ಬೆಂಗಳೂರು: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಲಕ್ಷಾಂತರ ಭಕ್ತರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಎರಡು ಟ್ವೀಟ್ ಮಾಡಿದ್ದು, ತಾವು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಹಾಗೂ ಅವರೊಂದಿಗೆ ಕಳೆದ ಸಂದರ್ಭಗಳನ್ನೂ ನೆನೆದಿದ್ದಾರೆ. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಾದಿಂದಾಗಿ ಅವರಿಂದ ಕಲಿಯಲು ನನಗೆ ಹಲವು ಅವಕಾಶ ಸಿಕ್ಕಿದ್ದವು. ಗುರು ಪೂರ್ಣಿಮೆಯ ದಿನದಂದು ನಮ್ಮ ಇತ್ತೀಚಿನ ಭೇಟಿ ಕೂಡ ಸ್ಮರಣೀಯವಾಗಿತ್ತು. ಅವರ ಜ್ಞಾನವು ಯಾವಾಗಲು ಎದ್ದು ಕಾಣುತಿತ್ತು. ಶ್ರೀಗಳ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂದೇಶವಿದೆ ಎಂದು ನೆನೆದಿದ್ದಾರೆ.
I consider myself blessed to have got many opportunities to learn from Sri Vishvesha Teertha Swamiji. Our recent meeting, on the pious day of Guru Purnima was also a memorable one. His impeccable knowledge always stood out. My thoughts are with his countless followers. pic.twitter.com/sJMxIfIUSS
ಎರಡನೇ ಟ್ವೀಟಿನಲ್ಲಿ, ಪೇಜಾವರ ಶ್ರೀಗಳು ಸೇವೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರ ಬಿಂದುವಾಗಿದ್ದರು. ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ. ಅವರ ಸೇವೆ ಹಾಗೂ ಆಧ್ಯಾತ್ಮಿಕ ಶಕ್ತಿಯ ಮೂಲಕ ನ್ಯಾಯಯುತ ಮತ್ತು ಸಹಾನುಭೂತಿ ಸಮಾಜಕ್ಕಾಗಿ ನಿರಂತರ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ನೆನೆದಿದ್ದಾರೆ. ಅಲ್ಲದೆ ಕೊನೆಯದಾಗಿ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ಕೃಷ್ಣೈಕ್ಯರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.
ಜನನ ಮತ್ತು ಬಾಲ್ಯ:
ಅಷ್ಟಮಠಗಳಲ್ಲೇ ಹಿರಿಯ ಯತಿಯಾಗಿದ್ದ ಪೇಜಾವರ ಶ್ರೀ 1931 ಏಪ್ರಿಲ್ 27 ರಂದು ಉಡುಪಿಯಿಂದ 120 ಕಿ.ಮೀ ದೂರದಲ್ಲಿರುವ ಪುತ್ತೂರು ತಾಲೂಕಿನ ರಾಮಕುಂಜ ಹಳ್ಳಿಯಲ್ಲಿ ಜನಿಸಿದ್ದರು. ಪೇಜಾವರ ಶ್ರೀ ವಿಶ್ವೇಶತೀರ್ಥರು ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವರ ಮೂಲ ಹೆಸರು ವೆಂಕಟರಮಣ ಆಗಿತ್ತು.
ವೆಂಕಟರಮಣ ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು 7ನೇ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿದ್ದರು. ನಂತರ 8ನೇ ವಯಸ್ಸಲ್ಲೇ ಮುಖ್ಯಪ್ರಾಣ ಸನ್ನಿಧಿಯಲ್ಲಿ ದೀಕ್ಷೆ ಪಡೆದಿದ್ದರು. ಬಳಿಕ ಪೇಜಾವರ ಮಠದ ಪರಂಪರೆಯ 32ನೇಯ ಯತಿಯಾಗಿ ನೇಮಕಗೊಂಡಿದ್ದರು.
ಪೇಜಾವರ ಶ್ರೀ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುತ್ತಿದ್ದರು. ಜೊತೆಗೆ ಇವರು ಗಾಂಧೀಜಿ ವಿಚಾರಧಾರೆಯನ್ನು ಪಾಲಿಸುತ್ತಿದ್ದರು. ದಿನ ಕಳೆದಂತೆ ಪೇಜಾವರ ಶ್ರೀ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ, ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು. ನಂತರ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು.
1951 ಜನವರಿ 18ರಂದು 21ರ ಹರೆಯದಲ್ಲೇ ಮೊದಲ ಪರ್ಯಾಯ ಪೀಠವೇರಿದ್ದ ಪೇಜಾವರ ಶ್ರೀ ಒಟ್ಟು 5 ಬಾರಿ ಪರ್ಯಾಯ ಪೀಠವೇರಿ ಕೃಷ್ಣ ಪೂಜೆ ನಡೆಸಿದ ಎರಡನೇ ಹಿರಿಯ ಯತಿ ಎಂದು ಖ್ಯಾತಿ ಪಡೆದಿದ್ದಾರೆ. ಕೃಷ್ಣನನ್ನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಬಿಟ್ಟರೆ ಪೇಜಾವರ ಶ್ರೀ ವಿಶ್ವೇಶತೀರ್ಥರೇ ಐದು ಬಾರಿ ಪರ್ಯಾಯ ಪೀಠ ಏರಿದ ವಿಶೇಷ ಸಾಧನೆ ಮಾಡಿದ್ದರು.
ದಲಿತರ ಪರ ಹೋರಾಟ
ದಲಿತರ ಪರ ಧ್ವನಿ ಎತ್ತಿ ದಲಿತರ ಅಭಿವೃದ್ಧಿ ಪರ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಇದಲ್ಲದೇ ದಲಿತ ಖೇರಿಗೆ ಭೇಟಿ ನೀಡಿ ವಾಸ್ತವ್ಯ ಮಾಡುತ್ತಿದ್ದರು. ಕೃಷ್ಣ ಮಠದಲ್ಲಿ ಎಡೆ ಹಾಗೂ ಮಡೆ ಸ್ನಾನವನ್ನು ಪೇಜಾವರ ಶ್ರೀ ಅವರೇ ನಿಲ್ಲಿಸಿದ್ದಾರೆ. ಜೊತೆಗೆ ನಕ್ಸಲ್ ಪ್ರದೇಶದಲ್ಲಿ ಹೆಲ್ತ್ ಕ್ಯಾಂಪ್ ಕೂಡ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು.
ಲಿಂಗಾಯುತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಪೇಜಾವರ ಶ್ರೀ ಆಹ್ವಾನಿಸಿದ್ದರು. ಧರ್ಮ ಸಂಸತ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕರೆಕೊಟ್ಟಿದ್ದರು. ಹೀಗಾಗಿ ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀ ಮುಂಚೂಣಿಯಲ್ಲಿದ್ದರು. ಇವರು ಪ್ರಧಾನಿ ಮೋದಿಯವರೊಂದಿಗೆ ಆತ್ಮೀಯತೆ ಹೊಂದಿದ್ದರು. ಪ್ರಧಾನಿ ಮೋದಿ ಮಾತ್ರವಲ್ಲದೇ ಅಡ್ವಾಣಿ, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಅವರಿಗೂ ಆಪ್ತರಾಗಿದ್ದರು. ವಿಶ್ವಹಿಂದೂ ಪರಿಷತ್ ಪ್ರಮುಖರಾಗಿದ್ದ ಪೇಜಾವರ ಶ್ರೀ ರಾಷ್ಟ್ರದ ಸಂತರಲ್ಲಿ ಪ್ರಭಾವಿ ಹಿರಿಯ ಯತಿಯಾಗಿದ್ದರು.
ಉಡುಪಿಯ ಅಷ್ಟಮಠದಲ್ಲೇ ಹಿರಿಯ ಯತಿಯಾಗಿದ್ದರಿಂದ ಶೀರೂರು ಲಕ್ಷ್ಮೀವರ ತೀರ್ಥ ಸ್ಚಾಮೀಜಿ ಸಾವಿನ ಸಮಯದಲ್ಲಿ ಅಷ್ಟಮಠಕ್ಕೆ ಮಾರ್ಗದರ್ಶಕರಾಗಿದ್ದರು. ದಲಿತರಿಗೆ ಧೀಕ್ಷೆ ನೀಡುತ್ತಿದ್ದರು. ಸದಾ ಯೋಗ ಪೂಜೆಯಲ್ಲಿ ತಲ್ಲಿನರಾಗಿರುತ್ತಿದ್ದರು. ಅಲ್ಲದೇ ವಿರೋಧದ ನಡುವೆಯೂ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ್ದರು. ಇತ್ತೀಚೆಗೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರ ಖುಷಿಪಟ್ಟಿದ್ದರು.
ಉಡುಪಿ: ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಆಚರಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಆಚರಿಸಲು ಸೂಚಿಸಲಾಗಿದೆ. ಅಲ್ಲದೆ ಅವರನ್ನು ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಬೇಕಿರುವುದರಿಂದ ಸ್ಥಳಾಂತರಿಸಬೇಕಿದೆ. ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ
ಕಳೆದ 40-50 ವರ್ಷಗಳಿಂದ ಪೇಜಾವರ ಶ್ರೀಗಳ ಹಾಗೂ ನನ್ನ ಒಡನಾಟವಿತ್ತು. ಎಲ್ಲ ಸಂದರ್ಭಗಳಲ್ಲೂ ಬಂದು ಅವರೊಂದಿಗೆ ಮಾತನಾಡಿ ಅವರ ಬಳಿ ಆಶೀರ್ವಾದ ಪಡೆಯುತ್ತಿದ್ದೆ. ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಅವರ ಮಠಕ್ಕೆ ಕರೆಸಿಕೊಂಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ಮಾಡಿದ್ದರು. ಅವರು ಒಂದು ವೈದ್ಯಕೀಯ ಕಾಲೇಜು ನಿರ್ಮಿಸುತ್ತಿದ್ದಾರೆ. ಅದಕ್ಕೆ 10 ಕೋಟಿ ರೂ.ಗಳನ್ನು ಸ್ಥಳದಲ್ಲೇ ಮಂಜೂರು ಮಾಡಿಸಿ, ಮಾತಾಡಿಕೊಂಡು ಬಂದಿದ್ದೆ. ಎಲ್ಲ ಸಂದರ್ಭಗಳಲ್ಲೂ ನನಗೆ ಏನಾದರೂ ಸಮಸ್ಯೆ ಎದುರಾದಾಗ ಅವರ ಬಳಿ ತೆರಳಿ ಚರ್ಚಿಸುತ್ತಿದ್ದೆ. ನಂತರ ಅವರ ಸಲಹೆ ಪಡೆದು ಅದರಂತೆ ನಡೆದುಕೊಳ್ಳುತ್ತಿದ್ದೆ ಎಂದು ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಬೆಂಗ್ಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ
ಬಹಳ ಮುಖ್ಯವಾಗಿ ಎಂದರೆ ರಾಮಮಂದಿರ ಕಟ್ಟುವ ಸಂದರ್ಭದಲ್ಲಿ ಬೆಳಗ್ಗೆ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಶ್ರೀಗಳು ಹೋದಾಗ ಅವರ ಜೊತೆಗಿದ್ದ 10-12 ಜನರಲ್ಲಿ ನಾನೂ ಒಬ್ಬ. ಹೀಗೆ ನಿರಂತರ ಸಂಪರ್ಕ ಹೊಂದಿದ್ದೆ. ನಮ್ಮ ದೇಶದಲ್ಲಿ ಈ ರೀತಿಯ ಸ್ವಾಮೀಜಿ ಸಿಗುವುದು ಅಪರೂಪ. ದೇಶದ ಉದ್ದಗಲಕ್ಕೂ ನಿರಂತರ ಪ್ರವಾಸ ಮಾಡಿ ಧರ್ಮ ಕಾರ್ಯ ಮಾಡಿದಂತವರು. ಅವರು ಆಸ್ಪತ್ರೆ ಸೇರುವ ಹಿಂದಿನ ಎರಡು ದಿನವೂ ನಿರಂತರ ಪ್ರವಾಸ ಮಾಡಿ ಮುಗಿಸಿಕೊಂಡು ಬಂದು ನಂತರ ಆಸ್ಪತ್ರೆ ಸೇರಿದ್ದರು ಎಂದು ತಿಳಿಸಿದರು.
ಇಂತಹ ಯತಿವರ್ಯರನ್ನು ಕಾಣುವುದು ಅಪರೂಪ, ಮಹಾನ್ ಪೂಜ್ಯರನ್ನು ಕಳೆದುಕೊಂಡು ಈ ದೇಶ, ರಾಜ್ಯ ಬಡವಾಗಿದೆ. ಅವರು ಬದುಕಿದ್ದಾಗಲೇ ರಾಮ ಮಂದಿರ ಕಟ್ಟಬೇಕೆಂಬ ಆಸೆ, ಅಪೇಕ್ಷೆ ಅವರಿಗಿತ್ತು. ಅವರ ಆಸೆಯಂತೆಯೇ ರಾಮ ಮಂದಿರ ಕಟ್ಟುವಂತೆ ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನವಾಯಿತು. ಆದರೆ ಅದನ್ನು ನೋಡುವ ಸೌಭಾಗ್ಯ ಅವರಿಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ಕೃಷ್ಣೈಕ್ಯರಾಗಿದ್ದಾರೆ. ಇವರ ಅಂತ್ಯಸಂಸ್ಕಾರ ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯಲಿದೆ.
ಪ್ರೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಕೃಷ್ಣಮಠಕ್ಕೆ ಶಿಫ್ಟ್ ಮಾಡಲಾಗುತ್ತದೆ. ಸುಮಾರು 20 ನಿಮಿಷ ಕಾಲ ಮಠದಲ್ಲೇ ಇರಲಿದ್ದು, ಅಲ್ಲಿ ಅಷ್ಟಮಠಾಧೀಶರು ಮಧ್ವ ಸರೋವರದಲ್ಲಿ ಸ್ನಾನ, ಅಭಿಷೇಕ ಮಾಡಿಸಲಿದ್ದಾರೆ. ನಂತರ ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡಿಸಲಾಗುತ್ತದೆ. ಅಲ್ಲಿಂದ ನೇರವಾಗಿ ಅಜ್ಜರ ಕಾಡು ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ
ಅಲ್ಲಿ ಮಧ್ಯಾಹ್ನ 12 ಗಂಟೆಯವರೆಗೂ ಸಾರ್ವಜನಿಕರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಶ್ರೀಗಳ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಮತ್ತೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೊನೆಗೆ ವಿದ್ಯಾಪೀಠದಲ್ಲಿ ಸರ್ಕಾರದ ಸಕಲ ಗೌರವದೊಂದಿಗೆ ಪೇಜಾವರ ಶ್ರೀಗಳ ಬೃಂದಾವನ ಮಾಡಲಾಗುತ್ತದೆ.
ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಗುರುವಾರದಿಂದ ಹೆಚ್ಚೇನೂ ಸುಧಾರಣೆಯಾಗಿರಲಿಲ್ಲ. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದರು.
ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾದರು.
ಉಡುಪಿ: ವಿಶ್ವಸಂತ ಪೇಜಾವರ ಶ್ರೀಗಳ ದೇಹಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಚಿಕಿತ್ಸೆಗೆ ಶ್ರೀಗಳ ದೇಹ ಸ್ಪಂದಿಸುತ್ತಿಲ್ಲ. ಹೀಗಾಗಿ ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯ ಶ್ರೀಗಳು ದಿಟ್ಟ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಶ್ರೀಗಳ ಕೊನೆಯಾಸೆಯಂತೆ ಮಠಕ್ಕೆ ಶಿಫ್ಟ್ ಮಾಡಲಾಗಿದೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ನಸುಕಿನ ಜಾವವೇ ವೆಂಟಿಲೇಟರ್ ಸಹಿತ ಪೇಜಾವರ ಶ್ರೀಗಳನ್ನು ಅಂಬುಲೆನ್ಸ್ ಮೂಲಕ ಉಡುಪಿ ಮಠಕ್ಕೆ ಕರೆದುಕೊಂಡು ಹೋಗಲಾಗಿದೆ. ಶ್ರೀಗಳ ಮಠದ ಕೊಠಡಿಯಲ್ಲಿ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಾಗಿ ಕೃಷ್ಣನೂರು ಉಡುಪಿಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ.
ಇತ್ತ ಪೇಜಾವರ ಶ್ರೀಗಳು ಅಧೋಕ್ಷಜ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.
ಉಡುಪಿ: ಕಳೆದ ಶುಕ್ರವಾರ ತೀವ್ರ ಉಸಿರಾಟ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿತಿಯಲ್ಲಿ ಕಳೆದೆರಡು ದಿನದಿಂದ ಬೆಳವಣಿಗೆಯಾಗಿಲ್ಲ.
ಎಂಟನೇ ದಿನದ ಹೆಲ್ತ್ ಬುಲೆಟಿನ್ ನಲ್ಲಿ ಕೆಎಂಸಿ ವೈದ್ಯರು ಈ ವರದಿ ಕೊಟ್ಟಿದ್ದಾರೆ. ಪೇಜಾವರಶ್ರೀಗಳ ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿದೆ. ಶ್ರೀಗಳ ಪ್ರಜ್ಞೆಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಪೇಜಾವರಶ್ರೀ ದೇಹ ಸ್ಥಿತಿಯಲ್ಲಿ ನಿನ್ನೆಯಿಂದ ಇಳಿಮುಖವಾಗಿದೆ. ಚಿಕಿತ್ಸೆ ಮುಂದುವರಿಸಿದ್ದಾರೆ. ಶ್ರೀಗಳ ದೇಹ ಚಿಕಿತ್ಸೆಗೆ ಸ್ಪಂದಿಸಬಹುದು ಎಂಬ ನಿರೀಕ್ಷೆಯಿದೆ. ಏಮ್ಸ್ ಜೊತೆಯೂ ಗಂಟೆಗೊಮ್ಮೆ ಸಂಪರ್ಕದಲ್ಲಿದ್ದೇವೆ ಎಂದು ವಿವರಿಸಿದ್ದಾರೆ. ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರು ಇಂದು ಮಣಿಪಾಲಕ್ಕೆ ಆಗಮಿಸಿ ಪರಿಶೀಲಿಸಿದ್ದರು.
ಉಡುಪಿ: ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈಗ ಶ್ರೀಗಳು ಕಣ್ಣು ಬಿಡುತ್ತಿದ್ದು, ಸಹಜ ಉಸಿರಾಟಕ್ಕೆ ಪ್ರಯತ್ನ ಮಾಡುತ್ತಿದ್ದಾರೆಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಪೇಜಾವರ ಶ್ರೀಪಾದರು ಶೀಘ್ರ ಗುಣಮುಖರಾಗಿ, ಮತ್ತೆ ಅವರು ಕೃಷ್ಣ ಮಠಕ್ಕೆ ಬಂದು ಕೃಷ್ಣನ ಸೇವೆ ಮಾಡುವಂತಾಗಬೇಕು. ಅದನ್ನು ನೋಡುವ ಸೌಭಾಗ್ಯ ನಮಗೆ ಸಿಗಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಮಣಿಪಾಲ ಕೆಎಂಸಿಯ ತಜ್ಞ ವೈದ್ಯರ ತಂಡ ಶ್ರೀಗಳ ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದರು.
ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಸುಧಾರಣೆ ಆಗಿದೆ. ಕಣ್ಣು ಬಿಡುತ್ತಿದ್ದಾರೆ. ಮಾಧ್ಯಮದವರು ತಪ್ಪು ತಿಳಿಯುವ ಅಗತ್ಯವಿಲ್ಲ. ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಭದ್ರತೆಯನ್ನು ಬಿಗಿ ಮಾಡಲಾಗಿದೆ ಎಂದು ಹೇಳಿದರು. ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕೆ ಮಾಧ್ಯಮದವರು ಸಹಕರಿಸಬೇಕು. ಶ್ರೀಗಳ ಅಭಿಮಾನಿಗಳು, ಭಕ್ತರಲ್ಲಿ ವಿನಂತಿ ಮಾಡುತ್ತೇನೆ. ಆಸ್ಪತ್ರೆಗೆ ಭೇಟಿ ನೀಡುವುದು ಬೇಡ, ಅವರು ಗುಣಮುಖರಾಗಿ ಕೃಷ್ಣಮಠಕ್ಕೆ ಬಂದ ನಂತರ ಅವರ ದರ್ಶನ ಪಡೆಯಬಹುದು ಎಂದು ತಿಳಿಸಿದರು.
ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಅವರು ಕೂಡ ದೂರವಾಣಿ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಪೇಜಾವರ ಶ್ರೀಗಳ ಆಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅದಕ್ಕೆ ಶ್ರೀಗಳ ಆಶೀರ್ವಾದ ಸಿಗಬೇಕೆಂಬುವುದೇ ಎಲ್ಲರ ಆಶಯವಾಗಿದೆ. ಇತ್ತೀಚೆಗೆ ಶ್ರೀಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ ಎಂದು ಹೇಳಿದರು.
ಚಾಮರಾಜನಗರ: ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥರ ಆರೋಗ್ಯ ಸುಧಾರಣೆಗಾಗಿ ನಗರದ ಕೊಳದ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಚಾಮರಾಜನಗರದಲ್ಲಿ ಪೇಜಾವರ ಶ್ರೀ ಶೀಘ್ರವೇ ಗುಣಮುಖರಾಗಲಿ ಎಂದು ಮೃತ್ಯುಂಜಯ ಜಪ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಪೇಜಾವರಶ್ರೀ ಶೀಘ್ರ ಗುಣಮುಖರಾಗಲು ನವಗ್ರಹ ಪೂಜೆ, ಮೃತ್ಯುಂಜಯ ಜಪಹರಳುಕೋಟೆ ಜನಾರ್ಧನಸ್ವಾಮಿ ದೇಗುಲದ ಅರ್ಚಕ ಅನಂತಪ್ರಸಾದ್ ನೇತೃತ್ವದಲ್ಲಿ ನವಗ್ರಹ ಪೂಜೆ, ಮೃತ್ಯುಂಜಯ ಜಪ ನೆರವೇರಿಸಿ ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅರ್ಚಕ ಅನಂತಪ್ರಸಾದ್, ಧಾರ್ಮಿಕ ಮುಖಂಡರಾಗಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪೇಜಾವರಶ್ರೀಗಳ ಸೇವೆ ನಾಡಿಗೆ ಅಗತ್ಯವಿದೆ ಎಂದರು.
ಬೆಂಗಳೂರು: ಅಯೋಧ್ಯೆಯಲ್ಲಿ ರಾಮನ ಕಾರ್ಯ ಆಗದೇ ನಮಗೆ ವಿರಾಮ ಇಲ್ಲ, ಆರಾಮವಿಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಹೇಳಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ನನಗೆ 80 ವರ್ಷವಾಗಿದೆ. ಇನ್ನು ಎಷ್ಟುದಿನ ಬದುಕಿರುತ್ತೇನೆ ಎನ್ನುವುದು ಗೊತ್ತಿಲ್ಲ. ನಾನು ಬದುಕಿರುವಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗತ್ತೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಂತರ ಸಮಿತಿಯನ್ನು ಭೇಟಿ ಮಾಡಬೇಕು. ಇದಕ್ಕೆ ಒಪ್ಪದಿದ್ದರೆ ಸಂತರು ಉಪವಾಸ ಧರಣಿಗೂ ಸಿದ್ಧರಾಗಬೇಕು ಎಂದು ಕರೆಕೊಟ್ಟ ಶ್ರೀಗಳು, ನಾವು ಕೋಮುವಾದಿಗಳು ಎಂದು ಕೆಲವರು ದೂರುತ್ತಿದ್ದಾರೆ. ರಾಮ ಮಂದಿರ ಕೇಳುವವರು ಕೋಮುವಾದಿಗಳಲ್ಲ ಪ್ರೇಮವಾದಿಗಳು ಎಂದರು.
ರಾಮನ ಹೆಸರಲ್ಲಿ ಸ್ಫೂರ್ತಿ, ಚೈತನ್ಯ ಅಡಗಿದೆ. ಅಹಲ್ಯೆ ಕಲ್ಲಾಗಿದ್ದಂತೆ ನಮ್ಮ ಭಾರತೀಯರೂ ಜಡವಾಗಿದ್ದರು. ಈಗ ರಾಮ ಮಂದಿರ ನಿರ್ಮಾಣ ವಿಚಾರ ಭಾರತೀಯರಲ್ಲಿ ಚೈತನ್ಯ ತುಂಬಿದೆ. ರಾಮ ಮಂದಿರಕ್ಕೆ ವಿವಾದ ಇತ್ಯರ್ಥಕ್ಕೆ ಆದ್ಯತೆಯಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದ್ದು ನನಗೆ ನೋವು ತಂದಿತ್ತು. ಇದು ಹಿಂದೂಗಳಿಗೆ ಮಾಡಿದ ಅವಮಾನ. ನಮ್ಮ ನ್ಯಾಯಾಲಯಗಳಲ್ಲಿ ಪರಿವರ್ತನೆ ಆಗುವ ಅಗತ್ಯ ಇದೆ. ನ್ಯಾಯದಾನದಲ್ಲಿ ವಿಳಂಬವಾಗಬಾರದು ಎಂದು ಗುಡುಗಿದರು.
ರಾಮಮಂದಿರ ಸ್ವಾಭಿಮಾನ, ಗೌರವದ ಸಂಕೇತ. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ನನಗೆ ರಾಜಕೀಯ ದೂರದ ವಿಚಾರ. ಸಂತರು ರಾಜಕೀಯದಿಂದ ಹೊರಗೆ ಇರುತ್ತಾರೆ. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು, ಕ್ರೈಸ್ತರು ಎಲ್ಲರೂ ಬೆಂಬಲ ಕೊಡಬೇಕು. ಮುಸ್ಲಿಮರಿಗೆ ಇದು ದೊಡ್ಡ ಅವಕಾಶ. ನಮಾಜಿಗೆ ಮಸೀದಿಯೇ ಬೇಕು ಅಂತ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಬೆಂಬಲಿಸಿದರೆ ದೇಶದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದು ಹೇಳಿದರು.
ಉಡುಪಿ: ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ಬಗೆಗಿನ ಸರ್ಕಾರದ ನಡೆಗೆ ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದರೆ ನಾನು ಮಠದಿಂದ ಹೊರಬರುತ್ತೇನೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಒಂದು ಕ್ಷಣವೂ ಇರಲಾರೆ ಎಂದ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ದೇವಾಲಯ- ಮಠಗಳನ್ನು ಸರ್ಕಾರಿಕರಣ ಮಾಡುವ ಚಿಂತನೆ ವಿಪಕ್ಷಗಳ ಹೋರಾಟಕ್ಕೆ ಅಸ್ತ್ರ ಸಿಕ್ಕಂತಾಗುತ್ತದೆ. ಚುನಾವಣಾ ಹೊಸ್ತಿಲಲ್ಲಿ ವಿಪಕ್ಷಗಳು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು
ಸರ್ಕಾರದ ವಿರುದ್ಧ ನಾನು ಹೋರಾಟ ಮಾಡುವುದಿಲ್ಲ. ಸರ್ಕಾರದ ಈ ನಡೆಯ ಬಗ್ಗೆ ಜನರು, ಮಠದ ಭಕ್ತರು ಚಿಂತನೆ ನಡೆಸಲಿ. ಒಂದು ಸರಿಯಾದ ತೀರ್ಮಾನಕ್ಕೆ ಬರಲಿ ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ನಾವು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಸರ್ಕಾರ ಹೀಗೆ ಮಾಡಬಾರದು. ಬಹುಸಂಖ್ಯಾತ, ಅಲ್ಪಸಂಖ್ಯಾತರನ್ನು ಒಂದಾಗಿ ಕಾಣಬೇಕು. ರಾಜ್ಯದ ಜನತೆಯ ಬಗ್ಗೆ ತಾರತಮ್ಯ ಮಾಡಬಾರದು. ಆದರೆ ಇದಕ್ಕೆ ತದ್ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಅಲ್ಪಸಂಖ್ಯಾತರ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಆದೇಶ ಪತ್ರ ಹೊರಡಿಸಿತ್ತು. ಮುಗ್ಧರೆಂದಾದರೆ ಎಲ್ಲರ ಪ್ರಕರಣಗಳನ್ನು ಸರ್ಕಾರ ಕೈಬಿಡಬೇಕು. ಇದೆಲ್ಲದಕ್ಕೆ ರಾಜ್ಯ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಇಂತಹ ಗೊಂದಲಕಾರಿ ಆದೇಶಗಳಿಂದ ಜನ ಮತ್ತಷ್ಟು ಗೋಂದಲಕ್ಕೀಡಾಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ
ಮಠ, ಖಾಸಗಿ ದೇವಸ್ಥಾನಗಳನ್ನು ಸರ್ಕಾರಿಕರಣ ಮಾಡುವ ಬಗ್ಗೆ ಯಾವುದೇ ನೋಟೀಸ್ ಈವರೆಗೆ ನಮ್ಮ ಕೈ ತಲುಪಿಲ್ಲ. ಪರ್ಯಾಯ ಮಠಕ್ಕೆ ಬಂದ ಬಗ್ಗೆಯೂ ಮಾಹಿತಿಯಿಲ್ಲ. ಸರಕಾರದ ಯಾವುದೇ ಮೂಲಗಳಿಂದ ತಿಳಿದುಬಂದಿಲ್ಲ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಸುದ್ದಿಯ ಪ್ರಸಾರ ನೋಡಿ ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ ಎಂದು ಪೇಜಾವರಶ್ರೀ ಹೇಳಿದರು.
ಯೂಟರ್ನ್ ಹೊಡೆದ ಸರ್ಕಾರ: ಮಠಗಳನ್ನು, ದೇವಾಲಯಗಳನ್ನು ವಶಪಡಿಸಿಕೊಳ್ಳುವ ಸಂಬಂಧ ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆ 15 ದಿನಗಳ ಕಾಲಾವಕಾಶ ಕೊಟ್ಟು, ಜನವರಿ 29 ರಂದು ಸಾರ್ವಜನಿಕ ಪ್ರಕಟಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ಎಚ್ಚೆತ್ತು ಹಿಂದೆ ಈಗ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಸಿಎಂ ಸಿದ್ದರಾಮಯ್ಯ ನಡೆಯನ್ನ ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ವ್ಯಾಪಕ ಟೀಕೆಯಿಂದ ಎಚ್ಚೆತ್ತ ಸಚಿವ ರುದ್ರಪ್ಪ ಲಮಾಣಿ ಅಂತ ಪ್ರಸ್ತಾವನೆಯೇ ಇಲ್ಲ. ಕೋರ್ಟ್ ನಿರ್ದೇಶನದಂತೆ ನಾವು ಅಭಿಪ್ರಾಯ ಕೇಳಿದ್ದೇವೆ. ಬಿಜೆಪಿಯವರು ಜನರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಎಂದರು.