ಬೆಂಗಳೂರು: ರಾಜಭವನಕ್ಕೆ ತೆರಳುವ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ದಾರಿ ಮಧ್ಯೆ ಪೇಜಾವರ ಶ್ರೀಗಳು ಸಿಕ್ಕಿದ್ದು, ಅವರ ಆಶೀರ್ವಾದ ಪಡೆದಿದ್ದಾರೆ.
ಹೌದು, ಇಂದು ಮುಖ್ಯಮಂತ್ರಿಯಾಗಿ ಬಿ. ಎಸ್ ಯಡಿಯೂರಪ್ಪ ಅವರು ಪ್ರಮಾಣವಚ ಸ್ವೀಕರಿಸುವ ಸಲುವಾಗಿ ರಾಜಭವನಕ್ಕೆ ತೆರಳಿ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ. ಈ ವೇಳೆ ದಾರಿ ಮಧ್ಯೆ ಪೇಜಾವರ ಶ್ರೀಗಳು ಬಿಎಸ್‍ವೈ ಅವರಿಗೆ ಸಿಕ್ಕಿದ್ದಾರೆ. ಶ್ರೀಗಳನ್ನು ಕಂಡ ಕೂಡಲೇ ಬಿಎಸ್‍ವೈ, ತಮ್ಮ ಕಾರಿನಿಂದ ಇಳಿದು ನೇರವಾಗಿ ಶ್ರೀಗಳ ಬಳಿ ಹೋಗಿ ಅವರ ಆಶೀರ್ವಾದ ತೆಗೆದುಕೊಂಡಿದ್ದಾರೆ.
ಬಹುಮತ ಸಿಕ್ಕಿದ್ದರೂ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯ ಬಿಜೆಪಿ ಯಾಕೆ ತಡಮಾಡುತ್ತಿದೆ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡಿತ್ತು. ಈ ಮಧ್ಯೆ ಇಂದು ಬೆಳಗ್ಗೆ 9.15ರ ಸುಮಾರಿಗೆ ಹೈಕಮಾಂಡ್ ಬಿಎಸ್‍ವೈ ಅವರಿಗೆ ದೂರವಾಣಿ ಕರೆ ಮಾಡಿ ಗ್ರೀನ್ ಸಿಗ್ನಲ್ ನೀಡಿದೆ. ಈಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಹಕ್ಕನ್ನು ಮಂಡಿಸಿ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ಕೂಡಲೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಲ್ಲಿ ಇಂದೇ ಪ್ರಮಾಣ ವಚನ ಸ್ವೀಕಾರ ಮಾಡುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಇಂದು ಸಂಜೆ 6 ರಿಂದ 6.15ರ ಸುಮಾರಿಗೆ ಬಿಎಸ್ ವೈ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಧಾರ್ಮಿಕ ಮುಖಂಡರ ಸಭೆ ಕರೆಯಲಿ. ಅದನ್ನ ಬಿಟ್ಟು ಜಾತ್ಯಾತೀತ ಸರ್ಕಾರಕ್ಕೆ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರ ಜನಮತಗಣತೆ ಮಾಡಬೇಕು. ಹಿಂದೂಗಳ ಅಭಿಪ್ರಾಯವನ್ನ ಪಡೆದುಕೊಳ್ಳಬೇಕು. ಅದಾಗದಿದ್ರೆ ಧಾರ್ಮಿಕ ಮುಖಂಡರ ಸಭೆ ಕರೆದು ಇತ್ಯರ್ಥ ಮಾಡಲಿ. ಅದನ್ನ ಬಿಟ್ಟು ಜಾತ್ಯಾತೀತ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆ ಇಲ್ಲವೆಂದ ಮೇಲೆ ಅವರಿಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಅದ್ಯಾವ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಧಾರ್ಮಿಕವಾಗಿ ನಾನು ಹಲವಾರು ಪರಿವರ್ತನೆ ಮಾಡಿದ್ದೇನೆ. ಜೊತೆಗೆ ಹಲವಾರು ಸಂಪ್ರದಾಯವನ್ನು ಕೂಡ ಅನುಸರಿಸಿದ್ದೇನೆ. ಇದು ಸಂಪ್ರದಾಯ ಮತ್ತು ಶಾಸ್ತ್ರದ ತಿಕ್ಕಾಟ ಆಗಿರೋದ್ರಿಂದ ಜಾತ್ಯಾತೀತ ಸರ್ಕಾರ ಇದನ್ನ ತೀರ್ಮಾನ ಮಾಡಬಾರದು. ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ಇದನ್ನ ತೀರ್ಮಾನ ಮಾಡಬೇಕು. ಮಹಿಳೆಯರು ಇದನ್ನ ಅವಮಾನ ಅಂತ ಭಾವಿಸಬಾರದು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!
ಜನಾಭಿಪ್ರಾಯಕ್ಕೆ ಮಣಿದು ಶ್ರೀ ರಾಮ ಸೀತೆಯನ್ನ ಕಾಡಿಗೆ ಕಳುಹಿಸಿದ ಅನ್ನೋದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗೆಯೇ ಕೇರಳ ಸರ್ಕಾರ ತನ್ನ ಹಠವನ್ನ ಬಿಟ್ಟು ಇದನ್ನೂ ಕೂಡ ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು. ಹಾಗೆಯೇ ತಲಾಖ್ ವಿಚಾರವನ್ನ ಪ್ರಸ್ತಾಪಿಸಿದ ಶ್ರೀಗಳು, ತಲಾಖ್ ವಿಚಾರವನ್ನು ಶಬರಿಮಲೆಗೆ ತಳಕು ಹಾಕುವ ಅಗತ್ಯ ಇಲ್ಲ. ತಲಾಖ್ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ ಸಮಾನ. ನಾನು ತಲಾಖ್ ವಿರುದ್ಧ ಕಾಯ್ದೆಗೆ ಬೆಂಬಲಿಸುತ್ತೇನೆ ಎಂದು ಹೇಳಿದರು.
ತುಮಕೂರು: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ ಭಕ್ತಾಧಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಪೇಜಾವರ ಶ್ರೀಗಳು ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ್ದೇನೆ. ಅವರನ್ನು ನೋಡಿ ಸಮಾಧಾನವಾಯ್ತು. ಅವರು ಆರೋಗ್ಯವಾಗಿದ್ದಾರೆ. ವೈದ್ಯರ ಬಳಿ ನಾನು ಮಾತನಾಡಿದ್ದೇನೆ ಯಾವುದೇ ಆತಂಕವಿಲ್ಲ. ಶ್ರೀಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಭಕ್ತಾಧಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸಿದ್ದಗಂಗಾ ಶ್ರೀಗಳನ್ನು ನಾನು ನೋಡಿ ಬಂದಿದ್ದೇನೆ. ಅವರು ವಿಶ್ರಾಂತಿಯಲ್ಲಿದ್ದಾರೆ ಹಾಗಾಗಿ ಮಾತನಾಡಿಸಲು ಆಗಲಿಲ್ಲ. ಚಿಕ್ಕ ಶ್ರೀಗಳು ಹಾಗೂ ಮಠದ ಇತರೇ ಸದಸ್ಯರು ಕೂಡ ಶ್ರೀಗಳ ಬಳಿ ಇದ್ದಾರೆ. ಎಲ್ಲರನ್ನೂ ನಾನು ಭೇಟಿ ಮಾಡಿ ಮಾತನಾಡಿದ್ದೇನೆ. ನಡೆದಾಡುವ ದೇವರಿಗೆ ಯಾವುದೇ ತೊಂದರೆಯಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಉಡುಪಿ: ಅಷ್ಟಮಠದ ಹಿರಿಯಶ್ರೀಗಳಾದ ಪೇಜಾವರ ಶ್ರೀಗಳು ಮಧ್ವಪೀಠವೇರಿ 80 ವರ್ಷ ಪೂರ್ಣಗೊಂಡಿದ್ದು, ಸ್ವತಃ ರಾಷ್ಟ್ರಪತಿಗಳು ಹಾಗೂ ಶ್ರೀಗಳ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿಯವರು ಗುರುವಂದನೆ ಮಾಡಲಿದ್ದು ಉಡುಪಿಯಲ್ಲಿ ಕಾರ್ಯಕ್ರಮದ ಸಿದ್ಧತೆ ಜೋರಾಗಿದೆ.
ಪೇಜಾವರ ಶ್ರೀಗಳು ಬ್ರಾಹ್ಮಣ ಯತಿಯಾದ್ರೂ ದಲಿತ ಕೇರಿಗೆ ಹೋದ ಕ್ರಾಂತಿಕಾರಿ. ಸರ್ವಸಂಘ ಪರಿತ್ಯಾಗಿಯಾದ್ರೂ ರಾಜಕೀಯ ಪಂಡಿತ. ಪ್ರಪಂಚ ಅರಿಯದ ವಯಸ್ಸಿನಲ್ಲಿ ಪೀಠವೇರಿ ಸನ್ಯಾಸಿಯಾದ್ರು ಶ್ರೀ ಪೇಜಾವರ ಶ್ರೀಗಳು. 80 ವರ್ಷದ ಹಿಂದೆ ಇವರ ಹೆಸರು ವೆಂಕಟರಮಣ. ಆಗಿನ್ನೂ ಅವರು 8 ವರ್ಷದ ಬಾಲಕ. ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಪುಟ್ಟ ಬಾಲಕನಿಗೆ ಅದೇನು ಕನಸಿತ್ತೋ, ಮುಂದೇನು ಆಗಬೇಕೆಂಬ ಮನಸ್ಸಿತ್ತೋ ಗೊತ್ತಿಲ್ಲ. ಆದ್ರೆ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳ ಪೈಕಿ ಒಂದಾಗ ಪೇಜಾವರ ಮಠಕ್ಕೆ ಉತ್ತರಾಧಿಕಾರಿಯಾಗಿ ಧೀಕ್ಷೆ ಕೊಡಲಾಯ್ತು. ಬಳಿಕ ಮಾಣಿ ವೆಂಕಟರಮಣ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಾದರು.
ಪೇಜಾವರ ಸ್ವಾಮೀಜಿ ಸನ್ಯಾಸಿಯಾಗಿ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ ನೆರವೇರುತ್ತಿದೆ. ಆದರಿಂದ ಪೇಜಾವರಶ್ರೀ ಶಿಷ್ಯೆ ಉಮಾಭಾರತಿ ಗುರುವಂದನೆ ಮಾಡಲಿದ್ದಾರೆ. ಡಿಸೆಂಬರ್ 27ರಂದು ನಡೆಯುವ ಕಾರ್ಯಕ್ರಮಕ್ಕೆ ಭಾರತದ ಪ್ರಥಮ ಪ್ರಜೆ ರಾಮನಾಥ ಕೋವಿಂದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ ಆಚಾರ್ಯ ಸ್ವಾಮೀಜಿಯವರ ಎಂಬತ್ತನೇ ಸನ್ಯಾಸ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಪೇಜಾವರ ಶ್ರೀಗಳಿಗೆ ಈಗ 89 ವಯಸ್ಸು. ಹೆಸರಿಗೆ 89, ಆದ್ರೆ ಶ್ರೀಗಳ ಓಡಾಟ, ಚುರುಕುತನ, ಪೂಜೆ, ಯೋಗ, ಭಾಷಣ, ಪ್ರವಚನ ಕೇಳಿದ್ರೆ ಇನ್ನೂ ಮೂವತ್ತೊಂಬತ್ತು ಅನ್ನಿಸುತ್ತದೆ. ಕಾವಿ ಉಟ್ಟು ಕೇವಲ ಧಾರ್ಮಿಕವಾಗಿ ತೊಡಗಿಸಿಕೊಳ್ಳದೆ ಸಾಮಾಜಿಕ ಚಟುವಟಿಕೆಯಲ್ಲೂ ಪೇಜಾವರಶ್ರೀ ಮುಂಚೂಣಿಯಲ್ಲಿದ್ದಾರೆ. 60ರ ದಶಕದಲ್ಲಿ ದಲಿತ ಕೇರಿಗೆ ಭೇಟಿಕೊಟ್ಟು ಅಸ್ಪೃಶ್ಯತೆಯನ್ನು ಹೋಗಲಾಡಿಸುವ ದಿಟ್ಟ ಹೆಜ್ಜೆಯನ್ನು ಶ್ರೀಗಳು ಇಟ್ಟಿದ್ದರು. ಬ್ರಾಹ್ಮಣರಿಂದ ವಿರೋಧ ಬಂದರೂ, ಲೆಕ್ಕಕ್ಕೆ ತೆಗೆದುಕೊಳ್ಳದೆ ಮುಂದುವರಿದವರು. ಇತ್ತೀಚಿನ ಮಡೆಸ್ನಾನಕ್ಕೆ ಪರಿಹಾರ ನೀಡಿ ಪರ್ಯಾಯ ಸಂದರ್ಭದಲ್ಲಿ ಇಫ್ತಾರ್ ಕೂಟ ಮಾಡಿ ವಿರೋಧ ಕಟ್ಟಿಕೊಂಡ ಶ್ರೀಗಳು, ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾ, ಉಡುಪಿ ಕೃಷ್ಣನಿಗೆ ಅತೀಹೆಚ್ಚು ಪೂಜೆ ಮಾಡಿದ ಸಂತ ಎಂಬ ಕೀರ್ತಿಗೂ ಸ್ವಾಮೀಜಿ ಪಾತ್ರವಾಗಿದ್ದಾರೆ. ರಾಮಮಂದಿರ ನಿರ್ಮಾಣ ಆಗಬೇಕೆಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೇಜಾವರ ಶ್ರೀಗಳಿಗೆ ಇದೀಗ ತನ್ನ ಶಿಷ್ಯೆ ಹಾಗೂ ದೇಶದ ಮೊದಲ ಪ್ರಜೆಯಿಂದ ಸನ್ಯಾಸದ 80ನೇ ವರ್ಷದ ಸಂದರ್ಭ ಗುರುವಂದನೆಯಲ್ಲಿ ಪಡೆಯಲ್ಲಿದ್ದಾರೆ.
ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಮಾತನಾಡಿ, ಹಿರಿಯ ಶ್ರೀಗಳಿಗೆ ನಮ್ಮ ಪರ್ಯಾಯ ಸಂದರ್ಭದಲ್ಲಿ 80ರ ಗುರುವಂದನೆ ನಡೆಯುತ್ತಿರುವುದು ಮನಸ್ಸಿಗೆ ಬಹಳ ಖುಷಿ ಕೊಟ್ಟಿದೆ. ಅವರ ನೂರನೇ ಗುರುವಂದನಾ ಕಾರ್ಯಕ್ರಮ ನೋಡುವ ಅವಕಾಶವನ್ನು ಭಗವಂತ ಕರುಣಿಸಲಿ. ಕೃಷ್ಣಮಠಕ್ಕೆ ರಾಷ್ಟ್ರಪತಿಗಳು ಆಗಮಿಸಲಿದ್ದು ದೇವರ ದರ್ಶನ ಮತ್ತು ಅವರ ಗೌರವಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದರು.
ಪೇಜಾವರಶ್ರೀಗಳಿಗೆ ದೇಶಾದ್ಯಂತ ಭಕ್ತರಿದ್ದಾರೆ. ಬಾಬ್ರಿ ಮಸೀದಿ ಧ್ವಂಸ, ಸಂವಿಧಾನ ತಿದ್ದುಪಡಿ ಮುಂತಾದ ಕೆಲ ಘಟನೆಗಳ ನಂತರ ಅವರನ್ನು ಟೀಕಿಸುವವರೂ ಹೆಚ್ಚಿದ್ದಾರೆ. ಒಟ್ಟಿನಲ್ಲಿ ಸನ್ಯಾಸ ಜೀವನದಲ್ಲಿ 80 ವರ್ಷಗಳನ್ನು ಪೂರೈಸಿರುವುದು ಹಾಗೂ ಸಮಾಜದ ಎಲ್ಲಾ ವರ್ಗಗಳನ್ನು ಮುಟ್ಟುವುದು ಸಾಮಾನ್ಯ ವಿಷಯವಲ್ಲ. 1940ರಿಂದ ಪೀಠವನ್ನು ನಿಭಾಯಿಸಿಕೊಂಡು ಬಂದು ಈಗಲೂ ಪ್ರಸಿದ್ಧರಾಗಿರುವುದು ಸುಲಭದ ಮಾತಲ್ಲ ಅನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯಂಶವಾಗಿದೆ.
ಉಡುಪಿ: ಕೋಟಿ ಕೋಟಿ ಭಕ್ತರ ಆರಾಧ್ಯ ದೈವ- ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಮಾತಾ ಶ್ರೀ ಅಮೃತಾನಂದಮಯಿ ಮೊದಲ ಬಾರಿಗೆ ದೇವರ ನಾಡಿನಲ್ಲಿ ಕಾಣಿಸಿಕೊಂಡರು. ಸುಮಾರು ಐವತ್ತು ಸಾವಿರ ಮಂದಿ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಿದರು. ಭಜನೆ- ಸತ್ಸಂಗ- ಪ್ರವಚನದಲ್ಲಿ ಪಾಲ್ಗೊಂಡು ಭಕ್ತರನ್ನು ಪುಳಕಿತಗೊಳಿಸಿದರು.
ಮಾತಾ ಅಮೃತಾನಂದಮಯಿ ದೇವರ ನಾಡು ಕೇರಳದಲ್ಲಿ ಹುಟ್ಟಿ ವಿಶ್ವದಾದ್ಯಂತ ಭಕ್ತಕೋಟಿಯನ್ನು ಸಂಪಾದಿಸಿದ ಆಧ್ಯಾತ್ಮ ಗುರು. ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಅಮೃತಾನಂದಮಯಿ ಮೊಟ್ಟ ಮೊದಲ ಬಾರಿಗೆ ದೇವಾಲಯಗಳ ನಗರಿ ಉಡುಪಿ ನಗರಕ್ಕೆ ಆಗಮಿಸಿದ್ದರು. ಅಮೃತ ವೈಭವದ ಮೂಲಕ ಸುಮಾರು 50 ಸಾವಿರ ಮಂದಿಗೆ ದರ್ಶನ ನೀಡಿದರು. ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಜನೆ- ಸತ್ಸಂಗ- ಪ್ರವಚನ ಕಾರ್ಯಕ್ರಮ ನಡೆಯಿತು. ಭಕ್ತ ಸಾಗರವನ್ನುದ್ದೇಶಿಸಿ ಮಾತಾ ಅಮೃತಾನಂದಮಯಿ ಪ್ರವಚನ ನೀಡಿದರು. ಮನುಷ್ಯ ಮನುಷ್ಯರ ನಡುವೆ ಹಗೆತನ ಇರಬಾರದು. ಮನುಷ್ಯ ಕಾಮ- ಕ್ರೋಧವನ್ನು ಜಯಿಸಿ ಬಾಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜನನಾಯಕರು ಸೇರದಂತೆ ಪ್ರಮುಖ ಗಣ್ಯಾತಿಗಣ್ಯರು ಪಾಲ್ಗೊಂಡು, ಅಮ್ಮನ ಗುಣಗಾನ ಮಾಡಿದರು. ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಅಮ್ಮನ ಪಾದಸ್ಪರ್ಶದಿಂದ ಉಡುಪಿ ಪಾವನವಾಯ್ತು ಎಂದು ಹೇಳಿದರು.
ಇದಕ್ಕೂ ಮೊದಲು ಅಮೃತಾನಂದಮಯಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕಡೆಗೋಲು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪೇಜಾವರ ಸ್ವಾಮೀಜಿಯವರನ್ನು ಭೇಟಿಯಾಗಿ ತಮ್ಮ ಸೇವಾಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದರು. ಪರಸ್ಪರ ಇಬ್ಬರೂ ಗೌರವ ವಿನಿಮಯ ಮಾಡಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಭಾರತಿ ಗುರೂಜಿ, ಸಚಿವ ರುದ್ರಪ್ಪ ಲಮಾಣಿ, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಭಾಗಿಯಾಗಿ ಆಶೀರ್ವಾದ ಪಡೆದರು. ಸುಮಾರು 50 ಸಾವಿರ ಮಂದಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ನಿರಂತರ ಎರಡು ದಿನ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ.