Tag: pensions

  • ಬದುಕಿಗಾಗಿ ಹರಸಾಹಸ ಪಡುತ್ತಿರೋ ಸಾವಿರಾರು ಮಂದಿ ವೃದ್ಧರಿಗೆ ಬೇಕಿದೆ ಪಿಂಚಣಿ ಹಣ

    ಬದುಕಿಗಾಗಿ ಹರಸಾಹಸ ಪಡುತ್ತಿರೋ ಸಾವಿರಾರು ಮಂದಿ ವೃದ್ಧರಿಗೆ ಬೇಕಿದೆ ಪಿಂಚಣಿ ಹಣ

    ಚಿಕ್ಕಬಳ್ಳಾಪುರ: ಸಾಮಾಜಿಕ ಭದ್ರತೆ ಹಿತದೃಷ್ಟಿಯಿಂದ ಸರ್ಕಾರ, ಆರ್ಥಿಕವಾಗಿ ಸಬರಲ್ಲದ, ದುರ್ಬಲ ವರ್ಗದ ವಯೋವೃದ್ಧರು, ವಿಕಲಚೇತನರು, ವಿಧವೆಯರು ಸೇರಿದಂತೆ ಅಸಹಾಯಕರಿಗೆ ಪ್ರತಿ ತಿಂಗಳು ಇಂತಿಷ್ಟು ಪಿಂಚಣಿ ಅಂತ ಹಣ ನೀಡಿ ಹಲವರ ಬದುಕಿಗೆ ಅಸರೆಯಾಗುತ್ತಿದೆ. ಆದ್ರೆ ಪ್ರತಿ ತಿಂಗಳು ಪಿಂಚಣಿ ಹಣ ಪಡೆದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಬದುಕು ಸವೆಸುತ್ತಿದ್ದ ಸಾವಿರಾರು ಮಂದಿಯ ಬಾಳಿಗೆ ಆಧಾರ್ ಕಾರ್ಡ್ ಸಮಸ್ಯೆ ಈಗ ಅವರ ಬದುಕಿಗೇ ಆಧಾರವಾಗಿದ್ದಂತಹ ಪಿಂಚಣಿ ಹಣವೇ ಸಿಗದಂತೆ ಮಾಡಿ ಆಧಾರವೇ ಇಲ್ಲದಂತೆ ಮಾಡಿಬಿಟ್ಟಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಸರಿಸುಮಾರು 40,000 ಮಂದಿ ವೃದ್ಧಾಪ್ಯವೇತನ, ವಿಕಲಚೇತನರ ಪಿಂಚಣಿ, ವಿಧವಾವೇತನ ಸೇರಿದಂತೆ ಹಲವು ಪಿಂಚಣಿ ಯೋಜನೆಯ ಫಲಾನುಭವಿಗಳಿದ್ದಾರೆ. ಆದ್ರೆ ಪಿಂಚಣಿ ಯೋಜನೆಗೆ ಆರ್ಹರಾಗಿರುವ ಫಲಾನುಭವಿಗಳು ತಮ್ಮ ಪಿಂಚಣಿ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂಬ ಕಾನೂನು ಬಂದಿರುವುದರಿಂದ ಇದೀಗ ಹಲವರ ಬಾಳಿಗೆ ಮುಳ್ಳಾಗಿ ಪರಿಣಮಿಸಿದೆ. ಅರಳುಮರುಳು ವಯಸ್ಸಲ್ಲಿ ಜೀವನಕ್ಕೆ ಆಧಾರವಾಗಿದ್ದ ಪಿಂಚಣಿ ಯೋಜನೆಯಿಂದಲೇ ವಂಚಿತರಾಗುವಂತೆ ಮಾಡಿದೆ.

    ಚಿಕ್ಕಬಳ್ಳಾಪುರ ತಾಲೂಕೊಂದರಲ್ಲೇ 2,538 ಮಂದಿ ಫಲಾನುಭವಿಗಳು ಸೇರಿದಂತೆ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಗುಡಿಬಂಡೆ ತಾಲೂಕಿನಾದ್ಯಾಂತ ಕಳೆದ 3-4 ತಿಂಗಳನಿಂದ ಬರೋಬ್ಬರಿ 10,000ಕ್ಕೂ ಹೆಚ್ಚು ಮಂದಿ ವಿವಿಧ ಪಿಂಚಣಿ ಯೋಜನೆಗಳಿಂದ ಧಿಡೀರ್ ವಂಚಿತರಾಗಿದ್ದಾರೆ. ಇದ್ರಿಂದ ವಯೋವೃದ್ಧರು, ಕಣ್ಣು ಕಾಣದವರು, ಕಿವಿ ಕೇಳದವರು, ವಿಕಲಚೇತನರು, ಕನಿಷ್ಠ ನಡೆಯಲು ಆಗದವರು, ತೆವಳಿಕೊಂಡು ಬದುಕುತ್ತಿರುವ ಬಡ ಜೀವಗಳು, ಪಿಂಚಣಿ ಹಣ ಸಿಗದೆ ಕಣ್ಣಿರು ಹಾಕುತ್ತಾ ಪಡಬಾರದ ಕಷ್ಟ ಪಡುತ್ತಿದ್ದಾರೆ.

    ಪಿಂಚಣಿ ಯೋಜನೆಯಿಂದ ವಂಚಿತರಾದ ಫಲಾನುಭವಿಗಳು ತಮ್ಮ ಪಿಂಚಣಿ ಹಣ ಬರ್ತಿಲ್ಲ ಅಂತ ಪ್ರತಿ ದಿನ ನಾಡಕಚೇರಿ, ತಾಲೂಕು ಕಚೇರಿ, ಅಂಚೆಕಚೇರಿ, ಜಿಲ್ಲಾಡಳಿತ ಭವನದ ಖಜಾನೆ ಇಲಾಖೆಯ ಪಿಂಚಣಿ ಶಾಖೆಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಅಲ್ಲದೇ ಹಳ್ಳಿಗಳಿಂದ ದೂರದ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದ ಕಚೇರಿ, ಅಧಿಕಾರಿಗಳ ಬಳಿ ಅಲೆದೂ ಅಲೆದೂ ತಮ್ಮ ಚಪ್ಪಲಿ ಸವೆಸುಕೊಂಡಿದ್ದಾರೆ ಹೊರೆತು ಪಿಂಚಣಿ ಹಣ ಮಾತ್ರ ಸಿಗ್ತಾ ಇಲ್ಲ. ಕನಿಷ್ಠ ಹಳ್ಳಿಗಳಿಂದ ಕಚೇರಿಗಳಿಗೆ ಬಂದು ಹೋಗೋಕೆ ಬಸ್ ಚಾರ್ಜ್ ಗೂ ಇವರ ಬಳಿ ಹಣ ಇಲ್ಲದ ಶೋಚನೀಯ ಸ್ಥಿತಿ.

    ಅರಳು ಮರಳು ವಯಸ್ಸಲ್ಲಿ ಅನಾರೋಗ್ಯಪೀಡಿತರಾಗಿರೋ ಹಲವು ಮಂದಿ ವಯೋವೃದ್ಧರಿಗೆ ಪಿಂಚಣಿ ಹಣವೇ ಮಾತ್ರೆ-ಔಷಧಿಗಳ ಖರೀದಿಗೆ ಆಧಾರವಾದ್ರೇ, ಇನ್ನು ನಡೆಯಲಾಗದ ವಿಕಲಚೇತನರಿಗೆ ಊರಿಗೋಲಿನಂತೆ ಆಸರೆಯಾಗೋದು ಪಿಂಚಣಿ ಹಣವೇ. ಆದ್ರೆ ಅದೆಷ್ಟೋ ಮಂದಿಗೆ ಈಗ ಪಿಂಚಣಿ ಹಣವೇ ಸಿಗದೆ ಒಪ್ಪತ್ತೂ ಊಟ ಮಾಡಿ ಬದುಕುತ್ತಿದ್ದಾರೆ. ಹಲವು ಮಂದಿ ವಯೋವೃದ್ಧರು ಬರುತ್ತಿದ್ದ ಪಿಂಚಣಿ ಬಾರದೆ ಭಿಕ್ಷೆ ಬೇಡೋಕೆ ಮುಂದಾಗಿಬಿಟ್ಟಿದ್ದಾರೆ ಅನ್ನೋದೆ ದುರಂತ. ಇಂತಹ ಹತ್ತು ಹಲವು ನಿದರ್ಶನಗಳು ಪ್ರತಿನಿತ್ಯ ಕಣ್ಣು ಮುಂದೆ ನಮ್ಮನ್ನೇ ಕಾಡಿ ಕದಡಿ ಮನಕಲುಕತ್ತಿವೆ.

    ಈ ಸಂಬಂಧ ಅಧಿಕಾರಿಗಳು ಮಾತ್ರ ಆಧಾರ್ ಸಮಸ್ಯೆ ಅಲ್ಲ ಬದಲಾಗಿ ಪಿಂಚಣಿ ಯೋಜನೆಯಿಂದ ರದ್ದಾದ ಫಲಾನುಭವಿಗಳು ಮರಣ ಹಾಗೂ ವಲಸೆ ಹೋಗಿದ್ದಾರೆ ಅಂತ ವರದಿ ಕೊಡುತ್ತಿದ್ದಾರೆ. ಆದ್ರೆ ಅಸಲಿಯತ್ತೇ ಬೇರೆ ಇದ್ದು, ಆಧಿಕಾರಿಗಳು ಸಮರ್ಪಕ ಪರಿಶೀಲನೆ ನಡೆಸದೆ ಕಾಟಚಾರದ ಕೆಲಸ ಮಾಡಿದ್ದು ಹಾಗೂ ತಾಂತ್ರಿಕ ಕಾರಣಗಳಿಂದ ಪಿಂಚಣಿ ಯೋಜನೆ ರದ್ದಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಲ್ಲಿನ ಪ್ರಮುಖ ಮತ್ತೊಂದು ಸಮಸ್ಯೆ ಅಂದರೆ ಯಾರೇ ಫಲಾನುಭವಿ ಕಾರಣಾಂತರಗಳಿಂದ ಒಮ್ಮೆ ಪಿಂಚಣಿ ಯೋಜನೆಯಿಂದ ರದ್ದಾದ್ರೇ ಮತ್ತೆ ಹತ್ತು ಹಲವು ಕಚೇರಿಗಳನ್ನ ಅಲೆದು ಮೊದಲಿನಿಂದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿಬೇಕಿದೆ. ಆದ್ರೆ ಅರಳು ಮರಳು ವಯಸ್ಸಲ್ಲಿ, ಕನಿಷ್ಠೂ ನಡೆಯಲೂ ಆಗದ ವೃದ್ದರ ಕೈಯಲ್ಲಿ ಇದೆಲ್ಲಾ ಮಾಡೋಕೆ ಸಾಧ್ಯಾನಾ..? ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಲವರ ಬಾಳಿಗೆ ಆಧಾರವಾಗಿದ್ದ ಪಿಂಚಣಿ ಯೋಜನೆ ಸೌಲಭ್ಯ ಮರಳಿ ಕಲ್ಪಿಸುವ ಮೂಲಕ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿಯ ಬಾಳಿಗೆ ಬೆಳಕು ನೀಡಬೇಕಿದೆ. ಒಟ್ಟಿನಲ್ಲಿ ಕೊನೆಗಾಲದ ಅವರ ಬದುಕಿನಲ್ಲಿ ನಗು ಮೂಡಿಸುವ ಕೆಲಸ ಮಾಡಬೇಕಿದೆ.

    https://www.youtube.com/watch?v=L11yw0lYqqM