Tag: Payment

  • ನಿಗಮಗಳಿಗೆ ವಿಶೇಷ ಅನುದಾನ ನೀಡಲು ಸಾಧ್ಯವಿಲ್ಲ: ಸಾರಿಗೆ ಇಲಾಖೆ

    ನಿಗಮಗಳಿಗೆ ವಿಶೇಷ ಅನುದಾನ ನೀಡಲು ಸಾಧ್ಯವಿಲ್ಲ: ಸಾರಿಗೆ ಇಲಾಖೆ

    ಬೆಂಗಳೂರು: ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್‌ ಪುಷ್ಪಾ ಅವರು KSRTC, BMTC ಸೇರಿದಂತೆ 4 ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆ ಸರಿದೂಗಿಸಲು ಹೆಚ್ಚುವರಿ ವಿಶೇಷ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚ ನಿಭಾಯಿಸಲು ಹಾಗೂ ವೇತನ ಪಾವತಿ, ಇಂಧನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ. ನಿಗಮಗಳು ಆಂತರಿಕ ಸಂಪನ್ಮೂಲಗಳಿಂದಲೇ ಇದನ್ನು ಭರಿಸುವಂತೆ ಜೂನ್‌ 7ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

    ಶಕ್ತಿ ಯೋಜನೆಗೆ (Shakti Scheme) ಸರ್ಕಾರದಿಂದ 4 ಸಾವಿರ ಕೋಟಿಯಷ್ಟು ವಾರ್ಷಿಕ ಹೆಚ್ಚುವರಿ ಹೊರೆ ತಗುಲಲಿದೆ. ಹೀಗಾಗಿ ನಿಗಮಗಳಿಗೆ ಹೆಚ್ಚುವರಿ ವಿಶೇಷ ಅನುದಾನ ಒದಗಿಸಲು ಅವಕಾಶ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮೂಲಕ ಟೀಕಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರೆ ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಹೆಚ್ಚುವರಿ ಅನುದಾನ ನೀಡಲಾಗುವುದಿಲ್ಲವೆಂದು ಆರ್ಥಿಕ ಇಲಾಖೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಸಿದ್ದರಾಮಯ್ಯನವರೇ ಸಾರಿಗೆ ಸಂಸ್ಥೆಗಳ ನೌಕರರ ಸಂಬಳ ಹಾಗೂ ನಿಗಮಗಳ ಅಭಿವೃದ್ಧಿಯ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ.

  • ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಜೈಪುರ: ದಲಿತ (Dalit) ವ್ಯಕ್ತಿಯೊಬ್ಬರು ತಾನು ಮಾಡಿದ ಕೆಲಸಕ್ಕೆ ಸಂಬಳ (Payment) ನೀಡುವಂತೆ ಕೇಳಿದ್ದಕ್ಕೆ ಕೆಲ ಕಿಡಿಗೇಡಿಗಳು ಅವರನ್ನು ಥಳಿಸಿ (Assault), ಚಪ್ಪಲಿಯ ಮಾಲೆ ಹಾಕಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ವಿಕೃತ ಘಟನೆ ರಾಜಸ್ಥಾನದ (rajasthan) ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ದಲಿತ ವ್ಯಕ್ತಿ ಎಲೆಕ್ಟ್ರಿಷಿಯನ್ ಆಗಿದ್ದು, ತಾನು ಮಾಡಿದ ಕೆಲಸಕ್ಕೆ ಸಂಬಳ ಕೇಳಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಿಕೃತ ಕೃತ್ಯ ಎಸಗಿದ್ದಾರೆ. ದಾಳಿ ಮಾಡಿದವರಲ್ಲಿ ಒಬ್ಬ ಇದರ ವೀಡಿಯೋವನ್ನೂ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ದಲಿತ ವ್ಯಕ್ತಿ ತನ್ನನ್ನು ಥಳಿಸದಂತೆ ಬೇಡಿಕೊಂಡಿದ್ದಾರೆ. ಬಳಿಕ ವೀಡಿಯೋವನ್ನು ದಾಳಿಕೋರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿ ಭರತ್ ಕುಮಾರ್ (28) ನವೆಂಬರ್ 23ರಂದು ಪೊಲೀಸರಿಗೆ ಮೂವರ ವಿರುದ್ಧ ದೂರು ನೀಡಿದ್ದಾರೆ. ಅವರು ಕೆಲವು ಎಲೆಕ್ಟ್ರಿಷಿಯನ್ ಕೆಲಸ ಮಾಡಿದ್ದು, 21,100 ರೂ. ಬಿಲ್ ಮಾಡಿದ್ದಾರೆ. ಕೆಲಸ ಮಾಡಿಸಿಕೊಂಡ ವ್ಯಕ್ತಿ ತಕ್ಷಣಕ್ಕೆ ಅವರಿಗೆ 5,000 ರೂ. ನೀಡಿ, ಉಳಿದ ಹಣವನ್ನು ನವೆಂಬರ್ 19ರಂದು ಡಾಬಾವೊಂದಕ್ಕೆ ಹೋಗಿ ಪಡೆಯಲು ತಿಳಿಸಿದ್ದಾನೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    ಅದರಂತೆ ಭರತ್ ಕುಮಾರ್ ಡಾಬಾಗೆ ತೆರಳಿ ಉಳಿದ ಹಣ ಕೇಳಿದ್ದಾರೆ. ಈ ವೇಳೆ ಅವರನ್ನು ರಾತ್ರಿ 9 ಗಂಟೆ ವೇಳೆಗೆ ಬರುವಂತೆ ಸೂಚಿಸಲಾಗಿದೆ. ಭರತ್ ಮತ್ತೆ 9 ಗಂಟೆಗೆ ಡಾಬಾ ಬಳಿ ಬಂದಿದ್ದು, 9:10ರ ವರೆಗೆ ಕಾದು ಕುಳಿತರೂ ಹಣ ನೀಡದಿದ್ದಾಗ ಪೊಲೀಸರಿಗೆ ದುರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಈ ವೇಳೆ ಆರೋಪಿಗಳು ಭರತ್ ಅವರನ್ನು ಹಿಡಿದು ಥಳಿಸಿದ್ದಾರೆ. ಅಮಾನುಷವಾಗಿ ಹೊಡೆದಿದ್ದಲ್ಲದೇ ಚಪ್ಪಲಿಯ ಮಾಲೆ ಹಾಕಿದ್ದಾರೆ. ಆರೋಪಿಗಳಲ್ಲೊಬ್ಬ ಕೃತ್ಯದ ವೀಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ಆರೋಪಿಗಳು ತಮ್ಮ ಮೇಲೆ ಸುಮಾರು 5 ಗಂಟೆಗಳ ಕಾಲ ಹಲ್ಲೆ ನಡೆಸಿದ್ದಾರೆ ಎಂದು ಭರತ್ ಆರೋಪಿಸಿದ್ದಾರೆ. ಇದನ್ನೂ ಓದಿ: ಎಸ್ಕೇಪ್ ಆಗುತ್ತಿದ್ದ ಸರಗಳ್ಳನನ್ನು ಚಾಣಕ್ಷತನದಿಂದ ಹಿಡಿದ ಪೊಲೀಸ್ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

    ನವದೆಹಲಿ: ಆಪಲ್ ಭಾರತದಲ್ಲಿ ಆ್ಯಪ್ ಖರೀದಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯನ್ನು ಸ್ಥಗಿತಗೊಳಿಸಿದೆ.

    ಆಪಲ್ ತನ್ನ ಚಂದಾದಾರರಿಗೆ ಆ್ಯಪ್ ಖರೀದಿಸಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಆಯ್ಕೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಬಳಕೆದಾರರು ತಮ್ಮ ಆಪಲ್ ಫಂಡ್‌ಗೆ ಹಣವನ್ನು ಸೇರಿಸುವ ಮೂಲಕ ಆ್ಯಪ್ ಖರೀದಿ ಸಾಧ್ಯವಾಗುತ್ತಿದೆ. ಆಪಲ್ ಫಂಡ್ ಪ್ರೀ ಪೇಯ್ಡ್ ಕಾರ್ಡ್ನಂತೆ ಉಪಯೋಗವಾಗಿದ್ದು, ಪ್ರತಿ ತಿಂಗಳು ಬಳಕೆದಾರರ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದನ್ನೂ ಓದಿ: ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್‌ನಲ್ಲಿ ಶುಲ್ಕ ಸಾಧ್ಯತೆ: ಮಸ್ಕ್

    ಐಫೋನ್ ಹಾಗೂ ಐಪ್ಯಾಡ್ ಬಳಕೆದಾರರಿಗೆ ಆಪಲ್ ಫಂಡ್ ಬಳಸಲು ಆಪಲ್ ಐಡಿ ರಚಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ. ಬಳಕೆದಾರರು ಆ್ಯಪ್‌ಗಳನ್ನು ನವೀಕರಿಸಲು ಅಥವಾ ಖರೀದಿಸಲು ಬಯಸಿದರೆ, ಆಪಲ್ ಐಡಿ ಮೂಲಕ ವ್ಯವಹಾರ ನಡೆಯಲಿದೆ. ಇದನ್ನೂ ಓದಿ: ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ

    ಈ ಹಿಂದೆ ಆಪಲ್ ಡೆಬಿಟ್, ಕ್ರೆಡಿಟ್ ಹಾಗೂ ಯುಪಿಐ ಮೂಲಕ ಪಾವತಿಗೆ ಅವಕಾಶ ನೀಡಿತ್ತು. ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜಾರಿಗೊಳಿಸಿದ ಸ್ವಯಂ-ಡೆಬಿಟ್(ಆಟೋ-ಡೆಬಿಟ್) ನಿಯಮದ ಪರಿಣಾಮವಾಗಿ ಭಾರತೀಯ ಬಳಕೆದಾರರಿಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಯ ಆಯ್ಕೆಯನ್ನು ತೆಗೆದುಹಾಕಲು ಆಪಲ್ ನಿರ್ಧರಿಸಿತು.

  • 160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ

    160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ

    ದುಬೈ: 2016 ವಿಶ್ವಕಪ್ ಆಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್ 31ರ ವೇಳೆಗೆ 160 ಕೋಟಿ ರೂ. ಗಳನ್ನು ಐಸಿಸಿಗೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದೆ.

    ಮುಂದಿನ 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಏಕದಿನ ವಿಶ್ವಕಪ್ ಆತಿಥ್ಯ ಪಡೆದುಕೊಳ್ಳಲು ಐಸಿಸಿ ತಿಳಿಸಿದ ಮೊತ್ತವನ್ನು ಬಿಸಿಸಿಐ ಪಾವತಿ ಮಾಡಬೇಕಿದ್ದು, ಇಲ್ಲವಾದರೆ ಟೂರ್ನಿಯ ಆಯೋಜನೆಯ ಅವಕಾಶವನ್ನು ಕೈ ಬಿಡುವಂತೆ ಸೂಚನೆಯನ್ನು ಐಸಿಸಿ ನೀಡಿದೆ.

    ಏನಿದು ಪ್ರಕರಣ: 2016 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಬಿಸಿಸಿಐ ಆಯೋಜನೆ ಮಾಡಿತ್ತು. ಈ ವೇಳೆಗೆ ಐಸಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಯಾವುದೇ ರೀತಿಯ ವಿನಾಯಿತಿ ನೀಡಿರಲಿಲ್ಲ. ಸದ್ಯ ಈ ಮೊತ್ತವನ್ನು ಬಿಸಿಸಿಐ ಪಾವತಿ ಮಾಡದ ಕಾರಣ ಐಸಿಸಿ ಒತ್ತಡ ಈ ತಂತ್ರವನ್ನು ಬಳಕೆ ಮಾಡಿದೆ. ಐಸಿಸಿ ಸೂಚನೆಯಂತೆ 160 ಕೋಟಿ ರೂ. ಪಾವತಿ ಮಾಡಲು ಬಿಸಿಸಿಐಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ.

    ವಿಶ್ವಕಪ್ ಮೊತ್ತದ ಹಣ ಪಾವತಿ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಿಂಗಪುರ್ ನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲೂ ಬಿಸಿಸಿಐಗೆ ಮಾಹಿತಿ ನೀಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಒಂದು ವೇಳೆ 160 ಕೋಟಿ ರೂ ಪಾವತಿ ಮಾಡದಿದ್ದರೆ, 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021 ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಪ್ರಸಕ್ತ ವರ್ಷದಲ್ಲಿ ಯಾವುದೇ ರೀತಿಯ ಪಾಲು ಸಹ ನೀಡುವುದಿಲ್ಲ ಎಂದು ಅದು ತಿಳಿಸಿದೆ.

    ಐಸಿಸಿಗೆ 160 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ 10 ದಿನಗಳ ಕಾಲಾವಕಾಶ ಇದೆ. ಒಂದು ವೇಳೆ ಒತ್ತಡದ ಹೊರತಾಗಿಯೂ ಬಿಸಿಸಿಐ ಪಾವತಿ ಮಾಡಲು ನಿರಾಕರಿಸಿದರೆ ಐಸಿಸಿ ತನಗೆ ಪ್ರಸಕ್ತ ವರ್ಷದ ಭಾರತದ ಆದಾಯ ಹಂಚಿಕೆಯಲ್ಲಿ ಕಡಿತಗೊಳಿಸುತ್ತದೆ ಎಂಬ ಮಾತು ಸಹ ಕೇಳಿ ಬಂದಿದೆ. ಒಂದೊಮ್ಮೆ ಪಾವತಿ ಬಿಸಿಸಿಐ ಪಾವತಿ ಮಾಡಲು ವಿಫಲವಾದರೆ 2021ರ ಚಾಂಪಿಯನ್ ಟ್ರೋಫಿ ಹಾಗೂ 2023ರ ವಿಶ್ವಕಪ್ ಆಯೋಜನೆಯ ಅವಕಾಶ ಬಿಸಿಸಿಐ ಕೈ ತಪ್ಪುತ್ತದೆ. ಈ ಕುರಿತು ಐಸಿಸಿ ಮಂಡಳಿ ನಿರ್ಧಾರ ಮಾಡಲಿದೆ ಎಂಬ ಎಚ್ಚರಿಕೆಯೂ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv