Tag: Performance

  • 44.12 ಮಿಲಿಯನ್ ಟನ್ ಸರಕು ಸಾಗಣೆ – ಕಳೆದ ವರ್ಷಕ್ಕಿಂತ ನೈರುತ್ಯ ರೈಲ್ವೇ 15.5% ಸಾಧನೆ

    44.12 ಮಿಲಿಯನ್ ಟನ್ ಸರಕು ಸಾಗಣೆ – ಕಳೆದ ವರ್ಷಕ್ಕಿಂತ ನೈರುತ್ಯ ರೈಲ್ವೇ 15.5% ಸಾಧನೆ

    ಬೆಂಗಳೂರು: ನೈರುತ್ಯ ರೈಲ್ವೇಯು 2021-22ರ ಆರ್ಥಿಕ ವರ್ಷದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.

    ಗ್ರಾಹಕ ಸ್ನೇಹಿ ವಿಧಾನದೊಂದಿಗೆ, ರೈಲ್ವೇ ಸರಕು ಮತ್ತು ಪಾರ್ಸೆಲ್ ಸಂಚಾರಕ್ಕೆ ಅತ್ಯಂತ ಆದ್ಯತೆಯ ಸಾರಿಗೆ ವಿಧಾನವಾಗಿದೆ. 2021-22ರ ಹಣಕಾಸು ವರ್ಷದಲ್ಲಿ, ನೈರುತ್ಯ ರೈಲ್ವೆಯು 44.12 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕಿಂತ 15.5% ಅಭಿವೃದ್ಧಿಯನ್ನು ದಾಖಲಿಸಿದೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    7.04 ಮಿಲಿಯನ್ ಟನ್ ಕಬ್ಬಿಣದ ಅದಿರು, 9.13 ಮಿಲಿಯನ್ ಟನ್ ಕಲ್ಲಿದ್ದಲು, 9.05 ಮಿಲಿಯನ್ ಟನ್ ಪೆಡಸು ಕಬ್ಬಿಣ ಮತ್ತು ಫಿನಿಶ್ಡ್ ಉಕ್ಕು, 0.77 ಮಿಲಿಯನ್ ಟನ್ ಆಹಾರ ಧಾನ್ಯಗಳು, 0.98 ಮಿಲಿಯನ್ ಟನ್ ಸಿಮೆಂಟ್ ಇತ್ಯಾದಿಗಳನ್ನು ಸಾಗಿಸಿದೆ. 2021-22 ರ ಅವಧಿಯಲ್ಲಿ ಸರಕು ಸಾಗಾಣಿಕೆಯಿಂದ 4160 ಕೋಟಿ ರೂ. ಆದಾಯಗಳಿಸಿದೆ. ಇದು 2020-21ರ ಹಣಕಾಸು ವರ್ಷದಲ್ಲಿ 28.72% ಕ್ಕಿಂತ ಹೆಚ್ಚಳವಾಗಿದೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    2021-22 ರಲ್ಲಿ ನೈರುತ್ಯ ರೈಲ್ವೇಯು ಪಾರ್ಸೆಲ್‍ನಿಂದ 121.56 ಕೋಟಿ ರೂ.ಆದಾಯ ಸಂಗ್ರಹವಾಗಿದೆ. 2021-22 ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು 238 ಆಟೋಮೊಬೈಲ್ ರೇಕ್‍ಗಳನ್ನು ಲೋಡ್ ಮಾಡಲಾಗಿದೆ. ಸಂಡ್ರಿ ಆದಾಯ 1.52% ಹೆಚ್ಚಳದೊಂದಿಗೆ 275.7 ಕೋಟಿ ರೂ. ಗಳಿಸಿದೆ.. ಗುಜರಿ ವಸ್ತುಗಳ ಮಾರಾಟದಿಂದ 138.04 ಕೋಟಿ ರೂ. ದಾಖಲೆಯ ಆದಾಯ ಸಂಗ್ರಹವಾಗಿದ್ದು, ರೈಲ್ವೆ ಬೋರ್ಡ್ ನಿಗದಿಪಡಿಸಿದ ಗುರಿಯನ್ನು ಮೀರಿದೆ.

    ನೈರುತ್ಯ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತುವನ್ನು ನೀಡಿದೆ. 2021-22ರ ಅವಧಿಯಲ್ಲಿ, 187 ಕಿಮೀ ದ್ವಿಪಥೀಕರಣ ಮತ್ತು 22 ಕಿಮೀ ಹೊಸ ಮಾರ್ಗಗಳು ಮತ್ತು 511.7 ಕಿಮೀ ವಿದ್ಯುದ್ದೀಕರಣ ಪೂರ್ಣಗೊಳಿಸಲಾಗಿದೆ. ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ, ನೈರುತ್ಯ ರೈಲ್ವೇಯು 2021-22 ಹಣಕಾಸು ವರ್ಷದಲ್ಲಿ 26 ರೈಲುಗಳನ್ನು ಎಲೆಕ್ಟ್ರಿಕ್ ಟ್ರಾಕ್ಷನ್‍ನಲ್ಲಿ ಚಲಿಸುವಂತೆ ಪರಿವರ್ತಿಸಲಾಗಿದೆ. ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 40 ರೈಲುಗಳು ಪವರ್ ಕಾರ್‍ಗಳನ್ನು ಎಲೆಕ್ಟ್ರಿಕ ಟ್ಯಾಕ್ಷನ್‍ಗಳಲ್ಲಿ ಸಂಚರಿಸಲಾಗುತ್ತದೆ. ಹಸಿರು ಉಪಕ್ರಮವಾಗಿ, ನೈರುತ್ಯ ರೈಲ್ವೇಯು ತನ್ನ ವ್ಯಾಪ್ತಿಯಾದ್ಯಂತ 70 ಸಾವಿರ ಹಣ್ಣು ಕೊಡುವ ಮರಗಳನ್ನು ನೆಡಲಾಗಿದೆ.

    ಇಂದು ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್‍ರವರು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಯ ಪ್ರಧಾನ ಮುಖ್ಯಸ್ಥರ ಮತ್ತು ವಿಭಾಗೀಯ ರೈಲ್ವೇ ವ್ಯವಸ್ಥಾಪಕರೊಂದಿಗೆ ಸಭೆಯನ್ನು ನಡೆಸಿದರು. ಪ್ರಮುಖ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಯನ್ನು ದಾಖಲಿಸಿದ್ದಕ್ಕಾಗಿ ನೈರು ರೈಲ್ವೆಯ ನೌಕರರ ಮೇಲೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಮೊದಲು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು. ಮುಂದಿನ ವರ್ಷ ಇನ್ನೂ ಉತ್ತಮ ಸಾಧನೆಯನ್ನು ಸಾಧಿಸುವಲ್ಲಿ ತಮ್ಮ ಮಟ್ಟವನ್ನು ಅತ್ಯುತ್ತಮವಾಗಿ ಪ್ರಯತ್ನಿಸುವಂತೆ ಹೇಳಿದರು.

  • ಚೆನ್ನೈ ವಿಮಾನ ನಿಲ್ದಾಣದ ಕಾರ್ಯಕ್ಷಮತೆಗೆ ವಿಶ್ವದಲ್ಲೇ 8ನೇ ಸ್ಥಾನ

    ಚೆನ್ನೈ ವಿಮಾನ ನಿಲ್ದಾಣದ ಕಾರ್ಯಕ್ಷಮತೆಗೆ ವಿಶ್ವದಲ್ಲೇ 8ನೇ ಸ್ಥಾನ

    ಚೆನ್ನೈ: ವಿಶ್ವದ ಟಾಪ್ 10 ಅತ್ಯುತ್ತಮ ಕಾರ್ಯಕ್ಷಮತೆಯ ಪಟ್ಟಿಯಲ್ಲಿ ಸೇರಿಕೊಂಡ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ನಿರ್ಮಿಸಿದೆ.

    ಪ್ರಯಾಣ, ಹಣಕಾಸು, ಏರೋಸ್ಪೇಸ್ ಹಾಗೂ ವಾಯುಯಾನ ಉದ್ಯಮಕ್ಕೆ 2021ರ ಜಾಗತಿಕ ಕಾರ್ಯಕ್ಷಮತೆಯ ವಿಮಾನ ನಿಲ್ದಾಣವೆಂದು ಚೆನ್ನೈನ ವಿಮಾನ ನಿಲ್ದಾಣ ಟಾಪ್ 10ರ ಪಟ್ಟಿಗೆ ಸೇರಿದೆ. ಅಮೆರಿಕಾದ ಮಿಯಾಮಿ ವಿಮಾನ ನಿಲ್ದಾಣ, ಫುಕುವೋ ವಿಮಾನ ನಿಲ್ದಾಣ ಹಾಗೂ ಜಪಾನ್‌ನ ಹನೆಡಾ ವಿಮಾನ ನಿಲ್ದಾಣ ವಿಶ್ವದ ಅಗ್ರ ಮೂರು ವಿಮಾನ ನಿಲ್ದಾಣಗಳಾಗಿವೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಸಿರಿಯಮ್ ಜಾಗತಿಕವಾಗಿ ವಿಶ್ಲೇಶಿಸಿದಾಗ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೇ.89.32ರಷ್ಟು ಅತ್ಯುತ್ತಮ ಸಮಯೋಚಿತ ಕಾರ್ಯಕ್ಷಮತೆಯ ಫಲಿತಾಂಶ ನೀಡಿದೆ. ಹೀಗೆ ಚೆನ್ನೈನ ವಿಮಾನ ನಿಲ್ದಾಣ ವಿಶ್ವದ 10 ಅತ್ಯುತ್ತಮ ಕಾರ್ಯಕ್ಷಮತೆಯ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದನ್ನೂ ಓದಿ: ನೂತನ ದಾಖಲೆ ಬರೆದ ಭಾರತ ಮೂಲದ ಹರ್‌ಪ್ರೀತ್ ಚಂಡಿ

  • ಐಪಿಎಲ್‍ನಲ್ಲಿ ನಾಲ್ವರು ಕನ್ನಡಿಗರಿಂದ ವಿಶೇಷ ಸಾಧನೆ

    ಐಪಿಎಲ್‍ನಲ್ಲಿ ನಾಲ್ವರು ಕನ್ನಡಿಗರಿಂದ ವಿಶೇಷ ಸಾಧನೆ

    ಬೆಂಗಳೂರು: ಐಪಿಎಲ್-2020 ಅಂತಿಮ ಹಂತಕ್ಕೆ ಬಂದು ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಗಿದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ಮಾತ್ರ ಉಳಿದಿವೆ. ಇದರ ಜೊತೆಗೆ ಕರ್ನಾಟಕದ ಆಟಗಾರರು ವಿಶೇಷ ಸಾಧನೆ ಮಾಡಿದ್ದಾರೆ.

    ಐಪಿಎಲ್‍ನಲ್ಲಿ ಈ ಬಾರಿ ಕನ್ನಡಿಗರ ಅರ್ಭಟ ಜೋರಾಗಿ ನಡೆದಿದೆ. ಕರ್ನಾಟಕದ ಕೆಎಲ್ ರಾಹುಲ್, ಮನೀಶ್ ಪಾಂಡೆ, ಮಯಾಂಕ್ ಅರ್ಗವಾಲ್ ಮತ್ತು ಯುವ ಆಟಗಾರ ದೇವದತ್ ಪಡಿಕ್ಕಲ್ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್-2020ಯಲ್ಲಿ ಟಾಪ್ ಆರ್ಡರ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಕನ್ನಡಿಗರು, ಒಂದೇ ರಾಜ್ಯದ ನಾಲ್ಕು ಬ್ಯಾಟ್ಸ್ ಮನ್‍ಗಳು ಐಪಿಎಲ್ ಟೂರ್ನಿಯಲ್ಲಿ ವೈಯಕ್ತಿಕವಾಗಿ 400ಕ್ಕೂ ಅಧಿಕ ರನ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ಸ್ಫೋಟಕವಾಗಿ ಆಡಿದ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ 14 ಪಂದ್ಯಗಳನ್ನು ಆಡಿ ಒಂದು ಶತಕ 5 ಅರ್ಧಶತಕದ ನೆರವಿನಿಂದ ಭರ್ಜರಿ 670 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರ ಜೊತೆಗೆ ಪಂಜಾಬ್ ತಂಡದಲ್ಲಿ ಆಡುವ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು 11 ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕದ ನೆರವಿನಿಂದ 424 ರನ್ ಸಿಡಿಸಿದ್ದಾರೆ.

    ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದ ಆರ್ ಸಿಬಿ ಆಟಗಾರ ದೇವದತ್ ಪಡಿಕ್ಕಲ್, ತಾನಾಡಿದ ಮೊದಲ ಐಪಿಎಲ್‍ನಲ್ಲೇ ಕಮಾಲ್ ಮಾಡಿದ್ದಾರೆ. ಇವರು ಕೂಡ 15 ಪಂದ್ಯಗಳನ್ನು ಆಡಿ ಐದು ಅರ್ಧಶತಕ ಸಿಡಿಸಿ 473 ರನ್‍ಗಳಿಂದ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಇದ್ದಾರೆ. ಜೊತೆಗೆ ಮೊದಲ ಐಪಿಎಲ್‍ನಲ್ಲೇ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಇವರ ಜೊತೆಗೆ ಕರ್ನಾಟಕದ ಅನುಭವಿ ಆಟಗಾರ ಸನ್‍ರೈಸರ್ಸ್ ಹೈದರಾಬಾದ್ ತಂಡ ಮನೀಶ್ ಪಾಂಡೆಯವರು ಕೂಡ 15 ಪಂದ್ಯಗಳನ್ನಾಡಿ ಮೂರು ಅರ್ಧಶತಕದ ನೆರವಿನಿಂದ 404 ರನ್ ಸಿಡಿಸಿ ಟೂರ್ನಿಯಲ್ಲಿ ಮುಂದುವರೆಯುತ್ತಿದ್ದಾರೆ.

    ಜೊತೆಗೆ ಈ ಟೂರ್ನಿಯಲ್ಲಿ ಇಬ್ಬರು ಕನ್ನಡಿಗಾರದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ಶತಕ ಸಿಡಿಸಿದ್ದಾರೆ. ಇಡೀ ಟೂರ್ನಿಯಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ರಾಹುಲ್ 58 ಬೌಂಡರಿ ಸಿಡಿಸಿ ಅತೀ ಹೆಚ್ಚು ಫೋರ್ ಹೊಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ದೇವದತ್ ಪಡಿಕ್ಕಲ್ ಅವರು ಐದು ಅರ್ಧಶತಕ ಸಿಡಿಸಿ ಮೊದಲ ಐಪಿಎಲ್ ಆವೃತ್ತಿಯಲ್ಲೇ ಅತೀ ಹೆಚ್ಚು ಫಿಫ್ಟಿ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

  • 48ನೇ ವಯಸ್ಸಿನಲ್ಲಿ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ – ದಾಖಲೆ ಬರೆದ ತಾಂಬೆ

    48ನೇ ವಯಸ್ಸಿನಲ್ಲಿ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ – ದಾಖಲೆ ಬರೆದ ತಾಂಬೆ

    ನವದೆಹಲಿ: ಭಾರತದ ದೇಶೀಯ ಕ್ರಿಕೆಟ್ ಆಟಗಾರ ಪ್ರವೀಣ್ ತಾಂಬೆಯವರು ತಮ್ಮ 48ನೇ ವಯಸ್ಸಿನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.

    ಸಿಪಿಎಲ್-2020 ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಆದರೆ ಸಿಪಿಎಲ್‍ನ 8ನೇ ಅವೃತ್ತಿ ಅಗಸ್ಟ್ 18ರಿಂದ ಆರಂಭವಾಗಿದೆ. 2013ರಲ್ಲಿ ಅಧಿಕೃತವಾಗಿ ಆರಂಭಗೊಂಡ ಈ ಟೂರ್ನಿಯಲ್ಲಿ ಪ್ರಪಂಚದ ವಿವಿಧ ದೇಶದ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಾರೆ. ಆದರೆ ಇಲ್ಲಿಯವರೆಗೂ ಯಾವೊಬ್ಬ ಭಾರತೀಯ ಕ್ರಿಕೆಟ್ ಆಟಗಾರನೂ ಈ ಟೂರ್ನಿಯಲ್ಲಿ ಆಡಿರಲಿಲ್ಲ.

    ಆದರೆ ಕೇವಲ ಐಪಿಎಲ್ ಮತ್ತು ದೇಶೀಯ ಟೂರ್ನಿಯಲ್ಲಿ ಗುರುತಿಸಿಕೊಂಡ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆಯವರು, ಮೊಟ್ಟ ಮೊದಲನೇ ಬಾರಿಗೆ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಭಾರತದಿಂದ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪ್ರವೀಣ್ ತಾಂಬೆಯವರು ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಲಿದ್ದಾರೆ.

    ಭಾರತದ ಮೊದಲ ಆಟಗಾರ ಸಿಪಿಎಲ್‍ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಸಿಪಿಎಲ್ ಟೂರ್ನಿ ಆಡಳಿತ ಮಂಡಳಿ, ಸಿಪಿಎಲ್‍ಗೆ ನಿಮಗೆ ಸುಸ್ವಾಗತ ಭಾರತ. 48 ವರ್ಷದ ಪ್ರವೀಣ್ ತಾಂಬೆಯವರನ್ನು ಮೊದಲ ಬಾರಿಗೆ ಹೀರೋ ಸಿಪಿಎಲ್‍ನಲ್ಲಿ ನೋಡಲು ನಾವು ಸಂತೋಷಪಡುತ್ತೇವೆ ಎಂದು ಬರೆದುಕೊಂಡಿದೆ. ಸಿಪಿಎಲ್‍ನಲ್ಲಿ ತಾಂಬೆ ಟ್ರಿನ್‍ಬಾಗೊ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ.

    ಪ್ರವೀಣ್ ವಿಜಯ್ ತಾಂಬೆಯವರು ಭಾರತೀಯ ದೇಶೀಯ ಕ್ರಿಕೆಟಿಗರಾಗಿದ್ದು, ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. 2013ರ ಮೇನಲ್ಲಿ ನಡೆದ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಮೊದಲ ಪಂದ್ಯವನ್ನು ಆಡಿದ್ದರು. ಈ ಮೂಲಕ ಐಪಿಎಲ್ ಆಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್‍ನಲ್ಲಿ 33 ಪಂದ್ಯಗಳನ್ನು ಆಡಿರುವ ತಂಬೆ 28 ವಿಕೆಟ್ ಗಬಳಿಸಿದ್ದಾರೆ. ಸದ್ಯ ನ್ಯೂ ಬಾಂಬೆಯ ಡಿವೈ ಪಾಟೀಲ್ ಸ್ಪೋಟ್ರ್ಸ್ ಅಕಾಡೆಮಿ ಬಿ ತಂಡದ ನಾಯಕರಾಗಿದ್ದಾರೆ.

  • ಡಾ. ಚಿದಾನಂದಮೂರ್ತಿ ಅವರ ಕಿರು ಪರಿಚಯ

    ಡಾ. ಚಿದಾನಂದಮೂರ್ತಿ ಅವರ ಕಿರು ಪರಿಚಯ

    ಬೆಂಗಳೂರು: ಖ್ಯಾತ ಸಾಹಿತಿ, ಲೇಖಕ, ಸಂಶೋಧಕ ಡಾ. ಚಿದಾನಂದಮೂರ್ತಿ(88) ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

    ಬಾಲ್ಯ ಮತ್ತು ಶಿಕ್ಷಣ:
    ಚಿದಾನಂದಮೂರ್ತಿಗಳು 1931 ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದರು. ನಂತರ ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ಮಾಡಿದರು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು 10ನೇ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಎಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು. ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಕೂಡ ಪಡೆದರು. ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತ ರಜೆ ಹಾಕಿ ಮೈಸೂರಿನಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ಗಳಿಸಿದರು.

    ಶಾಸನ ಕ್ಷೇತ್ರದೆಡೆಗೆ:
    ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನ ಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ.ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.

    ಅಧ್ಯಾಪಕರಾಗಿ ಸೇವೆ:
    ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು, ನಂತರ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿ 1990ರ ಅಕ್ಟೋಬರ್ 10ರಂದು ಸ್ವಯಂಸೇವಾ ನಿವೃತ್ತಿ ಪಡೆದರು.

    ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದಾರೆ. ಸಂಶೋಧನೆಗೆ ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತಿದ್ದಾರೆ. ಬಕ್ರ್ಲಿ, ಫಿಲಡೆಲ್ಫಿಯ, ಸ್ಟಾನ್ಫೊರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳು ಮತ್ತು ವಿಶ್ವಮಟ್ಟದ ಐತಿಹಾಸಿಕ ಭಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಈ ಎಲ್ಲವೂ ಅವರ ನಿರಂತರ ಅಧ್ಯಯನ ಶೀಲತೆ ಮತ್ತು ವಿದ್ವತ್ತಿನ ಸೂಚಕಗಳಾಗಿವೆ.

    ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಯುಗಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕೃತಿ ಸಂಶೋಧಕ, ತೀ.ನಂ.ಶ್ರೀ ಉತ್ತರಾಧಿಕಾರಿ ಎಂಬೆಲ್ಲ ಹೊಗಳಿಕೆಗೆ ಮೂರ್ತಿಗಳು ಪಾತ್ರರಾಗಿದ್ದಾರೆ. ಸುಮಾರು ನಾಲ್ಕು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಂಶೋಧನೆಗಳ ಕುರಿತಾದ ಮಹತ್ವದ ಬರಹಗಳನ್ನು ಪ್ರಕಟಿಸಿದ್ದಾರೆ.

    ಚಿದಾನಂದಮೂರ್ತಿಗಳು 25ಕ್ಕೂ ಹೆಚ್ಚು ಪುಸ್ತಕಗಳನ್ನೂ, 400ಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ನಾಟಕ ಇತಿಹಾಸ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. 1960ರ ದಶಕಗಳಲ್ಲಿ ತಾವು ಪ್ರಕಟಿಸಿದ ಹಲವಾರು ಲೇಖನಗಳಲ್ಲೇ ಉಂಬರಿ, ಇರ್, ಡುಂಡುಚಿ, ಅಮ್ಮ, ಅಬ್ಬೆ, ಅಲ್ಲಮ, ಬಾಮಬ್ಬೆ, ಶಬ್ದಗಳನ್ನು ಕನ್ನಡ ಭಾಷೆ, ವ್ಯಾಕರಣ, ಅವಸ್ಥಾಂತರಗಳ ಹಿನ್ನೆಲೆಯಲ್ಲಿ ಮೂರ್ತಿಗಳು ಪರಿಶೀಲಿಸಿದ್ದಾರೆ. ಅನಂತರ ‘ಭಾಷಾ ವಿಜ್ಞಾನದ ಮೂಲತತ್ವಗಳು’ (1965), ‘ವಾಗಾರ್ಥ'(1981) ಎಂಬ ಎರಡು ಮುಖ್ಯವಾದ ಅವರ ಭಾಷಾಸಂಬಂಧವಾದ ಕೃತಿಗಳು ಪ್ರಕಟವಾದವು.

    ಸಾಧನೆ:
    ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

    ಪ್ರಶಸ್ತಿ:
    ಚಿದಾನಂದಮೂರ್ತಿಗಳಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು, ಗೌರವಗಳು ದೊರೆತಿವೆ. ಅಲ್ಲದೇ ಅವರ ಹೆಸರಿನಲ್ಲಿ ‘ಚಿದಾನಂದ ಪ್ರಶಸ್ತಿ’ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ 10ರಂದು ಪ್ರತೀವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡುತ್ತ ಬಂದಿದ್ದಾರೆ.