Tag: Phone in programme

  • ಜನಸ್ನೇಹಿ ಕಾರ್ಯಕ್ರಮ ರೂಪಿಸಿದ ಹಾಸನ ಪೊಲೀಸ್ ಇಲಾಖೆ

    ಜನಸ್ನೇಹಿ ಕಾರ್ಯಕ್ರಮ ರೂಪಿಸಿದ ಹಾಸನ ಪೊಲೀಸ್ ಇಲಾಖೆ

    ಹಾಸನ: ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹಾಸನ ಎಸ್‍ಪಿ ಜಿಲ್ಲೆಯಲ್ಲಿ ವಿನೂತನ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಪ್ರತಿ ಎರಡು ವಾರಗಳಿಗೊಮ್ಮೆ ಶುಕ್ರವಾರದಂದು ಹಾಸನ ಎಸ್‍ಪಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಹಾಸನ ಜಿಲ್ಲೆಯ ಯಾರೇ ಆದರೂ ತಮಗಾಗುತ್ತಿರುವ ಅಥವಾ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳನ್ನು ಫೋನ್ ಮೂಲಕ ಎಸ್‍ಪಿಯವರಿಗೆ ತಿಳಿಸಬಹುದಾಗಿದೆ. ಸ್ವತಃ ಎಸ್‍ಪಿಯವರೇ ಖುದ್ದು ಫೋನ್ ರಿಸೀವ್ ಮಾಡಿ ಮಾತನಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ.

    ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ನಿರಂತರವಾಗಿ ನಡೆಯಲಿದೆ. ಪ್ರತಿ ಎರಡು ವಾರಗಳಿಗೆ ಒಮ್ಮೆ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ, ಒಮ್ಮೆ ತಾವು ಹೇಳಿಕೊಂಡ ಸಮಸ್ಯೆ ಬಗೆಹರಿಯದಿದ್ರೆ, ಮತ್ತೆ ಕರೆ ಮಾಡುವ ಮೂಲಕ ಎಸ್‍ಪಿಯವರ ಬಳಿ ತಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿಸಬಹುದಾಗಿದೆ.

    ಹಾಸನ ಎಸ್‍ಪಿಯವರ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಜನ ಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅಲ್ಲಿ ನಮಗೆ ಸರಿಯಾದ ಸ್ಪಂದನೆ ಸಿಗದಿರಬಹುದು ಅಥವಾ ಕೆಲವೊಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಭಯಪಡಬಹುದು. ಇಂತಹ ಸಮಯದಲ್ಲಿ ನಾವೇ ನೇರವಾಗಿ ಎಸ್‍ಪಿಯವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಬಹುದಾಗಿದೆ. ಆಗ ಎಸ್‍ಪಿಯವರೇ ಖುದ್ದು ನಮ್ಮ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಮಸ್ಯೆ ಬಗೆಹರಿಸಲು ಸೂಚಿಸುತ್ತಾರೆ. ಇದರಿಂದ ಪೊಲೀಸ್ ಇಲಾಖೆಯ ಬಗ್ಗೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

  • ದೂರಿಗಾಗಿ ಜಲಮಂಡಳಿಯಿಂದ ಫೋನ್ ಇನ್ ಕಾರ್ಯಕ್ರಮ

    ದೂರಿಗಾಗಿ ಜಲಮಂಡಳಿಯಿಂದ ಫೋನ್ ಇನ್ ಕಾರ್ಯಕ್ರಮ

    ಬೆಂಗಳೂರು: ಸಿಲಿಕಾನ್ ಸಿಟಿ ಜನರ ಸಮಸ್ಯೆಗಳನ್ನು ಆಲಿಸಲು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಫೋನ್ ಇನ್ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.

    ಬೆಂಗಳೂರು ಜಲಮಂಡಳಿಯು ಶನಿವಾರ ಬೆಳಗ್ಗೆ 9ರಿಂದ 10.30 ಗಂಟೆವರೆಗೆ ಮಂಡಳಿಯ ಅಧ್ಯಕ್ಷರೊಂದಿಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರು ತಮ್ಮ ತಮ್ಮ ಪ್ರದೇಶಗಳಲ್ಲಿನ ಕೊಳವೆ ಬಾವಿ ಸಮಸ್ಯೆ, ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಕಾಮಗಾರಿಗೆ ಅಂತ ತೆಗೆದ ಗುಂಡಿ ಹಲವು ದಿನಗಳಾದರೂ ಮುಚ್ಚದೇ ಇದ್ದರೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರನ್ನು ನೀಡಬಹುದಾಗಿದೆ.

    ನೀರಿನ ಸಂಪರ್ಕ ಪಡೆದ ಗ್ರಾಹಕರು ತಮ್ಮ ಆರ್.ಆರ್ ಸಂಖ್ಯೆಯನ್ನು ನೀಡಿ ದೂರನ್ನ ನೀಡಬಹುದಾಗಿದೆ. ಸಾರ್ವಜನಿಕರು 080-22945119 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕರಣೆಯಲ್ಲಿ ತಿಳಿಸಿದೆ.

  • ಪ್ರಾಥಮಿಕ ಶಿಕ್ಷಣ ಸಚಿವರಿಂದ ಡಿ.16ರಂದು ಫೋನ್ ಇನ್ ಕಾರ್ಯಕ್ರಮ

    ಪ್ರಾಥಮಿಕ ಶಿಕ್ಷಣ ಸಚಿವರಿಂದ ಡಿ.16ರಂದು ಫೋನ್ ಇನ್ ಕಾರ್ಯಕ್ರಮ

    – ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ

    ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಹಂಚಿಕೊಳ್ಳಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೇದಿಕೆ ಕಲ್ಪಿಸಿದೆ.

    ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ‘ಸಂವೇದನೆ’ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಸೆಂಬರ್ 16ರಂದು ಸಂಜೆ 5 ರಿಂದ 6.30 ಗಂಟೆವರೆಗೂ ಶಿಕ್ಷಣ ಸಚಿವರು ವಿವಿಧ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಕರೆ ಮಾಡಿ ಅಹವಾಲು, ಸಲಹೆ ಮತ್ತು ಸೂಚನೆಗಳನ್ನು ಪಡೆಯಬಹುದಾಗಿದೆ.

    ಸುರೇಶ್ ಕುಮಾರ್ ಅವರು ನವೆಂಬರ್ 2 ರಂದು ಮೊದಲ ಬಾರಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದರು. ಈ ಮೂಲಕ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ಸಲಹೆ, ಸಮಸ್ಯೆಗಳನ್ನು ಆಲಿಸಿದ್ದರು. ಡಿಸೆಂಬರ್ 16ರಂದು ಸಚಿವರು ಎರಡನೇ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸುರೇಶ್ ಕುಮಾರ್ ಅವರು, ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ತಿಂಗಳಲ್ಲಿ 2 ಬಾರಿ `ಸಂವೇದನೆ’ ಎನ್ನುವ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು.

    ಸುರೇಶ್ ಕುಮಾರ್ ಅವರಿಗೆ ಸಮಸ್ಯೆ, ಅವಹವಾಲು ಹಾಗೂ ಸಲಹೆ ನೀಡಿಲು ಬಯಸುವವರು ದೂರವಾಣಿ ಸಂಖ್ಯೆ 080- 26725654 ಅಥವಾ 080-26725655ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.