Tag: PCB

  • 8 ವರ್ಷದ ಬಳಿಕ ಭಾರತ, ಪಾಕ್ ನಡುವೆ ಕ್ರಿಕೆಟ್ ಸರಣಿ ?

    8 ವರ್ಷದ ಬಳಿಕ ಭಾರತ, ಪಾಕ್ ನಡುವೆ ಕ್ರಿಕೆಟ್ ಸರಣಿ ?

    ನವದೆಹಲಿ: ಕ್ರಿಕೆಟ್‍ನಲ್ಲಿ ಬದ್ಧವೈರಿಗಳಾಗಿ ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು 8 ವರ್ಷಗಳ ಬಳಿಕ ಮತ್ತೆ ಎದುರುಬದುರಾಗುವ ನೀರಿಕ್ಷೆ ಇದೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದೊಂದಿಗೆ ಮಾತುಕತೆ ನಡೆಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಕಾಶ್ಮೀರ ಗಡಿ ವಿಚಾರವಾಗಿ ಮತ್ತು ಇತರ ಸಮಸ್ಯಗಳಿಂದಾಗಿ ಸಂಬಂಧ ಕಡಿತಗೊಂಡಿತು. ಹಾಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿಯು ಕೂಡ ನಡೆಯುತ್ತಿರಲಿಲ್ಲ.

    ಭಾರತ ಹಾಗೂ ಪಾಕಿಸ್ತಾನ ನಡುವೆ 8 ವರ್ಷಗಳ ಹಿಂದೆ 2012-2013 ರಲ್ಲಿ ಕ್ರಿಕೆಟ್ ಸರಣಿಯ ಬಳಿಕ ಈ ವರೆಗೆ ಈ ಎರಡು ದೇಶಗಳು ದ್ವಿಪಕ್ಷೀಯ ಸರಣಿ ಆಡಿಲ್ಲ. ಈ ಎರಡು ತಂಡಗಳು ಐಸಿಸಿ ಏರ್ಪಡಿಸುವ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದವು. ಆದರೆ ಇದೀಗ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ರಾಜತಾಂತ್ರಿಕ ಸಮಸ್ಯೆ ಬಗ್ಗೆ ಎರಡು ದೇಶಗಳು ಮಾತುಕತೆ ನಡೆಸಿದ ಬೆನ್ನಲೇ ಕ್ರಿಕೆಟ್ ಸರಣಿ ಆಯೋಜಿಸುವ ಕುರಿತು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.

    ಪಾಕಿಸ್ತಾನದ ಮಾಧ್ಯಗಳ ವರದಿ ಪ್ರಕಾರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗಿಂತ ಮೊದಲು ಭಾರತ ಹಾಗೂ ಪಾಕಿಸ್ತಾನ ನಡುವೆ ಚುಟುಕು ಕ್ರಿಕೆಟ್ ಸರಣಿ ನಡೆಸಲು ಚಿಂತನೆ ನಡೆದಿದ್ದು, ಪಾಕಿಸ್ತಾನ ಸರ್ಕಾರ, ಪಿಸಿಬಿಗೆ ತಂಡವನ್ನು ರಚಿಸಿ ತಯಾರಿ ನಡೆಸಲು ಅಧಿಕಾರಿ ವರ್ಗಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

    ಈ ಕುರಿತು ಪಿಸಿಬಿ ಅಧ್ಯಕ್ಷರಾದ ಎಹ್ಸಾನ್ ಮಣಿ ಪ್ರತಿಕ್ರಿಯಿಸಿದ್ದು, ಬಿಸಿಸಿಐನ ಯಾವುದೇ ಅಧಿಕಾರಿಗಳು ಕ್ರಿಕೆಟ್ ಸರಣಿ ಬಗ್ಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಅದರೆ ಮೂಲಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ನಡೆಯುವುದು ಖಚಿತ ಎಂದು ಸುದ್ದಿ ಬಿತ್ತರವಾಗುತ್ತಿದೆ.

    ಈ ಎಲ್ಲಾ ಆಗುಹೋಗುಗಳ ನಡುವೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಜಯದ ಬಳಿಕ ನಾವು ಟಿ20 ವಿಶ್ವಕಪ್‍ಗೂ ಮುನ್ನ ಹಲವು ಟಿ20 ಪಂದ್ಯಗಳನ್ನು ಆಡಲಿದ್ದೇವೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಭಾರತ ಹಾಗೂ ಪಾಕಿಸ್ತಾನ ಸರಣಿಗೆ ಪುಷ್ಟಿ ಕೊಡುವಂತಿದೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಸರಣಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿಲಿದ್ಯಾ ಅಥವಾ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ಧೋನಿಯನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿದ ಪಾಕ್ ಮಾಜಿ ಕ್ರಿಕೆಟಿಗ

    ಧೋನಿಯನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿದ ಪಾಕ್ ಮಾಜಿ ಕ್ರಿಕೆಟಿಗ

    ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಹೊಗಳಿ ಪಾಕಿಸ್ತಾನ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಆ.15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಧೋನಿ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿದ್ದ ಮುಷ್ತಾಕ್, ವಿದಾಯ ಪಂದ್ಯ ಏರ್ಪಡಿಸದ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಧೋನಿರಂತಹ ದಿಗ್ಗಜ ಕ್ರಿಕೆಟಿಗರನ್ನು ಈ ರೀತಿ ನಡೆಸಿಕೊಳ್ಳುತ್ತೀರಾ? ಹಲವು ಅಭಿಮಾನಿಗಳು ಧೋನಿಗೆ ವಿದಾಯ ಪಂದ್ಯ ಏರ್ಪಡಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ದರು.

    ಧೋನಿರನ್ನು ಹೊಗಳಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಷ್ತಾಕ್ ಗದರಿದೆ. ಭಾರತ ಹಾಗೂ ಪಾಕ್ ನಡುವೆ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಿಸಿಬಿ ಈ ಹಿಂದೆಯೇ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗೆ ಕೆಲ ಆದೇಶಗಳನ್ನು ಜಾರಿ ನೀಡಿತ್ತು. ಭಾರತ ಕ್ರಿಕೆಟ್ ಆಟಗಾರರು ಮತ್ತು ಬಿಸಿಸಿಐ ಕುರಿತು ಯಾವುದೇ ರೀತಿಯ ವಿಮರ್ಶೆ, ಕಾಮೆಂಟ್ ಮಾಡದಂತೆ ನಿರ್ದೇಶನ ನೀಡಿತ್ತು. ಸದ್ಯ ಪಾಕಿಸ್ತಾನ ಕ್ರಿಕೆಟಿಗರ ಡೆವಲಪ್‍ಮೆಂಟ್ ಹೆಡ್ ಆಗಿ ಪಿಸಿಬಿಯಲ್ಲಿ ಮುಷ್ತಾಕ್ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಸಿಬಿ ಮುಷ್ತಾಕ್ ಅವರನ್ನು ಪಿಸಿಬಿ ಗದರಿದೆ.

    ಈ ಕುರಿತು ಮಾತನಾಡಿರುವ ಪಿಸಿಬಿ ಅಧಿಕಾರಿಯೊಬ್ಬರು, ಧೋನಿಯನ್ನು ಹೊಗಳಿ ಬಿಸಿಸಿಐ ವಿರುದ್ಧ ವಿಮರ್ಶೆ ಮಾಡಿದ ಮುಷ್ತಾಕ್ ಅವರ ನಡೆ ಸರಿಯಲ್ಲ. ಪಾಕ್ ತಂಡದೊಂದಿಗೆ ಕೆಲಸ ಮಾಡುತ್ತಿರುವ ಕೋಚ್‍ಗಳು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆದ್ದರಿಂದ ಪಿಸಿಬಿ ಉದ್ಯೋಗಿಗಳು ಯೂಟ್ಯೂಬ್ ಚಾನೆಲ್ ನಡೆಸದಂತೆ ಹೊಸ ಆದೇಶವನ್ನು ಜಾರಿ ಮಾಡಲಾಗಿದೆ. ಯಾವುದೇ ಚಾನೆಲ್‍ಗೆ ಸಂದರ್ಶನ ನೀಡುವ ಮುನ್ನ ಪಿಸಿಬಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

  • ಭಾರತ ಪ್ರವೇಶಕ್ಕೆ ಅನುಮತಿ ಸಿಗುತ್ತಾ? ಲಿಖಿತವಾಗಿ ತಿಳಿಸಿ- ಐಸಿಸಿಗೆ ಪಾಕ್ ಮನವಿ

    ಭಾರತ ಪ್ರವೇಶಕ್ಕೆ ಅನುಮತಿ ಸಿಗುತ್ತಾ? ಲಿಖಿತವಾಗಿ ತಿಳಿಸಿ- ಐಸಿಸಿಗೆ ಪಾಕ್ ಮನವಿ

    ಇಸ್ಲಾಮಾಬಾದ್: ಭಾರತ ಐಸಿಸಿ ವಿಶ್ವಕಪ್‍ನ ಮುಂದಿನ ಎರಡು ಪ್ರಮುಖ ವಿಶ್ವಕಪ್ ಟೂರ್ನಿಗಳಿಗೆ ಅತಿಥ್ಯ ವಹಿಸಿಕೊಳ್ಳಲಿದೆ. ಪರಿಣಾಮ ಎರಡು ಟೂರ್ನಿಗಳಲ್ಲಿ ಪಾಕಿಸ್ತಾನದ ಆಡಲು ಆಟಗಾರರಿಗೆ ಭಾರತಕ್ಕೆ ಬರಲು ಅವಕಾಶ ನೀಡ್ತಾರಾ? ಎಂಬ ಸಂದೇಹ ಪಾಕಿಸ್ತಾನ ಕ್ರಿಕಟ್ ಬೋರ್ಡ(ಪಿಸಿಬಿ)ನ್ನು ಕಾಡಲು ಆರಂಭಿಸಿದೆ. ಪರಿಣಾಮ ಪಿಸಿಬಿ, ಐಸಿಸಿಗೆ ವಿಶೇಷ ಮನವಿವೊಂದನ್ನು ಮುಂದಿಟ್ಟಿದೆ.

    2021ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ಕ್ರಿಕೆಟ್ ಟೂರ್ನಿಗೆ ಭಾರತ ಅತಿಥ್ಯವಹಿಸಲಿದೆ. ಪರಿಣಾಮ ಪಿಸಿಬಿ, ಐಸಿಸಿಗೆ ವಿಶೇಷ ಮನವಿ ಸಲ್ಲಿಸಿದೆ. ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಲು ಪಾಕಿಸ್ತಾನ ಆಟಗಾರರಿಗೆ ಭಾರತಕ್ಕೆ ಪ್ರವೇಶ ನೀಡುವುದಾಗಿ ಬಿಸಿಸಿಐ ಲಿಖಿತ ಪೂರ್ವಕವಾಗಿ ಭರವಸೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ.

    ಈ ಕುರಿತು ಮಾತನಾಡಿರುವ ಪಿಸಿಬಿ ಸಿಇಒ ವಸೀಂ ಖಾನ್, 2021, 2023ರ ವಿಶ್ವಕಪ್ ಟೂರ್ನಿಗಳಿಗೆ ಭಾರತ ಅತಿಥ್ಯ ವಹಿಸಲಿದೆ. ಈ ಎರಡು ಟೂರ್ನಿಗಳಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಬಿಸಿಸಿಐನಿಂದ ಲಿಖಿತ ಭರವಸೆಯನ್ನು ಕೊಡಿಸುವಂತೆ ಐಸಿಸಿಗೆ ಮನವಿ ಮಾಡಿದ್ದೇವೆ. ಮುಖ್ಯವಾಗಿ ವೀಸಾ ಕುರಿತ ಎಲ್ಲಾ ಕ್ಲಿಯರೆನ್ಸ್ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವೆ ಕೆಲ ಸಮಯದಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಎರಡು ದೇಶಗಳ ಕ್ರಿಕೆಟ್ ತಂಡಗಳು ಐಸಿಸಿ ಮತ್ತು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. 2018ರ ಏಷ್ಯಾಕಪ್‍ಗೆ ಭಾರತ ಆತಿಥ್ಯವಹಿಸಬೇಕಿತ್ತು. ಆದರೆ ಭಾರತ ಸರ್ಕಾರ, ಪಾಕ್ ಕ್ರಿಕೆಟ್ ತಂಡಕ್ಕೆ ದೇಶಕ್ಕೆ ಆಗಮಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಯುಎಇನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ 2021, 2023ರ ವಿಶ್ವಕಪ್ ಟೂರ್ನಿಗಳನ್ನು ಬೇರೆಡೆ ಆಯೋಜಿಸಲು ಬಿಸಿಸಿಐ ಸಿದ್ಧವಿಲ್ಲ ಎನ್ನಲಾಗಿದೆ. ಪರಿಣಾಮ ಪಿಸಿಬಿ ಸಮಸ್ಯೆ ಅರಿತು ಈಗಾಗಲೇ ತನ್ನ ಪ್ರಯತ್ನಗಳನ್ನು ಆರಂಭಿಸಿದೆ.

  • ಶೋಯೆಬ್‍ಗೆ ಶಾಕ್ ಕೊಟ್ಟ ಪಿಸಿಬಿ- 10 ಕೋಟಿ ರೂ. ಮಾನನಷ್ಟ ಕೇಸ್

    ಶೋಯೆಬ್‍ಗೆ ಶಾಕ್ ಕೊಟ್ಟ ಪಿಸಿಬಿ- 10 ಕೋಟಿ ರೂ. ಮಾನನಷ್ಟ ಕೇಸ್

    ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಹೆಬ್ ಅಖ್ತರ್‍ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಾಕ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಾದತ್ಮಾಕ ಹೇಳಿಕೆ ನೀಡುತ್ತಿರೋ ಅಖ್ತರ್ ವಿರುದ್ಧ ಪಿಸಿಬಿ ಸಲಹೆಗಾರ ತಫಝುಲ್ ರಿಝ್ವಿ ಮಾನನಷ್ಟ ಹಾಗೂ ಕ್ರಿಮಿನಲ್ ವಿಚಾರಣೆಗೆ ಪ್ರಕರಣ ದಾಖಲಿಸಿದ್ದಾರೆ.

    ಈ ಕುರಿತು ಪಿಸಿಬಿ ಅಧಿಕೃತವಾಗಿ ಮಾಹಿತಿ ನೀಡಿದ್ದು, ಪಿಸಿಬಿ ಕಾನೂನು ಸಲಹೆಗಾರ ರಿಝ್ವಿ ತಮ್ಮ ನಿರ್ದೇಶನದಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.

    ಪಾಕಿಸ್ತಾನ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ವಿರುದ್ಧ 3 ವರ್ಷ ನಿಷೇಧ ವಿಧಿಸಿದ್ದ ವಿಚಾರದ ಕುರಿತು ಅಖ್ತರ್ ಮಾತನಾಡಿದ್ದು, ಈ ವೇಳೆ ತಮ್ಮ ವಿಡಿಯೋದಲ್ಲಿ ಕೆಟ್ಟ ವ್ಯಾಖ್ಯಾಗಳನ್ನು ಬಳಿಸಿ ಪಿಸಿಬಿ ಕಾನೂನು ಸಲಹೆಗಾರರ ವಿರುದ್ಧ ಮಾತನಾಡಿದ್ದರು. ಪರಿಣಾಮ ಅಸಮಾಧಾನ ವ್ಯಕ್ತಪಡಿಸಿರುವ ಪಿಸಿಬಿ 10 ಕೋಟಿ ರೂ. ಮಾನನಷ್ಟ ಪ್ರಕರಣ ದಾಖಲಿಸಿದೆ.

    ಅಖ್ತರ್ ಬಳಕೆ ಮಾಡಿರುವ ಪದಗಳಿಂದ ಪಿಸಿಬಿಗೆ ಬೇಸರವಾಗಿದೆ. ಸಂಸ್ಥೆಯ ಸಲಹೆಗಾರರ ಕುರಿತಾಗಿ ಮಾತನಾಡುವ ವೇಳೆ ಎಚ್ಚರಿಕೆ ವಹಿಸಿಬೇಕಾಗಿತ್ತು. ಅಖ್ತರ್ ಬಳಿಸಿದ ಭಾಷೆ ನಿಜಕ್ಕೂ ಅಸಹನೀಯವಾಗಿದೆ. ಆದ್ದರಿಂದ ರಿಝ್ವಿ ಅವರು ತಮ್ಮದೇ ನಿರ್ದೇಶನದಲ್ಲಿ ಪ್ರಕರಣ ದಾಖಲಿಸಿದ್ದು, ಪಿಸಿಬಿ ಕೂಡ ತನ್ನ ಹಕ್ಕನ್ನು ಕಾಯ್ದುಕೊಳ್ಳಲಿದೆ ಎಂದು ಬೋರ್ಡ್ ಹೇಳಿದೆ.

    ಸಾಮಾಜಿಕ ಜಾಲತಾಣದಲ್ಲಿ ಅಖ್ತರ್ ಸಾಕಷ್ಟು ಸಕ್ರಿಯರಾಗಿದ್ದು, ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಈ ವಿಡಿಯೋಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮಾತ್ರವಲ್ಲದೇ ವಿವಿಧ ದೇಶದ ಆಟಗಾರು ಹಾಗೂ ಭಾರತ-ಪಾಕಿಸ್ತಾನ ಕುರಿತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆಯೂ ಭಾರತ-ಪಾಕಿಸ್ತಾನ ಕ್ರಿಕೆಟ್ ಟೂರ್ನಿ ಆಯೋಜಿಸುವ ಕುರಿತು ಅಖ್ತರ್ ಮಾತನಾಡಿದ್ದರು.

    ಅಕ್ಮಲ್ ನಿಷೇಧ ವಿಚಾರವಾಗಿ ರಿಝ್ವಿ ವಿರುದ್ಧ ಟೀಕೆ ಮಾಡಿದ್ದ ಅಖ್ತರ್, ಆತನಿಗೆ ತಲೆ ಇಲ್ಲ. ಇಂತಹ ಪ್ರಕರಣದಲ್ಲಿ 3 ವರ್ಷ ನಿಷೇಧ ವಿಧಿಸುವ ಅಗತ್ಯವಿರಲಿಲ್ಲ ಎಂದಿದ್ದರು. ಅಲ್ಲದೇ ನಜೀರ್ ವಿರುದ್ಧವೂ ಟೀಕೆ ಮಾಡಿ, ಸೆಹ್ವಾಗ್ ಇರೋ ತಲೆ ಇಮ್ರಾನ್ ನಜೀರ್ ಗೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಆತನಿಗೆ ನಾನು ತಾಳ್ಮೆಯಿಂದ ಆಡುವಂತೆ ಹೇಳಿದ್ದೆ. ಭಾರತದ ವಿರುದ್ಧ ಶತಕ ಸಿಡಿಸಿದ ಬಳಿಕ ನಾನು ಈ ಮಾತನ್ನು ಹೇಳಿದ್ದೆ. ಆದರೆ ನನ್ನ ಮಾತನ್ನು ಕೇಳದ ಕಾರಣ ಆತ ತಂಡದಿಂದ ದೂರ ಉಳಿದ ಎಂದು ಅಖ್ತರ್ ಕಿಡಿಕಾಡಿದ್ದರು. ಅಲ್ಲದೇ ವಾಸೀಂ ಅಕ್ರಂ ನನ್ನನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಕೇಳಿದ್ದರೆ ನಾನು ಆತನನ್ನು ಕೊಲೆ ಮಾಡುತ್ತಿದ್ದೆ. ಆದರೆ ವಾಸೀಂ ಅಕ್ರಂ ನನ್ನ ಬಳಿ ಎಂದು ಮ್ಯಾಚ್ ಫ್ರಿಕ್ಸಿಂಗ್ ಕುರಿತು ಮಾತನಾಡಿಲ್ಲ ಎಂದು ಅಖ್ತರ್ ಕಾಮೆಂಟ್ ಮಾಡಿದ್ದರು.

  • ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

    ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

    ಇಸ್ಲಾಮಾಬಾದ್: ಭಾರತ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು ಎಂದು ಪಾಕಿಸ್ತಾನ ಅನುಭವಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

    ಶ್ರೀಲಂಕಾದಲ್ಲಿ 2010ರಲ್ಲಿ ನಡೆದಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಪರಸ್ಪರ ಮುಖಾಮಖಿಯಾಗಿ ಅಕ್ಮಲ್, ಗಂಭೀರ್ ಜಗಳವಾಡಿದ್ದ ಘಟನೆ ಸಾಕಷ್ಟು ಮಂದಿಗೆ ನೆನಪಿರುತ್ತದೆ. ಅಂದು ಗಂಭೀರ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಅಕ್ಮಲ್ ಅನಗತ್ಯವಾಗಿ ಅಂಪೈರ್ ಗೆ ಮನವಿ ಮಾಡುತ್ತಿದ್ದರು. ಪರಿಣಾಮ ತಾಳ್ಮೆ ಕಳೆದುಕೊಂಡ ಗಂಭೀರ್ ಅಕ್ಮಲ್‍ಗೆ ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಅಕ್ಮಲ್ ಕೂಡ ಕೋಪಗೊಂಡ ಹಿನ್ನೆಲೆಯಲ್ಲಿ ಆನ್‍ಫೀಲ್ಡ್ ನಲ್ಲೇ ಜಗಳ ವಾಡಿದ್ದರು. ಇದೇ ಪಂದ್ಯದಲ್ಲಿ ಡ್ರಿಂಕ್ಸ್ ವೇಳೆ ಮತ್ತೊಮ್ಮೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇತ್ತ ಮತ್ತೊಂದು ಬದಿಯಲ್ಲಿದ್ದ ನಾಯಕ ಧೋನಿ, ಗಂಭೀರ್ ಅವರಿಗೆ ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಗಮನರ್ಹವಾಗಿ ಎಲ್ಲರ ನೆನಪಿನಲ್ಲಿದೆ.

    ಬಳಿಕ 2012-13ರ ಭಾರತ, ಪಾಕ್ ನಡುವೆ ಬೆಂಗಳೂರಿನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಇಶಾಂತ್ ಶರ್ಮಾ, ಕಮ್ರಾನ್ ಅಕ್ಮಲ್ ವಾಗ್ವಾದ ನಡೆಸಿದ್ದರು. ಈ ಎರಡು ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮ್ರಾನ್ ಅಕ್ಮಲ್, ಈ ಘಟನೆಗಳನ್ನು ಕ್ರೀಡಾಂಗಣದಲ್ಲೇ ಮರೆತು ಹೋಗಿದ್ದೇನೆ. ನನ್ನ ಹಾಗೂ ಗಂಭೀರ್, ಇಶಾಂತ್ ನಡುವೆ ಉತ್ತಮ ಸ್ನೇಹವಿದೆ. ಪಂದ್ಯದ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಕಾರಣದಿಂದ ಜಗಳ ನಡೆದಿತ್ತು. ಗಂಭೀರ್ ನನಗೆ ಕ್ರೀಡಾಂಗಣದಲ್ಲಿ ಏನು ಹೇಳಿದರು ಎಂಬುವುದು ಅರ್ಥವಾಗದ ಕಾರಣ ಜಗಳ ನಡೆದಿತ್ತು. ಗಂಭೀರ್ ನಾನು ಉತ್ತಮ ಸ್ನೇಹಿತರಾದ ಕಾರಣ ಕ್ರಿಕೆಟ್ ಟೂರ್ನಿಗಳ ವೇಳೆ ಭೇಟಿ ಮಾಡಿ ಒಟ್ಟಿಗೆ ಊಟ ಮಾಡುತ್ತಿದ್ದೆವು. ಇಶಾಂತ್ ಜೊತೆಗಿನ ಘಟನೆಯೂ ಕೂಡ ಇಂತಹದ್ದೆ. ಇಂದಿಗೂ ನಾವು ಪರಸ್ಪರ ಗೌರವದಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

    ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಪರ 53 ಟೆಸ್ಟ್, 157 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದು, ಇತ್ತೀಚೆಗೆ ಕಮ್ರಾನ್ ಅಕ್ಮಲ್ ಸಹೋದರ ಉಮರ್ ಅಕ್ಮಲ್ ವಿರುದ್ಧ ಪಿಸಿಬಿ ಮೂರು ವರ್ಷ ನಿಷೇಧ ವಿಧಿಸಿತ್ತು. ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಸಂಪರ್ಕ ನಡೆಸಿದ ವಿಚಾರವನ್ನು ಕ್ರಿಕೆಟ್ ಬೋರ್ಡಿಗೆ ತಿಳಿಸದ ಕಾರಣ ಪಿಸಿಬಿ ನಿಷೇಧ ವಿಧಿಸಿತ್ತು.

  • ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

    ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

    ಫಿಕ್ಸಿಂಗ್‍ಗೂ ಪಾಕಿಸ್ತಾನಕ್ಕೂ ಬಿಡದ ನಂಟು..!

    ಇಸ್ಲಾಮಾಬಾದ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಎಂದಾಕ್ಷಣ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಹೆಸರು ನೆನಪಾಗುತ್ತದೆ. ಕಳೆದ 2 ದಶಕಗಳಲ್ಲಿ ಸರಿ ಸುಮಾರು 8 ಮಂದಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ನಿಷೇಧವನ್ನು ಎದುರಿಸಿದ್ದಾರೆ. ಈಗಲೂ ಕೂಡ ಪಾಕ್ ಕ್ರಿಕೆಟಿಗರೊಂದಿಗೆ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದರೇ ಆಟಗಾರರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟವಾಗುತ್ತದೆ.

    ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್‍ಗೂ ಮುನ್ನ ಪಾಕಿಸ್ತಾನ ಅನುಭವಿ ಆಟಗಾರ ಉಮರ್ ಅಕ್ಮಲ್‍ರನ್ನು ಫಿಕ್ಸಿಂಗ್ ಮಾಡಲು ಬುಕ್ಕಿಗಳು ಸಂಪರ್ಕಿಸಿದ್ದರು. ಪರಿಣಾಮ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಕ್ಮಲ್‍ಗೆ ಮೂರು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಅಮಾನತು ಮಾಡಿದೆ. ಇದೇ ವೇಳೆ ಫಿಕ್ಸಿಂಗ್ ಕಾರಣದಿಂದ ನಿಷೇಧಕ್ಕೊಳಗಾದ ಆಟಗಾರರ ಪಟ್ಟಿ ಇಂತಿದೆ.

