Tag: pejawara mutt

  • ಉಡುಪಿಯ ಮನೆ ಮನೆಯಲ್ಲಿ ಬಿಲ್ವಗಿಡ ಅಭಿಯಾನ

    ಉಡುಪಿಯ ಮನೆ ಮನೆಯಲ್ಲಿ ಬಿಲ್ವಗಿಡ ಅಭಿಯಾನ

    – ಪೂಜೆಗೆ, ಆರೋಗ್ಯಕ್ಕೂ ಹಿತ ಬಿಲ್ವಪತ್ರೆ

    ಉಡುಪಿ: ಇಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದ ಸಂದರ್ಭ ಭಕ್ತರಿಗೆ ಬಿಲ್ವಪತ್ರೆಯ ಗಿಡಗಳನ್ನು ವಿತರಿಸುವ ನಿರ್ಧಾರವನ್ನ ಪೇಜಾವರ ಮಠ ಮಾಡಿದೆ.

    ಶ್ರೀಕೃಷ್ಣಜನ್ಮಾಷ್ಟಮಿ ಸೆಪ್ಟೆಂಬರ್ 10 ಮತ್ತು 11ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಿಂದ ಈ ಬಿಲ್ವಗಿಡ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಉಡುಪಿ ಸಾಮಾಜಿಕ ಅರಣ್ಯ ವಿಭಾಗ 2019-20 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಲ್ವಪತ್ರೆ ಗಿಡ ವಿತರಿಸುವ ಅಭಿಯಾನವನ್ನು ಆರಂಭ ಮಾಡಿತ್ತು. ಸುಮಾರು 2000 ಬಿಲ್ವಪತ್ರೆ ತಯಾರು ಸಸಿ ಬೆಳೆಸಲಾಗಿತ್ತು.

    ಕೊರೊನಾ ಕಿರಿಕಿರಿ ಮತ್ತು ಮಳೆ ಆರಂಭದ ಕಾಲದಲ್ಲಿ ಜನರಿಂದ ಗಿಡಕ್ಕೆ ಬೇಡಿಕೆ ಬಾರದ ಕಾರಣ, ಅರಣ್ಯ ಇಲಾಖೆಯ ಬಳಿಯೇ ಉಳಿದಿತ್ತು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಪೇಜಾವರ ಮಠವನ್ನು ಸಂಪರ್ಕ ಮಾಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಸಂದರ್ಭ ಉಡುಪಿ ನಗರವಾಸಿಗಳಿಗೆ, ಸುತ್ತಮುತ್ತಲ ಗ್ರಾಮದ ಜನರಿಗೆ ವಿತರಣೆ ಆಗಲಿದೆ.

    ಶಿವ ಪೂಜೆಗೆ ಬಿಲ್ವಪತ್ರೆ ಮುಖ್ಯ. ಬಿಲ್ವಪತ್ರೆ ಅಗಾಧ ಪ್ರಮಾಣದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಬಿಲ್ವಪತ್ರೆಯ ಎಲೆಯನ್ನು ಶಿವಪೂಜೆಗೆ ಬಳಸಲಾಗುತ್ತದೆ. ಹೋಮ ಹವನಕ್ಕೆ ಗಿಡದ ಕಡ್ಡಿಗಳು ಬಳಕೆಯಾಗುತ್ತದೆ. ಬಿಲ್ವಪತ್ರೆ ಕಾಯಿಯ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ. ಅತಿಸಾರ, ಜ್ವರ ಮೂತ್ರ ಸಂಬಂಧಿತ ಕಾಯಿಲೆಗಳಿಗೂ ಕೂಡ ಬಿಲ್ವಪತ್ರೆ ರಾಮಬಾಣ. ಚರ್ಮದ ಸಮಸ್ಯೆಗಳು ಕೂಡ ತಲೆಗೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಆಯುರ್ವೇದ ಔಷಧ ಬಳಕೆಗಾಗಿ ಬಿಲ್ವ ಉಪಯೋಗ ಆಗಲಿದೆ ಎಂದು ಪೇಜಾವರ ಮಠದ ವಿದ್ವಾಂಸ ವಾಸುದೇವ್ ಪೆರಂಪಳ್ಳಿ ಮಾಹಿತಿ ನೀಡಿದರು.

  • ರಾಮ ಮಂದಿರಕ್ಕೆ ಪೇಜಾವರ ಮಠದಿಂದ 5 ಲಕ್ಷ ರೂ. ದೇಣಿಗೆ

    ರಾಮ ಮಂದಿರಕ್ಕೆ ಪೇಜಾವರ ಮಠದಿಂದ 5 ಲಕ್ಷ ರೂ. ದೇಣಿಗೆ

    ಉಡುಪಿ: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆಯಲ್ಲಿ ಉಡುಪಿ ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ. ಆರಂಭಿಕ ದೇಣಿಗೆ ನೀಡಲಾಗಿದೆ.

    ದೆಹಲಿಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನು ಟ್ರಸ್ಟ್ ಸಭೆಯಲ್ಲಿ ಸ್ಮರಣೆ ಮಾಡಲಾಗಿದೆ. ಸಭೆಗೆ ಅವಕಾಶ ಮಾಡಿಕೊಟ್ಟ ಸರ್ವೋಚ್ಛ ನ್ಯಾಯಾಲಯಕ್ಕೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಪೇಜಾವರ ಮಠದ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ.ಯ ಮೊದಲ ದೇಣಿಗೆಯನ್ನು ವಿಶ್ವೇಶತೀರ್ಥ ಸ್ವಾಮೀಜಿ ಹೆಸರಲ್ಲಿ ನೀಡಿದ್ದೇವೆ ಎಂದು ವಿಶ್ವಪ್ರಸನ್ನರು ಹೇಳಿದರು.

    ಉಡುಪಿ ಕೃಷ್ಣಮಠದ ಪ್ರಸಾದವನ್ನು ಟ್ರಸ್ಟ್ ಸದಸ್ಯರಿಗೆ ನೀಡಿದ್ದೇವೆ ಎಂದರು. ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರು ದೇಣಿಗೆ ಕೊಡುವ ಅವಕಾಶ ಇದೆ. ಮೊತ್ತವನ್ನು ನೇರ ಬ್ಯಾಂಕ್ ಖಾತೆಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ರಾಮ ಮಂದಿರ ಶಾಸ್ತ್ರೋಕ್ತವಾಗಿ ನಿರ್ಮಾಣವಾಗಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ದೇಶಾದ್ಯಂತ ದೇಗುಲ, ಮನೆಗಳಲ್ಲಿ ರಾಮಜಪ ಪಾರಾಯಣಕ್ಕೆ ತೀರ್ಮಾನಿಸಿದ್ದು, ಮಂದಿರ ನಿರ್ಮಾಣದವರೆಗೆ ದೇಶಾದ್ಯಂತ ರಾಮಾಯಣ ಪಾರಾಯಣ ನಡೆಯಲಿದೆ ಎಂದರು.

    ಮಂದಿರ ನಿರ್ಮಾಣಕ್ಕೆ ವಿಶೇಷ ಸಮಿತಿಯೊಂದನ್ನು ರಚಿಸಲು ಇಂದು ತೀರ್ಮಾನಿಸಲಾಯಿತು. ಮುಂದಿನ ಸಭೆ, ಅಲ್ಲಿ ನಡೆಯಬೇಕಾದ ಚರ್ಚೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

  • ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ: ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ದಿನದಂದೇ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.

    ಆರ್‍ಎಸ್‍ಎಸ್ ಮತ್ತು ವಿಶ್ವಹಿಂದೂ ಪರಿಷದ್ ನ ರಾಮ ಮಂದಿರ ನಿರ್ಮಾಣ ಕುರಿತಾದ ಏಕಪಕ್ಷೀಯ ನಿರ್ಣಯದಿಂದ ರವಿಶಂಕರ್ ಗುರೂಜಿಗೆ ಮುಖಭಂಗವಾಗಿತ್ತು. ಧರ್ಮ ಸಂಸದ್ ಮುಗಿದ ನಂತರ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ರವಿಶಂಕರ ಗುರೂಜಿ ಶ್ರೀಕೃಷ್ಣನ ದರ್ಶನ ಮಾಡಿ ಚಂದ್ರಶಾಲೆಯಲ್ಲಿ ಕುಳಿತಿದ್ದರು.

