Tag: Pejavara Shree

  • ಮಡೆಸ್ನಾನವೂ ಇಲ್ಲ – ಎಡೆಸ್ನಾನವೂ ಇಲ್ಲ ಪಲಿಮಾರುಶ್ರೀ ದಿಟ್ಟ ನಿರ್ಧಾರ

    ಮಡೆಸ್ನಾನವೂ ಇಲ್ಲ – ಎಡೆಸ್ನಾನವೂ ಇಲ್ಲ ಪಲಿಮಾರುಶ್ರೀ ದಿಟ್ಟ ನಿರ್ಧಾರ

    ಉಡುಪಿ: ಕೃಷ್ಣಮಠದ ಇತಿಹಾಸದಲ್ಲೇ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿಗಳು ಕ್ರಾಂತಿಕಾರಿ ಮತ್ತು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಈ ಬಾರಿಯಿಂದ ಷಷ್ಠಿಯಂದು ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಎಂಜಲೆಲೆಯ ಮಡೆಸ್ನಾನವೂ ಹಾಗೂ ದೇವರ ಪ್ರಸಾದ ಎಡೆಸ್ನಾನಕ್ಕೆರಡಕ್ಕೂ ವಿದಾಯ ಹೇಳಿದ್ದಾರೆ.

    ಪರ್ಯಾಯ ಪಲಿಮಾರು ಮಠಾಧೀಶರ ಮಹತ್ವದ ನಿರ್ಧಾರ ಇದಾಗಿದೆ. ಆಸಕ್ತ ಭಕ್ತರಿಂದ ಈ ಬಾರಿ ಕೇವಲ ಉರುಳುಸೇವೆ ಮಾತ್ರ ನಡೆದಿದೆ. ಉರುಳು ಸೇವೆ ಮಾಡಿದವರ ಸಂಖ್ಯೆಯೂ ಕಡಿಮೆಯಾಗಿತ್ತು. ಕಳೆದ ನಾಲ್ಕು ವರ್ಷದಿಂದ ಪೇಜಾವರ ಶ್ರೀಗಳ ಸಲಹೆಯಂತೆ ಮಠದಲ್ಲಿ ಎಡೆಸ್ನಾನ ನಡೆಯುತ್ತಿತ್ತು. ಆಗಲೇ ಭಕ್ತರ ಸಂಖ್ಯೆ ಕುಸಿದಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಪರ್ಯಾಯ ಪಲಿಮಾರು ಸ್ವಾಮೀಜಿಗಳು, ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಭಕ್ತರು ದೇವರಿಗೆ ಪ್ರದಕ್ಷಿಣೆ ಬಂದು ಅರ್ಚನೆ ಪೂಜೆ ಸಲ್ಲಿಸಲಿ. ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲ. ಕೃಷ್ಣಮಠದ ಭೋಜನ ಶಾಲೆಯಲ್ಲೇ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಪೇಜಾವರ ಶ್ರೀಗಳು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜಾತಿಯ ಹೆಸರಲ್ಲಿ ವಿರೋಧ ಬಂದ್ರೆ ಸಂಘರ್ಷವಾಗುತ್ತದೆ. ದೇವಸ್ಥಾನದಲ್ಲಿ ಮಡೆಸ್ನಾನ – ಎಡೆಸ್ನಾನ ಅನಿವಾರ್ಯ ಅಲ್ಲ. ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ದೇವಸ್ಥಾನದ ಉತ್ಸವ ಪೂಜೆ ಶಾಸ್ತ್ರಬದ್ಧವಾಗಿ ನಡೆದರೆ ಸಾಕು. ವಿವಾದ ಭಿನ್ನಾಭಿಪ್ರಾಯದ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೆ ನಷ್ಟವಿಲ್ಲ. ಇಂತಹ ಆಚರಣೆ ನಡೆಯಬೇಕಾಗಿಲ್ಲವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಕ್ಕೆ ದೇವಸ್ಥಾನ ಮಂಡಳಿ ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮೀಜಿಗಳ ಮನವೊಲಿಸಲಿ: ಪೇಜಾವರ ಶ್ರೀ

