Tag: Pejawara Swamiji

  • ಕೇಂದ್ರ ಸರ್ಕಾರ, ಮೋದಿಗೆ ವೇದವ್ಯಾಸ ಕಾಮತ್ ಧನ್ಯವಾದ

    ಕೇಂದ್ರ ಸರ್ಕಾರ, ಮೋದಿಗೆ ವೇದವ್ಯಾಸ ಕಾಮತ್ ಧನ್ಯವಾದ

    ಮಂಗಳೂರು: 2020ನೇ ಸಾಲಿನ ಪದ್ಮ ಪ್ರಶಸ್ತಿಗಳಲ್ಲಿ ಕರಾವಳಿಯ 3 ಸಾಧಕರನ್ನು ಗುರುತಿಸಿ ಗೌರವಿಸಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಅವರು ಧನ್ಯವಾದ ತಿಳಿಸಿದ್ದಾರೆ.

    ಪೇಜಾವರ ಶ್ರೀ ಹಾಗೂ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡೀಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ದೊರೆತಿರುವ ಪದ್ಮಶ್ರೀ ಪ್ರಶಸ್ತಿ ಕರಾವಳಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಸಾಧನೆಯಿಂದ ಕರಾವಳಿಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀ, ಜೇಟ್ಲಿ, ಸುಷ್ಮಾ ಸ್ವರಾಜ್, ಫರ್ನಾಂಡಿಸ್‍ಗೆ ಪದ್ಮ ವಿಭೂಷಣ

    ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದ ಗಟ್ಟಿಧ್ವನಿಯಾಗಿದ್ದ ಪೂಜ್ಯ ಪೇಜಾವರ ಶ್ರೀಗಳು, ಕಿತ್ತಳೆ ಹಣ್ಣು ವ್ಯಾಪಾರದಿಂದ ಅಕ್ಷರ ದೇಗುಲ ನಿರ್ಮಿಸಿದ ಹಾಜಬ್ಬ ಹಾಗೂ ಸಾಧಾರಣ ವ್ಯಕ್ತಿಯಿಂದ ಈ ದೇಶದ ರಕ್ಷಣಾ ಸಚಿವನಾಗಿ ಸಾಧನೆ ಮಾಡಿದ ಜಾರ್ಜ್ ಫೆರ್ನಾಂಡೀಸ್ ಅವರಿಗೆ ಪ್ರಶಸ್ತಿ ದೊರಕಿರುವುದು ಅತ್ಯಂತ ಹರ್ಷ ತಂದಿದೆ. ಅರ್ಹ ವ್ಯಕ್ತಿಗಳನ್ನು ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

  • ಮುಸ್ಲಿಂ ಅಧಿಕಾರಿಯ ಭಕ್ತಿಯ ಹಠಕ್ಕೆ ಸೋತು ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ್ದ ಪೇಜಾವರ ಶ್ರೀ

    ಮುಸ್ಲಿಂ ಅಧಿಕಾರಿಯ ಭಕ್ತಿಯ ಹಠಕ್ಕೆ ಸೋತು ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ್ದ ಪೇಜಾವರ ಶ್ರೀ

    – ಮರೆಯಾದ ಸಂತನ ಮರೆಯಲಾಗದ ನೆನಪುಗಳು

    ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಗೂ ಪೇಜಾವರ ಶ್ರೀಗಳಿಗೂ ಸುಮಾರು 40 ವರ್ಷಗಳ ಅವಿನಾಭಾವ ಸಂಬಂಧವಿದೆ. ಹೀಗಾಗಿ ಜಿಲ್ಲೆ ಪೇಜಾವರ ಶ್ರೀಗಳನ್ನ ನಾನಾ ಸಂದರ್ಭಗಳಿಂದ ನೆನಪಿಸಿಕೊಳ್ಳುತ್ತಲೇ ಇರುತ್ತದೆ. 1950ರಲ್ಲಿ ಮೊದಲ ಬಾರಿಗೆ ತಮ್ಮ ಗುರುಗಳಾದ ಉಡುಪಿಯ ವಿದ್ಯಾಮಾನ್ಯ ತೀರ್ಥರೊಂದಿಗೆ ವಿಶ್ವೇಶತೀರ್ಥರು ರಾಯಚೂರಿಗೆ ಬಂದಿದ್ದರು. ನಂತರ 1980 ರಿಂದ ಪ್ರತಿವರ್ಷ ಜನವರಿ ತಿಂಗಳಲ್ಲಿ ರಾಯಚೂರು ಜಿಲ್ಲೆಗೆ ಆಗಮಿಸುತ್ತಿದ್ದರು. ನೂರಾರು ಜನ ಭಕ್ತರ ಸಮೂಹವನ್ನೇ ಹೊಂದಿದ್ದ ಶ್ರೀಗಳು ಉಡುಪಿಯ ಶ್ರೀಕೃಷ್ಣಮಠದ ಪರ್ಯಾಯ ಪೂರ್ವದಲ್ಲಿ ಜಿಲ್ಲೆಯಲ್ಲಿ ಪರ್ಯಾಯ ಸಂಚಾರವನ್ನು ನಡೆಸುತ್ತಿದ್ದರು.

    ಆಂಜನೇಯನ ಪತಿಷ್ಠಾಪಿಸಿದ್ದ ಶ್ರೀಗಳು:
    ನಗರದ ಸದರ್ ಬಜಾರ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಎಂ.ಪಾಷಾ ತಮ್ಮ ಸ್ವಗ್ರಾಮ ತುಮಕೂರು ಜಿಲ್ಲೆಯ ನೆರಳಕೇರೆ ಎಂಬಲ್ಲಿ ಪ್ರಾಣದೇವರ ದೇವಾಲಯ ಕಟ್ಟಿಸಿದ್ದರು. ಆಂಜನೇಯ ಮೂರ್ತಿ ಪ್ರತಿಷ್ಠಾಪನೆಯನ್ನು ಪೇಜಾವರ ಶ್ರೀಗಳ ಅಮೃತಹಸ್ತದಿಂದ ನೆರವೇರಿಸಬೇಕು ಅನ್ನೋ ಅಪೇಕ್ಷೆಯನ್ನು ಹೊಂದಿದ್ದರು. ರಾಯಚೂರು ನಗರಕ್ಕೆ ಪೇಜಾವರ ಶ್ರೀಗಳು ಆಗಮಿಸಿದಾಗ ಪೊಲೀಸ್ ಅಧಿಕಾರಿ ಎಂ.ಪಾಷಾ ಶ್ರೀಗಳಲ್ಲಿ ಮನವಿ ಮಾಡಿದ್ದರು. ಆದರೆ ಆಗ ಮುಂದಿನ ಎರಡು ವರ್ಷಗಳವರೆಗೆ ಕಾರ್ಯಕ್ರಮಗಳು ನಿಗದಿಯಾಗಿವೆ, ಬೇರೆಯವರಿಂದ ಪ್ರತಿಷ್ಠಾಪನೆ ಮಾಡಿಸಿಕೊಳ್ಳಿ ಅಂತ ಸಲಹೆಯನ್ನು ನೀಡಿದ್ದರು. ಅಧಿಕಾರಿ ಸುಮ್ಮನಿರಲ್ಲ ಅವಕಾಶ ಸಿಕ್ಕಾಗಲೆಲ್ಲಾ ಶ್ರೀಗಳಲ್ಲಿ ಮನವಿ ಮಾಡುತ್ತಿದ್ದರು. ಕೆಲ ದಿನಗಳ ನಂತರ ಪೇಜಾವರ ಶ್ರೀಗಳವರೇ ಸ್ವತಃ ಆಪ್ತ ಶಿಷ್ಯರಾದ ನರಸಿಂಗರಾವ್ ಅವರಿಗೆ ದೂರವಾಣಿ ಕರೆ ಮಾಡಿ ಪಾಷಾ ನಂಬರ್ ನೀಡಿ ಅವರ ಗ್ರಾಮಕ್ಕೆ ಹೋಗಬೇಕು ಅಂತ ತಿಳಿಸಿದ್ದರು. ಕೊನೆಗೆ ಶ್ರೀಗಳೆ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ಶ್ರೀಗಳ ಆಪ್ತ ಶಿಷ್ಯರಾದ ನರಸಿಂಗರಾವ್ ದೇಶಪಾಂಡೆ ಮನೆ ಶ್ರೀಗಳಿಗಾಗಿಯೇ ಮೀಸಲಾಗಿತ್ತು. ಶ್ರೀಗಳ ಪೂಜೆ, ಉಳಿದುಕೊಳ್ಳಲು ಅನುಕೂಲಕರವಾದ ರೀತಿಯಲ್ಲಿಯೇ ಮನೆಯನ್ನ ಕಟ್ಟಿಸಲಾಗಿತ್ತು. ರಾಯಚೂರಿಗೆ ಬಂದಾಗಲೆಲ್ಲಾ ಶಿಷ್ಯ ನರಸಿಂಗರಾವ್ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಉಡುಪಿಯ ಕೃಷ್ಣಮಠದ ಪರ್ಯಾಯ ಪೂರ್ವದಲ್ಲಿ ಜಿಲ್ಲೆಯಲ್ಲಿ ಪೇಜಾವರ ಶ್ರೀಗಳು ಕೈಗೊಳ್ಳುವ ಸಂಚಾರದ ಸಂದರ್ಭದಲ್ಲಿ ಭಕ್ತರಿಂದ ಪ್ರತಿ ವರ್ಷ 200 ಕ್ವಿಂಟಾಲ್ ದವಸ ಧಾನ್ಯವನ್ನು ಸಂಗ್ರಹಿಸಿ ನೀಡಲಾಗುತ್ತಿತ್ತು.

    ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದಿಂದ ಡಿಸೆಂಬರ್ 14, 15 ಮತ್ತು 16 ರಂದು ನಡೆದ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೇಜಾವರ ಶ್ರೀವಿಶ್ವೇಶತೀರ್ಥರು ಜಿಲ್ಲೆಗೆ ಆಗಮಿಸಿರುವುದು ಕೊನೆ ಭೇಟಿಯಾಗಿದೆ. ನಂತರ ತಿರುಪತಿಗೆ ತೆರಳಿದರು ಅದಾದ ಬಳಿಕ ಅನಾರೋಗ್ಯಕ್ಕೀಡಾದರು. ರಾಯಚೂರಿನಲ್ಲಿ ನಡೆದ ಕಾರ್ಯಕ್ರಮವೇ ಶ್ರೀ ಕೊನೆಯ ಬಹಿರಂಗ ಕಾರ್ಯಕ್ರಮವೂ ಆಗಿದೆ.

    ವಿದ್ಯಾರ್ಥಿ ವಸತಿ ನಿಲಯ ಆರಂಭ:
    ರಾಯಚೂರಿನಲ್ಲಿ ಅಖಿಲ ಭಾರತ ವಿಶ್ವಮಧ್ವ ಮಹಾಮಂಡಳಿಯಿಂದ 1962ರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಡಿಗೆ ಕಟ್ಟಡದಲ್ಲಿ ರಾಘವೇಂದ್ರ ವಿದ್ಯಾರ್ಥಿ ನಿಲಯವನ್ನು ಆರಂಭಿಸಿದ್ದರು. 1964ರಲ್ಲಿ ಎಲ್‍ವಿಡಿ ಕಾಲೇಜಿನ ಹತ್ತಿರದಲ್ಲಿ ಸ್ವಂತಕಟ್ಟಡದೊಂದಿಗೆ ರಾಘವೇಂದ್ರ ವಿದ್ಯಾರ್ಥಿ ನಿಲಯವನ್ನು ಆರಂಭಿಸಿದ್ದರು. ಅದು ಇಂದಿಗೂ ನಿರ್ವಹಣೆಯಾಗುತ್ತಿದೆ. ಈ ಮಹತ್ವದ ಕಾರ್ಯದಿಂದ ಹಲವಾರು ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ.

    1950ರ ನಂತರ ಪ್ರಥಮ ಬಾರಿಗೆ ಜಿಲ್ಲೆಯ ಮುದಗಲ್ ಪಟ್ಟಣಕ್ಕೆ ಪೇಜಾವರ ಶ್ರೀಗಳವರು ಭೇಟಿ ನೀಡಿದ್ದರು. ಅವರ ಗುರುಗಳಾದ ಶ್ರೀವಿದ್ಯಾಮಾನ್ಯ ತೀರ್ಥರು ಚಾತರ್ಮಾಸ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮುದಗಲ್ ಗ್ರಾಮಕ್ಕೆ ನೋಡಬೇಕು ಎಂಬ ಆಪೇಕ್ಷೆಯಿಂದ ಬಂದಿದ್ದರಂತೆ. 1997ರಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಎಂ. ನಾಗಪ್ಪ, ಸೇರಿದಂತೆ ಅನೇಕರ ಗಣ್ಯರು ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರಿಗೆ ರಜತ ತುಲಾಭಾರ ನೆರವೇರಿಸಿದ್ದರು.

    ಕಾರು ಪಲ್ಟಿಯಾಗಿ ಗಾಯಗೊಂಡಿದ್ದ ಶ್ರೀಗಳು:
    1997 ರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಅದರಲ್ಲಿ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಶ್ರೀಗಳು ಪಾರಾಗಿದ್ದರು. ನಗರದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳನ್ನ ಮುಗಿಸಿ ಕಾರಿನಲ್ಲಿ ಪೇಜಾವರ ಶ್ರೀಗಳು ತೆರಳುತ್ತಿದ್ದಾಗ ನಗರದ ಹೊರವಲಯದ ತುಂಟಾಪುರ ಗ್ರಾಮದ ಹತ್ತಿರ ಕಾರು ಪಲ್ಟಿಯಾಗಿ ಗಾಯಗೊಂಡಿದ್ದರು. ನಗರದ ವೈದ್ಯರಾದ ಡಾ.ರಾಘವೇಂದ್ರ ಕುಲಕರ್ಣಿ ಹಾಗೂ ಡಾ.ವಿ.ಜಿ ಕುಲಕರ್ಣಿ ಸ್ಥಳೀಯವಾಗಿ ಚಿಕಿತ್ಸೆ ನೀಡಿದ್ದರು. ನಂತರ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಾಟೀಲ್ ಅವರ ಗಮನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಸ್ ಪಾಟೀಲ್ ತಂದು ಕೂಡಲೇ ಹೆಲಿಕಾಪ್ಟರ್ ಕಳುಹಿಸಲು ಮನವಿ ಮಾಡಿದ್ದರು. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ಗುಣಮುಖರಾಗಿದ್ದರು.

    ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾಮಾನ್ಯರೊಂದಿಗೆ ಪೇಜಾವರ ಶ್ರೀಗಳು ಉತ್ತಮ ಬಾಂಧವ್ಯ ಹೊಂದಿದ್ದರು. ಉಡುಪಿಯ ಪೇಜಾವರ ಮಠದಿಂದ 2013 ರಲ್ಲಿ ತತ್ವಜ್ಞಾನ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಸುಧಾಮಂಗಳ ಕಾರ್ಯಕ್ರಮವನ್ನು ರಾಯಚೂರು ನಗರದ ಯಾದವ್ ಸಮಾಜದ ಕೃಷ್ಣ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮಗಳು ಪೇಜಾವರಮಠದ ಶ್ರೀವಿಶ್ವೇಶತೀರ್ಥರ ಸಾನಿಧ್ಯದಲ್ಲಿ ನಡೆದವು.

  • ಪೇಜಾವರ ಶ್ರೀಗಳ ವಿರುದ್ಧ ಗುಡುಗಿದ ಎಂಬಿ ಪಾಟೀಲ್

    ಪೇಜಾವರ ಶ್ರೀಗಳ ವಿರುದ್ಧ ಗುಡುಗಿದ ಎಂಬಿ ಪಾಟೀಲ್

    ವಿಜಯಪುರ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವಿರುದ್ಧ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಮತ್ತೆ ಗುಡುಗಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ನಮ್ಮಲ್ಲಿ ಹುಳುಕುಗಳು ಇದ್ದರೆ ಪೇಜಾವರಶ್ರೀ ತೆಗೆಯಲಿ. ನಮ್ಮನ್ನು ಪದೇ ಪದೇ ಕೆದುಕುತ್ತಿದ್ದಾರೆ. ಅವರ ವಯಸ್ಸು ಹಾಗೂ ಹಿರಿತನಕ್ಕೆ ಇದು ಸರಿಯಲ್ಲ. ಹೀಗೆ ಮುಂದುವರಿದರೆ ಧಕ್ಕೆ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮ ಆತ್ಮಸಾಕ್ಷಿ ಶ್ರೇಷ್ಠವಾಗಿದೆ. ಪೇಜಾವರ ಸ್ವಾಮೀಜಿ ಸವಾಲನ್ನು ಬದ್ಧತೆಯಿಂದ ಸ್ವೀಕರಿಸುತ್ತೇವೆ. ಅವರು ಧೈರ್ಯದ ಬಗ್ಗೆ ಮಾತನಾಡಿದ್ದಾರೆ. ಆ ರೀತಿ ಮಾತನಾಡಬಾರದು. ಬಸವಧರ್ಮದ ಬಗ್ಗೆ ನಮಗಿರುವ ಹೆಮ್ಮೆ, ನಂಬಿಕೆಯನ್ನು ಪೇಜಾವರ ಸ್ವಾಮೀಜಿ ಮುಂದಿಡುತ್ತೇವೆ. ಈ ಮೂಲಕ ಅವರನ್ನು ಕೂಡ ಬಸವ ಧರ್ಮದ ಕಡೆಗೆ ಸೆಳೆದುಕೊಳ್ಳುತ್ತೇವೆ. ಅವರು ಬಸವ ಧರ್ಮವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

    ಪೇಜಾವರ ಸ್ವಾಮೀಜಿಗಳಿಗೆ ಒಂದು ಕನಿಷ್ಠ ಅರಿವು ಇರಬೇಕಿತ್ತು. ಹಿಂದೂ ಎನ್ನುವುದು ಧರ್ಮವಲ್ಲ. ಅದೊಂದು ಸನ್ಮಾರ್ಗ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಹೇಳಿದ್ದಾರೆ. ಅದನ್ನು ಪೇಜಾವರ ಶ್ರೀ ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ಪ್ರಧಾನಿಯಂತೆ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

    ಕಳೆದ ತಿಂಗಳು ವೀರಶೈವ ಮತ್ತು ಲಿಂಗಾಯತ ಹಿಂದೂ ಧರ್ಮದ ಅಂಗ ಎಂದು ಪೇಜಾವರ ಶ್ರೀಗಳು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲ್, ನಮ್ಮ ಸಮಾಜಕ್ಕೆ ಸಂಬಂಧಿಸಿದ ವಿಷಯದಲ್ಲಿ ಲಿಂಗಾಯತ ಮುಖಂಡರು, ಸ್ವಾಮೀಜಿಗಳು ನಿರ್ಧಾರ ಮಾಡುತ್ತಾರೆ. ಇದರಲ್ಲಿ ಪೇಜಾವರ ಶ್ರೀಗಳು ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.

    ಈ ವಿಚಾರ ಸಂಬಂಧ ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ್ದ ಪೇಜಾವರ ಸ್ವಾಮೀಜಿ, ಎಂ.ಬಿ.ಪಾಟೀಲ್ ಅವರು ದಲಿತರನ್ನು ಮಠಾಧೀಶರನ್ನಾಗಿ ಮಾಡುತ್ತಾರಾ? ಅವರವರ ಧರ್ಮದ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಇದೆ. ನೀವು ಹಿಂದೂಗಳು, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಸಲಹೆ ನೀಡಿದ್ದೇನೆ ಅಷ್ಟೇ. ಎಂ.ಬಿ.ಪಾಟೀಲ್ ಅವರ ಆರೋಪಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದರು.

    ಎಂ.ಬಿ.ಪಾಟೀಲ್ ಅವರ ಉದ್ವೇಗ, ಆಕ್ರೋಶ ಸರಿಯಲ್ಲ. ನಾನು ಲಿಂಗಾಯತ ಮತವನ್ನು ಸರಿಪಡಿಸಲು ಹೋಗುತ್ತಿಲ್ಲ, ಅವರಲ್ಲಿರುವ ಹುಳುಕು ಹೇಳಿಲ್ಲ, ದೋಷಾರೋಪ ಮಾಡಿಲ್ಲ. ಸ್ನೇಹದಿಂದ ಸಹೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ. ನಾನು ಸೌಜನ್ಯದಿಂದ ಕೇಳಿದರೆ ಅವರು ಅಷ್ಟೊಂದು ಆಕ್ರೋಶಭರಿತವಾಗಿ ಹೇಳಲು ಕಾರಣವೇನು ಎಂದು ಪ್ರಶ್ನಿಸಿದ್ದರು.

    ಬಸವಣ್ಣನವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಧರ್ಮದ ಕುರಿತಾಗಿಯೂ ಯಾವುದೇ ದೋಷಾರೋಪ ಮಾಡಿಲ್ಲ. ಅವರಿಗೆ ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ. ಇಂತಹ ಭಿನ್ನಾಪ್ರಾಯಗಳಿಗೆ ಸಂವಾದ ನಡೆಸುವುದು ಸೂಕ್ತ ಎಂದು ತಿಳಿಸಿದ್ದರು.

  • ಎಂಬಿಪಿ ದಲಿತರನ್ನ ಮಠಾಧೀಶರನ್ನಾಗಿ ಮಾಡುತ್ತಾರಾ: ಪೇಜಾವರ ಶ್ರೀ ಮರುಪ್ರಶ್ನೆ

    ಎಂಬಿಪಿ ದಲಿತರನ್ನ ಮಠಾಧೀಶರನ್ನಾಗಿ ಮಾಡುತ್ತಾರಾ: ಪೇಜಾವರ ಶ್ರೀ ಮರುಪ್ರಶ್ನೆ

    – ಮಾಜಿ ಸಚಿವರ ಉದ್ವೇಗ, ಆಕ್ರೋಶ ಸರಿಯಲ್ಲ

    ಮೈಸೂರು: ದಲಿತರನ್ನು ಮಠಾಧೀಶರನ್ನಾಗಿ ಮಾಡುತ್ತಾರಾ ಎಂಬ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನೆಗೆ ಪೇಜಾವರ ಶ್ರೀಗಳು ಮರು ಪ್ರಶ್ನೆ ಹಾಕಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಅದನ್ನು ಮಾಜಿ ಸಚಿವರು ಮಾಡುತ್ತಾರಾ? ಅವರವರ ಧರ್ಮದ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಇದೆ. ನೀವು ಹಿಂದೂಗಳು, ನಮ್ಮನ್ನು ಬಿಟ್ಟುಹೋಗಬೇಡಿ ಎಂದು ಸಲಹೆ ನೀಡಿದ್ದೇನೆ ಅಷ್ಟೇ. ಎಂ.ಬಿ.ಪಾಟೀಲ್ ಅವರ ಆರೋಪಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

    ಎಂ.ಬಿ.ಪಾಟೀಲ್ ಅವರ ಉದ್ವೇಗ, ಆಕ್ರೋಶ ಸರಿಯಲ್ಲ. ನಾನು ಲಿಂಗಾಯತ ಮತವನ್ನು ಸರಿಪಡಿಸಲು ಹೋಗುತ್ತಿಲ್ಲ, ಅವರಲ್ಲಿ ಹುಳುಕು ಹೇಳಿಲ್ಲ, ದೋಷಾರೋಪ ಮಾಡಿಲ್ಲ. ಸ್ನೇಹದಿಂದ ಸಹೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ. ನಾನು ಸೌಜನ್ಯದಿಂದ ಕೇಳಿದರೆ ಅವರು ಅಷ್ಟೊಂದು ಆಕ್ರೋಶ ಬರಿತವಾಗಿ ಹೇಳಲು ಕಾರಣವೇನು ಎಂದು ಪ್ರಶ್ನಿಸಿದರು.

    ಬಸವಣ್ಣನವರ ಬಗ್ಗೆ ನನಗೆ ಬಹಳ ಗೌರವವಿದೆ. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಧರ್ಮದ ಕುರಿತಾಗಿಯೂ ಯಾವುದೇ ದೋಷಾರೋಪ ಮಾಡಿಲ್ಲ. ಅವರು ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

  • ನನಗೆ ಮಕ್ಕಳಿರೋದು ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ

    ನನಗೆ ಮಕ್ಕಳಿರೋದು ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ

    ಚೆನ್ನೈ: ನನ್ನ ವಿರುದ್ಧ ಶೀರೂರು ಶ್ರೀಗಳು ಮಾಡಿದ್ದಾರೆ ಎನ್ನಲಾದ ಆರೋಪ ಸಾಬೀತಾದರೆ ನಾನು ಪೀಠ ತ್ಯಾಗ ಮಾಡುತ್ತೇನೆ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಾನು ಯಾವುದೇ ಪರೀಕ್ಷೆ ಅಥವಾ ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಶೀರೂರು ಶ್ರೀಗಳ ಸಾವಿನ ಬಳಿಕ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಿದ್ದು, ಇದರಲ್ಲಿ ಪೇಜಾವರ ಶ್ರೀಗಳು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ವಾಟ್ಸಪ್ ಆಡಿಯೋ ಕೂಡಾ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಪೇಜಾವರಶ್ರೀಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಪೇಜಾವರ ಶ್ರೀಗಳ ಹೇಳಿಕೆಯಲ್ಲೇನಿದೆ..?: ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಒಂದು ಪುಟದ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.

    ಶೀರೂರು ಮಠದ ಗತಿಸಿದ ಶ್ರೀ ಲಕ್ಷ್ಮೀವರತೀರ್ಥರ ಆಪ್ತವರ್ಗವು ಬಹಿರಂಗಗೊಳಿಸಿದ ಆಡಿಯೋದಲ್ಲಿ ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಗವಿತ್ತು. ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆಂಬ ಶುದ್ಧ ಸುಳ್ಳು ಸಂಗತಿಯನ್ನು ಉಲ್ಲೇಖಿಸಲಾಗಿದೆ. ಡಿಸೆಂಬರ್‍ನಲ್ಲಿ ಇವರೇ ಕಳುಹಿಸಿರಬಹುದಾದ ಪತ್ರದಲ್ಲಿ ಅವನು ಗಂಡು ಮಗನೆಂದು ಅವನ ಕುಲನಾಮವನ್ನು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದಿಂದ ಇದು ಕಲ್ಪನೆಯೆಂದು ಗೊತ್ತಾಗುತ್ತದೆ. ಇದನ್ನು ನಮ್ಮ ದೇಶದ ಯಾರೂ ನಂಬುವುದಿಲ್ಲವೆಂದು ನನಗೆ ಗೊತ್ತಿದೆ. ಈ ಬಗ್ಗೆ ಯಾವ ವಿಚಾರಣೆ ಹಾಗೂ ಪರೀಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಇದು ಬರೇ ಸುಳ್ಳು ಆರೋಪ.

    ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ಧವಾದರೆ ನಾನು ತಕ್ಷಣ ಪೀಠ ತ್ಯಾಗ ಮಾಡುವೆನು. ಲಕ್ಷೀವರ ತೀರ್ಥರ ನಿಧನದ ನಂತರ ಅವರ ಅವ್ಯವಹಾರದ ಬಗ್ಗೆ ಹೇಳಿಕೆ ಸರಿಯಿಲ್ಲವೆಂದು ಕೆಲವರು ಆಕ್ಷೇಪಿಸಿದ್ದಾರೆ. ಲಕ್ಷೀವರತೀರ್ಥರಿಗೆ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ? ಅವರ ಅಂತ್ಯದರ್ಶನಕ್ಕೆ ಯಾಕೆ ಹೋಗಿಲ್ಲ ಮುಂತಾದ ಪ್ರಶ್ನೆ, ಆಕ್ಷೇಪವನ್ನು ಮಾದ್ಯಮದವರು ಮಾಡಿದ್ದರಿಂದ ಅದಕ್ಕೆ ಉತ್ತರವಾಗಿ ಅವರು ಸನ್ಯಾಸಧರ್ಮವನ್ನು ಪೂರ್ಣವಾಗಿ ಉಲ್ಲಂಘಿಸಿದ್ದಾರೆಂಬುದನ್ನು ಅನಿವಾರ್ಯವಾಗಿ ನಾನು ವಿವರಿಸ ಬೇಕಾಯಿತು.

    ಹಿಂದಿನ ಪಲಿಮಾರು ಸ್ವಾಮಿಗಳಾದ ರಘುವಲ್ಲಭ ತೀರ್ಥರು, ಹಿಂದಿನ ಶೀರೂರು ಸ್ವಾಮಿಗಳಾದ ಮನೋಜ್ಞ ತೀರ್ಥರು, ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ವಿದ್ಯಾಭೂಷಣರು ಪೀಠ ತ್ಯಾಗ ಮಾಡಲು ನನ್ನ ಪಾತ್ರವೇನೂ ಇಲ್ಲ. ಅವರನ್ನು ಪೀಠದಲ್ಲಿ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇನೆ. ಅವರಾಗಿ ಸ್ವೇಚ್ಛೆಯಿಂದ ಹೋಗಿದ್ದಾರೆ. ಅದಕ್ಕಾಗಿ ನನ್ನನ್ನು ಹಂತಕನನ್ನಾಗಿ ದೂಷಿಸುವುದು ಸರ್ವಥಾ ತಪ್ಪು. ರಘುವಲ್ಲಭರಿಗೆ 5 ಲಕ್ಷ ರೂ. ಕೊಟ್ಟಿರುವೆನೆಂದು ಆರೋಪಿಸುವುದೂ ಪೂರ್ಣ ಸುಳ್ಳು. ಅವರಿಗೆ ಇದಕ್ಕಾಗಿ ಒಂದು ಪೈಸೆ ಕೂಡ ಕೊಟ್ಟಿಲ್ಲ. ವಿಶ್ವ ವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋದರು. ಹೋದರೆ ಅನೇಕ ಸಮಸ್ಯೆಯಾಗುವುದೆಂದು ನಾನು ಹೇಳಿದ್ದೆ. ಆದರೂ ಹೋದರು. ಬಂದ ಮೇಲೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿಯೂ ಹೇಳಿದೆ. ಆದರೆ ಅವರು ನನಗೆ ತಿಳಿಸದೇ ಪೀಠ ತ್ಯಾಗ ಮಾಡಿದ್ದಾರೆ. ವ್ಯಾಸರಾಜ ಸ್ವಾಮಿಗಳ ಆಶ್ರಮ, ಸುವಿದ್ಯೇಂದ್ರರ ಆಶ್ರಮ ಸ್ವೀಕಾರ ಮತ್ತು ಪೀಠ ತ್ಯಾಗದಲ್ಲಿ ನನ್ನ ಪಾತ್ರ ಕಿಂಚಿತ್ತು ಇಲ್ಲ. ಆದರೂ ಇದೆಲ್ಲವುಗಳಿಗೂ ನಾನೇ ಕಾರಣವೆಂದು ದೂಷಿಸುವುದು ಸರ್ವಾಥಾ ಸರಿಯಲ್ಲ. ಶೀರೂರು ಸ್ವಾಮಿಗಳಿಂದ ನಾನು ಯಾವುದೇ ರೀತಿಯ ಹಣವನ್ನು ಅಪೇಕ್ಷಿಸಲೂ ಇಲ್ಲ, ಕೇಳಲೂ ಇಲ್ಲ. ಇದೆಲ್ಲದರ ಬಗ್ಗೆಯೂ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧ.

     

    ಡಿವಿಆರ್ ಎಲ್ಲಿ?: ಇನ್ನು ಶೀರೂರು ಶ್ರೀಗಳು ನೆಲೆಸಿದ್ದ ಮೂಲಮಠದ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ನಿಗೂಢವಾಗುತ್ತಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನವೇ ಡಿವಿಆರ್ ನಾಪತ್ತೆಯಾಗಿದೆ. ಅಷ್ಟೇ ಅಲ್ಲ ಶೀರೂರು ಮೂಲಮಠದಿಂದ ಇನ್ನು ಕೆಲ ವಸ್ತುಗಳು ಕಾಣೆಯಾಗಿವೆ. ಉದ್ದೇಶಪೂರ್ವಕವಾಗಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರಾ ಅಥವಾ ಸಿಸಿಟಿವಿ ಬರಿ ಪ್ರದರ್ಶನಕ್ಕೆ ಮಾತ್ರ ಅಳವಡಿಸಲಾಗಿತ್ತಾ ಎಂಬುವುದರ ಕುರಿತು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

    ಇದೇ ವೇಳೆ ಇನ್ನೆರಡು ದಿನಗಳಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಈ ನಡುವೆ ಪಟ್ಟದ ದೇವರ ವಾಪಸ್ ಗಾಗಿ ಶಿರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಅರ್ಜಿ ಸ್ವಾಮೀಜಿಗಳ ಸಾವಿನಿಂದಾಗಿ ಅನೂರ್ಜಿತವಾಗಿದೆ. ಹೀಗಾಗಿ ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್ ಸಿಕ್ಕಿದೆ.