Tag: patna

  • ‘ಇಷ್ಟವಿರುವ ಪಕ್ಷಕ್ಕೆ ಹೋಗಬಹುದು’- ಪವನ್ ವರ್ಮಾಗೆ ನಿತೀಶ್ ಕುಮಾರ್ ಟಾಂಗ್

    ‘ಇಷ್ಟವಿರುವ ಪಕ್ಷಕ್ಕೆ ಹೋಗಬಹುದು’- ಪವನ್ ವರ್ಮಾಗೆ ನಿತೀಶ್ ಕುಮಾರ್ ಟಾಂಗ್

    ಪಾಟ್ನಾ: ಜೆಡಿಯು ಹಿರಿಯ ನಾಯಕ ಪವನ್ ವರ್ಮಾ ಅವರ ಟ್ವೀಟ್‍ಗೆ ತಿರುಗೇಟು ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅವರು ಇಷ್ಟವಿರುವ ಪಕ್ಷಕ್ಕೆ ಹೋಗಬಹುದು, ಅವರಿಗೆ ಶುಭಾಶಯ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಜೆಪಿಯೊಂದಿಗೆ ಜೆಡಿಯು ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಪವನ್ ವರ್ಮಾ ಮಂಗಳವಾರ ಟ್ವೀಟ್ ಮಾಡಿದ್ದರು. ಸದ್ಯ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ಅವರು ತಿರುಗೇಟು ನೀಡಿ ಟಾಂಗ್ ನೀಡಿದ್ದಾರೆ.

    ನವದೆಹಲಿಯಲ್ಲಿ ಫೆ.8 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹಾಗೂ ಸಿಎಎ ವಿಚಾರವಾಗಿ ಹಿಂದೇಟು ಹಾಕುತ್ತಿದ್ದಾರೆ ಎಂದು ಪವನ್ ವರ್ಮಾ ಬಹಿರಂಗವಾಗಿಯೂ ಹೇಳಿಕೆ ನೀಡಿದ್ದರು. ಈ ಹೇಳಿಕೆ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿ, ಪಕ್ಷದ ವಿಚಾರಗಳ ಕುರಿತು ಬಹಿರಂಗ ಹೇಳಿಕೆ ನೀಡುವುದು ಉತ್ತಮವಲ್ಲ. ಅವರಿಗೆ ನನ್ನ ಮೇಲೆ ಗೌರವವಿಲ್ಲದಿದ್ದರೂ, ನನಗೆ ಅವರ ಮೇಲೆ ಗೌರವವಿದೆ. ಪಕ್ಷದ ಆಂತರಿಕ ಸಭೆಯಲ್ಲಿ ಅವರ ಅಸಮಾಧಾನಗಳ ಕುರಿತು ಚರ್ಚೆ ನಡೆಸಿಬೇಕು. ಒಂದೊಮ್ಮೆ ಪಕ್ಷಾಂತರ ಮಾಡಬೇಕೆಂಬ ಮನಸ್ಸಿದ್ದರೆ ಅವರು ಮಾಡಬಹುದು ಎಂದು ಪರೋಕ್ಷವಾಗಿ ಪವನ್ ಶರ್ಮಾ ಹೆಸರು ಪ್ರಸ್ತಾಪ ಮಾಡದೆ ತಿರುಗೇಟು ನೀಡಿದರು.

    ಪವನ್ ವರ್ಮಾ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದು, ಸದ್ಯ ಜೆಡಿಯು ಪಕ್ಷ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಸಿಎಂ ನಿತೀಶ್ ಕುಮಾರ್ ಅವರ ಹೇಳಿಕೆಗೆ ಸ್ವಾಗತ ಕೋರಿರುವ ಪವನ್ ವರ್ಮಾ, ತಮ್ಮ ಪತ್ರಕ್ಕೆ ಪ್ರತಿಕ್ರಿಯೆ ಬರುವವರೆಗೂ ಕಾಯ್ದು ಆ ಬಳಿಕ ತಮ್ಮ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದಿದ್ದಾರೆ.

    ಸಿಎಂ ನಿತೀಶ್ ಕುಮಾರ್ ಅವರಿಗೆ ಬರೆದಿದ್ದ ಪತ್ರದಲ್ಲಿ ಪವನ್ ವರ್ಮಾ, ನಿತೀಶ್ ಕುಮಾರ್ ಅವರಿಗೆ ಜೆಡಿಯು ಪಕ್ಷ ಆರ್ ಎಸ್‍ಎಸ್ ಸಿದ್ಧಾಂತಗಳನ್ನು ಹೊಂದಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಕ್ಷ ಹೇಗೆ ತನ್ನ ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಸ್ಪಷ್ಟನೆ ಕೇಳಿ ಸವಾಲು ಎಸೆದಿದ್ದರು. ಅಲ್ಲದೇ 2012ರಲ್ಲಿ ತಮ್ಮೊಂದಿಗೆ ಮಾತನಾಡುವ ವೇಳೆ ಮೋದಿ ಅವರ ರಾಜಕೀಯ ದೇಶಕ್ಕೆ ಏಕೆ? ಮಾರಕ ಎಂದು ನಿತೀಶ್ ವಿವರಿಸಿದ್ದನ್ನು ಪವನ್ ಶರ್ಮಾ ನೆನಪು ಮಾಡಿದ್ದರು.

     

  • ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಾಟ್ನಾ: ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ಸ್ತಬ್ಧಚಿತ್ರವನ್ನು ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‍ಗೆ ತಿರಸ್ಕರಿಸಲಾಗಿದೆ.

    ಬಿಹಾರ ಮಾಹಿತಿ ಕೇಂದ್ರ ಈ ಬಗ್ಗೆ ಸ್ಪಷ್ಟಗೊಳಿಸಿದೆ. ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ರಾಜ್ಯ ಕಳಿಸಿದ್ದ ಸ್ತಬ್ಧಚಿತ್ರಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ರಕ್ಷಣಾ ಖಾತೆ ಮಾಹಿತಿ ಪ್ರಕಾರ, ತಜ್ಞರ ಸಮಿತಿಯ ಆಕ್ಷೇಪಣೆ ನಂತರ ಬಿಹಾರ ಸ್ತಬ್ಧಚಿತ್ರ ಪ್ರಸ್ತಾಪನೆಯನ್ನು ತಿರಸ್ಕರಿಸಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಕನ್ಯಾಶ್ರೀ, ಹಸಿರು ರಕ್ಷಣೆ -ಸ್ವಚ್ಛ ಪರಿಸರ ಹಾಗೂ ಜಲ ಧಾರೆ ಪರಿಕಲ್ಪನೆಯ ಪ್ರಸ್ತಾಪನೆಗಳನ್ನು ಸಲ್ಲಿಸಿತ್ತು. ವಿಶಿಷ್ಟ ಪರಿಕಲ್ಪನೆ ಟ್ಯಾಬ್ಲೋ ಆಯ್ಕೆಗೆ ಪ್ರಧಾನ ಮಾನದಂಡ. ಈ ಮೂರರಲ್ಲಿ ಯಾವುದೂ ವಿಶಿಷ್ಟವಲ್ಲ ಎಂದು ಪಶ್ಚಿಮ ಬಂಗಾಳದ ಟ್ಯಾಬ್ಲೋ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು.

    ಹಾಗೆಯೇ ಗಣರಾಜ್ಯೋತ್ಸವ ಪರೇಡ್‍ನ ಟ್ಯಾಬ್ಲೋಗಳಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕೀಯ ಅಜೆಂಡಾಗಳ ಪರಿಕಲ್ಪನೆ ಟ್ಯಾಬ್ಲೋ ಮಾಡುವಂತಿಲ್ಲ. ಆದರೆ ಬಿಹಾರ್ ಹಾಗೂ ಮಹಾರಾಷ್ಟ್ರ ರಾಜಕೀಯ ಪರಿಕ್ಪನೆ ಟ್ಯಾಬ್ಲೋಗಳ ಪ್ರಸ್ತಾವನೆ ಸಲ್ಲಿಸಿತ್ತು. ಆದ್ದರಿಂದ ಈ ರಾಜ್ಯಗಳ ಟ್ಯಾಬ್ಲೋಗಳನ್ನು ತಜ್ಞರ ಸಮಿತಿ ತಿರಸ್ಕರಿಸಿದೆ.

    ಈ ಬಗ್ಗೆ ಆರ್‍ಜೆಡಿ ವಕ್ತಾರ ಮ್ರಿತುಂಜನ್ ತಿವಾರಿ ಪ್ರತಿಕ್ರಿಯಿಸಿ, ಈ ಹಿಂದೆ ಕೇಂದ್ರ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂಬ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗ ನಮ್ಮ ಗಣರಾಜ್ಯೋತ್ಸವದ ಟ್ಯಾಬ್ಲೋಗಳನ್ನು ತಿರಸ್ಕರಿದೆ. ಬಿಜೆಪಿ ಎರಡು ಇಂಜಿನ್ ಸರ್ಕಾರ ನಡೆಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಕಿಡಿಕಾರಿದ್ದಾರೆ.

    ಇತ್ತ ಮಹಾರಾಷ್ಟ್ರ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿದ್ದಕ್ಕೆ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಟ್ಯಾಂಬ್ಲೋಗಳ ಪ್ರಸ್ತಾವಣೆ ತಿರಸ್ಕರಿಸಿದೆ. ಗಣರಾಜ್ಯೋತ್ಸವ ದೇಶದ ಹಬ್ಬ. ಆದ್ದರಿಂದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಈ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ಕೊಡಬೇಕು. ಆದರೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಕೆಲ ರಾಜ್ಯಗಳ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಹಾಗೆಯೇ ಕೇರಳ ಟ್ಯಾಂಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿರುವುದು ರಾಜಕೀಯ ಪ್ರೇರಿತ ಎಂದು ಕೇರಳ ಕಾನೂನು ಸಚಿವ ಎ.ಕೆ ಬಾಲನ್ ಕಿಡಿಕಾರಿದ್ದಾರೆ.

    ತಜ್ಞರ ಸಮಿತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ಇಲಾಖೆಗಳ ಟ್ಯಾಬ್ಲೋ ಪ್ರಸ್ತಾಪನೆಗಳನ್ನು ಪರಿಶೀಲಿಸಿ, ಗಣರಾಜ್ಯೋತ್ಸವ ಪರೇಡ್‍ನ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೋಗಳನ್ನು ಅಂತಿಮಗೊಳಿಸುತ್ತದೆ. 2020ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲು ರಾಜ್ಯಗಳಿಂದ 32 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 24 ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಒಟ್ಟು 22 ಪ್ರಸ್ತಾಪನೆಗಳನ್ನು ಅಂತಿಮ ಮಾಡಲಾಗಿದೆ.

  • ಹಲ್ಲೆ ಮಾಡಿ ಕೊಲೆಗೈದು ಮಹಿಳೆಯ ಅರ್ಧ ದೇಹ ಸುಟ್ಟರು

    ಹಲ್ಲೆ ಮಾಡಿ ಕೊಲೆಗೈದು ಮಹಿಳೆಯ ಅರ್ಧ ದೇಹ ಸುಟ್ಟರು

    ಪಾಟ್ನಾ: ವರದಕ್ಷಿಣೆಗಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಬಿಹಾರದ ಇಸ್ಲಾಂಪುರದದಲ್ಲಿ ನಡೆದಿದೆ.

    ವಿಭಾ ಕುಮಾರಿ ಮೃತಪಟ್ಟ ಮಹಿಳೆ. ಮೂರು ವರ್ಷಗಳ ಹಿಂದೆ ವಿಭಾ, ರಾಜೇಶ್ ರವಿದಾಸ್ ಎಂಬವನನ್ನು ಮದುವೆಯಾಗಿದ್ದಳು. 6 ತಿಂಗಳ ಹಿಂದೆ ವಿಭಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಎರಡು ದಿನದಲ್ಲೇ ಆ ಮಗು ಮೃತಪಟ್ಟಿತ್ತು.

    ಮದುವೆಯಾದ ನಂತರ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಒಂದೂವರೆ ಲಕ್ಷ ನಗದು, ಚಿನ್ನದ ಸರ ಹಾಗೂ ಉಂಗುರವನ್ನು ವರದಕ್ಷಿಣೆಯಾಗಿ ತರುವಂತೆ ವಿಭಾ ಕುಮಾರಿಗೆ ಕಿರುಕುಳ ನೀಡುತ್ತಿದ್ದರು. ವಿಭಾ ವರದಕ್ಷಿಣೆ ತರದಿದ್ದಾಗ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ.

    ವಿಭಾ ಪೋಷಕರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ವಿಭಾ ಅರ್ಧ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮಹಿಳೆಯ ಮೃತದೇಹವನ್ನು ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

    ಪೊಲೀಸರಿಗೆ ವಿಭಾ ಕೊಲೆ ಪ್ರಕರಣ ತಿಳಿಯುತ್ತಿದ್ದಂತೆ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಪರಾರಿಯಾಗಿದ್ದಾರೆ.

  • ಹಾಡಹಗಲೇ ಶೂಟೌಟ್ – ಪತಿ ಜೀವ ಉಳಿಸಿ ಎಂದು ಪತ್ನಿ ಕಣ್ಣಿರಿಟ್ಟರೂ ಕರಗದ ಜನ

    ಹಾಡಹಗಲೇ ಶೂಟೌಟ್ – ಪತಿ ಜೀವ ಉಳಿಸಿ ಎಂದು ಪತ್ನಿ ಕಣ್ಣಿರಿಟ್ಟರೂ ಕರಗದ ಜನ

    ಪಾಟ್ನಾ: ಹಾಡಹಗಲೇ ರೈಲ್ವೆ ನಿಲ್ದಾಣದಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆಗೈದಿದ್ದು, ಪತ್ನಿ ಸಹಾಯಕ್ಕಾಗಿ ಗೋಗರಿದರೂ ಜನರು ಕರುಣೆ ತೋರದ ಅಮಾನವೀಯ ಘಟನೆ ಬಿಹಾರದ ಸೀವಾನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕೋಲ್ಕತ್ತಾ ಮೂಲದ ಉದ್ಯಮಿ ಮೊಹ್ಮದ್ ಫೈಸಲ್(30) ತನ್ನ ಪತ್ನಿ ಅಂಜೂಮ್ ಖಾಟೂನ್ ಜೊತೆಗೆ ಸೀವಾನ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಬಾಘ್ ಎಕ್ಸಪ್ರೆಸ್‍ನಲ್ಲಿ ಕೋಲ್ಕತ್ತಾಗೆ ತೆರೆಳಲು ಇಬ್ಬರು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ದುಷ್ಕರ್ಮಿಗಳು ಮೊಹ್ಮದ್ ಮೇಲೆ ದಾಳಿ ಮಾಡಿ, ಗುಂಡು ಹೊಡೆದು ಎಸ್ಕೇಪ್ ಆಗಿದ್ದಾರೆ. ಇತ್ತ ಕಣ್ಣೆದುರೆ ಪತಿ ನರಳುತ್ತಿದ್ದದ್ದನ್ನು ನೋಡಿ ಪತ್ನಿ ಸಹಾಯಕ್ಕಾಗಿ ಸ್ಥಳದಲ್ಲಿದ್ದವರ ಬಳಿ ಗೋಗರಿದು, ಕಣ್ಣಿರಿಟ್ಟರೂ ಯಾರೂ ಸಹಾಯಕ್ಕೆ ಮುಂದೆ ಬಾರದ ಹಿನ್ನೆಲೆ ಪತ್ನಿ ಮಡಿಲಿನಲ್ಲೇ ಪತಿ ಕೊನೆಯುಸಿರೆಳೆದಿದ್ದಾರೆ.

    ಗುಂಡೇಟು ತಿಂದ ಪತಿ ತಲೆಯನ್ನು ಮಡಿಲಲ್ಲಿಟ್ಟು ಮಹಿಳೆ ಸಹಾಯ ಮಾಡಿ ಎಂದು ಕಣ್ಣೀರಿಡುತ್ತಿದ್ದರೆ, ಇತ್ತ ಸುತ್ತಲು ನೆರೆದಿದ್ದ ಜನರು ತಮಾಷೆ ನೋಡುತ್ತಾ, ಮೊಬೈಲ್‍ಗಳಲ್ಲಿ ವಿಡಿಯೋ ಮಾಡುತ್ತಾ ಮಾನವೀಯತೆ ಮರೆತ್ತಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಹ್ಮದ್ ಪತ್ನಿಯ ಮಡಿಲಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮಾನವೀಯತೆ ಮೆರೆದ ಜನರಿಗೆ ನೆಟ್ಟಿಗರು ಚೀಮಾರಿ ಹಾಕಿದ್ದಾರೆ.

    ಪೊಲೀಸರ ವಿಚಾರಣೆ ವೇಳೆ ಪತ್ನಿ, ಕಳೆದ 6 ತಿಂಗಳ ಹಿಂದಷ್ಟೇ ನಮ್ಮಿಬ್ಬರ ಮದುವೆಯಾಗಿತ್ತು. ನಾನು ನನ್ನ ಪತಿ ಸುಲ್ತಾನ್‍ಪುರ್‍ನಲ್ಲಿರುವ ನನ್ನ ತವರು ಮನೆಯಿಂದ ಕೋಲ್ಕತ್ತಾಗೆ ತೆರಳಲು ರೈಲಿಗೆ ಕಾಯುತ್ತಿದ್ದೆವು. ಈ ವೇಳೆ ದುಷ್ಕರ್ಮಿಗಳು ಗುಂಡು ಹೊಡೆದರು. ಯಾಕೆ ಗುಂಡು ಹಾರಿಸಿದರು? ನನ್ನ ಪತಿ ಅವರಿಗೆ ಏನು ಮಾಡಿದ್ದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ರೈಲ್ವೆ ನಿಲ್ದಾಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ಆರೋಪಿಗಳ ಸುಳಿವು ಸಿಕ್ಕಿಲ್ಲ. ಆದರೆ ಆರೋಪಿಯನ್ನು ಪತ್ತೆ ಹಚ್ಚಲು ಹತ್ತಿರದ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ವರದಕ್ಷಿಣೆ ನೀಡಿಲ್ಲವೆಂದು ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ

    ವರದಕ್ಷಿಣೆ ನೀಡಿಲ್ಲವೆಂದು ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ

    ಪಾಟ್ನಾ: ವರದಕ್ಷಿಣೆ ನೀಡಿಲ್ಲ ಎಂದು ಪತಿಯೊಬ್ಬ ತನ್ನ ಕುಟುಂಬಸ್ಥರ ಜೊತೆ ಸೇರಿಕೊಂಡು ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ. ಸ್ವತಃ ಸಂತ್ರಸ್ತೆ ನಾಲ್ಕು ವರ್ಷಗಳ ನಂತರ ಈ ಘಟನೆ ಬಗ್ಗೆ ವಿವರಿಸಿದ್ದಾಳೆ.

    ಪತಿಯ ಮನೆಯವರು ಸಂತ್ರಸ್ತೆಗೆ ಕಿರುಕುಳ ನೀಡಿ ನಂತರ ಆಕೆಯನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಾರೆ. ಸಂತ್ರಸ್ತೆ ನಾಲ್ಕು ವರ್ಷಗಳ ನಂತರ ಉತ್ತರಪ್ರದೇಶದ ಕಾನ್ಪುರದಿಂದ ದಲ್ಲಾಳಿಗಳ ಹಿಡಿತದಿಂದ ತಪ್ಪಿಸಿಕೊಂಡು ತನ್ನ ತವರು ಮನೆಗೆ ಸೇರಿದ್ದಾಳೆ.

    7 ವರ್ಷಗಳ ಹಿಂದೆ ಸಂತ್ರಸ್ತೆಯ ಮದುವೆ ಅರೇರಿಯಾ ಜಿಲ್ಲೆಯ ಮೊಹಮ್ಮದ್ ಶಮೀಮ್ ಜೊತೆ ನಡೆದಿತ್ತು. ಮದುವೆಯಲ್ಲಿ ಸಂತ್ರಸ್ತೆಯ ತಂದೆ ತನ್ನಿಂದ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಹಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ ಹಣದ ದುರಾಸೆಯಿಂದ ಪತಿ ಮೊಹಮ್ಮದ್ ಶಮೀಮ್ ಹಾಗೂ ಆತನ ಕುಟುಂಬಸ್ಥರು ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೇಳಿ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದರು.

    ಈ ಬಗ್ಗೆ 2015ರಲ್ಲಿ ಪಂಚಾಯ್ತಿ ನಡೆದಿತ್ತು. ಆಗ ಪತಿಯ ಕುಟುಂಬಸ್ಥರು ಸಂತ್ರಸ್ತೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಇದಾದ ಎರಡು ದಿನಗಳ ನಂತರ ಸಂತ್ರಸ್ತೆ ತನ್ನ ಪತಿಯ ಮನೆಯಿಂದ ನಿಗೂಢವಾಗಿ ಕಾಣೆಯಾಗಿದ್ದಳು. ಸಂತ್ರಸ್ತೆ ಈಗ ನಾಲ್ಕು ವರ್ಷಗಳ ನಂತರ ತನ್ನ ತವರು ಮನೆಗೆ ಹಿಂದಿರುಗಿದ್ದು, ವರದಕ್ಷಿಣೆ ನೀಡದ ಕಾರಣ ಪತಿ ಹಾಗೂ ಆತನ ಕುಟುಂಬಸ್ಥರು ಪ್ರಜ್ಞೆ ತಪ್ಪುವ ಮಾತ್ರೆ ನೀಡಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ವೇಶ್ಯಾವಾಟಿಕೆಗೆ ತನ್ನನ್ನು ಮಾರಾಟ ಮಾಡಿದ್ದರು ಎಂದು ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ.

    ಪ್ರತಿದಿನ ನಡೆಯುತ್ತಿದ್ದ ಹರಾಜಿನಿಂದ ಸಂತ್ರಸ್ತೆ ಬೇಸತ್ತು ಹೋಗಿದ್ದಳು. ಕಳೆದ ನಾಲ್ಕು ವರ್ಷಗಳ ನಂತರ ಆಕೆ ದಲ್ಲಾಳಿಗಳಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕತಿಹಾರ್ ಅಧೀಕ್ಷಕ ವಿಕಾಸ್ ಕುಮಾರ್ ಅವರು, ದೂರಿನ ಆಧಾರದ ಮೇಲೆ ಪೊಲೀಸರು ಕೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

  • ಟ್ರಕ್‍ನಲ್ಲಿ ಡೀಸೆಲ್ ಕದ್ದ ಯುವಕನನ್ನ ಹೊಡೆದು ಕೊಲೆಗೈದ ಚಾಲಕರು

    ಟ್ರಕ್‍ನಲ್ಲಿ ಡೀಸೆಲ್ ಕದ್ದ ಯುವಕನನ್ನ ಹೊಡೆದು ಕೊಲೆಗೈದ ಚಾಲಕರು

    ಪಾಟ್ನಾ: ಟ್ರಕ್‍ನಿಂದ ಡೀಸೆಲ್ ಕದ್ದ ಯುವಕನನ್ನು ಚಾಲಕರು ಹಾಗೂ ಗ್ರಾಮಸ್ಥರು ಹೊಡೆದು, ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಪಾಟ್ನಾದಲ್ಲಿ ನಡೆದಿದೆ.

    ಪಾಟ್ನಾದ ಫತುಹಾದ ನಾಯಕಾ ರಸ್ತೆಯ ಬಿಹ್ತಾ ಸರ್ಮೇರಾ ಫೋರ್ ಲೇನ್‍ನಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆದರೆ ಕೊಲೆಯಾದ ಯುವಕನ ಗುರುತು ಪತ್ತೆಯಾಗಿಲ್ಲ. ಅದೃಷ್ಟವಶಾತ್ ಮತ್ತೊಬ್ಬ ಯುವಕ ಗುಂಪಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

    ಫತುಹಾದ ನಾಯಕಾ ರಸ್ತೆಯ ಬದಿಯಲ್ಲಿ ಮೂರರಿಂದ ನಾಲ್ಕು ಟ್ರಕ್‍ಗಳನ್ನು ನಿಲ್ಲಿಸಲಾಗಿತ್ತು. ಈ ಪೈಕಿ ಒಂದು ಟ್ರಕ್ ಚಾಲಕ ಮಲಗಿದ್ದನ್ನು ಖಚಿತಪಡಿಸಿಕೊಂಡ ಇಬ್ಬರು ಯುವಕರು ಟ್ರಕ್‍ನಿಂದ ಡೀಸೆಲ್ ಹೊರತೆಗೆಯಲು ಪ್ರಾರಂಭಿಸಿದ್ದರು. ಯುವಕರು ಡೀಸೆಲ್ ಕದಿಯುವುದನ್ನು ಉಳಿದ ಚಾಲಕರು ನೋಡಿ, ಯುವಕರನ್ನು ಹಿಡಿಯಲು ಮುಂದಾಗಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೋಲಾಹಲ ಉಂಟಾಗಿತ್ತು.

    ಇಬ್ಬರ ಪೈಕಿ ಓರ್ವ ಯುವಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಆದರೆ ಸೆರೆಸಿಕ್ಕ ಯುವಕನನ್ನು ಚಾಲಕರು ಮತ್ತು ಗ್ರಾಮಸ್ಥರು ಕ್ರೂರವಾಗಿ ಥಳಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ ಯುವಕನನ್ನು ರಸ್ತೆಗೆ ಎಸೆಯಲಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಫತುಹಾ ಠಾಣೆಯ ಪೊಲೀಸರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗ ಮಧ್ಯೆದಲ್ಲಿಯೇ ಯುವಕ ಮೃತಪಟ್ಟಿದ್ದಾನೆ.

  • ಪತಿಯ ಸಹಾಯದಿಂದ ಮಾಜಿ ಪ್ರಿಯಕರನನ್ನು ಕೊಂದ ಪ್ರೇಯಸಿ

    ಪತಿಯ ಸಹಾಯದಿಂದ ಮಾಜಿ ಪ್ರಿಯಕರನನ್ನು ಕೊಂದ ಪ್ರೇಯಸಿ

    ಪಾಟ್ನಾ: ಪ್ರೇಯಸಿಯೊಬ್ಬಳು ತನ್ನ ಪತಿಯ ಜೊತೆ ಸೇರಿ ಮಾಜಿ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ನಲ್ಲಿ ನಡೆದಿದೆ.

    ಜೈ ಕರಣ್ ಕುಮಾರ್ ಕೊಲೆಯಾದ ಯುವಕ. 20 ದಿನಗಳ ಹಿಂದೆ ತೋಟದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಟೇಟಿಯಾ ಬಂಬರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಅಕ್ಟೋಬರ್ 5ರಂದು ಜೈ ಕರಣ್ ತಂದೆ ಧರ್ಮೇಂದ್ರ ಕೊಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ದರು. ಈ ಪ್ರಕರಣವನ್ನು ಶನಿವಾರ ಡಿಎಸ್‍ಪಿ ಪೋಲ್ಸ್ ಕುಮಾರ್ ಅವರು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಮೃತ ವ್ಯಕ್ತಿಯ ಮೊಬೈಲ್ ಕಾಣೆಯಾಗಿದ್ದು, ಅದನ್ನು ಆರೋಪಿಗಳು ಬಳಸುತ್ತಿದ್ದರು. ಬಳಿಕ ತನಿಖೆ ನಡೆಸಿ ಜೈ ಕರಣ್ ಪ್ರೇಯಸಿ ರವೀನಾಳನ್ನು ಬಂಧಿಸಿದ್ದೆವು. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾಳೆ ಎಂದು ಹೇಳಿದ್ದಾರೆ.

    ರವೀನಾ ಕಳೆದ ನಾಲ್ಕು ವರ್ಷಗಳಿಂದ ಜೈಕರಣ್‍ನನ್ನು ಪ್ರೀತಿಸುತ್ತಿದ್ದಳು. ಈ ನಡುವೆ ಆಕೆ ತನ್ನದೇ ಗ್ರಾಮದ ನಂದು ಪಾಸ್ವಾನ್‍ನನ್ನು ಪ್ರೀತಿಸಲು ಶುರು ಮಾಡಿದ್ದಳು. ಅಲ್ಲದೆ ಮೂರು ತಿಂಗಳ ಹಿಂದೆ ನಂದು ಜೊತೆ ರವೀನಾ ಗೌಪ್ಯವಾಗಿ ಮದುವೆ ಕೂಡ ಆಗಿದ್ದಳು. ಜೈ ಕರಣ್, ರವೀನಾ ಜೊತೆ ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಿದ್ದನು. ಆತ ಫೋನ್ ಮಾಡುವುದು ರವೀನಾ ಹಾಗೂ ನಂದುಗೆ ಇಷ್ಟವಿರಲಿಲ್ಲ. ಹಾಗಾಗಿ ರವೀನಾ ಹಾಗೂ ನಂದು ತಮ್ಮ ಮೂವರು ಸ್ನೇಹಿತರ ಜೊತೆ ಸೇರಿ ಆತನ ಹತ್ಯೆಗೆ ಪ್ಲಾನ್ ಮಾಡಿದ್ದರು.

    ಅಕ್ಟೋಬರ್ 2ರಂದು ರವೀನಾ, ಜೈ ಕರಣ್‍ಗೆ ಫೋನ್ ಮಾಡಿ ಭೇಟಿಯಾಗುವಂತೆ ಹೇಳುತ್ತಾಳೆ. ಈ ವೇಳೆ ನಂದು ಹಾಗೂ ಆತನ ಸ್ನೇಹಿತರು ಜೈಕರಣ್‍ನನ್ನು ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆತನ ಶವವನ್ನು ನದಿ ತೀರದಲ್ಲಿರುವ ಭತ್ತದ ಗದ್ದೆಯಲ್ಲಿ ಎಸೆದು ಹೋಗಿದ್ದರು. ಅಕ್ಟೋಬರ್ 5ರಂದು ಪೊಲೀಸರಿಗೆ ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರವೀನಾ, ಆಕೆಯ ಪತಿ ನಂದು, ದಿಲ್‍ಖುಷ್ ಕುಮಾರ್, ಸೋನು ಕುಮಾರ್ ಹಾಗೂ ರವಿ ಕುಮಾರ್‍ನನ್ನು ಬಂಧಿಸಿದ್ದಾರೆ.

  • ಬಳ್ಳಾರಿ ಬದಲು ಚಿತ್ರದುರ್ಗ ಉಸ್ತುವಾರಿ – ಮಲತಾಯಿ ಧೋರಣೆ ತೋರಿದ್ರಾ ಶ್ರೀರಾಮುಲು

    ಬಳ್ಳಾರಿ ಬದಲು ಚಿತ್ರದುರ್ಗ ಉಸ್ತುವಾರಿ – ಮಲತಾಯಿ ಧೋರಣೆ ತೋರಿದ್ರಾ ಶ್ರೀರಾಮುಲು

    ಚಿತ್ರದುರ್ಗ: ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಇದೀಗ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಿಕ್ಕಿರೋದಕ್ಕೆ ಮಲತಾಯಿ ಧೋರಣೆ ತೋರುತಿದ್ದಾರಾ ಎಂಬ ಅನುಮಾನ ಚಿತ್ರದುರ್ಗದ ಜನರಲ್ಲಿ ಕಾಡುತ್ತಿದೆ.

    ಯಾಕೆಂದರೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಚಿವ ಶ್ರೀರಾಮುಲು ಅವರ ವಾಸ್ತವ್ಯಕ್ಕಾಗಿ ಭರ್ಜರಿ ಸಿದ್ಧತೆ ಮಾಡಲಾಗಿತ್ತು. ವಿಐಪಿ ವಾರ್ಡಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಮಾದರಿಯಲ್ಲಿ ಎಸಿ, ಟಿವಿ ಹಾಗೂ ಇತರೆ ಐಶಾರಾಮಿ ಪೀಠೋಪಕರಣಗಳಿಂದ ಮದುವಣಗಿತ್ತಿಯಂತೆ ಅಲಂಕರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಅಚ್ಚರಿಯ ವಿಸಿಟ್ ಕೊಡ್ತಿನಿ ಎಂದು ನೆಪ ಹೇಳಿರುವ ಸಚಿವವರು ಗುರುವಾರ ರಾತ್ರಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ವಾಸ್ತವ್ಯವನ್ನು ರದ್ದುಗೊಳಿಸಿ ಮಲತಾಯಿ ಧೋರಣೆ ತೋರುತ್ತಿದ್ದಾರೆಂಬ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಇದನ್ನೂ ಓದಿ:ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    ಅಲ್ಲಿನ ನೀರಿನ ಸಮಸ್ಯೆ, ವೈದ್ಯರ ಕೊರತೆ ಮತ್ತು ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಹವಾಲು ಸಲ್ಲಿಸಬೇಕೆಂದು ಕಾತರದಿಂದ ಕಾಯ್ದಿದ್ದ ದುರ್ಗದ ಜನರಿಗೆ ಇದರಿಂದಾಗಿ ಬಾರಿ ನಿರಾಸೆಯಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವಿಸ್ತ್ರತ ವರದಿ ಬಿತ್ತರಿಸಿ ಸಚಿವರ ಗಮನ ಸೆಳೆದಿತ್ತು. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದ ಜನರಿಗೆ ಸಚಿವರ ವಾಸ್ತವ್ಯ ರದ್ದಾಗಿರುವುದು ಭಾರೀ ಬೇಸರ ಮೂಡಿಸಿದೆ.

    ಹೀಗಾಗಿ ಶೀಘ್ರದಲ್ಲೇ ಈ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ರಾಮುಲು ವಾಸ್ತವ್ಯ ಹೂಡುವ ಮೂಲಕ ಇಲ್ಲಿನ ಸಮಸ್ಯೆಗಳಿಗೆ ಬ್ರೇಕ್ ಹಾಕುತ್ತಾರಾ ಅಥವಾ ಮಲತಾಯಿ ಧೋರಣೆ ಮುಂದುವರಿಸುತ್ತಾರಾ ಎಂದು ಕಾದು ನೋಡಬೇಕಿದೆ.

  • ಮಾಡರ್ನ್ ಆಗದಿದ್ದಕ್ಕೆ ಪತ್ನಿಗೆ ತಲಾಖ್ ಕೊಟ್ಟ ಭೂಪ

    ಮಾಡರ್ನ್ ಆಗದಿದ್ದಕ್ಕೆ ಪತ್ನಿಗೆ ತಲಾಖ್ ಕೊಟ್ಟ ಭೂಪ

    ಪಾಟ್ನಾ: ಪತ್ನಿ ಮಾಡರ್ನ್ ಆಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತ್ರಿವಳಿ ತಲಾಖ್ ನೀಡಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.

    ಇಮ್ರಾನ್ ಮುಸ್ತಾಫಾ ಎಂಬಾತ ತನ್ನ ಪತ್ನಿ ನೂರಿ ಫಾತಿಮಾಗೆ ತಲಾಖ್ ನೀಡಿದ್ದಾನೆ. ನನ್ನ ಪತಿ ಇಮ್ರಾನ್ ಮುಸ್ತಾಫಾ ನಾನು ಮಾಡರ್ನ್ ಮಹಿಳೆಯಾಗಲು ನಿರಾಕರಿಸಿದ್ದರಿಂದ ಮತ್ತು ಮದ್ಯ ಸೇವನೆ, ಮಾಡರ್ನ್ ಉಡುಪುಗಳನ್ನು ಧರಿಸಲು ನಿರಾಕರಿಸಿದ್ದರಿಂದ ನನಗೆ ತಲಾಖ್ ನೀಡಿದ್ದಾನೆ ಎಂದು ನೊಂದ ಮಹಿಳೆ ಹೇಳಿಕೊಂಡಿದ್ದಾರೆ.

    ನಾನು 2015 ರಲ್ಲಿ ಇಮ್ರಾನ್ ಮುಸ್ತಫಾನನ್ನು ಮದುವೆಯಾಗಿದ್ದೆ. ವಿವಾಹವಾದ ನಂತರ ನಾವು ದೆಹಲಿಗೆ ತೆರಳಿದ್ದೆವು. ಕೆಲ ತಿಂಗಳುಗಳ ನಂತರ ಆತ ಮಾಡರ್ನ್ ಹುಡುಗಿಯರಂತೆ ಇರಬೇಕೆಂದು ಹೇಳಿದನು. ಅಷ್ಟೇ ಅಲ್ಲದೇ ತುಂಡುಡುಗೆಯನ್ನು ತಂದು ಧರಿಸುವಂತೆ ಒತ್ತಾಯಿಸುತ್ತಿದ್ದನು. ರಾತ್ರಿ ಪಾರ್ಟಿಗೆ ಕರೆದುಕೊಂಡು ಹೋಗಿ ಮದ್ಯ ಸೇವನೆ ಮಾಡುವಂತೆ ಬಲವಂತ ಮಾಡುತ್ತಿದ್ದನು. ಇದಕ್ಕೆ ನಾನು ನಿರಾಕರಿಸಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಪತಿ ಕೊಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಾರೆ.

    ಇದೇ ರೀತಿ ಅನೇಕ ವರ್ಷಗಳಿಂದ ಚಿತ್ರಹಿಂಸೆ ನೀಡುತ್ತಿದ್ದನು. ಆದರೆ ಕೆಲವು ದಿನಗಳ ಹಿಂದೆ ನನ್ನನ್ನು ಮನೆಯಿಂದ ಹೋಗುವಂತೆ ಹೇಳಿದ್ದನು. ಆದರೆ ನಾನು ಮನೆಯಿಂದ ಹೊರ ಹೋಗಲು ನಿರಾಕರಿಸಿದೆ. ಅದೇ ಕೋಪದಿಂದ ನನಗೆ ತಲಾಖ್ ಕೊಟ್ಟಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ಇದೀಗ ಮಹಿಳೆ ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗ ಆಕೆಯ ಪತಿಗೆ ನೋಟಿಸ್ ಜಾರಿ ಮಾಡಿದೆ.

    ಪತ್ನಿಗೆ ಕಿರುಕುಳ ನೀಡಿದ್ದಲ್ಲದೇ ಎರಡು ಬಾರಿ ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಹೀಗಾಗಿ ನಾವು ಈ ಪ್ರಕರಣವನ್ನು ದಾಖಲಿಸಿದ್ದೇವೆ. ಸೆಪ್ಟೆಂಬರ್ 1 ರಂದು ಪತಿ ತಲಾಖ್ ನೀಡಿದ್ದಾನೆ. ಸದ್ಯಕ್ಕೆ ನಾವು ಪತಿಗೆ ನೋಟಿಸ್ ನೀಡಿದ್ದೇವೆ ಎಂದು ಮಹಿಳಾ ಆಯೋಗದ ಅಧ್ಯಕ್ಷ ದಿಲ್ಮಾನಿ ಮಿಶ್ರಾ ಹೇಳಿದರು.

  • ಪ್ರವಾಹದಲ್ಲಿ ದೋಣಿ ಮಗುಚಿ, ನೀರಿಗೆ ಬಿದ್ದ ಬಿಜೆಪಿ ಸಂಸದ- ವಿಡಿಯೋ ವೈರಲ್

    ಪ್ರವಾಹದಲ್ಲಿ ದೋಣಿ ಮಗುಚಿ, ನೀರಿಗೆ ಬಿದ್ದ ಬಿಜೆಪಿ ಸಂಸದ- ವಿಡಿಯೋ ವೈರಲ್

    ಪಾಟ್ನಾ: ಬಿಹಾರದ ಮಸೌರಿಯಲ್ಲಿ ಪ್ರವಾಹ ಪರಿಸ್ಥಿಯನ್ನು ಪರಿಶೀಲಿಸಲು ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ತರೆಳಿದ್ದರು. ಈ ವೇಳೆ ನೆರೆ ವೀಕ್ಷಣೆ ಮಾಡುತ್ತಿದ್ದಾಗ ಸಂಸದರಿದ್ದ ದೋಣಿ ಮಗುಚಿ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಬಿಹಾರದಲ್ಲಿ ರೌದ್ರಾವಾತಾರ ತೋರುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, ಬುಧವಾರ ಪಾಟ್ನಾದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ರಾಮ್ ಕೃಪಾಲ್ ಯಾದವ್ ಹೋಗಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಬಿದ್ದು, ಕೆಲ ಸಮಯ ಆತಂಕದ ವಾತಾವರಣ ಸ್ಥಳದಲ್ಲಿ ನಿರ್ಮಾಣಗೊಂಡಿತ್ತು. ಆಗ ಸ್ಥಳೀಯರು ತಕ್ಷಣ ಸಂಸದರ ನೆರವಿಗೆ ಧಾವಿಸಿ ರಕ್ಷಿಸಿದರು. ಇದನ್ನೂ ಓದಿ: ನೀರಿನಲ್ಲಿ ಸಿಲುಕಿದ ರಿಕ್ಷಾ ಹೊರತರಲಾಗದೇ ಬಿಕ್ಕಿಬಿಕ್ಕಿ ಅತ್ತ ಚಾಲಕ: ವಿಡಿಯೋ

    ಸ್ಥಳದಲ್ಲಿ ರಕ್ಷಣಾ ದೋಣಿ ಇರದ ಹಿನ್ನೆಲೆ ಸಂಸದರು, ಕೆಲ ಬೆಂಬಲಿಗರು ಹಾಗೂ ಸ್ಥಳೀಯರು ನಾಡ ದೋಣಿಯಲ್ಲಿ ನೆರೆ ವೀಕ್ಷಣೆಗೆ ತೆರೆಳಿದ್ದರು. ಈ ವೇಳೆ ಮಾರ್ಗ ಮಧ್ಯ ದೋಣಿ ಆಯ ತಪ್ಪಿ ನೀರಿಗೆ ಮಗುಚಿ ಬಿದ್ದು ಅದರಲ್ಲಿದ್ದವರು ನೀರಿನಲ್ಲಿ ಮುಳುಗಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ತಕ್ಷಣ ಎಲ್ಲರನ್ನೂ ರಕ್ಷಣೆ ಮಾಡಿದ್ದಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಸದರ ದೋಣಿ ಮಗುಚಿ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಇಡೀ ಬಿಹಾರ ರಾಜ್ಯ ಅಕ್ಷಶಃ ತತ್ತರಿಸಿ ಹೋಗಿದೆ. ಮಳೆಗೆ ಇಡೀ ಪಾಟ್ನಾ ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಆಳೆತ್ತರದವರೆಗೂ ನೀರು ನಿಂತಿದೆ.

    ವರಣನ ಆರ್ಭಟಕ್ಕೆ ಸಾವಿಗೀಡಾದವರ ಸಂಖ್ಯೆ 42ಕ್ಕೇ ಏರಿದ್ದು, ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಭಾರತೀಯ ವಾಯುಸೇನಾ ಪಡೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರ ರಕ್ಷಣೆ ಜೊತೆಗೆ ಸಂತ್ರಸ್ತರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ತಲುಪಿಸುವ ಕಾರ್ಯದಲ್ಲಿ ತೊಡಗಿದೆ.