Tag: patna

  • ಪ್ರವಾಹದ ನೀರಿನಲ್ಲಿ ಯುವತಿಯ ಫೋಟೋಶೂಟ್- ರೊಚ್ಚಿಗೆದ್ದ ನೆಟ್ಟಿಗರು

    ಪ್ರವಾಹದ ನೀರಿನಲ್ಲಿ ಯುವತಿಯ ಫೋಟೋಶೂಟ್- ರೊಚ್ಚಿಗೆದ್ದ ನೆಟ್ಟಿಗರು

    ಪಾಟ್ನಾ: ಬಿಹಾರದಲ್ಲಿ ಆಗಿರುವ ಪ್ರವಾಹದಿಂದ ಜನರು ತತ್ತರಿಸುತ್ತಿದ್ದಾರೆ. ಈ ನಡುವೆ ಯುವತಿಯೊಬ್ಬಳು ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಅದಿತಿ ಸಿಂಗ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್)ನ ವಿದ್ಯಾರ್ಥಿನಿ. ಅದಿತಿ ನಡುರಸ್ತೆಯಲ್ಲಿಯೇ ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ. ಸದ್ಯ ಆಕೆಯ ಫೋಟೋವನ್ನು ಫೋಟೋಗ್ರಾಫರ್ ಸುರಭ್ ಅನುರಾಜ್ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಬಿಹಾರದಲ್ಲಿ ಈಗಿನ ಸ್ಥಿತಿಯನ್ನು ವಿಭಿನ್ನವಾಗಿ ತೋರಿಸಲು ಸುರಭ್ ಈ ಫೋಟೋಶೂಟ್ ಮಾಡಿದ್ದಾರೆ. ಅಲ್ಲದೆ ‘ಮರ್‌ಮೇಡ್‌ ಇನ್ ಡಿಸಾಸ್ಟರ್’ ಟೈಟಲಿನಲ್ಲಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕೆಲವರು ಸುರಭ್ ಅವರ ಕಾನ್ಸೆಪ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ನೈಸರ್ಗಿಕ ವಿಪತ್ತನ್ನು ವೈಭವೀಕರಿಸುತ್ತದೆ ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಸುರಭ್ ತಮ್ಮ ಫೇಸ್‍ಬುಕ್‍ನಲ್ಲಿ, “ಪಾಟ್ನಾದ ಈಗಿನ ಸ್ಥಿತಿಯನ್ನು ಎಲ್ಲರಿಗೂ ತೋರಿಸಲು ನಾನು ಈ ಫೋಟೋಶೂಟ್ ಮಾಡಿದೆ. ಅದನ್ನು ತಪ್ಪು ಅರ್ಥದಲ್ಲಿ ತೆಗೆದುಕೊಳ್ಳಬೇಡಿ” ಎಂದು ಬರೆದುಕೊಂಡಿದ್ದಾರೆ.

  • ಉತ್ತರ ಭಾರತದಲ್ಲಿ ಮೇಘಸ್ಫೋಟ – ದಾಖಲೆ ಮಳೆಗೆ ಬಿಹಾರ ತತ್ತರ

    ಉತ್ತರ ಭಾರತದಲ್ಲಿ ಮೇಘಸ್ಫೋಟ – ದಾಖಲೆ ಮಳೆಗೆ ಬಿಹಾರ ತತ್ತರ

    ಪಾಟ್ನಾ: ಕಳೆದ 4 ದಿನಗಳಿಂದ ಆರ್ಭಟಿಸುತ್ತಿರುವ ಮಳೆರಾಯ ಬಿಹಾರ, ಉತ್ತರಪ್ರದೇಶವನ್ನು ಭಾಗಶಃ ಮುಳುಗಿಸಿದ್ದಾನೆ. ಅತ್ತ ಮಹಾರಾಷ್ಟ್ರ, ತೆಲಂಗಾಣದಲ್ಲೂ ಮಳೆ ಸುರಿಯುತ್ತಿದ್ದು, ಉತ್ತರ ಭಾರತದಲ್ಲಿ ವರುಣನ ರೌದ್ರಾವತಾರ ಕಂಡು ಜನರು ಹೈರಾಣಾಗಿದ್ದಾರೆ.

    ಸಾಮಾನ್ಯವಾಗಿ ಜೂನ್ 1ರಿಂದ ಪ್ರಾರಂಭವಾಗುವ ಮುಂಗಾರು ಸೆಪ್ಟೆಂಬರ್ 30ಕ್ಕೆ ಮುಗಿಯಬೇಕು. ಆದರೆ ಈ ಬಾರಿ ಸೆಪ್ಟೆಂಬರ್ ಕಳೆದರೂ ಮುಂಗಾರು ಅಬ್ಬರಿಸುವಂತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ 29ರವರೆಗೆ 877 ಎಂಎಂನಷ್ಟು ಬರುತ್ತದೆ. ಆದರೆ ಈ ಬಾರಿ ಬರೋಬ್ಬರಿ 956.1 ಎಂಎಂನಷ್ಟು ದಾಖಲೆ ಮಳೆ ಉತ್ತರ ಭಾರತೀಯರನ್ನು ಹೈರಾಣಗಿಸಿದೆ. ಹವಾಮಾನ ಇಲಾಖೆ ಕೂಡ ಇನ್ನೂ 3-4 ದಿನ ಮಳೆ ಆಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ.

    ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ 86 ಹಾಗೂ ಬಿಹಾರದಲ್ಲಿ 35ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾ ಹಾಗೂ ನೆರೆಯ ಪಾಟಲೀಪುತ್ರ ನಗರಗಳು ದ್ವೀಪಗಳಂತಾಗಿವೆ. 4 ದಿನಗಳಿಂದ ಶಾಲಾ-ಕಾಲೇಜು, ಆಸ್ಪತ್ರೆಗಳ ಐಸಿಯು ಜಲಾವೃತವಾಗಿದೆ. ಮನೆಗೆ ನೀರಿ ನುಗ್ಗಿರುವ ಕಾರಣಕ್ಕೆ ಪ್ರಸಿದ್ಧ ಗಾಯಕಿ ಶ್ರದ್ಧಾ ಸಿಂಗ್ ಮತ್ತು ಕುಟುಂಬ ಪಾಟ್ನಾದಲ್ಲಿರುವ ಮನೆಯಲ್ಲಿ ಸಿಲುಕಿ ಕೊಂಡಿದ್ದರು. ಈ ಬಗ್ಗೆ ಶ್ರದ್ಧಾ ಸಿಂಗ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಬಳಿಕ ಎನ್‍ಡಿಆರ್‍ಎಫ್ ತಂಡ ಶ್ರದ್ಧಾ ಸಿಂಗ್ ಕುಟುಂಬಸ್ಥರನ್ನು ರಕ್ಷಣೆ ಮಾಡಿದೆ. ಜೊತೆಗೆ ಪಾಟ್ನಾದ ರಾಜೇಂದ್ರ ನಗರದ ನಿವಾಸದಲ್ಲಿ ಸಿಲುಕೊಂಡಿದ್ದ ಡಿಸಿಎಂ ಸುಶೀಲ್ ಮೋದಿ ಮತ್ತವರ ಕುಟುಂಬಸ್ಥರನ್ನು ಕೂಡ ಎನ್‍ಡಿಆರ್‍ಎಫ್ ತಂಡ ರಕ್ಷಿಸಿದೆ.

    ಪ್ರವಾಹ ಹಿನ್ನೆಲೆ ಬಿಹಾರ ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪ್ರಧಾನಿ ಮೋದಿ ಕೂಡ ಸಿಎಂ ನಿತೀಶ್ ಜೊತೆ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.

    ಉತ್ತರದಲ್ಲಿ ಆಬ್ಬರಿಸುತ್ತಿರುವ ವರುಣದೇವ 102 ವರ್ಷಗಳ ತನ್ನ ದಾಖಲೆಯನ್ನೇ ಸರಿಗಟ್ಟಿ, ಮತ್ತೊಂದು ಹೊಸ ದಾಖಲೆ ಸೃಷ್ಟಿಸುವತ್ತ ದಾಪುಗಾಲು ಇಟ್ಟಿದ್ದಾನೆ. ಆದರೆ ವರುಣದ ಮುನಿಸಿಗೆ ಸಿಲುಕಿದ ಜನರು ಮಾತ್ರ ಸಾಕಪ್ಪ ಸಾಕು, ನಿಲ್ಲಿಸು ನಿನ್ನ ಪ್ರತಾಪ ಎನ್ನುತ್ತಿದ್ದಾರೆ.

     

  • ನೀರಿನಲ್ಲಿ ಸಿಲುಕಿದ ರಿಕ್ಷಾ ಹೊರತರಲಾಗದೇ ಬಿಕ್ಕಿಬಿಕ್ಕಿ ಅತ್ತ ಚಾಲಕ: ವಿಡಿಯೋ

    ನೀರಿನಲ್ಲಿ ಸಿಲುಕಿದ ರಿಕ್ಷಾ ಹೊರತರಲಾಗದೇ ಬಿಕ್ಕಿಬಿಕ್ಕಿ ಅತ್ತ ಚಾಲಕ: ವಿಡಿಯೋ

    ಪಾಟ್ನಾ: ಕಳೆದ ಮೂರು ದಿನಗಳಿಂದ ಬಿಹಾರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಆಗಿದೆ. ರಸ್ತೆಗಳಲ್ಲದೇ ಶಾಪಿಂಗ್ ಮಾಲ್, ರೈಲ್ವೆ ನಿಲ್ದಾಣದಲ್ಲೂ ಮೊಣಕಾಲುದ್ದ ನೀರು ನಿಂತಿದೆ. ಈ ನಡುವೆ ನೀರಿನಲ್ಲಿ ಸಿಲುಕಿದ ರಿಕ್ಷಾವನ್ನು ಹೊರತರಲಾಗದೇ ಚಾಲಕ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

    ಚಾಲಕ ರಿಕ್ಷಾ ಎಳೆಯುತ್ತಿರುವುದನ್ನು ನೋಡಿದ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಅಲ್ಲದೆ ಚಾಲಕನಿಗೆ ಸಹಾಯದ ಮಾತುಗಳನ್ನಾಡಿದ್ದಾರೆ. ಸ್ಥಳೀಯರು ಚಾಲಕನಿಗೆ, “ರಿಕ್ಷಾ ಇಲ್ಲಿಯೇ ಬಿಟ್ಟು ಹೋಗಿ. ಸ್ವಲ್ಪ ಹೊತ್ತಿನ ನಂತರ ಬಂದು ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದಾರೆ. ಆದರೆ ಚಾಲಕ ರಿಕ್ಷಾವನ್ನು ಅಲ್ಲಿಯೇ ಬಿಟ್ಟು ಹೋಗಲು ಒಪ್ಪಲಿಲ್ಲ. ಅಲ್ಲದೆ ಬಿಕ್ಕಿಬಿಕ್ಕಿ ಅಳುತ್ತಾ ರಿಕ್ಷಾವನ್ನು ಹೊರ ಎಳೆಯಲು ಪ್ರಯತ್ನಿಸಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಕಮೆಂಟ್ ಮಾಡುವ ಮೂಲಕ ರಾಜಕಾರಣಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವರು, “ಸ್ಮಾರ್ಟ್ ಸಿಟಿ ಆಗಿಲ್ಲ, ಬದಲಾಗಿ ಮಂತ್ರಿಗಳ ಸ್ಮಾರ್ಟ್ ಮನೆ ಆಗಿದೆ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ನಾಚಿಕೆಯಾಗುವ ವಿಷಯ. ಸಾಮಾನ್ಯ ಜನರನ್ನು ನೋಡಲು ಇಲ್ಲಿ ಯಾರು ಇಲ್ಲ” ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

    ರಾಷ್ಟ್ರೀಯ ಜನತಾ ದಳ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿ, “ಸ್ಮಾರ್ಟ್ ಸಿಟಿ ಹಣವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ನಾಚಿಕೆಯಾಗಬೇಕು. ನಿತೀಶ್ ಕುಮಾರ್ ಹಾಗೂ ಸುಶೀಲ್ ಮೋದಿ ಬಡವರನ್ನು ಆಹುತಿ ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ವಿಡಿಯೋ ನೋಡಿದರೆ ಕರುಳು ಹಿಂಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

  • ಭಜರಂಗಿ ಪಕ್ಕದಲ್ಲಿ ಮೋದಿ – ‘ನಮೋ ನಮ್ಮ ದೇವರು’ ಎಂದ ಗ್ರಾಮಸ್ಥರು

    ಭಜರಂಗಿ ಪಕ್ಕದಲ್ಲಿ ಮೋದಿ – ‘ನಮೋ ನಮ್ಮ ದೇವರು’ ಎಂದ ಗ್ರಾಮಸ್ಥರು

    ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆ ಬಿಹಾರದ ಕಟಿಹಾರ್ ಜಿಲ್ಲೆಯ ಆನಂದಪುರದಲ್ಲಿ ಹನುಮಂತನ ದೇಗುಲದ ಪಕ್ಕದಲೇ ನಮೋ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರು ಅಭಿಮಾನ ಮೆರೆದಿದ್ದಾರೆ.

    ಹೌದು. ಹನುಮಂತ ದೇವರ ದೇವಾಲಯದ ಪಕ್ಕದಲ್ಲಿ ಮೋದಿ ಪ್ರತಿಮೆ ಪ್ರತಿಷ್ಠಾಪಿಸಿರುವ ಗ್ರಾಮಸ್ಥರು, ಮೋದಿ ನಮ್ಮ ದೇವರು ಎಂದು ಪ್ರಧಾನಿಗೆ ವಿಶೇಷ ಗೌರವ ನೀಡಿದ್ದಾರೆ. ಮೋದಿ ಅವರು ಪ್ರಧಾನಿಯಾದ ದಿನದಿಂದ ಅಂದರೆ 2014 ರಿಂದ ಇಲ್ಲಿಯವರೆಗೂ ತಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದ್ದರಿಂದ ನಮ್ಮ ಪಾಲಿಗೆ ಅವರು ದೇವರು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಮೋದಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಸಿಟ್ಟಿಗೆದ್ದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಮತಗಳನ್ನು ಸೆಳೆಯಲು ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರು ಈ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಆನಂದಪುರ ಗ್ರಾಮದಲ್ಲಿ ಬಹುತೇಕ ಮಂದಿ ಬೆಂಗಾಲಿ ಹಿಂದೂಗಳಾಗಿದ್ದು, ಸ್ವಾತಂತ್ರ್ಯ ಬಂದ ದಿನದಿಂದ ನಮ್ಮ ಗ್ರಾಮವನ್ನು ಅಧಿಕಾರಿಗಳು ಮತ್ತು ಸರ್ಕಾರಗಳು ನಿರ್ಲಕ್ಷಿಸಿಕೊಂಡು ಬಂದಿದ್ದರು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಗ್ರಾಮಸ್ಥರು ನಮೋ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿ ನಮ್ಮ ದೇವರು, ನಮ್ಮ ದೇವರನ್ನು ಕಣ್ಣಾರೆ ಕಾಣುವ ಆಸೆ ಇದೆ. ನಮ್ಮ ನೆಲದಲ್ಲಿ ಮೋದಿಜಿ ಓಡಾಡಬೇಕೆಂದು ಬಯಸಿದ್ದೇವೆ ಎಂದು ಗ್ರಾಮಸ್ಥರು ಆಸೆ ತಿಳಿಸಿದ್ದಾರೆ.

  • ಯುವತಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಗ್ಯಾಂಗ್ ರೇಪ್

    ಯುವತಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಗ್ಯಾಂಗ್ ರೇಪ್

    ಪಾಟ್ನಾ: ನಿರಾಶ್ರಿತ ಕೇಂದ್ರದಿಂದ ರಕ್ಷಿಸಲ್ಪಟ್ಟ 18 ವರ್ಷದ ಯುವತಿಯನ್ನು ಅಪಹರಿಸಿ 4 ಮಂದಿ ಕಾಮುಕರು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಶುಕ್ರವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಮುಜಾಫರ್‍ಪುರ ನಿರಾಶ್ರಿತ ಕೇಂದ್ರದಿಂದ ರಕ್ಷಿಸಲ್ಪಟ್ಟ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಿರಾಶ್ರಿತ ಕೇಂದ್ರದಿಂದ ರಕ್ಷಿಸಿದ ಬಳಿಕ ಯುವತಿ ಮುಜಾಫರ್ ಪುರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಸಂಜೆ ಯುವತಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಾಲ್ವರು ಮುಸುಕುಧಾರಿಗಳು ಅವಳನ್ನು ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಕಾರಿನಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.

    ಈ ಬಗ್ಗೆ ಯುವತಿ ಶನಿವಾರ ಸಂಜೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಈಗ ಅದರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಸ್ಟೆಷನ್ ಹೌಸ್ ಆಫಿಸರ್(ಎಸ್‍ಎಚ್‍ಓ), ಯುವತಿಯನ್ನು ನಿರಾಶ್ರಿತ ಕೇಂದ್ರದಿಂದ ರಕ್ಷಿಸಿರುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

    ಶುಕ್ರವಾರ ಸಂಜೆ ಸಂಬಂಧಿಕರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ 4 ಮಂದಿ ನನ್ನನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

  • ಬೆಳೆ ಹಾಳು ಮಾಡಿದಕ್ಕೆ ನೀಲಿಜಿಂಕೆ ಜೀವಂತ ಸಮಾಧಿ – ವಿಡಿಯೋ ವೈರಲ್

    ಬೆಳೆ ಹಾಳು ಮಾಡಿದಕ್ಕೆ ನೀಲಿಜಿಂಕೆ ಜೀವಂತ ಸಮಾಧಿ – ವಿಡಿಯೋ ವೈರಲ್

    ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನೀಲ್‍ಗಾಯ್(ನೀಲಿ ಜಿಂಕೆ) ಒಂದನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ. ಜೆಸಿಬಿ ಮೂಲಕ ಪ್ರಾಣಿಯನ್ನು ಖೆಡ್ಡಕ್ಕೆ ಬೀಳಿಸಿ, ಮಣ್ಣು ಮಾಡಲಾಗಿದೆ.

    ಮಾನವಿಯತೆ ಮರೆತು ನೀಲಿ ಜಿಂಕೆಯನ್ನು ಜೀವಂತವಾಗಿ ಸಮಾಧಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈಶಾಲಿ ಜಿಲ್ಲೆಯಲ್ಲಿ ನೀಲಿ ಜಿಂಕೆಗಳ ಹಾವಳಿ ಹೆಚ್ಚಿದ್ದು, ಇದರಿಂದ ರೈತರು ಬೇಸತ್ತು ಹೋಗಿದ್ದರು. ಆಹಾರ ಅರಸಿ ಜಮೀನುಗಳಿಗೆ ನುಗ್ಗುವ ನೀಲಿ ಜಿಂಕೆಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

    ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ತಿಳಿಸಿ ನೀಲಿ ಜಿಂಕೆಗಳ ಕಾಟದಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಇವನ್ನು ಕೊಲ್ಲುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು 300ಕ್ಕೂ ಅಧಿಕ ನೀಲ್ಗಾಯ್‍ಗಳನ್ನು ಜಿಲ್ಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ಕೂಡ ಅರಣ್ಯ ಇಲಾಖೆಯೇ ನೇಮಿಸಿದೆ.

    ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಮೂಕ ಪ್ರಾಣಿಯನ್ನು ಹೀಗೆ ಅಮಾನುಷವಾಗಿ ಹತ್ಯೆ ಮಾಡುವುದು, ಜೀವಂತ ಸಮಾಧಿ ಮಾಡುವುದು ತಪ್ಪು. ಮನುಷ್ಯರನ್ನು ಹೀಗೆ ಮಾಡಿದರೆ ಸುಮ್ಮನ್ನಿರುತ್ತೀರಾ? ಮೂಕ ಪ್ರಾಣಿಗಳ ಮೇಲೆ ದರ್ಪ ಮೆರೆಯುವುದು ತಪ್ಪು ಎಂದು ಪ್ರಾಣಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/JayaseelanTD/status/1169777775621754880

  • ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

    ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

    – ಮಟನ್ ಸಾರು ಸವಿದ ಕೈದಿಗಳು

    ಪಾಟ್ನಾ: ಕೊಲೆ ಅಪರಾಧಿಯೊಬ್ಬ ಬಿಹಾರದ ಜೈಲಿನೊಳಗೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಿಂಟು ತಿವಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಪರಾಧಿಯಾಗಿದ್ದು, ಈತ 2015ರಲ್ಲಿ ಇಬ್ಬರು ಎಂಜಿನಿಯರ್ ಗಳನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಇತ್ತೀಚೆಗೆ ಪಿಂಟು ಬಿಹಾರ ಜೈಲಿನಲ್ಲಿ ಕೇಕ್ ಕಟ್ ಮಾಡಿ ತನ್ನ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾನೆ. ಜೈಲಿನಲ್ಲಿರುವ ಇತರರಿಂದ ಗಿಫ್ಟ್ ಸಹ ಪಡೆದುಕೊಂಡಿದ್ದಾನೆ. ಈತ ಕೇಕ್ ಕಟ್ ಮಾಡುವಾಗ ಉಳಿದ ಕೈದಿಗಳು ಪಿಂಟುಗೆ ಹ್ಯಾಪಿ ಬರ್ತ್ ಡೇ ಎಂದು ಹಾಡು ಹಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

    ಮತ್ತೊಂದು ವಿಡಿಯೋದಲ್ಲಿ, ಸುಮಾರು 12ಕ್ಕೂ ಹೆಚ್ಚು ಮಂದಿ ನೆಲದ ಮೇಲೆ ಕುಳಿತುಕೊಂಡು ಅನ್ನ ಹಾಗೂ ಮಟನ್ ಸಾರು ಸವಿದಿದ್ದಾರೆ. ಪಾರ್ಟಿಯ ಬಳಿಕ ಇತರ ಕೈದಿಗಳಿಗೆ ಪಿಂಟು ಸಿಹಿ ಹಂಚುವ ಮೂಲಕ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾನೆ. ಅಲ್ಲದೆ ಹುಟ್ಟುಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆಗಾಗಿ ಕ್ಯಾಟರಿಂಗ್ ಅವರನ್ನು ಜೈಲಿನ ಆವರಣದೊಳಗೆ ಕರೆಸಲಾಗಿದೆ. ಈ ಎಲ್ಲಾ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದೆ. ಇಡೀ ಹುಟ್ಟುಹಬ್ಬದ ಆಚರಣೆಯನ್ನು ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿರುವುದರಿಂದ ಜೈಲಿನೊಳಗೆ ಮೊಬೈಲ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ಗಮನಿಸಬಹುದು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಪೊಲೀಸ್ ಇಲಾಖೆಯೊಳಗೆ ಭಾರೀ ಕೊಲಾಹಲಕ್ಕೆ ಕಾರಣವಾಗಿದೆ. ಐಜಿ ಮಿಥಿಲೇಶ್ ಮಿಶ್ರಾ ಅವರು ಈ ಘಟನೆಯ ತನಿಖೆಗೆ ಆದೇಶಿಸಿ ಜಿಲ್ಲಾ ಹಾಗೂ ಜೈಲು ಆಡಳಿತದಿಂದ ವರದಿ ಕೋರಿದ್ದಾರೆ. ಜೈಲಿನೊಳಗೆ ಮೊಬೈಲ್ ಬಳಕೆ ಮಾಡಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಜಿ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಜೈಲಿನ ನಾಲ್ವರು ಗಾರ್ಡ್ ಗಳನ್ನು ಅಮಾನತುಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಮಧ್ಯರಾತ್ರಿ ಪ್ರೇಯಸಿಯನ್ನು ನೋಡಲು ಬಂದಿದ್ದಕ್ಕೆ ಗ್ರಾಮಸ್ಥರಿಂದ ಮದುವೆ

    ಮಧ್ಯರಾತ್ರಿ ಪ್ರೇಯಸಿಯನ್ನು ನೋಡಲು ಬಂದಿದ್ದಕ್ಕೆ ಗ್ರಾಮಸ್ಥರಿಂದ ಮದುವೆ

    ಪಾಟ್ನಾ: ಮಧ್ಯರಾತ್ರಿ ಪ್ರೇಯಸಿಯನ್ನು ನೋಡಲು ಬಂದಿದ್ದಕ್ಕೆ ಗ್ರಾಮಸ್ಥರು ಯುವಕನನ್ನು ಬಂಧಿಸಿ ಮದುವೆ ಮಾಡಿಸಿದ ಘಟನೆ ಬಿಹಾರ್ ನ ಮೋತಿಹರಿ ಜಿಲ್ಲೆಯ ಕೊನಿಹ್ಯಾ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ಮಧ್ಯೆರಾತ್ರಿ ಸಾಹಿಭ್‍ಗಂಜ್ ಗ್ರಾಮದ ನಿವಾಸಿಯಾಗಿರುವ ಯುವಕ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಕೊನಿಹ್ಯಾ ತಲುಪಿದ್ದನು. ಯುವಕ ಕದ್ದುಮುಚ್ಚಿ ಹೋದರು ಸಹ ಗ್ರಾಮಸ್ಥರಿಂದ ಸಿಕ್ಕಿ ಬಿದಿದ್ದಾನೆ. ಯುವಕ ಗ್ರಾಮಕ್ಕೆ ತಲುಪಿದ್ದಾನೆ ಎಂಬ ವಿಷಯ ತಿಳಿದ ಗ್ರಾಮಸ್ಥರು ಒಂದೆ ಕಡೆ ಸೇರಿದ್ದಾರೆ.

    ಯುವಕನನ್ನು ಬಂಧಿಸಿ ತಕ್ಷಣ ತಡರಾತ್ರಿಯಲ್ಲಿ ಗ್ರಾಮಸ್ಥರು ಪಂಚಾಯ್ತಿ ಕೂಡ ನಡೆಸಿದ್ದರು. ಪಂಚಾಯ್ತಿಯಲ್ಲಿ ಮೊದಲು ಯುವತಿಯನ್ನು, ಆ ಯುವಕನನ್ನು ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಲಾಯಿತು. ಆಗ ಯುವತಿ ಹೌದು ಎಂದು ಉತ್ತರಿಸಿದ್ದಳು. ಬಳಿಕ ಯುವಕನನ್ನು ಪ್ರಶ್ನಿಸಿದ್ದಾಗ ಆತ ಕೂಡ ಹೌದು ಎಂದು ಉತ್ತರಿಸಿದ್ದಾನೆ.

    ಯುವಕ ಹಾಗೂ ಯುವತಿಯ ಅಭಿಪ್ರಾಯ ಪಡೆದು ಪಂಚಾಯ್ತಿ ತಡರಾತ್ರಿಯಲ್ಲೇ ಜೋಡಿಯ ಮದುವೆ ಮಾಡಿಸಿದ್ದಾರೆ. ಪಂಚಾಯ್ತಿ ಸ್ಥಳದಲ್ಲಿದ್ದ ಅರ್ಚಕರನ್ನು ಕರೆದು ಶಾಸ್ತ್ರೋಕ್ತವಾಗಿ ಜೋಡಿಯ ಮದುವೆ ಮಾಡಿಸಿದ್ದಾರೆ. ಈ ಘಟನೆ ವೇಳೆ ಪೊಲೀಸರು ಸ್ಥಳದಲ್ಲಿಯೇ ಇದ್ದರು.

  • ಅಂತ್ಯಸಂಸ್ಕಾರದ ವೇಳೆ ಒಂದೇ ಒಂದು ರೈಫಲ್‍ನಿಂದ ಸಿಡಿಯದ ಗುಂಡು – ತನಿಖೆಗೆ ಬಿಹಾರ ಸರ್ಕಾರ ಆದೇಶ

    ಅಂತ್ಯಸಂಸ್ಕಾರದ ವೇಳೆ ಒಂದೇ ಒಂದು ರೈಫಲ್‍ನಿಂದ ಸಿಡಿಯದ ಗುಂಡು – ತನಿಖೆಗೆ ಬಿಹಾರ ಸರ್ಕಾರ ಆದೇಶ

    ಪಾಟ್ನಾ: ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರ ಬುಧವಾರದಂದು ಬಾಲುವಾ ಬಜಾರ್ ಪ್ರದೇಶದಲ್ಲಿ ನೆರವೇರಿದೆ. ಆದರೆ ಈ ವೇಳೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸರು 21 ಗುಂಡುಗಳನ್ನು ಹಾರಿಸುವಲ್ಲಿ ವಿಫಲವಾಗಿದ್ದಾರೆ.

    ಸಂಪ್ರದಾಯದ ಪ್ರಕಾರ, ಸರ್ಕಾರದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸುತ್ತಾರೆ. ಹಾಗೆಯೇ ಬಿಹಾರದ ಮಾಜಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು.

    ಆದರೆ ಕೊನೆ ಕ್ಷಣದಲ್ಲಿ ಗುಂಡನ್ನು ಹಾರಿಸಿದಾಗ ಯಾವ ರೈಫಲ್‍ನಿಂದ ಕೂಡ ಗುಂಡು ಹಾರಲೇ ಇಲ್ಲ. ಪೊಲೀಸ್ ಪೇದೆಗಳು, ಹಿರಿಯ ಅಧಿಕಾರಿಗಳು ಗುಂಡನ್ನು ಹಾರಿಸಲು ಪ್ರಯತ್ನಿಸಿದರೂ ರೈಫಲ್‍ನಿಂದ ಒಂದೇ ಒಂದು ಗುಂಡು ಕೂಡ ಹಾರಲಿಲ್ಲ.

    ಈ ವೇಳೆ ಸ್ಥಳದಲ್ಲಿ ಬಿಹಾರ ಸಿಎಂ ನಿತಿಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇಂತಹ ಸಂದರ್ಭದಲ್ಲಿ ರೈಫಲ್ ಕೈಕೊಟ್ಟ ಕಾರಣಕ್ಕೆ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ. ಸರಿಯಾಗಿ ರೈಫಲ್‍ಗಳನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕೆ ಈ ಅವಮಾನವಾಗಿದೆ ಎಂದು ಹಿರಿಯ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಬಗ್ಗೆ ಎಸ್‍ಪಿ ಮೃತ್ಯುಂಜಯ ಚೌಧರಿ ಪ್ರತಿಕ್ರಿಯಿಸಿ, ನಾವು ಈ ಬಗ್ಗೆ ತನಿಖೆ ಆರಂಭಿಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಸಭೆಯಲ್ಲಿ ಕೌನ್ಸಿಲರ್ ನೋಡಿ ಕಣ್ಣು ಮಿಟುಕಿಸಿದ ಮೇಯರ್ ಪುತ್ರ

    ಸಭೆಯಲ್ಲಿ ಕೌನ್ಸಿಲರ್ ನೋಡಿ ಕಣ್ಣು ಮಿಟುಕಿಸಿದ ಮೇಯರ್ ಪುತ್ರ

    -ನ್ಯಾಯಕ್ಕಾಗಿ ಸಿಎಂ ಮೊರೆಹೋದ ಕೌನ್ಸಿಲರ್

    ಪಾಟ್ನಾ: ಬಿಹಾರದ ಪಾಟ್ನಾದ ವಾರ್ಡ್ ಕೌನ್ಸಿಲರ್ ಗೆ ಮೇಯರ್ ಪುತ್ರನೋರ್ವ ಹೊಡೆಯುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಕೌನ್ಸಿಲರ್ ನ್ಯಾಯಕ್ಕಾಗಿ ಸಿಎಂ ಮೊರೆ ಹೋಗಿದ್ದಾರೆ.

    ಪಾಟ್ನಾ ನಗರ ನಿಗಮ ಮಂಡಳಿಯ ಸಭೆಯಲ್ಲಿ ಮೇಯರ್ ಸೀತಾ ಸಾಹು ಪುತ್ರ ಶಿಶಿರ್ ನನ್ನನ್ನು ನೋಡಿ ಕಣ್ಣು ಹೊಡೆಯುತ್ತಿದ್ದನು. ಈ ರೀತಿಯ ವರ್ತನೆ ತಪ್ಪು ಎಂದು ತಿಳಿ ಹೇಳಿದ್ರೂ ಆತನ ಯಾವ ಬದಲಾವಣೆಯೂ ಆಗಿಲ್ಲ ಎಂದು ವಾರ್ಡ್ ಸದಸ್ಯೆ ಪಿಂಕಿ ದೇವಿ ಆರೋಪಿಸಿದ್ದಾರೆ.

    ನಗರ ನಿಗಮ ಮಂಡಳಿ ಸಭೆಯಲ್ಲಿ ಮೇಯರ್ ಪುತ್ರ ಶಿಶಿರ್ ನನ್ನನ್ನು ನೋಡಿ ಮೊದಲಿಗೆ ಮುಗುಳ್ನಗೆ ಬೀರಿ ಕಣ್ಣು ಹೊಡೆದನು. ಹೀಗೆ ಸತತವಾಗಿ ಕಣ್ಣು ಮಿಟುಕಿಸತೊಡಗಿದನು. ನಾನು ಆತನಿಗೆ ಎಚ್ಚರಿಕೆ ನೀಡಿದ್ರೂ ಆತ ಬದಲಾಗಿಲ್ಲ. ಹಾಗಾಗಿ ಮೇಯರ್ ಅವರಿಗೆ ದೂರು ನೀಡಿದೆ. ನಾನು ದೂರು ನೀಡಿದರೂ ಆತನ ಮುಖದಲ್ಲಿ ಯಾವುದೇ ಭಯ ಕಾಣಿಸಿಲಿಲ್ಲ ಎಂದಿದ್ದಾರೆ.

    ದೂರು ಸಲ್ಲಿಸಿದ ಬಳಿಕ ಶಿಶಿರ್ ನಿಮಗೆ ತೋಚಿದ ಹಾಗೆ ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದ. ಇತ್ತ ಮೇಯರ್ ಸಹ ನನ್ನ ಮೇಲೆಯೇ ಗಂಭೀರ ಆರೋಪ ಮಾಡಲಾರಂಭಿಸಿದರು. ಹಾಗಾಗಿ ಈ ಪ್ರಕರಣದಲ್ಲಿ ಸಿಎಂ ನಿತೀಶ್ ಕುಮಾರ್ ಮಧ್ಯಸ್ಥಿಕೆ ವಹಿಸಬೇಕೆಂದು ಪಿಂಕಿ ದೇವಿ ಮನವಿ ಮಾಡಿಕೊಂಡಿದ್ದಾರೆ.