    ಕುಕ್ಕೆ ದೇವಸ್ಥಾನ ಮಂಡಳಿ ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮೀಜಿಗಳ ಮನವೊಲಿಸಲಿ: ಪೇಜಾವರ ಶ್ರೀ

    ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಠಕ್ಕೂ ದೇವಾಲಯಕ್ಕೂ ನಡುವೆ ಕಾಣಿಸಿಕೊಂಡಿರುವ ಭಿನ್ನಮತ ತಾರಕ್ಕೇರಿದ್ದು, ಈ ವಿವಾದವನ್ನು ಬಗೆಹರಿಸಲು ಜಿಲ್ಲೆಯ ಅಷ್ಟಮಠ ಮಧ್ಯಪ್ರವೇಶ ಮಾಡಿದೆ.

    ಉಡುಪಿ ಕೃಷ್ಣಮಠಕ್ಕೆ ಸಂಬಂಧಿಸಿದಂತೆ ಅಷ್ಟಮಠಾಧೀಶರು ಈ ವಿಚಾರದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿಗಳ ಬೆಂಬಲಕ್ಕೆ ನಿಂತಿದ್ದಾರೆ. ಸುಬ್ರಹ್ಮಣ್ಯ ಮಠವು ಮಧ್ವ ಮತಕ್ಕೆ ಸಂಬಂಧಪಟ್ಟ ಧಾರ್ಮಿಕ ಕೇಂದ್ರವಾದ ಕಾರಣ ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರಿಗೆ ಅನಗತ್ಯ ಹಿಂಸೆ ನೀಡಬಾರದು ಎಂದು ಅಷ್ಟಮಠಾಧೀಶರು ಒತ್ತಾಯ ಮಾಡಿದ್ದಾರೆ.

    ಮಠ ಹಾಗೂ ದೇವಾಲಯ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಅನೇಕ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ನಿರಂತರ ಕಿರುಕುಳ ನೀಡುತ್ತಿದೆ. ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಜನರಿಗೆ ಹಾನಿಕಾರಕವಾಗಿ ವರ್ತಿಸುತ್ತಿಲ್ಲ. ಕುಕ್ಕೆ ದೇವಸ್ಥಾನ ಹಾಗೂ ಮಠದ ಸಂಘರ್ಷ ಸರಿಯಲ್ಲ. ಈ ವಿಚಾರದಲ್ಲಿ ದೇವಸ್ಥಾನಕ್ಕೆ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡೋಣ. ಸುಬ್ರಹ್ಮಣ್ಯ ಮಠದಿಂದ ತೊಂದರೆಯಾದರೆ ಸರಿಪಡಿಸೋಣ. ಸುಬ್ರಹ್ಮಣ್ಯ ಶ್ರೀಗಳ ಜೊತೆ ಮಾತಮಾಡುತ್ತೇನೆ ನಾನೇ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಹೇಳಿದರು.

    ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಠಕ್ಕೆ ಗೌರವ ಸಿಗುತ್ತಿಲ್ಲ. ವಿದ್ಯಾಭೂಷಣ ಶ್ರೀ ಇದ್ದಾಗ ಇದ್ದ ಗೌರವವಾದ್ರೂ ಸಿಗಬೇಕು. ದೇವಸ್ಥಾನ, ಮಠ ಸ್ವತಂತ್ರವಾಗಿ ನಡೆಯಬೇಕು. ಎಲ್ಲಾ ಪಕ್ಷಗಳು, ಎಲ್ಲಾ ಜನರ ಸಹಕಾರ ಬೇಕು. ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈ ಬಿಡುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಬೇಕು. ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮಿಗಳ ಮನ ಒಲಿಸಬೇಕು ಎಂದು ತಿಳಿಸಿದರು.

    ಪರ್ಯಾಯ ಪಲಿಮಾರು ಸ್ವಾಮೀಜಿ, ಕಾಣಿಯೂರು ಮಠಾಧೀಶರ ಹಾಗೂ ಸೋದೆ ಮಠಾಧೀಶರು ಜೊತೆಯಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಟ್ಟರೆ ನಾವು ಸಹಿಸಲ್ಲ. ಮಠದ ಗೋಶಾಲೆಗೆ ಬರುವ ನೀರನ್ನು ದೇವಸ್ಥಾನ ಸ್ಥಗಿತಗೊಳಿಸಿದೆ. ಧ್ವನಿವರ್ಧಕವನ್ನು ಮಠದ ಕಡೆಗೆ ಮುಖ ಮಾಡಿ ಇಟ್ಟು ಪೂಜೆಗೆ ಅಡ್ಡಿ ಪಡಿಸಲಾಗುತ್ತಿದೆ. ಸರ್ಪ ಸಂಸ್ಕಾರಕ್ಕೆ ಮಠದಲ್ಲಿ ಮಾಡಲು ಯಾವುದೇ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮುಸ್ಲಿಮರು ಒಪ್ಪಿದ್ರೆ ಈ ಬಾರಿಯೂ ಇಫ್ತಾರ್ ಕೂಟ- ವಿಶ್ವೇಶತೀರ್ಥ ಸ್ವಾಮೀಜಿ

    ಮುಸ್ಲಿಮರು ಒಪ್ಪಿದ್ರೆ ಈ ಬಾರಿಯೂ ಇಫ್ತಾರ್ ಕೂಟ- ವಿಶ್ವೇಶತೀರ್ಥ ಸ್ವಾಮೀಜಿ

    ಉಡುಪಿ: ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ ಅಂತ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಈ ಬಾರಿ ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಒಪ್ಪಿದರೆ ಎಲ್ಲವೂ ಅಂದುಕೊಂಡಂತೆ ಆದರೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಅಂತ ಹೇಳಿದರು.

    ಅಲ್ಪಸಂಖ್ಯಾತರನ್ನು ಮತ್ತು ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು ಎಂದು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ. ಈಗಲೂ ಅದೇ ಹೇಳುತ್ತೇನೆ. ನಾನು ಅಂಬೇಡ್ಕರ್ ವಿರೋಧಿಯಲ್ಲ. ಎಲ್ಲಾ ಧರ್ಮ, ಜಾತಿಯವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದು ಪೇಜಾವರ ಶ್ರೀ ಹೇಳಿದರು.

  • ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

    ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

    ಉಡುಪಿ: ಧರ್ಮಸಂಸತ್ ಪ್ರಮುಖ ಅಂಗವಾದ ಹಿಂದೂ ವೈಭವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ನಗರದ ರಾಯಲ್ ಗಾರ್ಡನ್ ನಲ್ಲಿ ನಡೆಯುವ ಹಿಂದೂ ವೈಭವ ಪ್ರದರ್ಶನವನ್ನು ಪೇಜಾವರ ಶ್ರೀ ಉದ್ಘಾಟಿಸಿದರು.

    ಈ ವೇಳೆ ಕೃಷ್ಣಮಠದ ವ್ಯಾಪ್ತಿ ಅಂದರೆ ರಥಬೀದಿಯಿಂದ ಹೊರವಲಯದಲ್ಲಿ ನಡೆಯುವ ಧರ್ಮ ಸಂಸತ್ತು ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಭಾಗಿಯಾಗುವುದು ಎಷ್ಟು ಸರಿ ಎಂಬ ಚರ್ಚೆ ಸಣ್ಣಮಟ್ಟದಲ್ಲಿ ಶುರುವಾಗಿದೆ. ರಥಬೀದಿಯಿಂದ ಪರ್ಯಾಯ ಪೀಠದಲ್ಲಿರುವ ಸ್ವಾಮೀಜಿ ಹೊರಗೆ ಹೋಗುವಂತಿಲ್ಲ ಎಂಬುದು ಈವರೆಗೆ ನಂಬಿಕೊಂಡು ಬಂದ ಸಂಪ್ರದಾಯ. ಆದರೆ ಈಗ ಪೇಜಾವರ ಶ್ರೀ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೇ ಎನ್ನುವ ಪ್ರಶ್ನೆ ಸಾಂಪ್ರದಾಯಿಕರ ವಲಯದಲ್ಲಿ ಮೂಡಿದೆ.

    ದ್ವೈತ ಮತದ ಸ್ಥಾಪಕ ಮದ್ವಾಚಾರ್ಯರರ ಸಹೋದರ ವಿಷ್ಣುತೀರ್ಥರ ಗ್ರಂಥದಲ್ಲಿ ಉಲ್ಲೇಖವಾದ ಪ್ರಕಾರ, ಕಾಲು ಯೋಜನಾ ದೂರ ಹೋದಲ್ಲಿ ಅಪಚಾರವಾಗಲ್ಲ ಎಂದಿದೆ. ಗ್ರಂಥದ ಉಲ್ಲೇಖದ ಅನುಸಾರ ಕಾಲು ಯೋಜನ ದೂರ ಹೋಗಲು ಅವಕಾಶ ಇರುವುದರಿಂದ ಇದು ಮಠದ ಸಂಪ್ರದಾಯ ಉಲ್ಲಂಘನೆ ಆಗುವುದಿಲ್ಲ ಎಂದು ಕೆಲವರು ಹೇಳಿದ್ದಾರೆ.

    ಕಾಲು ಯೋಜನಾ ಅಂದರೆ ಸುಮಾರು ನಾಲ್ಕು ಕಿಲೋಮೀಟರ್ ಗಿಂತ ಸ್ವಲ್ಪ ಜಾಸ್ತಿಯಾಗುತ್ತದೆ. ಹಾಗಾಗಿ ಇಂದು ನಡೆದ ಕಾರ್ಯಕ್ರಮ ಅರ್ಧ ಕಿಲೋಮೀಟರಷ್ಟೇ ಇದೆ. ಪರ್ಯಾಯ ಪೀಠದ ಯತಿ ಬೆಳಗ್ಗೆ ಪೂಜೆ ಮುಗಿಸಿ ರಾತ್ರಿ ಪೂಜೆಗೆ ಹಾಜರಾಗಬೇಕೆಂಬ ಷರತ್ತಿಗೆ ಅನುಸರವಾಗಿ ಈ ನಿಬಂಧನೆ ಹುಟ್ಟಿಕೊಂಡದ್ದೇ ಹೊರತು ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬುದು ಸಂಪ್ರದಾಯವೇನಲ್ಲ ಎಂದು ಕೆಲ ಧಾರ್ಮಿಕ ವಿದ್ವಾಂಸರು ಹೇಳುತ್ತಾರೆ.

    ಹಿಂದೂ ವೈಭವಕ್ಕೆ ಹೆಚ್ಚು ದಿನ ಬೇಡ:
    ಕಾರ್ಯಕ್ರಮ ನಡೆಯುವ ರಾಯಲ್ ಗಾರ್ಡನ್ ಗೆ ಶ್ರೀಕೃಷ್ಣ ಮಠದಿಂದ ಪೇಜಾವರ ಶ್ರೀ ಅವರು ಗಾಲಿ ಕುರ್ಚಿ ಮತ್ತು ಪಾದಯಾತ್ರೆ ಮೂಲಕ ಆಗಮಿಸಿದರು. ಗೋವು ಮತ್ತು ಕರುವಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ಝೆಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ಮೈದಾನವನ್ನು ಪ್ರವೇಶ ಮಾಡಿದರು. ಆರ್‍ಎಸ್‍ಎಸ್ ಸಹ ಕಾರ್ಯವಾಹಕ ಭಾಗಯ್ಯ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡಿದ ಪೇಜಾವರ ಶ್ರೀ, ಧರ್ಮ ಸಂಸತ್ತು ಕಾರ್ಯಕ್ರಮದ ಮೂಲಕ ಹಿಂದೂ ಧರ್ಮದ ವೈಭವ ಮತ್ತೆ ದೇಶದಲ್ಲಿ ಮರುಕಳಿಸಬೇಕು. ಧರ್ಮ ಸಂಸತ್ತೇ ಇದಕ್ಕೆ ವೇದಿಕೆ. ಹಿಂದೂ ಧರ್ಮ ವೈಭವಕ್ಕೆ ಹೆಚ್ಚು ಕಾಯುವ ಅಗತ್ಯವಿಲ್ಲ ಎಂದರು.

    ಇದನ್ನೂ ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

    ಭಾಗಯ್ಯ ಮಾತನಾಡಿ, ದೇಶದ ಹಿಂದೂಗಳಿಗೆ ಆತಂಕ ಬೇಡ ಹಿಂದೂ ಧರ್ಮದ ವೈಭವ ಮತ್ತೆ ದೇಶದಲ್ಲಿ ಮರುಕಳಿಸುತ್ತದೆ. ಹಿಂದೂಗಳ ಸಾಧನೆ ವಿಶ್ವಕ್ಕೇ ಶ್ರೇಷ್ಠ. ಅದನ್ನು ಸಂತರು ಪ್ರಚಾರಪಡಿಸುತ್ತಾರೆ. ನಮ್ಮ ಋಷಿ ಮತ್ತು ಸಂತರ ಛಾಪು ವಿಶ್ವದ ಮುಂದೆ ಪ್ರದರ್ಶನವಾಗಲಿದೆ ಎಂದರು.

  • ಸಿಎಂ ಕೃಷ್ಣ ಮಠಕ್ಕೆ ಬಾರದೇ ಇರೋದಕ್ಕೆ ಕಾರಣ ತಿಳಿಸಿದ ಪೇಜಾವರ ಶ್ರೀ

    ಸಿಎಂ ಕೃಷ್ಣ ಮಠಕ್ಕೆ ಬಾರದೇ ಇರೋದಕ್ಕೆ ಕಾರಣ ತಿಳಿಸಿದ ಪೇಜಾವರ ಶ್ರೀ

    ಉಡುಪಿ: ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬುದ್ದಿಜೀವಿಗಳ ಒತ್ತಡವಿದೆ. ಕೃಷ್ಣಮಠಕ್ಕೆ ಹೋಗಬೇಡಿ ಎಂದು ಅವರೇ ಒತ್ತಡ ಹೇರುತ್ತಿದ್ದಾರೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ನಮಗೂ ಸಿದ್ದರಾಮಯ್ಯರಿಗೂ ಹಲವು ಬಾರಿ ಭೇಟಿಯಾಗಿದೆ. ಚೆನ್ನಾಗಿಯೇ ಮಾತನಾಡಿಕೊಂಡಿದ್ದೇವೆ. ಬುದ್ಧಿ ಜೀವಿಗಳು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಠಕ್ಕೆ ಹೋಗಬೇಡಿ ಅಂತ ಹೇಳುತ್ತಾರೆ. ಕೆಲವು ಬುದ್ದಿಜೀವಿಗಳಿಗೆ ಕೃಷ್ಣಮಠ ಆಗುವುದಿಲ್ಲ. ಶ್ರೀಕೃಷ್ಣ – ಪೇಜಾವರಶ್ರೀ ಅಂದ್ರೆ ಕೆಲ ಬುದ್ಧಿಜೀವಿಗಳಿಗೆ ಆಗಲ್ಲ ಅಂತ ತಿರುಗೇಟು ನೀಡಿದರು.

    ಸಿಎಂ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಈ ಹಿಂದೆ ಹಲವು ಬಾರಿ ಆಹ್ವಾನ ಕೊಟ್ಟಿದ್ದೆವು. ಅವರು ಬರುವುದಿಲ್ಲ ಅಂತ ಗೊತ್ತಾದ ಮೇಲೆ ಈ ಬಾರಿ ಆಹ್ವಾನಿಸಿಲ್ಲ, ಆಸಕ್ತಿಯಿಲ್ಲ ಎಂದ ಮೇಲೆ ಈ ಬಾರಿ ಆಹ್ವಾನ ನೀಡಲಿಲ್ಲ. ಸಿಎಂ ಕೃಷ್ಣಮಠಕ್ಕೆ ಬರುವ ಆಸಕ್ತಿಯೂ ತೋರಿಸಿಲ್ಲ. ಮುಂದೊಮ್ಮೆ ಬರುವ ಆಶ್ವಾಸನೆಯೂ ನೀಡಿಲ್ಲ ಆ ಮನಸ್ಸು ಸಿದ್ದರಾಮಯ್ಯ ಅವರಿಗೆ ಇದ್ದಹಾಗಿಲ್ಲ ಅಂತ ಹೇಳಿದರು.

    ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿಎಂ ಉಡುಪಿಗೆ ಭೇಟಿ ನೀಡಿದ್ದರು. ಈ ವೇಳೆ ಕೃಷ್ಣ ಮಠಕ್ಕೆ ಯಾಕೆ ಭೇಟಿ ನೀಡುವುದಿಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಈ ಹಿಂದೆ ಮಠಕ್ಕೆ ಹೋಗಿದ್ದೆ. ಆದರೆ ಈಗ ಹೋಗಲ್ಲ. ಮಠದಿಂದ ಈ ಬಾರಿ ನನಗೆ ಆಹ್ವಾನವೂ ಇಲ್ಲ ಎಂದರು. ಪೇಜಾವರ ಶ್ರೀಗಳ ಜೊತೆ ನನಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾನು ಆರೂವರೆ ಕೋಟಿ ಜನರ ಜೊತೆ ಚೆನ್ನಾಗಿಯೇ ಇದ್ದೇನೆ. ಬಸವಣ್ಣನವರ ವಚನವನ್ನು ಹೇಳಿ ತೆರಳಿದ್ದರು.

     

  • ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

    ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಮತ್ತು ನಮಾಜ್ ಕಾರ್ಯಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ಶ್ರೀರಾಮಸೇನೆ ಭಜನೆ- ಪೂಜೆ ಮಾಡಿ ಪ್ರತಿಭಟನೆ ನಡೆಸಿದೆ. ನಗರದ ಸರ್ವೀಸ್ ಬಸ್ ನಿಲ್ದಾಣ ಸಮೀಪದ ಕ್ಲಾಕ್ ಟವರ್ ಮುಂಭಾಗ ಈ ಪ್ರತಿಭಟನೆ ನಡೆಯಿತು.

    ಶ್ರೀರಾಮಸೇನೆ ಸಂಘಟನೆಗೆ ಹಿಂದೂ ಜನಜಾಗೃತಿ ಸಮಿತಿ ಬೆಂಬಲಿಸಿತು. ಕ್ಲಾಕ್ ಟವರ್ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದೇವರ ನಾಮ ಮತ್ತು ಭಜನೆಗಳನ್ನು ಹಾಡುವ ಮೂಲಕ ಇಫ್ತಾರ್ ಕೂಟ ಮತ್ತು ನಮಾಜ್ ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸಿದರು.

    ಈ ಸಂದರ್ಭ ಮಾತನಾಡಿದ ಶ್ರೀರಾಮ ಸೇನೆಯ ಮಂಗಳೂರು ಪ್ರಾಂತ್ಯ ಪ್ರಮುಖ್, ಇಫ್ತಾರ್ ಕೂಟಕ್ಕೆ ನಮ್ಮ ವಿರೋಧವಿಲ್ಲ. ಮುಂದೆ ನಮಾಜ್ ಮಠದ ವ್ಯಾಪ್ತಿಯಲ್ಲಿ ನಡೆಯಬಾರದು. ಪೇಜಾವರ ಶ್ರೀಗಳು ನಮ್ಮ ಅತ್ಯುನ್ನತ ಗುರುಗಳು. ಅವರಿಗೆ ಸಮಾನವಾದ ಗುರುಗಳು ಮತ್ತೊಬ್ಬರಿಲ್ಲ. ಆದ್ರೆ ನಮಾಜ್ ಮಾಡಿದ್ದು ಸರಿಯಲ್ಲ ಎಂದರು. ಮುಂದಿನ ಬಾರಿ ಬೇರೆ ಕಡೆಯಲ್ಲಿ ಇಫ್ತಾರ್ ಆಯೋಜಿಸಿ. ಆವಾಗ ಶ್ರೀರಾಮ ಸೇನೆ ಕೂಡಾ ಪಾಲ್ಗೊಳ್ಳುತ್ತದೆ ಎಂದು ಹೇಳಿದರು.

    ಮಠದಲ್ಲಿ ನಡೆದ ಇಫ್ತಾರ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ಮನಸ್ಸಿಗೆ ಆದ ನೋವನ್ನು ಈ ಮೂಲಕ ತೋರ್ಪಡಿಸಿದ್ದೇವೆ. ಹಿಂದೂ ಸಮಾಜಕ್ಕಾದ ನೋವನ್ನು ಈ ರೀತಿಯಲ್ಲಿ ತೋಡಿಕೊಂಡಿದ್ದೇವೆ ಎಂದು ವಕ್ತಾರ ಜಯರಾಮ ಅಂಬೇಕಲ್ ಹೇಳಿದರು.

    ಪರಧರ್ಮ ದ್ವೇಷದ ಪರಮಾವಧಿ: ಶ್ರೀರಾಮ ಸೇನೆಯ ಪ್ರತಿಭಟನೆಯ ವಿರುದ್ಧ ಗರಂ ಆಗಿ ಪೇಜಾವರ ಶ್ರೀ ಪ್ರತಿಕ್ರಿಯಿಸಿ, ಇದು ಪರಧರ್ಮ ದ್ವೇಷದ ಪರಮಾವಧಿ ಎಂದು ಚಾಟಿ ಬೀಸಿದರು. ಮುತಾಲಿಕ್ ನೀಡಿದ ಹಿಂಸಾತ್ಮಕ- ರಕ್ತಪಾತದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ನನ್ನ ಧೋರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇಫ್ತಾರ್ ಮಾಡಿದ್ದರಿಂದ ಧರ್ಮಕ್ಕೆ ಏನು ನಷ್ಟವಾಯ್ತು, ಏನು ಹಾನಿಯಾಯ್ತು..? ಎಂದು ಪ್ರಶ್ನೆ ಹಾಕಿದ್ದಾರೆ. ಇದನ್ನೆಲ್ಲ ವಿರೋಧಿಸುವವರಿಗೆ ಶಾಸ್ತ್ರವೇ ಗೊತ್ತಿಲ್ಲ. ಪ್ರತಿಭಟನೆಗಳಿಂದ ನಾನು ವಿಚಲಿತನಾಗಿಲ್ಲ ಎಂದರು.

    ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಕೃಷ್ಣಮಠವನ್ನು ಶುದ್ಧೀಕರಿಸುವ ಪ್ರಶ್ನೆಯೇ ಇಲ್ಲ ಎಂದ ಪೇಜಾವರ, ದೇವರ ಪ್ರಾರ್ಥನೆ ಮಾಡಿದರೆ ಅದು ತಪ್ಪಾ..? ಅದಕ್ಕೆ ಶುದ್ಧ ಮಾಡಬೇಕಾ. ಧರ್ಮಶಾಸ್ತ್ರಗಳ ವಿರೋಧ ನಾನು ಮಾಡಿಲ್ಲ. ಮಠವನ್ನು ಶುದ್ಧ ಮಾಡಲು ಕಾರಣ ಬೇಕಲ್ಲ. ಹಿಂದೂ ಧರ್ಮದಲ್ಲಿ ದ್ವೈತ- ಅದ್ವೈತ- ವಿಶಿಷ್ಟಾದ್ವೈತದ ಸಹಬಾಳ್ವೆ ಇದ್ದಂತೆ, ಬೇರೆ ಧರ್ಮಗಳ ನಡುವೆ ಸಹಿಷ್ಣುತೆ ಇದ್ದರೇನು ತಪ್ಪು ಎಂದು ಪ್ರಶ್ನಸಿದ್ದಾರೆ. ಧೈರ್ಯ ಇದ್ದರೆ ನನ್ನಲ್ಲಿ ಈ ಬಗ್ಗೆ ಚರ್ಚೆ ಮಾಡಲು ಬನ್ನಿ ಎಂದು ಪೇಜಾವರಶ್ರೀ ಮುತಾಲಿಕ್ ಗೆ ಹಾಗೂ ಶ್ರೀರಾಮ ಸೇನೆಗೆ ಶ್ರೀಗಳು ಬಹಿರಂಗ ಸವಾಲು ಹಾಕಿದ್ದಾರೆ.

    ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಶ್ರೀಗಳ ಮಾತಿಗೆ ದನಿಗೂಡಿಸಿ, ರಕ್ತಪಾತ ಮಾಡುವುದಾದರೆ ಮೊದಲು ನಮ್ಮ ಮೇಲೆ ಮಾಡಲಿ. ನಾವು 2 ಸಾವಿರ ಮಂದಿ ಮುಸ್ಲಿಮರು ಮಠದ ಪರ ಇದ್ದೇವೆ. ವಿಶ್ವಮಟ್ಟದಲ್ಲಿ ಉಡುಪಿಗೆ ಪ್ರಖ್ಯಾತಿ ಇದೆ. ರಕ್ತಪಾತ ಎಂದು ಮುತಾಲಿಕ್ ಯಾರ ವಿರುದ್ಧ ಮಾತನಾಡುತ್ತಿದ್ದಾರೆ..? ಉಳ್ಳಾಲದ ದರ್ಗಾದ ಗರ್ಭಗುಡಿಯ ಒಳಗೆ ಬರುವಂತೆ ಪ್ರಮೋದ್ ಮುತಾಲಿಕ್‍ಗೆ ಸವಾಲು ಹಾಕಿದ್ರು.

  • ಪೂಜೆ ವೇಳೆ ಜಾರಿ ಬಿದ್ದ ಪೇಜಾವರ ಶ್ರೀ – ಗಾಯವಾದ್ರೂ ಲಕ್ಷ ತುಳಸಿ ಅರ್ಚನೆ

    ಪೂಜೆ ವೇಳೆ ಜಾರಿ ಬಿದ್ದ ಪೇಜಾವರ ಶ್ರೀ – ಗಾಯವಾದ್ರೂ ಲಕ್ಷ ತುಳಸಿ ಅರ್ಚನೆ

    ಉಡುಪಿ: ಸದಾ ಚಟುವಟಿಕೆಯಿಂದಿರುವ ಪೇಜಾವರ ಸ್ವಾಮೀಜಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನದ ಪೂಜೆಯ ವೇಳೆಗೆ ಕಾಲುಜಾರಿ ಬಿದ್ದಿದ್ದಾರೆ ಎಂಬ ಮಾಹಿತಿ ಕೃಷ್ಣಮಠದಿಂದ ಸದ್ಯಕ್ಕೆ ಲಭ್ಯವಾಗಿದೆ.

    ಶ್ರೀಗಳು ಜಾರಿ ಬಿದ್ದಾಗ ಅವರ ಭುಜಕ್ಕೆ ಸಣ್ಣ ಗಾಯವಾಗಿದೆ. ತಕ್ಷಣ ಸ್ವಾಮೀಜಿಯ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ಆದರೆ ಗಾಯವಾದ ಪರಿವೆಯೇ ಇಲ್ಲದ ಸ್ವಾಮೀಜಿ ನಿರಂತರ ಚಟುವಟಿಕೆಯಿಂದಿದ್ದಾರೆ.

    ದೈನಂದಿನ ಚಟುವಟಿಕೆಗಳಿಗೂ ಹೆಚ್ಚುವರಿಯಾಗಿ ಲಕ್ಷ ತುಳಸಿ ಅರ್ಚನೆಯಲ್ಲಿ ಭಾಗಿಯಾಗಿದ್ದಾರೆ. ಪಾಠ, ಪ್ರವಚನ, ಪೂಜೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ವಾಮೀಜಿ ಆರೋಗ್ಯದಿಂದಿದ್ದಾರೆ ಎಂದು ಸ್ವಾಮೀಜಿ ಆಪ್ತರು ಹೇಳಿದ್ದಾರೆ. ಬ್ಯಾಂಡೇಜ್ ಕೂಡಾ ಹಾಕಿಕೊಳ್ಳದೆ ಪೇಜಾವರ ಶ್ರೀಗಳು ಮಠದೊಳಗೆ ಓಡಾಡುತ್ತಿದ್ದಾರೆ.