Tag: petrol

  • ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

    ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

    ನವದೆಹಲಿ: ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆ ಪೆಟ್ರೋಲ್-ಡೀಸೆಲ್ ಬೆಲೆಗೆ ಸಮನಾಗಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

    ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FICCI) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲೆಕ್ಟ್ರಿಕ್ ವಾಹನಗಳನ್ನು (Electric Vehilce) ಬಿಡುಗಡೆ ಮಾಡಿದಾಗ, ಬ್ಯಾಟರಿ ಬೆಲೆ ಪ್ರತಿ ಕಿಲೋವ್ಯಾಟ್ ಗಂಟೆಗೆ 150 ಡಾಲರ್‌ ಆಗಿತ್ತು. ಇಂದು ಅದು ಪ್ರತಿ ಕಿಲೋವ್ಯಾಟ್ ಗಂಟೆಗೆ 55 ಡಾಲರ್‌ನಿಂದ 65 ಡಾಲರ್‌ಗೆ ಇಳಿಕೆಯಾಗಿದೆ. ಮುಂಬರುವ ನಾಲ್ಕರಿಂದ ಆರು ತಿಂಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳು ಪೆಟ್ರೋಲ್-ಡೀಸೆಲ್ ಬೆಲೆಗೆ ಸಮಾನವಾಗುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

     

    ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆ ಮಾಡುವುದು ಆರ್ಥಿಕತೆ ದೃಷ್ಟಿಯಿಂದ ಹಾನಿಕಾರಕ. ಭಾರತವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯು ಆರ್ಥಿಕ ಹೊರೆಯಾಗಿದೆ. ಇಂಧನ ಆಮದಿಗೆ ವಾರ್ಷಿಕವಾಗಿ 22 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಎಥೆನಾಲ್, ಸಿಎನ್‌ಜಿ ಅಥವಾ ಐಸೊಬುಟನಾಲ್‌ನಲ್ಲಿ ಚಲಿಸುವ ಎಲೆಕ್ಟ್ರಿಕ್ ಟ್ರಾಕ್ಟರ್‌ಗಳು ಮತ್ತು ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು ಟ್ರಾಕ್ಟರ್ ತಯಾರಕರು ಮತ್ತು ಕೃಷಿ ಸಂಶೋಧಕರಿಗೆ ಸಭೆಯಲ್ಲಿ ಹೇಳಿದ್ದೇನೆ ಎಂದರು.  ಇದನ್ನೂ ಓದಿ:  ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಈ ನಾವೀನ್ಯತೆಗಳು ಡೀಸೆಲ್ ಆಮದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಗ್ರಾಮೀಣ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.

    ನಾನು ಸಾರಿಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಭಾರತೀಯ ಆಟೋಮೊಬೈಲ್ (Indian Automobile) ಉದ್ಯಮದ ಗಾತ್ರ 14 ಲಕ್ಷ ಕೋಟಿ ರೂ. ಇತ್ತು. ಈಗ ಭಾರತೀಯ ಆಟೋಮೊಬೈಲ್ ಉದ್ಯಮದ ಗಾತ್ರ 22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.

    ಪ್ರಸ್ತುತ ಅಮೆರಿಕದ ಆಟೋಮೊಬೈಲ್ ಉದ್ಯಮದ ಗಾತ್ರ 78 ಲಕ್ಷ ಕೋಟಿ ರೂ. ಇದ್ದರೆ ಚೀನಾ 47 ಲಕ್ಷ ಕೋಟಿ ರೂ. ಹೊಂದಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.

  • ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ನವದೆಹಲಿ:ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್‌ ಕುಸಿತವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ (Union Govt) ಸ್ಪಷ್ಟನೆ ನೀಡಿದೆ.

    ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ನಿಂದ (Ethanol Blending Petrol) ಮೈಲೇಜ್‌ (Mileage) ಕುಸಿತವಾಗಿದೆ ಎಂಬ ಆರೋಪಿಸಿದ ಬೆನ್ನಲ್ಲೇ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ದೀರ್ಘವಾದ ಪೋಸ್ಟ್‌ ಪ್ರಕಟಿಸಿ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ. ಅಷ್ಟೇ ಅಲ್ಲದೇ ವಾಹನದ ವಿಮೆಗಳು (Vehicle Insurance) ರದ್ದಾಗುವುದಿಲ್ಲ ಎಂದು ಹೇಳಿದೆ.

    ಏನಿದು E20 ಇಂಧನ?
    2003ಕ್ಕೆ ಮೊದಲು ಭಾರತದಲ್ಲಿ (India) ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್‌ ಬಂಕ್‌ಗಳಿಗೆ ಬರುತ್ತಿದ್ದವು. ಆದರೆ ಈಗ ಪೆಟ್ರೋಲ್‌ ಜೊತೆ ಎಥೆನಾಲ್‌ ಮಿಶ್ರಣವಾಗಿರುವ ಇಂಧನ ಬರುತ್ತಿದೆ.

    20% ಎಥೆನಾಲ್‌ ಮತ್ತು 80% ಬಾಕಿ ಪೆಟ್ರೋಲ್‌ ಮಿಶ್ರಿತ ತೈಲವನ್ನು ಇ20 ತೈಲ ಎನ್ನುತ್ತಾರೆ. ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯದಿಂದ ತಯಾರಿಸಲಾದ ಜೈವಿಕ ಇಂಧನವನ್ನು ಎಥೆನಾಲ್‌ ಎಂದು ಕರೆಯಲಾಗುತ್ತದೆ. 2003ರಲ್ಲಿ ಭಾರತದಲ್ಲಿ ಇ5 ಇಂಧನ ಸಿಗತೊಡಗಿತು. 2022ರ ವೇಳೆಗೆ ದೇಶದಲ್ಲಿ ಇ10 ಇಂಧನ ಮಾರಾಟವಾಗುತ್ತಿತ್ತು. 2023ರಲ್ಲಿ ಕೆಲ ನಗರಗಳಲ್ಲಿ ಪ್ರಾಯೋಗಿಕವಾಗಿ ಇ20 ಇಂಧನ ಮಾರಾಟ ಮಾಡಲಾಗುತ್ತಿತ್ತು. 2025 ರಿಂದ ದೇಶಾದ್ಯಂತ ಇ20 ಇಂಧನ ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

    ಸ್ಪಷ್ಟನೆಯಲ್ಲಿ ಏನಿದೆ?
    ಚಾಲನಾ ಅಭ್ಯಾಸಗಳು, ವಾಹನ ನಿರ್ವಹಣೆ, ಟೈರ್ ಒತ್ತಡ ಮತ್ತು ಹವಾನಿಯಂತ್ರಣ ಬಳಕೆಯಂತಹ ಅಂಶಗಳು ವಾಹನದ ಮೈಲೇಜ್‌ ಮೇಲೆ ಪ್ರಭಾವ ಬೀರುತ್ತವೆ.

    2009 ರಿಂದಲೂ ಅನೇಕ ವಾಹನಗಳು E20 ಇಂಧನಕ್ಕೆ ಹೊಂದಾಣಿಕೆಯಾಗುತ್ತಿವೆ. ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌, ಆಟೋಮೊಟಿವ್‌ ರಿಸರ್ಚ್‌ ಆಸೋಸಿಯೇಷನ್‌ ಆಫ್‌ ಇಂಡಿಯಾ, ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರ್ಸ್‌ ನಡೆಸಿದ ಸಂಶೋಧನೆಯಿಂದ E20 ಇಂಧನವು ಉತ್ತಮ ವೇಗವರ್ಧನೆ ಮತ್ತು E10 ಇಂಧನಕ್ಕಿಂತ 30% ರಷ್ಟು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ನೀಡುತ್ತದೆ ಎಂದು ಕಂಡುಹಿಡಿದಿದೆ.

    E20 ಬಳಸುವುದರಿಂದ ವಾಹನ ವಿಮೆ ರದ್ದಾಗುತ್ತದೆ ಎಂಬ ಹೇಳಿಕೆ ಆಧಾರರಹಿತ ಮತ್ತು ಉದ್ದೇಶಪೂರ್ವಕ ಭಯ ಹುಟ್ಟಿಸುವ ಹೇಳಿಕೆಯಾಗಿದೆ. ಎಥೆನಾಲ್-ಮಿಶ್ರಿತ ಇಂಧನವನ್ನು ಬಳಸುವ ವಾಹನಗಳಿಗೆ ವಿಮಾ ರಕ್ಷಣೆ ಸಿಗಲಿದೆ. ಹಳೆಯ ವಾಹನಗಳಲ್ಲಿ ಅಗತ್ಯವಿರುವ ಯಾವುದೇ ಸಣ್ಣ ಭಾಗಗಳ ಬದಲಾವಣೆಯನ್ನು ಕಂಪನಿಯ ಅಧಿಕೃತ ವರ್ಕ್‌ಶಾಪ್‌ನಲ್ಲಿ ಮಾಡಿಕೊಳ್ಳಬಹುದು.

    ಜೈವಿಕ ಇಂಧನಗಳು ಮತ್ತು ನೈಸರ್ಗಿಕ ಅನಿಲವು ಭಾರತದ ಸೇತುವೆ ಇಂಧನಗಳು. ಕಬ್ಬು ಆಧಾರಿತ ಎಥೆನಾಲ್‌ನಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ಪೆಟ್ರೋಲ್‌ಗಿಂತ 65% ರಷ್ಟು ಕಡಿಮೆ ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್‌ನಿಂದ 50% ರಷ್ಟು ಕಡಿಮೆಯಾಗಿದೆ ಎಂದು ನೀತಿ ಆಯೋಗದ ಅಧ್ಯಯನ ಹೇಳಿದೆ.

    ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 1.44 ಲಕ್ಷ ಕೋಟಿಗೂ ರೂ. ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ. ಇಂಗಾಲದ ಡೈಆಕ್ಸೈಡ್ ಅಂದಾಜು 736 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಡಿಮೆಯಾಗಿದ್ದು ದು 30 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ.

    ಬ್ರೆಜಿಲ್‌ನಲ್ಲಿ ಕೆಲ ವರ್ಷಗಳಿಂದ E27 ಇಂಧನ ಬಳಕೆ ಮಾಡುತ್ತಿದ್ದು ಅಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಯಶಸ್ವಿಯಾಗಿದೆ. ಟೊಯೋಟಾ, ಹೋಂಡಾ, ಹುಂಡೈ ಮುಂತಾದ ವಾಹನ ತಯಾರಕರು ಅಲ್ಲಿಯೂ ವಾಹನಗಳನ್ನು ಉತ್ಪಾದಿಸುತ್ತಾರೆ ಎಂದು ಸ್ಪಷ್ಟನೆಯಲ್ಲಿ ಹೇಳಿದೆ.

  • ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಅಪ್ಪ-ಮಗ ಅಂದರ್

    ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಅಪ್ಪ-ಮಗ ಅಂದರ್

    ಚಿಕ್ಕಮಗಳೂರು: ಪೆಟ್ರೋಲ್ ಪೈಪ್ ಲೈನ್ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನ ಮೂಡಿಗೆರೆ ತಾಲೂಕಿ‌ನ ಹಿರೇಶಿಗಿರ ಗ್ರಾಮದ ವಿಜಯ್ ಕುಮಾರ್ ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೆಟ್ರೋನೆಟ್ ಕಂಪನಿಯ ಪೈಪ್‌ಲೈನ್ ಕೊರೆದು ಟಿಪ್ಪರ್ ಲಾರಿಯೊಳಗೆ ಟ್ಯಾಂಕರ್ ಕೂರಿಸಿ ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಕಂಪನಿಯ ಮ್ಯಾನೇಜರ್ ದೂರು ದಾಖಲಿಸಿದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ 2011ರಲ್ಲೂ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ಕಳ್ಳತನ ನಡೆಸಿತ್ತು ಎನ್ನಲಾಗಿದೆ.

    ಆರೋಪಿಗಳಿಂದ ಪೆಟ್ರೋಲ್ ತುಂಬಿದ ಟ್ಯಾಂಕರ್, ಉಪಕರಣಗಳು ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪೈಪ್‌ಲೈನ್‌ನಲ್ಲಿ ರಂಧ್ರ ಮಾಡಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಪೆಟ್ರೋನೆಟ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಇದರಲ್ಲಿ ಇನ್ನೂ ಯಾರಾದರೂ ಪಾಲ್ಗೊಂಡಿದ್ದಾರಾ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.

  • ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ – ಗ್ರಾಹಕರಿಗೆ ಯಾವುದೇ ಹೊರೆ ಇಲ್ಲ

    ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ – ಗ್ರಾಹಕರಿಗೆ ಯಾವುದೇ ಹೊರೆ ಇಲ್ಲ

    ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಅಬಕಾರಿ ಸುಂಕ ಏರಿಕೆ ಮಾಡಿದರೂ ಗ್ರಾಹಕರ ಮೇಲೆ ಯಾವುದೇ ಹೊರೆ ಇಲ್ಲ.

    ತೈಲ ಕಂಪನಿಗಳ ಮೇಲೆ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ 2 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ.

    ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗುತ್ತಿದ್ದಂತೆ ಇನ್ನೊಂದು ಕಡೆ ಕಚ್ಚಾ ತೈಲ ದರ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.

    ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ (159 ಲೀಟರ್) ಬೆಲೆ ಸುಮಾರು 10 ಡಾಲರ್(‌ಅಂದಾಜು 850 ರೂ.) ಇಳಿಕೆಯಾಗಿದೆ.

    ತೈಲ ಮತ್ತು ಅನಿಲ ವಲಯವನ್ನು ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದ್ದರೂ, ಹಣದುಬ್ಬರದ ಕಳವಳ, ಆರ್ಥಿಕ ಹಿಂಜರಿತ ಭೀತಿ, ನಿಧಾನ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿವಾದಗಳು ತೀವ್ರಗೊಂಡಿರುವುದರಿಂದ ಬೆಲೆ ಇಳಿಕೆಯಾಗಿದೆ. ಈ ಮೂಲಕ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿವೆ.

    ಬ್ಯಾರೆಲ್‌ಗೆ 72.94 ಡಾಲರ್‌ನಲ್ಲಿ (ಅಂದಾಜು 6,250 ರೂ.) ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾ ತೈಲವು ದರ ಈಗ 62.91 ಡಾಲರ್‌ಗೆ (ಅಂದಾಜು 5,390 ರೂ.) ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್‌ ದರ 7% ಇಳಿಕೆಯಾಗಿ 59.34 ಡಾಲರ್‌ (ಅಂದಾಜು 5,090 ರೂ.)ತಲುಪಿದೆ.

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದೆ. ಮೇ ತಿಂಗಳಲ್ಲಿ ದಿನಕ್ಕೆ 4,11,000 ಬ್ಯಾರೆಲ್‌ಗಳನ್ನು (bpd) ತೈಲ ಉತ್ಪಾದನೆ ಮಾಡಲು ಮುಂದಾಗಿದೆ. ಈ ಹಿಂದೆ ನಿರ್ಧರಿಸಲಾಗಿದ್ದ 1,35,000 ಬಿಪಿಡಿಯಿಂದ ಹೆಚ್ಚು ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡಿದ್ದು ಇದು ತೈಲ ಬೆಲೆ ಕುಸಿಯಲು ಕಾರಣವಾಗಿದೆ.

  • ಗ್ಯಾರಂಟಿ ಸರ್ಕಾರದಿಂದ ಶಾಕ್‌ – ಡೀಸೆಲ್‌ ದರ 2 ರೂ. ಏರಿಕೆ

    ಗ್ಯಾರಂಟಿ ಸರ್ಕಾರದಿಂದ ಶಾಕ್‌ – ಡೀಸೆಲ್‌ ದರ 2 ರೂ. ಏರಿಕೆ

    ಬೆಂಗಳೂರು: ಗ್ಯಾರಂಟಿ ಸರ್ಕಾರ  ಪ್ರತಿ ಲೀಟರ್‌ ಡೀಸೆಲ್‌  ಬೆಲೆಯನ್ನು 2 ರೂ. ಏರಿಕೆ ಮಾಡಿದೆ.  ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಶಾಕ್‌ ನೀಡಿದ್ದುಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

    ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 18.44%  ರಿಂದ  21.17% ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ 88.93 ರೂ. ದರವಿದೆ. ತೆರಿಗೆ ಏರಿಕೆಯಿಂದ ದರ  90.93 ರೂ.ಗೆ ಆಗಲಿದೆ.  ಪೆಟ್ರೋಲ್‌ ಮೇಲೆ ಮಾರಾಟ ತೆರಿಗೆಯನ್ನು ಏರಿಸದ ಕಾರಣ  ಪ್ರತಿ ಲೀಟರ್‌ ಪೆಟ್ರೋಲ್‌ ದರ 102. 84  ರೂ.(ನಗರದಿಂದ ನಗರಕ್ಕೆ ದರ ಬದಲಾಗುತ್ತದೆ) ಇರಲಿದೆ.

    ಸರಕು ಸಾಗಾಣಿಕೆ ಮಾಡುವ ವಾಹನಗಳಾದ ಟ್ರಕ್‌, ಲಾರಿಗಳು ಡೀಸೆಲ್‌ ಬಳಸುವ ಕಾರಣ ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ದಿನ ಬಳಕೆಯ ವಸ್ತುಗಳ ಮೇಲೆ ತಟ್ಟಲಿದೆ. ಇದರಿಂದಾಗಿ ದಿನ ಬಳಕೆ ತರಕಾರಿ, ಆಹಾರ ವಸ್ತುಗಳ ಬೆಲೆಯೂ ಏರಿಕೆ ಆಗಲಿದೆ.

    ಕಳೆದ ಜೂನ್‌ನಲ್ಲಿ ಏರಿಕೆ:
    2024ರ ಜೂನ್‌ ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 3.02 ರೂ. ಹಾಗೂ ಡೀಸೆಲ್‌ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಲಾಗಿತ್ತು. ದರ ಹೆಚ್ಚಳದಿಂದ ಪೆಟ್ರೋಲ್‌ ದರ 102.84 ರೂ. ಆಗಿದ್ದರೆ ಡಿಸೇಲ್‌ ದರ 89.79 ರೂ.ಗೆ ಏರಿಕೆಯಾಗಿತ್ತು. ಈ ದರ ಏರಿಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗೆ ಹಣವಿಲ್ಲ ಎಂದು ತೈಲ ಬೆಲೆ ಏರಿಸಿಲ್ಲಎಂಬುದಾಗಿ ಸಮರ್ಥಿಸಿಕೊಂಡಿದ್ದರು.

    ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 2 ರೂ. ಇಳಿಕೆ ಮಾಡಿತ್ತು. ಇಳಿಕೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 99.83 ರೂ. ಆಗಿದ್ದರೆ ಡೀಸೆಲ್‌ ದರ 85.93 ರೂ. ಇತ್ತು.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 3.02 ರೂ. ಏರಿಕೆ ಮಾಡಿದ್ದರೆ ಡೀಸೆಲ್‌ ದರ 5 ರೂ. ಏರಿಕೆ ಮಾಡಿದೆ.

  • ಪೆಟ್ರೋಲ್ ಹಾಕಿ ದುಡ್ಡು ಕೇಳಿದ್ದಕ್ಕೆ ಪಂಪ್ ಸಿಬ್ಬಂದಿ ಮೇಲೆ ಮೂವರಿಂದ ಹಲ್ಲೆ

    ಪೆಟ್ರೋಲ್ ಹಾಕಿ ದುಡ್ಡು ಕೇಳಿದ್ದಕ್ಕೆ ಪಂಪ್ ಸಿಬ್ಬಂದಿ ಮೇಲೆ ಮೂವರಿಂದ ಹಲ್ಲೆ

    ಕೊಪ್ಪಳ: ಪೆಟ್ರೋಲ್ (Petrol) ಹಾಕಿ ದುಡ್ಡು ಕೇಳಿದ್ದಕ್ಕೆ ಪಂಪ್ ಸಿಬ್ಬಂದಿ ಮೇಲೆ ಮೂವರು ಸೇರಿ ಹಲ್ಲೆ ನಡೆಸಿರುವ ಘಟನೆ ಗಂಗಾವತಿ (Gangavathi) ಹೊರವಲಯದ ಸಾಯಿ ನಗರದಲ್ಲಿನ ಭಾರತ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.ಇದನ್ನೂ ಓದಿ:ಆರಾಧನಾ ಸ್ಥಳಗಳ ಕಾಯ್ದೆ ಪ್ರಶ್ನಿಸಿ ರಿಟ್ – ಹೊಸ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ಸೋಮವಾರ ಸಂಜೆ ಈ ಘಟನೆ ನಡೆದಿದ್ದು, 50 ರೂ. ಪೆಟ್ರೋಲ್ ಹಾಕಿಸಿಕೊಂಡು ಗಲಾಟೆ ಮಾಡಿದ್ದಾರೆ. ಬಳಿಕ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಪಂಪ್ ಸಿಬ್ಬಂದಿ ಶ್ರೀಕಾಂತ ಹಾಗೂ ಅನಿಲ್ ಎಂಬುವವರ ಮೇಲೆ ಮೂವರು ಪುಂಡರು ಸೇರಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಗಲಾಟೆ ಬಿಡಿಸಲು ಹೋದವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಹಲ್ಲೆಗೊಳಗಾದ ಪೆಟ್ರೋಲ್ ಪಂಪ್ ಸಿಬ್ಬಂದಿ ಗಂಗಾವತಿ ಗ್ರಾಮೀಣ ಠಾಣೆಗೆ ದೂರು ದಾಖಲಿಸಿದ್ದು, ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ:ಎರಡು ಅವಧಿಗೆ ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

  • ಪೆಟ್ರೋಲ್‌ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಪೆಟ್ರೋಲ್‌ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಬೆಂಗಳೂರು: ಪೆಟ್ರೋಲ್ (Petrol) ಸುರಿದುಕೊಂಡು ಟೆಕ್ಕಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಸುಹಾಸಿ ಸಿಂಗ್ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಯುವತಿಯ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಜ.12 ರಂದು ಹೋಟೆಲಿನಲ್ಲಿ ಯುವತಿ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಹಾಸಿ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮಾವ ಪ್ರವೀಣ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಲವ್‌ ಜಿಹಾದ್‌ ಆರೋಪ – 9ನೇ ಕ್ಲಾಸ್‌ ವಿದ್ಯಾರ್ಥಿನಿ ಆತ್ಮಹತ್ಯೆ

    ಏನಿದು ಪ್ರಕರಣ?
    ಸುಹಾಸಿ ಸಿಂಗ್‌ ಮತ್ತು ಪ್ರವೀಣ್‌ ಸಿಂಗ್‌ ಸಂಬಂಧಿಗಳು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇಬ್ಬರು ಒಟ್ಟಿಗೆ ಹೊರಗಡೆ ಹೋಗುತ್ತಿದ್ದರು. ಹೀಗೆ ಹೊರಗಡೆ ಹೋಗಿದ್ದಾಗ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದನ್ನೂ ಓದಿ: Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ?

    ಇಬ್ಬರು ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರವೀಣ್‌ ಸಿಂಗ್‌ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ನಂತರ ವಿಡಿಯೋವನ್ನು ಇಟ್ಟುಕೊಂಡು ಸುಹಾಸಿಯನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಲೈಂಗಿಕ ಕ್ರಿಯೆಗೆ ಬರುವಂತೆ ಆಹ್ವಾನಿಸುತ್ತಿದ್ದ. ಒಂದು ವೇಳೆ ಸಹಕರಿಸದೇ ಇದ್ದರೆ ವಿಡಿಯೋವನ್ನು ಪೋಷಕರಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದ. ಬೆದರಿಕೆಗೆ ಬಗ್ಗಿ ಪ್ರವೀಣ್‌ ಹೇಳಿದಾಗ ಸುಹಾಸಿ ಬರುತ್ತಿದ್ದಳು.

    ಕೆಲ ತಿಂಗಳಿನಿಂದಲ ಸುಹಾಸಿ ಸಿಂಗ್‌ ಬೇರೊಬ್ಬ ಹುಡುಗನ ಜೊತೆ ಸುತ್ತಾಟ ಆರಂಭಿಸಿದ್ದಳು. ಈ ವಿಚಾರ ಪ್ರವೀಣ್‌ಗೆ ಗೊತ್ತಾಗಿದೆ. ಜನವರಿ 12 ರಂದು ಪ್ರವೀಣ್‌ ಹೋಟೆಲಿಗೆ ಬರುವಂತೆ ಆಹ್ವಾನಿಸಿದ್ದಾನೆ. ಈ ಆಹ್ವಾನವನ್ನು ಆಕೆ ತಿರಸ್ಕರಿಸಿದ್ದಾಳೆ. ಈ ವೇಳೆ ಪ್ರವೀಣ್‌ ಬಾರದೇ ಇದ್ದರೆ ವಿಡಿಯೋ ವೈರಲ್‌ ಮಾಡುತ್ತಿದ್ದೇನೆ ಎಂದು ಬೆದರಿಸಿದ್ದಾನೆ.

    ಈತನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಸುಹಾಸಿ ಎಚ್‌ಎಎಲ್‌ ಬಳಿ ಹೋಟೆಲಿಗೆ ಪೆಟ್ರೋಲ್‌ ಜೊತೆ ಬಂದಿದ್ದಾಳೆ. ಪ್ರವೀಣ್‌ ನೋಡಿದ ಈಗೆ ಹೋಟೆಲಿನಲ್ಲೇ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಪ್ರವೀಣ್‌ ಆಕೆಯನ್ನು ರಕ್ಷಿಸಿದ್ದಾನೆ. ಗಂಭೀರ ಗಾಯಗೊಂಡ ಸುಹಾಸಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಪ್ರಕರಣ ತಿಳಿದ ಬಳಿಕ ಪ್ರವೀಣ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

     

  • ಅಲ್ಪಸಂಖ್ಯಾತ ಇಲಾಖೆಯಲ್ಲಿ ಪೆಟ್ರೋಲ್ ಗೋಲ್ಮಾಲ್ ಆರೋಪ – ಕ್ರಮಕ್ಕೆ ಆಗ್ರಹಿಸಿ ಸಿಎಸ್‌ಗೆ ಯತ್ನಾಳ್ ಪತ್ರ

    ಅಲ್ಪಸಂಖ್ಯಾತ ಇಲಾಖೆಯಲ್ಲಿ ಪೆಟ್ರೋಲ್ ಗೋಲ್ಮಾಲ್ ಆರೋಪ – ಕ್ರಮಕ್ಕೆ ಆಗ್ರಹಿಸಿ ಸಿಎಸ್‌ಗೆ ಯತ್ನಾಳ್ ಪತ್ರ

    – ವಕ್ಫ್‌ ವಿರುದ್ಧ ಮುಂದುವರಿದ ಬಿಜೆಪಿ ರೆಬಲ್‌ ನಾಯಕರ ಹೋರಾಟ

    ಬೆಂಗಳೂರು: ಬಿಜೆಪಿ ಭಿನ್ನಮತೀಯ ನಾಯಕರ ವಕ್ಫ್ ಹೋರಾಟ ಮುಂದುವರಿದಿದೆ. ಬೆಂಗಳೂರಿನ ಕುಮಾರ್ ಬಂಗಾರಪ್ಪ (Kumar Bangarappa) ನಿವಾಸದಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ ಸಿದ್ದೇಶ್ವರ ಸಭೆ ನಡೆಸಿದ್ದಾರೆ.

    ವಕ್ಫ್ ಹೋರಾಟ, ಸಮಾವೇಶ, ದೆಹಲಿ (New Delhi) ಭೇಟಿ ಕುರಿತು ಸಮಾಲೋಚನೆ ಮಾಡಿದ್ದಾರೆ. ಇನ್ನೂ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ಹಜ್ ಇಲಾಖೆಯಲ್ಲಿ ಪೆಟ್ರೋಲ್ ದುರ್ಬಳಕೆ ಆರೋಪ ಕೇಳಿಬಂದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ.

    ಈ ಇಲಾಖೆಗಳಲ್ಲಿ ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್‌ಗಳು (Petrol Service Stations) ದೊಡ್ಡ ಭ್ರಷ್ಟಾಚಾರ ಎಸಗಿವೆ. ಪೆಟ್ರೋಲ್ ಬಳಕೆಗೆ ಮಿತಿ ಹಾಗೂ ಮಾರ್ಗಸೂಚಿ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ. ಕಾರಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು, ಮುಖ್ಯಸ್ಥರ ಸಹಿ ಇರಬೇಕು. ಆದರೆ, ವಕ್ಫ್ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್‌ರ ವಾಹನ ಸಂಖ್ಯೆ ಕೆಎ-01 ಜಿಎಸ್ 9990ಗೆ ಇಂಡೆಂಟ್‌ಗಳು ಇಲ್ಲದಿದ್ದರೂ ಪೆಟ್ರೋಲ್ ತುಂಬಿಸಲಾಗಿದೆ.

    3 ತಿಂಗಳಿಗೊಮ್ಮೆ ವಾಹನ ಕ್ರಮಿಸಿರುವ ಕಿಲೋಮೀಟರ್, ಉಪಯೋಗಿಸುವ ಇಂಧನ ಆಡಿಟ್ ಮಾಡಬೇಕೆಂದು ಶಾಸಕ ಯತ್ನಾಳ್ ಮನವಿ ಮಾಡಿದ್ದಾರೆ.

  • 6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

    6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

    ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ನಾಲ್ಕನೇ ತಲೆಮಾರಿನ ಹೊಸ ಡಿಜೈರ್ (Dzire) ಕಾರನ್ನು 6.79 ಲಕ್ಷಕ್ಕೆ (ಎಕ್ಸ್ ಶೋರೂಂ) ಬಿಡುಗಡೆ ಮಾಡಿದೆ. ಕಾರಿನ ಬೆಲೆ 6.79 ಲಕ್ಷದಿಂದ 10.14 ಲಕ್ಷದವರೆಗೆ ಇದೆ. ಹೊಸ ಡಿಸೈರ್ ಕಾರಿಗಾಗಿ ಬುಕ್ಕಿಂಗ್ ಆರಂಭವಾಗಿದ್ದು ಆಸಕ್ತ ಖರೀದಿದಾರರು ರೂ.11 ಸಾವಿರ ಪಾವತಿಸುವ ಮೂಲಕ ‘ಡಿಸೈರ್’ ಕಾರನ್ನು ಬುಕ್ ಮಾಡಬಹುದು.

    ಹೊಸ ಡಿಸೈರ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 24.79 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ರೀತಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಸ ಡಿಸೈರ್ ಬರೋಬ್ಬರಿ 25.71 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು CNG ಮಾದರಿಯಲ್ಲೂ ಕಾರು ಲಭ್ಯವಿದ್ದು ಪ್ರತಿ KG CNGಗೆ 33.73 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದನ್ನೂ ಓದಿ: 7.89 ಲಕ್ಷಕ್ಕೆ ಸ್ಕೋಡಾ ಕೈಲಾಕ್ ಕಾರು ಬಿಡುಗಡೆ

    ಹೊಸ ಡಿಸೈರ್ 3,995mm ಉದ್ದ, 1,735mm ಅಗಲ ಮತ್ತು 1,525mm ಎತ್ತರ, 2,450mm ವೀಲ್‌ಬೇಸ್ ಮತ್ತು 163mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. Z12E 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಡಿಸೈರ್, 81.58 PS ಪವರ್ ಮತ್ತು 111.7 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಡಿಸೈರ್ ದೊರೆಯಲಿದೆ. ಇದನ್ನೂ ಓದಿ: ಹೊಸ ಮಾರುತಿ ಡಿಸೈರ್‌ಗೆ ಸಿಕ್ಕಿತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಎಲೆಕ್ಟ್ರಿಕ್ ಸನ್ ರೂಫ್, ‘ಕ್ರಿಸ್ಟಲ್ ವಿಷನ್’ LED ಹೆಡ್ ಲ್ಯಾಂಪ್, ‘3D ಟ್ರಿನಿಟಿ LED ಎಲಿಮೆಂಟ್ಸ್’ ಹೊಂದಿರುವ ಟೈಲ್ ಲ್ಯಾಂಪ್, 9 ಇಂಚ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಯುಎಸ್‌ಬಿ ಟೈಪ್-A & ಟೈಪ್-C ಪೋರ್ಟ್‌, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಡಿಸೈರ್ ಹೊಂದಿದೆ.

    LXi, VXi, ZXi ಮತ್ತು ZXi+ ವೇರಿಯಂಟ್ಗಳಲ್ಲಿ 6 ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಸೀಟ್ ಮೌಂಟ್‌ ಸ್ಟ್ಯಾಂಡರ್ಡ್ ಆಗಿ ದೊರೆಯಲಿವೆ. ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಇತ್ತೀಚೆಗಷ್ಟೇ ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಹೊಸ ಡಿಸೈರ್ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ. ಟಾಟಾ ಕಂಪನಿಯ ಆಲ್ಟ್ರೋಜ್ ಮತ್ತು ಟಿಯಾಗೋ ಕಾರುಗಳಿಗಿಂತ ಹೊಸ ಡಿಸೈರ್ ಸುರಕ್ಷಿತವಾಗಿದೆ.

  • ಮಹಿಳೆಯನ್ನ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುಷ್ಕರ್ಮಿಗಳು

    ಮಹಿಳೆಯನ್ನ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುಷ್ಕರ್ಮಿಗಳು

    ಕಲಬುರಗಿ: ಮಹಿಳೆಯೋರ್ವಳನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ದಾರುಣ ಘಟನೆ ಕಲಬುರಗಿ (Kalaburagi) ತಾಲೂಕಿನ ಇಟಗಾ ಗ್ರಾಮದ ಬಳಿ ನಡೆದಿದೆ.

    ಜ್ಯೋತಿ (29) ಹತ್ಯೆಯಾದ ಮಹಿಳೆ. ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿ ನಿವಾಸಿ ಆಗಿರುವ ಜ್ಯೋತಿಗೆ ಕಳೆದ 10 ವರ್ಷದ ಹಿಂದೆ ಮದುವೆ ಆಗಿತ್ತು. ಈಕೆ 5 ವರ್ಷದಿಂದ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕಲುಷಿತ ನಗರ ಕುಖ್ಯಾತಿಗೆ ಪಾತ್ರವಾದ ದೆಹಲಿ

    ಗುರುವಾರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ ಜ್ಯೋತಿ, ಮಧ್ಯಾಹ್ನ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದ್ರೆ ವಿಜಯೇಂದ್ರನನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೀಬೇಕು: ಯತ್ನಾಳ್

    ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಹಾವೇರಿ ಜಿಲ್ಲೆಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ- ಊರು ಬಿಟ್ಟ ಮುಸ್ಲಿಂ ಕುಟುಂಬಗಳು