Tag: patna

  • ಇದು ನನ್ನ ಕೊನೆಯ ಚುನಾವಣೆ- ನಿತೀಶ್ ಕುಮಾರ್ ಘೋಷಣೆ

    ಇದು ನನ್ನ ಕೊನೆಯ ಚುನಾವಣೆ- ನಿತೀಶ್ ಕುಮಾರ್ ಘೋಷಣೆ

    ಪಾಟ್ನಾ: ಬಿಹಾರದ 2020ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಬಿಹಾರ ಸಿಎಂ, ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಘೋಷಣೆ ಮಾಡಿದ್ದಾರೆ.

    ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ನಿಯಾದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ನಿತೀಶ್ ಕುಮಾರ್ ಅವರು, ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಬಹುದೊಡ್ಡ ಘೋಷಣೆಯನ್ನು ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಲೋಕ್‍ಜನ ಶಕ್ತಿ ಪಕ್ಷದ ನಾಯಕ, ಅಜಯ್ ಕುಮಾರ್, ಯಾವಾಗಲೂ ನಿತೀಶ್ ನಿವೃತ್ತಿಯ ಪರವಾಗಿದ್ದರು. ಜೆಡಿಯು ಸದ್ಯ ಮುಖ್ಯಮಂತ್ರಿ ಆಗಬಲ್ಲ ಹೊಸ ಮುಖವನ್ನು ಘೋಷಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಇತ್ತ ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ ನಾಯಕ ಉಪೇಂದ್ರ ಕುಶ್ವಾಹ, ನಿತೀಶ್ ಕುಮಾರ್ ಅವರ ಘೋಷಣೆಯನ್ನು ಸ್ವಾಗತಿಸಿದ್ದಾರೆ.

    ನಿತೀಶ್ ಕುಮಾರ್ ಅವರ ಹೇಳಿಕೆಗೆ ಟೀಕೆ ಮಾಡಿರುವ ಕಾಂಗ್ರೆಸ್, ಇದು ಕೇವಲ ರಾಜಕೀಯ ಹೇಳಿಕೆಯಾಗಿದೆ. ಮತದಾರರನ್ನು ಸೆಳೆಯಲು ಜೆಡಿಯು ಮುಖ್ಯಸ್ಥರು ಭಾವನಾತ್ಮಕ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಹೇಳಿದೆ. ಚುನಾವಣೆಯಲ್ಲಿ ಸೋಲುವ ಮುನ್ಸೂಚನೆಯನ್ನು ಗ್ರಹಿಸಿದ್ದಾರೆ. ಆದ್ದರಿಂದಲೇ ಈ ಘೋಷಣೆ ಮಾಡಿದ್ದಾರೆ. ಆ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷ ನಾಯಕರು ಆರೋಪಿಸಿದ್ದಾರೆ.

    ಇತ್ತ ಬಿಹಾರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು, ನಿತೀಶ್ ಕುಮಾರ್ ಅವರು ಪರೋಕ್ಷವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ವಲಸೆಕೋರರನ್ನು  ಹೊರಹಾಕಲಾಗುವುದು ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ನಿತೀಶ್ ಕುಮಾರ್, ಇಂತಹ ಅಸಂಬದ್ಧ ಹೇಳಿಕೆಗಳನ್ನು ಯಾರು ನೀಡುತ್ತಾರೆ. ದೇಶದಲ್ಲಿರುವ ಪ್ರತಿಯೊಬ್ಬ ಕೂಡ ಭಾರತೀಯ. ಅವರನ್ನು ಹೆದರಿಸಿ ದೇಶದಿಂದ ಹೊರಗಟ್ಟುವ ತಾಕತ್ತು ಯಾರಿಗಿದೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ತಿರುಗೇಟು ನೀಡಿದ್ದಾರೆ.

  • ಬಿಹಾರ ಚುನಾವಣೆ – ಆರ್‌ಜೆಡಿಯಿಂದ 10 ಲಕ್ಷ ಉದ್ಯೋಗ, ಕೃಷಿ ಸಾಲ ಮನ್ನಾ ಭರವಸೆ

    ಬಿಹಾರ ಚುನಾವಣೆ – ಆರ್‌ಜೆಡಿಯಿಂದ 10 ಲಕ್ಷ ಉದ್ಯೋಗ, ಕೃಷಿ ಸಾಲ ಮನ್ನಾ ಭರವಸೆ

    ಪಾಟ್ನಾ: ಮುಂದಿನ 5 ವರ್ಷಗಳಲ್ಲಿ ಬಿಹಾರದಲ್ಲಿ 10 ಲಕ್ಷ ಸರ್ಕಾರಿ ನೌಕರಿಗಳನ್ನು ಸೃಷ್ಟಿಸುವುದಾಗಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ. ಅಲ್ಲದೇ ಇಡೀ ಬಿಹಾರವನ್ನು ಸಂಪೂರ್ಣ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಅವರು ಭರವಸೆ ನೀಡಿದ್ದಾರೆ.

    ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಬಳಿಕ ಇಂದು ಆರ್‌ಜೆಡಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ತೇಜಸ್ವಿ ಯಾದವ್ ಶೀಘ್ರದಲ್ಲಿ ಶಿಕ್ಷಕರ ನೇಮಕಾತಿ ಮಾಡುವುದಾಗಿ ಹೇಳಿದರು.

    ರಾಜ್ಯದಲ್ಲಿ ಕೊರೊನಾದಿಂದ ಸಾಕಷ್ಟು ಉದ್ಯೋಗ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿ ಜಾರಿ ತರುವ ಮೂಲಕ ಹೆಚ್ಚಿನ ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು. ಮಾಸಿಕ 1,500 ರೂ. ನಿರುದ್ಯೋಗ ಭತ್ಯೆ, ಜೊತೆಗೆ ಕೃಷಿ ಸಾಲ ಮನ್ನಾ, ಸ್ಮಾರ್ಟ್ ವಿಲೇಜ್, ವೃದ್ಧಾಪ್ಯ ವೇತನ ಹೆಚ್ಚಳದ ಭರವಸೆವನ್ನೂ ತೇಜಸ್ವಿ ನೀಡಿದ್ದಾರೆ.

    ಇದೇ ವೇಳೆ ಸಿಎಂ ನಿತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ತಿಳಿಸಬೇಕು. ಈಗಾಗಲೇ ಉದ್ಯೋಗ ನೀಡುವ ಭರವಸೆ ನಿತೀಶ್ ಕುಮಾರ್ ನೀಡಿದ್ದರು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಬಿಜೆಪಿ ಎಲ್ಲಿಂದ ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.

  • ಗ್ಯಾಂಗ್‍ರೇಪ್ ಮಾಡಿ ಮಹಿಳೆ ಜೊತೆ ಮಗುವನ್ನ ನದಿಗೆ ಎಸೆದ್ರು- 5ರ ಕಂದಮ್ಮ ಸಾವು

    ಗ್ಯಾಂಗ್‍ರೇಪ್ ಮಾಡಿ ಮಹಿಳೆ ಜೊತೆ ಮಗುವನ್ನ ನದಿಗೆ ಎಸೆದ್ರು- 5ರ ಕಂದಮ್ಮ ಸಾವು

    – ಕಿಡ್ನಾಪ್ ಮಾಡಿ ಸಾಮೂಹಿಕ ಅತ್ಯಾಚಾರ
    – ಸಂತ್ರಸ್ತೆಯನ್ನ ರಕ್ಷಿಸಿದ ಸ್ಥಳೀಯರು

    ಪಾಟ್ನಾ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಕೆಯ ಐದು ವರ್ಷದ ಮಗುವಿನೊಂದಿಗೆ ನದಿಗೆ ಎಸೆದಿದ್ದಾರೆ. ಆದರೆ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದು, ಮಗು ಸಾವನ್ನಪ್ಪಿರುವ ಅಮಾನವೀಯ ಘಟನೆ ಬಿಹಾರದ ಬಕ್ಸಾರ್‌ನಲ್ಲಿ ನಡೆದಿದೆ.

    ಐದು ವರ್ಷದ ಮಗು ಸಾವನ್ನಪ್ಪಿದೆ. ಈ ಪ್ರಕರಣದ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ತನ್ನ ಐದು ವರ್ಷದ ಮಗುವಿನೊಂದಿಗೆ ಬ್ಯಾಂಕಿಗೆ ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಆಕೆಯನ್ನು ಸುತ್ತುವರಿದಿದ್ದು, ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಆರೋಪಿಗಳು ತಾಯಿ-ಮಗನನ್ನು ಕಟ್ಟಿ ಹಾಕಿ ನದಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಸಂತ್ರಸ್ತೆ ತಕ್ಷಣ ಸಹಾಯಕ್ಕಾಗಿ ಕೂಗಾಡಿದ್ದಾರೆ. ಆಗ ಸ್ಥಳೀಯರು ಆಕೆಯನ್ನು ನೋಡಿ ನದಿಗೆ ಹಾರಿ ರಕ್ಷಣೆ ಮಾಡಿದ್ದಾರೆ. ಆದರೆ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಆಕೆಯ ಪತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

    ಈಗಾಗಲೇ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಎಫ್‍ಐಆರ್ ದಾಖಲಿಸಿದ್ದು, ಇತರ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಸಿಂಗ್ ಹೇಳಿದ್ದಾರೆ.

  • ವಾಹನ ತಪಾಸಣೆ ವೇಳೆ ಪೊಲೀಸರಿಂದ 1.10 ಕೋಟಿ ಹಣ ವಶ

    ವಾಹನ ತಪಾಸಣೆ ವೇಳೆ ಪೊಲೀಸರಿಂದ 1.10 ಕೋಟಿ ಹಣ ವಶ

    – ಚುನಾವಣೆ ಘೋಷಣೆ ನಂತ್ರ 2 ಕೋಟಿಗೂ ಅಧಿಕ ಹಣ ವಶ

    ಪಾಟ್ನಾ: ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ವ್ಯಾಪ್ತಿಯಲ್ಲಿ ಇದುವರೆಗೂ 2 ಕೋಟಿಗೂ ಅಧಿಕ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಬಿಹಾರದ ದರ್ಬಂಗಾ ಜಿಲ್ಲೆಯ ಪೊಲೀಸರು ವಾಹನವನ್ನು ಪರಿಶೀಲಿಸುವಾಗ ಬರೋಬ್ಬರಿ 1.10 ಕೋಟಿ ರೂಪಾಯಿ ಪತ್ತೆಯಾಗಿದೆ. ಇದನ್ನೂ ಓದಿ: ಬಿಹಾರ ಚುನಾವಣೆ – ಆರ್‌ಜೆಡಿ, ಬಿಜೆಪಿ ಸೀಟ್‌ ಹಂಚಿಕೆ ಬಹುತೇಕ ಪೂರ್ಣ

    ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೋಹಿತ್ ಭಂಡರ್‍ವಾಲ್ ಮತ್ತು ಸಂತೋಷ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಇಬ್ಬರು ಮಧುಬಾನಿ ನಿವಾಸಿಗಳಾಗಿದ್ದು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳು ಹಣವನ್ನು ಮಧುಬಾನಿಯಿಂದ ಸ್ಕಾರ್ಪಿಯೋ ವಾಹನದಲ್ಲಿ ತೆಗೆದುಕೊಂಡು ಸಮಸ್ತಿಪುರಕ್ಕೆ ತಲುಪಿಸಲು ಹೋಗುತ್ತಿದ್ದರು. ಆದರೆ ಪೊಲೀಸರು ವಿಶಾನ್ಪುರದಲ್ಲಿ ಪರಿಶೀಲನೆ ವೇಳೆ ಈ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ದರ್ಬಂಗಾ ಜಿಲ್ಲಾಧಿಕಾರಿ ಡಾ.ತ್ಯಾಗರಾಜನ್ ತಿಳಿಸಿದ್ದಾರೆ.

    ಮಂಗಳವಾರ ತಾನೇ ರಾಜ್ಯದ ಕಾಲೀ ಚೆಕ್ ಪೋಸ್ಟ್‌ ನಲ್ಲಿ ವಾಹನದಿಂದ 1.73 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅದೇ ಚೆಕ್ ಪೋಸ್ಟ್ ನಲ್ಲಿ ಮತ್ತೊಂದು ವಾಹನದಿಂದ ಸುಮಾರು 450 ಗ್ರಾಂ ಚಿನ್ನವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಪಾಟ್ನಾದಲ್ಲಿ ಪೊಲೀಸರು ಆರ್‌ಜೆಡಿ ಮುಖಂಡರ ವಾಹನದಿಂದ 74 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಹೀಗಾಗಿ ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ವ್ಯಾಪ್ತಿಯಲ್ಲಿ 2 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

    ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 10ಕ್ಕೆ ಪ್ರಕಟವಾಗಲಿದೆ. ಮೊದಲ ಹಂತದ ಮತದಾನಕ್ಕೆ ಗುರುವಾರದಿಂದ ನಾಮಪತ್ರ ಸಲ್ಲಿಕೆಯಾಗಲಿದೆ. 243ರ ಪೈಕಿ 71 ಕ್ಷೇತ್ರಗಳಿಗೆ ಅ.28 ರಂದು ಚುನಾವಣೆ ನಡೆಯಲಿದೆ.

  • ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಪುತ್ರಿ, ಶೂಟರ್ ಶ್ರೇಯಸಿ ಬಿಜೆಪಿಗೆ ಸೇರ್ಪಡೆ

    ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಪುತ್ರಿ, ಶೂಟರ್ ಶ್ರೇಯಸಿ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ಬಿಹಾರದ ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಪುತ್ರಿ, ಕಾಮನ್ ವೆಲ್ತ್ ಶೂಟರ್ ಶ್ರೇಯಸಿ ಸಿಂಗ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಅರ್ಜನ ಪ್ರಶಸ್ತಿ ವಿಜೇತೆಯಾಗಿರುವ 29 ವರ್ಷದ ಶ್ರೇಯಸಿ ಅವರು ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    2018ರ ಕಾಮನ್‍ವೆಲ್ತ್ ಕ್ರೀಡಾಕೂಡದಲ್ಲಿ ಚಿನ್ನದ ಪದಕ ಹಾಗೂ 2014ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಬಿಜೆಪಿ ಸೇರ್ಪಡೆಗೂ ಮುನ್ನ ಶ್ರೇಯಸಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಇದಕ್ಕಾಗಿ ತೇಜಸ್ವಿ ಯಾದವ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿತ್ತು.

    ಶ್ರೇಯಸಿ ಅವರು ಬಿಹಾರದ ಅಮರಪುರ ಅಥವಾ ಬಂಕಾದ ಜಮುಯಿ ವಿಧಾನಸಭಾ ಮತಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೇ ಮೈತ್ರಿ ಆಧಾರದ ಹಿನ್ನೆಲೆಯಲ್ಲಿ ಕ್ಷೇತ್ರಗಳ ಹಂಚಿಕೆಯಾದ ಬಳಿಕ ಶ್ರೇಯಸಿ ಅವರು ಯಾವ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ ಎಂಬುವುದು ಖಚಿತವಾಗಲಿದೆ.

    ಶ್ರೇಯಸಿ ಅವರ ತಂದೆ ಮಾಜಿ ಸಚಿವ ಬಂಕಾ ಕ್ಷೇತ್ರದ ಸಂಸದರಾಗಿದ್ದ ದಿಗ್ವಿಜಯ್ ಸಿಂಗ್ ಅವರ ಬಳಿಕ 2010ರ ಉಪಚುನಾವಣೆಯಲ್ಲಿ ಅವರ ತಾಯಿ ಪುತುಲ್ ಅವರು ಚುನಾವಣೆ ಎದುರಿಸಿ ಗೆಲುವು ಪಡೆದಿದ್ದರು. ಈ ವೇಳೆ ತಾಯಿಯವರಿಗೆ ಶ್ರೇಯಸಿ ಅವರು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

    ಚುನಾವಣಾ ಆಯೋಗ ಈಗಾಗಲೇ ಘೋಷಣೆ ಮಾಡಿರುವಂತೆ ಮೂರು ಹಂತಗಳಲ್ಲಿ ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮತದಾನ ನಡೆಯಲಿದೆ. ನವೆಂಬರ್ 10 ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

  • ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಬಿಜೆಪಿ ನಾಯಕನ ಬರ್ಬರ ಹತ್ಯೆ

    ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಬಿಜೆಪಿ ನಾಯಕನ ಬರ್ಬರ ಹತ್ಯೆ

    – ಬೈಕಲ್ಲಿ ಬಂದು ಗುಂಡು ಹಾರಿಸಿ ಕೊಲೆಗೈದ್ರು
    – ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರೊಬ್ಬರ ಬರ್ಬರ ಹತ್ಯೆಯಾಗಿದೆ.

    ಮೃತ ದುರ್ದೈವಿ ನಾಯಕನನ್ನು ರಾಜೇಶ್ ಕುಮಾರ್ ಝಾ ಎಂದು ಗುರುತಿಸಲಾಗಿದೆ. ಹಾಡಹಗಲೇ ಬೈಕಲ್ಲಿ ಬಂದ ದುಷ್ಕರ್ಮಿಗಳು ರಾಜೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಪ್ರಕರಣ ನಗರದ ತೇಜ್‍ಪ್ರತಾಪ್ ನಗರ ಪ್ರದೇಶದ ಸೀತಾರಾಮ್ ಎಂಟರ್ ಟೈನ್ಮೆಂಟ್ ಹಾಲ್ ಬಳಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಮುಂದುವರಿಸಿದರು. ಅಲ್ಲದೆ ಘಟನೆ ನಡೆದ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಪ್ರಕರಣ ಸಂಬಂಧ ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ನಾಯಕನ ಆಪ್ತನೇ ಈ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ- ಅ.28ರಿಂದ ಮೂರು ಹಂತದಲ್ಲಿ ಮತದಾನ

    ರಾಜೇಶ್ ಅವರು ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದರು. ಇಂದು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಇಬ್ಬರು ರಾಜೇಶ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ರಾಜೇಶ್ ನನ್ನು ಯಾರೋ ಒಬ್ಬರು ಟಾರ್ಗೆಟ್ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ವೈಯಕ್ತಿಕ ದ್ವೇಷದಿಂದ್ಲೇ ಈ ಕೊಲೆ ನಡೆದಿದೆ ಎಂದು ರಾಜೇಶ್ ಬಾಮೈದ ತಿಳಿಸಿದ್ದಾರೆ.

  • ನಾಲ್ಕನೇ ಬಾರಿ ಮದುವೆಯಾಗಲು ಮಗನನ್ನೇ ಕೊಂದ 23ರ ವಿಧವೆ

    ನಾಲ್ಕನೇ ಬಾರಿ ಮದುವೆಯಾಗಲು ಮಗನನ್ನೇ ಕೊಂದ 23ರ ವಿಧವೆ

    – ವಿವಾಹವಾದ ವರ್ಷದ ನಂತ್ರ ಪತಿಯಿಂದ ದೂರ
    – 2ನೇ ಪತಿ ಸಾವು, ಅಪಘಾತದಲ್ಲಿ 3ನೇ ಗಂಡ ನಿಧನ

    ಪಾಟ್ನಾ: 23 ವರ್ಷದ ವಿಧವೆ ನಾಲ್ಕನೇ ಬಾರಿಗೆ ಮದುವೆಯಾಗಲು ಬಯಸಿದ್ದರಿಂದ ತನ್ನ 4 ವರ್ಷದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಪಾಟ್ನಾದ ಹಸನ್‍ಪುರ್ ಖಂಡಾ ಪ್ರದೇಶದಲ್ಲಿ ನಡೆದಿದೆ.

    ಸಜನ್ ಕುಮಾರ್ ಮೃತ ಬಾಲಕ. ಈತನಿಗೆ ಮಾತನಾಡಲು ಮತ್ತು ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಆರೋಪಿಯನ್ನು ಧರ್ಮಶೀಲಾ ದೇವಿ ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ಶಹಜಹಾನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಆರೋಪಿ ವಿಧವೆಯನ್ನು ಜೈಲಿಗೆ ಕಳುಹಿಸಲಾಗಿದೆ.

    ಮೃತ ಕುಮಾರ್, ದೇವಿ ಮತ್ತು ಆಕೆಯ ಮೊದಲ ಪತಿ ಅರುಣ್ ಚೌಧರಿ ಮಗ. ಅರುಣ್ ನಳಂದದ ಭದೌಲ್ ನಿವಾಸಿಯಾಗಿದ್ದು, ಮದುವೆಯಾದ ಒಂದು ವರ್ಷದ ನಂತರ ಆರೋಪಿ ದೇವಿ ಪತಿ ಅರುಣ್‍ನನ್ನು ಬಿಟ್ಟು ತನ್ನ ಮಗನ ಕರೆದುಕೊಂಡು ಹೋಗಿದ್ದಳು. ಮತ್ತೆ ಆರೋಪಿ ಎರಡನೇ ಮದುವೆಯಾದಳು. ಆದರೆ 2ನೇ ಪತಿ ಮೃತಪಟ್ಟರು. ಹೀಗಾಗಿ ಆರೋಪಿ ಪಾಟ್ನಾದ ಮುಸ್ತಾಫಾಪುರ ನಿವಾಸಿ ಮಹೇಶ್ ಚೌಧರಿ ಜೊತೆ ಮೂರನೇ ಬಾರಿಗೆ ವಿವಾಹವಾದಳು.

    ಎರಡು ತಿಂಗಳ ಹಿಂದೆ ಮಹೇಶ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಹೀಗಾಗಿ ಆರೋಪಿ ದೇವಿ ಮತ್ತೆ ಮದುವೆಯಾಗಲು ಬಯಸಿದ್ದಳು. ಆದರೆ ಇದಕ್ಕೆ ಆಕೆಯ ಮಗ ಅಡ್ಡಿಯಾಗಿದ್ದನು. ಹೀಗಾಗಿ ಮಗನನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದಳು. ಅದರಂತೆಯೇ ಪೋಷಕರೊಂದಿಗೆ ವಾಸಿಸುತ್ತಿದ್ದ ಆರೋಪಿ ದೇವಿ ಶುಕ್ರವಾರ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗ್ರಾಮದ ಕೆಲ ಅಪ್ರಾಪ್ತ ಬಾಲಕರು ಕುಮಾರ್ ಮೃತದೇಹವನ್ನು ನೀರಿನಲ್ಲಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

    ನಾನು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದೆ. ಆದ್ದರಿಂದ ನನ್ನ ಮಗುವನ್ನು ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಆರೋಪಿ ದೇವಿ ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯ ಮೊದಲ ಪತಿ ಅರಣ್‍ನನ್ನು ಪತ್ತೆ ಮಾಡಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನಂತರ ಮಹಿಳೆಯ ವಿರುದ್ಧ ಎಫ್‍ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

  • ಡಿವೋರ್ಸ್ ಕೊಟ್ರೆ ಮಾತ್ರ ತವರಿಗೆ – ಪುಟ್ಟ ಮಗುವಿನೊಂದಿಗೆ ಪತ್ನಿ ಕೂಡಿಹಾಕಿದ ಪತಿ

    ಡಿವೋರ್ಸ್ ಕೊಟ್ರೆ ಮಾತ್ರ ತವರಿಗೆ – ಪುಟ್ಟ ಮಗುವಿನೊಂದಿಗೆ ಪತ್ನಿ ಕೂಡಿಹಾಕಿದ ಪತಿ

    ಪಾಟ್ನಾ: ಕಳೆದ ಮಾರ್ಚ್ ತಿಂಗಳಿನಿಂದ 34 ವರ್ಷದ ನಾಗ್ಪುರ ಮಹಿಳೆಯೊಬ್ಬರು ತನ್ನ ಹೆತ್ತವರ ಮನೆಗೆ ಹೋಗಬೇಕೆಂದು ಬಯಸಿದ್ದಾರೆ. ಆದರೆ ಆಕೆಯ ಪತಿ ಹಾಗೂ ಮನೆಯವರು ಒಂದು ತಿಂಗಳ ಮಗುವಿನ ಸಹಿತ ಆಕೆಯನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ ಅಚ್ಚರಿಯ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ.

    ತಮ್ಮ ಮಗಳನ್ನು ಕರೆದೊಯ್ಯಲು ಮಹಿಳೆಯ ಕುಟುಂಬಸ್ಥರು ಆಕೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಹಿಳೆಯ ಪತಿ ಮನೆಯವರು ಡಿವೋರ್ಸ್ ಪೇಪರಿಗೆ ಸಹಿ ಹಾಕಿದ ಬಳಿಕವಷ್ಟೇ ಕಳುಹಿಸುವುದಾಗಿ ಒತ್ತಡ ಹಾಕಿರುವುದಾಗಿ ಆರೋಪಿಸಲಾಗಿದೆ.

    ಬೆಂಗಳೂರಿನಲ್ಲಿ ಪರಿಚಯ:
    ಮಹಿಳೆಯನ್ನು ಸೋನಿಯಾ ದತ್ತಾ ಎಂದು ಗುರುತಿಸಲಾಗಿದೆ. ಈಕೆ ಎರಡು ವರ್ಷಗಳ ಹಿಂದೆ ನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಪಾಟ್ನಾ ಮೂಲದ ವಿನಾಯಕ ಸಿಂಗ್(33) ಎಂಬಾತನ ಪರಿಚಯವಾಗಿದೆ. ವಿನಾಯಕ ಸಿಂಗ್ ಐಐಟಿ ಪದವೀಧರನಾಗಿದ್ದು, ಆನ್‍ಲೈನ್ ಹೂಡಿಕೆ ಕಂಪನಿಯ ಉದ್ಯೋಗಿಯಾಗಿದ್ದನು. ಹೀಗೆ ಆದ ಪರಿಚಯ ಪ್ರೇಮಕ್ಕೆ ಸಿಲುಕಿ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವರ್ಷದ ಆಗಸ್ಟ್ 20 ರಂದು ಸೋನಿಯಾ ಗಂಡು ಮಗುವಿನ ಜನ್ಮ ನೀಡಿದ್ದರು.

    ದೌರ್ಜನ್ಯ ಪ್ರಾರಂಭ:
    ಮಗುವಾದ ಬಳಿಕ ಇವರಿಬ್ಬರ ದಾಂಪತ್ಯದಲ್ಲಿ ವೈಮನಸ್ಸುಗಳು ಹುಟ್ಟಿಕೊಂಡವು. ಹೆರಿಗೆಯಾದ ಬಳಿಕದ ರಜೆಯಲ್ಲಿರುವ ಈ ಸಂದರ್ಭದಲ್ಲಿ ದತ್ತಾ ಬಳಿ ತನಗೆ ವಿಚ್ಚೇದನ ನೀಡುವಂತೆ ಬೆದರಿಕೆ ಹಾಕಲು ಶುರು ಮಾಡಿದ್ದಾನೆ. ಅಲ್ಲದೆ ದತ್ತಾ ಯಾವುದಾದರೂ ಚಾನೆಲ್ ಹಾಕಿಕೊಂಡು ನೋಡುತ್ತಿರಬೇಕಾದರೆ ಬಂದು ತಡೆದು, ಆಕೆಗೆ ನಿಂದಿಸಿದ್ದಾನೆ. ಕೊರೊನಾ ಹಿನ್ನೆಲೆ ಲಾಕ್‍ಡೌನ್ ಹೇರುವ ಮೊದಲು ಒಂದು ವಾರ ಆತ ನನ್ನನ್ನು ನನ್ನ ತಾಯಿಗೆ ಮನೆಗೆ ಕಳುಹಿಸಿದ್ದನು. ಆದರೆ ಹೆರಿಗೆಯಾದ ಬಳಿಕ ದತ್ತಾ ಅವರನ್ನು ಸಿಂಗ್ ಹೆತ್ತವರ ಮನೆಗೆ ಹೋಗಲು ಬಿಡುತ್ತಿಲ್ಲ ಎನ್ನಲಾಗಿದೆ.

    ಇತ್ತ ಗುರುವಾರ ಸಹೋದರಿ ಹಾಗೂ ಬಾವ, ದತ್ತಾರನ್ನು ತಾಯಿ ಮನೆಗೆ ಕರೆದೊಯ್ಯಲು ಬಂದಿದ್ದಾರೆ. ಈ ವೇಳೆ ದತ್ತಾ ತನ್ನ ಪುಟ್ಟ ಮಗುವಿನೊಂದಿಗೆ ಕತ್ತಲ ಕೋಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ದತ್ತಾ ತನ್ನ ಸಹೋದರಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಾನು ಇಲ್ಲಿಂದ ಮನೆಗೆ ಬರಬೇಕಾದರೆ ನನ್ನ ಗಂಡನಿಗೆ ವಿಚ್ಚೇದನ ನೀಡಬೇಕು ಎಂದು ಬೆದರಿಕೆ ಹಾಕಿರುವ ವಿಚಾರವನ್ನು ಸಹೋದರಿ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೆ ದತ್ತಾ ಶುಕ್ರವಾರ ಸಂಜೆ ಡಿವೋರ್ಸ್ ಪೇಪೆರಿಗೆ ಸಹಿ ಹಾಕಿ ತಾಯಿ ಮನೆಗೆ ತೆರಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ದತ್ತಾ ಪತಿ, ಕೊರೊನಾ ಭೀತಿಯಿಂದ ನಾನು ಪುಟ್ಟ ಮಗುವಿನ ಜೊತೆ ಆಕೆಯನ್ನು ತವರು ಮನೆಗೆ ಹೋಗದಂತೆ ತಡೆದಿದ್ದೇನೆ ಎಂದಿದ್ದಾನೆ.

    ಘಟನೆ ಸಂಬಂಧ ಪಾಟ್ನಾ ಎಸ್‍ಪಿ ಉಪೇಂದ್ರ ಕುಮಾರ್ ಅವರು ಗುರುವಾರ ದತ್ತಾ ಅವರಿಂದ ದೂರು ಸ್ವೀಕರಿಸಿದ್ದಾರೆ. ಅಲ್ಲದೆ ದಂಪತಿ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‍ಪಿ ತಿಳಿಸಿದ್ದಾರೆ.

  • 50ರ ಮಹಿಳೆಯ ಮೇಲೆ ಗ್ಯಾಂಗ್‍ರೇಪ್ ಮಾಡಿ ವಿಡಿಯೋ ಮಾಡಿದ್ರು!

    50ರ ಮಹಿಳೆಯ ಮೇಲೆ ಗ್ಯಾಂಗ್‍ರೇಪ್ ಮಾಡಿ ವಿಡಿಯೋ ಮಾಡಿದ್ರು!

    – ಡ್ರಾಪ್ ಕೊಡೋ ನೆಪದಲ್ಲಿ ಅತ್ಯಾಚಾರ
    – ಭಯದಿಂದ ಎಲ್ಲೂ ಹೇಳಿಕೊಳ್ಳದ ಮಹಿಳೆ

    ಪಾಟ್ನಾ: ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಸವಾರನೊಬ್ಬ ತನ್ನ ಸಹಪಾಠಿಗಳೊಂದಿಗೆ 50 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಅಮಾನವೀಯ ಘಟನೆಯೊಂದು ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ.

    ಕಾಮುಕರು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ ತೊಡಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಮಹಿಳೆ ಇದ್ದ ಸ್ಥಳವನ್ನು ಪತ್ತೆ ಹಚ್ಚಿ, ಆಕೆಯ ಬಳಿ ದೂರು ದಾಖಲಿಸುವಂತೆ ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ವೈರಲ್ ಆಗಿದ್ದ ವಿಡಿಯೋ ಪೊಲೀಸರ ಕೈಗೆ ಸಿಗುತ್ತಿದ್ದಂತೆಯೇ ಕೂಡಲೇ ಅವರು ಸ್ಥಳೀಯ ಗ್ರಾಮ ಪಂಚಾಯತ್ ಮುಖ್ಯಸ್ಥನ ಸಂಪರ್ಕ ಮಾಡಿದರು. ಅವರು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿದರು ಎಂದು ಎಸ್‍ಹೆಚ್‍ಒ ರಾಜೇಶ್ ಕುಮಾರ್ ಮಂಡಲ್ ತಿಳಿಸಿದ್ದಾರೆ.

    ಮಹಿಳೆ ನಗರದಿಂದ ತನ್ನ ಮನೆಗೆ ವಾಪಸ್ಸಾಗುತ್ತಿದ್ದಳು. ಆಟೋದಿಂದ ಬಂದಿಳಿದ ಆಕೆ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಸವಾರನೊಬ್ಬ ಬಂದು ಮನೆಗೆ ಬಿಡುತ್ತೇನೆ ಎಂದು ಹೇಳಿದ್ದಾನೆ.

    ಆತನ ನಂಬಿದ ಮಹಿಳೆ ಬೈಕ್ ಏರಿದ್ದಾಳೆ. ಹೀಗೆ ಹೋಗುತ್ತಿದ್ದಾಗ ಸವಾರನಿಗೆ ಸಾಕಷ್ಟು ಫೋನ್ ಕರೆಗಳು ಬರುತ್ತಲೇ ಇತ್ತು. ಅಂತೆಯೇ ಆತ ತನ್ನ ಮನೆ ದಾರಿ ಬಿಟ್ಟು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಅಲ್ಲಿ ಅದಾಗಲೇ 6ಕ್ಕೂ ಹೆಚ್ಚು ಮಂದಿ ಬಂದಿದ್ದರು. ಅದರಲ್ಲಿ 4 ಮಂದಿ ನನ್ನ ಮೇಲೆ ಅತ್ಯಾಚಾರ ಮಾಡಿದರೆ ಓರ್ವ ವಿಡಿಯೋ ಮಾಡಿದ್ದಾನೆ. ವಿಡಿಯೋ ಮಾಡುತ್ತಿರುವುದನ್ನು ಕಂಡ ಮೂವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆರೋಪಗಳಲ್ಲಿ ಓರ್ವನ ಗುರುತು ಸಂತ್ರಸ್ತೆಗೆ ಇದೆ ಎಂದು ಎಸ್‍ಹೆಚ್‍ಒ ವಿವರಿಸಿದ್ದಾರೆ.

    ಘಟನೆಯಿಂದ ತೀವ್ರವಾಗಿ ನೊಂದಿದ್ದು, ಒಂದು ವೇಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಜನ ನನ್ನ ಬಗ್ಗೆ ಕೆಟ್ಟದಾಗಿ ಅಂದುಕೊಳ್ಳುತ್ತಾರೆ ಎಂಬ ಭಯದಿಂದ ಪೊಲೀಸರಿಗೆ ದೂರು ನೀಡಲು ಹೋಗಲಿಲ್ಲ. ಅಲ್ಲದೆ ತನ್ನ ಕುಟುಂಬದ ಸದಸ್ಯರು ಅಥವಾ ಬೇರೆ ಯಾರಿಗೂ ಮಹಿಳೆ ಈ ಬಗ್ಗೆ ತಿಳಿಸಿರಲಿಲ್ಲ.

  • ಮೊದ್ಲ ಕಾರು ಖರೀದಿಸಿದ ವೇಳೆಯೂ ಇಷ್ಟು ಸಂತಸವಾಗಿರಲಿಲ್ಲ: ಸೋನು ಸೂದ್

    ಮೊದ್ಲ ಕಾರು ಖರೀದಿಸಿದ ವೇಳೆಯೂ ಇಷ್ಟು ಸಂತಸವಾಗಿರಲಿಲ್ಲ: ಸೋನು ಸೂದ್

    – ಪ್ರವಾಹದಲ್ಲಿ ಎಮ್ಮೆ ಕಳೆದುಕೊಂಡ ಕುಟುಂಬಕ್ಕೆ ನೆರವಾದ ಸೋನು ಸೂದ್

    ಪಾಟ್ನಾ: ಕೊರೊನಾ ಮಹಾಮಾರಿ ಸೃಷ್ಟಿಸಿರುವ ಸಂದಿಗ್ಧ ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಕುಟುಂಬಗಳಿಗೆ ನಟ ಸೋನು ಸೂದ್ ನೆರವಾಗುತ್ತಿದ್ದಾರೆ. ಸದ್ಯ ಪ್ರವಾಹದಲ್ಲಿ ಕುಟುಂಬದ ಜೀವನಾಧಾರವಾಗಿದ್ದ 2 ಎಮ್ಮೆಗಳನ್ನು ಕಳೆದುಕೊಂಡ ಬಡ ಕುಟುಂಬದ ನೆರವಿಗೆ ಸೋನು ಸೂದ್ ಧವಿಸಿದ್ದಾರೆ.

    ಬಿಹಾರದ ಚಂಪರನ್ ಪ್ರದೇಶದ ಭೋಲಾ ಗ್ರಾಮದ ಕುಟುಂಬ ಭೀಕರ ಪ್ರವಾಹದಲ್ಲಿ ಪುತ್ರ ಹಾಗೂ ಜೀವನಾಧರವಾಗಿದ್ದ ಎಮ್ಮೆಯನ್ನು ಕಳೆದುಕೊಂಡಿತ್ತು. ಈ ಕುರಿತ ಮಾಹಿತಿ ಪಡೆದ ಸೋನು ಸೂದ್ ಮತ್ತೊಂದು ಎಮ್ಮೆಯನ್ನು ಖರೀದಿ ಮಾಡಿ ಕುಟುಂಬಕ್ಕೆ ತಲುಪಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಶೇರ್ ಮಾಡಿರುವ ಸೋನು ಸೂದ್, ಇವರಿಗಾಗಿ ಎಮ್ಮೆಯನ್ನು ಖರೀದಿ ಮಾಡಿದ ಸಂದರ್ಭದಲ್ಲಿ ಉಂಟಾದ ಸಂತಸ ನನ್ನ ಮೊದಲ ಕಾರು ಖರೀದಿ ಮಾಡಿದ ವೇಳೆಯೂ ಆಗಿರಲಿಲ್ಲ. ನಾನು ಬಿಹಾರಕ್ಕೆ ಭೇಟಿ ನೀಡಿದ ವೇಳೆ ಈ ಎಮ್ಮೆಯ ತಾಜಾ ಹಾಲನ್ನು ಕೂಡಿಯುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    ಮತ್ತೊಂದು ಟ್ವೀಟ್‍ನಲ್ಲಿ, ಕ್ವಾರಂಟೈನ್ ನಿಯಮಗಳಿಂದ ಹೋಟೆಲ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದರು. ಕೊರೊನಾ ನೆಗೆಟಿವ್ ವರದಿ ಬಂದ ಬಳಿಕವೂ ಮೂರು ವರ್ಷದ ಪುತ್ರಿಯೊಂದಿಗೆ ಹೋಟೆಲ್ ಕ್ವಾರಂಟೈನ್‍ನಲ್ಲೇ ಉಳಿದಿದ್ದೇವೆ. ಕೊರೊನಾ ಪಾಸಿಟಿವ್ ಬಂದಿದ್ದ ಪತ್ನಿ 60 ದಿನಗಳ ಮಗುವಿನೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಮಗು ತಾಯಿಯ ನೆನಪಿನಲ್ಲಿ ಊಟ ಕೂಡ ಮಾಡುತ್ತಿಲ್ಲ. ಮನೆಗೆ ತೆರಳಲು ಸಹಾಯ ಮಾಡಿ ಎಂದು ಮಧ್ಯ ಪ್ರದೇಶದ ಸರ್ಕಾರದ ನೆರವು ಕೋರಿದ್ದ ಹರೀಶ್ ಅವರಿಗೆ ಸೋನು ಸೂದ್ ನೆರವು ನೀಡುವ ಭರವಸೆ ನೀಡಿ, ಲಗೇಜ್ ಪ್ಯಾಕ್ ಮಾಡಿಕೊಳ್ಳಲು ಹೇಳಿದ್ದರು. ಇದನ್ನೂ ಓದಿ: ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ 

    ಘಟನೆ ನಡೆದ ಒಂದು ಗಂಟೆ ಅವಧಿಯಲ್ಲೇ ಸೋನು ಸೂದ್, ಹರೀಸ್ ಅವರನ್ನು ಮನೆಗೆ ಕಳುಹಿಸಿದ್ದರು. ಸೋನು ಸೂದ್ ಅವರ ಟ್ವಿಟ್ಟರ್ ಖಾತೆಯಲ್ಲಿ ಘಟನೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇಂತಹ ಸಾಕಷ್ಟು ಘಟನೆಗಳು ಅವರ ಟ್ವಿಟ್ಟರ್ ಖಾತೆ ಪರಿಶೀಲಿಸಿದ ವೇಳೆ ಕಾಣಿಸುತ್ತಿದ್ದು, ಸಹಾಯ ಪಡೆದ ಹಲವರು ಸೋನು ಸೂದ್ ಅವರನ್ನು ನೀವು ದೇವರು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ಸೋನು ಸೂದ್ ಮಾತ್ರ ತಮ್ಮ ನೆರವಿನ ಹಸ್ತವನ್ನು ಮತ್ತಷ್ಟು ಮಂದಿಗೆ ಚಾಚುತ್ತಿದ್ದಾರೆ. ಇದನ್ನೂ ಓದಿ: ಸಹಾಯ ಮಾಡುವಂತೆ ಮನವಿ- ಮೂವರು ಅನಾಥ ಮಕ್ಕಳ ದತ್ತು ಪಡೆದ ಸೋನು ಸೂದ್