    ಸಲೀಂ ಮಲಿಕ್ (2000): ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ನಿಷೇಧಕ್ಕೆ ಒಳಗಾದ ಆಟಗಾರ ಸಲೀಂ ಮಲಿಕ್. ಆ ವೇಳೆ ಆತನ ಮೇಲೆ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ ಕೆಲ ಸಮಯದ ಬಳಿಕ ಆತನ ಮೇಲಿನ ಅಮಾನತು ವಾಪಸ್ ಪಡೆಯಲಾಗಿತ್ತು. ಆದರೆ 2008ರಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ನಡೆಸಿ ಸಲೀಂ ಸಿಕ್ಕಿಹಾಕಿಕೊಂಡಿದ್ದ.

    ಅಟಾ-ಉರ್-ರೆಹಮಾನ್ (2000): ಫಿಕ್ಸಿಂಗ್ ನಡೆಸಲು ಬುಕ್ಕಿಗಳೊಂದಿಗೆ ಮಾತುಕತೆ ನಡೆಸಿದ ಕಾರಣದಿಂದ 2000ರಲ್ಲಿ ಆತನ ವಿರುದ್ಧ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ 2006 ರಲ್ಲಿ ಅಮಾನತು ಹಿಂಪಡೆಯಲಾಗಿತ್ತು.

    ಮೊಹಮ್ಮದ್ ಅಮಿರ್ (2011): ಇಂಗ್ಲೆಂಡ್ ಟೂರ್ನಿ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ನೋ ಬಾಲ್ ಎಸೆಯಲು ಬುಕ್ಕಿಗಳೊಂದಿಗೆ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲಾಗಿತ್ತು. 2010 ರಲ್ಲಿ ಅಮಿರ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ 2011ರಲ್ಲಿ 5 ವರ್ಷ ಅಮಾನತು ಮಾಡಲಾಗಿತ್ತು. ಅಮಾನತು ಅಂತ್ಯವಾದ ಬಳಿಕ 2016ರಲ್ಲಿ ಮತ್ತೆ ಅಮಿರ್ ಪಾಕ್ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದ.

    ಮೊಹಮ್ಮದ್ ಆಸಿಫ್ (2011): ಸ್ಪಾಟ್ ಫಿಕ್ಸಿಂಗ್ ಭಾಗವಾಗಿ ನೋ ಬಾಲ್ ಎಸೆದಿದ್ದ ಆಸಿಫ್‍ಗೆ 7 ವರ್ಷ ಅಮಾನತು ವಿಧಿಸಿಲಾಗಿತ್ತು. ಆದರೆ ಆ ಬಳಿಕ ಅಮಾನತು ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು. ಅಲ್ಲದೇ ವಿಚಾರಣೆ ಕಾರಣದಿಂದ ಆಸಿಫ್ 12 ತಿಂಗಳು ಜೈಲು ವಾಸ ಅನುಭವಿಸಿದ್ದ.

    ಸಲ್ಮಾನ್ ಭಟ್ (2011): 2010ರ ಇಂಗ್ಲೆಂಡ್ ಟೂರ್ನಿ ಭಾಗವಾಗಿ ನಡೆದಿದ್ದ ಟೂರ್ನಿಯಲ್ಲಿ ಅಮಿರ್, ಆಸಿಫ್‍ರೊಂದಿಗೆ ಭಟ್ ಕೂಡ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಜೀವಮಾನ ನಿಷೇಧಕ್ಕೆ ಒಳಗಾಗಿದ್ದ ಭಟ್‍ಗೆ ಆ ಬಳಿಕ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು.

    ಡ್ಯಾನಿಶ್ ಕನೇರಿಯಾ (2010): ಪಾಕಿಸ್ತಾನ ಪರ ಆಡಿದ ಮೊದಲ ಹಿಂದೂ ಎಂಬ ದಾಖಲೆ ಬರೆದಿದ್ದ ಡ್ಯಾನಿಶ್ ಕನೇರಿಯಾ ಇಂಗ್ಲೆಂಡ್‍ನಲ್ಲಿ ನಡೆದಿದ್ದ ಕೌಂಟಿ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಆತನ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೀವಮಾನ ನಿಷೇಧ ವಿಧಿಸಿತ್ತು. 2018 ರಲ್ಲಿ ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಿದ್ದ ಕನೇರಿಯಾ ಫಿಕ್ಸಿಂಗ್ ನಡೆಸಿದ್ದಾಗಿ ಒಪ್ಪಿಕೊಂಡಿದ್ದ.

    ಶಾರ್ಜೀಲ್ ಖಾನ್ (2018): ಪಾಕ್ ತಂಡದ ಆರಂಭಿಕ ಆಟಗಾರನಾಗಿದ್ದ ಶಾರ್ಜೀಲ್ ಖಾನ್ ಪಾಕ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಪಾಕಿಸ್ತಾನ್ ಸೂಪರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಹಾಕಿಕೊಂಡಿದ್ದ. ಪರಿಣಾಮ 5 ವರ್ಷ ಆತನನ್ನು ಅಮಾನತು ಮಾಡಲಾಗಿದೆ.

    ಉಮರ್ ಅಕ್ಮಲ್ (2020): ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಉಮರ್ ಅಕ್ಮಲ್‍ನನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಆತ ಪಾಕ್ ಕ್ರಿಕೆಟ್ ಬೋರ್ಡಿಗೆ ತಿಳಿಸಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡಿನ ಭ್ರಷ್ಟಾಚಾರ ನಿಗ್ರಹ ಸಮಿತಿ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ ವಿಧಿಸಲಾಗಿದೆ.

  • ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ

    ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ

    – ಸ್ಪಾಟ್ ಫಿಕ್ಸಿಂಗ್ ಅಪ್ರೋಚ್ ಮಾಹಿತಿ ನೀಡಲು ವಿಫಲ

    ಇಸ್ಲಾಮಾಬಾದ್: ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಮೇಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ 3 ವರ್ಷ ನಿಷೇಧಿಸಿದೆ.

    ಬೋರ್ಡ್ ಇಂದು ನಿಷೇಧ ಕುರಿತ ಮಾಹಿತಿಯನ್ನು ನೀಡಿದೆ. ಆದರೆ ಉಮರ್ ಅಕ್ಮಲ್ ಯಾವ ತಪ್ಪಿನ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಅಪ್ರೋಚ್ ಆಗಿರುವ ಕುರಿತು ಕ್ರಿಕೆಟ್ ಬೋರ್ಡಿಗೆ ಮಾಹಿತಿ ನೀಡಲು ವಿಫಲರಾದ ಕಾರಣದಿಂದ ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

    ಅಕ್ಮಲ್ ವಿರುದ್ಧ ಎರಡು ತಿಂಗಳ ಹಿಂದೆ ಭ್ರಷ್ಟಾಚಾರ ನೀತಿ ಸಂಹಿತೆ ಅಡಿ ತನಿಖೆ ಆರಂಭಿಸಲಾಗಿತ್ತು. ನಿಷೇಧ ಕುರಿತು ಮಾಹಿತಿ ನೀಡಿ ಪಿಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ನಿವೃತ್ತ ನ್ಯಾಯಮೂರ್ತಿ ಫಜಲ್ ಇ ಮಿರಾನ್ ನೇತೃತ್ವದ ಶಿಸ್ತು ಸಮಿತಿ 3 ವರ್ಷ ನಿಷೇಧ ವಿಧಿಸಿದೆ. ಫೆ.20 ರಂದು ಅಕ್ಮಲ್‍ರನ್ನು ಅಮಾನತು ಮಾಡಿ ಆದೇಶ ನೀಡಲಾಗಿತ್ತು.

    29 ವರ್ಷದ ಅಕ್ಮಲ್ ಪಾಕ್ ಪರ ಅಕ್ಟೋಬರಿನಲ್ಲಿ ಅಂತಿಮ ಪಂದ್ಯವನ್ನಾಡಿದ್ದರು. ಇದುವರೆಗೂ 21 ಟೆಸ್ಟ್, 121 ಏಕದಿನ ಹಾಗೂ 84 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಂತಿಮವಾಗಿ ಶ್ರೀಲಂಕಾ ವಿರುದ್ಧದ ಟಿ20 ಟೂರ್ನಿಯಲ್ಲಿ ಭಾಗಿಯಾಗಿದ್ದ ಅಕ್ಮಲ್, ಆಡಿದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.

  • ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ

    ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ

    ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಏಪ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

    ಪಿಸಿಬಿ ಈ ತಿಂಗಳಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಮತ್ತು ಐಪಿಎಲ್ ಬಗ್ಗೆ ಹೇಳಿಕೆ ನೀಡಿದೆ. ಏಷ್ಯಾಕಪ್‍ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೊರೊನೊ ವೈರಸ್ ಬಿಕ್ಕಟ್ಟು ಕಡಿಮೆಯಾದರೆ ಯುಎಇಯಲ್ಲಿ ಏಪ್ಯಾಕಪ್ ಟೂರ್ನಿಯು ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆದರೆ ಟೂರ್ನಿಯನ್ನು ಐಪಿಎಲ್‍ಗಾಗಿಯೇ ಮುಂದೂಡಲು ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ.

    ”ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದ್ದು, ಏಷ್ಯಾಕಪ್ ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆ ಸಮಯದಲ್ಲಿ ಕೊರೊನಾ ಭೀತಿ ಇದ್ದರೆ ಮಾತ್ರ ಟೂರ್ನಿಯನ್ನು ಮುಂದೂಡಲಾಗುತ್ತದೆ. ಆದರೆ ಐಪಿಎಲ್‍ಗಾಗಿ ಏಷ್ಯಾಕಪ್‍ನ ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅದನ್ನು ಒಪ್ಪುವುದಿಲ್ಲ. ಏಷ್ಯಾಕಪ್ ಟೂರ್ನಿಯನ್ನು ನವೆಂಬರ್ ಅಥವಾ ಡಿಸೆಂಬರ್‍ಗೆ ಮುಂದೂಡುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಇದು ನಮಗೆ ಸಾಧ್ಯವಿಲ್ಲ. ಯಾವುದೇ ಒಂದು ಸದಸ್ಯ ದೇಶಕ್ಕಾಗಿ ಏಷ್ಯಾಕಪ್ ಟೂರ್ನಿಯ ದಿನಾಂಕವನ್ನು ಬದಲಾಯಿಸುವುದು ಸರಿಯಲ್ಲ. ಇದಕ್ಕೆ ನಮ್ಮ ಬೆಂಬಲ ಇಲ್ಲ” ಎಂದು ವಾಸಿಮ್ ಖಾನ್ ತಿಳಿಸಿದ್ದಾರೆ.

    ಏಷ್ಯಾಕಪ್ ಭಾರತ-ಪಾಕ್ ವಿಷಯವಲ್ಲ:
    ಇದಕ್ಕೂ ಮುನ್ನ ಏಪ್ರಿಲ್ 14ರಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಕೂಡ ಇದೇ ಮಾತನ್ನು ಹೇಳಿದ್ದರು. ”ನಾನು ಈ ಎಲ್ಲಾ ಊಹಾಪೋಹಗಳ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ. ಆದರೆ ಈಗ ಏಷ್ಯಾಕಪ್ ನಡೆಸಬೇಕೋ ಬೇಡವೋ ಎಂಬುದು ಕೇವಲ ಭಾರತ-ಪಾಕಿಸ್ತಾನದ ವಿಷಯವಲ್ಲ. ಈ ಟೂರ್ನಿಯಲ್ಲಿ ಇನ್ನೂ ಅನೇಕ ದೇಶಗಳು ಭಾಗವಹಿಸುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಧಾರಾ ಕೈಗೊಳ್ಳಬೇಕು” ಎಂದಿದ್ದರು.

    ಈ ಮೊದಲ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತದ ಆಕ್ಷೇಪಣೆಯ ನಂತರ ಅದನ್ನು ಯುಎಇಗೆ ವರ್ಗಾಯಿಸಲಾಯಿತು. ಟೂರ್ನಿಯ ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಹೀಗಾಗಿ ಪಿಸಿಬಿ ಪಟ್ಟು ಸಾಧಿಸಲು ಮುಂದಾಗಿದೆ.

    ಏಷ್ಯಾಕಪ್‍ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ. ಆರನೇ ತಂಡವನ್ನು ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಮೊದಲ ಏಷ್ಯಾ ಕಪ್ ಟೂರ್ನಿ 1984ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡೆಸಿತ್ತು. ಟೂರ್ನಿಯು ಪ್ರತಿ 2 ವರ್ಷಗಳಿಗೊಮ್ಮೆ ನಡೆಯುತ್ತದೆ. ಟೀಂ ಇಂಡಿಯಾ ಇದುವರೆಗೆ 7 ಬಾರಿ ಏಷ್ಯಾ ಕಪ್ ಗೆದ್ದು ಬೀಗಿದೆ. ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿವೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಈವರೆಗೂ ಏಪ್ಯಾ ಕಪ್ ಗೆದ್ದಿಲ್ಲ.

    ಐಪಿಎಲ್ ಅನ್ನು ಮಾರ್ಚ್ 29ರಿಂದ ಆರಂಭಿಸಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಲಾಕ್‍ಡೌನ್ ಅನ್ನು ಮೇ 3ರವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿದ ಬೆನ್ನಲ್ಲೇ ಬಿಸಿಸಿಐ ಅನಿರ್ದಿಷ್ಟಾವಧಿಗೆ ಐಪಿಎಲ್ ಮುಂದೂಡಿತು.

    ಮೂಲಗಳ ಪ್ರಕಾರ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಿದರೆ ಸೆಪ್ಟೆಂಬರ್ ಅಥವಾ ನವೆಂಬರ್-ಡಿಸೆಂಬರ್ ನಡುವೆ ಬಿಸಿಸಿಐ ಐಪಿಎಲ್ ಅನ್ನು ನಡೆಸಲು ಮುಂದಾಗಿದೆ. ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.

  • ಏಷ್ಯಾ ಕಪ್-2020ರ ಭವಿಷ್ಯ ಭಾರತ, ಪಾಕ್ ನಡುವಿನ ನಿರ್ಧಾರವಲ್ಲ: ಪಿಸಿಬಿ ಅಧ್ಯಕ್ಷ

    ಏಷ್ಯಾ ಕಪ್-2020ರ ಭವಿಷ್ಯ ಭಾರತ, ಪಾಕ್ ನಡುವಿನ ನಿರ್ಧಾರವಲ್ಲ: ಪಿಸಿಬಿ ಅಧ್ಯಕ್ಷ

    ಇಸ್ಲಾಮಾಬಾದ್: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜನೆಯ ಕುರಿತು ಕೇಳಿ ಬರುತ್ತಿರುವ ಸುದ್ದಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹ್ಸಾನ್ ಮನಿ ಸ್ಪಷ್ಟನೆ ನೀಡಿದ್ದು, ಟೂರ್ನಿ ಆಯೋಜಿಸುವುದು ಅಥವಾ ಬಿಡುವುದು ಕೇವಲ ಭಾರತ-ಪಾಕಿಸ್ತಾನ ನಡುವಿನ ನಿರ್ಧಾರವಲ್ಲ ಎಂದಿದ್ದಾರೆ.

    ಎಲ್ಲವೂ ಅಂದುಕೊಂಡದಂತೆ ನಡೆದಿದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ಯುಎಇನಲ್ಲಿ 2020ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲು ಪಿಸಿಬಿ ಸಿದ್ಧತೆ ನಡೆಸಬೇಕಿತ್ತು. ಆದರೆ ಕೋವಿಡ್-12 ಸೋಂಕಿನ ಪರಿಣಾಮ ಕ್ರೀಡಾ ಜಗತ್ತು ತಲ್ಲಣಿಸಿದೆ. ಈಗಾಗಲೇ ಹಲವು ಟೂರ್ನಿಗಳನ್ನು ಮುಂದೂಡಲಾಗಿದ್ದರೆ. ಮತ್ತಷ್ಟು ಟೂರ್ನಿಗಳು ರದ್ದಾಗಿದೆ. ಬಿಸಿಸಿಐ ಕೂಡ ಮಹತ್ವದ ಐಪಿಎಲ್ ಟೂರ್ನಿಯನ್ನು ನಿರ್ದಿಷ್ಟಾವಧಿಗೆ ಮುಂದೂಡಿದೆ.

    ಕೆಲ ದಿನಗಳ ಹಿಂದೆ ಏಷ್ಯಾ ಕಪ್ ಆಯೋಜನೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಎಹ್ಸಾನ್ ಮನಿ, ಮಾಧ್ಯಮಗಳ ಸುದ್ದಿಗಳಿಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಟೂರ್ನಿ ಆಯೋಜನೆಯ ಕುರಿತು ಪ್ರಕಟವಾಗಿರುವ ವರದಿಗಳ ಮಾಹಿತಿ ಪಡೆದಿದ್ದೇನೆ. ಆದರೆ ಈ ವೇಳೆ ಟೂರ್ನಿಯನ್ನು ಏರ್ಪಡಿಸುವುದು ಅಥವಾ ರದ್ದು ಮಾಡುವುದು ಭಾರತ ಹಾಗೂ ಪಾಕ್ ನಡುವಿನ ನಿರ್ಧಾರವಲ್ಲ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಇತರೆ ದೇಶಗಳು ಕೂಡ ಅಭಿಪ್ರಾಯ ತಿಳಿಸಬೇಕಿದೆ ಎಂದಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ಏಷ್ಯಾ ಟೂರ್ನಿಯನ್ನು ಆಯೋಜಿಸುವುದು ಏಷ್ಯಾ ಕ್ರಿಕೆಟ್ ರಾಷ್ಟ್ರಗಳಿಗೆ ಅಗತ್ಯ. ಏಕೆಂದರೆ ಕೋವಿಡ್ ಬಳಿಕ ನಡೆಯಬೇಕಾದ ಪ್ರಮುಖ ಹಾಗೂ ಮೊದಲ ಟೂರ್ನಿ ಇದಾಗಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್‍ನಲ್ಲಿ ಸದಸ್ಯರಾಗಿರುವ ಎಲ್ಲಾ ರಾಷ್ಟ್ರಗಳಿಗೂ ಟೂರ್ನಿ ಮಹತ್ವದಾಗಿದೆ. ಟೂರ್ನಿ ಆಯೋಜಿಸುವುದು ಕೂಡ ಬಹುದೊಡ್ಡ ಸವಾಲು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ವಿಶ್ವದಲ್ಲಿ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿ ನಿವಾರಣೆಯಾದ ಬಳಿಕ ಯುಎಇ ಅಥವಾ ಬಾಂಗ್ಲಾದೇಶದಲ್ಲಿ ಟೂರ್ನಿ ಆಯೋಜಿಸುವ ಸಾಧ್ಯಗಳು ಇದೆ. ಕೊರೋನಾ ಅತೋಟಿಗೆ ಬಂದ ಕೂಡಲೇ ನಾವು ಟೂರ್ನಿ ಆಯೋಜಿಸಬಹುದಾಗಿದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ವಿಧಿಸಿರುವ ನಿರ್ಬಂಧಗಳು ನಿವಾರಣೆಯಾದ ಬಳಿಕ ಟೂರ್ನಿ ಆಯೋಜಿಸಿದರೆ ಸದಸ್ಯ ರಾಷ್ಟ್ರಗಳಿಗೆ ಆರ್ಥಿಕವಾಗಿ ಸಮರ್ಥವಾಗಲಿದೆ ಎಂದಿದ್ದಾರೆ.

    ಇದೇ ವೇಳೆ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ರದ್ದಾದರೆ ಕ್ರಿಕೆಟ್ ಸಂಸ್ಥೆಗಳಿಗೆ ಭಾರೀ ನಷ್ಟವಾಗಲಿದೆ. ಇಂತಹ ಸ್ಥಿತಿಯಲ್ಲೂ ಐಸಿಸಿ ಒಪ್ಪಂದದಂತೆ ಹಣ ಸಂದಾಯ ಮಾಡಿದೆ. ಪಾಕ್ ಕೂಡ 7ರಿಂದ 8 ಮಿಲಿಯನ್ ಮೊತ್ತವನ್ನು ಪಡೆದುಕೊಂಡಿದ್ದೇವೆ. ಸಂಸ್ಥೆ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಲ್ಲದೇ ಟೂರ್ನಿ ನಡೆಸುವ ಐಸಿಸಿ ಚಿಂತನೆಯನ್ನು ಎಹ್ಸಾನ್ ಮನಿ ತಿರಸ್ಕರಿಸಿದ್ದಾರೆ. 2023 ರಿಂದ 2031ರ ವೇಳೆಯ ಐಸಿಸಿ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಪಾಕ್ ನೆಲದಲ್ಲಿ ನಡೆಸುವ ಚಿಂತನೆಯೂ ಇದೆ ಎಂದಿದ್ದಾರೆ.

  • ಪಿಎಸ್‍ಎಲ್‍ಗಾಗಿ ಪಾಕ್ ತೆರಳಿ ಸಮಸ್ಯೆಗೆ ಸಿಲುಕಿದ ಭಾರತೀಯರು

    ಪಿಎಸ್‍ಎಲ್‍ಗಾಗಿ ಪಾಕ್ ತೆರಳಿ ಸಮಸ್ಯೆಗೆ ಸಿಲುಕಿದ ಭಾರತೀಯರು

    ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಪ್ರಸಾರ ಮಾಡುವ ಸಲುವಾಗಿ ಪಾಕ್‍ಗೆ ತೆರಳಿದ್ದ ಭಾರತೀಯರ ತಂಡ ಸಮಸ್ಯೆಗೆ ಸಿಲುಕಿದ್ದು, ಕೊರೊನಾ ಎಫೆಕ್ಟ್ ನಿಂದ ಟೂರ್ನಿ ಮುಂದೂಡುತ್ತಿದಂತೆ ಭಾರತಕ್ಕೆ ಹಿಂದಿರುಗಿ ಬರಲು ಯತ್ನಿಸಿದ್ದಾರೆ.

    ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವಿನ ಗಡಿಯನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಘಾ ಗಡಿಗೆ ಆಗಮಿಸಿದ್ದ ಬ್ರಾಡ್‍ಕಾಸ್ಟಿಂಕ್ ಸಂಸ್ಥೆಯ ಸಿಬ್ಬಂದಿಯನ್ನು ಗಡಿ ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮತ್ತೆ ವಾಪಸ್ ಕಳುಹಿಸಿದ್ದಾರೆ. ಪರಿಣಾಮ ಪಾಕ್ ತೆರಳಿದ್ದ 29 ಮಂದಿ ಭಾರತಕ್ಕೆ ವಾಪಸ್ ಬರಲು ಸಮಸ್ಯೆ ಎದುರಿಸಿದ್ದಾರೆ. ಇತ್ತ ಪಾಕಿಸ್ತಾನ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಲು ತಯಾರಿ ನಡೆಸಿದೆ.

    ಪಿಎಸ್‍ಎಲ್ ಪ್ರಸಾರ ಮಾಡುವ ಹಿನ್ನೆಲೆಯಲ್ಲಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆ ಭಾರತದ 29 ಮಂದಿಯನ್ನು ಪಾಕ್‍ಗೆ ಕಳುಹಿಸಿತ್ತು. ಕೇಂದ್ರ ಸರ್ಕಾರ ಕೂಡ ಅವರಿಗೆ ವಿಮಾನ ಮೂಲಕ ಪಾಕ್ ತೆರಳಲು ಅನುಮತಿ ನೀಡಿತ್ತು. ಆದರೆ ಸದ್ಯ ಸಿಬ್ಬಂದಿ ಭೂ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರ ವಿಮಾನದಲ್ಲಿ ಭಾರತಕ್ಕೆ ಆಗಮಿಸಲು ಅನುಮತಿ ನೀಡಿದೆ ವಿನಾಃ ಭೂ ಮಾರ್ಗದ ಮೂಲಕ ಅಲ್ಲ ಎಂದು ಗಡಿ ಭದ್ರತಾ ಸಿಬ್ಬಂದಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆಗೆ ತಿಳಿಸಿ ವಾಪಸ್ ಕಳುಹಿಸಿದ್ದಾರೆ.

    ಅಂದಹಾಗೇ ವಿಶ್ವದ ಹಲವರು ಭಾಗಗಳಲ್ಲಿ ಕೊರೊನಾ ಎಫೆಕ್ಟ್ ಹೆಚ್ಚಾಗಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ನೆಲದಲ್ಲಿ ಕೊರೊನಾ ಪ್ರಭಾವ ಇಲ್ಲ ಎಂದು ವಾದ ಮಂಡಿಸುತ್ತಿದೆ. ತೀವ್ರ ಒತ್ತಡ ಹಿನ್ನೆಲೆಯಲ್ಲಿ ಅಂತಿಮವಾಗಿ ಪಾಕ್ ಕ್ರಿಕೆಟ್ ಮಂಡಳಿ ಪಿಎಸ್‍ಎಲ್ ಟೂರ್ನಿಯನ್ನು ಮುಂದೂಡಿದೆ. ಅಲ್ಲದೇ ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ ಅವರಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪಿಸಿಬಿ ಕೂಡಲೇ ಅವರನ್ನು ತವರಿಗೆ ವಾಪಸ್ ಕಳುಹಿಸಿಕೊಟ್ಟಿತ್ತು. ಈ ವಿಚಾರವನ್ನು ರಹಸ್ಯವಾಗಿಟ್ಟು ಟೂರ್ನಿ ಮುಂದುವರಿಸುವ ಚಿಂತನೆಯಲ್ಲಿದ್ದ ಸಮಯದಲ್ಲಿ ಕ್ರಿಕೆಟ್ ವಿಶ್ಲೇಷಣೆಗಾರ ರಮೀಜ್ ರಾಜಾ ಘಟನೆಯನ್ನು ಬಹಿರಂಗ ಪಡಿಸಿದ್ದರು. ಇದರೊಂದಿಗೆ ತೀವ್ರ ಮುಖಭಂಗಕ್ಕೆ ಒಳಗಾದ ಪಿಸಿಬಿ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು. ಇಂಗ್ಲೆಂಡ್‍ಗೆ ವಾಪಸ್ ಆಗಿರುವ ಅಲೆಕ್ಸ್ ಹೇಲ್ಸ್ ಜ್ವರದಿಂದ ಬಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಸದ್ಯ ಅವರು ಆರೋಗ್ಯದ ಇಲಾಖೆಯ ಸೂಚನೆಗಳ ಅನ್ವಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.