Tag: PhD student

  • ಪಿಹೆಚ್‌ಡಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು

    ಪಿಹೆಚ್‌ಡಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು

    ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ (Jnanabharathi Campus) ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟ ಘಟನೆ ನಡೆದಿದೆ.

    ವಿದ್ಯಾರ್ಥಿಯನ್ನು ರಂಗನಾಥ್ ನಾಯಕ್ (27) ಎಂದು ಗುರುತಿಸಲಾಗಿದೆ. ಈತ ಚಿಕ್ಕಬಳ್ಳಾಪುರ ಮೂಲದವನು. ಕಳೆದ ಕೆಲ ತಿಂಗಳುಗಳ ಹಿಂದೆ ಬಸ್ ಆ್ಯಕ್ಸಿಡೆಂಟ್ ನಲ್ಲಿ ರಂಗನಾಥ್ ಗಾಯಗೊಂಡಿದ್ದ. ನಂತರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಹೀಗಾಗಿ ಆಯುರ್ವೇದಿಕ್ ಔಷಧಿ ಪಡೆಯುತ್ತಿದ್ದನು.

    ಬುಧವಾರ ಬೆಳಗ್ಗೆ ಕ್ಯಾಂಟೀನ್ ಗೆ ಹೋಗಿ ತಿಂಡಿ ತಿಂದು ರೂಮಿಗೆ ಹೋಗಿದ್ದ ರಂಗನಾಥ್ ನಂತರ ರೂಮ್ ಲಾಕ್ ಹಾಕಿಕೊಂಡಿದ್ದ. ಮಧ್ಯಾಹ್ನ ರೂಮೇಟ್ ಹೋಗಿ ಬಾಗಿಲು ಬಡಿದಾಗ ತೆಗೆದಿಲ್ಲ. ಹೀಗಾಗಿ ಡೋರ್ ಒಡೆದು ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ರಂಗನಾಥ್ ಹೇಗೆ ಸಾವನ್ನಪ್ಪಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು‌ ಮಾಡಲಾಗಿದೆ.

  • ದೆಹಲಿ ಗಲಭೆ – ಜಾಮಿಯಾ ಪಿಹೆಚ್‍ಡಿ ವಿದ್ಯಾರ್ಥಿ ಅರೆಸ್ಟ್

    ದೆಹಲಿ ಗಲಭೆ – ಜಾಮಿಯಾ ಪಿಹೆಚ್‍ಡಿ ವಿದ್ಯಾರ್ಥಿ ಅರೆಸ್ಟ್

    ನವದೆಹಲಿ: ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ದೆಹಲಿ ಗಲಭೆಯ ವಿಚಾರವಾಗಿ ಜಾಮಿಯಾ ವಿವಿಯಲ್ಲಿ ಪಿಹೆಚ್‍ಡಿ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವಿದ್ಯಾರ್ಥಿಯನ್ನು ಮಿರಾನ್ ಹೈದರ್ ಎಂದು ಗುರುತಿಸಲಾಗಿದೆ. ಈತ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್.ಜೆ.ಡಿ) ದೆಹಲಿ ಯುವ ವಿಭಾಗದ ಮುಖ್ಯಸ್ಥನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತ ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂದು ಹೇಳಲಾಗಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅವರ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾಗ ಈ ಗಲಭೆ ನಡೆದಿತ್ತು. ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸತತ ನಾಲ್ಕು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಈ ಗಲಭೆಯಲ್ಲಿ 54 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

    ಈ ಹಿಂಸಾಚಾರವು ನೆರೆಹೊರೆಯ ಜನರ ನಡುವೆಯೇ ಜಗಳದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಈ ವೇಳೆ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟುಹಾಕಲಾಗಿತ್ತು. ಪೌರತ್ವ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ದೊಡ್ಡ ಮಟ್ಟದ ಘರ್ಷಣೆಯಾಗಿತ್ತು. ಇದರಲ್ಲಿ ಕೆಲವು ಪ್ರತಿಭಟನಾಕಾರರು ಬಂದೂಕು ಹಿಡಿದು ದಾಳಿ ಕೂಡ ಮಾಡಿದ್ದರು. ಜೊತೆಗೆ ಅನೇಕ ಪ್ರತಿಭಟನಾಕಾರರು ಗುಂಡೇಟಿನಿಂದ ಗಾಯಗೊಂಡಿದ್ದರು.

    ಟ್ರಂಪ್ ಅವರು ಭಾರತಕ್ಕೆ ಬಂದ ಸಮಯದಲ್ಲೇ ಉದ್ದೇಶಪೂರ್ವಕವಾಗಿಯೇ ಈ ಗಲಭೆಯನ್ನು ಸಂಘಟಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದವು. ಗಲಭೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ತಾಹೀರ್ ಹುಸೇನ್ ಮತ್ತು ಆತನ ಸಹೋದರ ಸೇರಿದಂತೆ 7 ಜನರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಹಿಂಸಾಚಾರದ ಸಮಯದಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತಾಹಿರ್ ಹುಸೇನ್ ಆರೋಪಿಯಾಗಿದ್ದಾನೆ.