    ಬೆಳಗ್ಗೆಯ ಪೂಜೆಯಲ್ಲಿದ್ದ ಪೇಜಾವರ ಶ್ರೀಗಳು ರವಿಶಂಕರ್ ಗುರೂಜಿಯನ್ನು ಕಂಡು ಪೂಜೆ ಮುಗಿಸಿ ಬರುವುದಾಗಿ ಹೇಳಿ ಕೃಷ್ಣಪೂಜೆಯಲ್ಲಿ ತೊಡಗಿದರು. ನಂತರ ಮಠದ ಬಡಗು ಮಾಳಿಗೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಪೇಜಾವರ ಶ್ರೀ ಮತ್ತು ರವಿಶಂಕರ್ ಗುರೂಜಿ ಗೌಪ್ಯ ಮಾತುಕತೆ ಮಾಡಿದರು. ಪೇಜಾವರ ಶ್ರೀಗಳು ಧರ್ಮ ಸಂಸದ್ ನಲ್ಲಿ ನಡೆದ ಗೋಷ್ಟಿಗಳ ಬಗ್ಗೆ ಪೇಜಾವರ ಮಾಹಿತಿ ನೀಡಿದ್ದಾರೆ. ರವಿಶಂಕರ್ ಗುರೂಜಿ ತನ್ನ ಮಧ್ಯಸ್ಥಿಕೆಯ ಬೆಳವಣಿಗೆ ಬಗ್ಗೆ ಮಾತುಕತೆ ಮಾಡಿದ್ದಾರೆ.

    ಗೌಪ್ಯ ಮಾತುಕತೆ ನಂತರ ಹೊರಬಂದ ಶ್ರೀರವಿಶಂಕರ್ ಗುರೂಜಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇದೆ. ಸೌಹಾರ್ದ ಪ್ರಯತ್ನ ಮುಂದುವರೆಸುತ್ತೇನೆ. ನ್ಯಾಯಾಲಯದ ಹೊರಗೆ ರಾಮಜನ್ಮಭೂಮಿ ವಿವಾದ ಬಗೆಹರಿಸಲು ನಮ್ಮ ಪರ ಯತ್ನ ಮುಂದುವರೆಯುತ್ತದೆ. ನಾನು ಭೇಟಿಯಾದ ಎಲ್ಲರೂ ಮಂದಿರ ನಿರ್ಮಾಣದ ಪರವಾಗಿದ್ದಾರೆ. ಮುಸ್ಲಿಮರೂ ಸಹಮತ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್ ತನ್ನದೇ ಅಭಿಪ್ರಾಯ ಹೊಂದಲು ಸ್ವತಂತ್ರ ಎಂದರು.

    ಪೇಜಾವರಶ್ರೀ ಮಾತನಾಡಿ, ಗೌಪ್ಯ ಮಾತುಕತೆಯ ವಿವರಣೆಗಳನ್ನು ಹೇಳಲ್ಲ. ಧರ್ಮಸಂಸದ್‍ನಲ್ಲಿ ಗುರೂಜಿಗೆ ವಿರೋಧವಿತ್ತು ಎಂದು ಹೇಳಲಾರೆ. ನ್ಯಾಯಾಲಯದ ಹೊರಗೆ ತೀರ್ಮಾನವಾಗಬೇಕು ಎಂಬುದು ನಮ್ಮ ಅಪೇಕ್ಷೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋದು ಎಲ್ಲರ ಅಭಿಪ್ರಾಯ ಎಂದರು.

    ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಗೈರು ಹಾಜರಿ ಹಾಕಿದ್ದರು ಎಂದು ಹೇಳಲಾಗುತ್ತಿದೆ.

  • ಉಡುಪಿಗೆ ಬಂದರೂ, ಕೃಷ್ಣ ಮಠಕ್ಕೆ ಹೋಗಲ್ಲ ಯಾಕೆ: ಪತ್ರಕರ್ತರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದು ಹೀಗೆ

    ಉಡುಪಿಗೆ ಬಂದರೂ, ಕೃಷ್ಣ ಮಠಕ್ಕೆ ಹೋಗಲ್ಲ ಯಾಕೆ: ಪತ್ರಕರ್ತರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದು ಹೀಗೆ

    ಉಡುಪಿ: ಸಿಎಂ ಸಿದ್ದರಾಮಯ್ಯ ತನ್ನ ಅಧಿಕಾರಾವಧಿಯ ರೆಕಾರ್ಡ್ ಅನ್ನು ಹಾಗೇಯೇ ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಪಟ್ಟ ಅಲಂಕರಿಸಿಕೊಂಡ ನಂತರ ಉಡುಪಿಗೆ ಐದನೇ ಬಾರಿಗೆ ಆಗಮಿಸಿದ ಮುಖ್ಯಮಂತ್ರಿ ಶ್ರೀಕೃಷ್ಣ ಮಠಕ್ಕೆ ತೆರಳದೆ ತನ್ನ ಹಠ ಮುಂದುವರೆಸಿದ್ದಾರೆ.

