Tag: PCB

  • ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    – ಕೊನೆಗೂ ಪಿಎಸ್‍ಎಲ್ ಮುಂದೂಡಿದ ಪಿಸಿಬಿ

    ಇಸ್ಲಾಮಾಬಾದ್: ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಂಡುತನ ತೋರಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ನಡೆಸುತ್ತಿತ್ತು. ಕೊನೆಗೆ ಇಕ್ಕಟ್ಟಿಗೆ ಸಿಲುಕಿ ಈಗ ಟೂರ್ನಿಯನ್ನೇ ಮುಂದೂಡಿದೆ.

    ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಪಿಎಸ್‍ಎಲ್ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ.

    ಪಿಎಸ್‍ಎಲ್ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಇಂದು ನಡೆಯಬೇಕಿತ್ತು. ಜೊತೆಗೆ ಫೈನಲ್ ಪಂದ್ಯ ಬುಧವಾರ ನಿಗದಿಯಾಗಿತ್ತು. ಕಳೆದ ವಾರವಷ್ಟೇ ಕರಾಚಿಯಲ್ಲಿ ಪಿಎಸ್‍ಎಲ್‍ಅನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಿಸಿಬಿ ನಿರ್ಧರಿಸಿತ್ತು. ಅದೇ ಸಮಯದಲ್ಲಿ ಟೂರ್ನಿಯನ್ನು 4 ದಿನ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರರು ದೇಶವನ್ನು ತೊರೆದ ನಂತರ ಟೂರ್ನಿಯನ್ನು ಮುಂದೂಡಲು ಪಿಸಿಬಿ ನಿರ್ಧರಿಸಿತು.

    ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡಿನ 6 ಆಟಗಾರರಿದ್ದಾರೆ. ಅವರೆಲ್ಲರೂ ಈಗ ದೇಶಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಹಿಂದುರುಗಿದ್ದಾರೆ.

    ಪಾಕಿಸ್ತಾನದಲ್ಲಿ ಒಟ್ಟು 184 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

  • ಮೋದಿ ಪವರ್‌ನಲ್ಲಿ ಇರೋವರೆಗೂ ಇಂಡೋ-ಪಾಕ್ ಟೂರ್ನಿ ನಡೆಯಲ್ಲ: ಅಫ್ರಿದಿ

    ಮೋದಿ ಪವರ್‌ನಲ್ಲಿ ಇರೋವರೆಗೂ ಇಂಡೋ-ಪಾಕ್ ಟೂರ್ನಿ ನಡೆಯಲ್ಲ: ಅಫ್ರಿದಿ

    ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವವರೆಗೂ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ಶಾಹೀದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

    2012ರಿಂದ ದ್ವಿಪಕ್ಷೀಯ ಸರಣಿಗಳಿಂದ ದೂರವೇ ಉಳಿದಿರುವ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ತಂಡಗಳು ಐಸಿಸಿ ಹಾಗೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಆದರೆ ಕಳೆದ ವರ್ಷ ಪಾಕ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಐಸಿಸಿಗೆ ಭಾರತದ ವಿರುದ್ಧ ದೂರು ನೀಡಿ ದ್ವಿಪಕ್ಷೀಯ ಸರಣಿ ಆಡುವಂತೆ ಇಲ್ಲವೇ ಪರಿಹಾರ ಮೊತ್ತ ನೀಡುವಂತೆ ಕೋರಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಇತ್ತ ಬಿಸಿಸಿಐ ಕೂಡ ಪಾಕ್ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿರಲಿಲ್ಲ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕ್ ಮಾಜಿ ಆಟಗಾರ ಶಾಹೀದ್ ಅಫ್ರಿದಿ, ಪಾಕ್-ಭಾರತ ನಡುವೆ ಸರಣಿ ನಡೆದಿರಲು ಪ್ರಧಾನಿ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರುವವರೆಗೂ ಟೂರ್ನಿ ನಡೆಯುವುದು ಅನುಮಾನ. ಮೋದಿ ಅಜೆಂಡಾ ಏನೆಂದು ಭಾರತೀಯರಿಗೂ ಅರಿವಿದೆ. ಮೋದಿ ಯಾವಾಗಲೂ ಋಣಾತ್ಮಕ ಆಲೋಚನೆಗಳನ್ನೇ ಹೊಂದಿರುತ್ತಾರೆ. ಅವರ ಕಾರಣದಿಂದಲೇ ಎರಡು ದೇಶಗಳ ನಡುವಿನ ಸ್ನೇಹ ವಾತಾವರಣಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಪಿಸಿಬಿ ಕೈಗೊಂಡಿರುವ ಪ್ರಯತ್ನಗಳಿಗೆ ಅಫ್ರಿದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಭಾಗಿಯಾಗದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಈಗಾಗಲೇ ಹೇಳಿದೆ. ಆದರೆ ಪಿಸಿಬಿಯ ಎಚ್ಚರಿಕೆಗಳಿಗೆ ಬಿಸಿಸಿಐ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಪಾಕ್, ಭಾರತವಿಲ್ಲದೇ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಸಿದರೆ ನಷ್ಟ ಸಂಭವಿಸಲಿದೆ. ಆದ್ದರಿಂದ ಪಾಕ್‍ನಲ್ಲಿ ಟೂರ್ನಿಯನ್ನು ಆಯೋಜಿಸುವುದರ ಬದಲು ಯುಎಇನಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

  • ಭಾರತದೊಂದಿಗೆ ಆಡಲು ಸಿದ್ಧ, ಆದ್ರೆ ಮನವಿ ಸಲ್ಲಿಸಲ್ಲ: ಪಿಸಿಬಿ

    ಭಾರತದೊಂದಿಗೆ ಆಡಲು ಸಿದ್ಧ, ಆದ್ರೆ ಮನವಿ ಸಲ್ಲಿಸಲ್ಲ: ಪಿಸಿಬಿ

    – 10 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಆಡುತ್ತಿದೆ ಪಾಕ್
    – ಈ ಹಿಂದೆ ಬಿಸಿಸಿಐ ವಿರುದ್ಧ ದೂರು ನೀಡಿ ದಂಡ ತೆತ್ತಿದ್ದ ಪಿಸಿಬಿ

    ಇಸ್ಲಾಮಾಬಾದ್: ಪಾಕಿಸ್ತಾನವು ಭಾರತದೊಂದಿಗೆ ಕ್ರಿಕೆಟ್ ಆಡಲು ಸಿದ್ಧವಾಗಿದೆ. ಆದರೆ ಅದಕ್ಕಾಗಿ ಮನವಿ ಮಾಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ತನ್ನ ಮೊಂಡುತನವನ್ನು ಪ್ರದರ್ಶಿಸಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಈಶನ್ ಮಣಿ, ಒಂದು ದೇಶವು ನಮ್ಮ ತಂಡದೊಂದಿಗೆ ಕ್ರಿಕೆಟ್ ಸರಣಿಯನ್ನು ಆಡಬೇಕಾದರೆ, ಅದು ಈಗ ಪಾಕಿಸ್ತಾನಕ್ಕೆ ಬರಬೇಕಾಗುತ್ತದೆ. 10 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ಮತ್ತೆ ನಡೆಯುತ್ತಿದೆ. ಎರಡು ಟೆಸ್ಟ್ ಸರಣಿಗಳಿಗಾಗಿ ಶ್ರೀಲಂಕಾ ತಂಡ ಇಲ್ಲಿಗೆ ಆಗಮಿಸಿದೆ. ಮೊದಲ ಟೆಸ್ಟ್ ಡಿಸೆಂಬರ್ 11ರಂದು (ಇಂದು) ರಾವಲ್ಪಿಂಡಿಯಲ್ಲಿ ಮತ್ತು ಎರಡನೇ ಟೆಸ್ಟ್ ಡಿಸೆಂಬರ್ 19ರಿಂದ ಕರಾಚಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ಜನರು ಉಭಯ ತಂಡಗಳ ಮಧ್ಯೆ ಕ್ರಿಕೆಟ್ ನೋಡಲು ಬಯಸುತ್ತಾರೆ. ದುರದೃಷ್ಟವಶಾತ್ ಭಾರತದ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಬೆರೆತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ನೀತಿ ಏನೇ ಇರಲಿ, ಅದನ್ನು ಕ್ರಿಕೆಟ್‍ಗೂ ಅನ್ವಯಿಸುತ್ತಾರೆ. ನಮ್ಮೊಂದಿಗೆ ಆಡುವಂತೆ ಭಾರತಕ್ಕೆ ಬೇಡಿಕೊಳ್ಳುವುದಿಲ್ಲ. ಒಂದು ವೇಳೆ ಭಾರತವು ತಮ್ಮೊಂದಿಗೆ ಆಡಲು ಬಯಸಿದರೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

    ಭಾರತದಲ್ಲಿ ಉಭಯ ದೇಶಗಳ ನಡುವಿನ ಕೊನೆಯ ಸರಣಿಯು 2012ರಲ್ಲಿ ಆಡೆದಿತ್ತು. ಇದಾದ ಬಳಿಕ ಎರಡೂ ದೇಶಗಳು ಐಸಿಸಿ ಟೂರ್ನಿಯಲ್ಲಿ ಮಾತ್ರ ಪರಸ್ಪರ ಎದುರಾಗಿವೆ.

    ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಮಿಸ್ಬಾ ಉಲ್ ಹಕ್ ಮುಖ್ಯ ಕೋಚ್ ಆದಾಗಿನಿಂದ ಪಾಕಿಸ್ತಾನವು ಎರಡು ಸರಣಿಗಳನ್ನು ಆಡಿದ್ದು ಎರಡರಲ್ಲೂ ತೀವ್ರ ಸೋಲನ್ನು ಅನುಭವಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಣಿ, ಮಿಸ್ಬಾ ಉಲ್ ಹಕ್ ಅವರಿಗೆ ಸ್ವಲ್ಪ ಸಮಯ ನೀಡಬೇಕಾಗಿದೆ. ತಂಡವು ಸರಣಿಯ ಬಳಿಕ ತವರಿಗೆ ಮರಳಿದೆ. ಒಂದು ವರ್ಷ ಪೂರೈಸಿದ ನಂತರ ಅವರ ಕೆಲಸವನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ಅವರು ವಿಫಲವಾದರೆ ಮುಖ್ಯ ಕೋಚ್ ಸ್ಥಾನದಿಂದ ಕೈಬಿಡುತ್ತೇವೆ ಎಂದು ಹೇಳಿದ್ದಾರೆ.

    ಶ್ರೀಲಂಕಾ ಕ್ರಿಕೆಟ್ ತಂಡವು ಈಗಾಲೇ ಇಲ್ಲಿಗೆ ಬಂದಿದೆ. ಬಾಂಗ್ಲಾದೇಶ ಕೂಡ ಬರುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಐರ್ಲೆಂಡ್‍ನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ನಮ್ಮ ಭದ್ರತಾ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಂಡಗಳು ಭವಿಷ್ಯದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವ ಸಂಪೂರ್ಣ ನಿರೀಕ್ಷೆಯಿದೆ ಎಂದು ತಿಳಿಸಿದರು.

    ದಂಡ ತೆತ್ತಿದ್ದ ಪಿಸಿಬಿ:
    ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಯಲ್ಲಿ ಬಿಸಿಸಿಐ ವಿರುದ್ಧ ದೂರಿನ ಪ್ರಕರಣದಲ್ಲಿ ಸೋಲುಂಡಿದ್ದು, ಪರಿಣಾಮ 1.6 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ.) ದಂಡವನ್ನು ಬಿಸಿಸಿಐಗೆ ಪಾವತಿಸಿತ್ತು.

    ಈ ಕುರಿತು ಈ ವರ್ಷದ ಮಾರ್ಚ್ ನಲ್ಲಿ ಈಶನ್ ಮಣಿ ಪ್ರತಿಕ್ರಿಯಿಸಿ 2.2 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ಪಾವತಿ ಮಾಡಿದಿದ್ದೇವೆ ಎಂದು ತಿಳಿಸಿದ್ದರು.

    ಪಾಕಿಸ್ತಾನದೊಂದಿಗೆ ದ್ವಿಪಕ್ಷಿಯ ಒಪ್ಪಂದ ಕ್ರಿಕೆಟ್ ಪಂದ್ಯಗಳನ್ನು ಭಾರತ ಆಯೋಜಿಸದ ಕಾರಣ ತನಗೆ ನಷ್ಟವಾಗಿದೆ ಎಂದು ಕಳೆದ ವರ್ಷ ಪಿಸಿಬಿ ದೂರು ದಾಖಲಿಸಿತ್ತು. ಸುಮಾರು 480 ಕೋಟಿ ರೂ. ಪರಿಹಾರವಾಗಿ ಬಿಸಿಸಿಐನಿಂದ ಕೊಡಿಸುವಂತೆ ಪಾಕಿಸ್ತಾನ ಐಸಿಸಿಗೆ ನೀಡಿದ ದೂರಿನಲ್ಲಿ ತಿಳಿಸಿತ್ತು.

    2014 ರಲ್ಲಿ ಬಿಸಿಸಿಐ ಪಾಕ್ ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಒಪ್ಪಂದಕ್ಕೆ ಸಹಿ ಮಾಡಿತ್ತು. ಇದರಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸಿದ ಐಸಿಸಿ ಸಮಿತಿ, ಈ ಪ್ರಕರಣದ ವಿಚಾರಣೆ ನಡೆಸಿದ ಐಸಿಸಿ ಬಿಸಿಸಿಐಗೆ ಕಾನೂನು ವೆಚ್ಚವಾಗಿ ಸುಮಾರು 11 ಕೋಟಿಗಳನ್ನು ಪಾವತಿಸುವಂತೆ ಆದೇಶಿಸಿತ್ತು.

    2009ರಲ್ಲಿ ಏನಾಗಿತ್ತು?
    ಸುಮಾರು 12 ಮಂದಿಯ ಭಯೋತ್ಪಾದಕರ ತಂಡ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಅಂಪೈರ್ ಗಳ ಮೇಲೆ ಲಹೋರಿನ ಗಢಾಪಿ ಕ್ರೀಡಾಂಗಣದ ಬಳಿ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 8 ಪೊಲೀಸರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‍ನ ಬೇಲಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಸಿಡಿಸಿದ್ದ ಗುಂಡು ಬಸ್ ಗ್ಲಾಸ್ ಸೀಳಿತ್ತು. ಪರಿಣಾಮ ಗಾಜಿನ ಚುರು ತಂಡದ ಸಹಾಯಕನಾಗಿದ್ದ ಫಾಬ್ರ್ರಾಸ್ ಎಂಬವರ ಭುಜಕ್ಕೆ ಹೊಕ್ಕಿತ್ತು. ಇಂದಿಗೂ ಘಟನೆಯನ್ನು ನೆನೆದರೆ ಫಾಬ್ರ್ರಾಸ್ ಬೆಚ್ಚಿ ಬೀಳುತ್ತಾರೆ.

    2015ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮೊಂಡು ಧೈರ್ಯ ಮಾಡಿ ಲಾಹೋರಿನಲ್ಲಿ ಕ್ರಿಕೆಟ್ ಆಡಲು ಮುಂದಾಗಿತ್ತು, ಆದರೆ ಅಂದು ಕೂಡ ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಹೊರ ಭಾಗದಲ್ಲಿ ಉಗ್ರ ಮಾನವ ಬಾಂಬ್ ಸ್ಫೋಟಿಸಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಲಿ ಪಡೆದಿದ್ದ. ಈ ಘಟನೆ ಮತ್ತೆ ಪಾಕ್ ಕ್ರಿಕೆಟ್ ಆಡಲು ಆಸುರಕ್ಷಿತ ಎಂಬುವುದು ಖಚಿತವಾಯ್ತು. ಪರಿಣಾಮ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಏರ್ಪಡಿಸುವ ಅವಕಾಶವನ್ನು ಪಾಕಿಸ್ತಾದಿಂದ ಕಿತ್ತುಕೊಂಡಿತ್ತು.

  • ಭಾರತದ ವಿರುದ್ಧ ಸೋತ ಪಾಕ್‍ನನ್ನು ನಿಷೇಧಿಸುವಂತೆ ಅಭಿಮಾನಿಗಳಿಂದ ಕೋರ್ಟಿಗೆ ಅರ್ಜಿ

    ಭಾರತದ ವಿರುದ್ಧ ಸೋತ ಪಾಕ್‍ನನ್ನು ನಿಷೇಧಿಸುವಂತೆ ಅಭಿಮಾನಿಗಳಿಂದ ಕೋರ್ಟಿಗೆ ಅರ್ಜಿ

    – ಪಿಸಿಬಿಗೆ ಕೋರ್ಟ್‍ನಿಂದ ಸಮನ್ಸ್

    ಲಾಹೋರ್: ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ ಪಾಕಿಸ್ತಾನ ತಂಡವನ್ನು ಕ್ರಿಕೆಟ್‍ನಿಂದ ನಿಷೇಧಿಸಬೇಕು ಎಂದು ಪಾಕ್ ಅಭಿಮಾನಿಯೊಬ್ಬರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

    ಜೂನ್ 16, ಭಾನುವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯವನ್ನು ಕಂಡಿತು. ಬದ್ಧ ವೈರಿಗಳ ಕಾದಾಟದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ತಂಡ ಪಾಕ್ ಕ್ರಿಕೆಟ್ ಅಭಿಮಾನಿಗಳಿಂದ ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

    ಪಾಕಿಸ್ತಾನ ಈ ಬಾರಿಯ ವಿಶ್ವಕಪ್‍ನಲ್ಲಿ ಆಡಿದ ಒಟ್ಟು ಐದು ಪಂದ್ಯಗಳಲ್ಲಿ ಕೇವಲ ಮೂರು ಅಂಕವನ್ನು ಪಡೆದು ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಭಾರತ ತಂಡದ ವಿರುದ್ಧ ಹೀನಾಯವಾಗಿ ಸೋತಿದೆ. ಇದನ್ನು ಸಹಿಸಿಕೊಳ್ಳಲಾಗದ ಪಾಕ್ ಅಭಿಮಾನಿಗಳು ಪಾಕ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

    ಈ ವಿಚಾರವಾಗಿ ಪಾಕ್ ತಂಡದ ಮಾಜಿ ನಾಯಕ ಇಂಜಿಮಾಮ್-ಉಲ್-ಹಕ್ ನೇತೃತ್ವದ ಆಯ್ಕೆ ಸಮಿತಿಯನ್ನು ಕಿತ್ತೊಗೆಯಬೇಕು ಮತ್ತು ಪಾಕ್ ತಂಡವನ್ನು ಕ್ರಿಕೆಟ್‍ನಿಂದ ನಿಷೇಧ ಮಾಡಬೇಕು ಎಂದು ಪಾಕ್ ಅಭಿಮಾನಿಯೊಬ್ಬ ಗುರ್ಜನ್‍ವಾಲ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಳಿಗೆ ವರದಿ ನೀಡುವಂತೆ ಸಮನ್ಸ್ ನೀಡಿದ್ದಾರೆ.

    ಇದರಿಂದಾಗಿ ಇಂದು ಲಾಹೋರ್‍ ನಲ್ಲಿ ಪಿಸಿಬಿ ಅಧಿಕಾರಿಗಳು ಸಭೆ ಸೇರಲಿದ್ದು, ತಂಡದ ನಿರ್ವಹಣೆಯ ವಿಚಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆ ಎನ್ನಲಾಗಿದೆ. ಮೂಲಗಳ ಪ್ರಕಾರ ತಂಡದ ಕೋಚ್ ಮಿಕ್ಕಿ ಆರ್ಥರ್, ತಂಡದ ವ್ಯವಸ್ಥಾಪಕ ತಲಾತ್ ಅಲಿ ಮತ್ತು ಬೌಲಿಂಗ್ ಕೋಚ್ ಅಜರ್ ಮಹಮೂದ್ ಅವರನ್ನು ಸೇರಿದಂತೆ ಇಡೀ ಆಯ್ಕೆ ಸಮಿತಿಯನ್ನು ವಜಾಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಿಸಿಸಿಐ ವಿರುದ್ಧ ಐಸಿಸಿಗೆ ದೂರು ನೀಡಿದ್ದ ಪಾಕ್‍ಗೆ ಬಿತ್ತು ಭಾರೀ ದಂಡ

    ಬಿಸಿಸಿಐ ವಿರುದ್ಧ ಐಸಿಸಿಗೆ ದೂರು ನೀಡಿದ್ದ ಪಾಕ್‍ಗೆ ಬಿತ್ತು ಭಾರೀ ದಂಡ

    ದುಬೈ: ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಯಲ್ಲಿ ಬಿಸಿಸಿಐ ವಿರುದ್ಧ ದೂರಿನ ಪ್ರಕರಣದಲ್ಲಿ ಸೋಲುಂಡಿದ್ದು,ಪರಿಣಾಮ 1.6 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ.) ದಂಡವನ್ನು ಬಿಸಿಸಿಐಗೆ ಪಾವತಿಸಿದೆ.

    ಈ ಕುರಿತು ಪಾಕಿಸ್ತಾನದ ಕ್ರಿಕೆಟ್ ಬೋರ್ಡಿನ ಅಧ್ಯಕ್ಷ ಈಶನ್ ಮಣಿ ಮಾಹಿತಿ ನೀಡಿದ್ದು, 2.2 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ಪಾವತಿ ಮಾಡಿದಿದ್ದೇವೆ ಎಂದು ತಿಳಿಸಿದ್ದಾರೆ.

    ಪಾಕಿಸ್ತಾನದೊಂದಿಗೆ ದ್ವಿಪಕ್ಷಿಯ ಒಪ್ಪಂದ ಕ್ರಿಕೆಟ್ ಪಂದ್ಯಗಳನ್ನು ಭಾರತ ಆಯೋಜಿಸದ ಕಾರಣ ತನಗೆ ನಷ್ಟವಾಗಿದೆ ಎಂದು ಕಳೆದ ವರ್ಷ ಪಿಸಿಬಿ ದೂರು ದಾಖಲಿಸಿತ್ತು. ಸುಮಾರು 480 ಕೋಟಿ ರೂ. ಪರಿಹಾರವಾಗಿ ಬಿಸಿಸಿಐನಿಂದ ಕೊಡಿಸುವಂತೆ ಪಾಕಿಸ್ತಾನ ಐಸಿಸಿಗೆ ನೀಡಿದ ದೂರಿನಲ್ಲಿ ತಿಳಿಸಿತ್ತು.

    2014 ರಲ್ಲಿ ಬಿಸಿಸಿಐ ಪಾಕ್ ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಒಪ್ಪಂದಕ್ಕೆ ಸಹಿ ಮಾಡಿತ್ತು. ಇದರಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸಿದ ಐಸಿಸಿ ಸಮಿತಿ, ಈ ಪ್ರಕರಣದ ವಿಚಾರಣೆ ನಡೆಸಿದ ಐಸಿಸಿ ಬಿಸಿಸಿಐಗೆ ಕಾನೂನು ವೆಚ್ಚವಾಗಿ ಸುಮಾರು 11 ಕೋಟಿಗಳನ್ನು ಪಾವತಿಸಲು ಸೂಚನೆ ನೀಡಿದೆ.

    2009ರ ಮಾರ್ಚ್ 3ರಂದು ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಭಯೋತ್ಪಾದಕ ಪಡೆ ದಾಳಿ ನಡೆಸಿತ್ತು. ಇದಾಗಿ ಇಂದಿಗೆ 10 ವರ್ಷಗಳು ಕಳೆದರು ಕೂಡ ಪಾಕಿಸ್ತಾನದಲ್ಲಿ ಮತ್ತೆ ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳನ್ನು ಆರಂಭಿಸಲು ಪಿಸಿಬಿ ಹರಸಾಹಸ ಪಡುತ್ತಿದೆ. ಪಾಕ್ ನೆಲದಲ್ಲಿ ಆಟವಾಡಲು ರಾಷ್ಟ್ರಗಳು ನಿರಕರಿಸುತ್ತಿರುವ ಹಿನ್ನೆಲೆಯಲ್ಲಿ ದುಬೈನಲ್ಲಿ ಪಾಕಿಸ್ತಾನ ಕ್ರಿಕೆಟ್ ಆಯೋಜಿಸುತ್ತಿದೆ.

    ದಾಳಿ ಬಳಿಕ ಪಾಕಿಸ್ತಾನದಲ್ಲಿ ಇದುವರೆಗೂ 12 ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳು ಮಾತ್ರ ನಡೆಸಿದ್ದು, ಇದರಲ್ಲಿ 9 ಸಮಿತಿ ಪಂದ್ಯಗಳಾಗಿವೆ. ಪ್ರಮುಖವಾಗಿ ಜಿಂಬಾಬ್ವೆ 5 ಪಂದ್ಯ, ವೆಸ್ಟ್ ಇಂಡೀಸ್/ ವಿಶ್ವ ಇಲೆವೆನ್ ಮತ್ತು ಶ್ರೀಲಂಕಾ 1 ಪಂದ್ಯದಲ್ಲಿ ಮಾತ್ರ ಆಡಿದೆ.

    ಕೊನೆಯದಾಗಿ ಒತ್ತಡದ ಮೇಲೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಪಾಕ್‍ನ ಕರಾಚಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ 3 ಟಿ20 ಪಂದ್ಯಗಳನ್ನು ಆಡಿದೆ. ಆದರೆ ಇದರ ಬೆನ್ನಲ್ಲೇ ನಡೆಯಬೇಕಿದ್ದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಸರಣಿಯನ್ನು ಆಡಲು ಎರಡು ರಾಷ್ಟ್ರ ನಿರಾಕರಿಸಿತ್ತು.

    2015ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮೊಂಡು ಧೈರ್ಯ ಮಾಡಿ ಲಾಹೋರಿನಲ್ಲಿ ಕ್ರಿಕೆಟ್ ಆಡಲು ಮುಂದಾಗಿತ್ತು, ಆದರೆ ಅಂದು ಕೂಡ ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಹೊರ ಭಾಗದಲ್ಲಿ ಉಗ್ರ ಮಾನವ ಬಾಂಬ್ ಸ್ಫೋಟಿಸಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಲಿ ಪಡೆದಿದ್ದ. ಈ ಘಟನೆ ಮತ್ತೆ ಪಾಕ್ ಕ್ರಿಕೆಟ್ ಆಡಲು ಆಸುರಕ್ಷಿತ ಎಂಬುವುದು ಖಚಿತವಾಯ್ತು. ಪರಿಣಾಮ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಏರ್ಪಡಿಸುವ ಅವಕಾಶವನ್ನು ಪಾಕಿಸ್ತಾದಿಂದ ಕಿತ್ತುಕೊಂಡಿತ್ತು.

    2009ರಲ್ಲಿ ಏನಾಗಿತ್ತು?
    ಸುಮಾರು 12 ಮಂದಿಯ ಭಯೋತ್ಪಾದಕರ ತಂಡ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಅಂಪೈರ್ ಗಳ ಮೇಲೆ ಲಹೋರಿನ ಗಢಾಪಿ ಕ್ರೀಡಾಂಗಣದ ಬಳಿ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 8 ಪೊಲೀಸರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‍ನ ಬೇಲಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಸಿಡಿಸಿದ್ದ ಗುಂಡು ಬಸ್ ಗ್ಲಾಸ್ ಸೀಳಿತ್ತು. ಪರಿಣಾಮ ಗಾಜಿನ ಚುರು ತಂಡದ ಸಹಾಯಕನಾಗಿದ್ದ ಫಾಬ್ರ್ರಾಸ್ ಎಂಬವರ ಭುಜಕ್ಕೆ ಹೊಕ್ಕಿತ್ತು. ಇಂದಿಗೂ ಘಟನೆಯನ್ನು ನೆನೆದರೆ ಫಾಬ್ರ್ರಾಸ್ ಬೆಚ್ಚಿ ಬೀಳುತ್ತಾರೆ.

  • ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

    ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

    ಇಸ್ಲಾಮಾಬಾದ್: ಟೀಂ ಇಂಡಿಯಾ ಅಂಡರ್ 19 ಹಾಗೂ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೂ ಪ್ರೇರಣೆಯಾಗಿದ್ದು, ಅವರ ಹಾದಿಯಲ್ಲೇ ಪಿಸಿಬಿ ಕೂಡ ನಡೆಯಲು ನಿರ್ಧರಿಸಿದೆ.

    ದ್ರಾವಿಡ್ ಯುವ ತಂಡದ ಆಟಗಾರರಿಗೆ ಕೇವಲ ಕೋಚ್ ಆಗಿ ಮಾತ್ರವಲ್ಲದೇ ಜೀವನದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಆಟಗಾರರು ಕ್ರಿಕೆಟ್ ಹೊರತುಪಡಿಸಿ ಇತರೇ ಕ್ಷೇತ್ರಗಳ ಕೌಶಲ್ಯಗಳಲ್ಲಿ ಪರಿಣಿತಿ ಪಡೆಯಬೇಕು ಎಂದು ದ್ರಾವಿಡ್ ಮನವಿ ಮಾಡಿದ್ದರು.

    ಒಬ್ಬ ರಾಷ್ಟ್ರೀಯ ತಂಡದ ಹಿರಿಯ ಆಟಗಾರ ತಂಡದ ಕೋಚ್ ಆದರೆ ಹೇಗೆ ಯುವ ಆಟಗಾರರಿಗೆ ಪ್ರೇರಣೆ ಆಗಬಲ್ಲರು ಎಂದು ಪಿಸಿಬಿಗೆ ರಾಹುಲ್ ಸಾಕ್ಷಿಯಾಗಿದ್ದಾರೆ. ರಾಹುಲ್ ಅವರ ಗರಡಿಯಲ್ಲಿ ಪಳಗಿದ ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಮಯಾಂಕ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ಅಂಡರ್ 19 ವಿಶ್ವಕಪ್ ಟೂರ್ನಿಯನ್ನು ಪೃಥ್ವಿ ಶಾ ನಾಯಕತ್ವ ತಂಡ ಗೆದ್ದು ಬಂದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

    ಸದ್ಯದ ಒಂದು ವರದಿಯ ಪ್ರಕಾರ ಪಿಸಿಬಿ ಕೂಡ ರಾಹುಲ್ ಅವರ ಪ್ರೇರಣೆಯಂತೆ ತಮ್ಮ ಅಂಡರ್ 19 ತಂಡಗಳಿಗೆ ಯೂನಿಸ್ ಖಾನ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ಪಿಸಿಬಿ ಅಧ್ಯಕ್ಷ ಈಶನ್ ಮನಿ ಪ್ರತಿಕ್ರಿಯೆ ಕೂಡ ನೀಡಿದ್ದು, ಅಂಡರ್ 19 ತಂಡದ ಕೋಚ್ ಆಗಿ ಭಾರತದಲ್ಲಿ ರಾಹುಲ್ ದ್ರಾವಿಡ್ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

    ವಿದೇಶಿ ಕೋಚ್‍ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಬದಲು ದೇಶದ ಸ್ವತಃ ಕೋಚ್‍ಗಳಿಗೆ ಭಾರತ ನೀಡುತ್ತಿರುವ ಅವಕಾಶದಂತೆ ನಮ್ಮಲ್ಲೂ ಪ್ರಾಮುಖ್ಯತೆ ನೀಡಲು ಚಿಂತನೆ ನಡೆದಿದೆ. ತಂಡದ ಆಟಗಾರರು ದೇಶದ ರಾಯಭಾರಿಗಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಸಿಬಿ ಮೊಹಮ್ಮದ್ ಯೂಸುಫ್ ರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಕೂಡ ನಿರ್ಧರಿಸಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

    ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

    ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ.

    ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಒಪ್ಪಂದದಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ಪಾಕ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತನ್ನ ವಕೀಲರ ಮೂಲಕ ಐಸಿಸಿ ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು.

    2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ (ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ 6 ಕ್ರಿಕೆಟ್ ಸರಣಿ ನಡೆಯಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸರಣಿ ನಡೆಯದ ಕಾರಣ ನಮಗೆ 70 ದಶಲಕ್ಷ ಡಾಲರ್ ನಷ್ಟವಾಗಿದೆ. ಒಪ್ಪಂದ ಉಲ್ಲಂಘನೆಯಾಗಿರುವ ಕುರಿತು ನಾವು ಐಸಿಸಿಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲೂ ಭಾರತ ಭಾಗವಹಿಸಬೇಕಾಗಿತ್ತು. 2008 ನಂತರ ಬಿಸಿಸಿಐ ಯಾವುದೇ ಕಾರಣ ನೀಡದೆ ನಮ್ಮೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ ಐಸಿಸಿ ನಡೆಸುವ ಎಲ್ಲಾ ಸರಣಿಯಲ್ಲೂ ನಮ್ಮ ವಿರುದ್ಧ ಆಡಿದೆ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ಈ ಹಿಂದೆ ಹೇಳಿದ್ದರು.

    ಪಾಕಿಸ್ತಾನದ ಉಗ್ರಗಾಮಿಗಳು 2008 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತ್ತು. ಇದಾದ ಬಳಿಕ 2012 ರಲ್ಲಿ ಎರಡು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಪಾಕ್ ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಬಳಿಕ ಇಲ್ಲಿಯವರೆಗೆ ಭಾರತ-ಪಾಕ್ ಮಧ್ಯೆ ಯಾವುದೇ ಸರಣಿ ನಡೆದಿಲ್ಲ.

    2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

    ಐಸಿಸಿ ತಿಳಿಸಿರುವ ಪ್ರಕಾರ ಈ ಪ್ರಕರಣವನ್ನ ಇಲ್ಲಿಯೇ ಕೈಬಿಡುವಂತೆ ಪಾಕಿಸ್ತಾನಕ್ಕೆ ತಿಳಿಸಿದ್ದು, ಹೀಗಾಗಿ ಉಭಯ ದೇಶಗಳ ನಡುವೆ ನಡೆಯುತ್ತಿದ್ದ ಕಾನೂನು ಸಮರದಲ್ಲಿ ಬ್ರೇಕ್ ಬಿದ್ದಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಚಿ ಅನಿರುಧ್ ಚೌಧರಿ ಅವರು, ಐಸಿಸಿ ನೀಡಿರುವ ತೀರ್ಮಾನದ ಸಂಪೂರ್ಣ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಪ್ರಕರಣದಲ್ಲಿ ಬಿಸಿಸಿಐ ಪರ ನಿಂತ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews