Tag: patna

  • ಕನಸನ್ನು ನನಸಾಗಿಸಿಕೊಳ್ಳಲು ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಮಾಡಿದ

    ಕನಸನ್ನು ನನಸಾಗಿಸಿಕೊಳ್ಳಲು ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಮಾಡಿದ

    – 7 ಲಕ್ಷ ಖರ್ಚು ಮಾಡಿದ ಸಹೋದರರು

    ಪಾಟ್ನಾ: ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.

    ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ.

    ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್‍ಗಳನ್ನು ಮಾಡುವ ಕನಸು ಹೊಂದಿದ್ದನು. ಅದು ಹಾರದೆ ಇದ್ದರೂ ಕನಿಷ್ಟ ಹೆಲಿಕಾಪ್ಟರ್ ರೀತಿ ಕಾಣುವಂತೆ ಸಿದ್ಧಪಡಿಸುವುದು ಆತನ ಗುರಿಯಾಗಿತ್ತು.

    ಈ ಕಾರು ನೋಡಲು ಹೆಲಿಕಾಪ್ಟರ್ ರೀತಿ ಕಾಣಿಸುತ್ತದೆ ಆದರೆ ಇದು ಹಾರಾಡುವುದಿಲ್ಲ. ಹೆಲಿಕಾಪ್ಟರ್‍ನ ಮೂಲ ವಿನ್ಯಾಸ ಹೇಗೆ ಇರುತ್ತದೋ ಅದೇ ರೀತಿ ಕಾರನ್ನು ಯುವಕ ವಿನ್ಯಾಸಗೊಳಿಸಿದ್ದಾನೆ. ಈ ಅಪರೂಪದ ವಿನ್ಯಾಸವನ್ನು ಪೂರ್ಣಗೊಳಿಸಲು ಮಿಥಿಲೇಶ್ ಮತ್ತು ಅವರ ಸಹೋದರ ಸುಮಾರು ಏಳು ತಿಂಗಳು ತೆಗೆದುಕೊಂಡಿದ್ದಾರೆ. ಅಲ್ಲದೆ ಇದಕ್ಕೆ ಸರಿಸುಮಾರು ಏಳು ಲಕ್ಷ ರೂಪಾಯಿಗಳನ್ನು ಸಹೋದರರು ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

    ಈ ಹೆಲಿಕಾಪ್ಟರ್ ಕಾರು ವಿನ್ಯಾಸದ ಬಗ್ಗೆ ಮಾತನಾಡಿರುವ ಮಿಥಿಲೇಶ್, ‘ ನಾನು ಹೆಲಿಕಾಪ್ಟರ್ ಅನ್ನು ಸ್ವಂತವಾಗಿ ನಿರ್ಮಿಸಿ ಅದರಲ್ಲಿ ಹಾರಾಟ ನಡೆಸಬೇಕೆಂದು ಬಾಲ್ಯದಿಂದಲೂ ಕನಸು ಕಂಡಿದ್ದೆ. ಆದರೆ ನನಗೆ ಬಲವಾದ ಹಿನ್ನೆಲೆ ಇಲ್ಲ ಆದ್ದರಿಂದ ನನ್ನ ಕಾರನ್ನು ಹೆಲಿಕಾಪ್ಟರ್ ರೀತಿ ಕಾಣುವಂತೆ ಮಾಡಿದೆ’ ಎಂದು ಖುಷಿಯನ್ನು ಹಂಚಿಕೊಂಡಿದ್ದಾನೆ.

    ಈ ಹೆಲಿಕಾಪ್ಟರ್ ಕಾರಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ಕೆಲವರು ಯುವಕನ ಪ್ರಯತ್ನವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ಕಾರನ್ನು ವಿನ್ಯಾಸ ಮಾಡಿಕೊಂಡು ರಸ್ತೆಗಿಳಿಸಿದರೆ ಇತರೆ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ತನ್ನ ಕನಸು ನನಸಾಗಿಸಿಕೊಳ್ಳಲು ಇತರರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರುತ್ತಿದ್ದಾರೆ.

  • ತಾಯಿ ದೂರು ನೀಡಿದ್ದಕ್ಕೆ ಶಾಲೆಯಲ್ಲೇ ಮಗನ ಹತ್ಯೆ

    ತಾಯಿ ದೂರು ನೀಡಿದ್ದಕ್ಕೆ ಶಾಲೆಯಲ್ಲೇ ಮಗನ ಹತ್ಯೆ

    ಪಾಟ್ನಾ: ಮಹಿಳೆಯೊಬ್ಬಳು ತನ್ನ ವಿರುದ್ಧ ದೂರು ನೀಡಿದ್ದಾಳೆ ಎಂದು ಆರೋಪಿ ಶಾಲೆಯಲ್ಲಿಯೇ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಿಹಾರದ ಮುಜಾಫರ್‍ಪುರದಲ್ಲಿ ನಡೆದಿದೆ.

    ಸೂರಜ್ ಕುಮಾರ್ ಮೃತ ವಿದ್ಯಾರ್ಥಿ. ಸೂರಜ್ ಕುಮಾರ್‌ನನ್ನು ಗುರುವಾರ ಅಹಿಯಾಪುರದ ಶಾಲಾ ಆವರಣದಲ್ಲಿ ಇರಿದು ಕೊಲೆ ಮಾಡಲಾಗಿದೆ. ಈ ಘಟನೆ ನಡೆಯುವ ಹಿಂದಿನ ದಿನ ತಾಯಿ ತನ್ನ ಪರ್ಸ್ ಕದ್ದ ಇಬ್ಬರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಮತ್ತು ಪರ್ಸ್ ಕದ್ದ ಕಳ್ಳರು ಒಂದೇ ಗ್ರಾಮದವರಾಗಿದ್ದು, ತನ್ನ ಪರ್ಸ್ ಕದ್ದ ನಂತರ ಆಕೆ ಒಬ್ಬನನ್ನು ಗುರುತಿಸಿ ಆತನೊಂದಿಗೆ ವಾಗ್ವಾದ ನಡೆಸಿದ್ದಳು. ನಂತರ ಮೃತ ವಿದ್ಯಾರ್ಥಿಯ ತಾಯಿ ತನ್ನ ಪರ್ಸ್ ಕದ್ದ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಪೊಲೀಸರು ತಕ್ಷಣ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದರು. ಇದೇ ಜಿದ್ದಿನಲ್ಲಿ ಮತ್ತೊಬ್ಬ ಆರೋಪಿ ಮಗನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಘಟನೆ ನಡೆದ ನಂತರ ಬಾಲಕನಿಗೆ ರಕ್ಷಣೆ ನೀಡುವಲ್ಲಿ ಶಾಲೆಯ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಸದ್ಯಕ್ಕೆ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕುಲ್ ಕುಮಾರ್ ರಂಜನ್ ತಿಳಿಸಿದ್ದಾರೆ.

  • ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳ ಮಗು ಸಾವು

    ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳ ಮಗು ಸಾವು

    ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳು ಮಗು ಸಾವನ್ನಪ್ಪಿರುವ ಘಟನೆ ಪಾಟ್ನಾ- ದೆಹಲಿಯ ಸ್ಪೈಸ್ ಜೆಟ್ ವಿಮಾನದಲ್ಲಿ ನಡೆದಿದೆ.

    ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ಹೆಣ್ಣು ಮಗುವನ್ನು ಚಿಕಿತ್ಸೆಗಾಗಿ ಪಾಟ್ನಾದಿಂದ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಇನ್ನೇನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವುದಕ್ಕೂ ಮುನ್ನ ಮಗು ಮೃತಪಟ್ಟಿದೆ.

    ಸ್ಪೈಸ್ ಜೆಟ್ ವಿಮಾನ-ಎಸ್‍ಜಿ8481 ನಲ್ಲಿ ಈ ಘಟನೆ ನಡೆದಿದ್ದು, ಹೆಣ್ಣು ಮಗು ಮೃತಪಟ್ಟಿರುವ ಕುರಿತು ಮಾಹಿತಿ ಕಲೆ ಹಾಕಿದ್ದೇವೆ ಎಂದು ದೆಹಲಿ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತ ಸಂಜಯ್ ಭಟಿಯಾ ತಿಳಿಸಿದ್ದಾರೆ.

    ನಮ್ಮ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಿಚಾರಣೆ ನಡೆಸಿದ್ದು, ಮೃತಪಟ್ಟ ಮಗು ಬಿಹಾರದ ಬೇಗುಸರಾಯ್ ಪಟ್ಟಣದ್ದಾಗಿದೆ. ಹಲವು ದಿನಗಳಿಂದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಅಲ್ಲದೆ, ಹೃದಯದಲ್ಲಿ ಸಣ್ಣ ರಂದ್ರ ಇತ್ತು. ಹಿಂದೆಯೂ ದೆಹಲಿಯ ಎಐಐಎಂಎಸ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮತ್ತೊಮ್ಮೆ ಚಿಕಿತ್ಸೆಗಾಗಿ ಮಗುವನ್ನು ದೆಹಲಿಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲದೆ, ಮಗುವಿನ ಜೊತೆಯಲ್ಲೇ ಇದ್ದ ಪೋಷಕರು ಯಾರ ಮೇಲೂ ಆರೋಪ ಹೊರಿಸಿಲ್ಲ ಹಾಗೂ ಅನುಮಾನಿಸಿಲ್ಲ ಎಂದು ಸಂಜಯ್ ಭಟಿಯಾ ತಿಳಿಸಿದ್ದಾರೆ.

    ಸ್ಪೈಸ್ ಜೆಟ್ ಆಡಳಿತ ಮಂಡಳಿ ಈ ಕುರಿತು ಪ್ರತಿಕ್ರಿಯೆ ನೀಡಿ, ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ಸೌಲಭ್ಯವಿರುವುದರಿಂದ ಪಾಟ್ನಾ- ದೆಹಲಿ ವಿಮಾನದ ಸಿಬ್ಬಂದಿ ಆದ್ಯತೆ ಮೇರೆಗೆ ಅಲ್ಲಿಯೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿಯೇ ಇದ್ದ ವೈದ್ಯರೂ ಸಹ ಮಗುವನ್ನು ಪರೀಕ್ಷಿಸಿದ್ದಾರೆ. ಅಲ್ಲದೆ, ಆದ್ಯತೆ ಲ್ಯಾಂಡಿಂಗ್‍ಗೆ ಸಹ ಅನುಮೋದನೆ ದೊರೆತಿದ್ದು, ವಿಮಾನ ಸುಕ್ಷಿತವಾಗಿ ಲ್ಯಾಂಡ್ ಆಗಿದೆ. ಪೋಷಕರ ಮನವಿ ಮೇರೆಗೆ ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಆದರೆ ದುರದೃಷ್ಟವಶಾತ್ ವೈದ್ಯರು ಪರೀಕ್ಷಿಸುವ ಹೊತ್ತಿಗೆ ಮಗು ಮೃತಪಟ್ಟಿತ್ತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ. ಪ್ರಯಾಣಕ್ಕೂ ಮುನ್ನ ಪೋಷಕರು ಮಗುವಿನ ಆರೋಗ್ಯದ ಸ್ಥಿತಿಗತಿ ಕುರಿತು ಯಾವುದೇ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗೆ ನೀಡಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  • ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

    ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

    ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಗೆ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ರಾಜ್ಯದ 9 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಈವರೆಗೆ 13 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸುಮಾರು 18 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

    ಅರೇರಿಯಾ, ಕಿಶನ್‍ಗಂಜ್, ಶಿಯೋಹರ್, ಸೀತಮಾರ್ಹಿ, ಪೂರ್ವ ಚಂಪಾರನ್, ಸುಪಾಲ್, ಮಧುಬನಿ, ದರ್ಭಂಗಾ ಮತ್ತು ಮುಜಾಫರ್‍ಪುರ ಜಿಲ್ಲೆಗಳು ಪ್ರವಾಹಕ್ಕೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಈ ಜಿಲ್ಲೆಗಳ ಸುಮಾರು 18 ಲಕ್ಷ ಮಂದಿ ಪರದಾಡುತ್ತಿದ್ದಾರೆ. ಈವರೆಗೆ ಪ್ರವಾಹಕ್ಕೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ.

    ವರದಿಯಾಗಿರುವ ಮೃತರಲ್ಲಿ 9 ಮಂದಿ ಅರೇರಿಯಾ ಜಿಲ್ಲೆಯ ನಿವಾಸಿಗಳು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬೈದ್ಯನಾಥ ಯಾದವ್ ತಿಳಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನೂ ಕೂಡ ಘೋಷಿಸಲಾಗಿದೆ.

    ಸೀತಾಮರ್ಹಿ ಜಿಲ್ಲಾಡಳಿತ ಅಧಿಕಾರಿಗಳ ಪ್ರಕಾರ, ಪ್ರವಾಹಕ್ಕೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತವು ಸರಿಯಾದ ಕ್ರಮ ಕೈಗೊಂಡಿಲ್ಲ. ಸಹಾಯವಾಣಿಗಾಗಿ ಸ್ಥಾಪಿಸಲಾದ ದೂರವಾಣಿ ಮಾರ್ಗವೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಅರೇರಿಯಾದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳು ವಿಪತ್ತು ನಿರ್ವಹಣೆಯನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

    ಸಾಮಾನ್ಯ ಜನರು ಕಂಟ್ರೋಲ್ ರೂಮ್‍ಗೆ ಕರೆ ಮಾಡಬೇಕಾದರೆ ಮೊದಲು ಸ್ಥಳೀಯ ಮುಖಂಡರನ್ನು ಅವರು ಸಂಪರ್ಕಿಸಬೇಕು. ಆ ನಂತರ ಕಟ್ರೋಲ್ ರೂಮ್‍ಗೆ ಕರೆ ಕನೆಕ್ಟ್ ಮಾಡಲಾಗುತ್ತದೆ. ಹೀಗಾಗಿ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ಫೋನ್ ನಂಬರ್ ಕೆಲವು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಪ್ರವಾಹದಿಂದ ತತ್ತರಿಸಿರುವ ಬಿಹಾರದ ಕುರಿತು ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಸಿಎಂ ಅವರ ಈ ನಡೆಗೆ ವಿರೋಧ ಪಕ್ಷದ ಕೆಲ ನಾಯಕರು ವಿರೋಧಿಸಿದ್ದು, ರಾಷ್ಟ್ರೀಯ ಲೋಕ ಸಮತ ಪಕ್ಷದ ನಾಯಕ ಉಪೇಂದ್ರ ಖುಷ್ವಾಹ ಅವರು ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

    ಈ ರೀತಿ ಪ್ರತಿ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಸಿಎಂ ವ್ಯರ್ಥ ಮಾಡುತ್ತಿದ್ದಾರೆ. ಇದರ ಬದಲು ಪ್ರವಾಹದ ಕುರಿತು ಕ್ರಮ ಕೈಗೊಂಡು, ಜನರನ್ನು ಪ್ರವಾಹದ ಸಂಕಷ್ಟದಿಂದ ದೂರ ಮಾಡುವ ಕೆಲಸ ಮಾಡಬೇಕು. ಸರ್ಕಾರ ಪ್ರವಾಹ ಬಂದಾಗ ಜನರು ಎದುರಿಸುವ ಸಮಸ್ಯೆಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಸೋತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮದುವೆ ಮೆರವಣಿಗೆಗೆ ಬಂದವರು ಮಸಣ ಸೇರಿದ್ರು- ಲಾರಿ ಹರಿದು 8 ಮಂದಿ ದುರ್ಮರಣ

    ಮದುವೆ ಮೆರವಣಿಗೆಗೆ ಬಂದವರು ಮಸಣ ಸೇರಿದ್ರು- ಲಾರಿ ಹರಿದು 8 ಮಂದಿ ದುರ್ಮರಣ

    ಪಾಟ್ನಾ: ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ.

    ತಡರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ 8 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಲಖಿಸರೈನ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಮೂವರು ವರನ ಕಡೆಯವರು ಮತ್ತು ಐವರು ವಧುವಿನ ಕಡೆಯವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

    ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ ಸಂಭ್ರಮದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಲಖಿಸರೈನಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮದುವೆ ಸಮಾರಂಭದ ಸ್ಥಳಕ್ಕೆ ನುಗ್ಗಿದ್ದು, 8 ಮಂದಿಯನ್ನು ಬಲಿಪಡೆದಿದೆ.

    ಮೃತಪಟ್ಟವರನ್ನು ಮಂಜೀತ್ ಕುಮಾರ್, ನಕಾತ್ ಮಾಂಜಿ, ಮುಸ್ಕನ್ ಕುಮಾರಿ, ಉಮೇಶ್ ಮಾಂಜಿ, ರಾಜೀವ್ ಮಾಂಜಿ, ಧನರಾಜ್ ಮಾಂಜಿ, ಶಂಭು ಮಾಂಜಿ ಮತ್ತು ಗೋರ್ ಮಾಂಜಿ ಎಂದು ಗುರುತಿಸಲಾಗಿದೆ. ಹಾಗೆಯೇ ಕರುಕು ಮಾಂಜಿ, ಸಾನು ಮಾಂಜಿ, ರಿತಿಕ್ ಮಾಂಜಿ, ಕಾರ್ಪುರಿ ಮಾಂಜಿ, ಮಾಟ್ರು ಮಾಂಜಿ ಸೇರಿದಂತೆ ಗಾಯಗೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸ್‍ಪಿ ಮನೀಶ್ ಕುಮಾರ್, ಎಸ್‍ಡಿಎಂ ಮುರ್ಲಿ ಪ್ರಸಾದ್ ಸಿಂಗ್ ಹಾಗೂ ಇತರೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

  • ವಧುವಿನೊಂದಿಗೆ ಹಾರ ಬದ್ಲಾಯಿಸಿಕೊಂಡ ನಂತ್ರ ವರ ದುರ್ಮರಣ

    ವಧುವಿನೊಂದಿಗೆ ಹಾರ ಬದ್ಲಾಯಿಸಿಕೊಂಡ ನಂತ್ರ ವರ ದುರ್ಮರಣ

    ಪಾಟ್ನಾ: ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಏನಿದು ಪ್ರಕರಣ?
    ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು. ವರ ಕುಮಾರ್ ಅಖಿಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷಮ್ ಚಕ್ ಗ್ರಾಮದನಾಗಿದ್ದು, ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ವಧುವಿನ ಮನೆಗೆ ಬಂದಿದ್ದನು. ನಂತರ ನವಜೋಡಿ ಹೂ ಮಾಲೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ವರನ ಸ್ನೇಹಿತರು ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಆಗ ವರನ ಸ್ನೇಹಿತರೊಬ್ಬ ವೇದಿಕೆ ಮೇಲೆ ಬಂದೂಕನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಲಾರಂಭಿಸಿದನು.

    ಈ ವೇಳೆ ಬಂದೂಕಿನಲ್ಲಿ ಸಿಲುಕಿದ್ದ ಮೂರು ಗುಂಡುಗಳನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಮೂರು ಗುಂಡುಗಳು ಆಕಸ್ಮಿಕವಾಗಿ ಹಾರಿವೆ. ಅದರಲ್ಲಿ ಒಂದು ವರನಿಗೆ ಮತ್ತು ಆತನ ಸಹೋದರ ಗುಡ್ಡುವಿಗೆ ತಗುಲಿವೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ ಕುಮಾರ್ ಮೃತಪಟ್ಟಿದ್ದಾನೆ. ಸದ್ಯಕ್ಕೆ ವರನ ಸಹೋದರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಸದ್ಯ ಅಪರಾಧಿ ಯಾರು ಎಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂಭ್ರಮಾಚರಣೆ ನಡೆಸಿ ಗುಂಡು ಹಾರಿಸಿದ್ದ ವರನ ಸ್ನೇಹಿತ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿದೆ ಎಂದು ದಾನ್‍ಪುರದ ಸಹಾಯಕ ಪೊಲೀಸ್ ಕಮೀಷನರ್ ಅಶೋಕ್ ಮಿಶ್ರಾ ತಿಳಿಸಿದ್ದಾರೆ.

    ಸದ್ಯ ಎಫ್‍ಐಆರ್ ದಾಖಲಿಸಿರುವ ಪೊಲೀಸರು, ಘಟನೆ ಕುರಿತಂತೆ ವಿಡಿಯೋ ದೃಶ್ಯಾವಳಿಯನ್ನು ಕಲೆಹಾಕಲು ಮುಂದಾಗಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಿಹಾರ ಪೊಲೀಸರು ಸಂಭ್ರಮಾಚರಣೆ ಫೈರಿಂಗ್‍ನ್ನು ನಿಷೇಧಿಸಿದ್ದರೂ ಕೂಡ ಇಂತಹ ಅವಘಡಗಳು ನಡೆಯುತ್ತಲೇ ಇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ಸಿಗದೆ ಭುಜದ ಮೇಲೆ ಹೊತ್ತೊಯ್ದ ಪತಿ

    ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ಸಿಗದೆ ಭುಜದ ಮೇಲೆ ಹೊತ್ತೊಯ್ದ ಪತಿ

    ಪಾಟ್ನಾ: ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಕುಟುಂಬವು ಸ್ಟ್ರೆಚರ್ ಸಿಗದೆ ಗಂಟೆಗಳ ಕಾಲ ಪರದಾಡಿ, ಕೊನೆಗೆ ಪತಿಯೇ ಆಕೆಯನ್ನು ಭುಜದ ಮೇಲೆ ಹೊತ್ತೊಯ್ದ ಘಟನೆ ಬಿಹಾರದಲ್ಲಿ ನಡೆದಿದೆ.

    ರಾಜ್ಯದ ಅತಿದೊಡ್ಡ ಆಸ್ಪತ್ರೆಯಾದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ (ಪಿಎಂಸಿಹೆಚ್) ಈ ಘಟನೆ ನಡೆದಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆಯಾಗಿದ್ದರೂ ಗರ್ಭಿಣಿಗೆ ಸಿಬ್ಬಂದಿ ಸ್ಟ್ರೆಚರ್ ನೀಡದೇ ಅಮಾನವೀಯತೆ ತೋರಿದ್ದಾರೆ. ಬಳಿಕ ವಿಧಿಯಿಲ್ಲದೆ ಗರ್ಭಿಣಿಯನ್ನು ಪತಿ ಮಗುವಂತೆ ಭುಜದ ಮೇಲೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಳಿಕ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ನೆಲದ ಮೇಲೆ ಮಲಗಬೇಕಾಯಿತು ಎಂದು ವರದಿಯಾಗಿದೆ.

    ಮಾಹಿತಿ ಪ್ರಕಾರ, ಗರ್ಭಿಣಿಯ ಸಂಬಂಧಿಕರು ಆಸ್ಪತ್ರೆಗೆ ಬಂದ ಕೂಡಲೇ ಸ್ಟ್ರೆಚರ್ ನೀಡಿ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಒತ್ತಾಯಿಸಿದ್ದರು. ಆದರೆ ಸಿಬ್ಬಂದಿ ಕುಟುಂಬದವರ ಬಳಿ 100 ರೂ. ಬೇಡಿಕೆ ಇಟ್ಟಿದ್ದಾರೆ. ಆದರೆ ಬಡ ಕುಟುಂಬಸ್ಥರ ಬಳಿ ಅಷ್ಟು ಹಣವಿರದ ಕಾರಣಕ್ಕೆ ಕೇವಲ 30 ರೂಪಾಯಿ ಮಾತ್ರ ಇದೆ ಎಂದಿದ್ದಾರೆ. ಇದರಿಂದಾಗಿ ಸಿಬ್ಬಂದಿ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲು ನಿರಾಕರಿಸಿದ್ದಾರೆ.

    ಈ ಘಟನೆಯ ಬಗ್ಗೆ ಪಿಎಂಸಿಎಚ್ ನಿರ್ವಹಣೆ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ, ಎಚ್ಚೆತ್ತ ಪಿಎಂಸಿಎಚ್ ವೈದ್ಯರು ಮಹಿಳೆಗೆ ಚಿಕಿತ್ಸೆಯನ್ನು ಪ್ರಾರಂಭಿಸಿದರು.

    ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಆಸ್ಪತ್ರೆಗಳ ವಾಸ್ತವವೇ ಬೇರೆ ಇದೆ. ಪಿಎಂಸಿಹೆಚ್‍ನಲ್ಲಿ ರೋಗಿಗಳಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಜನ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

  • ಚಲಿಸುತ್ತಿದ್ದ ಟ್ರೈನಿನಲ್ಲಿ ಬ್ಯಾಂಕ್ ಅಧಿಕಾರಿಯ ಕೊಲೆ

    ಚಲಿಸುತ್ತಿದ್ದ ಟ್ರೈನಿನಲ್ಲಿ ಬ್ಯಾಂಕ್ ಅಧಿಕಾರಿಯ ಕೊಲೆ

    ಪಾಟ್ನಾ: ಚಲಿಸುತ್ತಿದ್ದ ಟ್ರೈನಿನಲ್ಲಿ ದುಷ್ಕರ್ಮಿಗಳು ಬ್ಯಾಂಕ್ ಅಧಿಕಾರಿಯನ್ನು ಕೊಲೆ ಮಾಡಿದ ಘಟನೆ ಗುರುವಾರ ಬಿಹಾರದಲ್ಲಿ ನಡೆದಿದೆ.

    ಮಿಲಿಂದ್ ಕುಮಾರ್ (28) ಕೊಲೆಯಾದ ಬ್ಯಾಂಕ್ ಅಧಿಕಾರಿ. ಮಿಲಿಂದ್ ಜಮುಯಿ ಜಿಲ್ಲೆಯಲ್ಲಿ ಇರುವ ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಿಲಿಂದ್ ಗಾಯ-ಜಮಲ್‍ಪುರ ರೈಲಿನಲ್ಲಿ ಸಂಚರಿಸುತ್ತಿದ್ದಾಗ ದುಷ್ಕರ್ಮಿಗಳು ಚಾಕು ಇರಿದಿದು, ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾರೆ.

    ಮಿಲಿಂದ್ ಬ್ಯಾಂಕ್ ಮೀಟಿಂಗ್ ಮುಗಿಸಿದ ನಂತರ ಕಿಯುಲ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಸರಾರಿ ಹಾಗೂ ಲಖಿಸರೈ ನಿಲ್ದಾಣದ ನಡುವೆ ಚೂಪಾದ ವಸ್ತುವಿನಿಂದ ಮಿಲಿಂದ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಿಲಿಂದ್ ಸ್ವತಃ ತಾವೇ ಲಖಿಸರೈ ರೈಲ್ವೆ ಸ್ಟೇಷನ್ ಬಳಿಯಿರುವ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅಧಿಕ ರಕ್ತಸ್ರಾವದಿಂದ ಮಿಲಿಂದ್ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.


    ಈ ಘಟನೆಯಿಂದ ಕೋಪಗೊಂಡ ಮಿಲಿಂದ್ ಕುಟುಂಬದವರು, ಬ್ಯಾಂಕ್ ಸಿಬ್ಬಂದಿ ಹಾಗೂ ಸ್ಥಳೀಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಈ ಪ್ರಕರಣವನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗುವುದು ಹಾಗೂ ಈ ಘಟನೆ ವೇಳೆ ರೈಲಿನಲ್ಲಿ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಲಖಿಸರೈ ಜಿಲ್ಲಾ ಪೊಲೀಸ್ ಅಧಿಕಾರಿ ಮನೀಶ್ ಕುಮಾರ್ ಅವರು ಮಿಲಿಂದ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

  • ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಪಾಟ್ನಾ: ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.

    ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಅವರು ಸೋಮವಾರ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿ ಮಾಡಿದ್ದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಕಟಣೆ ಹೊರಡಿಸಿದ್ದರು.

    ಅಲ್ಲದೆ ಪ್ರಕಟಣೆಯಲ್ಲಿ ತಿಳಿಸಿರುವ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಎಂಎನ್‍ಆರ್‍ಇಜಿಎ ಕಾರ್ಯಕ್ರಮಗಳ ಅಡಿಯಲ್ಲಿ ಬೆಳಗ್ಗೆ 10.30ರ ಬಳಿಕ ಯಾವುದೇ ತೆರೆದ ಸ್ಥಳಗಳಲ್ಲಿ ಕಾರ್ಮಿಕರು ಕೆಲಸ ಮಾಡಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಷ್ಟೇ ಅಲ್ಲದೆ, ಜೂನ್ 22ರವರೆಗೆ ಬಿಹಾರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮೂಲಕ ಬಿಸಿಲ ಝಳಕ್ಕೆ ಮೃತಪಡುವವರ ಸಂಖ್ಯೆ ತಗ್ಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

    ಹಾಗೆಯೇ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಗಯಾದ ಅನುಗ್ರಹ ನಾರಾಯಣ ಮಗಧ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಸಿಲ ತಾಪಕ್ಕೆ ಬಲಿಯಾದ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪ್ರತಿಕ್ರಿಯಿಸಿ, ಜನರು ಬಿಸಿಲಿಗೆ ಹೋಗುವುದಕ್ಕಿಂತ ನೆರಳು ಇರುವ ಪ್ರದೇಶದಲ್ಲಿ ಇರುವುದು ಸೂಕ್ತ. ಅತಿಯಾದ ಬಿಸಿಲ ತಾಪಕ್ಕೆ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಮೆದುಳು ಸಂಬಂಧಿ ರೋಗಗಳು ಬರುತ್ತವೆ ಎಂದು ಹೇಳಿದ್ದಾರೆ.

  • ಪತಿ ಮನೆಯಿಂದ ಹೊರಹೋಗ್ತಿದ್ದಂತೆ ಪತ್ನಿ, ಮೂವರು ಮಕ್ಕಳ ಹತ್ಯೆ!

    ಪತಿ ಮನೆಯಿಂದ ಹೊರಹೋಗ್ತಿದ್ದಂತೆ ಪತ್ನಿ, ಮೂವರು ಮಕ್ಕಳ ಹತ್ಯೆ!

    ಪಾಟ್ನಾ: ಮಹಿಳೆ ಮತ್ತು ಆಕೆಯ ಮೂವರು ಮಕ್ಕಳ ಕುತ್ತಿಗೆಯನ್ನು ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

    ತಬಾಸ್ಸಮ್ (30), ಮಗಳು ಅಲಿಯಾ (6) ಮತ್ತು ಪುತ್ರರಾದ ಸಮೀರ್ (4) ಹಾಗೂ ಶಬ್ಬೀರ್ (8) ಕೊಲೆಯಾದ ದುರ್ದೈವಿಗಳು. ಪತಿ ಆಲಮ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮಾಧೋಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದನು. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಆಲಮ್ ಮನೆಯಿಂದ ಹೊರಗಡೆ ಹೋಗಿದ್ದಾನೆ. ಆಗ ಕೆಲವು ಮಂದಿ ಮನೆಗೆ ನುಗ್ಗಿ ಮಹಿಳೆ ಮತ್ತು ಮಕ್ಕಳ ಕುತ್ತಿಗೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಮತ್ತು ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದಿದ್ದಾರೆ. ಆದರೆ ಆರೋಪಿಗಳು ಮನೆಯ ಮುರಿದ ಕಿಟಕಿಯಿಂದ ಪರಾರಿಯಾಗಿದ್ದಾರೆ. ಭೂಮಿ ವಿವಾದದಿಂದ ಈ ಕೊಲೆ ಮಾಡಲಾಗಿದೆ ಎಂದು ಆಲಂ ಆರೋಪಿಸಿದ್ದು, ಈ ಕುರಿತು ಅದೇ ಗ್ರಾಮದ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ಡಿಎಸ್‍ಪಿ ಕೆ.ಡಿ. ಸಿಂಗ್ ತಿಳಿಸಿದ್ದಾರೆ.

    ಈ ಘಟನೆಯಲ್ಲಿ ಪತಿ ಆಲಮ್ ಪಾತ್ರವೂ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಈ ಕುರಿತು ಯಾರನ್ನು ಬಂಧಿಸಿಲ್ಲ ಎಂದು ಸಿಂಗ್ ಹೇಳಿದರು.