Tag: pdp

  • ಪಿಡಿಪಿ ಮೈತ್ರಿ ಕಳೆದುಕೊಂಡ ಬಿಜೆಪಿ: ಜಮ್ಮು ಕಾಶ್ಮೀರದಲ್ಲಿ ಮುಂದೇನು?

    ಪಿಡಿಪಿ ಮೈತ್ರಿ ಕಳೆದುಕೊಂಡ ಬಿಜೆಪಿ: ಜಮ್ಮು ಕಾಶ್ಮೀರದಲ್ಲಿ ಮುಂದೇನು?

    ನವದೆಹಲಿ: ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿಯ ನಿರ್ಧಾರದಿಂದ ಜಮ್ಮು ಕಾಶ್ಮೀರದಲ್ಲಿ ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.

    2014ರ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದ ಕಾರಣ ಪಿಡಿಪಿ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡಿದ್ದವು. ಕಳೆದ ಮೂರು ವರ್ಷಗಳಲ್ಲಿ ಆದ ರಾಜಕೀಯ ಬದಲಾವಣೆಗಳಿಂದಾಗಿ ಇಂದು ಬಿಜೆಪಿ ದಿಢೀರನೆ ಬೆಂಬಲ ವಾಪಸ್ ತೆಗೆದುಕೊಂಡ ಪರಿಣಾಮ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಪತನಗೊಂಡಿದೆ.

    ಮುಂದಿನ ರಾಜಕೀಯ ನಡೆ ಏನಾಗಬಹುದು?
    2014ರ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ25, ಎನ್‍ಸಿ(ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್)15, ಕಾಂಗ್ರೆಸ್12 ಹಾಗೂ ಇತರೆ 7 ಸ್ಥಾನಗಳನ್ನು ಗಳಿಸಿದ್ದವು. ಬಹುಮತ ಸಾಬೀತಿಗೆ ಸರ್ಕಾರಕ್ಕೆ ಕನಿಷ್ಟ 44 ಸ್ಥಾನ ಬೆಂಬಲ ಅಗತ್ಯ.

    1. ಪಿಡಿಪಿಯು ತನ್ನಲ್ಲಿರುವ ಶಾಸಕರ ಜೊತೆ ಎನ್‍ಸಿ ಹಾಗೂ ಕಾಂಗ್ರೆಸ್‍ನ ಜೊತೆ ಸೇರಿ ಸರ್ಕಾರ ರಚಿಸಬಹುದು.

    2. ಕಾಂಗ್ರೆಸ್ ಹೊರತು ಪಡಿಸಿ ಎನ್‍ಸಿ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳ ಜೊತೆ ಪಿಡಿಪಿ ಸರ್ಕಾರ ರಚನೆಗೆ ಮುಂದಾಗಬಹುದು.

    3. ವಿಶ್ವಾಸಮತಯಾಚನೆ ವೇಳೆ ಎನ್‍ಸಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷದವರು ಗೈರಾಗುವಂತೆ ನೋಡಿಕೊಳ್ಳಬಹುದು. ಒಂದು ವೇಳೆ ಈ ಪಕ್ಷಗಳು ಗೈರಾದರೆ ಬಹುಮತಕ್ಕೆ ಬೇಕಾಗಿರುವ ಸಂಖ್ಯೆ ಕಡಿಮೆಯಾಗುತ್ತದೆ. ಒಂದು ಬಾರಿ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರ ಪಾಸ್ ಆದರೆ 6 ತಿಂಗಳ ಕಾಲ ರಾಜ್ಯವನ್ನು ಅಳಬಹುದು.

    4. ಯಾವುದೇ ಪಕ್ಷಗಳು ಪಿಡಿಪಿಯೊಂದಿಗೆ ಕೈಜೋಡಿಸಲು ಮುಂದೆ ಬಾರದೇ ಇದ್ದಾಗ ಅನಿವಾರ್ಯವಾಗಿ ಕಣಿವೆ ರಾಜ್ಯದಲ್ಲಿ ರಾಜ್ಯಪಾಲ ಆಳ್ವಿಕೆ ನಿರ್ಮಾಣವಾಗುತ್ತದೆ.

    ಕಾಂಗ್ರೆಸ್ ಬೆಂಬಲ ಕೊಡಲ್ಲ:
    ಕಾಂಗ್ರೆಸ್ ನ ಮುಖಂಡರಾದ ಗುಲಾಂ ನಬಿ ಆಜಾದ್‍ರವರು, ಈಗಾಗಲೇ ಬಿಜೆಪಿ ಪಿಡಿಪಿಯ ಜೊತೆ ಸೇರಿಕೊಂಡು ದೊಡ್ಡ ತಪ್ಪು ಎಸಗಿದೆ. ಇಂತಹ ಪಕ್ಷದೊಂದಿಗೆ ಪುನಃ ತಪ್ಪು ಮಾಡಲು ಕಾಂಗ್ರೆಸ್ ಸಿದ್ದವಿಲ್ಲ. ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರಗಳು ಕೋಮುಗಲಭೆಯನ್ನು ಹತ್ತಿಕ್ಕಲು ವಿಫಲವಾಗಿವೆ. ಜಮ್ಮು ಕಾಶ್ಮೀರದಲ್ಲಿ ನಮ್ಮ ಆಡಳಿತದಲ್ಲಿದ್ದಾಗ ಯಾವುದೇ ಕೊಮುಗಲಭೆಗಳು ಸೃಷ್ಟಿಯಾಗಿರಲಿಲ್ಲ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಪಿಡಿಪಿ ಜೊತೆ ಕೈ ಜೋಡಿಸುವುದಿಲ್ಲ ಹೇಳಿಕೆ ನೀಡಿದ್ದಾರೆ.

  • ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

    ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

    ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ರಚನೆಯಾಗಿದ್ದ ಪಿಡಿಪಿ(ಪೀಪಲ್ ಡೆಮೋಕ್ರೇಟಿಕ್ ಪಾರ್ಟಿ) ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಮುರಿದು ಬಿದ್ದಿದೆ.

    ದೆಹಲಿಯ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರವರು “ದೇಶದ ಭದ್ರತೆಯ ದೃಷ್ಟಿಯಿಂದ ನಾವು ಕಣಿವೆ ರಾಜ್ಯದಲ್ಲಿ ಮೈತ್ರಿಯಿಂದ ಹಿಂದೆ ಸರಿಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ವರಿಷ್ಠ ನಾಯಕರ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿದೆ. ರಾಜ್ಯದ ಜನತೆಯ ಮೂಲಭೂತ ಹಕ್ಕು ಅಪಾಯದಲ್ಲಿದೆ. ಇತ್ತೀಚೆಗೆ ನಡೆದ ಪತ್ರಕರ್ತ ಶುಜಾತ್ ಬುಖರಿ ಹಾಗೂ ಸೇನೆಯ ಔರಂಗಜೇಬ್ ಸೈನಿಕನ ಹತ್ಯೆಯಿಂದ ಕಣಿವೆ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಜನ ದಂಗೆ ಎದ್ದಿದ್ದಾರೆ ಎಂದು ಹೇಳಿದರು.

    ಕಣಿವೆ ರಾಜ್ಯದಲ್ಲಿ ಸೂಕ್ತ ಹಿಡಿತ ಸಾಧಿಸಲು ಹಾಗೂ ಭದ್ರತೆಯ ದೃಷ್ಠಿಯಿಂದ ರಾಜ್ಯಪಾಲರ ಆಳ್ವಿಕೆಯೊಂದೇ ಪರಿಹಾರವಾಗಿದೆ. ಹೀಗಾಗಿ ರಾಜ್ಯಪಾಲರ ಆಳ್ವಿಕೆಗೆ ಬಿಜೆಪಿ ಆಗ್ರಹಿಸುತ್ತಿದೆ ಎಂದು ರಾಮ್ ಮಾಧವ್ ತಿಳಿಸಿದರು.

    2014ರ ಚುನಾವಣೆಯಲ್ಲಿ 87 ಕ್ಷೇತ್ರಗಳಿದ್ದ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ 28 ಸ್ಥಾನಗಳಿಸಿದ್ದ ಪಿಡಿಪಿ ಮತ್ತು 25 ಸ್ಥಾನಗಳಿಸಿದ್ದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿಯ ದಿಢೀರ್ ನಿರ್ಧಾರದಿಂದ ಅಧಿಕಾರದಲ್ಲಿದ್ದ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರವು ಪತನವಾಗಿದೆ.