Tag: petrol bunk

  • ರಾಯಚೂರಲ್ಲಿ ಎಲ್ಲರಿಗೂ ಲಭ್ಯವಿಲ್ಲ ಪೆಟ್ರೋಲ್ – ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಬಂಕ್ ಓಪನ್

    ರಾಯಚೂರಲ್ಲಿ ಎಲ್ಲರಿಗೂ ಲಭ್ಯವಿಲ್ಲ ಪೆಟ್ರೋಲ್ – ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಬಂಕ್ ಓಪನ್

    ರಾಯಚೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದರೂ ಜನ ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಲೇ ಇದ್ದಾರೆ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಹೊಸ ತಂತ್ರಕ್ಕೆ ಮುಂದಾಗಿದೆ. ಪೆಟ್ರೋಲ್ ಬಂಕ್‍ಗಳಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ.

    ಕೊರೊನಾ ವೈರಸ್ ಸೋಂಕು ತಡೆಯುವ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಕೆಲಸಗಾರರು, ಸ್ವಯಂ ಸೇವಕರಿಗೆ ಮಾತ್ರ ಪೆಟ್ರೋಲ್ ಹಾಕಬೇಕು. ತುರ್ತು ಪರಸ್ಥಿತಿಯನ್ನು ಮಾತ್ರ ಪರಿಗಣಿಸಬೇಕು. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್ ತೆರೆಯಬೇಕು ಎಂದು ನಿಯಮ ಜಾರಿಗೆ ತರಲಾಗಿದೆ. ಅಲ್ಲದೆ ಬಾಟಲಿಗಳಲ್ಲಿ ಪೆಟ್ರೋಲ್ ಹಾಕಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

    ಬೈಕ್‍ವೊಂದಕ್ಕೆ 200 ರೂಪಾಯಿ ಪೆಟ್ರೋಲ್ ಹಾಗೂ ವಾಹನಗಳಿಗೆ 500 ರೂಪಾಯಿವರೆಗೆ ಮಾತ್ರ ಡಿಸೇಲ್ ಅಥವಾ ಪೆಟ್ರೋಲ್ ಹಾಕಲು ಸೂಚಿಸಲಾಗಿದೆ. ಜಿಲ್ಲಾಡಳಿತ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಕ್ರಮಗಳಿಗೆ ಮಾಲೀಕರು ಒಪ್ಪಿಕೊಂಡಿದ್ದು, ಇಂದಿನಿಂದ ಪೆಟ್ರೋಲ್ ಎಲ್ಲರಿಗೂ ಲಭ್ಯವಿಲ್ಲ. ತುರ್ತು ಪರಸ್ಥಿತಿ, ರೈತರ ವಾಹನಗಳಿಗೆ ಮಾತ್ರ ವಿನಾಯಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

    ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಮುಂದೆಯೂ ಕಾಣಿಸಿಕೊಳ್ಳದ ಹಾಗೇ ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯ ಇರುವುದರಿಂದ ಜಿಲ್ಲಾಡಳಿತ ಪೆಟ್ರೋಲ್ ಬಂಕ್‍ಗಳ ಮೇಲೆ ನಿರ್ಭಂದ ಹೇರಿದೆ.

  • ಕಲಬುರಗಿ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ

    ಕಲಬುರಗಿ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ

    ಕಲಬುರಗಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಮುಂದಿನ ಆದೇಶದವರೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಪೆಟ್ರೋಲ್ ಬಂಕ್‍ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

    ಈ ಆದೇಶವು ಸರ್ಕಾರಿ ವಾಹನಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ವಾಹನ, ಎಲ್ಲಾ ತರಹದ ಅಂಬುಲೆನ್ಸ್ ಗಳು, ಔಷಧ ವ್ಯಾಪಾರಿಗಳು, ಪತ್ರಕರ್ತರು, ಕೆಲವು ಅವಶ್ಯಕ ಸೇವಾ ವ್ಯಾಪ್ತಿ ಪಡುವ ಇಲಾಖೆಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಇಂಧನ ಭರಿಸುವ ಸಮಯದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಇಂಧನ ಭರಿಸಬೇಕೆಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.

    ಈ ಮೂಲಕ ಬೇಕಾ ಬಿಟ್ಟಿಯಾಗಿ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಈಗಾಗಲೇ ಕಲಬುರಗಿಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿದೆ.

