Tag: peasant organizations

  • ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಚಂಡೀಗಢ: ಇಂಧನ ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರವ್ಯಾಪಿ ರೈತ ಸಂಘಟನೆಗಳು ಕೈಗೊಂಡಿರುವ ಪ್ರತಿಭಟನೆ ಮೊದಲ ದಿನ ರೈತರು ರಸ್ತೆ ಮೇಲೆ ಹಾಲು ಚಲ್ಲಿ, ತರಕಾರಿ ಹಾಗೂ ಹಣ್ಣುಗಳನ್ನು ಸುರಿದು ಮುಷ್ಕರ ಪ್ರಾರಂಭಿಸಿದ್ದಾರೆ.

    ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. 130 ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ರೀತಿಯ ರಸ್ತೆ ತಡೆ ನಡೆಸುವುದಿಲ್ಲ ಹಾಗೂ ಶಾಂತಿಯುತವಾಗಿ ಮುಷ್ಕರ ನಡೆಸುವುದಾಗಿದೆ ಭರವಸೆ ನೀಡಿವೆ.

    ಪಂಜಾಬ್‍ನಲ್ಲಿ ರೈತರು ರಸ್ತೆಗೆ ಹಾಲು ಚಲ್ಲಿದರೆ, ಮಹಾರಾಷ್ಟ್ರದ ನಾಸಿಕ್‍ನಲ್ಲಿ ಟೊಮೊಟೊವನ್ನು ರಸ್ತೆಯ ಮೇಲೆ ಸುರಿದು ಪ್ರತಿಭಟಿಸಲಾಗಿದೆ. ನಾಸಿಕ್ ನಿಂದ ಮುಂಬೈವರೆಗೆ 35 ಸಾವಿರ ರೈತರು ಕಾಲ್ನಡಿ ಮೂಲಕ 180 ಕಿ.ಮೀ. ಕ್ರಮಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನು ಓದಿ: ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ಕಾಂಗ್ರೆಸ್‍ನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಹೀಗೆ ಮಾಡುತ್ತಿದ್ದಾರೆ. ಬಿಜೆಪಿ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಹಾಗೂ ಅವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಭೋಪಾಲ್‍ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ರೈತರು ವಿಧಿಸುವ ದರದಲ್ಲಿ ಹಾಲು ಮತ್ತು ತರಕಾರಿಯನ್ನು ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರತಿಭಟನೆ ದೇಶದಲ್ಲಿ ಪ್ರಾರಂಭವಾಗಿದೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಜೂನ್ 1ರಿಂದ ಜೂನ್ 10 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

    ಹತ್ತು ದಿನಗಳ ಕಾಲ ರೈತರು ಹಾಲು ಹಾಗೂ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವುದಿಲ್ಲ. ಹೀಗಾಗಿ ಗ್ರಾಹಕರು ರೈತರ ಬಳಿ ಹೋಗಿ ಅವರು ಹೇಳಿದ ದರ ನೀಡಿ ಖರೀದಿಸಬೇಕು ಎಂದು ರೈತರು ಹೇಳಿದ್ದಾರೆ.

  • ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ಚಂಡಿಗಢ: ರೈತರು ವಿಧಿಸುವ ದರದಲ್ಲಿ ಹಾಲು ಮತ್ತು ತರಕಾರಿಯನ್ನು ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರತಿಭಟನೆಯೊಂದು ಶುಕ್ರವಾರದಿಂದ ದೇಶದಲ್ಲಿ ಕಾಣಿಸಿಕೊಳ್ಳಲಿದೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿವೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಜೂನ್ 1ರಿಂದ ಜೂನ್ 10 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

    ಹತ್ತು ದಿನಗಳ ಕಾಲ ರೈತರು ಹಾಲು ಹಾಗೂ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವುದಿಲ್ಲ. ಹೀಗಾಗಿ ಗ್ರಾಹಕರು ರೈತರ ಬಳಿ ಹೋಗಿ ಅವರು ಹೇಳಿದ ದರ ನೀಡಿ ಖರೀದಿಸಬೇಕು ಎಂದು ರೈತರು ಹೇಳಿದ್ದಾರೆ.

    ಏನಿದು ಪ್ರತಿಭಟನೆ?

    “ಗ್ರಾಮಗಳು ಮುಚ್ಚಿವೆ ಹಾಗೂ ರೈತರು ರಜೆಯಲ್ಲಿದ್ದಾರೆ” ಎನ್ನುವ ಘೋಷಣೆ ಮೇಲೆ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಭಾರತೀಯ ಕಿಸಾನ್ ಯುನಿಯನ್ (ಬಿಕೆಯು) ಪಂಜಾಬ್ ಘಟಕದ ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ ಪ್ರತಿಭಟನೆ ಮುಂದಾಳತ್ವ ವಹಿಸಿದ್ದಾರೆ.

    ಕೃಷಿ ಭೂಮಿ ಉಳುಮೆ ಮಾಡಲು, ನೀರಾವರಿಗೆ ಇಂಧನದ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ಇಂಧನ ದರ ಕಡಿಮೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 15 ದಿನಗಳಲ್ಲಿ ಡೀಸೆಲ್ ದರ ಗಗನಕ್ಕೆರಿದೆ. ಟ್ರ್ಯಾಕ್ಟರ್, ನೀರಾವರಿ ಹಾಗೂ ಯಂತ್ರೋಪಕರಣ ಚಾಲನೆಗೆ ಡೀಸೆಲ್ ಅಗತ್ಯವಾಗಿದೆ. ದಿನದಿಂದ ದಿನಕ್ಕೆ ಕೃಷಿ ಖರ್ಚು ಹೆಚ್ಚಾಗುತ್ತಿದೆ. ಇಂಧನ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಬಲ್ಬೀರ್ ಸಿಂಗ್ ರಾಜೆವಾಲ್ ಹೇಳಿದ್ದಾರೆ.

    ಪ್ರತಿಭಟನೆಯಿಂದ ರೈತರು ತಾವು ಇರುವಲ್ಲಿಯೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿ ಮಾರಬಹುದು. ಇದರಿಂದ ರೈತರು ಲಾಭ ಪಡೆಯುತ್ತಾರೆ ಮತ್ತು ನಗರದ ಜನರು ಕಡಿಮೆ ಬೆಲೆಯಲ್ಲಿ ಹಾಲು ಹಾಗೂ ತರಕಾರಿ ಪಡೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪನ್ನ ಕಡಿಮೆಯಾಗುತ್ತದೆ. ಆಗ ಹಾಲಿನ ಬೆಲೆಯಲ್ಲಿ 7 ರೂ. ಕಡಿಮೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್ ಗೆ 22 ರೂ. ನೀಡಿ ಖರೀದಿಸಿದ ಹಾಲನ್ನು 45 ರೂ. ಮಾರುಕಟ್ಟೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

    ರೈತರು ಟೊಮಾಟೊ ಹಾಗೂ ಕುಂಬಳಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಪ್ರತಿ ಕೆ.ಜಿಗೆ ಕೇವಲ 1 ರೂ., ಈರುಳ್ಳಿ 50 ಪೈಸೆ, 35 ಕೆ.ಜಿ ಕ್ಯಾಪ್ಸಿಕಂಗೆ 25 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಕೆಲವು ರೈತರು ಒಂದು ಲಾಟ್ ಮೆಣಸಿನಕಾಯಿಯನ್ನು 1,700 ರೂ. ಮಾರುತ್ತಾರೆ. ಅದರಲ್ಲಿ ಇಂಧನ ದರ ಹೊರತುಪಡೆಸಿ ಕೃಷಿ ಕಾರ್ಮಿಕರ ಕೂಲಿಯೇ 1,450 ರೂ. ಆಗುತ್ತದೆ ಎಂದು ರಾಜೇವಾಲ್ ಹೇಳಿದರು.

    ಪ್ರತಿಭಟನೆಯಿಂದ ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಗುತ್ತದೆ, ರೈತರ ಸಾಲ ಮನ್ನಾ, ಕನಿಷ್ಠ ಆದಾಯದ ಭದ್ರತೆ ಸಿಗುತ್ತದೆ. ಭಾರತದ ಎಲ್ಲ ರೈತರು ಒಂದೇ ಕುಟುಂಬದವರು ಒಂದೇ ಧ್ವನಿ ಹೊಂದಿದ್ದಾರೆ. ದೇಶದ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲಿವೆ ಎಂದು ರಾಜೇವಾಲ್ ವಿಶ್ವಾಸ ವ್ಯಕ್ತಪಡಿಸಿದರು.