Tag: petrol bunk

  • ಪೆಟ್ರೋಲ್ ಬಂಕ್ ಒಳಗೆ ನುಗ್ಗಿದ KSRTC ಬಸ್

    ಪೆಟ್ರೋಲ್ ಬಂಕ್ ಒಳಗೆ ನುಗ್ಗಿದ KSRTC ಬಸ್

    ಬೆಂಗಳೂರು: ಬ್ರೇಕ್ ಫೈಲ್ಯೂರ್ ಮತ್ತು ಸ್ಟೇರಿಂಗ್ ಲಾಕ್ ಆದ ಕಾರಣ ನಿಯಂತ್ರಣ ತಪ್ಪಿ ಕೆಎಸ್‍ಆರ್ ಟಿಸಿ ಬಸ್ಸೊಂದು ಪೆಟ್ರೋಲ್ ಬಂಕ್ ಒಳಗೆ ನುಗ್ಗಿರುವ ಘಟನೆ ನಗರದಲ್ಲಿ ಸಂಭವಿಸಿದೆ.

    ಗೊರಗುಂಟೆ ಪಾಳ್ಯ ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿದ್ದು, ಕೆಎಸ್‍ಆರ್ ಟಿಸಿ ಬಸ್ ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯವಾಗಿದ್ದ ಕಾರಣ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ಎಚ್‍ಪಿ ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ.

    ಬಸ್ಸಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಸದ್ಯ ಈ ಅವಘಡದಿಂದ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪೆಟ್ರೋಲ್ ಹಾಕುವ ಕ್ಯಾಬಿನ್ ಪೈಪ್ ಲೈನ್, ಕಾಂಪೌಂಡ್ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

    ಈ ಕುರಿತು ಆರ್‍ಎಂಸಿ ಪೊಲೀಸ್ ಠಾಣೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಎಫ್‍ಐಆರ್ ದಾಖಲಿಸಿದ್ದಾರೆ. ಈ ಅವಘಡದಿಂದ ಸುಮಾರು 15 ಲಕ್ಷ ಕ್ಕಿಂತ ಹೆಚ್ಚಾಗಿ ಡ್ಯಾಮೇಜ್ ಆಗಿದೆ. ಆ ನಷ್ಟವನ್ನು ಕೆಎಸ್‍ಆರ್ ಟಿಸಿ ಕೊಡಬೇಕೆಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ವಿಡಿಯೋ: ಬೆಂಕಿಯಿಂದ ಧಗಧಗನೆ ಉರಿಯುತ್ತಿದ್ದ ಆಯಿಲ್ ಟ್ಯಾಂಕರನ್ನ ಬಂಕ್‍ನಿಂದ ದೂರ ಡ್ರೈವ್ ಮಾಡಿ ಜನರ ಪ್ರಾಣ ಉಳಿಸಿದ ಚಾಲಕ

    ವಿಡಿಯೋ: ಬೆಂಕಿಯಿಂದ ಧಗಧಗನೆ ಉರಿಯುತ್ತಿದ್ದ ಆಯಿಲ್ ಟ್ಯಾಂಕರನ್ನ ಬಂಕ್‍ನಿಂದ ದೂರ ಡ್ರೈವ್ ಮಾಡಿ ಜನರ ಪ್ರಾಣ ಉಳಿಸಿದ ಚಾಲಕ

    ಭೋಪಾಲ್: ಆಯಿಲ್ ಟ್ಯಾಂಕರ್ ನ ಚಾಲಕರೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಲವಾರು ಜನರ ಪ್ರಾಣ ಉಳಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ತನ್ನ ಸುರಕ್ಷತೆಯನ್ನೇ ಲೆಕ್ಕಿಸದೇ ಚಾಲಕ ಸಾಜಿದ್, ಬೆಂಕಿ ಹೊತ್ತಿಕೊಂಡಿದ್ದ ಆಯಿಲ್ ಟ್ಯಾಂಕರನ್ನ ಪೆಟ್ರೋಲ್ ಬಂಕ್‍ನಿಂದ ದೂರಕ್ಕೆ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಪೆಟ್ರೋಲ್ ಬಂಕ್‍ನಲ್ಲಿ ಇಂಧನಕ್ಕಾಗಿ ಹಲವಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ತನ್ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವನ್ನೇ ಸಾಜಿದ್ ತಪ್ಪಿಸಿದ್ದಾರೆ.

    ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ದೃಶ್ಯವನ್ನ ವಿಡಿಯೋ ಮಾಡಿದ್ದು, ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಆಯಿಲ್ ಟ್ಯಾಂಕರ್ ರಸ್ತೆಯಲ್ಲಿ ಬರೋದನ್ನ ನೋಡಿ ಜನ ಗಾಬರಿಗೊಂಡು ಓಡೋದನ್ನ ಕಾಣಬಹುದು. ಈ ವೇಳೆ ಬೈಕ್ ಸವಾರರು ರಸ್ತೆಬದಿ ಆಸರೆ ಪಡೆಯಲು ಯತ್ನಿಸಿದ್ದಾರೆ. ಅಗ್ನಿಶಾಮಕ ವಾಹನ ಬರುವವರೆಗೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

     

    ಟ್ಯಾಂಕರ್‍ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಹೇಗಾದರೂ ಮಾಡಿ ಪೆಟ್ರೋಲ್ ಬಂಕ್‍ನ ಅಂಡರ್‍ಗ್ರೌಂಡ್ ದಾಸ್ತಾನಿನಿಂದ ಅದನ್ನು ದೂರ ಸರಿಸಬೇಕೆಂದು ಯೋಚಿಸಿದೆ. ಒಂದು ವೇಳೆ ದಾಸ್ತಾನು ಪ್ರದೇಶಕ್ಕೆ ಬೆಂಕಿ ಆವರಿಸಿದ್ದರೆ ಘೋರ ದುರಂತವೇ ಸಂಭವಿಸುತ್ತಿತ್ತು ಎಂದು ಸಾಜಿದ್ ಹೇಳಿದ್ದಾರೆ.

    ಸಾಜಿದ್ ಅವರಿಗೆ ಕೈ ಮೇಲೆ ಸುಟ್ಟ ಗಾಯಗಳಾಗಿದ್ದು, ನರಸಿಂಗ್‍ಪುರ್‍ನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ಯಾಂಕರ್‍ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

  • ಬ್ಯಾನರ್ ವಿಚಾರಕ್ಕೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡ ಅರೆಸ್ಟ್

    ಬ್ಯಾನರ್ ವಿಚಾರಕ್ಕೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಜೆಪಿ ಮುಖಂಡರೊಬ್ಬರ ಅನುಯಾಯಿಗಳು ಗೂಂಡಾವರ್ತನೆ ತೋರಿದ್ದಾರೆ.

    ಕಾಂಗ್ರೆಸ್ ಶಾಸಕರ ಬ್ಯಾನರ್ ಕಟ್ಟಿದ್ದಕ್ಕೆ ಶಿವಾಜಿನಗರದ ಯೂನಿವರ್ಸಲ್ ಪೆಟ್ರೋಲ್ ಬಂಕ್ ಕ್ಯಾಷಿಯರ್‍ಗೆ ಥಳಿಸಲಾಗಿದೆ. ಪೆಟ್ರೋಲ್ ಬಂಕ್ ಮೇಲ್ಭಾಗದಲ್ಲಿ ಹಾಕಲಾಗಿದ್ದ ಸಚಿವ ರೋಷನ್ ಬೇಗ್ ಬ್ಯಾನರ್ ತೆಗೆಯುವಂತೆ ಗಲಾಟೆ ಮಾಡಿದ್ದಾರೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಹಲ್ಲೆ ಆರೋಪಿ ಬಾಲಕೃಷ್ಣ ಈ ಹಿಂದೆ ಜಯಮಹಲ್ ವಾರ್ಡ್ ನಿಂದ ಕಾರ್ಪೊರೇಟರ್ ಎಲೆಕ್ಷನ್ ಗೆ ನಿಂತು ಸೋತಿದ್ದನು. ಶುಕ್ರವಾರ ರಾಜು ಜೊತೆ ಸೇರಿ ಪೆಟ್ರೋಲ್ ಬಂಕ್‍ಗೆ ಬಂದು ದೊಣ್ಣೆಯಿಂದ ಅಲ್ಲಿದ್ದವರನ್ನು ಬೆದರಿಸಿದ್ದಾನೆ.

    ಈ ಬಗ್ಗೆ ಶಿವಾಜಿನಗರ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಸದ್ಯ ಅರೋಪಿ ಬಾಲಕೃಷ್ಣ ನನ್ನು ಅರೆಸ್ಟ್ ಮಾಡಿರುವ ಶಿವಾಜಿನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    https://www.youtube.com/watch?v=NUMLZJGk3tY

  • ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

    ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

    ವಾಷಿಂಗ್ಟನ್: ರಾತ್ರಿ ಹೊತ್ತಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಪೆಟ್ರೋಲ್ ಬಂಕ್ ತುಂಬಾ ನೆಲದ ಮೇಲೆ ಕುಳಿತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಇವು ಗ್ರಾಕಲ್ ಪಕ್ಷಿಗಳಾಗಿದ್ದು, ಟೆಕ್ಸಾಸ್‍ನ ಹೂಸ್ಟನ್ ನಲ್ಲಿರೋ ಎಕ್ಸಾನ್‍ಮೊಬಿಲ್ ಸ್ಟೇಷನ್ ನಲ್ಲಿ ಕುಳಿತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಮಾಧ್ಯಮವೊಂದರ ನಿರೂಪಕಿ ಕ್ರಿಸ್ಟೀನ್ ಡೊಬ್ಬಿನ್ ಫೆಬ್ರವರಿ 2ರಂದು ಪೆಟ್ರೋಲ್ ಹಾಕಿಸಲೆಂದು ಬಂಕ್‍ಗೆ ಹೋದಾಗ ಈ ದೃಶ್ಯ ಕಂಡುಬಂದಿದ್ದು, ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

     

    ಈ ಬಂಕ್‍ನಲ್ಲಿ ಮುಂಚೆಯೂ ಪಕ್ಷಿಗಳನ್ನ ನೋಡಿದ್ದೇನೆ. ಆದ್ರೆ ಇಷ್ಟೊಂದು ಸಂಖ್ಯೆಯಲ್ಲಿ ನೆಲದ ಮೇಲೆ ಕುಳಿತಿರೋದು ನೋಡಿರಲಿಲ್ಲ. ಸಾಮಾನ್ಯವಾಗಿ ಅವು ವಿದ್ಯುತ್ ತಂತಿಗಳ ಮೇಲೆ ಇರುತ್ತವೆ ಎಂದು ಕ್ರಿಸ್ಟೀನ್ ಹೇಳಿದ್ದಾರೆ. ಅಂದು ರಾತ್ರಿ ನಿಜಕ್ಕೂ ರೋಚಕವಾಗಿತ್ತು. ನಾನು ಕೊನೆಗೆ ಮತ್ತೊಂದು ಬಂಕ್‍ಗೆ ಹೋಗಬೇಕಾಯ್ತು. ಆದ್ರೆ ಅಲ್ಲೂ ಕೆಲವು ಪಕ್ಷಿಗಳಿದ್ದವು ಎಂದಿದ್ದಾರೆ.

    ಪಕ್ಷಿಗಳು ದಾಳಿ ಮಾಡಬಹುದೆಂಬ ಭಯವಿದ್ದರೂ ಯಾವುದೇ ತೊಂದರೆ ಇಲ್ಲದೆ ಕಾರಿಗೆ ಇಂಧನ ಹಾಕಿಸಿದೆ. ಆದ್ರೆ ಅಷ್ಟೊಂದು ಪಕ್ಷಿಗಳು ನೆಲದ ಮೇಲೆ ಯಾಕೆ ಕುಳಿತಿದ್ದವು ಅಂತ ಅರ್ಥವಾಗ್ಲಿಲ್ಲ ಎಂದಿದ್ದಾರೆ.

    ವಿಜ್ಞಾನಿಗಳು ಹೇಳೋದಿಷ್ಟು: ಅಷ್ಟೊಂದು ಪಕ್ಷಿಗಳು ನೆಲದ ಮೇಲೆ ಕುಳಿತಿದ್ದು ಯಾಕೆ ಅಂತ ಈಗ ವಿಜ್ಞಾನಿಗಳು ವಿವರಿಸಿದ್ದಾರೆ. ಈ ಹೊತ್ತಲ್ಲಿ ಪಕ್ಷಿಗಳು ಮರದಲ್ಲಿ ಮಲಗಿರಬೇಕಿತ್ತು. ಆದ್ರೆ ಪೆಟ್ರೋಲ್ ಬಂಕ್‍ನ ಪ್ರಕಾಶಮಾನವಾದ ವಿದ್ಯುತ್ ಬೆಳಕಿಗೆ ಆಕರ್ಷಿತವಾಗಿ ಅಲ್ಲಿಗೆ ಬಂದಿವೆ ಎಂದು ಹೇಳಿದ್ದಾರೆ.

    ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿಯ ಡಾ. ಕೆವಿನ್ ಮೆಕ್‍ಗಾವ್ನ್ ಈ ಬಗ್ಗೆ ಮಾತನಾಡಿ, ಈ ಜಾತಿಯ ಪಕ್ಷಿಗಳು ಸಾಮಾನ್ಯವಾಗಿ ಕಾರ್ ಪಾರ್ಕ್‍ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬಂದು ನಿದ್ದೆ ಮಾಡುತ್ತವೆ ಎಂದಿದ್ದಾರೆ.

    ಯೇಲ್‍ನ ಆರ್ನಿಥಾಲಜಿ(ಪಕ್ಷಿ ವಿಜ್ಞಾನ) ಪ್ರಾಧ್ಯಾಪಕರಾದ ರಿಚರ್ಡ್ ಪ್ರಮ್ ಪ್ರತಿಕ್ರಿಯಿಸಿ, ಬಹುಶಃ ಆ ರಾತ್ರಿ ಈ ಪಕ್ಷಿಗಳ ಮೂಲ ಸ್ಥಳದಲ್ಲಿ ಏನೋ ತೊಂದರೆಯಾಗಿರಬಹುದು. ಹೀಗಾಗಿ ಅವು ಹೆಚ್ಚಿನ ಬೆಳಕಿದ್ದ ಸ್ಥಳಕ್ಕೆ ಬಂದಿವೆ. ಪಕ್ಷಿಗಳ ನಿದ್ದೆಗೆ ಅಡಚಣೆಯಾಗಿ ಅವು ಕತ್ತಲಲ್ಲಿ ಆ ಸ್ಥಳವನ್ನ ಬಿಟ್ಟು ಬಂದಿವೆ ಎಂದಿದ್ದಾರೆ. ಇಂಥ ಸಂದರ್ಭದಲ್ಲಿ ಅವು ಸುರಕ್ಷಿತ ಜಾಗವನ್ನ ಹುಡುಕಿ ಹಾರಿಬಿಡುತ್ತವೆ. ಈ ಕಾರಣ ಚೆನ್ನಾಗಿ ಬೆಳಕಿದ್ದ ಪೆಟ್ರೋಲ್ ಬಂಕ್‍ಗೆ ಬಂದಿರಬಹುದು. ಅವು ಅಲ್ಲಿ ಏನೂ ತಿನ್ನುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಅಲ್ಲಿಗೆ ಅವು ಬರಲು ಬೆಳಕು ಹಾಗು ತೊಂದರೆ ಬರಲ್ಲ ಎನ್ನುವ ಕಾರಣ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದ್ದಾರೆ.

    https://www.youtube.com/watch?v=FofoSA-FKy0

  • ಬಂದ್ ಗಲಾಟೆ: ಮೈಸೂರು ಪೆಟ್ರೋಲ್ ಬಂಕ್‍ನಲ್ಲಿ ಹೈಡ್ರಾಮಾ

    ಬಂದ್ ಗಲಾಟೆ: ಮೈಸೂರು ಪೆಟ್ರೋಲ್ ಬಂಕ್‍ನಲ್ಲಿ ಹೈಡ್ರಾಮಾ

    ಮೈಸೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮೈಸೂರು ವಿಭಾಗದ ಪೆಟ್ರೋಲ್ ಬಂಕ್‍ಗಳನ್ನ ಇಂದು ಬಂದ್ ಮಾಡಲಾಗಿದೆ. ಈ ನಡುವೆ ಇಲ್ಲಿನ ಪೆಟ್ರೋಲ್ ಬಂಕ್‍ವೊಂದರಲ್ಲಿ ಹೈಡ್ರಾಮಾ ನಡೆದಿದೆ.

    ಅಧಿಕಾರಿಗಳ ಒತ್ತಡದಿಂದ ಲಕ್ಷ್ಮೀ ಸರ್ವಿಸ್ ಸ್ಟೇಷನ್ ಬಂಕ್ ಮಾಲೀಕರು ಬಾಗಿಲು ತೆರೆದು ಪೆಟ್ರೋಲ್ ಹಾಕುತ್ತಿದ್ರು. ಆಗ ಇತರೆ ಬಂಕ್‍ಗಳ ಮಾಲೀಕರು ಮುತ್ತಿಗೆ ಹಾಕಿ ಕೂಡಲೇ ಪೆಟ್ರೋಲ್, ಡೀಸೆಲ್ ಮಾರಟ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ರು. ಇದು ಅಧಿಕಾರಿಗಳು ಮತ್ತು ಬಂಕ್ ಮಾಲೀಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ವಾಹನ ಸವಾರರನ್ನು ಬಂಕ್ ಮಾಲೀಕರು ವಾಪಸ್ ಕಳುಹಿಸಿದ್ರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು.

    ಇದನ್ನೂ ಓದಿ: ಇನ್ಮುಂದೆ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ- ಪ್ರತಿದಿನದ ರೇಟ್ ಚೆಕ್ ಮಾಡೋದು ಹೇಗೆ?

    ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಗುರುವಾರದಂದು ಮೈಸೂರಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮೈಸೂರು ವಿಭಾಗದ ಪೆಟ್ರೋಲ್ ಬಂಕ್ ಬಂದ್‍ಗೆ ನೀಡಿದ್ದ ಕರೆಗೆ ಮಂಡ್ಯದಲ್ಲಿ ಉತ್ತಮವಾಗಿಯೇ ಬೆಂಬಲ ವ್ಯಕ್ತವಾಗಿದೆ. ಆದ್ರೆ ಬೆಳ್ಳಂಬೆಳಗ್ಗೆ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಬೈಕ್ ಹಾಗೂ ಖಾಸಗಿ ವಾಹನ ಸವಾರರುಗಳು ಕಂಗಾಲಾಗಿದ್ದಾರೆ. ಗುರುವಾರ ಮಧ್ಯರಾತ್ರಿಯೆಂದಲೇ ಪೆಟ್ರೋಲ್ ಬಂಕ್‍ಗಳು ಬಂದಾಗಿವೆ. ಇಂದು ಮಧ್ಯರಾತ್ರಿ 12 ಗಂಟೆವರೆಗೆ ಪೆಟ್ರೋಲ್ ಬಂಕ್ ಬಾಗಿಲು ಮುಚ್ಚಲಿವೆ.

     

  • ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

    ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

    ಬೆಂಗಳೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ವಿರೋಧಿಸಿ ಶುಕ್ರವಾರ ರಾಜ್ಯಾಧ್ಯಂತ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಂಕ್ ಮಾಲೀಕರು ಮುಂದಾಗಿದ್ದಾರೆ.

    ಬಂದ್‍ಗೆ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಬೆಂಬಲ ನೀಡಿದ್ದು, ಶುಕ್ರವಾರ ದೇವನಹಳ್ಳಿ ಪೆಟ್ರೋಲ್ ಟ್ಯಾಂಕರ್ ಟರ್ಮಿನಲ್‍ನಿಂದ ತೈಲವನ್ನು ಖರೀದಿಸದೇ ಇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ, ದೈನಂದಿನ ದರ ಪರಿಷ್ಕರಣೆಯಿಂದ ಕೇವಲ ಕಂಪನಿಗಳಿಗೆ ಲಾಭವಾಗಲಿದೆ. ದಿನವೊಂದಕ್ಕೆ 4000 ಕೋಟಿ ರೂ. ಲಾಭವಾಗಲಿದೆ. ಡೀಲರ್‍ಗಳಿಂದ ಕಿತ್ತುಕೊಳ್ಳಲು ಇಂಥಾ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.

    ನಿಜವಾದ ಉಪಯೋಗ ನೀಡಬೇಕು ಅಂದರೆ ಬ್ಯಾರಲ್ ದರಕ್ಕೆ ತಕ್ಕಂತೆ ತೆರಿಗೆಯನ್ನು ಕಡಿಮೆ ಮಾಡಬೇಕು. ತೈಲ ಕಂಪೆನಿಗಳ ಈ ನಿರ್ಧಾರವನ್ನು ವಿರೋಧಿಸಿ ಶುಕ್ರವಾರ ಒಂದು ದಿನ ದೇವನಹಳ್ಳಿ ಟ್ಯಾಂಕರ್ ಟರ್ಮಿನಲ್ ನಿಂದ ನಾವು ಪೆಟ್ರೋಲ್, ಡೀಸೆಲ್ ಖರೀದಿ ಮಾಡುವುದಿಲ್ಲ. ಸ್ಟಾಕ್ ಇರುವ ಪೆಟ್ರೋಲ್ ಮಾತ್ರ ಮಾರಾಟ ಮಾಡುತ್ತೇವೆ ಹೊರತು ಖರೀದಿ ಮಾಡುವುದಿಲ್ಲ ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಶುಕ್ರವಾರ ಎಲ್ಲಿಯವರೆಗೂ ಸ್ಟಾಕ್ ಇರುತ್ತದೋ ಅಲ್ಲಿಯವರೆಗೆ ಮಾರಾಟ ಮಾಡುತ್ತೇವೆ. ಗ್ರಾಹಕರಿಗೆ ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂದು ರವೀಂದ್ರ ಹೇಳಿದರು.

     

  • ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದ ಪೆಟ್ರೋಲ್ ಬಂಕ್ ಮಾಲೀಕರು

    ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದ ಪೆಟ್ರೋಲ್ ಬಂಕ್ ಮಾಲೀಕರು

    ಬೆಂಗಳೂರು: ಇವತ್ತು ಭಾನುವಾರ. ಆದರೂ ರಾಜ್ಯಾದ್ಯಂತ ಪೆಟ್ರೋಲ್ ಸಿಗುತ್ತೆ. ಇಂದಿನಿಂದ ಪ್ರತಿ ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ಮಾಲೀಕರು ಹಿಂದೆ ಸರಿದಿದ್ದಾರೆ.

    ಮೇ 17ರಂದು ಮುಂಬೈನಲ್ಲಿ ತೈಲ ಕಂಪನಿಗಳ ಜೊತೆಗೆ ಮಾತುಕತೆ ನಡೆಯಲಿದೆ. ಕಮಿಷನ್ ಹೆಚ್ಚಳ, ಡೀಲರ್‍ಗಳಿಗೆ ಹೆಚ್ಚಿನ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳ ಜಾರಿಗೆ ಬಂಕ್ ಮಾಲೀಕರು ಆಗ್ರಹಿಸುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಘೋಷಿಸಿ ಸೋಮವಾರ ಬೆಳಗ್ಗೆ 9ರಿಂದ 6 ಗಂಟೆವರೆಗೆ ಮಾತ್ರ ಬಂಕ್ ಓಪನ್ ಮಾಡಲು ತೀರ್ಮಾನಿಸಿದ್ದರು. ಆದ್ರೆ ಬುಧವಾರ ಮುಂಬೈನಲ್ಲಿ ಸಂಧಾನ ಸಭೆ ನಡೆಯೋ ಕಾರಣ ತಾತ್ಕಾಲಿಕವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರೋದಾಗಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.

    ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಗಳೇನು..?
    * ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು.
    * ಜನವರಿ-ಜುಲೈ ಒಳಗೆ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳ ಪರಿಷ್ಕರಣೆಯಾಗಬೇಕು
    * ಈಗ ಇರುವ ಕಮಿಷನ್ ಹೆಚ್ಚಳ ಮಾಡಬೇಕು
    * ಪೆಟ್ರೋಲ್‍ಗೆ 15, ಡೀಸೆಲ್‍ಗೆ 10 ಪೈಸೆ ಕಮಿಷನ್ ಮಾಲೀಕರಿಗೆ ನೀಡಲು ಒತ್ತಾಯ.
    * ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಾರದ ರಜೆ ಮಾಡಲು ತೀರ್ಮಾನಿಸಲಾಗಿದೆ
    ಅಪೂರ್ವ ಚಂದ್ರ ಕಮಿಟಿ ಶಿಫಾರಸ್ಸುಗಳೇನು?:
     ಪ್ರತಿ ಆರು ತಿಂಗಳಿಗೆ ಸಿಬ್ಬಂದಿ, ಮೂಲ ಸೌಕರ್ಯಗಳ ವೇತನ ಪರಿಷ್ಕರಣೆ ಮಾಡಬೇಕು
     ಡೀಲರ್‍ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು.
     ಈಗ ಇರುವ ಕಮಿಷನ್ ಅನ್ನು ಹೆಚ್ಚಳ ಮಾಡಬೇಕು.

    ಇದನ್ನೂ ಓದಿ:  ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

  • ತುಮಕೂರು: ಪೆಟ್ರೋಲ್ ಗೆ ಸೀಮೆಎಣ್ಣೆ ಬೆರೆಸಿದ ಆರೋಪ- ಗ್ರಾಹಕರ ಪ್ರತಿಭಟನೆ

    ತುಮಕೂರು: ಪೆಟ್ರೋಲ್ ಗೆ ಸೀಮೆಎಣ್ಣೆ ಬೆರೆಸಿದ ಆರೋಪ- ಗ್ರಾಹಕರ ಪ್ರತಿಭಟನೆ

    ತುಮಕೂರು: ಬಂಕ್‍ನಲ್ಲಿ ಪೆಟ್ರೋಲ್‍ಗೆ ಸೀಮೆಎಣ್ಣೆ ಮಿಶ್ರಣ ಮಾಡಿದ್ದಾರೆಂದು ಆರೋಪಿಸಿ ತುಮಕೂರಿನ ಗ್ರಾಹಕರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಕೆಆರ್ ಬಡಾವಣೆಯಲ್ಲಿರುವ ಅಣೇಕಾರ್‍ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಗ್ರಾಹಕರು ಪೆಟ್ರೋಲ್ ಹಾಕಿಸಿಕೊಳ್ಳುವ ವೇಳೆ ಸೀಮೆಎಣ್ಣೆ ವಾಸನೆ ಬಂದಿದೆ. ಈ ವೇಳೆ ಆಕ್ರೋಶಗೊಂಡ ಗ್ರಾಹಕರು ಬಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು.

    ಎ.ಪಿ.ವಾಸುದೇವ್ ಎಂಬವರಿಗೆ ಸೇರಿದ ಬಂಕ್ ಇದಾಗಿದ್ದು, ಈ ಮೊದಲೂ ಸಹ ಪೆಟ್ರೋಲ್‍ಗೆ ಸೀಮೆಎಣ್ಣೆ ಮಿಶ್ರಣವಾಗಿತ್ತು ಎನ್ನುವ ಆರೋಪ ಕೇಳಿಬಂದಿದೆ.