  • ಕಲಬುರಗಿಯಲ್ಲಿ ಪೆಟ್ರೋಲ್ ಬಂಕ್ ಬಂದ್ ಸುಳ್ಳು ಸುದ್ದಿ – ರಾತ್ರೋರಾತ್ರಿ ಬಂಕ್‍ಗಳಿಗೆ ಮುಗಿಬಿದ್ದ ಜನ್ರು

    ಕಲಬುರಗಿಯಲ್ಲಿ ಪೆಟ್ರೋಲ್ ಬಂಕ್ ಬಂದ್ ಸುಳ್ಳು ಸುದ್ದಿ – ರಾತ್ರೋರಾತ್ರಿ ಬಂಕ್‍ಗಳಿಗೆ ಮುಗಿಬಿದ್ದ ಜನ್ರು

    ಕಲಬುರಗಿ: ಕೊರೊನಾ ವೈರಸ್‍ಗೆ ಬೆಳಲಿ ಬೆಂಡಾಗಿರುವ ಕಲಬುರಗಿ ಜನತೆಗೆ ಕೆಲ ಕಿಡಿಕೇಡಿಗಳು, ಲೈಕ್ ಕಾಮೆಂಟ್‍ಗಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಇದು ಪೆಟ್ರೋಲ್ ಬಂಕ್‍ಗಳಿಗೆ ಅನ್ವಯ ಆಗುವುದಿಲ್ಲ. ಆದರೆ ಕೆಲವರು ಪೆಟ್ರೋಲ್ ಬಂಕ್ ಬಂದ್ ಆಗುತ್ತೆ ಎಂದು ಮಂಗಳವಾರ ರಾತ್ರಿ ಸುಳ್ಳು ಸಂದೇಶ ಹರಿಬಿಟ್ಟಿದ್ದರು. ಈ ಸುಳ್ಳು ಸುದ್ದಿಯಿಂದ ಭಯಗೊಂಡ ಜನ ರಾತ್ರೋರಾತ್ರಿ ಬಂಕ್‍ಗಳಿಗೆ ಮುಗಿಬಿದ್ದರು. ಪರಿಣಾಮ ಕಲಬುರಗಿಯ ಬಂಕ್‍ಗಳ ಮುಂದೆ ಮಂಗಳವಾರ ರಾತ್ರಿ ವಾಹನಗಳು ಸರದಿ ಸಾಲಿನಲ್ಲಿ ನಿಂತು ಟ್ಯಾಂಕ್ ಫುಲ್ ಮಾಡಿಸಿಕೊಂಡರು.

    ಕಲಬುರಗಿಯಲ್ಲಿ ಕೊರೊನಾದಿಂದಾಗಿ ಲಾಕ್‍ಡೌನ್ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್, ಡಿಸೇಲ್ ಸಿಗಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಅಥವಾ ಇಲ್ಲಿನ ನಗರಸಭೆ ಆಗಲಿ ಯಾವುದೇ ರೀತಿಯ ಪೆಟ್ರೋಲ್ ಬಂಕ್‍ಗಳನ್ನು ಬಂದ್ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನೋಡಿ ತಮ್ಮ ದ್ವಿಚಕ್ರ ವಾಹನ ಹಾಗೂ ಕಾರು ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿಸಲು ಬಂಕ್ ಬಳಿ ಬಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಯುವಕ, ಮಂಗಳವಾರ ರಾತ್ರಿ ನನ್ನ ಸ್ನೇಹಿತ ಕರೆ ಮಾಡಿ ಈ ಮಾಹಿತಿ ನೀಡಿದ್ದನು. ಈ ವಿಷಯ ಕೇಳುತ್ತಿದ್ದಂತೆ ಹಲವು ಮಂದಿ ವಾಟರ್ ಬಾಟೆಲ್, ಫಿಲ್ಟರ್ ಕ್ಯಾನ್‍ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಡಿಸಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಈ ಸುದ್ದಿ ಹರಿದಿಡೆ. ಬಂಕ್ ಮಾಲೀಕ ಕೂಡ ಈ ಬಗ್ಗೆ ಬಾಯಿ ಬಿಟ್ಟು ಯಾರಿಗೂ ಏನೂ ಹೇಳುತ್ತಿಲ್ಲ. ನಮಗೆ ಲಾಭ ಆಗುತ್ತಿದೆ, ನಾವೇಕೆ ಹೇಳಬೇಕು ಎನ್ನುತ್ತಿದ್ದಾರೆ ಎಂದರು.

  • ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

    ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

    ಬೆಂಗಳೂರು: ನಾಯಿಯಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಬೆಂಗಳೂರಿನ ರಾಜಾರಾಜೇಶ್ವರಿನಗರ ಸಾಯಿ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ.

    ಖಾಸಗಿ ಕ್ಲಬ್‍ವೊಂದರಲ್ಲಿ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುವ ದೀಪಕ್ ಮತ್ತು ಸ್ನೇಹಿತ ಗಗನ್ ರಾತ್ರಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್‍ನಲ್ಲಿ ಹೋಗಿದ್ದರು. ಈ ವೇಳೆ ಪೆಟ್ರೋಲ್ ಬಂಕ್‍ಗೆ ಹೋಗುವ ದಾರಿಯಲ್ಲಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡಲಾಗಿ ಮಲಗಿತ್ತು.

    ನಾಯಿಯನ್ನು ನೋಡಿದ ದೀಪಕ್ ಅದನ್ನು ಪಕ್ಕಕ್ಕೆ ಹೋಗುವಂತೆ ಗದರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಯಿ ಮೇಲೆ ಯಾಕೆ ಗಲಾಟೆ ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಕೇಳಿದ ದೀಪಕ್ ನಾವು ಗಲಾಟೆ ಮಾಡುತ್ತಿಲ್ಲ ನಾಯಿಯನ್ನು ಪಕ್ಕಕ್ಕೆ ಹೋಗುವಂತೆ ಬೆದರಿಸುತ್ತಿದ್ದೇವೆ ಎಂದು ಹೇಳಿದ್ದರು.

    ಇದೇ ವಿಚಾರಕ್ಕೆ ನಾಲ್ವರ ಮಧ್ಯೆ ಗಲಾಟೆ ಆಗಿ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಟೆನ್ನಿಸ್ ಕೋಚ್ ದೀಪಕ್ ಮತ್ತು ಸ್ನೇಹಿತ ಗಗನ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಾದ ಗಗನ್ ತಮ್ಮ ಸ್ನೇಹಿತರಾದ ಮಧು, ಶಾನು ಎಂಬವರಿಗೆ ಫೋನ್ ಮಾಡಿ ಸಹಾಯಕ್ಕೆ ಕರೆದಿದ್ದರು.

    ಗಲಾಟೆ ಸ್ಥಳಕ್ಕೆ ಬಂದ ಮಧು, ಶಾನು ಕೂಡ ಕಾರಿನಲ್ಲಿದ್ದ ಇಬ್ಬರು ಅಪರಿಚಿತರ ಮೇಲೆ ಮರದ ದಿಮ್ಮಿಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೀದಿ ನಾಯಿಯ ಕ್ಷಲ್ಲಕ ವಿಚಾರಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ಬಂಕ್‍ನಲ್ಲಿ ಡೀಸೆಲ್ ಹಾಕಿಸುವಾಗ್ಲೇ ಹೊತ್ತಿ ಉರಿದ 34 ಪ್ರಯಾಣಿಕರಿದ್ದ ಬಸ್

    ಬಂಕ್‍ನಲ್ಲಿ ಡೀಸೆಲ್ ಹಾಕಿಸುವಾಗ್ಲೇ ಹೊತ್ತಿ ಉರಿದ 34 ಪ್ರಯಾಣಿಕರಿದ್ದ ಬಸ್

    ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಡಿಸೇಲ್ ಹಾಕಿಸುವಾಗಲೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು, ಬಸ್ ಸುಟ್ಟು ಕರಕಲಾಗಿ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ.

    ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಡಿವಾಳ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಭಾರತ್ ಪೆಟ್ರೋಲ್ ಬಂಕ್‍ನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 10:30ಕ್ಕೆ ವೇಳೆಗೆ ಬೆಂಗಳೂರಿನಿಂದ ಕೊಯಮತ್ತೂರಿಗೆ ಸಂಚಾರ ಮಾಡ್ತಿದ್ದ ಎಂಎಸ್‍ಎಸ್ ಟ್ರಾವೆಲ್ಸ್ ಬಸ್ ಡೀಸೆಲ್ ಹಾಕಿಸುವುದಕ್ಕೆ ಪೆಟ್ರೋಲ್ ಬಂಕ್‍ಗೆ ಹೋಗಿದೆ. ಡಿಸೇಲ್ ಹಾಕಿಸಿದ ಬಳಿಕ ಬಸ್ ಚಲಾಯಿಸಲು ಚಾಲಕ ಮುಂದಾದಾಗ ಶಾರ್ಟ್ ಸರ್ಕ್ಯೂಟ್‍ನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಈ ಬಸ್ಸಿನಲ್ಲಿ 34 ಜನ ಪ್ರಯಾಣಿಕರಿದ್ದರು. ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಚಾಲಕ ಮತ್ತು ಕಂಡಕ್ಟರ್ ಸೇರಿ 34 ಜನ ಪ್ರಯಾಣಿಕರು ಚೆಲ್ಲಾಪಿಲ್ಲಿ ಆಗಿದ್ದಾರೆ. ಬಳಿಕ ಬೆಂಕಿ ಕಾಣಿಸಿಕೊಂಡ ನಂತರ ನಾಲ್ಕು ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿ ಪೆಟ್ರೋಲ್ ಬಂಕ್‍ನಲ್ಲಿ ನಡೆಯಬೇಕಾಗಿದ್ದ ದೊಡ್ಡ ಅಗ್ನಿ ಅವಘಡವನ್ನ ತಡೆದಿದ್ದಾರೆ.

    ಸ್ಥಳದಲ್ಲೆ ಬಸ್ ಸುಟ್ಟು ಕರಕಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಮಡಿವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಮುಂದಾಗಿದ್ದಾರೆ.

