಡನಿಗೆ ಮಾಹಿತಿ ನೀಡಿ ಫೋನ್ ಕಟ್ ಮಾಡಿದ ಮಹಿಳೆ, ತನ್ನಿಬ್ಬರು ಮಕ್ಕಳನ್ನು ರೈಲ್ವೇ ಹಳಿಗೆ ಬಿಸಾಕಿ, ಬಳಿಕ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ತಾಯಿ ಹಾಗೂ ಇಬ್ಬರು ಮಕ್ಕಳೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇತ್ತ ತಾಯಿ-ಮಕ್ಕಳ ಆತ್ಮಹತ್ಯೆಯ ಸುದ್ದಿ ಇಡೀ ಗ್ರಾಮಕ್ಕೆ ಹಬ್ಬುತ್ತಿದ್ದಂತೆಯೇ ಮೃತ ಮಹಿಳೆಯ ಪತಿ ಸೋಮಶೇಖರ್ ಅವರು, ತನ್ನ ತಂದೆಯ ಬಳಿಯಿಂದ 200ರೂ. ತೆಗೆದುಕೊಂಡು ಕೀಟನಾಶಕ ಬಾಟಲಿಯನ್ನು ಅಂಗಡಿಯಿಂದ ಖರೀದಿ ಮಾಡಿದ್ದಾರೆ. ಅಂಗಡಿಯಿಂದ ನೇರವಾಗಿ ಮಿಲ್ ಗೆ ಬಂದ ಸೋಮಶೇಖರ್, ಕೀಟನಾಶಕವನ್ನು ಕುಡಿದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಈ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿರಲಿಲ್ಲ. ಒಟ್ಟಿನಲ್ಲಿ ಮಗಳ ಹುಟ್ಟುಹಬ್ಬದಂದೇ ತಾಯಿ ಈ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.
ಬೆಂಗಳೂರು: ಸುಮಾರು 36 ಮಂದಿ ಅಮಾಯಕ ರೋಗಿಗಳನ್ನು ಬಲಿ ಪಡೆದ ಖಾಸಗಿ ವೈದ್ಯರ ಮುಷ್ಕರ ಐದನೇ ದಿನವೂ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ.
ದೂರವಾಣಿ ಮೂಲಕ ಸಿಎಂ ಹಾಗೂ ಕಾನೂನು ಸಚಿವ ಟಿಬಿ ಜಯಚಂದ್ರ ಜೊತೆ ಮಾತನಾಡಿದ ಹೆಚ್‍ಡಿಕೆ, ವೈದ್ಯರ ಸಮಸ್ಯೆಯನ್ನು ನಾಜೂಕಾಗಿ ಪರಿಹರಿಸುವಂತೆ ಸಲಹೆ ನೀಡಿದ್ರು. ರಾಜ್ಯಾದ್ಯಂತ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಸ್ಯೆಯನ್ನು ಆದಷ್ಟು ಬೇಗ ಮಾತುಕತೆ ಮೂಲಕ ಬಗೆಹರಿಸಿ. ವಿಧೇಯಕದಲ್ಲಿ ಒಂದಷ್ಟು ಬದಲಾವಣೆ ಮಾಡಿ. ವೈದ್ಯರು ಸ್ಥಳೀಯ ಪ್ರಾಧಿಕಾರದ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುವಂತಾಗುವುದು ಸರಿಯಲ್ಲ ಅಂತ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನಸಾಮಾನ್ಯರಿಗೆ ಅನುಕೂಲವಾಗುವ ಅಂಶಗಳಿರಲಿ. ಆದ್ರೆ ವೈದ್ಯರಿಗೆ ಮುಜುಗರ ಆಗುವಂತ ಅಂಶಗಳನ್ನು ಕೈ ಬಿಡುವುದು ಉತ್ತಮ. ಆರೋಗ್ಯ ಸಚಿವರೊಂದಿಗೆ ಮಾತನಾಡಿ ಇವತ್ತೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿ. ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಎಲ್ಲವೂ ಸರಿಯಾಗತ್ತೆ ಅಂತ ಹೆಚ್‍ಡಿಕೆ ಹೇಳಿದ್ದಾರೆ. ಸದ್ಯ ಕುಮಾರಸ್ವಾಮಿ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಭಾರತೀಯ ವೈದ್ಯಕೀಯ ಸಂಘ ಯಾವುದೇ ಆಸ್ಪತ್ರೆಗಳ ಬಂದ್‍ಗೆ ಕರೆ ನೀಡಿಲ್ಲ. ಬೆಂಗಳೂರಿನ ವೈದ್ಯರಷ್ಟೇ ಕರೆ ನೀಡಿದ್ರು ಅಂತಾ ಐಎಂಎ ರಾಜ್ಯಾಧ್ಯಕ್ಷ ಡಾ. ಹೆಚ್‍ಎಸ್ ರವೀಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕರೆ ನೀಡಿದ್ದ ಬಂದ್ ವಾಪಸ್ ಪಡೆದಿದ್ದಾರೆ. ನಾನು ಅಮರಣಾಂತ ಉಪವಾಸ ಮಾಡುತ್ತಿದ್ದೇನೆ. ಯಾವುದೇ ಬಂದ್ ಗೆ ಕರೆ ನೀಡಿಲ್ಲ. ಮಧ್ಯಾಹ್ನ 2 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ. ಮಧ್ಯಾಹ್ನದ ಬಳಿಕ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಅಂತಾ ರವೀಂದ್ರ ಹೇಳಿದ್ದಾರೆ.
ದೋಹಾ: ಬಾಲಿಗೆ ಹೊರಟಿದ್ದ ವಿಮಾನದಲ್ಲಿ ಪತಿ ಹಾಯಾಗಿ ಮಲಗಿ ಕನಸು ಕಾಣ್ತಿದ್ದ. ಇತ್ತ ಪತ್ನಿ ಹೇಗೋ ಆತನ ಮೊಬೈಲ್ ಪಡೆದು ಅನ್‍ಲಾಕ್ ಕೂಡ ಮಾಡಿದ್ಲು. ನಂತರ ತನ್ನ ಗಂಡ ತನಗೆ ಮೋಸ ಮಾಡ್ತಿದ್ದಾನೆ ಅನ್ನೋದು ಆಕೆಗೆ ಗೊತ್ತಾಗಿತ್ತು.
ಹೌದು. ಕತಾರ್ ಏರ್‍ವೇಸ್ ವಿಮಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಭಾನುವಾರದಂದು ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಬಾಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವಿಮಾನಕ್ಕೆ ಭಾರತದಲ್ಲಿ ನಿಲುಗಡೆ ಇರಲಿಲ್ಲ. ಆದರೂ ಚೆನ್ನೈನಲ್ಲಿ ಲ್ಯಾಂಡಿಂಗ್ ಮಡಬೇಕಾಯ್ತು.
ನವೆಂಬರ್ 5ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಯಲ್ಲಿ ದೋಹಾದಿಂದ ಬಾಲಿಗೆ ಹೊರಟಿದ್ದ ಕತಾರ್ ಏರ್‍ವೇಸ್‍ನ ಕ್ಯೂಆರ್-962 ವಿಮಾನವನ್ನ ಚೆನ್ನೈಗೆ ಡೈವರ್ಟ್ ಮಾಡಲಾಯ್ತು. ಐರಾನ್‍ನವರಾದ ಮಹಿಳೆ, ಆಕೆಯ ಗಂಡ ಮತ್ತು ಮಗು ಪ್ರಯಾಣ ಮಾಡುತ್ತಿದ್ರು. ಆದ್ರೆ ಮಹಿಳೆ ಮಾಡಿದ ರಂಪಾಟದಿಂದ ಹಾಗೂ ಆಕೆ ವಿಮಾನದ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಿದ್ದರಿಂದ ಮೂವರನ್ನೂ ಕೆಲಗಿಳಿಸಬೇಕಾಯ್ತು ಎಂದು ಹಿರಿಯ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ .
ಪತ್ರಿಕೆಯೊಂದರ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವು ಗಂಟೆಗಳಲ್ಲಿ ಗಂಡ ನಿದ್ರೆಗೆ ಜಾರಿದ್ದಾನೆ. ಗಂಡನ ಮೇಲೆ ಮೊದಲೇ ಅನುಮಾನವಿದ್ದ ಪತ್ನಿ ಈ ಸಂದರ್ಭದ ಲಾಭ ಪಡೆದು, ಫೋನ್ ಸ್ಕ್ಯಾನರ್ ಮೇಲೆ ಗಂಡನ ಹೆಬ್ಬೆಟ್ಟು ಒತ್ತಿ ಅನ್‍ಲಾಕ್ ಮಾಡಿದ್ದಾಳೆ. ನಂತರ ಫೋನ್ ಚೆಕ್ ಮಾಡಿದಾಗ ಆತ ತನಗೆ ಮೋಸ ಮಾಡುತ್ತಿರುವುದು ಗೊತ್ತಾಗಿದೆ.
ಈ ವೇಳೆ ಮಹಿಳೆ ಮದ್ಯಪಾನ ಮಾಡಿದ್ದಳು. ಹೀಗಾಗಿ ವಿಮಾನದಲ್ಲೇ ಗಂಡನೊಂದಿಗೆ ಜಗಳವಾಡಿದ್ದಾಳೆ. ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿ ಆಕೆಯನ್ನು ಸಮಾಧಾನ ಮಾಡಲೆತ್ನಿಸಿದಾಗ ಅವರ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.
ಪರಿಸ್ಥಿತಿ ಕೈ ಮೀರಿ ಹೋದಾಗ ವಿಮಾನದ ಸಿಬ್ಬಂದಿ ಮಹಿಳೆ, ಆಕೆಯ ಗಂಡ ಹಾಗೂ ಮಗುವನ್ನು ಕೆಳಗಿಳಿಸಲು ನಿರ್ಧರಿಸಿದ್ರು. ಅದರಂತೆ ಪೈಲಟ್ ಚೆನ್ನೈ ಕಡೆಗೆ ವಿಮಾನವನ್ನ ಡೈವರ್ಟ್ ಮಾಡಿದ್ರು. ಭಾರತದಲ್ಲಿ ಕುಟುಂಬವನ್ನ ಡೀಬೋರ್ಡ್ ಮಾಡಿ ನಂತರ ಬಾಲಿಗೆ ವಿಮಾನ ಹೊರಟಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈನಲ್ಲಿ ಅಧಿಕಾರಿಗಳು ಮಹಿಳೆ ಸಮಾಧಾನವಾಗುವವರೆಗೆ ಕುಟುಂಬವನ್ನು ಏರ್‍ಪೋರ್ಟ್‍ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ನಂತರ ಅವರನ್ನು ಕೌಲಾಲಂಪುರ್‍ನ ವಿಮಾನದಲ್ಲಿ ಕಳಿಸಿ ಅಲ್ಲಿಂದ ದೋಹಾಗೆ ಕಳಿಸಿದ್ದಾರೆ.
ಅಲ್ಲದೆ ಭಾರತೀಯ ವೀಸಾ ಇಲ್ಲದ ಕಾರಣ ದಂಪತಿ ಕೆಲವು ತೀವ್ರ ಭದ್ರತಾ ಪರಿಶೀಲನೆಗೂ ಒಳಪಡಬೇಕಾಯ್ತು ಎಂದು ಮೂಲಗಳು ತಿಳಿಸಿವೆ.