Tag: peace

  • ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

    ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

    ಕೋಲ್ಕತ್ತಾ: ದೇಶದೆಲ್ಲೆಡೆ ಪ್ರತಿಭಟನೆಯ ಕಿಚ್ಚು ಹೊತ್ತಿಸಿರುವ ಪೌರತ್ವ ವಿಧೇಯಕ ಕಾಯ್ದೆ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.

    ಈ ವಿಚಾರವಾಗಿ ಶುಕ್ರವಾರ ಮಾತನಾಡಿದ ಸೌರವ್ ಗಂಗೂಲಿ, ಮೊದಲಿಗೆ ಈ ವಿವಾದತ್ಮಕ ವಿಚಾರದ ಬಗ್ಗೆ ಮಾತನಾಡಲು ನಿರಾಕರಿಸಿದರು. ಆದರೆ ನಂತರ ಮಾತನಾಡಿದ ಅವರು ಪೌರತ್ವ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿರುವವರು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದರು.

    ಪ್ರತಿಭಟನೆ ಮಾಡುವವರಿಗೆ ನನ್ನ ಸಂದೇಶವೆನೆಂದರೆ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತೇನೆ. ನನಗೆ ಈ ಕಾಯ್ದೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ. ಆದ್ದರಿಂದ ನಾನು ಈ ರಾಜಿಕೀಯ ವಿವಾದವನ್ನು ಮಾಡಿಕೊಳ್ಳುವುದಿಲ್ಲ. ನನಗೆ ಕಾಯ್ದೆಯ ಬಗ್ಗೆ ಗೊತ್ತಿಲ್ಲದೇ ಇರುವಾಗ ಅದರ ಬಗ್ಗೆ ಪ್ರತಿಕ್ರಿಯೇ ನೀಡುವುದು ಸರಿಯಲ್ಲ. ಆದರೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

    ಪೌರತ್ವ ವಿಧೇಯಕ ಕಾಯ್ದೆಯಲ್ಲಿ ದೇಶಕ್ಕೆ ಮಾರಕವಾಗುವಂತ ಅಂಶ ಇದ್ದರೆ, ಅದನ್ನು ಸಂಬಂಧ ಪಟ್ಟ ವ್ಯಕ್ತಿಗಳ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ. ನನಗೆ ದೇಶದಲ್ಲಿ ಎಲ್ಲರೂ ಸಂತೋಷವಾಗಿರುವುದು ಮುಖ್ಯ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

    ಈ ವಾರದ ಆರಂಭದಲ್ಲಿ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ಅವರು ಖುಷ್ವಂತ್ ಸಿಂಗ್ ಅವರ ಬರೆದಿರುವ `ದಿ ಎಡ್ ಆಫ್ ಇಂಡಿಯಾ` ಪುಸ್ತಕದ ಒಂದು ಆಯ್ದ ಭಾಗವನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡು ಫ್ಯಾಸಿಸ್ಟ್ ಆಡಳಿತದ ಬಗ್ಗೆ ಮಾತನಾಡಿದ್ದರು. ಸನಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಮಗಳ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟ್ವೀಟ್‍ವೊಂದನ್ನು ಮಾಡಿದ್ದ ಸೌರವ್ ಗಂಗೂಲಿ ಅವರು, ದಯವಿಟ್ಟು ಸನಾ ಅವರನ್ನು ಈ ಎಲ್ಲಾ ಹೇಳಿಕೆಗಳಿಂದ ದೂರವಿಡಿ. ಆ ಪೋಸ್ಟ್ ನಿಜವಲ್ಲ. ಆಕೆ ಇನ್ನೂ ಚಿಕ್ಕವಳು ಆಕೆಗೆ ರಾಜಕೀಯ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡಿ ಮಗಳ ಪರ ನಿಂತಿದ್ದರು.

  • ಹಳೆಯ ಎಲ್ಲ ಬಾಕಿ ತೀರಿಸ್ತೇವೆ – ಮೋದಿ ಹೇಳಿಕೆಯ ಬೆನ್ನಲ್ಲೇ ಶಾಂತಿ ಮಂತ್ರ ಪಠಿಸಿದ ಪಾಕಿಸ್ತಾನ

    ಹಳೆಯ ಎಲ್ಲ ಬಾಕಿ ತೀರಿಸ್ತೇವೆ – ಮೋದಿ ಹೇಳಿಕೆಯ ಬೆನ್ನಲ್ಲೇ ಶಾಂತಿ ಮಂತ್ರ ಪಠಿಸಿದ ಪಾಕಿಸ್ತಾನ

    ಇಸ್ಲಾಮಾಬಾದ್: ಭಾರತ ಯುದ್ಧ ಆರಂಭಿಸಿದರೆ ನಾವು ಯುದ್ಧಕ್ಕೆ ತಯಾರಿದ್ದೇವೆ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಈಗ ಶಾಂತಿ ಮಾತುಕತೆ ಪ್ರಸ್ತಾಪವನ್ನು ಇಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸುವ ಭಾರತದ ಪ್ರಯತ್ನಗಳು ಒಂದೊಂದಾಗಿ ಫಲ ಕೊಡಲಾರಂಭಿಸಿದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಗ ಶಾಂತಿಮಂತ್ರವನ್ನು ಪಠಿಸಲು ಆರಂಭಿಸಿದ್ದಾರೆ.

    ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ನೀಡಿದರೆ ಪಾಕಿಸ್ತಾನ ತಕ್ಷಣವೇ ಸ್ಪಂಧಿಸುತ್ತದೆ. ಹಾಗೆಯೇ ಶಾಂತಿ ನೆಲೆಸಲು ಅವಕಾಶ ಮಾಡಿಕೊಟ್ಟರೆ ನನ್ನ ಮಾತಿಗೆ ನಾನು ಬದ್ಧನಾಗಿರುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಉಗ್ರರ ವಿರುದ್ಧ ಇಡೀ ವಿಶ್ವದಲ್ಲಿ ಒಂದೇ ಮಾತು ಕೇಳಿಬರುತ್ತಿದೆ. ಭಯೋತ್ಪಾದನೆ ನಡೆಸುವವರನ್ನು ಮತ್ತು ಇಂತಹ ದುಷ್ಕೃತ್ಯಕ್ಕೆ  ಬೆಂಬಲ ನೀಡುವವರಿಗೆ ಪಾಠ ಕಲಿಸಬೇಕು ಎನ್ನುವ ಆಗ್ರಹ ಎಲ್ಲ ಕಡೆ ಕೇಳಿಬರುತ್ತಿದೆ. ಭಾರತ ಈಗ ಬದಲಾಗುತ್ತಿದೆ. ಈ ಬಾರಿ ಉಗ್ರರು ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡಲು ಸಮಯ ಬಂದಿದೆ. ಅನ್ಯಾಯವಾಗಿ ಸೈನಿಕರು ಬಲಿಯಾದ ನೋವನ್ನು ಮರೆಯಲು ಸಾಧ್ಯವೇ ಇಲ್ಲ. ಭಯೋತ್ಪಾದನೆ ಹಾಗೂ ಉಗ್ರರ ವಿರುದ್ಧ ಹೇಗೆ ಹೋರಾಡಬೇಕು ಅವರನ್ನು ಯಾವ ರೀತಿ ಸದೆಬಡಿಯಬೇಕು ಎನ್ನುವುದು ನಮಗೆ ಗೊತ್ತಿದೆ. ಅಷ್ಟೇ ಅಲ್ಲದೇ ಈ ಬಾರಿ ಹಳೆಯ ಎಲ್ಲ ಬಾಕಿಗಳನ್ನು ತೀರಿಸುತ್ತೇವೆ. ಅಂತಿಮ ಜಯ ನಮಗೆ ಸಿಗಲಿದೆ ಎಂದು ಗುಡುಗಿದ್ದರು.

    ಮೋದಿಯಿಂದ ಖಾರವಾದ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಇಮ್ರಾನ್ ಖಾನ್ ಅವರು ಶಾಂತಿ ಮಾತನ್ನು ಆಡಲು ಆರಂಭಿಸಿದ್ದಾರೆ. ಬಡತನ ಮತ್ತು ಅನಕ್ಷರಸ್ಥತೆಯ ವಿರುದ್ಧ ಒಟ್ಟಾಗಿ ಹೋರಾಟ ನಡೆಸೋಣ ಎಂದು ನರೇಂದ್ರ ಮೋದಿ ಹೇಳಿದ್ದರು. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಶಾಂತಿಗೆ ಒಂದು ಅವಕಾಶ ನೀಡಿ, ಪುಲ್ವಾಮಾ ದಾಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾದ ನಂತರ ಮೋದಿ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಬಳಿಕ ಮಾತನಾಡುತ್ತ ಬಡತನ ಮತ್ತು ಅನಕ್ಷರತೆ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾಗ ನಾನು ‘ಪ್ಯಾಥನ್ ಮಗ’ ಎಂದು ಇಮ್ರಾನ್ ಖಾನ್ ಹೇಳಿದ್ದರು. ಪ್ಯಾಥನ್ ಎಂದರೆ ಇರಾನಿನ ಒಂದು ಜನಾಂಗ. ಇವರು ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ಇಂದು ಪಾಕ್ ಪ್ರಧಾನಿ ತಮ್ಮ ಮಾತನ್ನು ಮರೆತಿದ್ದಾರೆ, ಅವರು ತಮ್ಮ ಮಾತಿನ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಮೋದಿ ಟೀಕಿಸಿದ್ದರು.

    ಕಳೆದ ಫೆಬ್ರವರಿ 19ರಂದು ಪುಲ್ವಾಮಾ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದ ಇಮ್ರಾನ್ ಖಾನ್ ಅವರು, ಭಾರತ ಪಾಕಿಸ್ತಾನ ಜೊತೆಗೆ ಸಹಕರಿಸಿದರೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ಸಿದ್ಧವಿದೆ ಎಂದು ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ ಉಗ್ರರ ದಾಳಿಗೆ ಪ್ರತ್ಯುತ್ತರ ನೀಡಲು ಆಕ್ರಮಣಕ್ಕೆ ಮುಂದಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv