Tag: pejawaraswamiji

  • ಸಕಲ ಸಂತ ಸಮುದಾಯಕ್ಕೆ ಸಿಕ್ಕ ಪದ್ಮ ವಿಭೂಷಣ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಸಕಲ ಸಂತ ಸಮುದಾಯಕ್ಕೆ ಸಿಕ್ಕ ಪದ್ಮ ವಿಭೂಷಣ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಉಡುಪಿ: ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟವಾಗಿದ್ದು, ಇದು ಸಕಲ ಸಂತ ಸಮುದಾಯಕ್ಕೆ ಸಿಕ್ಕ ಮನ್ನಣೆ, ಗೌರವ ಅಂತ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಣ್ಣಿಸಿದ್ದಾರೆ.

    ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ಗುರುಗಳಿಗೆ ಪ್ರಶಸ್ತಿ ಬಂದ ವಿಚಾರ ಕೇಳಿ ಸಂತೋಷವಾಗಿದೆ. ಗುರುಗಳು ಯಾವುದೇ ಬಗೆಯ ವಿಭೂಷಣವನ್ನು ಬದುಕಿನಲ್ಲಿ ಧರಿಸಿದವರಲ್ಲ. ಆದರೆ ಸರ್ಕಾರ ಇಂದು ವಿಭೂಷಣವನ್ನು ಸಮರ್ಪಿಸಿದೆ. ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

    ಗುರುಗಳ ಜೀವಿತಾವಧಿಯಲ್ಲೇ ಈ ಸುಯೋಗ ಬಂದಿದ್ದರೆ ಮತ್ತಷ್ಟು ಸಂತೋಷ ಆಗುತ್ತಿತ್ತು. ಶ್ರೀ ಮಠ ಈ ಪ್ರಶಸ್ತಿಯನ್ನು ಸ್ವಾಗತಿಸುತ್ತದೆ. ಇದು ಸಂತ ಸಮಾಜಕ್ಕೆ ದೊರಕಿದ ಗೌರವ. ಈ ಪುರಸ್ಕಾರ ಸಂತ ಸಮಾಜದ ಜವಾಬ್ದಾರಿ ಹೆಚ್ಚಿಸಿದೆ ಎಂದರು.

    ಪ್ರಶಸ್ತಿ ಘೋಷಣೆಯಾಗುವಾಗ ಪೇಜಾವರ ಶ್ರೀಗಳು ಮುಳುಬಾಗಿಲಿನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿದ್ದ ನೂರಾರು ಜನ ಜಯಘೋಷ ಕೂಗಿದರು.

    ಗಣತಂತ್ರದ ಮುನ್ನಾ ದಿನವಾದ ಶನಿವಾರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡೀಸ್ ಮತ್ತು ಇತ್ತೀಚಿಗಷ್ಟೇ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳಿಗೆ ಎರಡನೇ ಅತ್ಯುಚ್ಛ ಪುರಸ್ಕಾರ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬಾಕ್ಸಿಂಗ್ ತಾರೆ ಮೇರಿಕೂಮ್‍ಗೂ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಗೋವಾದ ಮಾಜಿ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್, ಪಿವಿ ಸಿಂಧೂಗೆ ಪದ್ಮಭೂಷಣ ಘೋಷಣೆಯಾಗಿದೆ.

    ಪಬ್ಲಿಕ್ ಟಿವಿಯ `ಪಬ್ಲಿಕ್ ಹೀರೋ’ ಆಗಿದ್ದ ಉತ್ತರ ಕನ್ನಡ ಜಿಲ್ಲೆ ಆಂಕೋಲ ತಾಲೂಕಿನ ಹೊನ್ನಳ್ಳಿಯ ಅರಣ್ಯ ಪ್ರೇಮಿ ಹಾಲಕ್ಕಿ ಸಮುದಾಯದ ತುಳಸಿ ಗೌಡ, ಅಕ್ಷರ ಸಂತ ದಕ್ಷಿಣ ಕನ್ನಡದ ಅಕ್ಷರ ಸಂತ, ಕಿತ್ತಳೆ ಹಣ್ಣು ಮಾರಿ ಹರೇಕಳದ ನ್ಯೂಪಡ್ಪು ಗ್ರಾಮದಲ್ಲಿ ಶಾಲೆ ಕಟ್ಟಿಸಿದ ಹಾಜಬ್ಬ, ವಿಜಯ ಸಂಕೇಶ್ವರ್, ಕೆ ವಿ ಸಂಪತ್ ಕುಮಾರ್, ಕ್ರೀಡಾಪಟು ಎಂಪಿ ಗಣೇಶ್ ಸೇರಿ 118 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

  • ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿದ ದೈವದ ಮರ

    ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿದ ದೈವದ ಮರ

    ಚಿಕ್ಕಮಗಳೂರು: ಕೃಷ್ಣನ ಪರಮ ಭಕ್ತ ಪೇಜಾವರ ಶ್ರೀಗಳು ಸಾವನ್ನಪ್ಪುತ್ತಿದ್ದಂತೆಯೇ 300 ವರ್ಷಗಳ ಇತಿಹಾಸವಿರುವ ದೈವದ ಬನ್ನಿ ಮರವೂ ಧರೆಗುರುಳಿದೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲಿದ್ದ ಈ ಮರಕ್ಕೆ ಸ್ಥಳಿಯರು ದೈವದ ಮರ ಎಂದೇ ಹೇಳುತ್ತಿದ್ದರು. ಆದರೆ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ ಪೇಜಾವರರು ಮರಣ ಹೊಂದುತ್ತಿದ್ದಂತೆ ಈ ಮರ ಕೂಡ ತಾನಾಗಿಯೇ ಧರೆಗುರುಳಿದೆ.

    ಈ ಮರಕ್ಕೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಸ್ಥಳಿಯರಿಂದ ದಿನಂಪ್ರತಿ ಪೂಜೆ ನಡೆಯುತ್ತಿತ್ತು. ದಾರಿಹೋಕರು ಓಡಾಡುವಾಗ ಕೈಮುಗಿದು ನಮಸ್ಕರಿಸುತ್ತಿದ್ದರು. ವಿಜಯ ದಶಮಿಯಂದು ಸುತ್ತಮುತ್ತಲಿನ ಗ್ರಾಮಸ್ಥರು ಇದೇ ಮರದ ಬಳಿ ಅಂಬನ್ನು ಹೊಡೆಯುತ್ತಿದ್ದರು. ಇದೀಗ ಪೇಜಾವರರು ಚಿರನಿದ್ರೆಗೆ ಜಾರುತ್ತಿದ್ದಂತೆ ಈ ಮರ ಕೂಡ ಉರುಳಿ ಬಿದ್ದಿದೆ.

    ಇದು ಕಾಕತಾಳಿಯವೋ ಅಥವಾ ದೈವದ ಶಕ್ತಿಯೋ ಗೊತ್ತಿಲ್ಲ. ಆದರೆ ಸ್ಥಳಿಯರು ಕೃಷ್ಣನ ಪರಮ ಭಕ್ತ ಪೇಜಾವರರು ಸಾವನ್ನಪ್ಪುತ್ತಿದ್ದಂತೆ ಈ ಮರ ಕೂಡ ಅವರೊಂದಿಗೆ ಸ್ವರ್ಗಕ್ಕೆ ಹೋಗಿದೆ ಎಂದೇ ಭಾವಿಸಿದ್ದಾರೆ.

  • ವಯಸ್ಸು 90 ಆದ್ರೂ ದೇಶ ಸುತ್ತುತ್ತಿದ್ದದ್ದು ಯಾಕೆ?- ಕೊನೆಯ ಭಾಷಣದಲ್ಲಿ ಸತ್ಯ ಬಿಚ್ಚಿಟ್ಟಿದ್ದ ಪೇಜಾವರ ಶ್ರೀಗಳು

    ವಯಸ್ಸು 90 ಆದ್ರೂ ದೇಶ ಸುತ್ತುತ್ತಿದ್ದದ್ದು ಯಾಕೆ?- ಕೊನೆಯ ಭಾಷಣದಲ್ಲಿ ಸತ್ಯ ಬಿಚ್ಚಿಟ್ಟಿದ್ದ ಪೇಜಾವರ ಶ್ರೀಗಳು

    ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಭಾನುವಾರ ಕೃಷ್ಣೈಕ್ಯರಾಗಿದ್ದಾರೆ. ಅನಾರೋಗ್ಯಕ್ಕೀಡಾಗುವುದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶ್ರೀಗಳು, ವಯಸ್ಸು 90 ಆದರೂ ದೇಶ ಸುತ್ತುತ್ತಿರೋದು ಯಾಕೆ ಎಂಬುದನ್ನು ತಮ್ಮ ಕೊನೆಯ ಭಾಷಣದಲ್ಲಿ ಬಿಚ್ಚಿಟ್ಟಿದ್ದರು.

    ಡಿಸೆಂಬರ್ 19 ರಂದು ಪೇಜಾವರಶ್ರೀ ಸಾಕಷ್ಟು ಓಡಾಟ ಮಾಡಿದ್ದರು. ಉಡುಪಿ ಪಾಜಕ ಆನಂದ ತೀರ್ಥ ಸಂಸ್ಥೆಯ ವಾರ್ಷಿಕೋತ್ಸವ ಪೇಜಾವರರ ಕೊನೆಯ ಸಭಾ ಕಾರ್ಯಕ್ರಮ. ಅಲ್ಲಿ ಮಾತನಾಡಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಭಾಷೆ, ಸಂಸ್ಕೃತಿ ಮತ್ತು ಜಾತ್ಯಾತೀತತೆ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಮುಸ್ಲಿಂ ಅಧಿಕಾರಿಯ ಭಕ್ತಿಯ ಹಠಕ್ಕೆ ಸೋತು ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ್ದ ಪೇಜಾವರ ಶ್ರೀ

    ಧಾರ್ಮಿಕ- ಲೌಕಿಕ ಶಿಕ್ಷಣದ ಅವಕಾಶ ಕೊಡುತ್ತೇವೆ. ಇದನ್ನು ಎಲ್ಲೆಡೆ ಸಾರಲು ವಯಸ್ಸು 90 ಆದರೂ ನಾನು ಇಡೀ ದೇಶ ಸುತ್ತುತ್ತಿದ್ದೇನೆ ಎಂದು ಪೇಜಾವರಶ್ರೀ ಕೊನೆಯ ಕಿವಿಮಾತು ಹೇಳಿದ್ದರು.

    ಅಲ್ಲದೆ ರಾಜ್ಯಭಾಷೆ ತಾಯಿ ಇದ್ದಂತೆ. ಕನ್ನಡವನ್ನು ಯಾವತ್ತಿಗೂ ಮರೆಯಬಾರದು. ಆದರೆ ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಲೇಬೇಕು. ಮಾತೃಭಾಷೆ ಕಲಿಯಿರಿ, ಜೊತೆಗೆ ಉಳಿದ ಭಾಷೆಗಳನ್ನೂ ಕಲಿಯಿರಿ ಮತ್ತು ಕಲಿಸಿರಿ ಎಂದು ಮಕ್ಕಳಿಗೆ, ಪೋಷಕರಿಗೆ ತಿಳಿಸಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ಕೃಷ್ಣನಿಗೆ ಯಶೋಧೆ ತಾಯಿ, ದೇವಕಿಯೂ ತಾಯಿ. ಹಾಗೆಯೇ ರಾಜ್ಯ ಭಾಷೆಯನ್ನೂ ಕಲಿಯಿರಿ, ಜೊತೆಗೆ ಆಂಗ್ಲ ಭಾಷೆಯನ್ನೂ ಕಲಿಯಿರಿ. ಮಕ್ಕಳಿಗೆ ಭಾಷೆಯ ಮೇಲೆ ಪ್ರೀತಿ ಬೆಳೆಸಿ ಎಂದಿದ್ದಾರೆ. ನಮ್ಮ ಸಂಸ್ಕೃತಿ, ಶಾಸ್ತ್ರ ಜೊತೆ ಲೌಕಿಕ ವಿದ್ಯಾಭ್ಯಾಸ ಮುಖ್ಯ. ಹಿಂದೂಗಳಿಗೆ ರಾಮಾಯಣ, ಮಹಾಭಾರತ ಕಲಿಸುತ್ತೇವೆ. ಮಕ್ಕಳಿಗೆ ತತ್ವಜ್ಞಾನ, ಸಂಸ್ಕೃತಿ ಅವಶ್ಯಕ. ಕ್ರಿಶ್ಚಿಯನ್, ಮುಸಲ್ಮಾನ ಮಕ್ಕಳಿಗೆ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕೊಡುತ್ತೇವೆ. ಎಲ್ಲಾ ವರ್ಗಕ್ಕೂ ಧಾರ್ಮಿಕ ಶಿಕ್ಷಣ ಕಲಿಸುತ್ತೇವೆ ಎಂದಿದ್ದರು.

    ಒಟ್ಟಿನಲ್ಲಿ ಪೋಷಕರಿಗೆ ಈ ಕಿವಿಮಾತು ಹೇಳಿದ್ದ ಪೇಜಾವರಶ್ರೀ ಇದೀಗ ಇಹಲೋಕ ತ್ಯಜಿಸಿ ಹರಿಪಾದ ಸೇರಿದ್ದು, ಭಕ್ತವೃಂದ ಕಣ್ಣೀರು ಹಾಕಿದೆ. ಇದನ್ನೂ ಓದಿ: ಲಾಸ್ಟ್ ಪ್ರೋಗ್ರಾಂನಲ್ಲಿ ಮಕ್ಕಳ ಜೊತೆ ಪೇಜಾವರ ಶ್ರೀಗಳು

  • 10 ದಿನಗಳ ಹಿಂದೆ ಹುಟ್ಟೂರಿಗೆ ಬಂದು ಪ್ರವಚನ – ರಾಮಕುಂಜದಲ್ಲಿ ನೀರವ ಮೌನ

    10 ದಿನಗಳ ಹಿಂದೆ ಹುಟ್ಟೂರಿಗೆ ಬಂದು ಪ್ರವಚನ – ರಾಮಕುಂಜದಲ್ಲಿ ನೀರವ ಮೌನ

    ಪುತ್ತೂರು: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರಾಗುವ ಮುನ್ನ ಪುಟ್ಟ ಬಾಲಕನಾಗಿ ಓಡಾಡಿದ, ಹಳ್ಳಕ್ಕೆ ಬಿದ್ದ, ಪೂಜೆ ಮಾಡುತ್ತಾ ಖುಷಿಪಟ್ಟ ಊರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ.

    ಶ್ರೀಗಳ ಹುಟ್ಟೂರಾಗಿ, ಮಧ್ವಾಚಾರ್ಯರ ಪಾದಸ್ಪರ್ಶ ಅನುಭವಿಸಿದ ಈ ಊರು ಈಗ ಶಿಕ್ಷಣ ಕಾಶಿಯಾಗಿಯೂ ಜನಪ್ರಿಯವಾಗಿದೆ. ಏಳನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಪಡೆದರೂ ರಾಮಕುಂಜದೊಂದಿಗಿನ ಪ್ರೀತಿಯ ಸಂಬಂಧ ಈ 88ರ ಹರೆಯದಲ್ಲೂ ಮುಂದುವರಿದಿತ್ತು. ಅಲ್ಲಿನ ದೈವಿಕ ವಾತಾವರಣ, ಜನರ ಪ್ರೀತಿ ಮತ್ತು ಹುಟ್ಟೂರಿನ ಅಭಿಮಾನ ಶ್ರೀಗಳ ಹೃದಯದಲ್ಲಿ ನಿರಂತರವಾಗಿ ಇತ್ತು. ಅನಾರೋಗ್ಯ ಇದ್ದರೂ ಕಳೆದ 10 ದಿನಗಳ ಹಿಂದೆ ಶ್ರೀಗಳು ತಾವು ಹುಟ್ಟಿದ ಊರಿಗೆ ಬಂದು ಗ್ರಾಮದ ಜನರಿಗೆ ಪ್ರವಚನ ನೀಡಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ಶಿವಳ್ಳಿ ಬ್ರಾಹ್ಮಣ ಪಡ್ಡಿಲ್ಲಾಯ ಕುಲದಲ್ಲಿ 1931ರ ನವೆಂಬರ್ 27 ರಂದು ಮೀಯಾಳ ನಾರಾಯಣ ಆಚಾರ್ಯ ಹಾಗೂ ಕಮಲಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಹಳೆ ನೇರಂಕಿ ಗ್ರಾಮದ ಎರೆಟಾಡಿ ಮನೆ ಈಗಲೂ ಗಟ್ಟಿಯಾಗಿದೆ. ಮಣ್ಣಿನ ಗೋಡೆ ನವೀಕರಣಗೊಂಡಿದೆ. ಪ್ರಸಕ್ತ ಈ ಮನೆಯಲ್ಲಿ ಶ್ರೀಗಳ ತಮ್ಮನ ಮಗ ರಾಮಕುಂಜೇಶ್ವರ ಪಿಯು ಕಾಲೇಜಿನ ಉಪನ್ಯಾಸಕ ಹರಿ ನಾರಾಯಣ ಆಚಾರ್ಯರ ಕುಟುಂಬ ವಾಸವಾಗಿದೆ.  ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

    ಮನೆ ದೇವರು ವಿಷ್ಣುಮೂರ್ತಿಗೆ ಇಂದಿಗೂ ಇಲ್ಲಿ ಹರಿ ನಾರಾಯಣ ಆಚಾರ್ಯ ಅವರು ನಿತ್ಯ ಪೂಜೆ ನಡೆಸುತ್ತಿದ್ದಾರೆ. ಮನೆಯ ಪೂರ್ವಕ್ಕೆ 100 ಮೀ. ಅಂತರದಲ್ಲಿರುವ ಪುರಾತನ ವಿಷ್ಣುಮೂರ್ತಿ ದೇವಸ್ಥಾನ ಈಗ ಮುಳಿಹುಲ್ಲಿನಿಂದ ಮೇಲೆದ್ದಿದೆ. ಇಲ್ಲಿ ಶ್ರೀಗಳ ಅಜ್ಜ ಹಾಗೂ ತಂದೆ ಪೂಜೆ ಮಾಡುತ್ತಿದ್ದರು. ಇಲ್ಲೇ ಗರ್ಭಗುಡಿಯ ಇಡೆನಾಳ್ಯದಲ್ಲಿ ಕುಳಿತು ಪೇಜಾವರರು ದೇವರ ನೈವೇದ್ಯ ಸೇವಿಸಿ ಧಾರ್ಮಿಕತೆಯನ್ನು ಆವಾಹಿಸಿಕೊಂಡವರು ಎಂದು ಹರಿ ನಾರಾಯಣ ಆಚಾರ್ಯರು ಹೇಳುತ್ತಾರೆ. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಇಂದು ಶ್ರೀಗಳು ಇಲ್ಲದೇ ಇರುವುದರಿಂದ ರಾಮಕುಂಜ ಗ್ರಾಮದಲ್ಲಿ ಒಬ್ಬ ತಪಸ್ವಿಯನ್ನು ಕಳೆದುಕೊಂಡು ಊರೇ ಅನಾಥವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣದ ಕ್ರಾಂತಿಯನ್ನು ರಾಮಕುಂಜ ಗ್ರಾಮದಲ್ಲಿ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ಮಾಡಿದ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲ ಎಂಬ ನೋವು ಗ್ರಾಮಸ್ಥರಲ್ಲಿದೆ.

  • ಹೆಲಿಕಾಪ್ಟರ್‌‌ನಲ್ಲಿ ಬೆಂಗಳೂರಿನತ್ತ ಪೇಜಾವರ ಶ್ರೀ ಪಾರ್ಥಿವ ಶರೀರ

    ಹೆಲಿಕಾಪ್ಟರ್‌‌ನಲ್ಲಿ ಬೆಂಗಳೂರಿನತ್ತ ಪೇಜಾವರ ಶ್ರೀ ಪಾರ್ಥಿವ ಶರೀರ

    ಬೆಂಗಳೂರು: ಇಂದು ಕೃಷ್ಣೈಕ್ಯರಾದ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗುತ್ತಿದೆ.

    ಹರ್ನಿಯಾ ಆಪರೇಷನ್ ನಡೆದಾಗಲೇ ವಿದ್ಯಾಪೀಠದಲ್ಲಿ ನನ್ನ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂಬ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಿಂದ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

    ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಈಗಾಗಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್ ಪ್ರತಿಕ್ರಿಯಿಸಿ, ಸಂಜೆ 5 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ವಿದ್ಯಾಪೀಠಕ್ಕೆ ಪಾರ್ಥಿವ ಶರೀರ ತೆಗದುಕೊಂಡು ಹೋಗಲಾಗುತ್ತದೆ. ಸಂಜೆಯ ಬಳಿಕ ಅಂತಿಮ ವಿಧಿವಿಧಾನಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ

    ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂದು ಪೇಜಾವರ ಶ್ರೀಗಳು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದರು. ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು. ಕಳೆದ ಬಾರಿ ಹರ್ನಿಯಾ ಅಪರೇಷನ್‍ಗೆ ಒಳಗಾಗಿದ್ದ ಶ್ರೀಗಳು ತಮ್ಮ ಕೊನೆಯಾಸೆಯ ಬಗ್ಗೆ ತಿಳಿಸಿದ್ದರು ಎಂದು ಪಬ್ಲಿಕ್ ಟಿವಿಗೆ ರಘುಪತಿ ಭಟ್ ತಿಳಿಸಿದ್ದಾರೆ. ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

    ಶ್ರೀಗಳ ಕೊನೆಯ ಆಸೆಯಂತೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣನ ಪಾದ ಸೇರಿದ್ದಾರೆ. ಇದನ್ನೂ ಓದಿ; ಪೇಜಾವರ ಶ್ರೀಗಳು ಡಿ.23ರ ನಂತ್ರ ವಿದೇಶಕ್ಕೆ ಹೋಗ್ಬೇಡಿ ಅಂದಿದ್ರು: ಪುತ್ತಿಗೆ ಶ್ರೀಗಳು