Tag: perents

  • ಪ್ರೀತಿಸಿದಾಕೆ ಜೊತೆ ಮಗ ಎಸ್ಕೇಪ್ – ಪೋಷಕರಿಗೆ ಪೊಲೀಸರಿಂದ ಥಳಿತ

    ಪ್ರೀತಿಸಿದಾಕೆ ಜೊತೆ ಮಗ ಎಸ್ಕೇಪ್ – ಪೋಷಕರಿಗೆ ಪೊಲೀಸರಿಂದ ಥಳಿತ

    – ನೀರು ಕೇಳಿದರೆ ಪತ್ನಿ ಮೂತ್ರ ಕುಡಿ ಎಂದ ಪೊಲೀಸರು
    – ಕಲಬುರಗಿ ಹುಡ್ಗಿ, ವಿಜಯಪುರದ ಹುಡ್ಗನಿಗೆ ಬೆಳಗಾವಿಯಲ್ಲಿ ಅರಳಿದ ಲವ್

    ಕಲಬುರಗಿ: ಪ್ರೇಮಿಗಳು ಓಡಿ ಹೋಗಿದ್ದಕ್ಕೆ ಪೊಲೀಸರು ಯುವಕನ ತಂದೆ, ತಾಯಿಯನ್ನು ಥಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಕಲಬುರಗಿ ಮಹಿಳಾ ಠಾಣೆಯ ಪೊಲೀಸರು ಯುವಕನ ಪೋಷಕರಿಗೆ ಥಳಿಸಿದ್ದು, ಯುವಕ ಅಯ್ಯಪ್ಪ ಸ್ವಾಮಿ ತಂದೆ ತುಕಾರಾಮ್ ಮತ್ತು ತಾಯಿ ಸುಜಾತ ಅವರನ್ನು ಪೊಲೀಸ್ ಠಾಣೆಯಲ್ಲೇ ಮನ ಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಪೋಷಕರನ್ನು ಕರೆಸಿ ಪೊಲೀಸರು ಹಲ್ಲೆ ಮಾಡಿದ್ದಾರೆ.

    ಕಲಬುರಗಿಯ ಯುವತಿ ವಿಜಯಪುರ ಯುವಕನ ಮಧ್ಯೆ ಬೆಳಗಾವಿಯಲ್ಲಿ ಪ್ರೀತಿ ಮೂಡಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದಾರೆ. ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದಕ್ಕೆ ಪೋಷಕರಿಗೆ ಶಿಕ್ಷೆ ನೀಡಲಾಗಿದೆ. ಯುವಕನ ತಂದೆ, ತಾಯಿಗೆ ಬಾಸುಂಡೆ ಬರುವ ರೀತಿ ಪೊಲೀಸರು ಥಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ವಿಜಯಪುರದ ಯುವಕ ಅಯ್ಯಪ್ಪಸ್ವಾಮಿ ಕಲಬುರಗಿಯ ಯುವತಿ ಕಸ್ತೂರಿ ಇಬ್ಬರೂ ಪರಸ್ಪರ ಪ್ರೀತಿಸಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಇಬ್ಬರೂ ಬೆಳಗಾವಿಯಲ್ಲಿ ಬಿಇಎಂಎಸ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರೂ ಒಂದೇ ತರಗತಿಯಾಗಿದ್ದರಿಂದ ಪ್ರೀತಿ ಅರಳಿದೆ. ಕಳೆದ ಮಂಗಳವಾರ ಯುವತಿ ಯುವಕನ ಜೊತೆ ಮನೆಬಿಟ್ಟು ತೆರಳಿದ್ದಾಳೆ. ಯುವತಿ ಮನೆ ಬಿಟ್ಟು ತೆರಳಿದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ.

    ಯುವತಿಯ ಪೋಷಕರಿಂದ ಕಲಬುರಗಿ ಮಹಿಳಾ ಠಾಣೆಯ ಇನ್‍ಸ್ಪೆಕ್ಟರ್ ಸಂಗಮೇಶ್ ಪಾಟೀಲ್ ದೂರು ದಾಖಲಿಸಿಕೊಂಡಿದ್ದಾರೆ. ಬಳಿಕ ವಿಜಯಪುರಕ್ಕೆ ತೆರಳಿ ಯುವಕನ ಪೊಷಕರನ್ನು ವಿಚಾರಣೆಗೆಂದು ಠಾಣೆಗೆ ಕರೆ ತಂದಿದ್ದಾರೆ. ವಿಚಾರಣೆ ನೆಪದಲ್ಲಿ ಮಹಿಳಾ ಠಾಣೆಯ ಇನ್‍ಸ್ಪೆಕ್ಟರ್ ಸಂಗಮೇಶ್ ಪಾಟೀಲ್, ಸಿಬ್ಬಂದಿ ನೆಹರು ಸಿಂಗ್ ಪೋಷಕರನ್ನು ಮನಬಂದಂತೆ ಥಳಿಸಿದ್ದಾರೆ. ಕುಡಿಯಲು ನೀರು ಕೇಳಿದರೆ ಪತ್ನಿಯ ಮೂತ್ರ ಕುಡಿ ಎಂದು ಪೊಲೀಸರು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಬಳಿಕ ಯುವಕನ ತಾಯಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿರುವ ಯುವಕನ ಪೋಷಕರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.