Tag: pay

  • ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಮುಂಬೈ: ಗ್ರಾಮಸ್ಥರಿಗೆ ಕೋವಿಡ್-19 ಸೋಂಕು ಕಂಡು ಬಂದರೆ ಅಂತವರ ಕೊರೊನಾ ಪರೀಕ್ಷೆಯಿಂದ ಹಿಡಿದು, ಆಸ್ಪತ್ರೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪೂರ್ತಿ ಭರಿಸಲು ಖತಿವಾಲಿ ಗ್ರಾಮಪಂಚಾಯತ್ ಸಜ್ಜಾಗಿದೆ.

    ಮಹಾರಾಷ್ಟ್ರದ ಖತಿವಾಲಿ ಗ್ರಾಮಪಂಚಾಯತ್ ತನ್ನ ಗ್ರಾಮದ ಜನರಿಗೆ ಕೊರೊನಾ ಸೋಂಕು ಬಂದರೆ ಅವರ ಚಿಕಿತ್ಸಾ ವೆಚ್ಚ, ಆಸ್ಪತ್ರೆ ಖರ್ಚು ಎಲ್ಲವನ್ನು ಪಂಚಾಯತ್ ವತಿಯಿಂದ ಕೊಡುವುದಾಗಿ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದ ಬಿಲ್‍ನ್ನು ಪಂಚಾಯತ್‍ಗೆ ಕೊಟ್ಟರೆ ಪಂಚಾಯತ್ ವೆಚ್ಚವನ್ನು ಭರಿಸುವುದಾಗಿ ಪಂಚಾಯತ್‍ನ ಸದಸ್ಯರು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಶಹಾಪುರ ತಾಲೂಕಿನಲ್ಲಿ ಖತಿವಾಲಿ ಗ್ರಾಮವಿದ್ದು, ಗ್ರಾಮದಲ್ಲಿ 6000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲೂಕಿನಲ್ಲಿ ಕೇವಲ 1 ಕೊರೊನಾ ಚಿಕಿತ್ಸಾ ಆಸ್ಪತ್ರೆ ಇದ್ದು, ಈ ಆಸ್ಪತ್ರೆಗಾಗಿ ಖತಿವಾಲಿ ಗ್ರಾಮದಿಂದ 8 ಕಿಲೋ ಮೀಟರ್ ಬರಬೇಕಾಗಿದೆ. ಅದಲ್ಲದೆ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿ ಭರ್ತಿಗೊಂಡಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಅದರೆ ಗ್ರಾಮದ ಜನರಿಗೆ ಖಾಸಗಿ ಅಸ್ಪತ್ರೆಯ ವೆಚ್ಚ ಭರಿಸುವ ಸಾಮರ್ಥ್ಯ ವಿಲ್ಲದೆ ಇರುವುದರಿಂದಾಗಿ ಪಂಚಾಯತ್‍ನಿಂದ ಆಸ್ಪತ್ರೆ ಖರ್ಚು ಭರಿಸುವ ನಿರ್ಧಾರ ಮಾಡಲಾಗಿದೆ.

    ಈಗಾಗಲೇ ಶಹಾಪುರ ತಾಲೂಕಿನಲ್ಲಿ 6,660 ಕೊರೊನಾ ಕೇಸ್ ದಾಖಲಾಗಿದ್ದು,ಇದೀಗ 241 ಸಕ್ರಿಯ ಪ್ರಕರಣಗಳಿವೆ. 170 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಮಾತನಾಡಿರುವ ಖತಿವಾಲಿ ಗ್ರಾಮಪಂಚಾಯತ್ ಸದಸ್ಯರಾದ ದೇವಿದಾಸ್ ಜಾಧವ್, ಕೊರೊನಾದಿಂದಾಗಿ ಗ್ರಾಮದ ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಹೊರಭಾಗದ ಜನರ ಆಗಮನವನ್ನು ನಿಷೇಧಿಸಿದ್ದೇವೆ. ಆದರು ಕೂಡ ಗ್ರಾಮದಲ್ಲಿ ಸೋಂಕು ಕಂಡುಬರುತ್ತಿದೆ. ಗ್ರಾಮದ ಜನರು ಸರಿಯಾದ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್ ವತಿಯಿಂದ ಚಿಕಿತ್ಸಾ ವೆಚ್ಚಭರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

  • ವೇತನ ಹೆಚ್ಚಳಕ್ಕೆ ಆಗ್ರಹ – ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

    ವೇತನ ಹೆಚ್ಚಳಕ್ಕೆ ಆಗ್ರಹ – ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

    ಧಾರವಾಡ: ಜಿಲ್ಲೆಯಲ್ಲಿ ಇವತ್ತು ಆಶಾ ಕಾರ್ಯಕರ್ತೆರು ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಗೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಇವತ್ತು ವಿವಿಧ ಗ್ರಾಮಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯಗಳ ಮುಂದೆ ಪ್ರತಿಭಟನೆ ಮಾಡಿದರು.

    ಜಿಲ್ಲೆಯ ಮುಗದ, ಉಪ್ಪಿನಬೇಟಗೇರಿ, ಅಮ್ಮಿನಬಾವಿ ಸೇರಿದಂತೆ ಹಲವು ಕಡೆಗಳಲ್ಲಿ ಇವರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಮೊದಲೇ ಸರ್ಕಾರಕ್ಕೆ 12 ಸಾವಿರ ವೇತನಕ್ಕೆ ಇವರು ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದನೆ ಮಾಡಿಲ್ಲ. ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ಮಳೆ ಬರುತ್ತಿದ್ದು, ಈ ಮಳೆಯಲ್ಲಿಯೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದು ಕಂಡು ಬಂತು.

  • ಆತ್ಮಹತ್ಯೆಗೆ ಶರಣಾದ ಪೌರಕಾರ್ಮಿಕನ ನಿವಾಸಕ್ಕೆ ಡಿಸಿಎಂ ಭೇಟಿ

    ಆತ್ಮಹತ್ಯೆಗೆ ಶರಣಾದ ಪೌರಕಾರ್ಮಿಕನ ನಿವಾಸಕ್ಕೆ ಡಿಸಿಎಂ ಭೇಟಿ

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಪೌರಕಾರ್ಮಿಕ ಸುಬ್ರಮಣಿಯವರ ಮನೆಗೆ ಇಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ನಗರದ ದತ್ತಾತ್ರೇಯ ವಾರ್ಡ್ ನ ಮುನೇಶ್ವರ ಬ್ಲಾಕ್ ನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ್ ಮೃತ ಪೌರ ಕಾರ್ಮಿಕ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿ, ಪೌರಕಾರ್ಮಿಕ ಸುಬ್ರಮಣಿನ ಆತ್ಮಹತ್ಯೆ ವಿಷಾದದ ಸಂಗತಿ. ಬಿಬಿಎಂಪಿ ಯಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಿದ್ದೇವೆ. ಅವರು ಕಾಂಟ್ರಾಕ್ಟ್ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕಾಂಟ್ರಾಕ್ಟ್ ಪದ್ಧತಿಯನ್ನು ಖಾಯಂ ಮಾಡುತ್ತೇವೆ. ಪೌರಕಾರ್ಮಿಕರಿಗೆ ನೇರವಾಗಿ ಸಂಬಳ ತಲುಪುವ ಕೆಲಸ ಆಗಬೇಕಿದೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.

    ಕಾಂಟ್ರಾಕ್ಟರ್  ಗಳು ಆರು ತಿಂಗಳ ಸಂಬಳ ಬಾಕಿ ಉಳಿಸಿಕೊಂಡಿದ್ದಾರೆ. ವಾರದೊಳಗೆ ಎಲ್ಲರ ವೇತನ ಪೂರ್ಣಗೊಳಿಸಬೇಕು ಎಂದು ನಾನೀಗಾಗಲೇ ಆದೇಶ ಹೊರಡಿಸಿದ್ದು, ಯಾರೂ ಕೂಡ ಪಾಲಿಕೆ ಮುಂದೆ ವೇತನಕ್ಕಾಗಿ ಬರಬಾರದು ಎಂದರು.

    ಸರ್ಕಾರದಲ್ಲಿ ಇಂತಿಷ್ಟೇ ಪೌರಕಾರ್ಮಿಕರ ನೇಮಕ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಕಾಂಟ್ರಾಕ್ಟರ್‍ಗಳು ಹೆಚ್ಚು ಜನರ ನೇಮಕ ಮಾಡಿಕೊಂಡಿದ್ದು, ಸಮಸ್ಯೆಗಳಿಗೆ ಕಾರಣವಾಯ್ತು. ಹಾಗಾಗಿ ಎಲ್ಲ ಪೌರಕಾರ್ಮಿಕರ ಸಮಸ್ಯೆ ಶೀಘ್ರವೇ ಪರಿಹಾರವಾಗಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.

  • ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

    ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

    ಬೆಂಗಳೂರು: ಲಕ್ಷಾಂತರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಐಟಿ ಕಂಪೆನಿಗಳು ಮುಂದಾಗುತ್ತಿದ್ದಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹಿರಿಯ ಅಧಿಕಾರಿಗಳ ಸಂಬಳವನ್ನು ಕಡಿತಗೊಳಿಸಿ ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    ಹೊಸದಾಗಿ ಸೇರ್ಪಡೆಯಾಗಿರುವ ಯುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಇದರ ಬದಲಾಗಿ ಹಿರಿಯ ಮ್ಯಾನೇಜ್‍ಮೆಂಟ್ ಹಂತದಲ್ಲಿರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು ಉತ್ತಮ ಎಂದಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ನಮ್ಮ ಇನ್ಫೋಸಿಸ್ ಉದಾಹರಣೆ ತೆಗೆದುಕೊಳ್ಳಿ. 2011ರ ವೇಳೆ ಸಾಫ್ಟ್ ವೇರ್ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಹಿರಿಯ ಹಂತದ ಮ್ಯಾನೇಜ್‍ಮೆಂಟ್ ನಲ್ಲಿರುವ ವ್ಯಕ್ತಿಗಳೆಲ್ಲ ಸಭೆ ನಡೆಸಿದೆವು. ಸಭೆಯಲ್ಲಿ ಸಂಬಳವನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಿದೆವು. ಯುವ ಟೆಕ್ಕಿಗಳಿಗೆ ಜಾಬ್ ನೀಡಲು ಮತ್ತು ಅವರನ್ನು ರಕ್ಷಿಸಲು ಹಿರಿಯ ಸಿಬ್ಬಂದಿ ಈ ತ್ಯಾಗದ ನಿರ್ಧಾರವನ್ನು ಈಗ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಸುಮ್ಮನೆ ಉದ್ಯೋಗಿಯನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಯಾಕೆಂದರೆ ಅವರನ್ನು ನಂಬಿಕೊಂಡ ಕುಟುಂಬವು ಇದೆ ಎಂದು ಎಂದು ತಿಳಿಸಿದರು.

    2008, 2011ರಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಸ್ಯೆ ನಮಗೆ ಹೊಸದೆನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗದೇ ಇರಲು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾರಾಯಣ ಮೂರ್ತಿ ಹೇಳಿದರು.

    ಎಷ್ಟು ಜನ ಮನೆಗೆ?
    ಮುಂದಿನ ಮೂರು ವರ್ಷದಲ್ಲಿ ಐಟಿ ವಲಯದಲ್ಲಿ 1.75 ಲಕ್ಷದಿಂದ 2 ಲಕ್ಷ ಎಂಜಿನಿಯರ್‍ಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಉದ್ಯೋಗ ವಲಯದ ಪ್ರಮುಖ ಸಂಸ್ಥೆಯಾದ ಹೆಡ್ ಹಂಟರ್ಸ್ ಇಂಡಿಯಾ ಹೇಳಿದೆ. ಮ್ಯಾಕ್‍ಕಿನ್ಸ್ ಆಂಡ್ ಕಂಪೆನಿ ಮುಂದಿನ ಮೂರು ವರ್ಷದಲ್ಲಿ 3-4 ವರ್ಷದಲ್ಲಿ ಐಟಿ ವಲಯದ ಅರ್ಧದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ.

    ಮನೆಗೆ ಕಳುಹಿಸುತ್ತಿರುವುದು ಯಾಕೆ?
    ಕೌಶಲ್ಯ ಹೊಂದಿರುವ ಎಂಜಿನಿಯರ್‍ಗಳ ಸಂಖ್ಯೆ ಕಡಿಮೆಯಾಗಿದ್ದು, ಅಟೋಮೇಶನ್ ಹೆಚ್ಚಾಗುತ್ತಿರುವುದರಿಂದ ಕಂಪೆನಿಗಳು ಈಗ ಐಟಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗುತ್ತಿವೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ನೇಮಕವಾದ ಬಳಿಕ ವೀಸಾ ನಿಯಮವನ್ನು ಬಿಗಿಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕದ ಜನರಿಗೆ ಕಂಪೆನಿಗಳು ಉದ್ಯೋಗ ನೀಡಬೇಕು ಎಂದು ಹೇಳಿರುವುದರಿಂದ ಭಾರತೀಯ ಐಟಿ ಕಂಪೆನಿಗಳ ಮಾರುಕಟ್ಟೆಯ ಮೇಲೆ ಭಾರೀ ಹೊಡೆತ ಬಿದ್ದಿದೆ.

    ಇದನ್ನೂ ಓದಿ:ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?