Tag: Pejavara Shree

  • ಸುದ್ದಿ ಕೇಳಿ ದುಃಖವಾಯಿತು, ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಲಿ- ಪೇಜಾವರಶ್ರೀ

    ಸುದ್ದಿ ಕೇಳಿ ದುಃಖವಾಯಿತು, ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಲಿ- ಪೇಜಾವರಶ್ರೀ

    ಉಡುಪಿ: ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ ವಿಚಾರ ತಿಳಿದು ಮನಸ್ಸಿಗೆ ಅತೀವ ಖೇದವಾಗಿದೆ. ಸಂಗೀತ ಲೋಕವನ್ನು ಪ್ರೀತಿಸುವ ಎಲ್ಲರಿಗೆ ಇದು ದುಃಖಕರ ವಿಚಾರ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪದ ಸೂಚಿಸಿದ್ದಾರೆ.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಕುರಿತು ಮಾತನಾಡಿದ ಅವರು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮನೆಮಾತಾಗಿದ್ದರು. ಕೋಟ್ಯಂತರ ಸಂಗೀತ ರಸಿಕರನ್ನು ಸೃಷ್ಟಿ ಮಾಡಿದ್ದರು. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದದ್ದು. ಅವರ ಅನಾರೋಗ್ಯದ ಸಂದರ್ಭ ಕೂಡ ಬಹಳಷ್ಟು ಮಂದಿ ಅವರಿಗಾಗಿ ಪ್ರಾರ್ಥನೆ ಮಾಡಿದ್ದರು ಎಂದು ಸ್ವಾಮೀಜಿ ಹೇಳಿದರು.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಬೇಕು. ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ. ಅವರ ಕುಟುಂಬಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಪೇಜಾವರಶ್ರೀ ಹೇಳಿದರು.

  • ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    – ಶ್ರೀಗಳ ಚಾತುರ್ಮಾಸ್ಯ ಸಮಾಪ್ತಿ

    ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವೃತಾಚರಣೆ ಅಂತ್ಯಗೊಂಡಿದೆ. ಪೇಜಾವರ ಮಠದ ಶಾಖಾ ಮಠವಾಗಿರುವ ನೀಲಾವರದಲ್ಲಿ ಈ ಬಾರಿ ಶ್ರೀಗಳು ವೃತಾಚರಣೆ ಕೈಗೊಂಡಿದ್ದರು. ಎರಡು ತಿಂಗಳುಗಳ ಕಾಲ ಪೂಜೆ ಪುನಸ್ಕಾರ, ವ್ರತಾಚರಣೆ ಜೊತೆ ಗೋವುಗಳ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

    ಚಾತುರ್ಮಾಸ್ಯದ ಕೊನೆಯ ಪೂಜೆಯನ್ನು ಶ್ರೀಗಳು ನೆರವೇರಿಸಿದದರು. ಆರಂಭದಲ್ಲಿ ಪಟ್ಟದ ದೇವರಿಗೆ ನಂತರ ಗೋಶಾಲೆಯ ಕೆರೆಯ ಮಧ್ಯೆ ಇರುವ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ಅರ್ಪಿಸಿದರು. ಚಾತುರ್ಮಾಸ್ಯ ಆರಂಭದಲ್ಲಿ ಮೃತ್ತಿಕೆಯನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಾತುರ್ಮಾಸದ ಅಂತ್ಯಕಾಲದಲ್ಲಿ ಮೃತ್ತಿಕಾ ವಿಸರ್ಜನೆಯನ್ನು ದೇವಸ್ಥಾನದ ಕೆರೆಯಲ್ಲಿ ಶ್ರೀಗಳು ನೆರವೇರಿಸಿದರು. ಚಾತುರ್ಮಸ್ಯ ವೃತಾಚರಣೆಯನ್ನು ಬಿಟ್ಟ ನಂತರ ಭಕ್ತಾದಿಗಳಿಗೆ ತೀರ್ಥವನ್ನು ಕೊಡುವ ಸಂಪ್ರದಾಯವಿದೆ. ಹೀಗಾಗಿ ಸ್ವತಃ ಸ್ವಾಮೀಜಿಯವರೇ ತೀರ್ಥ ವಿತರಣೆ ಮಾಡಿದರು.

    ಚತುರ್ಮಸ್ಯ ಸಮಾಪ್ತಿ ಆದ ಹಿನ್ನೆಲೆ ನೀಲಾವರ ಗೋಶಾಲೆಯಲ್ಲಿ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಏರ್ಪಡಿಸಲಾಗಿತ್ತು. ಒಂದು ಊರಿನಲ್ಲಿ ಸ್ವಾಮೀಜಿ ವ್ರತಾಚರಣೆಯನ್ನು ಕೈಗೊಂಡರೆ ವೃತ ಮುಗಿದ ಮೇಲೆ ಅವರು ಊರನ್ನು ಬಿಡಬೇಕು ಎಂಬ ನಂಬಿಕೆಯಿದೆ. ಸಂಪ್ರದಾಯದಂತೆ ಸ್ವಾಮೀಜಿಯವರು ಸೀಮೋಲ್ಲಂಘನ ಮಾಡಿದರು. ನೀಲಾವರದಿಂದ ಎರಡು ಕಿಲೋಮೀಟರ್ ನಷ್ಟು ದೂರ ಇರುವ ಸೀತಾನದಿಯಲ್ಲಿ ಪ್ರಕ್ರಿಯೆ ನೆರವೇರಿತು. ನದಿ ತಟದ ಪಂಚಮಿಕಾನ ನಾಗ ಕ್ಷೇತ್ರದಲ್ಲಿ ಸ್ವಾಮೀಜಿಗಳು ದೋಣಿಯಲ್ಲಿ ಕುಳಿತು ಸೀತಾನದಿಯನ್ನು ದಾಟುವ ಪ್ರಕ್ರಿಯೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಗ್ರಾಮಸ್ಥರು, ಸ್ಥಳೀಯರಿಂದ ಗೌರವ ಸಲ್ಲಿಸಲಾಯಿತು. ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿ ಊರಿನ ಸಕಲ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿದರು. ಬಿಳಿ ಕುದುರೆ ಏರಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪುರಪ್ರವೇಶ ನಡೆಸಿದರು.

    ಯತಿಗಳಿಗೆ ಚಾತುರ್ಮಾಸ್ಯ ವ್ರತ ಬಹಳ ಮಹತ್ವದ್ದು. ಈ ಸಂದರ್ಭದಲ್ಲಿ ಆಹಾರದ ನಿಯಮ, ಒಂದು ಪ್ರದೇಶದಲ್ಲಿ ಉಳಿದು ದೇವರ ಕಾರ್ಯ ಮಾಡುವಂತದ್ದು. ಈ ಸಂದರ್ಭದಲ್ಲಿ ನಾಲ್ಕು ತಿಂಗಳು ವೃತ ಆಚರಣೆ ಆಗುತ್ತದೆ. ಭಗವಂತ ಪವಡಿಸುವ ಸಂದರ್ಭದಲ್ಲಿ ವಿಶೇಷ ಸಾಧನ ಅನುಷ್ಠಾನಗಳನ್ನು ಮಾಡಬೇಕು. ನಾಲ್ಕು ಮಾಸಗಳ ಕಾಲ ನಾಲ್ಕು ಪ್ರತ್ಯೇಕ ಆಹಾರ ಪದ್ಧತಿಯನ್ನು ಕೂಡ ಅನುಸರಿಸಲಾಗುತ್ತದೆ. ಮೊದಲ ಮಾಸದಲ್ಲಿ ತರಕಾರಿ ಮತ್ತು ಕೆಲವು ಧಾನ್ಯಗಳನ್ನು ಸೇವಿಸುವುದು ನಿಷೇಧ ವಾಗಿರುತ್ತದೆ. 2ನೇ ಮಾಸ ಮೊಸರನ್ನು ಸಂಪೂರ್ಣವಾಗಿ ತ್ಯಾಗ ಮಾಡುತ್ತೇವೆ. 3ನೇ ತಿಂಗಳಿನಲ್ಲಿ ಹಾಲನ್ನು ಸಂಪೂರ್ಣವಾಗಿ ತ್ಯಾಗ ಮಾಡಿ, ಮತ್ತೆಲ್ಲ ವಸ್ತುಗಳನ್ನು ಉಪಯೋಗ ಮಾಡುತ್ತೇವೆ. ನಾಲ್ಕನೆ ತಿಂಗಳು ದ್ವಿದಳ ಧಾನ್ಯಗಳನ್ನು ಒಳಗೊಳ್ಳುವಂತಹ ತರಕಾರಿ ಮತ್ತು ಯಾವುದೇ ಆಹಾರ ವಸ್ತುಗಳನ್ನು ಸೇವನೆ ಮಾಡುವುದಿಲ್ಲ. ಅಹಿಂಸಾ ವ್ರತವನ್ನು ಪಾಲನೆ ಮಾಡಬೇಕು. ಅದರಲ್ಲೂ ಚಾತುರ್ಮಾಸ್ಯ ಸಂದರ್ಭದಲ್ಲಿ ಓಡಾಟ ಮಾಡುವಂತಿಲ್ಲ. ಇದಕ್ಕೆ ಧೃಡವಾದ ಕಾರಣಗಳಿವೆ. ಮಳೆಗಾಲದಲ್ಲಿ ಹುಳು ಹುಪ್ಪಟೆಗಳು ಜಂತುಗಳು ಹುಟ್ಟುವಂತಹ ಕಾಲ. ಸಂಚಾರ ಕಾಲದಲ್ಲಿ ನಡಿಗೆ, ವಾಹನಗಳ ಅಡಿಗೆ ಬಿದ್ದು ಜೀವಿಗಳು ಸಾವನ್ನಪ್ಪುವ ಸಾಧ್ಯತೆ ಇರುವುದರಿಂದ ಓಡಾಟ ಸಲ್ಲದು ಎಂದು ಪೇಜಾವರಶ್ರೀ ಹೇಳಿದರು.

    ಈ ಕುರಿತು ಮಠದ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ಹಿಂದಿನ ಕಾಲದಲ್ಲಿ ಒಂದು ಊರನ್ನು ಬೇರ್ಪಡಿಸುವುದು ಒಂದು ಬೆಟ್ಟ ಒಂದು ನದಿ. ಚಾತುರ್ಮಾಸ್ಯ ಕುಳಿತುಕೊಂಡ ಯತಿ ಊರನ್ನು ದಾಟಿ ಹೋಗುವುದು, ಒಂದು ಸೀಮೆಯನ್ನು ಬಿಡುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಚಾತುರ್ಮಾಸ್ಯ ವ್ರತವನ್ನು ಸಂಪೂರ್ಣಗೊಳಿಸಿದಂತಹ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೀತಾ ನದಿಯನ್ನು ದಾಟಿ ನಮ್ಮ ಸಂಚಾರವನ್ನು ಆರಂಭಿಸಿದ್ದಾರೆ. ಅವರ ಮಠಾಧೀಶರು 33ನೇ ಚಾತುರ್ಮಾಸ್ಯವನ್ನು ನೀಲಾವರದಲ್ಲಿ ಮಾಡಿದ್ದಾರೆ. ಅಷ್ಟಮಠಗಳ ಪೈಕಿ ಕಲ್ಯಾಣಪುರ ಹೊಳೆಯನ್ನು ದಾಟಿ ಸೀತಾ ನದಿ ಮತ್ತು ಸುವರ್ಣಾ ನದಿಯ ನಡುವೆ ಚಾತುರ್ಮಾಸ್ಯ ಕುಳಿತುಕೊಂಡಿರುವ ಮೊದಲ ಯತಿ ಎಂದು ಹೇಳಿದರು.

  • ರಾಮಮಂದಿರಕ್ಕೆ ಅಂಜನಾದ್ರಿ ಶಿಲೆ – ಪೇಜಾವರಶ್ರೀ ಮೂಲಕ ಅಯೋಧ್ಯೆಗೆ ರವಾನೆ

    ರಾಮಮಂದಿರಕ್ಕೆ ಅಂಜನಾದ್ರಿ ಶಿಲೆ – ಪೇಜಾವರಶ್ರೀ ಮೂಲಕ ಅಯೋಧ್ಯೆಗೆ ರವಾನೆ

    ಉಡುಪಿ: ಭಗವಾನ್ ಶ್ರೀ ರಾಮಚಂದ್ರನ ಮಂದಿರಕ್ಕೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯಲಿದೆ. ರಾಮಮಂದಿರ ಶಿಲಾನ್ಯಾಸದ ಹಿನ್ನೆಲೆಯಲ್ಲಿ ದೇಶವ್ಯಾಪಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದೆ.

    ಇಡೀ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರಿನ ಸಂಗ್ರಹ ಒಂದೆಡೆ ನಡೆಯುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಮೆರವಣಿಗೆ ಮೂಲಕ ತಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಒಪ್ಪಿಸಲಾಗಿದೆ.

    ಶ್ರೀರಾಮ ಸೇನೆಯ ರಾಜ್ಯ ಮುಖಂಡ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೆರವಣಿಗೆಯ ಮೂಲಕ ಶಿಲೆಯನ್ನು ಹೊತ್ತು ತಂದರು. ಬ್ರಹ್ಮಾವರ ತಾಲೂಕು ನೀಲಾವರ ಮಠದ ಆವರಣದಲ್ಲಿ ನಡೆದ ಧಾರ್ಮಿಕ ಆಚರಣೆಯ ನಂತರ ಶಿಲೆಯನ್ನು ಪೇಜಾವರ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಲಾಯಿತು. ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಶಿಲೆಗೆ ಅಭಿಷೇಕ ನಡೆಸಿ, ಆರತಿ ಮಾಡಿ ಸ್ವೀಕಾರ ಮಾಡಿದರು. ಅಯೋಧ್ಯೆಯ ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕೂ ಮುನ್ನ ಈ ಶಿಲೆಯನ್ನು ಅಯೋಧ್ಯೆಗೆ ತಲುಪಿಸುವುದಾಗಿ ಭರವಸೆ ನೀಡಿದರು.

    ಹನುಮಂತ ಶ್ರೀರಾಮನ ಪರಮಭಕ್ತ. ಆತ ಅವತರಿಸಿದ ಅಂಜನಾದ್ರಿ ಬೆಟ್ಟದ ಶಿಲೆಯನ್ನು ರಾಮ ಮಂದಿರದ ಶಿಲಾನ್ಯಾಸಕ್ಕೆ ಬಳಸಲಾಗುತ್ತದೆ. ಶಿಲೆಯನ್ನು ಶಿಲಾನ್ಯಾಸಕ್ಕೆ ಅರ್ಪಿಸುವ ಮೂಲಕ ಕರ್ನಾಟಕಕ್ಕೂ ರಾಮಮಂದಿರಕ್ಕೂ ಭಾವನಾತ್ಮಕ ಸಂಬಂಧ ಬೆಸೆದಂತಾಗುತ್ತದೆ. ವಿಶ್ವೇಶ ತೀರ್ಥ ಶ್ರೀಪಾದರಿಗೆ ಅಂಜನಾದ್ರಿ ಬೆಟ್ಟದಲ್ಲಿ ಸನ್ಯಾಸತ್ವ ದೀಕ್ಷೆ ಕೊಡಲಾಗಿತ್ತು.

    ಮುತಾಲಿಕ್ ಮಾತನಾಡಿ, ಪೇಜಾವರಶ್ರೀಗಳು ರಾಮ ಮಂದಿರದ ದೊಡ್ಡ ಹೋರಾಟಗಾರ. ಅವರ ಶಿಷ್ಯ, ರಾಮಮಂದಿರದ ಟ್ರಸ್ಟಿ. ಅವರ ಮೂಲಕ ಶಿಲೆಯನ್ನು ರಾಮಮಂದಿರಕ್ಕೆ ಅರ್ಪಿಸುತ್ತಿದ್ದೇವೆ. ಕೋಟಿ ಕೋಟಿ ಭಕ್ತರ ಕನಸು ನನಸಾಗುತ್ತಿದೆ ಎಂದರು.

  • ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ

    ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ

    ಉಡುಪಿ: ಸ್ವಾಮೀಜಿ ಅಂದರೆ ಪೂಜೆ ಪುನಸ್ಕಾರ ಮಾಡುತ್ತಾರೆ. ಪಾಠ ಪ್ರವಚನ ಮಾಡಿ ಮಠದಲ್ಲಿ ಇರುತ್ತಾರೆ. ಲೋಕ ಸಂಚಾರ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಾರೆ. ಆದರೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇದೆಲ್ಲ ಮಾಡುವ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ.

    ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಸ್ವಾಮೀಜಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ನೀಲಾವರ ಗೋಶಾಲೆಯ ಆವರಣದಲ್ಲಿ ಹೆಬ್ಬಾವಿನ ಮರಿಯೊಂದು ಕಾಣಿಸಿಕೊಂಡಿದೆ. ಈ ಹಾವನ್ನು ಸರಳವಾಗಿ ಯಾವುದೇ ಅಪಾಯವಿಲ್ಲದೇ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿ ಪೇಜಾವರಶ್ರೀ ಎಲ್ಲರ ಹುಬ್ಬೇರಿಸಿದ್ದಾರೆ. ಪೇಜಾವರ ಶ್ರೀಗಳ ಸಾಹಸವನ್ನು ಅವರ ಶಿಷ್ಯರು ಸಹಜ ಕುತೂಹಲದಿಂದ ಕಂಡು ಅಚ್ಚರಿಪಟ್ಟಿದ್ದಾರೆ.

    ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆ ಎಲ್ಲರ ಸಹಜ ಕುತೂಹಲಕ್ಕೆ ಕಾರಣವಾಗಿದೆ. ಪೇಜಾವರಶ್ರೀ ಸುಲಲಿತವಾಗಿ ಹಾವು ಹಿಡಿದು ಗೋಣಿಚೀಲಕ್ಕೆ ತುಂಬಿಸುವ ಸಂದರ್ಭ ಗೋಣಿ ಹಿಡಿದ ಶಿಷ್ಯ ಭಯದಲ್ಲಿ ಗಲಿಬಿಲಿಗೊಂಡ ಪರಿಯೂ ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಂತ ವಿಷಕಾರಿ ಹಾವುಗಳನ್ನು ಹಿಡಿಯದಿರಿ. ತಜ್ಞರನ್ನು ಸಂಪರ್ಕ ಮಾಡಿ ಎಂದು ಪೇಜಾವರಶ್ರೀ ಹೇಳಿದ್ದಾರೆ.

  • ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿ: ರಾಷ್ಟ್ರಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿ ಎಂಟು ದಿನಗಳು ಕಳೆದಿದೆ. ಉಡುಪಿಯಲ್ಲಿ ಶ್ರೀಗಳ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದೆ.

    ವಿಶ್ವೇಶತೀರ್ಥರೇ ಕಟ್ಟಿಸಿದ ಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಉಡುಪಿಯ ಜನತೆ, ಜನಪ್ರತಿನಿಧಿಗಳು, ಗಣ್ಯರ ಕಡೆಯಿಂದ ನುಡಿನಮನ ನಡೆದಿದೆ. ನುಡಿನಮನ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

    ಸಾರ್ವಜನಿಕರ ಒತ್ತಾಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶ್ರೀಗಳನ್ನು ಮಹಾತ್ಮನಿಗೆ ಹೋಲಿಸಿದರು. ಪೇಜಾವರ ಶ್ರೀಗಳ ಜೀವನವೇ ಒಂದು ಪಾಠ. ಅವರ ಪ್ರವಚನ ಅನುಸರಿಸುವ ಅಗತ್ಯವಿಲ್ಲ. ಅವರ ಜೀವನ ಪದ್ಧತಿ ಮತ್ತು ಬದ್ಧತೆ ಅನುಕರಣೆ ಮಾಡಿದರೆ ಸಾಕು ಎಂದರು.

    ಪೇಜಾವರ ಶ್ರೀಗಳು ಜನಮಾನಸದಲ್ಲಿ ಉಳಿಯಬೇಕು. ಅಷ್ಟ ಮಠದ ಶ್ರೀಗಳು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಮಾರಕ ನಿರ್ಮಾಣ, ಅದರ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಪೇಜಾವರ ಶ್ರೀಗಳನ್ನು ಪಡೆದ ಉಡುಪಿ ಧನ್ಯ. ಅವರನ್ನು ಕಳೆದುಕೊಂಡು ಎಲ್ಲಾ ಕ್ಷೇತ್ರಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ನುಡಿನಮನ ಅರ್ಪಿಸಿದರು.

    ಸಾವಿರಾರು ಜನ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪೇಜಾವರ ಶ್ರೀಗಳ ಸ್ಮಾರಕ ಕೃಷ್ಣ ಮಠದಲ್ಲಿ ಸ್ಥಾಪನೆಯಾಗಬೇಕೋ, ಉಡುಪಿಯ ನಗರ ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕೋ ಎಂಬ ಚರ್ಚೆ ಶುರುವಾಗಿದೆ. ಸ್ಮಾರಕ ನಿರ್ಮಾಣ ಮಾಡಬೇಕಾ ಅಥವಾ ಬೃಂದಾವನ ನಿರ್ಮಾಣ ಆಗಬೇಕಾ ಎಂಬ ಬಗ್ಗೆ ಕೂಡಾ ಚರ್ಚೆಗಳು ನಡೆಯುತ್ತಿವೆ.

  • ಮಠಕ್ಕೆ ಯಾರೂ ಬರ್ಬೇಡಿ, ಅಜ್ಜರಕಾಡು ಮೈದಾನಕ್ಕೆ ಬನ್ನಿ: ಭಕ್ತರಲ್ಲಿ ಕಿರಿಯ ಶ್ರೀ ಮನವಿ

    ಮಠಕ್ಕೆ ಯಾರೂ ಬರ್ಬೇಡಿ, ಅಜ್ಜರಕಾಡು ಮೈದಾನಕ್ಕೆ ಬನ್ನಿ: ಭಕ್ತರಲ್ಲಿ ಕಿರಿಯ ಶ್ರೀ ಮನವಿ

    ಉಡುಪಿ: ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಸದ್ಯಕ್ಕೆ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಪೇಜಾವರ ಶ್ರೀಗಳ ದರ್ಶನ ಮಾಡಲು ಅಪಾರ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಆದ್ದರಿಂದ ಭಕ್ತರೇ ಪೇಜಾವರ ಶ್ರೀಗಳನ್ನು ನೋಡಲು ಮಠಕ್ಕೆ ಬರಬೇಡಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಚಿಕಿತ್ಸೆ ನಡುವೆಯೇ ಭಕ್ತರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿತ್ತು. ಆದರೆ ಶ್ರೀಗಳ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರೇ ಶ್ರೀಗಳನ್ನು ನೋಡಲು ಮಠಕ್ಕೆ ಬರಬೇಡಿ. ನಿಮಗಾಗಿ ಒಂದು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಅಜ್ಜರಕಾಡು ಕ್ರೀಡಾಂಗಣಕ್ಕೆ ಬನ್ನಿ. ಅಲ್ಲಿ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಭಕ್ತರಲ್ಲಿ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಮಠದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಜ್ಜರಕಾಡು ಕ್ರೀಡಾಂಗಣ ಇದೆ. ಈಗಾಗಲೇ ಮೈದಾನದಲ್ಲಿ ಪೊಲೀಸರು ತರಾತುರಿಯಲ್ಲಿ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಪೇಜಾವರ ಶ್ರೀ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಸಾರ್ವಜನಿಕರು ಕೂಡ ಮೈದಾನಕ್ಕೆ ದೌಡಾಯಿಸುತ್ತಿದ್ದಾರೆ. ಇನ್ನೂ ಕೆಲವೇ ಗಂಟೆಯಲ್ಲಿ ಪೇಜಾವರ ಶ್ರೀಗಳನ್ನು ಮೈದಾನಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

  • ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಉಡುಪಿ: ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಸದ್ಯ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೂಜಾ ಸಾಮಾಗ್ರಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರವನ್ನು ಸಿಬ್ಬಂದಿ ವಾಹನದೊಳಗೆ ತುಂಬಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ವಿದ್ಯಾಪೀಠಕ್ಕೆ ಈ ಸಾಮಾಗ್ರಿಗಳು ಶಿಫ್ಟ್ ಆಗಲಿವೆ. ಕಿರಿಯ ಸ್ವಾಮೀಜಿಗಳು ಕೂಡ ಸಂಜೆ ವಿದ್ಯಾ ಪೀಠಕ್ಕೆ ತೆರಳಲಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

    ಈಗಾಗಲೇ ಶ್ರೀಗಳ ಸುಮಾರು 30 ಮಂದಿ ಶಿಷ್ಯರು ಶಿಫ್ಟ್ ಆಗಿದ್ದಾರೆ. 6 ಟಿಟಿಯಲ್ಲಿ ಪೂಜಾ ಸಾಮಾಗ್ರಿ ಹಾಗೂ ಶಿಷ್ಯವೃಂದದವರು ತೆರಳಿದ್ದಾರೆ. ಕಿರಿಯ ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ. ಸಂಜೆಯ ವೇಳೆಯ ಪೂಜೆ ವಿದ್ಯಾಪೀಠದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

  • ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲ್ಲ: ಸೂಲಿಬೆಲೆ ಪರ ನಿಂತ ಪೇಜಾವರ ಶ್ರೀಗಳು

    ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲ್ಲ: ಸೂಲಿಬೆಲೆ ಪರ ನಿಂತ ಪೇಜಾವರ ಶ್ರೀಗಳು

    ಬಾಗಲಕೋಟೆ: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ್ರೋಹಿ ಎಂಬ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಸೂಲಿಬೆಲೆ ಪರವಾಗಿ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೂಲಿಬೆಲೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಸೇರಿಸಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಸದಾನಂದಗೌಡರು ಕೂಡ ಕೇಂದ್ರ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾನಂದಗೌಡರು ವೈಯಕ್ತಿಕವಾಗಿ ಹೆಸರು ಹೇಳಿ ಹಾಗೆ ಮಾತಾಡಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಸೂಲಿಬೆಲೆಯವರ ಪರ ನಿಂತರು. ಇದನ್ನೂ ಓದಿ:ಟ್ವಿಟ್ಟರ್‌ನಲ್ಲಿ ಸೂಲಿಬೆಲೆಗೆ ಬ್ಲಾಕ್ ಭಾಗ್ಯ ಕಲ್ಪಿಸಿದ ಸದಾನಂದಗೌಡ

    ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಇನ್ನೂ ಪರಿಹಾರದ ಹಣ ಬಾರದಿರುವುದಕ್ಕೆ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದು, ದೇಶದಲ್ಲಿನ ಆರ್ಥಿಕ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಪತ್ರ ಬರೆಯುವುದಾಗಿ ಶ್ರೀಗಳು ಹೇಳಿದ್ದಾರೆ. ಹಣ ಬಿಡುಗಡೆ ಆಗದಿರುವುದು ನಮಗೂ ಕೂಡ ಆತಂಕವಾಗಿದೆ. ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿದಿಲ್ಲ. ಕರ್ನಾಟಕದಲ್ಲಿ ಮಾತ್ರ ಅಲ್ಲ ಮಹಾರಾಷ್ಟ್ರ, ಗುಜರಾತ್, ಬಿಹಾರ ರಾಜ್ಯಗಳಿಗೂ ಪರಿಹಾರ ಕೊಟ್ಟಿಲ್ಲ. ಬಿಹಾರದಲ್ಲಿ ಕೇವಲ ವೀಕ್ಷಣೆ ಮಾಡಿದ್ದಾರೆ. ಎಲ್ಲಿಯೂ ಹಣ ಬಿಡುಗಡೆಯ ಘೋಷಣೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ದೇಶದಲ್ಲಿ ಆರ್ಥಿಕ ಕೊರತೆ ಇರಬಹುದು ಆದ್ದರಿಂದ ಬಿಡುಗಡೆ ಮಾಡಿಲ್ಲ ಎಂದನಿಸುತ್ತೆ. ಪ್ರಧಾನಿ ಮೋದಿಯವರಿಗೆ ನಾನು ಒಂದು ಪತ್ರ ಸಿದ್ಧ ಮಾಡಿ ಬರೆದಿದ್ದೇನೆ. ಜನತೆ ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ, ದೇಶದ ಬಗ್ಗೆ ಉತ್ತಮ ಕಾರ್ಯ ಮಾಡುತ್ತಿದ್ದೀರಿ, ಒಳ್ಳೆಯ ಆಡಳಿತ ನಡೆಸುತ್ತಿದ್ದೀರಿ, ಹಾಗೆಯೇ ಪರಿಹಾರ ಕೂಡ ನೀಡಬೇಕೆಂದು ಪತ್ರ ಬರೆಯಲಿದ್ದೇನೆ ಎಂದರು. ಇದನ್ನೂ ಓದಿ:ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

    ಹಾಗೆಯೇ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮುಂದೆ ನೆರೆ ಪರಿಹಾರದ ಕುರಿತು ಮಾತನಾಡದೇ ಇರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಸದರು ಬಹಿರಂಗವಾಗಿ ಕೇಳಿಲ್ಲ ಆದರೆ ಅವರು ಪ್ರಧಾನಿ ಬಳಿ ಈ ಬಗ್ಗೆ ಪ್ರಸ್ತಾಪಿಸಿರಬಹುದು. ಅದು ಮಾಧ್ಯಮದಲ್ಲಿ ಪ್ರಸಾರವಾಗಿಲ್ಲವಷ್ಟೆ. ಕೇಳದೇ ಇರೋದಕ್ಕೆ ಸಾಧ್ಯವಿಲ್ಲ. ಕೇಳಳಿಲ್ಲ ಎಂದು ಸಂಸದರ ಮೇಲೆ ಆರೋಪ ಮಾಡಲ್ಲ. ದೇಶದಲ್ಲಿ ಅರ್ಥಿಕ ಸಂಕಷ್ಟ ಇದೆ, ಅದಕ್ಕೆ ಪರಿಹಾರ ಕೊಟ್ಟಿಲ್ಲ ಅನಿಸುತ್ತಿದೆ. ಆದರೆ ಯಾಕೆ ಕೊಟ್ಟಿಲ್ಲ ಅನ್ನೋವುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ನಾನು ಬರೆದ ಪತ್ರದಲ್ಲಿ ನನ್ನ ಭಾವನೆಯನ್ನು ತಿಳಿಸಿದ್ದೇನೆ. ಆದಷ್ಟು ಬೇಗ ರಾಜ್ಯಕ್ಕೆ ಮೋದಿ ಅವರು ಪರಿಹಾರ ನೀಡುತ್ತಾರೆಂಬ ಭರವಸೆ ಇದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು.

  • ದಲಿತರ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀಗಳು

    ದಲಿತರ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀಗಳು

    – ಅನಾರೋಗ್ಯದ ನಡುವೆಯೂ ಪಾದಯಾತ್ರೆ

    ಮೈಸೂರು: ದಲಿತರ ಮೇಲಿನ ಶೋಷಣೆ ಕುಗ್ಗಿಸಲು ಪಾದಯಾತ್ರೆ ಮಾಡುತ್ತಿರುವ ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿ ದಲಿತರ ಕುಟುಂಬಗಳಿಗೆ ಆಶೀರ್ವಾದ ಮಾಡಿದ್ದಾರೆ.

    ಇಂದು ಪೇಜಾವರ ಶ್ರೀಗಳು ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಭೇಟಿ ನೀಡಿದರು. ದಲಿತ ದಂಪತಿ ಚೌಡಪ್ಪ, ರಾಜಮ್ಮ ಅವರ ಮನೆಗೆ ಬಂದು ಆಶೀರ್ವಾದ ಮಾಡಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ವೀಲ್ ಚೇರ್‍ ನಲ್ಲಿ ಕುಳಿತು ಪಾದಯಾತ್ರೆ ಮಾಡುತ್ತಾ ಮನೆಗೆ ಬಂದ ಶ್ರೀಗಳನ್ನು ಗೌರವಿಸಿದ ದಂಪತಿ ಶ್ರೀಗಳ ಕೃಪೆಗೆ ಪಾತ್ರರಾದರು.

    ಈ ವೇಳೆ ಡಿಕೆಶಿ ಪರ ಮಠಾಧೀಶರ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀಗಳು, ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ, ತಟಸ್ಥವಾಗಿರುತ್ತೇನೆ. ಅವರಿಗೆ ಡಿಕೆಶಿ ನಿರಪರಾಧಿ ಎಂದು ತೋರಿದೆ. ಆ ಕಾರಣದಿಂದ ಅವರು ಬೆಂಬಲಿಸುತ್ತಿರಬಹುದು. ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕಾರಿಸಿದರು.

  • ನವವೃಂದಾವನಕ್ಕೆ ಪೇಜಾವರ ಶ್ರೀ ಭೇಟಿ- ಪುನರ್ ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ

    ನವವೃಂದಾವನಕ್ಕೆ ಪೇಜಾವರ ಶ್ರೀ ಭೇಟಿ- ಪುನರ್ ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ

    ಕೊಪ್ಪಳ: ಆನೆಗೊಂದಿಯಲ್ಲಿ ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ನವವೃಂದಾವನಕ್ಕೆ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಭೇಟಿ ನೀಡಿ, ವೃಂದಾವನ ಪುನರ್ ನಿರ್ಮಾಣ ಕಾರ್ಯದ ಕುರಿತು ಚರ್ಚಿಸಿದ್ದಾರೆ.

    ನವವೃಂದಾವನ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಗುರುವಾರ ರಾಯರು ಹಾಗೂ ಸೋಸಲೆ ವ್ಯಾಸರಾಯ ಮಠದ ಶ್ರೀಗಳು ಭೇಟಿ ನೀಡಿದ್ದರು. ಇಂದು ನವವೃಂದಾವನಕ್ಕೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದಾರೆ. ಈ ವೇಳೆ ನವವೃಂದಾವನ ಧ್ವಂಸದ ಬಗ್ಗೆ ಬೇಸರ ವ್ಯಕ್ತಪಡಿಸಿ, ನವವೃಂದಾವನ ಪುನರ್ ನಿರ್ಮಾಣ ಕಾರ್ಯದ ಕುರಿತು ಭಕ್ತರೊಂದಿಗೆ ಶ್ರೀಗಳು ಚರ್ಚೆ ನಡೆಸಿದ್ದಾರೆ.

    ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿದ್ದರು. ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದರಿಂದ ನಿಧಿಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನವಬೃಂದಾವನದಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ. ನವಬೃಂದಾವನ ಮಾಲೀಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿರಲಿಲ್ಲ.