Tag: Pejawara Matha

  • ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಪೇಜಾವರ ಶ್ರೀ ಒತ್ತಾಯ

    ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಪೇಜಾವರ ಶ್ರೀ ಒತ್ತಾಯ

    ಉಡುಪಿ: ರಾಜ್ಯದಲ್ಲಿ ಮತಾಂತರ ನಿರ್ಬಂಧ ಮಾಡಿ. ಮತಾಂತರ ಆಗುವುದನ್ನು ತಡೆಯಬೇಕು. ಇಲ್ಲವಾದರೆ ಸಮಾಜದಲ್ಲಿ ದೊಡ್ಡ ಅಶಾಂತಿ ಉಂಟಾಗಬಹುದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರ ನಿರ್ಬಂಧ ಮಾಡಿ. ಮತಾಂತರ ಆಗುವುದನ್ನು ತಡೆಯಬೇಕು. ಇಲ್ಲವಾದರೆ ಸಮಾಜದಲ್ಲಿ ದೊಡ್ಡ ಅಶಾಂತಿ ಉಂಟಾಗಬಹುದು. ಒಂದು ಕಡೆ ಆಮೀಷವೊಡ್ಡಿ ಬಲವಂತವಾಗಿ ಮತಾಂತರ ಮಾಡುತ್ತಿಲ್ಲ ಅಂತಾರೆ. ಮತ್ತೊಂದು ಕಡೆ ಮತಾಂತರ ಮಾಡುತ್ತಿದ್ದ ಮಿಷನರಿ ಅವರನ್ನು ಬಂಧಿಸಿದ್ದಾರೆ ಎನ್ನುವ ಸುದ್ದಿಗಳು ವರದಿಯಾಗಿವೆ ಎಂದರು. ಇದನ್ನೂ ಓದಿ: ಅ.2ರಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ- ಎಸ್‍ಆರ್ ಪಾಟೀಲ್

    ಮತಾಂತರ ಮುಂದುವರಿದರೆ ಸಮಾಜದಲ್ಲಿ ದೊಡ್ಡ ಅಶಾಂತಿ, ಗೊಂದಲ ಉಂಟಾಗಬಹುದು. ಸರ್ಕಾರ ಬಲವಾದ ಕಾನೂನು ಜಾರಿಗೆ ತರುವ ಮೂಲಕ ಮತಾಂತರ ನಿರ್ಬಂಧ ಮಾಡಬೇಕು. ರಾಜ್ಯ ಸರ್ಕಾರ ಈ ವಿಷಯದ ಕುರಿತಂತೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ.

    ರಾಜ್ಯದಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮವನ್ನು ಗುರಿಯಾಗಿಸಿ ಮತಾಂತರ ಮಾಡುತ್ತಿವೆ. ನಾವು ಒತ್ತಾಯದ ಮತಾಂತರ ಮಾಡುವುದಿಲ್ಲ ಎಂದರೂ ಮತಾಂತರ ಪ್ರಕ್ರಿಯೆ ನಿರಂತರವಾಗಿ ಎಗ್ಗಿಲ್ಲದೆ ರಾಜ್ಯದ ಎಲ್ಲ ಕಡೆ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ ಕೇಳಿಬರುತ್ತಿದೆ.

    ಆರ್ಥಿಕ ಪರಿಸ್ಥಿತಿ, ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಯನ್ನು ಇಟ್ಟುಕೊಂಡು ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ಮತಾಂತರದ ದಾಳ ಹೂಡುತ್ತಿವೆ. ಕಳೆದ ಒಂದು ತಿಂಗಳಿಂದ ರಾಜ್ಯದ ಎಲ್ಲ ಕಡೆ ಮತಾಂತರ ಕೇಂದ್ರ, ಪ್ರಾರ್ಥನಾ ಮಂದಿರದ ಮೇಲೆ ಹಿಂದೂ ಸಂಘಟನೆಗಳು ದಾಳಿ ಮಾಡುತ್ತಿವೆ.

  • ಪೇಜಾವರ ಶ್ರೀಗಳ ಬಲು ಇಷ್ಟದ ಮೂಲ ಮಠ

    ಪೇಜಾವರ ಶ್ರೀಗಳ ಬಲು ಇಷ್ಟದ ಮೂಲ ಮಠ

    – ಶ್ರೀಗಳ ಮೊದಲ ಪುಟ್ಟ ಹೆಜ್ಜೆ ಮಠ

    ಮಂಗಳೂರು: ರಾಷ್ಟ್ರ ಕಂಡ ಶ್ರೇಷ್ಠ ಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯದ್ದಾರೆ. ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ ಶ್ರೀಗಳು ಎಂದು ಪ್ರಸಿದ್ಧವಾಗಲು ಕಾರಣ ಮಂಗಳೂರಿನ ಕೆಂಜಾರು ಗ್ರಾಮದಲ್ಲಿರುವ ಮೂಲಮಠ.

    ಪೇಜಾವರ ಅಧೋಕ್ಷಜ ಮಠದ 32ನೇ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣೈಕ್ಯರಾಗಿದ್ದಾರೆ. ಪೊಡವಿಗೊಡೆಯನನಾಡು ಸೂತಕದ ಛಾಯೆಯಲ್ಲಿ ಮುಳುಗಿ ಹೋಗಿದೆ. ವಿಶ್ವೇಶತೀರ್ಥರು ತನ್ನ ಏಳೂವರೆ ವರ್ಷದ ಪ್ರಾಯದಲ್ಲೇ ಆಧ್ಯಾತ್ಮದ ಅನುಭೂತಿ ಪಡೆದು ಸನ್ಯಾಸತ್ವ ಸ್ವೀಕರಿದರು. ಹಂಪಿಯಲ್ಲಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಗಳು ಮುಂದೆ ತಮ್ಮ ಸಂಸ್ಕೃತ ವಿದ್ಯಾಭ್ಯಾಸ ಕಲಿತದ್ದು ಮಂಗಳೂರಿನ ಕೆಂಜಾರು ಗ್ರಾಮದಲ್ಲಿರುವ ಪೇಜಾವರ ಎಂಬ ಊರಿನ ಮಠದಲ್ಲಿ. ಏಳೂವರೆ ವರ್ಷದ ವೆಂಕಟರಮಣ ಎಂಬ ಹುಡುಗ ವಿಶ್ವೇಶತೀರ್ಥರಾಗಿ ಬದಲಾಗಿದ್ದು ಇದೇ ಸ್ಥಳದಲ್ಲಿ.

    ವಿಶ್ವೇಶತೀರ್ಥರು ಪೇಜಾವರ ಶ್ರೀ ಎಂದು ಇಂದು ಪ್ರಸಿದ್ಧಿಯಾಗಲು ಕಾರಣ ಈ ಮಠ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ಪೇಜಾವರ ಮಠದಲ್ಲಿ ಮೂರು ವರ್ಷಗಳ ಕಾಲ ಸ್ವಾಮೀಜಿ ವಿದ್ಯಾಭ್ಯಾಸ ಮಾಡಿದ್ದಾರೆ. ಪೇಜಾವರ ಸ್ವಾಮೀಜಿಗಳ ಅಪಾರ ಜ್ಞಾನ ಸಂಪತ್ತಿಗೆ ಮೂಲ ಬುನಾದಿ ಈ ಪೇಜಾವರ ಮಠವಾಗಿದೆ.

    ಪ್ರತಿ ವರ್ಷ ಹನುಮ ಜಯಂತಿಯನ್ನು ಈ ಮೂಲ ಮಠದಲ್ಲೇ ಕಳೆಯುವ ಶ್ರೀಗಳು ಮಠಕ್ಕೆ ಬಂದಾಕ್ಷಣ ಮಗು ಮನಸ್ಸಿನವರಾಗುತ್ತಿದ್ದರು. ತಮ್ಮ ಬಾಲ್ಯದ ಸುಂದರ ಕ್ಷಣಗಳನ್ನು ನೆನಪು ಹಾಕಿಕೊಳ್ಳುತ್ತಿದ್ದರು. ಮಧ್ವಾಚಾರ್ಯಾರು, ವಾದಿರಾಜರು ಬಂದು ನೆಲೆಸಿದ ಈ ಮಠದಲ್ಲಿ ಮುಖ್ಯ ಪ್ರಾಣ ಮತ್ತು ಪಟ್ಟದ ದೇವರನ್ನು ಆರಾಧಿಸಲಾಗುತ್ತದೆ. ಅದರಲ್ಲೂ ಕೃಷ್ಣ ಭಕ್ತರಾದ ಪೇಜಾವರ ಶ್ರೀಗಳು ಮೂಲಮಠದಲ್ಲಿರುವ ರಾಮನನ್ನು ಬಹಳ ಮೆಚ್ಚುತ್ತಿದ್ದರು. ರಾಮನ ಮಂದಸ್ಮಿತ ಮೂರ್ತಿಯನ್ನು ಬಹಳ ನೆಚ್ಚಿಕೊಂಡಿದ್ದರು ಎಂದು ಮೂಲ ಮಠದ ಅರ್ಚಕರಾದ ಗಿರೀಶ್ ಭಟ್ ಹೇಳಿದ್ದಾರೆ.

    ಪೇಜಾವರ ಶ್ರೀಗಳು ಪ್ರಪಂಚ ಪರ್ಯಟನೆ ಮಾಡಿದರೂ ನೆಚ್ಚಿನ ಸ್ಥಳ ಈ ಮೂಲ ಮಠವಾಗಿದೆ. ತಾವು ವಿದ್ಯಾಭ್ಯಾಸ ಮಾಡಿದ ಊರಿನಲ್ಲಿ ಪಾಠಶಾಲೆ ತೆರೆಯುವುದು ಶ್ರೀಗಳ ಕನಸಾಗಿತ್ತು. ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದ್ದರು. ಡಿಸೆಂಬರ್1 ಮತ್ತು 2ರಂದು ಮಠಕ್ಕೆ ಬಂದಿದ್ದ ಶ್ರೀಗಳು ಮಠವನ್ನು ಅಭಿವೃದ್ಧಿಗೊಳಿಸುವ ಕನಸನ್ನು ಹೊತ್ತಿದ್ದರು. ಪಾಠಶಾಲೆಯ ಸಂಚಾಲಕರಾದ ಸುಂದರ್ ಭಟ್ ಅವರಲ್ಲಿ ಈ ಬಗ್ಗೆ ಶ್ರೀಗಳು ಹೇಳಿಕೊಂಡಿದ್ದರು. ಜೊತೆಗೆ ಡಿಸೆಂಬರ್ 21ರಂದು ಮತ್ತೆ ಬರುತ್ತೇನೆ ಮೀಟಿಂಗ್ ಮಾಡೋಣ ಎಂದಿದ್ದರಂತೆ.

    ಆದರೆ ಆ ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಪೇಜಾವರ ಶ್ರೀಗಳು ಜೀವನ್ಮರಣದ ಹೋರಾಟ ಆರಂಭಿಸಿದ್ದರು. ಏನೇ ಇರಲಿ ಪೇಜಾವರ ಶ್ರೀಗಳು ಕೃಷ್ಣೈಕ್ಯರಾದರೂ ಅವರ ನೆನಪುಗಳು ಮಾತ್ರ ಅಜರಾಮರವಾಗಿದೆ. ಬಾಲಕನಾಗಿದ್ದಾಗ ಪೇಜಾವರ ಶ್ರೀಗಳ ಪುಟಾಣಿ ಕಾಲುಗಳು ಓಡಾಡಿದ ಈ ಜಾಗ ನಿರ್ವಾತವಾಗಿದೆ.

  • ಮಾತನಾಡದ ಹೊರತು ತುಳು ಶಿವಳ್ಳಿ ಭಾಷೆ ಉಳಿಯದು: ಪೇಜಾವರಶ್ರೀ

    ಮಾತನಾಡದ ಹೊರತು ತುಳು ಶಿವಳ್ಳಿ ಭಾಷೆ ಉಳಿಯದು: ಪೇಜಾವರಶ್ರೀ

    ಉಡುಪಿ: ಮಕ್ಕಳಲ್ಲಿ ತುಳು ಸಂಸ್ಕತಿ ಬೆಳೆಸಬೇಕು. ತುಳು ಶಿವಳ್ಳಿ ಬ್ರಾಹ್ಮಣ ಭಾಷೆಯನ್ನು ಮಕ್ಕಳು ಮಾತನಾಡಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀ ಕರೆ ಕೊಟ್ಟಿದ್ದಾರೆ.

    ಉಡುಪಿಯಲ್ಲಿ ನಡೆಯುತ್ತುರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದಲ್ಲಿ ಮಾತನಾಡಿದ ಶ್ರೀಗಳು, ಮಧ್ವಾಚಾರ್ಯರು ತೌಳವರಾಗಿರುವುದು ನಮ್ಮ ಹೆಮ್ಮೆ. ಆಚಾರ ವಿಚಾರ, ದಾನ, ಸಂಪ್ರದಾಯ, ಧರ್ಮಪಾಲನೆ ಮೋಕ್ಷಕ್ಕೆ ಸಾಧನ ಎಂದು ಈ ಸಂದರ್ಭದಲ್ಲಿ ಹೇಳಿದರು.

    ಕಾರ್ಯಕ್ರಮದ ರೂವಾರಿ ಪರ್ಯಾಯ ಪಲಿಮಾರು ಸ್ವಾಮೀಜಿ ಮಾತನಾಡಿ, ತುಳು ಶಿವಳ್ಳಿ ಬ್ರಾಹ್ಮಣ ಸಮಾಜದಲ್ಲಿ ಒಗ್ಗಟ್ಟಿನ ಸಮಸ್ಯೆಯಿದೆ. ಸಮಾಜದಲ್ಲಿ ಮಾಧ್ವ ಸಂಪ್ರದಾಯದ ಅರಿವಿನ ಕೊರತೆಯಿದೆ. ಈ ಕೆಲಸ ಆಗಬೇಕಿದೆ. ರಾಜಕೀಯ ಶಕ್ತಿಯನ್ನು ಕೂಡ ನಮ್ಮ ಸಮಾಜ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಮೂರು ದಿನಗಳ ಕಾಲ ನಡೆಯುವ ವಿಶ್ವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ಸಮ್ಮೇಳನ ಶನಿವಾರ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡಿತು. ತುಳು ಶಿವಳ್ಳಿ ಬ್ರಾಹ್ಮಣರ ಸಮ್ಮೇಳನವನ್ನು ಪಲಿಮಾರು ಪರ್ಯಾಯ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಶ್ರೀ, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ ಪುರಾಣಿಕ್ ಮುಂತಾದವರು ಉಪಸ್ಥಿತರಿದ್ದರು.