Tag: Penal

  • ಕೊಹ್ಲಿಗೆ 500ರೂ. ದಂಡ ವಿಧಿಸಿದ ಗುರುಗ್ರಾಮ ಮುನಿಸಿಪಲ್ ಕಾರ್ಪೋರೇಶನ್

    ಕೊಹ್ಲಿಗೆ 500ರೂ. ದಂಡ ವಿಧಿಸಿದ ಗುರುಗ್ರಾಮ ಮುನಿಸಿಪಲ್ ಕಾರ್ಪೋರೇಶನ್

    ಗುರುಗ್ರಾಮ: ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಇರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಗುರುಗ್ರಾಮ ಮುನಿಸಿಪಲ್ ಕಾರ್ಪೋರೇಶನ್ 500 ರೂ. ದಂಡ ವಿಧಿಸಿದೆ.

    ಗುರುಗ್ರಾಮದ ಡಿಎಲ್‍ಎಫ್ ಫೇಸ್ 1 ರಲ್ಲಿ ಕೊಹ್ಲಿ ಅವರ ನಿವಾಸ ಇದ್ದು, ಇಲ್ಲಿ ಅವರ ಕಾರುಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಕೆ ಮಾಡಿದ್ದಾಗಿ ಮುನಿಸಿಪಲ್ ಕಾರ್ಪೋರೇಶನ್ ದಂಡವನ್ನು ಹಾಕಿದ್ದು, ಈ ಕುರಿತ ಚಲನ್ ಅನ್ನು ನಿವಾಸಕ್ಕೆ ಕಳುಹಿಸಿಕೊಟ್ಟಿದೆ.

    ಸ್ಥಳೀಯ ಮಾಧ್ಯಮ ವರದಿಯ ಅನ್ವಯ ಕೊಹ್ಲಿ ನಿವಾಸದ ಸನಿಹ ಇರುವ ಸ್ಥಳೀಯರು ಈ ಬಗ್ಗೆ ಕಾರ್ಪೋರೇಶನ್‍ಗೆ ದೂರು ನೀಡಿದ್ದು, ಈ ದೂರಿನಲ್ಲಿ ಕೊಹ್ಲಿ ನಿವಾಸದಲ್ಲಿ ಇರುವ ಅರ್ಧ ಡಜನ್ ಕಾರುಗಳನ್ನು ಸಾವಿರಾರು ಲೀಟರ್ ಕುಡಿಯುವ ನೀರನ್ನು ಬಳಸಿ ತೊಳೆಯುತ್ತಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಅನ್ವಯ ಸದ್ಯ ಕ್ರಮಕೈಗೊಳ್ಳಲಾಗಿದೆ.

    ಗುರುಗ್ರಾಮದ ಸೇರಿದಂತೆ ಉತ್ತರ ಭಾರತದ ಹಲವು ನಗರಗಳಲ್ಲಿ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಪರಿಣಾಮ ಸ್ಥಳೀಯ ಸರ್ಕಾರಗಳು ನೀರಿನ ಬಳಕೆ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಸದ್ಯ ಕೊಹ್ಲಿ ಸೇರಿದಂತೆ ಇತರೇ 10 ನಿವಾಸಗಳ ಮಾಲೀಕರಿಗೂ ನೀರಿನ ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಅಲ್ಲದೇ ನೀರನ್ನು ವ್ಯರ್ಥವಾಗಿ ಪೋಲು ಮಾಡುವುದನ್ನು ಮುಂದುವರಿಸಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.

  • ತಲಾ 70 ಸಾವಿರ ದಂಡ, ಕೆಡವಿದ ಸ್ಮಾರಕಗಳನ್ನ ಆರೋಪಿಗಳೇ ಮರಳಿ ನಿಲ್ಲಿಸುವಂತೆ ಮಹತ್ವದ ಆದೇಶ

    ತಲಾ 70 ಸಾವಿರ ದಂಡ, ಕೆಡವಿದ ಸ್ಮಾರಕಗಳನ್ನ ಆರೋಪಿಗಳೇ ಮರಳಿ ನಿಲ್ಲಿಸುವಂತೆ ಮಹತ್ವದ ಆದೇಶ

    – ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಿದ ನ್ಯಾಯಾಧೀಶರು

    ಬಳ್ಳಾರಿ: ಹಂಪಿ ಸ್ಮಾರಕ ಕೆಡವಿದ ಕಿಡಿಗೇಡಿಗಳಿಗೆ ನ್ಯಾಯಾಲಯ ಬಿಸಿ ಮುಟ್ಟಿಸುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ.

    ಸ್ಮಾರಕಗಳನ್ನ ಕೆಡವಿದ ಆಯುಷ್ ಸಾಹು, ರಾಜಬಾಬು, ರಾಜ್ ಆರ್ಯನ್ ಮತ್ತು ರಾಜೇಶ್ ಚೌದರಿಯನ್ನ ಬಳ್ಳಾರಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಆದರೆ ಆರೋಪಿಗಳಿಗೆ ಜಾಮೀನು ಮಂಜೂರು ವೇಳೆ ಹೊಸಪೇಟೆಯ ಜೆಎಂಎಫ್‍ಸಿ ನ್ಯಾಯಾದೀಶೆ ಪೂಣಿರ್ಮಾ ಯಾಧವ ಅವರು ಮಹತ್ವದ ಆದೇಶ ನೀಡಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಹಂಪಿ ಸ್ಮಾರಕ ಧ್ವಂಸ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ಸ್ಮಾರಕಗಳನ್ನ ಕೆಡವಿದ ಆರೋಪಿಗಳಿಗೆ ತಲಾ 70 ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲದೇ, ಕೆಡವಿದ ಸ್ಮಾರಕಗಳನ್ನ ಆರೋಪಿಗಳೇ ಮರಳಿ ನಿಲ್ಲಿಸುವಂತೆ ಹೊಸಪೇಟೆಯ ಜೆಎಂಎಫ್‍ಸಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೇ ಮರಳಿ ಸ್ಮಾರಕಗಳನ್ನ ನಿಲ್ಲಿಸಿದ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಹಾಗೂ ಪೊಲೀಸರು ವರದಿ ನೀಡಿದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದು ವಿಶೇಷ ಪ್ರಕರಣವಾಗಿದೆ.

    ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆಯ ಬಳಿಯ ಸಾಲು ಕಂಬಗಳನ್ನ ಕೆಡವಿ ಸ್ಮಾರಕಗಳನ್ನ ಕೆಡವಿದ ವಿಡಿಯೋ ಫೆಬ್ರವರಿ 1 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯ ನಂತರ ಎಚ್ಚೆತ್ತುಕೊಂಡಿದ್ದ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪೃಥ್ವಿ ಶಾಗೆ ವಿಭಿನ್ನವಾಗಿ ಶುಭ ಕೋರಿದ ಕಾಂಡೋಮ್ ಕಂಪನಿಗೆ 1 ಕೋಟಿ ದಂಡ!

    ಪೃಥ್ವಿ ಶಾಗೆ ವಿಭಿನ್ನವಾಗಿ ಶುಭ ಕೋರಿದ ಕಾಂಡೋಮ್ ಕಂಪನಿಗೆ 1 ಕೋಟಿ ದಂಡ!

    ರಾಜ್‍ಕೋಟ್: ಕಳೆದ ವಾರ ರಾಜ್‍ಕೋಟ್ ಸೌರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವಿಂಡೀಸ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಗೆ ವಿಶೇಷವಾಗಿ ಶುಭಕೋರಿದ್ದ ಕಂಪೆನಿಗಳಿಗೆ ತಲೆನೋವು ಶುರುವಾಗಿದೆ. ಏಕೆಂದರೆ ಕಾಂಡೋಮ್ ಕಂಪನಿ ಡ್ಯುರೆಕ್ಸ್, ಸ್ವಿಗ್ಗಿ, ಫ್ರೀ ಚಾರ್ಜ್ ಸೇರಿದಂತೆ ಕೆಲ ಕಂಪನಿಗಳ ವಿರುದ್ಧ ಶಾ ಮಾರ್ಕೆಟಿಂಗ್ ವ್ಯವಹಾರ ನೋಡಿಕೊಳ್ಳುತ್ತಿರುವ ಬೇಸ್ಲೈನ್ ವೆಂಚರ್ಸ್ ಸಂಸ್ಥೆ 1 ಕೋಟಿ ರೂ. ನೀಡುವಂತೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಶಾಗೆ ಶುಭಕೋರಿದ್ದ ಸ್ವಿಗಿ ಹಾಗೂ ಫ್ರೀ ಚಾರ್ಜ್ ಸಂಸ್ಥೆಗಳು ಟ್ವಿಟ್ಟರ್‍ನಲ್ಲಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೇಸ್ಲೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತುಯಿನ್ ಮಿಶ್ರಾ, ಇಂತಹ ಟ್ವೀಟ್ ಗಳು ತೀವ್ರ ನಿರಾಸೆಯನ್ನು ಉಂಟು ಮಾಡಿದ್ದು, ಮಾರುಕಟ್ಟೆಯ ಮೇಲೆ ನಡೆಸಿದ ದಾಳಿಯಾಗಿದೆ. ಅಲ್ಲದೇ ಆಟಗಾರ ಮಾತ್ರವಲ್ಲದೇ ಶಾ ಪ್ರಯೋಜಕತ್ವದ ಸಂಸ್ಥೆಗಳಿಗೆ ಮಾಡಿದ ಅನ್ಯಾಯವಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಉಳಿದಂತೆ ಅಮೂಲ್ ಕಂಪೆನಿಯೂ ಕೂಡ ಇದೇ ರೀತಿ ಶುಭಕೋರಿ ಟ್ವೀಟ್ ಮಾಡಿದ್ದು, ಅಮೂಲ್ ಪೃಥ್ವಿ ಕಾ ಫೇವರೆಟ್ ಮಖಾನ್! ಎಂದು ಬರೆದುಕೊಂದಿದೆ. ಮುಂಬೈ ಪೊಲೀಸರು ಕೂಡ ವಿಶೇಷ ಟ್ವೀಟ್ ಮಾಡುವ ಶಾ ಫೋಟೋ ಬಳಕೆ ಮಾಡಿದ್ದರು. ಇದನ್ನೂ ಓದಿ: ಶತಕ ಸಿಡಿಸುವುದರ ಜೊತೆ ಭಾರತದ ಪರ ದಾಖಲೆ ನಿರ್ಮಿಸಿದ ಪೃಥ್ವಿ ಶಾ!

    ಡ್ಯುರೆಕ್ಸ್ ಕಂಪೆನಿ ಕಾಂಡೋಮ್‍ಗಳು ತನ್ನದೇ ಶೈಲಿಯ ವಿಭಿನ್ನ ಜಾಹಿರಾತುಗಳಿಂದ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತದೆ. ಅಂತೆಯೇ ಸೆಲೆಬ್ರೆಟಿಗಳಿಗೂ ವಿಶ್ ಮಾಡುವ ಮೂಲಕ ಅವರನ್ನು ಹಿತವಾಗಿ ಕಾಲೆಳೆಯುವ ಪ್ರಯತ್ನವನ್ನು ಮಾಡುತ್ತದೆ. ಇದರಂತೆ ಪೃಥ್ವಿ ಶಾಗೆ `ಮೊದಲ ಪ್ರಯತ್ನ ಯಾವಾಗಲೂ ಅತ್ಯಂತ ವಿಶೇಷವಾಗಿರುತ್ತದೆ. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ’ (It`s Always Special? when it`s the first time!) ಅಂತಾ ಶುಭಾಶಯ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • 10 ರೂ. ನಾಣ್ಯ ಪಡೆಯದ್ದಕ್ಕೆ ಅಂಗಡಿ ಮಾಲೀಕನಿಗೆ ದಂಡ!

    10 ರೂ. ನಾಣ್ಯ ಪಡೆಯದ್ದಕ್ಕೆ ಅಂಗಡಿ ಮಾಲೀಕನಿಗೆ ದಂಡ!

    ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲಾ ನ್ಯಾಯಾಲಯವು 10 ರೂಪಾಯಿ ನಾಣ್ಯ ಸ್ವೀಕರಿಸದ್ದಕ್ಕೆ ಅಂಗಡಿ ಮಾಲೀಕನಿಗೆ 200 ರೂ. ದಂಡ ವಿಧಿಸಿದೆ.

    10 ರೂ. ನಾಣ್ಯ ಸ್ವೀಕರಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಪಿ. ಚಿದಲ್ ರವರು ಮಂಗಳವಾರ ನಾಣ್ಯವನ್ನು ಸ್ವೀಕರಿಸದ್ದಕ್ಕೆ 200 ರೂ. ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೇ ನಾಣ್ಯ ನಿಷೇಧವಾಗಿದೆ ಎಂದು ಸುಳ್ಳು ಹೇಳಿದ್ದಕ್ಕೆ ಮಂಗಳವಾರದ ಕಲಾಪ ಮುಗಿಯುವವರೆಗೂ ಕೋರ್ಟ್ ನಲ್ಲೇ ಇರಬೇಕೆಂಬ ಶಿಕ್ಷೆಯನ್ನು ವಿಧಿಸಿದ್ದಾರೆ.

    ಏನಿದು ಪ್ರಕರಣ?
    2017ರ ಅಕ್ಟೋಬರ್ 17ರಂದು ಗ್ರಾಹಕ ಆಕಾಶ್ ಪರಾಸ ಎಂಪೋರಿಯಂ ನಲ್ಲಿ 10 ರೂ. ಮೌಲ್ಯದ ಎರಡು ಕರವಸ್ತ್ರಗಳನ್ನು ಖರೀದಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕನಿಗೆ 10 ರೂ. ಮೌಲ್ಯದ ಎರಡು ನಾಣ್ಯಗಳನ್ನು ನೀಡಿದ್ದರು. ಆದರೆ ಅಂಗಡಿ ಮಾಲೀಕ ಆಕಾಶ್ 10. ರೂ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಅಲ್ಲದೇ ಅವುಗಳು ಚಲಾವಣೆಯಲಿಲ್ಲ ಎಂದು ಹೇಳಿದ್ದ.

    10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಸರ್ಕಾರವೇ ತಿಳಿಸಿದ್ದು, ನಾಣ್ಯವನ್ನು ಪಡೆಯಲು ನಿರಾಕರಿಸಿದ ಅಂಗಡಿ ಮಾಲೀಕನ ವಿರುದ್ಧ ಆಕಾಶ್ ಜುವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 188ರ(ಸರ್ಕಾರದ ಆದೇಶದ ಉಲ್ಲಂಘನೆ) ಅಡಿ ಗ್ರಾಹಕರೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ಆರ್ ಬಿಐ ಆದೇಶದಲ್ಲಿ ಏನಿದೆ?
    10 ರೂಪಾಯಿ ಕಾಯಿನ್ ಬ್ಯಾನ್ ಆಗಿಲ್ಲ, ಸ್ಚೀಕರಿಸಬಹುದು ಅಂತ ಆರ್ ಬಿಐ 2016 ನವೆಂಬರ್ 20ರಂದೇ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟವಾಗಿ ತಿಳಿಸಿದೆ. ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಅಂತವರ ವಿರುದ್ಧ ದೂರು ಸಲ್ಲಿಸಬಹುದಾಗಿದೆ.

  • ಗಂಗಾ ನದಿಯಲ್ಲಿ ತ್ಯಾಜ್ಯ ಹಾಕಿದ್ರೆ 50 ಸಾವಿರ ದಂಡ

    ಗಂಗಾ ನದಿಯಲ್ಲಿ ತ್ಯಾಜ್ಯ ಹಾಕಿದ್ರೆ 50 ಸಾವಿರ ದಂಡ

    ನವದೆಹಲಿ: ಗಂಗಾ ನದಿ ದಂಡೆಯಿಂದ 500 ಮೀಟರ್ ದೂರದಲ್ಲಿ ಕಸ-ಕಡ್ಡಿ ಇನ್ನಿತರ ತ್ಯಾಜ್ಯ ವಸ್ತುಗಳನ್ನ ಸುರಿಯುವುದನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಧಿಕರಣ(ಎನ್‍ಜಿಟಿ) ಉಲ್ಲಂಘಿಸಿದವರಿಗೆ 50 ಸಾವಿರ ದಂಡ ವಿಧಿಸಲು ಗುರುವಾರ ಮಹತ್ವದ ಸೂಚನೆ ಸೂಚಿಸಿದೆ.

    ಗಂಗಾ ನದಿ ತಟದ ಉನ್ನಾವ್ ಮತ್ತು ಹರಿದ್ವಾರಗಳಲ್ಲಿ ನದಿಯ ದಡದಲ್ಲಿ ಕಸ ಹಾಕುವುದನ್ನು ತಡೆಯಬೇಕೆಂದು ಹಸಿರು ನ್ಯಾಯಪೀಠ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ಹೊರಡಿಸಿದೆ.

    ಗಂಗಾ ನದಿ ಸಮೀಪದಲ್ಲಿರುವ ಚರ್ಮ ಸಂಸ್ಕರಣಾ ಘಟಕಗಳನ್ನು ಆರು ವಾರದ ಒಳಗಡೆ ಸ್ಥಳಾಂತರಿಸುವಂತೆ ನ್ಯಾಯಪೀಠವು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ, ಗಂಗಾ ನದಿ ದಂಡೆ ಅಸುಪಾಸು 100 ಮೀಟರ್ ಅಂತರ ಯಾವುದೇ ಅಭಿವೃದ್ಧಿ ಕೆಲಸ ಮಾಡುವಂತಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.

    ಈ ಗಂಗಾ ನದಿ ತೀರದಲ್ಲಿರುವ ಘಾಟ್ ಮತ್ತು ಪವಿತ್ರ ಸ್ಥಳಗಳಲ್ಲಿ ನದಿಗೆ ಯಾವುದೇ ರೀತಿ ಹಾನಿಯಾಗದಂತೆ ಧಾರ್ಮಿಕ ಆಚರಣೆಗಳನ್ನು ನಡೆಸಲು ಹಸಿರು ನ್ಯಾಯಾಧಿಕರಣವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿದೆ.