Tag: Peacocks

  • ಗರಿ ಬಿಚ್ಚಿ ಪ್ರಧಾನಿ ಮೋದಿ ಜೊತೆ ಹೆಜ್ಜೆ ಹಾಕಿದ ನವಿಲು

    ಗರಿ ಬಿಚ್ಚಿ ಪ್ರಧಾನಿ ಮೋದಿ ಜೊತೆ ಹೆಜ್ಜೆ ಹಾಕಿದ ನವಿಲು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಾಣಿ, ಪಕ್ಷಿಗಳ ಮೇಲೆ ಬಹಳ ಪ್ರೀತಿ. ಈ ಕಾರಣಕ್ಕೆ ತಮ್ಮ ನಿವಾಸದಲ್ಲಿ ನವಿಲುಗಳನ್ನು ಸಾಕಿದ್ದು, ವಿಡಿಯೋ ರಿಲೀಸ್‌ ಮಾಡಿದ್ದಾರೆ.

    ದೆಹಲಿಯ ಲೋಕಕಲ್ಯಾಣ್‌ ಮಾರ್ಗದಲ್ಲಿರುವ ನಿವಾಸದಲ್ಲಿರುವ ಜಾಗವನ್ನು ಗ್ರಾಮೀಣ ಭಾಗದಲ್ಲಿರುವಂತೆ ಬದಲಾವಣೆ ಮಾಡಿದ್ದಾರೆ. ಹೀಗಾಗಿ ಈ ಜಾಗದಲ್ಲಿ ಹಲವು ಪಕ್ಷಿಗಳು ಗೂಡುಗಳನ್ನು ಕಟ್ಟಿಕೊಂಡಿವೆ.

    ವಿಡಿಯೋದಲ್ಲಿ ಪ್ರಧಾನಿ ಮೋದಿಯವರು ತಮ್ಮ ನಿವಾಸದ ಹೊರಗಡೆ ಮತ್ತು ಒಳಗಡೆ ನವಿಲುಗಳಿಗೆ ಆಹಾರ ಹಾಕುತ್ತಿರುವ ದೃಶ್ಯವಿದೆ. ಅಷ್ಟೇ ಅಲ್ಲದೇ ಮೋದಿ ಬೆಳಗ್ಗೆ ವಾಕಿಂಗ್‌ ಮಾಡುವ ವೇಳೆ ನವಿಲು ಗರಿ ಬಿಚ್ಚಿ ಹೆಜ್ಜೆ ಹಾಕುವುದನ್ನು ನೋಡಬಹುದು.

    ಪ್ರತಿ ದಿನ ವಾಕಿಂಗ್‌ ಮಾಡುವ ಸಂದರ್ಭದಲ್ಲಿ ಪ್ರಧಾನಿ ಜೊತೆ ನವಿಲುಗಳು ಸಹ ಹೆಜ್ಜೆ ಹಾಕುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ವಿಡಿಯೋದಲ್ಲಿ ಪ್ರಧಾನಿ ಓದುತ್ತಿದ್ದಾಗ ನವಿಲು ಆಹಾರವನ್ನು ತಿನ್ನುತ್ತಿರುವ ಫೋಟೋ ಸಹ ಇದೆ.

    1 ನಿಮಿಷ 47 ಸಕೆಂಡಿನ ವಿಡಿಯೋವನ್ನು ಫೇಸ್‍ಬುಕ್‍, ಯೂ ಟ್ಯೂಬ್‍, ಟ್ವಿಟ್ಟರ್ ನಲ್ಲಿ ಅಪ್ಲೋಡ್‍ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಅಪ್ಲೋಡ್‍ ಆದ ಒಂದು ಗಂಟೆಯ ಒಳಗಡೆ ವಿಡಿಯೋ 10 ಲಕ್ಷ ವ್ಯೂ ಕಂಡಿದೆ.

    ಕಳೆದ ವರ್ಷ ಡಿಸ್ಕವರಿ ವಾಹಿನಿಯ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು. ಬಿಯರ್‌ ಗ್ರಿಲ್ಸ್‌ ನಡೆಸಿಕೊಟ್ಟಿದ್ದ ಈ ಕಾರ್ಯಕ್ರಮ ಆಗಸ್ಟ್‌ 12 ರಂದು ರಾತ್ರಿ 9 ಗಂಟೆ ಪ್ರಸಾರಗೊಂಡಿತ್ತು.

     

    https://www.facebook.com/narendramodi/videos/338632440836002/

     

  • ಲಾಕ್‍ಡೌನ್, ನಡು ರಸ್ತೆಯಲ್ಲಿ ನವಿಲುಗಳ ನರ್ತನ- ವಿಡಿಯೋ ನೋಡಿ

    ಲಾಕ್‍ಡೌನ್, ನಡು ರಸ್ತೆಯಲ್ಲಿ ನವಿಲುಗಳ ನರ್ತನ- ವಿಡಿಯೋ ನೋಡಿ

    ನವದೆಹಲಿ: ರಸ್ತೆಗಳಲ್ಲಿ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಸಾಮಾನ್ಯ. ಆದರೆ ಇದೀಗ ಲಾಕ್‍ಡೌನ್‍ನಿಂದಾಗಿ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ವನ್ಯ ಜೀವಿಗಳು ರಸ್ತೆಯನ್ನು ತಮ್ಮದಾಗಿಸಿಕೊಂಡಿವೆ. ಇಂತಹ ಹಲವು ಉದಾಹರಣೆಗಳಿದ್ದು, ಇದೀಗ ಹತ್ತಾರು ನವಿಲುಗಳ ಗುಂಪು ರಸ್ತೆಯಲ್ಲೇ ನರ್ತಿಸಿ, ನಲಿದು ಊಹಿಸಲಾಗದ ಟ್ರಾಫಿಕ್ ಉಂಟುಮಾಡಿವೆ.

    ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಹತ್ತಾರು ನವಿಲುಗಳು ಯಾವುದೇ ಭಯ, ಹಂಗಿಲ್ಲದೆ ರಸ್ತೆಯಲ್ಲೇ ನರ್ತಿಸಿ, ನಲಿದಿವೆ. ಗರಿಬಿಚ್ಚಿ ಕುಣಿದು ಕುಪ್ಪಳಿಸಿವೆ. ಈ ವಿಡಿಯೋ 1.30 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.

    ರಸ್ತೆ ತುಂಬೆಲ್ಲ ನವಿಲುಗಳದ್ದೇ ಕಾರುಬಾರು ಎನ್ನುವಂತಾಗಿದ್ದು, ಗುಂಪಾಗಿ ಸೇರಿಕೊಂಡು ಫುಲ್ ಟ್ರಾಫಿಕ್ ಜಾಮ್ ಮಾಡಿವೆ. ಸಾಮಾನ್ಯ ದಿನಗಳಲ್ಲಿ ವಾಹನಗಳ ಟ್ರಾಫಿಕ್ ಜಾಮ್ ನೋಡುತ್ತಿದ್ದ ಜನತೆ ನವಿಲುಗಳ ಟ್ರಾಫಿಕ್ ಜಾಮ್ ಕಂಡು ಆಶ್ಚರ್ಯಚಿಕಿತರಾಗಿದ್ದಾರೆ. ನವಿಲುಗಳ ಸೌಂದರ್ಯವನ್ನು ಕಂಡು ಮಾರುಹೋಗಿದ್ದಾರೆ.

    ಅರಣ್ಯಾಧಿಕಾರಿಗಳ ಟ್ವೀಟ್‍ಗೆ ಹಲವರು ಕಮೆಂಟ್ ಮಾಡಿದ್ದು, ವಾವ್ ಎಂತಹ ಆಸಕ್ತಿದಾಯಕ, ಆಹ್ಲಾದಕರ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಒಬ್ಬರು ಅಭಿಪ್ರಾಯ ತಿಳಿಸಿದರೆ, ಮತ್ತೊಬ್ಬರು ಈ ರೀತಿಯ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಮ್ಮ ರಾಷ್ಟ್ರೀಯ ಪಕ್ಷಿಗಳ ಸುಂದರವಾದ ಟ್ರಾಫಿಕ್ ಜಾಮ್ ಎಂದು ಬರೆದುಕೊಂಡಿದ್ದಾರೆ.

  • ನವಿಲುಗಳನ್ನು ಬೇಟೆಯಾಡಿದ್ದ ವ್ಯಕ್ತಿಯನ್ನ ಕೊಂದ ಗ್ರಾಮಸ್ಥರು

    ನವಿಲುಗಳನ್ನು ಬೇಟೆಯಾಡಿದ್ದ ವ್ಯಕ್ತಿಯನ್ನ ಕೊಂದ ಗ್ರಾಮಸ್ಥರು

    ಭೋಪಾಲ್: ನವಿಲುಗಳನ್ನು ಬೇಟೆಯಾಡಿದ್ದ ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಗ್ರಾಮಸ್ಥರು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ.

    ಹರಿಲಾಲ್ ಬಂಚದ ಕೊಲೆಯಾದ ವ್ಯಕ್ತಿ. ನೀಮುಚ್ ಜಿಲ್ಲೆಯ ಲಸದಿಯಾ ಅತ್ರಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಆರಂಭದಲ್ಲಿ ನವಿಲುಗಳನ್ನು ಬೇಟಿಯಾಡಿದ್ದ ಮೂವರು ಪ್ರಕರಣದ ದಾರಿಯನ್ನು ತಪ್ಪಿಸಿದ್ದರು. ಹೀಗಾಗಿ ತಡವಾಗಿ ಸತ್ಯ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?:
    ಕುಕೇಶ್ವರ್ ಪ್ರದೇಶದಲ್ಲಿ ಹರಿಲಾಲ್ ಸೇರಿದಂತೆ ಒಟ್ಟು ನಾಲ್ವರು ನವಿಲು ಬೇಟಿಯಾಡಲು ಹೋಗಿದ್ದರು. ಬೇಟೆಯಾಡಿ ರಾತ್ರಿ 9 ಗಂಟೆ ಸುಮಾರು ನವಿಲುಗಳನ್ನು ಹಿಡಿದುಕೊಂಡು ಲಸದಿಯಾ ಅತ್ರಿ ಗ್ರಾಮದ ಬಳಿ ಬರುತ್ತಿದ್ದರು. ಗ್ರಾಮದ ಕೆಲವರು ಆರೋಪಿಗಳ ಕೈಯಲ್ಲಿ ನವಿಲುಗಳನ್ನು ನೋಡಿ ಹಿಡಿಯಲು ಮುಂದಾಗಿದ್ದರು. ತಕ್ಷಣವೇ ಎಚ್ಚೆತ್ತುಕೊಂಡು ಓಡಲು ಆರಂಭಿಸಿದ್ದ ಆರೋಪಿಗಳ ಪೈಕಿ ಹರಿಲಾಲ್ ಸಿಕ್ಕಿಬಿದ್ದಿದ್ದ. ಗ್ರಾಮಸ್ಥರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.

    ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಹರಿಲಾಲ್‍ನನ್ನು ನೋಡಿ ವ್ಯಕ್ತಿಯೊಬ್ಬ ಪೊಲೀಸ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರಿಲಾಲ್ ಮೃತಪಟ್ಟಿದ್ದಾನೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಮೇಕೆ ಕಳ್ಳತನ ಮಾಡಲು ಹೋಗಿದ್ದ ಹರಿಲಾಲ್‍ನನ್ನು ಗ್ರಾಮಸ್ಥರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದ್ದರು. ಗ್ರಾಮಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

    ಭಾರತದ ರಾಷ್ಟ್ರೀಯ ಪಕ್ಷಿ ನವಿಯನ್ನು ಬೇಟೆಯಾಡುವುದು ಹಾಗೂ ಕೊಲ್ಲುವುದು ನಿಷೇಧಿಸಲಾಗಿದೆ. 1972ರ ಭಾರತೀಯ ಅರಣ್ಯ ಕಾಯ್ದೆಯ ಪ್ರಕಾರ, ನವಿಲು ಬೇಟಿಯಾಡುವ ಹಾಗೂ ಕೊಲ್ಲುವ ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಹೀಗಾಗಿ ನವಿಲು ಬೇಟಿಯಾಡಿದ ಮೂವರು ಆರೋಪಿಗಳ ವಿರುದ್ಧ ಹಾಗೂ ಹರಿಲಾಲ್‍ನನ್ನು ಕೊಲೆ ಮಾಡಿದ 10 ಜನರನ್ನು ಪೊಲೀಸರು ಬಂಧಿಸಿದ್ದು, ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.