    ಮಧ್ಯಾಹ್ನ ಎರಡು ಹದಿನೈದರ ವೇಳೆಗೆ ಉಡುಪಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ನೇರವಾಗಿ ಐಬಿಗೆ ಬಂದು ಮಧ್ಯಾಹ್ನದ ಊಟ ಸ್ವೀಕರಿಸಿದರು. ನಂತರ ಶ್ರೀಕೃಷ್ಣ ಮಠದ ವ್ಯಾಪ್ತಿಯಿಂದ ಇನ್ನೂರು ಮೀಟರ್ ದೂರದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಸಿಎಂ ಉದ್ಘಾಟನೆ ಮಾಡಿದರು. ಈ ವ್ಯಾಪ್ತಿ ಕೇವಲ 300 ಮೀಟರ್ ನಷ್ಟು ದೂರ. ಅಲ್ಲಿಂದ ನೇರವಾಗಿ ಸರ್ವಿಸ್ ಬಸ್ ಸ್ಟ್ಯಾಂಡ್ ಬಳಿಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಉದ್ಘಾಟನಾ ಸಭೆ ನಡೆಯಿತು. ಇದು ಶ್ರೀಕೃಷ್ಣಮಠಕ್ಕೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ.

    ಕೃಷ್ಣಮಠಕ್ಕೆ ಇಷ್ಟು ಹತ್ತಿರದಲ್ಲಿದ್ದರೂ ದೇವಸ್ಥಾನಕ್ಕೆ ತೆರಳದೆ ಪೇಜಾವರ ಶ್ರೀಗಳನ್ನು ಭೇಟಿ ಮಾಡದೇ ಸಿಎಂ ದೂರ ಉಳಿದರು. ಈ ಸಭಾ ಕಾರ್ಯಕ್ರಮ ಮುಗಿಸಿ ಮೀನುಗಾರರ ಮಹಿಳಾ ಸಮಾವೇಶಕ್ಕೆ ಬನ್ನಂಜೆ ರಸ್ತೆಯ ಮೂಲಕ ಅಂಬಲ್ಪಾಡಿಗೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳಿದರು. ಸುಮಾರು 5 ಗಂಟೆಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಕೂಡ ಸಿಎಂ ಕೃಷ್ಣಮಠಕ್ಕೆ, ಕನಕದಾಸರ ಗುಡಿಯ ಪಕ್ಕ ತೆರಳದೆ ತನ್ನ ಹಳೆಯ ದಾಖಲೆಯನ್ನು ಹಾಗೆ ಕಾಯ್ದಿರಿಸಿಕೊಂಡರು.

    ಉಡುಪಿಗೆ ಆಗಮಿಸಿದ್ದರೂ ಶ್ರೀಕೃಷ್ಣಮಠಕ್ಕೆ ಹೋಗುವುದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಈ ಹಿಂದೆ ಮಠಕ್ಕೆ ಹೋಗಿದ್ದೆ. ಆದರೆ ಈಗ ಹೋಗಲ್ಲ. ಮಠದಿಂದ ಈ ಬಾರಿ ನನಗೆ ಆಹ್ವಾನವೂ ಇಲ್ಲ ಎಂದರು. ಪೇಜಾವರ ಶ್ರೀಗಳ ಜೊತೆ ನನಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾನು ಆರೂವರೆ ಕೋಟಿ ಜನರ ಜೊತೆ ಚೆನ್ನಾಗಿಯೇ ಇದ್ದೇನೆ. ಬಸವಣ್ಣನವರ ವಚನವನ್ನು ಸಿಎಂ ಪುನರುಚ್ಚರಿಸಿ ಉಡುಪಿಯಿಂದ ತೆರಳಿದರು.

  • ಡ್ರಾಮಾ ಜೂನಿಯರ್ಸ್‍ನಲ್ಲಿ ಬ್ರಾಹ್ಮಣ ಪುರೋಹಿತರಿಗೆ ಅಪಮಾನ- ಉಡುಪಿ ಪೇಜಾವರ ಮಠ ತಲುಪಿದ ವಿವಾದ

    ಡ್ರಾಮಾ ಜೂನಿಯರ್ಸ್‍ನಲ್ಲಿ ಬ್ರಾಹ್ಮಣ ಪುರೋಹಿತರಿಗೆ ಅಪಮಾನ- ಉಡುಪಿ ಪೇಜಾವರ ಮಠ ತಲುಪಿದ ವಿವಾದ

    ಬೆಂಗಳೂರು: ಖಾಸಗಿ ವಾಹಿನಿಯ ಡ್ರಾಮಾ ಜೂನಿಯರ್ಸ್ ಎರಡನೇ ಆವೃತ್ತಿಯ ಸಂಚಿಕೆಯಲ್ಲಿ ಬ್ರಾಹ್ಮಣ ವೃತ್ತಿಗೆ ಮತ್ತು ಜಾತಿಗೆ ಅವಮಾನವಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಎಪಿಸೋಡ್ ಒಂದರ ಬಗ್ಗೆ ಉಡುಪಿ ಪೇಜಾವರ ಮಠದಲ್ಲಿ ಖಂಡನಾ ಸಭೆ ನಡೆಯಿತು. ಬ್ರಾಹ್ಮಣ ಜಾತಿಗೆ ಜೊತೆಗೆ ವೃತ್ತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಯುವ ಬ್ರಾಹ್ಮಣ ಪರಿಷತ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಮಾಡುವ ಮೂಲಕ ಖಂಡಿಸಲಾಯ್ತು.

    ಈ ಸಂದರ್ಭ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ವೃತ್ತಿಯ ಅವಹೇಳನವಾಗಿದೆ. ಇದು ನಮಗೆ ದುಃಖವುಂಟು ಮಾಡಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡದಿರಿ. ಇದನ್ನು ನಾವು ಸರ್ವತಾ ಒಪ್ಪಲು ಸಾಧ್ಯವಿಲ್ಲ. ಕ್ಷಮೆ ಯಾಚನೆ ಮಾಡದೆ ಇದ್ದಲ್ಲಿ ಈ ಬಗ್ಗೆ ತೀವ್ರ ಪ್ರತಿಭಟನೆ ಮಾಡುತ್ತೇನೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಮೂಲಕ ಯುವ ಬ್ರಾಹ್ಮಣ ಪರಿಷತ್ ಮನವಿಯನ್ನು ನೀಡುವುದಾಗಿ ಹೇಳಿದೆ.

    ಕಾರ್ಯಕ್ರಮದಲ್ಲಿ ಪುರೋಹಿತ ವರ್ಗ, ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ. ಈ ಸಂಚಿಕೆಯಲ್ಲಿ ಮುಗ್ಧ ಮಕ್ಕಳನ್ನು ಇಟ್ಟುಕೊಂಡು ಬ್ರಾಹ್ಮಣರನ್ನು ತೇಜೋವಧೆ ಮಾಡಲಾಗಿದೆ. ಇಂತಹ ಕಾರ್ಯಕ್ರವiಗಳಿಗೆ ಅವಕಾಶ ನೀಡಬಾರದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬ್ರಾಹ್ಮಣ ಮಹಾಸಭಾ ಪತ್ರ ಬರೆದಿದೆ. ಅಲ್ಲದೇ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ

     

  • ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

    ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

    ಉಡುಪಿ: ಹಾರೆ ಹಿಡಿದು ಹೊರಟರೆ ಕೃಷಿಕ. ಮುಂಡಾಸು ಕಟ್ಟಿ ನಿಂತರೆ ಗೋಪಾಲಕ. ಆರತಿ ಹಚ್ಚಿ ಕುಳಿತರೆ ಶ್ರೀಕೃಷ್ಣನ ಸೇವಕ. ಹೌದು. ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನಮ್ಮ ಪಬ್ಲಿಕ್ ಹೀರೋ.

    ಮೂರು ಹೊತ್ತು ಪೂಜೆ ಮಾಡೋದು, ಭಕ್ತರು ಸೇರಿದಾಗ ಪ್ರವಚನ ಮಾಡಿ ನಾಲ್ಕು ಸದ್ವಿಚಾರಗಳನ್ನು ಹೇಳಿ ಧರ್ಮಪ್ರಚಾರ ಮಾಡೋದು ಸ್ವಾಮೀಜಿಗಳ ಕೆಲಸ. ಆದ್ರೆ ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತುಂಬಾ ವಿಭಿನ್ನ. ಡಿಗ್ರಿ ಮುಗಿದ ಬಳಿಕ ಸಂಸಾರದ ಕೊಂಡಿ ಕಳಚಿಕೊಂಡು ಮಠ ಸೇರಿದ್ರು. ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೇ ಈ 53ರ ವಯಸ್ಸಲ್ಲೂ 23ರ ಯುವಕರಂತೆ ಚುರುಕಿನಿಂದ ಕೆಲಸ ಮಾಡ್ತಾರೆ. ಪೀಠಾಧಿಕಾರ ಪಡೆದ ನಂತರವೂ ಕೃಷಿಕರಾಗಿದ್ದಾರೆ. 2004ರಲ್ಲಿ ಉಡುಪಿಯಿಂದ 20 ಕಿಲೋಮೀಟರ್ ದೂರವಿರುವ ನೀಲಾವರ ಎಂಬಲ್ಲಿ 37 ಎಕ್ರೆ ಜಮೀನು ಖರೀದಿ ಮಾಡಿ ಗೋಶಾಲೆಯನ್ನು ಆರಂಭಿಸಿದರು. ಹೀಗಾಗಿ ಇವತ್ತು ಈ ನೀಲಾವರದಲ್ಲಿ 1,280ಕ್ಕೂ ಹೆಚ್ಚು ಗೋವುಗಳಿವೆ. ಗೋವುಗಳೆಂದ್ರೆ ಸ್ವಾಮೀಜಿಗೆ-ಸ್ವಾಮೀಜಿ ಅಂದ್ರೆ ಗೋವುಗಳಿಗೆ ಅಷ್ಟು ಪ್ರೀತಿ.

    ಗೋವುಗಳಿಗೆ ಆಹಾರದ ಸಮಸ್ಯೆ ಬರದಂತೆ ತಾವೇ ಮೇವನ್ನು ಬೆಳೆದು ಕಟಾವು ಮಾಡುತ್ತಾರೆ. ಸಾವಿರಾರು ಗೋವುಗಳಿದ್ದರೂ ಇಲ್ಲಿ ಸಿಗುತ್ತಿರೋದು ಕೇವಲ 22 ಲೀಟರ್ ಹಾಲು ಮಾತ್ರ. ಪ್ರತೀ ದಿನ ಸುಮಾರು 50 ಸಾವಿರ ರೂಪಾಯಿ ಗೋಶಾಲೆಗೆ ಖರ್ಚಾಗುತ್ತದೆ. ಸರ್ಕಾರ ಗೋಶಾಲೆಗೆ ಕೊಡೋ ನೆರವು ಕೂಡಾ ಕಡಿಮೆಯಾಗಿದೆ. ಆದ್ರೆ ಎಲ್ಲವನ್ನೂ ಪೇಜಾವರ ಕಿರಿಯ ಶ್ರೀಗಳೇ ಭರಿಸುತ್ತಾರೆ.

    ಇಷ್ಟೇ ಅಲ್ಲ ಬುದ್ದಿಮಾಂಧ್ಯ ಮಕ್ಕಳಿಗಾಗಿ ಪಕ್ಕದಲ್ಲೇ ಒಂದು ವಿಶೇಷ ಶಾಲೆ ತೆರೆದಿದ್ದಾರೆ. ಮೂವರು ಸಿಬ್ಬಂದಿಯನ್ನಿಟ್ಟು ಎಲ್ಲರ ಪೋಷಣೆ ಮಾಡುತ್ತಾರೆ. ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡಿರುವ ಸ್ವಾಮೀಜಿ, ಹೋದಲೆಲ್ಲಾ ಪ್ರವಚನ ಮಾಡಿ ಹಣ ಸಂಗ್ರಹ ಮಾಡಿ ಅದನ್ನು ಗೋಶಾಲೆ ಹಾಗೂ ವಿಶೇಷ ಶಾಲೆಗೆ ಬಳಸುತ್ತಾರೆ. ಇದೆಲ್ಲದರ ಜೊತೆ ಮಠದ ದೊಡ್ಡ ಜವಾಬ್ದಾರಿ ಕೂಡಾ ನಿರ್ವಹಿಸುತ್ತಿದ್ದಾರೆ.