Tag: Patriot

  • ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಬೆಂಗಳೂರು: ನಾಥೂರಾಮ್ ಗೋಡ್ಸೆ ಮತ್ತು ಬ್ರಾಹ್ಮಣರ ಬಗ್ಗೆ ಚಂದನವನದ ನಟಿ ಅನಿತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬಿಗ್‍ಬಾಸ್ ಕನ್ನಡ ಸ್ಪರ್ಧಿ ಅನಿತಾ ಭಟ್ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಬ್ರಾಹ್ಮಣ್ಯ ಮತ್ತು ಗಾಂಧೀಜಿಯನ್ನು ಕೊಂದ ಗೋಡ್ಸೆಗೆ ಜೈ ಎಂದು ಟ್ವೀಟ್ ಮಾಡಿದ್ದಾರೆ. ಈಗ ಈ ವಿಚಾರ ಪರ, ವಿರೋಧ ಚರ್ಚೆ ಆಗುತ್ತಿದೆ.

    ಟ್ವೀಟ್‍ನಲ್ಲಿ ಏನಿದೆ?
    ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಾಮೆಂಟ್ ಮಾಡಿದ್ದಾರೆ.

    ನಟಿ ಮುಂದುವರೆದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು? 

    ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದಾರೆ.

    ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ
    ಸೋಶಿಯಲ್ ಮೀಡಿಯಾದಲ್ಲಿ ಬ್ರಾಹ್ಮಣ್ಯದ ಕುರಿತು ಮಾತನಾಡಿದ ಅವರು, ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದ್ದೇನಾ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ನನಗೆ ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ. ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ. ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಕೊಂಡು ಕೂತಿದ್ದಾರೆ, ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ. ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ಅದಕ್ಕೆ ಒಬ್ಬ ನೆಟ್ಟಿಗ, ತಾವೇ ಸರ್ವಶ್ರೇಷ್ಠರು ಅನ್ನೋ ವಾದ, ಮಡಿವಂತಿಕೆ ಆಚರಣೆಗಳು ಇದೆಯಲ್ಲ ಅದೇ ಬ್ರಾಹ್ಮಣ್ಯ. ಅದಕ್ಕೆ ಎಲ್ಲರ ವಿರೋಧ ಅಷ್ಟೇ. ಅದು ಬಿಟ್ಟರೆ ಎಲ್ಲರೂ ಒಂದೇ ಯಾರು ಸಹ ಮೇಲಿಲ್ಲ ಕೀಳಿಲ್ಲ. ಎಂದು ಕಾಮೆಂಟ್ ಮಾಡಿದ್ದಾರೆ.

    ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ದತಿಯನ್ನ ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದ್ದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ ಎಂದು ಅದಕ್ಕೆ ಉತ್ತರಿಸಿದ್ದಾರೆ.

    ಅನಿತಾ ಭಟ್, 2008ರಲ್ಲಿ ಬಿಡುಗಡೆ ಆದ ‘ಸೈಕೊ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟದ್ದಾರೆ. ನಂತರ ‘ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ’, ‘ದೊಡ್ಮನೆ ಹುಡ್ಗಾ’, ‘ಟಗರು'(ಡಾಲಿ ಗರ್ಲ್‍ಫ್ರೆಂಡ್ ಪಾತ್ರ), ‘ಹೊಸ ಕ್ಲೈಮ್ಯಾಕ್ಸ್’, ‘ಡಿಎನ್‍ಎ’, ‘ಕನ್ನೇರಿ’, ‘ಕಲಿವೀರ’, ‘ಬೆಂಗಳೂರು-69’, ‘ಬಳೆಪೇಟೆ’, ‘ಜೂಟಾಟ’, ತೆಲುಗಿನ ‘ಕೃಷ್ಣ ಲಂಕಾ’ ಸಿನಿಮಾ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    – ರಾಹುಲ್ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಹೇಳಿ ವಿವಾದ ಸೃಷ್ಟಿ ಮಾಡಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ.

    ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಧ್ವಿ ಪ್ರಜ್ಞಾ ಟೆರರಿಸ್ಟ್ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದರು.

    ಈ ಹೇಳಿಕೆ ವಿಚಾರವಾಗಿ ಸ್ವಪಕ್ಷ ಬಿಜೆಪಿ ಕೂಡ ಸಾಧ್ವಿ ಪ್ರಜ್ಞಾಗೆ ತಪರಾಕಿ ಹಾಕಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ರೂಪ ನೀಡಿದ್ದಾರೆ. ನಾನು ಗಾಂಧೀಜಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಸಂಸತ್ತಿನ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಅದು ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪಗಳು ಸಾಬೀತಾಗದೆ ಇದ್ದರೂ ಅವರು ಹೀಗೆ ಹೇಳಿರುವುದು ಒಬ್ಬ ಮಹಿಳಾ ಸಂಸದೆ ಮತ್ತು ಸನ್ಯಾಸಿಗೆ ಮಾಡಿರುವ ಅವಮಾನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದರು.

    ಇದರ ಜೊತೆಗೆ ಸಾಧ್ವಿ ಪ್ರಜ್ಞಾ ಅವರು ಈ ರಾಷ್ಟ್ರಕ್ಕಾಗಿ ಗಾಂಧೀಜಿ ಅವರ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಒಂದು ಪಕ್ಷ ನನ್ನನ್ನು ಗುರಿಯಾಗಿಸಿಕೊಂಡು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದರು.

    ಈ ಆರೋಪದ ನಂತರ ಲೋಕಸಭೆಯಲ್ಲಿ ಕೆಲಕಾಲ ಕಾಂಗ್ರೆಸ್ ಸಂಸದರು ಸಾಧ್ವಿ ಪ್ರಜ್ಞಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಸಂಸದ ನಿಷ್ಕಾಂತ್ ದುಬೆ, ಈಗ ಸಾಧ್ವಿ ಪ್ರಜ್ಞಾ ಅವರು ಕ್ಷಮೆ ಕೇಳಿದ್ದಾರೆ. ಆದರೆ ಒಬ್ಬ ಸಂಸದೆಯನ್ನು ಟೆರರಿಸ್ಟ್ ಎಂದು ಹೇಳಿದ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ಸ್ಪೀಕರ್ ಅವರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

    ಏನಿದು ವಿವಾದ?
    ಬುಧವಾರ ಸಂಸತಿನಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದರು.

    ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದರು. ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು.

  • ಹೆಗಡೆ, ನಳಿನ್ ವಿರುದ್ಧ ಕ್ರಮ ಯಾಕಿಲ್ಲ – ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಕಾರ್ಯಕರ್ತರು

    ಹೆಗಡೆ, ನಳಿನ್ ವಿರುದ್ಧ ಕ್ರಮ ಯಾಕಿಲ್ಲ – ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಕಾರ್ಯಕರ್ತರು

    ತುಮಕೂರು: ನಾಥುರಾಮ್ ಗೋಡ್ಸೆ ದೇಶಭಕ್ತ ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಕ್ಕೆ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನ ಕ್ರಮವನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾರ್ಯಕರ್ತರು, ನಳಿನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆಯಂತವರ ವಿರುದ್ಧ ಕ್ರಮ ಕೈಗೊಳ್ಳಲಾಗದ ನಾಯಕರು ನಿಷ್ಠಾವಂತ ಕಾರ್ಯಕರ್ತನ ಮೇಲೆ ಕ್ರಮ ಕೈಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

    ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಉಚ್ಚಾಟನೆ ಮಾಡಿದ್ದೀರಾ? ತಾಕತ್ತಿದ್ದರೆ ಅಂದಿನಿಂದಲೂ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಶಾಸಕರು, ಸಂಸದರ ವಿರುದ್ಧ ಕ್ರಮಕೈಗೊಳ್ಳಿ. ಬಿಜೆಪಿಯ ಷಂಡ ನಾಯಕರೇ ನಿಮ್ಮ ಬೊಗಳೆ ಹಿಂದುತ್ವ ಎಷ್ಟು ಸಾರಿ ಸಾಬೀತು ಮಾಡುತ್ತೀರಿ. ಹನುಮಂತರಾಜು ಹೇಳಿಕೆಗೆ ನಾವೆಲ್ಲ ಬದ್ಧ ಎಂದು ರಾಜ್ಯ ಬಿಜೆಪಿ ನಾಯಕರನ್ನು ತೆಗಳಿ ಪೋಸ್ಟ್ ಮಾಡಿದ್ದಾರೆ.

    ತುಮಕೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು ಅವರು ತನ್ನ ಫೇಸ್‍ಬುಕ್‍ನಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರು ಅಪ್ರತಿಮ ದೇಶಭಕ್ತ ಎಂದು ಶುಕ್ರವಾರ ಪೋಸ್ಟ್ ಹಾಕಿದ್ದಾರು. ಅಷ್ಟೇ ಅಲ್ಲದೆ, ತನ್ನ ಅಸ್ಥಿಯನ್ನು ಸಿಂಧೂ ನದಿಯಲ್ಲಿ ವಿಸರ್ಜನೆ ಮಾಡಬೇಕು ಎಂದು ಮಹಾನ್ ರಾಷ್ಟ್ರಭಕ್ತ ಗೋಡ್ಸೆ ನೇಣಿನ ಕುಣಿಕೆಗೆ ತಲೆ ಕೊಟ್ಟ ಎಂದು ಮತ್ತೊಂದು ಪೋಸ್ಟ್ ಮಾಡಿದ್ದರು. ಈ ವಿಚಾರವಾಗಿ ಹನುಮಂತರಾಜು ಅವರನ್ನು ಬಿಜೆಪಿ ತನ್ನ ಪಕ್ಷದಿಂದ ವಜಾ ಮಾಡಿತ್ತು.

  • ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

    ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

    ಬೆಂಗಳೂರು: ಕೆಲವರು ಮಕ್ಕಳಾಗಲಿಲ್ಲ ಎಂದು ತಮ್ಮ ಜೀವನವನ್ನೇ ಶಪಿಸುತ್ತಾರೆ. ಆದರೆ ಇಲ್ಲೊಬ್ಬರು ಸಮಾಜ ಸೇವೆಯಲ್ಲೇ ತಮ್ಮ ಮಕ್ಕಳನ್ನು ಕಾಣುತ್ತಿದ್ದಾರೆ.

    ನೆಲಮಂಗಲ ಪಟ್ಟಣ ನಿವಾಸಿ ಮುನೀರ್ ಪಾಷಾ ಮಕ್ಕಳಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಸಮಾಜ ಸೇವೆಯ ಮೂಲಕ ಮಕ್ಕಳನ್ನು ಕಾಣುತ್ತಿದ್ದಾರೆ.

    ಅಪ್ಪಟ ದೇಶಾಭಿಮಾನಿ, ಪ್ರಾಣಿಪಕ್ಷಿ ಪ್ರಿಯರಾಗಿರುವ ಇವರು ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಗುಡ್‍ಬೈ ಹೇಳಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಯಾರೊಬ್ಬರಿಂದ ಒಂದು ರೂ. ಹಣ ಪಡೆಯದೆ ಸ್ವಂತ ಹಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆ, ತಾಲೂಕು ಇಲಾಖೆ, ಆಸ್ಪತ್ರೆ, ತುರ್ತು ಸೇವೆಗಳ ಮಾಹಿತಿ, ಬ್ಯಾಂಕ್, ಅಂಚೆ ಕಛೇರಿ, ಗ್ಯಾಸ್ ಏಜೆನ್ಸಿ, ಮಾಧ್ಯಮ ಪ್ರತಿನಿಧಿಗಳ ಮಾಹಿತಿ, ಬ್ಲಡ್ ಬ್ಯಾಂಕ್‍ಗಳ ಮಾಹಿತಿ, ತುರ್ತು ಸಂದರ್ಭದ ಸಹಾಯದ ಮಾಹಿತಿಗಳು ಸೇರಿದಂತೆ ಪ್ರತಿನಿತ್ಯ ಜನ ಸಾಮಾನ್ಯರಿಗೆ ಅವಶ್ಯವಿರುವ ಎಲ್ಲಾ ಮಾಹಿತಿ ಮೊಬೈಲ್ ನಂಬರ್ ಗಳನ್ನು ಒಳಗೊಂಡ ಮಾಹಿತಿಯನ್ನು ಪ್ರತಿ ಮನೆ ಹಾಗೂ ಸಾರ್ವಜನಿಕರಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ನಂಬರ್ ಗಳನ್ನೊಳಗೊಂಡ ಮಾಹಿತಿಯನ್ನು ಗೋಡೆಗಳಿಗೆ ಅಂಟಿಸಿ ನಾಗರಿಕರಿಗೆ ನೆರವಾಗಿದ್ದಾರೆ.

    ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಎಲ್ಲಾ ಶಾಲೆಯ ಮಕ್ಕಳಿಗೆ ದೇಶದ ಭಾವುಟ ಹಾಗೂ ಸಿಹಿಯನ್ನು ಹಂಚುವ ಮೂಲಕ ತಮ್ಮ ಜೀವನವನ್ನು ಕಳೆಯುತಿದ್ದಾರೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಯನ್ನ ಪ್ರತಿಯೊಬ್ಬರಲ್ಲೂ ಸಾರಿ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ವೃದ್ಧಾಪ್ಯದ ಕಾಲವನ್ನು ಕಳೆಯುತ್ತಿದ್ದಾರೆ.

    ಪ್ರಾಣಿಪಕ್ಷಿ ಪ್ರಿಯರಾಗಿರುವ ಮುನೀರ್ ಪಾಷಾ, ಬೀದಿಯಲ್ಲಿ ಸಿಗುವ ನಾಯಿ, ಹಸು, ಕಾಗೆ ಮುಂತಾದವುಗಳಿಗೆ ಆಹಾರ ನೀಡಿ ತಮ್ಮ ಸುಖಃ ಜೀವನವನ್ನು ಸಮಾಜದೊಂದಿಗೆ ಕಳೆಯುತ್ತಿದ್ದಾರೆ. ಶಾಲಾ ಪುಟಾಣಿಗಳಲ್ಲಿ ಮುನೀರ್ ಅಂಕಲ್ ಎಂದೇ ಚಿರಪರಿಚಿತರಾಗಿರುವ ಇವರು ಶಾಲಾ ಆವರಣಕ್ಕೆ ಆಗಮಿಸುತ್ತಲೇ ವಿದ್ಯಾರ್ಥಿಗಳು ಸುತ್ತುವರಿದು ಪ್ರೀತಿ ಅಭಿಮಾನವನ್ನು ತೋರಿಸುತ್ತಾರೆ.

    ಜಾತ್ಯಾತೀತತೆ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದಲ್ಲಿ ಮುನೀರ್ ಪಾಷಾ ರಿಯಲ್ ಜಾತ್ಯಾತೀತ ಹೀರೋವಾಗಿ ಇಂದು ಹೊರಹೊಮ್ಮಿ ಉತ್ತಮ ಸಮಾಜಜೀವಿಯಾಗಿ ತಮ್ಮ ಇಳಿವಯಸ್ಸಿನ ಜೀವನವನ್ನು ಕಳೆಯುತ್ತಿದ್ದಾರೆ.

    https://www.youtube.com/watch?v=jFSqATg29rY