Tag: people for people

  • ನಮ್ಮದು ಎಂದುಕೊಂಡಿದ್ದ ಮನೆ, ತೋಟ ಎಲ್ಲವೂ ಕೊಚ್ಚಿಕೊಂಡು ಹೋಗಿದೆ – ಕೊಡಗಿನ ಬಾಲಕಿ

    ನಮ್ಮದು ಎಂದುಕೊಂಡಿದ್ದ ಮನೆ, ತೋಟ ಎಲ್ಲವೂ ಕೊಚ್ಚಿಕೊಂಡು ಹೋಗಿದೆ – ಕೊಡಗಿನ ಬಾಲಕಿ

    ಬೆಂಗಳೂರು: ನಮ್ಮದು ಎಂದುಕೊಂಡಿದ್ದ ಮನೆ, ತೋಟ, ಸಮಸ್ತ ಆಸ್ತಿ ಎಲ್ಲವೂ ಪ್ರಾಕೃತಿಕ ದುರಂತದಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ತುಂಬಾ ಓದಿ ಏನಾದರೂ ಸಾಧಿಸಬೇಕೆಂಬ ಆಸೆ ದಿಕ್ಕೆಟ್ಟಂತಾಗಿದೆ ಎಂಬ ಮಾತುಗಳನ್ನಾಡಿದ್ದು ಕೊಡಗಿನ ಮಕ್ಕಂದೂರು ಗ್ರಾಮದ ಸುರಕ್ಷಾ ಎಂಬ ಬಾಲಕಿ.

    ಕೊಡಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪೀಪಲ್ ಫಾರ್ ಪೀಪಲ್ ಸಂಸ್ಥೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ಸಾವಿತ್ರಿ ಬಾ ಪುಲೆ ಚಲನಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಕಾರ್ಯಕ್ರಮದ ಫೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಸತಿಶಾಲೆಗಳ ಕಾರ್ಯನಿರ್ವಾಹಕ ಅಧ್ಯಕ್ಷರಾದ ನಂದನ್ ಕುಮಾರ್ ಅವರು ಸಂತ್ರಸ್ತ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಆಶ್ವಾಸನೆ ನೀಡಿದರು.

    ಚಿತ್ರನಟಿ ತಾರಾ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ಸಾವಿತ್ರಿ ಬಾ ಪುಲೆಯ ಕುರಿತಾದ ಈ ಚಲನಚಿತ್ರ ಪ್ರದರ್ಶನ ಕೊಡಗಿನ ಮಕ್ಕಳಿಗಾಗಿ ನಡೆಸುತ್ತಿರುವುದು ಹೆಚ್ಚು ಅರ್ಥಪೂರ್ಣ. ಸಾವಿತ್ರಿ ಬಾ ಪುಲೆಯವರಿಗೆ ಸಲ್ಲಿಸುವ ಗೌರವ. ಕೊಡಗಿನ ಮಕ್ಕಳಿಗಾಗಿ ಹೆಬ್ಬೆಟ್ಟು ರಾಮಕ್ಕ ಚಲನಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗುವುದು ಎಂಬ ಭರವಸೆ ನೀಡಿದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ಜಿ ಸಿದ್ದರಾಮಯ್ಯನವರು ಕೊಡಗಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತುರ್ತಾಗಿ ಮುಖ್ಯಮಂತ್ರಿಯವರೊಂದಿಗೆ ಸಭೆ ನಡೆಸಿ ವಾಸ್ತವ ಚಿತ್ರಣ ಕಟ್ಟಿಕೊಟ್ಟು ಸರ್ಕಾರದಿಂದ ಹೆಚ್ಚಿನ ಸಹಾಯದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.

    ಶಾಸಕರಾದ ಅರುಣ್ ಶಹಾಪುರ ಅವರು ಅಧಿವೇಶನದಲ್ಲೂ ಕೊಡಗಿನ ಸಮಸ್ಯೆಯ ಗಂಭೀರತೆ ಗಮನಕ್ಕೆ ಬಂದಿರಲಿಲ್ಲ. ಆದರೆ ಈಗ ಅರ್ಥವಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರದಿಂದ ಹೆಚ್ಚಿನ ಸಹಾಯ ದೊರಕಿಸಿಕೊಡುವುದಾಗಿ ಹೇಳಿದರು. ಪೀಪಲ್ ಫಾರ್ ಪೀಪಲ್ ಸಂಸ್ಥೆ ನಡೆಸಿದ ಈ ಚಲನಚಿತ್ರ ಪ್ರದರ್ಶನದ ತಕ್ಷಣದ ಫಲಶೃತಿ ಎಂಬಂತೆ ನಟ ಪ್ರಕಾಶ್ ರಾಜ್ ಅವರು ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ 4.89ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಮತ್ತು ನಿವೃತ್ತ ಪೊಲೀಸ್‌ ಅಧಿಕಾರಿ ಗೋಪಾಲ್ ಹೊಸೂರು 5 ಮಂದಿ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳುವ ಭರವಸೆ ನೀಡಿರುವುದಾಗಿ ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಅಧ್ಯಕ್ಷರಾದ ಚಕ್ರವರ್ತಿ ಚಂದ್ರಚೂಡ್ ತಿಳಿಸಿದರು.

    ಅಂತಾರಾಷ್ಟ್ರೀಯ ಕಲಾವಿದ ಎಂ. ಎಸ್. ಮೂರ್ತಿ, ಮಾವಳ್ಳಿ ಶಂಕರ್, ಬಿ. ಗೋಪಾಲ್, ಡಾ. ರಾಜಪ್ಪ ದಳವಾಯಿ, ಡಾ. ಕೆ ಸಿ ಶಿವಾರೆಡ್ಡಿ, ಡಾ. ಟಿ ಗೋವಿಂದರಾಜು, ರಂಗಕರ್ಮಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಕಾಂಗ್ರೆಸ್ ವಕ್ತಾರರಾದ ನಟರಾಜ್ ಗೌಡ, ಸೂರ್ಯ ಮುಕುಂದರಾಜ್, ಕನ್ನಡಪರ ಸಂಘಟನೆಗಳ ನಾಗೇಶ್ ಗುರುದೇವ್ ನಾರಾಯಣ್ ಪ್ರಕಾಶ್ ಮೂರ್ತಿ ದೊಡ್ಡಣ್ಣ ಅಹಮದ್ ಸುರೇಶ್ ಸುಚೇಂದ್ರ ಪ್ರಸಾದ್ ವಿಶಾಲ್ ನಂಜುಂಡೇಗೌಡ ಜಿ ಎನ್ ನಾಗರಾಜ್ ಶಿವಬಸವಸ್ವಾಮೀಜಿ ಪಂಚಮಿ ಚೈತ್ರಾಕೋಟೂರ್ ಮನ್ಸೋರೆ, ಹೇಮಾವಂಕಟ್, ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಹೆಬ್ಬೆಟ್ ರಾಮಕ್ಕ ಚಲನಚಿತ್ರ ಬೆನಿಫಿಟ್ ಪ್ರದರ್ಶನಕ್ಕೆ ಅವಕಾಶ ಕೊಡುವುದಾಗಿ ಇದೇ ವೇಳೆ ಘೋಷಿಸಿದರು. ಅಕ್ಷರದವ್ವ ಸಾವಿತ್ರಿಬಾಪೂಲೆ ಸಿನಿಮಾ ನೋಡಲು ಅಂಬೇಡ್ಕರ್ ಸಂಶೋಧನಾ ಕೇಂದ್ರದ ವಿಧ್ಯಾರ್ಥಿಗಳು ನಟ ನಟಿಯರು ಸೇರಿದಂತೆ ಸಭಾಂಗಣ ಕಿಕ್ಕಿರಿದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿನ ನಿರಾಶ್ರಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಚಲನಚಿತ್ರ ಪ್ರದರ್ಶನ

    ಕೊಡಗಿನ ನಿರಾಶ್ರಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಚಲನಚಿತ್ರ ಪ್ರದರ್ಶನ

    ಬೆಂಗಳೂರು: ಕೊಡಗಿನ ನೊಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥ `ಪೀಪಲ್ ಫಾರ್ ಪೀಪಲ್’ ತಂಡ ಕನ್ನಡದ `ಸಾವಿತ್ರಿಬಾಯಿ ಫುಲೆ’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಇಂದು ಸಂಜೆ 6 ಘಂಟೆಗೆ, ನಗರದ ಕರ್ನಾಟಕ ಚಲನಚಿತ್ರ ಕಲಾವಿದರ ಒಕ್ಕೂಟದ ಅಡಿಟೋರಿಯಂ, ಚಾಮರಾಜಪೇಟೆಯಲ್ಲಿ ನಡೆಯಲಿದೆ.

    ಈಗಾಗಲೇ `ಪೀಪಲ್ ಫಾರ್ ಪೀಪಲ್’ ತಂಡದವರು ಮಲ್ಲತ್ ಹಳ್ಳಿಯ ಕಲಾಗ್ರಾಮದಲ್ಲಿ ಕೊಡಗಿನ ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ `ಕೊಡಗಿಗಾಗಿ ರಂಗಸಪ್ತಾಹ’ ಹಾಗೂ `ಕೊಡಗಿಗಾಗಿ ರಂಗೋತ್ಸವ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

    ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಈ ಪ್ರದರ್ಶನಕ್ಕೆ ಕೊಡಗಿನ ನೊಂದ ಹೆಣ್ಣುಮಕ್ಕಳು, ರಾಜಕೀಯ ನಾಯಕರು ನಾಡಿನ ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರು, ದಲಿತಪರ ಚಿಂತಕರು ಸೇರಿದಂತೆ ಎಲ್ಲಾ ಬಗೆಯ ನಾಯಕರು ಆಗಮಿಸಲಿದ್ದಾರೆ.

    ಬ್ರಿಟಿಷರಿಂದ “ಭಾರತದ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ಪಡೆದಿರುವ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಿತ್ರವಾಗಿದೆ. ಈ `ಸಾವಿತ್ರಿಬಾಯಿ ಫುಲೆ-ಪ್ರೈಡ್ ಆಫ್ ನೇಶನ್’. ಈ ಚಿತ್ರದಲ್ಲಿ ತಾರಾ `ಸಾವಿತ್ರಿಬಾಯಿ’ ಪಾತ್ರದಲ್ಲಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv