Tag: Pejavara Vishwesha Teertha Swamiji

  • ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

    ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

    ಚಿಕ್ಕಮಗಳೂರು: ಶರಣಾಗತಿ ನಕ್ಸಲರಿಗೆ ನೀಡುವ ಶರಣಾಗತಿ ಪ್ಯಾಕೇಜ್‍ಗೆ ಪೇಜಾವರ ಶ್ರೀಗಳೇ ಕಾರಣಕರ್ತರು.

    ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರಿನಲ್ಲಿ ದಿಢೀರ್ ಉದ್ಭವವಾದ ರಕ್ತಸಿಕ್ತ ನಕ್ಸಲ್ ಚಳವಳಿ ಕಾರಾವಳಿ-ಮಲೆನಾಡಗರನ್ನು ಬೆಚ್ಚಿ ಬೀಳಿಸಿತ್ತು. ಮಲೆನಾಡಿಗರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗ ಕರಾವಳಿ-ಮಲೆನಾಡಿನ ಅರಣ್ಯವಾಸಿಗಳ ಆಂತರಿಕ ಹಾಗೂ ಬೌದ್ಧಿಕ ಭಯವನ್ನು ಹೊಗಲಾಡಿಸಲು ಪೇಜಾವರರು ಆಳವಾದ ಅಧ್ಯಯನಕ್ಕೆ ಇಳಿದಿದ್ದರು.

    ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70 ಗ್ರಾಮ ಪಂಚಾಯಿತಿಯ ಜನರೊಂದಿಗೆ ನಿಂತಿದ್ದರು. ಮಲೆನಾಡಿಗೆ ಮರಣಶಾಸನವಾಗಿದ್ದ ಕುದುರೆಮುಖ ನ್ಯಾಷನಲ್ ಪಾರ್ಕ್ ವಿರುದ್ಧ ಬಡವರ ಬೆನ್ನಿಗಿದ್ದರು. ನಕ್ಸಲ್ ಎನ್‍ಕೌಂಟರ್‍ಗಳಿಂದ ಬೆಚ್ಚಿ ಬಿದ್ದಿದ್ದ ಮಲೆನಾಡಿಗರು ಪ್ರತಿ ದಿನ ಆತಂಕದ ಬದುಕು ಸಾಗಿಸುತ್ತಿದ್ದರು. ಆ ಭಾಗದ ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀಗಳು ಪಣ ತೊಟ್ಟಿದ್ದರು. ಸ್ವತಃ ಪಾದಯಾತ್ರೆ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದರು. ಚಿಕ್ಕಮಗಳೂರಿನ ಕೆರೆಕಟ್ಟೆ, ಮುಂಡಗಾರು, ಮೆಣಸಿನ ಹಾಡ್ಯ ಸೇರಿದಂತೆ ನಾಲ್ಕು ಜಿಲ್ಲೆಯ 70 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಜನರಿಗೆ ಧೈರ್ಯ ತುಂಬಲು ನಡೆಸಿದ ಪಾದಯಾತ್ರೆಯಲ್ಲಿ ಶ್ರೀಗಳು ಯಶಸ್ವಿ ಕೂಡ ಆಗಿದ್ದರು.

    ದಿನದಿಂದ ದಿನಕ್ಕೆ ನಕ್ಸಲ್ ಚಟುವಟಿಕೆ ಗರಿಗೆದರಿದಾಗ ಸರ್ಕಾರದ ಮುಂದಿದ್ದದ್ದು ಎರಡೇ ಆಯ್ಕೆ. ಒಂದು ಎನ್‍ಕೌಂಟರ್, ಮತ್ತೊಂದು ಬಂಧಿಸಿ ಜೈಲಿಟ್ಟುವುದು. ಸರ್ಕಾರ ಕೂಡ ನಕ್ಸಲ್ ಸಮಸ್ಯೆ ಹಿಮ್ಮೆಟ್ಟಲು ಮುಂದಾಗಿತ್ತು. ಆಗ ಅವರಿಗೂ ಬದುಕಲು ಅವಕಾಶ ನೀಡಿ ಎಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರಕ್ಕೆ ಸಲಹೆ ನೀಡಿದ್ದು ಇದೇ ಪೇಜಾವರ ಶ್ರೀಗಳು. ಇವರ ಸಲಹೆಯ ಫಲದಿಂದ ದೇಶದಲ್ಲೇ ಮೊದಲ ಬಾರಿಗೆ ನಕ್ಸಲ್ ಪ್ಯಾಕೇಜ್ ಜಾರಿಗೆ ಬಂತು. ಶರಣಾಗುವ ನಕ್ಸಲರಿಗೆ ಸರ್ಕಾರ ನೀಡುವ ಪ್ಯಾಕೇಜಿಗೆ ಪೇಜಾವರರೇ ಕಾರಣಕರ್ತರಾದರು. ಕರ್ನಾಟಕದ ಬಳಿಕ ತಮಿಳುನಾಡು ಸರ್ಕಾರ ದೇಶದ ಎರಡನೇ ರಾಜ್ಯವಾಗಿ ಈ ಯೋಜನೆಯನ್ನ ಜಾರಿಗೆ ತಂದಿತು.

    ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಮಲೆನಾಡಿನ ಭಾಗದಲ್ಲಿ 28ಕ್ಕೂ ಹೆಚ್ಚು ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಎಲ್ಲ ದೇವಾಲಯಗಳು ನಕ್ಸಲ್ ಪ್ರದೇಶದ್ದೆ. ಕೊಪ್ಪ ತಾಲೂಕಿನ ವರ್ಲೆ ಗ್ರಾಮದಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ದೇವಸ್ಥಾನವನ್ನು ಅಗೆದು ದೇವರ ಮೂರ್ತಿಯನ್ನು ತೆಗೆದಾಗ ಅಲ್ಲಿ ಪೇಜಾವರರಿಗೆ ಸುಮಾರು 400 ವರ್ಷದ ಹಳೆಯ ಚಿನ್ನದ ನಾಣ್ಯ ಸಿಕ್ಕಿತ್ತು.

    ಸರ್ಕಾರ ಮಾಡಬೇಕಾದ ಕೆಲಸವನ್ನು ಪೇಜಾವರರೇ ಮಾಡಿದ್ದರು. ನಾಲ್ಕು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಹೆಮ್ಮೆ ಪೇಜಾವರರದ್ದು. ಬಡ ಜನರ ಅಭಿವೃದ್ಧಿ, ಗ್ರಾಮಗಳ ಬೆಳವಣಿಗೆ, ಮಕ್ಕಳ ವಿದ್ಯಾಭ್ಯಾಸ, ಹಳ್ಳಿಗರ ಆರೋಗ್ಯ ಸೇರಿದಂತೆ ನೂರಾರು ಧರ್ಮಕಾರ್ಯ ಮಾಡಿದ್ದಾರೆ. ಇದೀಗ ಅವರ ಸಾವಿನಿಂದಾಗಿ ಮಲೆನಾಡಿಗೂ ಪೇಜಾವರರಿಗೂ ಇದ್ದ ಆತ್ಮೀಯತೆಯ ಕೊಂಡಿ ಕಳಚಿ ಬಿದ್ದಂತಾಗಿದೆ. ಅವರ ಹೆಜ್ಜೆ ಗುರುತುಗಳು ಮಲೆನಾಡಿಗರ ಅದರಲ್ಲೂ ಕುಗ್ರಾಮಗಳ ದಲಿತರ ಮನೆ-ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿ.

  • ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

    ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

    ಧಾರವಾಡ: ಪೇಜಾವರ ಶ್ರೀಗಳ ನಿಧನ ನೋವಿನ ವಿಚಾರ, ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಂಬನಿ ಮಿಡಿದಿದ್ದಾರೆ.

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವಿಚಾರಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು, ಸೈದ್ಧಾಂತಿಕವಾಗಿ ಅವರು ನನ್ನ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ಸಾವಿಗೆ ಯಾವುದೇ ಸಿದ್ಧಾಂತವಿಲ್ಲ. ಈ ಸಂದರ್ಭದಲ್ಲಿ ಅವರನ್ನು ನೆನೆಯಬೇಕು, ಏಕೆಂದರೆ ಅನೇಕ ಚರ್ಚೆಗಳಿಗೆ, ಚಿಂತನೆಗಳಿಗೆ ಅವರು ಮುಖಾಮುಖಿಯಾದವರು. ಇಂಥ ಅವರ ವ್ಯಕ್ತಿತ್ವ ತುಂಬಾ ಮುಖ್ಯ ಎಂದರು.

    ವಿಚಾರವನ್ನು ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ಚರ್ಚೆ ಮಾಡುವ ಗುಣ ಬಹಳ ಮುಖ್ಯ. ಆ ಗುಣ ಅವರಲ್ಲಿ ಇತ್ತು. ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ, ಚರ್ಚೆಗೆ ಅವರು ಎಲ್ಲ ವಿಚಾರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದರು ಎಂದು ಶ್ರೀಗಳ ಕುರಿತು ವಿವರಿಸಿದರು.

    ವೈಚಾರಿಕ ವಾಗ್ವಾದಕ್ಕೆ ಇಳಿಯುತ್ತಿದ್ದರು. ಅಂಥ ಚರ್ಚೆಗೆ ಕಾರಣವಾದ ಅವರು ಇಂದು ಇಲ್ಲ. ಪೇಜಾವರ ಶ್ರೀಗಳು ನಂಬಿದ ಚೌಕಟ್ಟಿನೊಳಗೆ ಇಫ್ತಾರ್ ಕೂಟ ಏರ್ಪಡಿಸಿದ್ದರು. ಅವರ ಈ ಧೈರ್ಯವನ್ನು ಇಂದು ನೆನಪಿಸಿಕೊಳ್ಳಬೇಕು. ಬೇರೆ ಧರ್ಮವನ್ನು ಗೌರವಿಸಿದ ಅವರಿಗೆ ತುಂಬು ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಬರಗೂರು ಈ ವೇಳೆ ಹೇಳಿದರು.

  • ವೈಚಾರಿಕ ಭಿನ್ನಾಭಿಪ್ರಾಯದ ನಡುವೆ ನಮ್ಮ ಬಾಂಧವ್ಯ ಚೆನ್ನಾಗಿತ್ತು: ಶ್ರೀನಿವಾಸಪ್ರಸಾದ್

    ವೈಚಾರಿಕ ಭಿನ್ನಾಭಿಪ್ರಾಯದ ನಡುವೆ ನಮ್ಮ ಬಾಂಧವ್ಯ ಚೆನ್ನಾಗಿತ್ತು: ಶ್ರೀನಿವಾಸಪ್ರಸಾದ್

    – ಹಿಂದೂ ಧರ್ಮ ಸಮರ್ಥನೆ ಮಾಡಿಕೊಳ್ಳುವ ಮೊದಲಿಗರಾಗಿದ್ದರು
    – ಎಲ್ಲವನ್ನೂ ನೇರವಾಗಿ ಹೇಳುತ್ತಿದ್ದರು

    ಮೈಸೂರು: ಪೇಜಾವರ ಶ್ರೀಗಳ ನಿಧನಕ್ಕೆ ಮೈಸೂರಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳು ಕಟ್ಟಾ ಹಿಂದೂವಾದಿಗಳಾಗಿದ್ದರು. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಹೆಚ್ಚಾಗಿತ್ತು. ಅಸ್ಪೃಶ್ಯತೆ ನಿವಾರಣೆ ವಿಚಾರವಾಗಿ ನಮಗೂ ಅವರಿಗೂ ಸೈದ್ಧಾಂತಿಕ ವಿರೋಧ ಇತ್ತು. ಗೋ ಹತ್ಯೆ ನಿಷೇಧ, ರಾಮಜನ್ಮ ಭೂಮಿ ವಿಚಾರದಲ್ಲಿ ಪೇಜಾವರ ಶ್ರೀ ಆಂದೋಲನ ಮಾಡಿದವರು ಎಂದು ಸ್ಮರಿಸಿದರು.

    ಅಸ್ಪೃಶ್ಯತೆ ವಿಚಾರವಾಗಿ ರಾಷ್ಟ್ರವ್ಯಾಪಿ ಚಳುವಳಿ ಆಗಬೇಕು. ಎಲ್ಲಾ ಮಠಾಧೀಪತಿಗಳು ಒಂದು ದಿನ ಉಪವಾಸ ಮಾಡಬೇಕೆನ್ನುವುದು ನನ್ನ ಆಗ್ರಹವಾಗಿತ್ತು. ಆದರೆ ಅದಕ್ಕೆ ಸ್ವಾಮೀಜಿ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಆದರೂ ವ್ಯಕ್ತಿಗತವಾಗಿ ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿತ್ತು. ಹಿಂದೂ ಧರ್ಮ ಗಂಗಾನದಿಯ ಹಾಗೆ. ಮೂಲದಲ್ಲಿ ಶುದ್ಧವಾಗಿದೆ, ಹರಿಯುವ ವೇಳೆ ಜನ ಮಲೀನ ಮಾಡುತ್ತಾರೆಂದು ಸ್ವಾಮೀಜಿ ಹೇಳಿದ್ದರು ಎಂದು ನೆನೆದರು.

    ಸಾರ್ಥಕ, ಹೋರಾಟ, ಚಿಂತನೆಯ ಬದುಕು ಅವರದ್ದು. ದೇಶ ಒಬ್ಬ ಮಹಾನ್ ಚಿಂತಕನನ್ನು ಕಳೆದುಕೊಂಡಿದೆ. ರಾಷ್ಟ್ರದ ಧರ್ಮ ಸಂಸತ್ತಿನ ಕಾರ್ಯಕ್ರಮ ಆಯೋಜನೆ ಮಾಡಿದ ಕೀರ್ತಿ ಅವರದ್ದು. ಉಡುಪಿಯಲ್ಲಿ ವಿಶ್ವ ಹಿಂದೂ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಮಾಡಿದ್ದರು. ಅನೇಕ ಬಾರಿ ಅವರ ಬಳಿ ನಾನು ಮಾತುಕತೆ ನಡೆಸಿದ್ದೇನೆ ಮಠಕ್ಕೆ ಹೋಗಿದ್ದೇನೆ. ಅವರೂ ನಮ್ಮ ಮನೆಗೆ ಬಂದಿದ್ದಾರೆ. ಅವರು ಹಿಂದೂ ಧರ್ಮ ಸಮರ್ಥನೆ ಮಾಡಿಕೊಳ್ಳುವ ಮೊದಲಿಗರಾಗಿದ್ದರು. ಅಯೋಧ್ಯೆಗಾಗಿ ದೊಡ್ಡ ಆಂದೋಲನ ಮಾಡಿದರು. ನಾನು ಅವರ ಬಳಿ ಮೆಚ್ಚುವ ಗುಣವೆಂದರೆ ಎಲ್ಲವನ್ನೂ ನೇರವಾಗಿ ಹೇಳುವುದು. ಹೀಗಾಗಿ ಅಂತಹ ಮಹಾನ್ ಚೇತನವನ್ನು ಕಳೆದುಕೊಂಡಿದ್ದು ಸಾಕಷ್ಟು ದುಃಖವಾಗಿದೆ ಎಂದರು.