Tag: petrol

  • ಶಾಸಕ ಬಾವಾರ ವಿಲಾಸಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್

    ಶಾಸಕ ಬಾವಾರ ವಿಲಾಸಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್

    ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಖರೀದಿಸಿರುವ ವೋಲ್ವೊ ಎಕ್ಸ್ ಸಿ 90 ಹೈಬ್ರಿಡ್ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಪರಿಣಾಮ ಕೆಲವು ಕಾಲ ಗದ್ದಲ ಏರ್ಪಟ್ಟ ಘಟನೆ ಸೋಮವಾರ ರಾತ್ರಿ ಶಿವಭಾಗ್ ಪೆಟ್ರೋಲ್ ಪಂಪ್‍ನಲ್ಲಿ ನಡೆದಿದೆ.

    ಮೊಯ್ದಿನ್ ಬಾವ ಅವರ ಪುತ್ರ ಮೆಹಸೂಬ್ ಪೆಟ್ರೋಲ್ ಹಾಕಲು ಕದ್ರಿಯ ಬಂಕ್‍ಗೆ ತಂದಿದ್ದಾರೆ. ಆದರೆ ಬಂಕ್ ನಿರ್ವಾಹಕ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ್ದಾನೆ. ಎಡವಟ್ಟಿನ ಬಳಿಕ ಹೌಹಾರಿದ ಬಾವ ಪುತ್ರ ಮತ್ತು ಬಂಕ್‍ನವರಿಗೆ ವಾಗ್ವಾದ ನಡೆದಿದೆ. ಕೊನೆಗೆ ಬಂಕ್ ಮಾಲೀಕರು ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

    ಈಗ ಕಾರು ಎಲ್ಲಿದೆ?
    ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಕಾರಣ ಕಾರಿನ ಎಂಜಿನ್‍ಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಕಾರನ್ನು ಬಂಕ್‍ನಲ್ಲಿ ಪಾರ್ಕ್ ಮಾಡಲಾಗಿತ್ತು. ವೋಲ್ವೋ ಸರ್ವೀಸ್ ಸೆಂಟರ್ ಮಂಗಳೂರಿನಲ್ಲಿ ಇಲ್ಲದ ಕಾರಣ ಬೆಂಗಳೂರಿನ ಡೀಲರ್‍ಗೆ ಮಾಹಿತಿ ಕೊಟ್ಟಿದ್ದು ವೋಲ್ವೋ ಕಂಪನಿಯ ಮೆಕ್ಯಾನಿಕ್‍ಗಳು ನಗರಕ್ಕೆ ಆಗಮಿಸಿ, ಈಗ ಕಾರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಶೋರೂಂನಲ್ಲಿ ರಿಪೇರಿಯಾದ ಬಳಿಕ ವೋಲ್ವೋ ಕಂಪೆನಿ ಕಾರನ್ನು ಮೊಯ್ದಿನ್ ಬಾವರಿಗೆ ನೀಡಲಿದೆ.

    ಬೆಲೆ ಎಷ್ಟು?
    ಪೆಟ್ರೋಲ್ ಹಾಗೂ ಬ್ಯಾಟರಿ ಎರಡರಲ್ಲೂ ಚಲಿಸುವ ಕಾರಿನ ಬೆಲೆ 1.5 ಕೋಟಿ ರೂ. ಆಗಿದ್ದು, ಭಾರತದಲ್ಲಿ ಇಂತಹ ಕಾರನ್ನು ಮೊದಲ ಬಾರಿಗೆ ವೋಲ್ವೋ ಪರಿಚಯಿಸಿದೆ. ಕೆಲ ದಿನ ಹಿಂದೆಯಷ್ಟೇ ವೋಲ್ವೋ ಹೈಬ್ರಿಡ್ ಕಾರನ್ನು ಶಾಸಕ ಬಾವ ಖರೀದಿಸಿದ್ದರು. ಈ ಮೂಲಕ ಭಾರತದ ಮೊದಲ ಗ್ರಾಹಕ ಎಂಬ ಹೆಸರಿಗೆ ಶಾಸಕ ಮೊಯ್ದಿನ್ ಬಾವ ಭಾಜನರಾಗಿದ್ದರು.

    ಮೈಲೇಜ್ ಎಷ್ಟು ನೀಡುತ್ತೆ?
    ಈ ಕಾರು ಒಂದು ಲೀಟರ್ ಪೆಟ್ರೋಲ್‍ಗೆ ನಗರದಲ್ಲಿ 35 ಕಿಮೀ ನೀಡಿದರೆ, ಹೈವೇಯಲ್ಲಿ 40 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಆಟೋಮೊಬೈಲ್ ವೆಬ್‍ಸೈಟ್‍ಗಳು ಪ್ರಕಟಿಸಿವೆ.1969 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ಈ ಕಾರು 225ಬಿಎಚ್‍ಪಿ ಮತ್ತು 4250 ಎನ್‍ಪಿ ಟಾರ್ಕ್ ಶಕ್ತಿ ಉತ್ಪಾದಿಸಬಲ್ಲುದು.

     

  • ಮರ ಕಡಿಯುವುದನ್ನು ವಿರೋಧಿಸಿದ 20ರ ಯುವತಿಯನ್ನು ಸಜೀವವಾಗಿ ದಹಿಸಿದ್ರು!

    ಮರ ಕಡಿಯುವುದನ್ನು ವಿರೋಧಿಸಿದ 20ರ ಯುವತಿಯನ್ನು ಸಜೀವವಾಗಿ ದಹಿಸಿದ್ರು!

    ಜೋಧ್‍ಪುರ: ಮರ ಕತ್ತರಿಸಲು ವಿರೋಧ ವ್ಯಕ್ತಪಡಿಸಿದ್ದಕ್ಕೆ 20 ವರ್ಷದ ಯುವತಿಯೊಬ್ಬಳನ್ನು ಸಜೀವವಾಗಿ ದಹಿಸಿರುವ ಘಟನೆ ರಾಜಸ್ಥಾನದ ಜೋಧ್‍ಪುರ್‍ನ ಗ್ರಾಮವೊಂದರಲ್ಲಿ ನಡೆದಿದೆ. ಘಟನೆ ಸಂಬಂಧ ರೆವೆನ್ಯೂ ಅಧಿಕಾರಿ ಸೇರಿದಂತೆ 10 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮೃತ ಯುವತಿಯನ್ನು ಲಲಿತಾ ಎಂದು ಗುರುತಿಸಲಾಗಿದೆ. ಜೋಧಪುರ್‍ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಬಳಿ ರಸ್ತೆ ನಿರ್ಮಾಣಕ್ಕಾಗಿ ತನ್ನ ಜಮೀನಿನಲ್ಲಿ ಮರಗಳನ್ನು ಕಡಿಯೋದನ್ನ ಯುವತಿ ವಿರೋಧಿಸಿದ್ದಳು. ಇದರಿಂದ ಕೆಲವು ಗ್ರಾಮಸ್ಥರು ಆಕೆಯ ಮೇಲೆ ದಾಳಿ ಮಾಡಿದ್ದು, ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಿಗ್ಗೆ ಲಲಿತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ರಸ್ತೆ ನಿರ್ಮಾಣದ ವಿಚಾರವಾಗಿ ಗಲಾಟೆಯಾಗಿತ್ತು. ನನ್ನ ಸಹೋದರಿ ಅದನ್ನು ವಿರೋಧಿಸಿದ್ದಳು. ಅವರು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು ಎಂದು ಯುವತಿಯ ಸಹೋದರ ವಿದ್ಯಾಧರ್ ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು, ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಗ್ರಾಮದ ಮುಖ್ಯಸ್ಥ ರಣವೀರ್ ಸಿಂಗ್ ಹಾಗೂ ರೆವೆನ್ಯೂ ಅಧಿಕಾರಿ ಓಂ ಪ್ರಕಾಶ್ ಸೇರಿದಂತೆ ಇನ್ನೂ ಕೆಲವರು ಸೇರಿ ಯುವತಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ರಾಷ್ಟ್ರೀಯ ಪತ್ರಿಕೆಯೊಂದಿಗೆ ಮಾತನಾಡಿ, ಗ್ರಾಮದ ಮುಖ್ಯಸ್ಥ ಹಾಗೂ ಇತತರು ಸೇರಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯಕ್ಕೆ ಯುವತಿಯ ಮೃತದೇಹ ಶವಾಗಾರದಲ್ಲಿದೆ. ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

  • ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ!

    ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ!

    ಬೆಳಗಾವಿ: ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿಹಚ್ಚಿಕೊಂಡು ರೈಲಿಗೆ ಸಿಲುಕಿ ಯುವತಿಯೋರ್ವಳು ಆತ್ಯಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ.

    18 ವರ್ಷದ ಸಂಜನಾ ಚಂದ್ರಕಾಂತ ಅಂಗ್ರೋಳಕರ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಿರಜದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲು ನಂಬರ್ 51419 ಟಿಳಕವಾಡಿ ಮೊದಲ ರೈಲ್ವೆ ಗೇಟ್ ಬಳಿ ಬಂದಾಗ ಈ ಘಟನೆ ನಡೆದಿದೆ.

    ರೈಲು ಗೇಟ್‍ನಿಂದ ಮುಂದೆ ಸಾಗುತ್ತಿದ್ದಂತೆ ಒಂದು ರೈಲ್ವೇ ಟ್ರ್ಯಾಕಿನಲ್ಲಿ ಬೆಂಕಿ ಕಾಣಿಸಿತು. ತಕ್ಷಣ ನಾನು ಮುಂದೆ ಹೋಗಿ ನೋಡಿದಾಗ ಅಲ್ಲಿ ಒಂದು ಶವದ ತಲೆಯ ಮುಂಭಾಗ ಹಾಗೂ ಒಂದು ಕಾಲು ರೈಲಿನ ಚಕ್ರಕ್ಕೆ ಸಿಲುಕಿತ್ತು. ಆ ಶವ ಹೊತ್ತಿ ಉರಿಯುತ್ತಿತ್ತು. ತಕ್ಷಣ ನಾನು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಪ್ರತ್ಯಕ್ಷದರ್ಶಿಯಾದ ಗೇಟ್ ಕೀಪರ್ ಹೇಳಿದ್ದಾರೆ.

    ಮನೆಯಿಂದ ಬರುವಾಗಲೆ ದೃಢ ನಿರ್ಧಾರ ಮಾಡಿದ್ದ ಸಂಜನಾ ಎರಡು ಬಾಟಲಿ ಪೆಟ್ರೋಲ್ ತುಂಬಿಕೊಂಡು ಯಾರಿಗೂ ಕಾಣದ ಹಾಗೆ ರೈಲು ಹಳಿಯ ಪಕ್ಕ ನಿಂತಿಕೊಂಡಿದ್ದಾಳೆ. ಯಾವಾಗ ಪ್ಯಾಸೆಂಜರ್ ರೈಲು ಬರುತ್ತಿರೋದು ಅವಳ ಕಣ್ಣಿಗೆ ಬಿತ್ತೋ ಅದೇ ಸಮಯಕ್ಕೆ ಆಕೆ ತನ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹಳಿಯ ಮೇಲೆ ಹಾರಿದ್ದಾಳೆ. ಒಂದು ವೇಳೆ ರೈಲಿಗೆ ಸಿಲುಕಿ ಪ್ರಾಣ ಹೊಗದಿದ್ದರೂ ಕಡೆ ಪಕ್ಷ ಬೆಂಕಿಯಿಂದಾದರೂ ಪ್ರಾಣ ಹೋಗಬೇಕು ಎಂದು ಈ ರೀತಿ ಮಾಡಿರಬಹುದು ಎಂದು ಡಿಸಿಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಟಿಳಕವಾಡಿ ಪೊಲೀಸ್ರು ಹಾಗೂ ಎಸಿಪಿ ಜಯಕುಮಾರ ಸ್ಥಳಕ್ಕೆ ಧಾವಿಸಿದ್ದು, ಪ್ರಥಮ ಮಾಹಿತಿ ಪಡೆದ ಬಳಿಕ ಪ್ರಕರಣವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

    ಆತ್ಮಹತ್ಯೆಗೆ ಕಾರಣ?: ಸಂಜನಾ ಮೊದಲಿನಿಂದಲೂ ಮಾಂಸಾಹಾರ ಪ್ರಿಯಳು. ಟ್ಯೂಬರ್‍ಕ್ಯುಲೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಸಂಜನಾಗೆ ಈ ಮೊದಲು ಒಂದು ಸರ್ಜರಿ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಸಂಜನಾ ಮಾಂಸಾಹಾರ ಊಟ ಮಾಡಿದರೆ ತಕ್ಷಣ ವಾಂತಿಯಾಗುತ್ತಿತ್ತು. ಮಾಂಸಾಹಾರ ಸಂಪೂರ್ಣವಾಗಿ ತ್ಯಜಿಸಬೇಕೆಂದು ವೈದ್ಯರು ಸಲಹೆ ಮಾಡಿದ್ದರು. ಇದರಿಂದ ಆಕೆ ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಮರಾಠಾ ಮಂಡಳ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಶನ್ ಡಿಪ್ಲೋಮಾ ಪದವಿ ಪಡೆದು ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ಸಂಜನಾ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದರಿಂದ ಇದೀಗ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    ಸ್ಥಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

    https://www.youtube.com/watch?v=9MmEywe9zfE

  • ಪೆಟ್ರೋಲ್ ಕೇಳಿದ್ರೆ ತುಂಬಿಸಿದ್ದೇ ಬೇರೆ- ಚಿಕ್ಕಬಳ್ಳಾಪುರದಲ್ಲಿ ಬಂಕ್‍ಗೆ ಜನರ ಮುತ್ತಿಗೆ, ಆಕ್ರೋಶ

    ಪೆಟ್ರೋಲ್ ಕೇಳಿದ್ರೆ ತುಂಬಿಸಿದ್ದೇ ಬೇರೆ- ಚಿಕ್ಕಬಳ್ಳಾಪುರದಲ್ಲಿ ಬಂಕ್‍ಗೆ ಜನರ ಮುತ್ತಿಗೆ, ಆಕ್ರೋಶ

    ಚಿಕ್ಕಬಳ್ಳಾಪುರ: ಪೆಟ್ರೋಲ್ ಬಂಕ್ ನಲ್ಲಿ ಆಸಲಿ ಪೆಟ್ರೋಲ್ ಬದಲು ನೀರು ಮಿಶ್ರಿತ ಪೆಟ್ರೋಲ್ ಮಾರಾಟ ಮಾಡುತ್ತಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಪಾಪಣ್ಣ ಎಂಬವರಿಗೆ ಸೇರಿದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ನೀರು ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಲಾಗಿದೆ. ನೀರು ಮಿಶ್ರಿತ ಪೆಟ್ರೋಲ್ ಹಾಕಿಸಿಕೊಂಡ ಬೈಕ್ ಎಲ್ಲೆಂದರಲ್ಲಿ ಕೆಟ್ಟು ನಿಂತಿದ್ದು, ಇದ್ರಿಂದ ರೊಚ್ಚಿಗೆದ್ದ ಗ್ರಾಹಕರು ಪೆಟ್ರೋಲ್ ಬಂಕ್‍ಗೆ ಮುತ್ತಿಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೆಟ್ರೋಲ್‍ನಲ್ಲಿ ನೀರು ಮಿಶ್ರಿತವಾಗಿರುವುದು ಬೆಳಕಿಗೆ ಬಂದಿದೆ. ಇದ್ರಿಂದ ರೊಚ್ಚಿಗೆದ್ದ ಗ್ರಾಹಕರು ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೆಟ್ರೋಲ್ ಬಂಕ್ ತೆರೆಯದಂತೆ ಮಾಲೀಕನಿಗೆ ಪೊಲೀಸರು ತಾಕೀತು ಮಾಡಿದ್ದಾರೆ.

  • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ತೈಲ ಕಂಪೆನಿಗಳು ಮಾರ್ಚ್ 15ರಂದು ದರವನ್ನು ಪರಿಷ್ಕರಿಸಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ(3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾಗಿದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗುವ ಸಾಧ್ಯತೆಯಿದೆ.

    ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

    ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇದೆ.

  • ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!

    ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!

    ಚಾಮರಾಜನಗರ: ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ ಸಿಕ್ಕಿದೆ.

    ಹೌದು. ಗುಂಡ್ಲುಪೇಟೆಯ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ರೋಡ್ ಶೋ ಆಯೋಜಿಸಿತ್ತು. ಈ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಾರ್ಯಕರ್ತರಿಗೆ 1 ಲೀಟರ್ ಉಚಿತ ಪೆಟ್ರೋಲ್ ಸಿಕ್ಕಿದೆ.

    ಉಚಿತ ಪೆಟ್ರೋಲ್ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಟೋಕನ್ ಹಂಚಿತ್ತು. ಈ ಕಾರ್ಯಕರ್ತರು ಬಂಕ್‍ನಲ್ಲಿ ಟೋಕನ್ ತೋರಿಸಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಹಾಕಿದ ಬಳಿಕ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದರು.

    ರೋಡ್ ಶೋದಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರಾದ ಯುಟಿ ಖಾದರ್, ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್, ಸಿಎಂ ಇಬ್ರಾಹಿಂ, ಸಂಸದ  ಧ್ರುವನಾರಾಯಣ, ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಪಾಲ್ಗೊಂಡಿದ್ದರು.

    ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಿಗೆ ಏಪ್ರಿಲ್ 9ಕ್ಕೆ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ಕ್ಷೇತ್ರ ತೆರವಾಗಿದ್ದರೆ, ಮಹದೇವ್ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆ ಕ್ಷೇತ್ರ ತೆರವಾಗಿದೆ.

    https://www.youtube.com/watch?v=NdGSmJ5EBIY

     

     

  • ಪತಿ ಗಂಡಸಲ್ಲ ಎಂದ ಪತ್ನಿ: ಸಾಯಲು ನೀರಿನ ಟ್ಯಾಂಕರ್ ಹತ್ತಿದ ಪತಿರಾಯ

    ಪತಿ ಗಂಡಸಲ್ಲ ಎಂದ ಪತ್ನಿ: ಸಾಯಲು ನೀರಿನ ಟ್ಯಾಂಕರ್ ಹತ್ತಿದ ಪತಿರಾಯ

    ಮೈಸೂರು: ನನ್ನ ಪತಿ ಗಂಡಸಲ್ಲ ಎಂದು ಹೆಂಡತಿ ಆರೋಪ ಮಾಡಿದಕ್ಕೆ ಮನನೊಂದ ಪತಿರಾಯ ಸಾಯಲು ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ನೀರಿನ ಟ್ಯಾಂಕರ್ ಹತ್ತಿದ್ದಾರೆ.

    ಅರುಣ್ ಕುಮಾರ್ ನೀರಿನ ಟ್ಯಾಂಕ್ ಏರಿದ ವ್ಯಕ್ತಿ. ಅರುಣ್ ಕುಮಾರ್ ನಗರದ ಗಾಯತ್ರಿಪುರಂ ನಿವಾಸಿ. ಪೇಂಟರ್ ಆಗಿ ಕೆಲಸ ಮಾಡಿಕೊಂಡಿರುವ ಅರುಣ್ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ನಂತರ ಮಕ್ಕಳಾಗದಕ್ಕೆ ಪತ್ನಿ ನೀನು ಗಂಡಸಲ್ಲ ಎಂದು ಹೇಳಿದ್ದಾರೆ.

    ಪತ್ನಿಯ ಮಾತುಗಳಿಂದ ಮನನೊಂದ ಅರುಣ್ ನೀರಿನ ಟ್ಯಾಂಕರ್ ಮೇಲಿಂದ ಕೆಳಗೆ ಬಿದ್ದು ಅಥವಾ ಕೈಯಲ್ಲಿರುವ ಪೆಟ್ರೋಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.ಸ್ಥಳಕ್ಕಾಗಮಿಸಿದ ಲಕ್ಷ್ಮೀಪುರಂ ಪೊಲೀಸರು ಅವರನ್ನು ರಕ್ಷಿಸಿ, ಅರುಣ್‍ರನ್ನು ವಶಕ್ಕೆ ಪಡೆದಿದ್ದಾರೆ.

     

  • ಕಾಲೇಜು ಆವರಣದಲ್ಲೇ ಲವರ್‍ಗೆ ಬೆಂಕಿ ಹಚ್ಚಿ ಬಳಿಕ ತನ್ನ ಮೇಲೂ ಹಚ್ಕೊಂಡ!

    ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜು ಆವರಣದಲ್ಲೇ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿ ಬಳಿಕ ತನ್ನ ಮೇಲೂ ಬೆಂಕಿ ಹಚ್ಚಿಕೊಂಡು ಇಬ್ಬರೂ ಮೃತಪಟ್ಟ ಶಾಕಿಂಗ್ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

    ಮೃತರನ್ನು 20 ವರ್ಷದ ಲಕ್ಷ್ಮೀ ಹಾಗೂ 26 ವರ್ಷದ ಆದರ್ಶ್ ಎಂಬುವುದಾಗಿ ಗುರುತಿಸಲಾಗಿದೆ.

    ನಡೆದಿದ್ದೇನು?: ಆದರ್ಶ್ ಕೊಲ್ಲಂ ಜಿಲ್ಲೆಯಲ್ಲಿರುವ ಸ್ಕೂಲ್ ಆಫ್ ಮೆಡಿಕಲ್ ಎಜುಕೇಶ್ ಕಾಲೇಜಿನ 2009ನೇ ಬ್ಯಾಚ್‍ನ ವಿದ್ಯಾರ್ಥಿಯಾಗಿದ್ದಾನೆ. ಲಕ್ಷ್ಮೀ 2013ನೇ ಬ್ಯಾಚ್‍ನ ವಿದ್ಯಾರ್ಥಿನಿಯಾಗಿದ್ದಾಳೆ. ಇವರಿಬ್ಬರೂ ಮರು ಪರೀಕ್ಷೆ ಬರೆಯಲೆಂದು ಬುಧವಾರ ಕಾಲೇಜಿಗೆ ಆಗಮಿಸಿದ್ದರು. ಮಧ್ಯಾಹ್ನದ ಫ್ರೀ ಟೈಮ್‍ನಲ್ಲಿ ಮಾತಾಡಲಿದೆ ಅಂತಾ ಆದರ್ಶ್ ಲಕ್ಷ್ಮೀಯನ್ನು ಕರೆದಿದ್ದಾನೆ. ಆದ್ರೆ ಇದನ್ನು ಲಕ್ಷ್ಮೀ ನಿರಾಕರಿಸಿದ್ದು, ತನ್ನ ಗೆಳತಿಯರೊಂದಿಗೆ ತರಗತಿಯಲ್ಲಿ ಕುಳಿತು ಮಾತನಾಡಿಕೊಂಡಿದ್ದಳು.

    ಇದರಿಂದ ಕೋಪಗೊಂಡ ಆದರ್ಶ್ ಕಾಲೇಜಿನ ಹೊರಗಡೆ ಹೋಗಿ ಬಂದವನೇ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಸಮೇತ ಒಳಗಡೆ ಬಂದು ಏಕಾಏಕಿ ಲಕ್ಷ್ಮೀ ಮೈ ಮೇಲೆ ಸುರಿಯಲು ಯತ್ನಿಸಿ, ಕೂಡಲೇ ಬೆಂಕಿ ಹಚ್ಚಲು ತನ್ನ ಕಿಸೆಯಲ್ಲಿದ್ದ ಲೈಟರ್‍ನ್ನು ತೆಗೆದಿದ್ದಾನೆ. ಈ ವೇಳೆ ಲಕ್ಷ್ಮೀ ಅಲ್ಲಿಂದ ಓಡಿಹೋಗಿದ್ದಾಳೆ. ಅಂತೆಯೇ ಆಕೆಯನ್ನು ಬೆನ್ನಟ್ಟಿದ ಆದರ್ಶ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ತಕ್ಷಣವೇ ಅಲ್ಲಿದ್ದ ವಿದ್ಯಾರ್ಥಿಗಳು ಅವರಿಬ್ಬರನ್ನೂ ರಕ್ಷಿಸಲು ಮುಂದಾದ್ರೂ ಬೆಂಕಿಯನ್ನು ಬೇಗನೇ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿತ್ತು. ಬಳಿಕ ಇಬ್ಬರನ್ನೂ ಕೊಟ್ಟಾಯಂನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

    ಘಟನೆಗೆ ಕಾರಣವೇನು?: ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇವರಿಬ್ಬರೂ ಪ್ರೇಮಿಗಳಾಗಿದ್ದರು. ಲಕ್ಷ್ಮೀ 2013ರಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದರೆ, ಆದರ್ಶ್ ಇದೇ ವಿಷಯದಲ್ಲಿ ಅಧ್ಯಯನ ಮಾಡಿದ್ದ. ಇತ್ತೀಚೆಗಷ್ಟೇ ಲಕ್ಷ್ಮೀ ಈ ಸಂಬಂಧದಿಂದ ದೂರವಿದ್ದರು. ಇದೇ ಈ ಘಟನೆಗೆ ಕಾರಣ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.