  • ಒಂದೇ ವಾರಕ್ಕೆ ಮುಗೀತಾ ಪೊಲೀಸರ ಪೌರುಷ?- ಬಂಕ್‍ಗಳಲ್ಲಿ ಬಾಟಲ್‍ನಲ್ಲಿ ಸಿಗ್ತಿದೆ ಪೆಟ್ರೋಲ್

    ಒಂದೇ ವಾರಕ್ಕೆ ಮುಗೀತಾ ಪೊಲೀಸರ ಪೌರುಷ?- ಬಂಕ್‍ಗಳಲ್ಲಿ ಬಾಟಲ್‍ನಲ್ಲಿ ಸಿಗ್ತಿದೆ ಪೆಟ್ರೋಲ್

    ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಬಾಟಲ್‍ಗಳಲ್ಲಿ ಪೆಟ್ರೋಲ್ ನೀಡುವಂತಿಲ್ಲ ಎಂದು ಈಗಾಗಲೇ ಬೆಂಗಳೂರಿನ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಆಂಧ್ರಪ್ರದೇಶದ ಪಶು ವೈದ್ಯೆಯ ಕೊಲೆ, ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾದರೆ ಕಮಿಷನರ್ ಸೂಚನೆ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎಂದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿದೆ.

    ಆಂಧ್ರಪ್ರದೇಶದ ಪಶುವೈದ್ಯೆಯ ಕೊಲೆ, ಅತ್ಯಾಚಾರದ ವೇಳೆ ಆರೋಪಿಗಳು ಪೆಟ್ರೋಲ್ ಬಾಟೆಲ್‍ನಲ್ಲಿ ಖರೀದಿ ದೇಹವನ್ನ ಸುಟ್ಟು ಹಾಕಿದ್ದರು ಎಂದು ಪೊಲೀಸ್ ಮಾಹಿತಿ ಕಲೆಹಾಕಲಾಗಿತು. ಮುನ್ನಚ್ಚೆರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಳೆದ 10 ದಿನಗಳ ಹಿಂದೆಯೇ ಕಡ್ಡಾಯವಾಗಿ ಪೆಟ್ರೋಲ್ ಬಂಕ್‍ಗಳಲ್ಲಿ ಬಾಟಲ್‍ಗಳಲ್ಲಿ ಪೆಟ್ರೋಲ್ ನೀಡಬೇಡಿ ಅಂತ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಇದರ ಪಾಲನೆ ಆಗುತ್ತಲೇ ಇಲ್ಲ.

    ಸ್ಥಳ – ಕ್ವೀನ್ಸ್ ರೋಡ್
    ಸಮಯ – ಸಂಜೆ 4 ಗಂಟೆ
    ದಂಡು ರೈಲ್ವೇ ನಿಲ್ದಾಣದ ಸಮೀಪದಲ್ಲೇ ಅಂದ್ರೆ ಕ್ವೀನ್ಸ್ ರೋಡ್ ಬಳಿ ಇರುವ ಪೆಟ್ರೋಲ್ ಬಂಕ್‍ನಲ್ಲೂ ಯಾಕೆ, ಏನು, ಹೇಗೆ ಅಂತ ಕೇಳಲ್ಲ ಪೆಟ್ರೋಲ್ ಹಾಕಿ ಕಳಿಸುತ್ತಾರೆ. ಪೊಲೀಸ್ ಆಯುಕ್ತರ ಕಚೇರಿಗೆ 1 ಕಿಮೀ ದೂರದಲ್ಲೇ ಕಮೀಷನರ್ ಸೂಚನೆ ಕಿಮ್ಮತ್ತಿಲ್ಲ.

    ಪ್ರತಿನಿಧಿ – ಬ್ರೋ ಪೆಟ್ರೋಲ್
    ಸಿಬ್ಬಂದಿ – ಕಾಯಿರಿ
    ಪ್ರತಿನಿಧಿ – ಅಣ್ಣ ಬರೀ 30 ರೂ. ಪೆಟ್ರೋಲ್ ಹಾಕಣ್ಣ

    ಸ್ಥಳ – ಸೆಂಟ್ ಮಾರ್ಕ್ಸ್ ರೋಡ್
    ಸಮಯ -2. 30
    ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕಚೇರಿಗೆ ಕೇವಲ 1.5 ಕಿಮೀ ಅಂತರದಲ್ಲಿರುವ ಸೆಂಟ್ ಮಾರ್ಕ್ಸ್ ರೋಡಿನ ಪೆಟ್ರೋಲ್ ಬಂಕ್‍ನಲ್ಲೂ ಬಾಟಲ್‍ಗೆ ಪೆಟ್ರೋಲ್ ಕೇಳಿದಾಕ್ಷಣ ಕೊಟ್ಟು ಕಳಿಸುತ್ತಾರೆ.

    ಸ್ಟಿಂಗ್ ಬೈಟ್ 2
    ಪ್ರತಿನಿಧಿ – ಅಣ್ಣ ಕ್ಯಾನ್‍ಗೆ ಪೆಟ್ರೋಲ್ ಬೇಕು
    ಸಿಬ್ಬಂದಿ – ಒಂದ್ ನಿಮಿಷ ಕಾದರೆ ಎಷ್ಟು ಬೇಕಾದ್ರೂ ಕೊಡುತ್ತೀನಿ
    ಪ್ರತಿನಿಧಿ – ಬೇಗ ಹಾಕಣ್ಣ
    ಸಿಬ್ಬಂದಿ – ಏನ್ ಮಾಡೋದು ಹಾಕ್ತೀನಿ ಇರು

    ಈ ಮಧ್ಯೆ ಬೆರಳೆಣಿಕೆಯಷ್ಟು ಪೆಟ್ರೋಲ್ ಬಂಕ್‍ಗಳಲ್ಲಿ ಮಾತ್ರ ಲಿಖಿತವಾಗಿಯೇ ಪೆಟ್ರೋಲ್ ಕೊಡಲ್ಲ. ಪೊಲೀಸ್ ಆಯುಕ್ತರು ಬಾಟಲ್‍ನಲ್ಲಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಮೆಜೆಸ್ಟಿಕ್:
    ಪ್ರತಿನಿಧಿ – ಅಣ್ಣ ಕ್ಯಾನ್‍ಗೆ ಒಂದ್ ಚುರು ಪೆಟ್ರೋಲ್ ಹಾಕು
    ಸಿಬ್ಬಂದಿ – ಇಲ್ಲ ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು
    ಪ್ರತಿನಿಧಿ – ಕೊಡಬೇಕಾ
    ಸಿಬ್ಬಂದಿ – ಯಾಕೆ ಪೆಟ್ರೋಲ್ ಬೇಕು ಅಂತ ಹೇಳಬೇಕು
    ಪ್ರತಿನಿಧಿ – ಯಾವಾಗಿನಿಂದ ಹೀಗೆ
    ಸಿಬ್ಬಂದಿ – ಅದೇ ಆಂಧ್ರ ಹುಡುಗಿ ಕೇಸ್ ಆದ ಮೇಲೆ ಹೀಗೆ

    ಸ್ಥಳ – ಶೇಷಾದ್ರಿಪುರಂ
    ಸಮಯ – ಬೆಳಗ್ಗೆ 12 ಗಂಟೆ
    ಶೇಷಾದ್ರಿಪುರಂ ಬಂಕ್ ಅಂತೂ ಕೇವಲ 2.5 ಕಿಮೀ ಅಂತರದಲ್ಲಿ ಕಮೀಷನರ್ ಕಚೇರಿ ಇದೆ.  ಆದರೂ ಕಮಿಷನರ್ ಸೂಚನೆಗಳಿಗೆ ಮಣೆ ಹಾಕದೇ ವ್ಯಾಪಾರ ಮಾಡೊದನ್ನೇ ಮುಖ್ಯವಾಗಿಸಿಕೊಂಡು ಬಿಸಿಯಾಗಿ ಇರುತ್ತಾರೆ.

    ಸ್ಟಿಂಗ್ ಬೈಟ್ 4
    ಪ್ರತಿನಿಧಿ – ಅಣ್ಣ 30 ರೂ ಹಾಕಣ್ಣ
    ಸಿಬ್ಬಂದಿ – ಎಷ್ಟಕ್ಕೆ
    ಪ್ರತಿನಿಧಿ – 30 ರೂ
    ಸಿಬ್ಬಂದಿ – 20 ರೂ ವಾಪಸ್ ತಗೊಳ್ಳಿ

    ದಾಖಲೆಗಳ ವಿವರ ಹೀಗಿದೆ: ಆಧಾರ್ ಕಾರ್ಡ್ ಜೆರಾಕ್ಸ್ ನೀಡಬೇಕು. ಮನೆ ವಿಳಾಸ, ವೆಹಿಕಲ್ ನಂಬರ್ ಕೊಡಬೇಕು. ಯಾಕೆ ಪೆಟ್ರೋಲ್, ಎಲ್ಲಿಗೆ ಎಂಬ ಮಾಹಿತಿ ಕೊಡಬೇಕು. ಇದರೊಂದಿಗೆ ಫೋನ್ ನಂಬರ್ ಕೂಡ ಕೊಡಬೇಕು.

    ಒಟ್ಟಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಒಂದು ನೆನಪಿನಲ್ಲಿಡಬೇಕು ದುಡ್ಡು ಮಾಡುವುದು ದೊಡ್ಡದಲ್ಲ, ಮುಗ್ಧ ಜೀವ ಬಲಿಯಾಗಲು ನೀವೂ ಪರೋಕ್ಷ ಕಾರಣವಾಗದಿರಿ. ಪೊಲೀಸ್ ಆಯುಕ್ತರು ಸೂಚನೆ ಕೊಟ್ಟು ಸುಮ್ಮನಿದ್ದರೆ ಹೀಗೆ ಆಗುವುದು. ಅವರ ಕಚೇರಿ ಆಸುಪಾಸಿನಲ್ಲೇ ಹೀಗೆ ಕಿಮ್ಮತ್ತು ನೀಡುತ್ತಿಲ್ಲ, ಇನ್ನೂ ನಗರದಲ್ಲಿ ಎಲ್ಲೆಡೆ ಯಾವ ಸ್ಥಿತಿ ನೀವೇ ಲೆಕ್ಕ ಹಾಕಿಕೊಳ್ಳಿ. ಇದನ್ನ ನೋಡಿಯಾದ್ರೂ ಕಮಿಷನರ್ ಏನ್ ಕ್ರಮ ಕೈಗೊಳ್ತಾರೆ ಅಂತ ಕಾದುನೋಡಬೇಕಿದೆ.

  • ವಿಧವೆಗೆ ಪೆಟ್ರೋಲ್ ಬಂಕ್ ಕೊಡಿಸುವುದಾಗಿ 12 ಲಕ್ಷ ರೂ. ನಾಮ

    ವಿಧವೆಗೆ ಪೆಟ್ರೋಲ್ ಬಂಕ್ ಕೊಡಿಸುವುದಾಗಿ 12 ಲಕ್ಷ ರೂ. ನಾಮ

    ದಾವಣಗೆರೆ: ಪೆಟ್ರೋಲ್ ಬಂಕ್ ಕೊಡಿಸುವ ಆಮೀಷ ನೀಡಿ ಸ್ತ್ರೀ ಶಕ್ತಿ ಸಂಘದ ಒಕ್ಕೂಟದ ಅಧ್ಯಕ್ಷೆಯೊಬ್ಬಳು ಸದಸ್ಯೆಗೆ ವಂಚನೆ ಮಾಡಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

    ತಾಲೂಕಿನ ಕಾಕನೂರು ಗ್ರಾಮ ದಿವ್ಯಾ ವಂಚನೆ ಮಾಡಿರುವ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ. ದಿವ್ಯಾ ಸಂಘದ ಸದಸ್ಯೆ ಯಕ್ಕೆಗುಂದಿಯ ಪದ್ಮಾವತಿ ಎಂಬವರಿಗೆ ಸುಮಾರು 12 ಲಕ್ಷ ರೂ. ವಂಚಿಸಿದ್ದಾಳೆ ಎನ್ನುವ ಆರೋಪ ಕೇಳಿ ಬರುತ್ತಿದೆ. ದಿವ್ಯಾ ಹಾಗೂ ಪದ್ಮಾವತಿ ಸ್ತ್ರೀ ಶಕ್ತಿ ಸಂಘದ ಪ್ರಮುಖರಾಗಿದ್ದು, ಕಳೆದ ಆರು ವರ್ಷಗಳಿಂದ ಇಬ್ಬರು ಪರಿಚಯಸ್ಥರಾಗಿದ್ದರು. ಈ ವೇಳೆ ದಿವ್ಯಾ, ಪದ್ಮಾವತಿಗೆ ವಿಧವೆಯರಿಗೆ ಸರ್ಕಾರಿಂದ ಸಬ್ಸಿಡಿಯಾಗಿ ಪೆಟ್ರೋಲ್ ಬಂಕ್ ಮಾಡಿಸಿಕೊಡುವುದಾಗಿ ಆಮೀಷ ತೋರಿಸಿದ್ದಾಳೆ.

    ಮೋಸ ಹೋದ ಪದ್ಮಾವತಿ

    ಪೆಟ್ರೋಲ್ ಬಂಕ್ ಬಂದರೆ ಜೀವನೋಪಾಯಕ್ಕೆ ದಾರಿಯಾಗುತ್ತೆ ಎಂದು ಇದನ್ನು ನಂಬಿದ ಪದ್ಮಾವತಿ ನಿರಂತರವಾಗಿ ಒಟ್ಟು ಬ್ಯಾಂಕ್ ಹಾಗೂ ಮುಂಗಡವಾಗಿ ಒಟ್ಟು ಸುಮಾರು 12 ಲಕ್ಷ ರೂ. ಹಣ ನೀಡಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಅವರಿಂದ ಯಾವುದೇ ಕೆಲಸವಾಗಿಲ್ಲ. ಪೆಟ್ರೋಲ್ ಬಂಕ್ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿದ್ದಾಳೆ.

    ಪದ್ಮಾವತಿ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದು, ದಿವ್ಯಾ ತಪ್ಪಿಸಿಕೊಂಡು ಓಡಾಡುತ್ತಿದ್ದಾಳೆ. ಅಲ್ಲದೆ, ನೀವೇನಾದರೂ ತೀವ್ರ ಒತ್ತಾಯ ಮಾಡಿದರೆ ನಾನು ಏನಾದರೂ ಮಾಡಿಕೊಳ್ಳುತ್ತೇನೆ. ನಂತರ ಇದಕ್ಕೆ ನೀವೇ ಹೊಣೆಗಾರರು ಎಂದು ಬೆದರಿಕೆ ಹಾಕುತ್ತಿದ್ದಾಳೆ. ಹೀಗಾಗಿ ಪದ್ಮಾವತಿಗೆ ದಿಕ್ಕು ತೋಚದಂತಾಗಿದೆ. ಇದೀಗ ಪದ್ಮಾವತಿ ತಾವು ಕಳೆದುಕೊಂಡಿರುವ ತಮ್ಮ ಹಣ ಕೊಡಿಸುವಂತೆ ಕೋರಿ ಚನ್ನಗಿರಿಯ ಸಂತೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

  • ಪೆಟ್ರೋಲ್ ಹಣ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡರ ಹಲ್ಲೆ

    ಪೆಟ್ರೋಲ್ ಹಣ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡರ ಹಲ್ಲೆ

    ಬೀದರ್: ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡುವ ವಿಚಾರಕ್ಕೆ ಕೆಲ ಪುಂಡರು ಬಂಕ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ಭಾರತ್ ಪೆಟ್ರೋಲಿಯಂ ಬಂಕ್ ನಲ್ಲಿ ತಡರಾತ್ರಿ ನಡೆದಿದೆ.

    ತಡರಾತ್ರಿ ನಾಲ್ವರ ತಂಡವೊಂದು ಭಾಲ್ಕಿಯಲ್ಲಿನ ಭಾರತ್ ಪೆಟ್ರೋಲಿಯಂ ಬಂಕ್‍ಗೆ ಬಂದು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಸಿಬ್ಬಂದಿ ಹಣ ಕೇಳಿದಾಗ ಪುಂಡರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಂಕ್ ಸಿಬ್ಬಂದಿ ಹಣ ಕೊಡಿ ಎಂದಾಗ ನಮ್ಮ ಬಳಿ ಹಣ ಇಲ್ಲ. ಸ್ವೈಪಿಂಗ್ ಮಿಷನ್ ಇದ್ರೆ ಹೇಳಿ ಅದರಲ್ಲಿ ಹಾಕುತ್ತೇವೆ ಎಂದಿದ್ದಾರೆ. ಆಗ ಬಂಕ್ ಸಿಬ್ಬಂದಿ ನಮ್ಮಲ್ಲಿ ಸ್ವೈಪಿಂಗ್ ಮಿಷನ್ ಇಲ್ಲಾ ಹಣ ಕೊಡಿ ಎಂದಿದ್ದಾರೆ. ಈ ವೇಳೆ ಪುಂಡರು ಹಾಗೂ ಸಿಬ್ಬಂದಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಬಂಕ್ ಸಿಬ್ಬಂದಿಯ ಮೇಲೆ ಪುಂಡರು ಗಂಭೀರವಾಗಿ ಹಲ್ಲೆ ಮಾಡಿದ್ದು ಸಿಬ್ಬಂದಿಗೆ ತೀವ್ರವಾದ ಗಾಯಗಳಗಿವೆ. ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದು, ವಿಡಿಯೋ ಆಧಾರದ ಮೇಲೆ ನಗರದ ಪೊಲೀಸರು ತನಿಖೆ ನಡೆಸಿ ವಿಜಯಕುಮಾರ್, ದಿಲೀಪ್ ಹಾಗೂ ಮೇಘರಾಜ್ ಮೂವರು ಆರೋಪಿಗಳನ್ನು ಗುರುತಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪೆಟ್ರೋಲ್ ಬದ್ಲು ನೀರು ತುಂಬಿದ ಸಿಬ್ಬಂದಿ-ಕಾರ್, ಬೈಕ್‍ಗಳ ಇಂಜಿನ್ ಜಾಮ್

    ಪೆಟ್ರೋಲ್ ಬದ್ಲು ನೀರು ತುಂಬಿದ ಸಿಬ್ಬಂದಿ-ಕಾರ್, ಬೈಕ್‍ಗಳ ಇಂಜಿನ್ ಜಾಮ್

    ಯಾದಗಿರಿ: ಇಷ್ಟು ದಿನ ಕಲಬೆರಕೆ ಪೆಟ್ರೋಲ್ ದಂಧೆ ಜೋರಾಗಿ ನಡೆಯುತ್ತಿತ್ತು. ಆದರೆ ಇದೀಗ ಪೆಟ್ರೋಲ್ ಬಂಕ್ ಮಾಲೀಕನೊಬ್ಬ ಮತ್ತೊಂದು ಹೊಸ ಮೋಸಕ್ಕೆ ನಾಂದಿಯಾಡಿದ್ದಾನೆ.

    ಹೌದು. ಇಷ್ಟು ದಿನ ಕದ್ದು ಮುಚ್ಚಿ ಲೀಟರ್ ನಲ್ಲಿ ಮೋಸ ಮಾಡಿ, ವಾಹನ ಸವಾರರ ಹಣೆಗೆ ತಿರುಪತಿ ನಾಮ ಹಾಕುತ್ತಿದ್ದ ಪೆಟ್ರೋಲ್ ಬಂಕ್ ಗಳು, ಈಗ ಹಾಡ ಹಗಲೇ ಹೊಸ ದಂಧೆ ಶುರುವಿಟ್ಟುಕೊಂಡಿವೆ. ಹಾಲಿಗೆ ನೀರು ಬೆರೆಸಿದಂತೆ ಯಾದಗಿರಿಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ ಬಳಿಯ ಎಚ್‍ಪಿ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಬದಲಿಗೆ ನೀರೇ ಬಂದಿದೆ.

    ಇಷ್ಟು ದಿನ ಎಗ್ಗಿಲ್ಲದೆ ನಡೆಯುತ್ತಿದ್ದ ಈ ಪೆಟ್ರೋಲ್ ದಂಧೆ ಇಂದು ಬಟಾಬಯಲಾಗಿದೆ. ಸ್ವತಃ ವಾಹನ ಸವಾರರೇ ಈ ಕರಾಳ ದಂಧೆಯನ್ನು ಬಯಲಿಗೆಳೆದಿದ್ದಾರೆ. ಯಾದಗಿರಿ ನಿವಾಸಿ ಮಂಜುನಾಥ್ ಎಂಬವರು ಸಂಜೆ ತಮ್ಮ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿದ್ದರು. ಬಳಿಕ ಸ್ವಲ್ಪ ದೂರ ತೆರಳುತಿದ್ದಂತೆಯೇ ಕಾರು ಇಂಜಿನ್ ಜಾಮ್ ಆಗಿದೆ. ಆಗ ಸ್ಥಳಕ್ಕೆ ಮೆಕಾನಿಕ್ ಕರೆಸಿ ಕಾರ್ ಚೆಕ್ ಮಾಡಿಸಿದಾಗ ಮೋಸ ಬಯಲಿಗೆ ಬಂದಿದೆ.

    ಇದಿಷ್ಟೇ ಅಲ್ಲ, ಈ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ 50ಕ್ಕೂ ಹೆಚ್ಚು ವಾಹನಗಳ ಕಥೆಯೂ ಇದೇ ಆಗಿದೆ. ಇದರಿಂದ ರೊಚ್ಚಿಗೆದ್ದ ಬೈಕ್ ಸವಾರರು, ಬಂಕ್ ಮಾಲೀಕನಿಗೆ ಚಳಿ ಬಿಡಿಸಿದ್ದಾರೆ. ವಾಹನಗಳ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

  • ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

    ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

    ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪುವ ಸವಾರರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು “ನೋ ಹೆಲ್ಮೆಟ್ ನೋ ಪೆಟ್ರೋಲ್” ಎಂಬ ಬೆಂಗಳೂರು ಸಂಚಾರಿ ಪೊಲೀಸರ ಹೊಸ ನಿಯಮಕ್ಕೆ ದ್ವಿಚಕ್ರ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ನಿಯಮ ಒಳ್ಳೆಯದು. ಆದರೆ ಮೊದಲು ಪೊಲೀಸರು ಅವರು ಕೆಲಸವನ್ನು ಅವರು ಸರಿಯಾಗಿ ಮಾಡಲಿ. ಬಂಕ್ ಪಕ್ಕದಲ್ಲಿ ಮನೆ ಇದ್ದರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ ಎಂದು ಪ್ರಶ್ನಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ಹೊಸ ನಿಯಮ ನಾಳೆಯಿಂದ ಜಾರಿಯಾಗುವ ಸಾಧ್ಯತೆ ಇದೆ. ಆದರೆ ಈ ವಿಚಾರವಾಗಿ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಸಂಚಾರಿ ಪೊಲೀಸರು ಇನ್ನೂ ಚರ್ಚಿಸಿಲ್ಲ ಎನ್ನಲಾಗಿದೆ. ಅದ್ದರಿಂದ ಪೆಟ್ರೋಲ್ ಬಂಕ್ ಮಾಲೀಕರು ಈ ಹೊಸ ನಿಯಮಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಾಲೀಕರು ಸೂಚನೆ ನೀಡದೇ ಇರುವ ಕಾರಣ ನಗರದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಇಲ್ಲದಿದ್ದರೂ ಪೆಟ್ರೋಲ್ ಹಾಕುವ ಸಾಧ್ಯತೆ ಹೆಚ್ಚಿದೆ.

    ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್ ಹೊಸ ನಿಯಮ ಜಾರಿ ಸಂಬಂಧ ಸಹಕಾರ ಕೋರಿ ಇಂಧನ ಕಂಪನಿಗಳ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರ ಕಡೆಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

    ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈ ನಿಯಮ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ.